ಈ ಬಾರಿ ಕೆಲವು ಕತೆಗಳು. ಕತೆಗಳು ಕನ್ನಡಿಯಂತೆ. ಅಥವ ಹಾಗೆ ಆಗಬೇಕು, ಕತೆಯ ಕನ್ನಡಿಯಲ್ಲಿ ನಮ್ಮ ಮುಖ ನಾವು ನೋಡಿಕೊಳ್ಳದಿದ್ದರೆ ಕತೆ ಕೇಳಿ, ಹೇಳಿ ಏನು ಪ್ರಯೋಜನ?
ಮೊದಲ ಕತೆ ಇದು. ಝೆನ್ ಗುರು ಒಬ್ಬ ಇದ್ದನಂತೆ. ಅವನಿಗೆ ಒಬ್ಬ ಶಿಷ್ಯ. ಶಿಷ್ಯ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದ. ಹಾಗೆ ಆತ ಧ್ಯಾನ ಮಗ್ನನಾಗಿ ಕುಳಿತಿರುವಾಗ ಒಮ್ಮೆ ಅವನಿಗೆ ಜೇಡರ ಹುಳುವೊಂದು ಕಾಣಿಸಿತು. ಏನೋ ಇದ್ದೀತು. ಎಂದು ಸುಮ್ಮನಾದ. ಮರುದಿನವೂ ಕಂಡಿತು. ಈ ಬಾರಿ ಅದು ಅವನತ್ತ ನಿಧಾನವಾಗಿ ತವಳುತ್ತ ಬಂದಿತು. ಶಿಷ್ಯನಿಗೆ ಕಸಿವಿಸಿ. ಮರುದಿನ ಧ್ಯಾನಮಾಡುತ್ತಿದ್ದಾಗ ಅದೇ ಜೀಡ ಮತ್ತೆ ಪ್ರತ್ಯಕ್ಷವಾಯಿತು. ಅವನ ತೊಡೆ ಏರಿತು. ನಿಧಾನವಾಗಿ ತವಳುತ್ತ ಅವನ ಮೈಮೇಲೆಲ್ಲ ಹರಿದಾಡ ತೊಡಗಿತು. ಶಿಷ್ಯನ ಏಕಾಗ್ರತೆ ಭಂಗವಾಯಿತು. ಮರುದಿನವೂ ಅದೇ ಕಥೆ. ಜೇಡ ನಿಧಾನವಾಗಿ ಅವನ ಎದೆಯ ಮೇಲೆ ಹತ್ತಿ ಓಡಾಡತೊಡಗಿತು. ಶಿಷ್ಯನ ಕಸಿವಿಸಿ ಕೋಪವಾಗಿ ಬದಲಾಯಿತು. ಈ ಜೀಡವನ್ನು ಸಾಯಿಸಿಬಿಡಬೇಕು ಅಂದುಕೊಂಡ. ಮರುದಿನ ಗುರುವಿನ ಬಳಿ ಹೋಗಿ ಚೂಪಾದ ಚೂರಿ ಬೇಕು ನನಗೆ ಎಂದು ಕೇಳಿದ. ಗುರುವಿಗೆ ಆಶರ್ಯವಾಯಿತು. ಧ್ಯಾನ ಮಾಡಲು ಚೂರಿ ಏಕೆ ಎಂದ. ಶಿಷ್ಯ ಜೀಡರ ಹುಳುವಿನ ಕಾಟದ ಬಗ್ಗೆ ವಿವರಿಸಿದ. ಗುರು ಬಹಳ ಗಂಭೀರನಾಗಿ ಹೇಳಿದ. ‘ನೋಡು, ಇವತ್ತು ಧ್ಯಾನ ಮಾಡಲು ಕೂತಾಗ ನಿನ್ನ ಪಕ್ಕದಲ್ಲಿ ಒಂದು ನೀಮೆ ಸುಣ್ಣ ಇಟ್ಟುಕೊಂಡಿರು. ಜೇಡ ಮತ್ತೆ ಬಂದರೆ ಅದರ ಹೊಟ್ಟೆಯ ಮೇಲೆ ಗೀರು ಎಳೆದುಬಿಡು’ ಎಂದ. ಶಿಷ್ಯ ಇದೇನೋ ವಿಚಿತ್ರ, ಆದರೂ ನೋಡೋಣ ಎಂದು ಒಪ್ಪಿಕೊಂಡ. ಅವತ್ತು ಧ್ಯಾನಕ್ಕೆ ಕೂತಾಗ ಕೂಡ ಜೇಡ ಮತ್ತೆ ಬಂದಿತು. ಶಿಷ್ಯ ಗುರುವಿನ ಮಾತು ನೆನೆದುಕೊಂಡು ಅದರ ಹೊಟ್ಟೆಯ ಮೇಲೆ ಸೀಮೆಯ ಸುಣ್ಣದಿಂದ ಒಂದು ಗೀಟು ಎಳೆದ. ಜೇಡ ಮಾಯವಾಯಿತು. ಧ್ಯಾನ ಮುಂದುವರೆಯಿತು. ಸಂತೋಷದಿಂದ ಗುರುವಿನ ಬಳಿ ಬಂದು ತಿಳಿಸಿದ. ಗುರು ಸುಮ್ಮನೆ ಶಿಷ್ಯನ ಎದೆಯತ್ತ ಬೆರಳು ತೋರಿದ. ಶಿಷ್ಯ ಎಳೆದ ಗೆರೆ ಅವನ ಎದೆಯ ಮೇಲೆಯೇ ಇತ್ತು.
ಇದು ಕತೆ. ಇನ್ನೊಂದು ಕತೆ ಕೇಳಿ. ಇದೂ ಗುರು ಶಿಷ್ಯರದು. ಶಿಷ್ಯೆ ಒಮ್ಮ ಗುರುವಿನ ಬಳಿಗೆ ಬಂದು ‘ಗುರುವೇ, ಧ್ಯಾನ ಮಾಡುತ್ತಿದ್ದಾಗ ಇಂದು ಮನಸ್ಸಿಗೆ ಬಹಳ ಕನಿವಿಸಿಯಾಯಿತು, ಹಿಂಸೆಯಾಯಿತು, ದುಃಖವಾಯಿತು. ಏನು ಮಾಡಲಿ? ಎಂದ. ಗುರು ‘ಹೀಗೇ ಇರುವುದಿಲ್ಲ ಬಿಡು’ ಎಂದ. ಮರುದಿನ ಶಿಷ್ಯ ಧ್ಯಾನ ಮುಗಿಸಿ ಬಂದು ಗುರುವೇ, ಇಂದು ಧ್ಯಾನದಿಂದ ಬಹಳ ಆನಂದ ದೊರೆಯಿತು. ನಾನು ಹಕ್ಕಿಯಂತೆ ಹಾರಬಲ್ಲೆ, ನನ್ನ ಮನಸ್ಸು ಆಕಾಶದಷ್ಟು ವಿಶಾಲವಾದ ಆನಂದದಿಂದ ತುಂಬಿದೆ ಅನ್ನಿಸುತ್ತಿದೆ ಎಂದ. ಗುರು ‘ಹೀಗೇ ಇರುವುದಿಲ್ಲ ಬಿಡು’ ಎಂದ.
ಇಂಥ ಕತಗಳಿಗೆ ವ್ಯಾಖ್ಯಾನ ಬೇಡ. ವ್ಯಾಖ್ಯಾನ ಮಾಡುವುದು ಅಪರಾಧ. ಆದರೆ ಇಂಥ ಕತೆಗಳು ಹೊಳೆಯಿಸುವ ಅರ್ಥದ ಮಿಂಚುಗಳು ಶೀಘ್ರವಾಗಿ ಮಾಯವಾಗಿಬಿಡುತ್ತವಲ್ಲ ಅದು ವಿಚಿತ್ರ ಅಗುವುದು ಅರ್ಥ ಮಾತ್ರವಾಗಿದ್ದರೆ ಅದು ಮಾಯವಾಗುವುದೇ ವಿಧಿ ಎನ್ನಿಸುತ್ತದೆ. ಆದರೆ ಆಗುವುದು ಅನುಭವವಾದರೆ ನಮ್ಮದಾಗಿ ಉಳಿದೀತು. ಇಂಥ ಕತೆಗಳೆಲ್ಲ ಅವರಿವರು ಕಂಡುಕೊಂಡ ಉತ್ತರಗಳು. ಉತ್ತರವನ್ನು ಬಯಸದೆ ಪ್ರಶ್ನೆಯನ್ನೆ ಪರಿಶೀಲಿಸುತ್ತ ಪ್ರಶ್ನೆಯ ಮೂಲವನ್ನು ಕಂಡವರು. ಅದರೆ ಬಹಳ ಬಾರಿ ನನ್ನಲ್ಲಿ ಮೂಡುವ ಪಶ್ನೆಗಳು ಸುಮ್ಮಸುಮ್ಮನೆ ಹುಟ್ಟಿಕೊಳ್ಳುವ ಪ್ರಶ್ನೆಗಳು. ಸುಲಭ ಉತ್ತರದ ಅಪೇಕ್ಷೆಯಿಂದ ರೂಪುಗೊಂಡ ಪ್ರಶ್ನೆಗಳು ಅನಿಸುತ್ತವೆ. ಆದರಿಂದಲೇ ಮಲಗುವ ಮುನ್ನ ನಾಯಿ ಇದ್ದಲ್ಲೆ ಸುತ್ತು ಹಾಕಿ ಹಾಕಿ ಮಲಗುವಂತೆ ಇರುವಂತೆ ಅವೇ ಪ್ರಶ್ನೆಗಳು ದಿನ ದಿನವೂ ಸುಳಿಯುತಲೇ ಇರುತ್ತವೆ.
ಹೀಗೆ ಬರೆಯುತ್ತಿರುವಾಗ ಇನ್ನೊಂದು ಕತೆ ನೆನಪಿಗೆ ಬರುತ್ತಿದೆ. ಝೆನ್ ಗುರು ಒಮ್ಮೆ ಕೊಳದ ಬಳಿ ಅಡ್ಡಡುತ್ತಿದ್ದ. ಅವನ ಬಳಿಗೆ ಬಂದವನೊಬ್ಬ ‘ಗುರುವೇ ನನಗೆ ದೇವರನ್ನು ಕಾಣುವ ಅಪೇಕ್ಷೆ ಇದೆ, ತೋರಿಸಿಕೊಡಿ’ ಎಂದ. ಆಗ ಗುರು ತಟ್ಟನೆ ಅವನ ಕತ್ತನ್ನು ಹಿಡಿದು ಕೊಳದ ನೀರಿನಲ್ಲಿ ಬಲವಾಗಿ ಅದುಮಿದ. ಕಿವಿ ಮೂಗು ಬಯಲ್ಲೆಲ್ಲ ನೀರು ಹೊಕ್ಕು ತಡಬಡಾಯಿಸಿ ಉಸಿರು ಕಟ್ಟಿ ಸತ್ತೇಹೋಗುತ್ತೇನೆಂದು ಕೆದರಿ ಆ ಬಡಪಾಯಿ ಮನುಷ್ಯ ಕೈಕಾಲು ಬಡಿಯತೊಡಗಿದೆ. ಗುರು ಇನ್ನೂ ಬಲವಾಗಿ ಅವನನ್ನು ನೀರಿನೊಳಕ್ಕೆ ಅದುಮಿ ಹಿಡಿದುಕೊಂಡ. ಇನ್ನೇನು ಸತ್ತೇ ಹೋಗುತ್ತಾನೆ ಎನಿಸಿದಾಗ ಅವನನ್ನು ಮೇಲಕ್ಕೆ ಎತ್ತಿ ತಂದು ನೆಲದ ಮೇಲೆ ಮಲಗಿಸಿದ. ಆಮೇಲೆ ಕೇಳಿದ, ‘ನೀರಿನಲ್ಲಿ ಅದುಮಿ ಹಿಡಿದಿದ್ದಾಗ ಏನನ್ನಿಸಿತು?’ ಆ ಮನುಷ್ಯ ‘ಉಸಿರಾಡಬೇಕು, ಗಾಳಿ ಬೇಕು ಅನಿಸಿತು’ ಎಂದ. ಮುಳುಗಿ ಸಾಯುತ್ತಿದ್ದ ಕ್ಷಣದಲ್ಲಿ ಗಾಳಿ ಬೇಕು ಅನಿಸಿದಪ್ಟೇ ತೀವ್ರವಾಗಿ ದೇವರನ್ನು ನೋಡಬೇಕು ಅನ್ನಿಸಿದಾಗ ಬಾ. ನಿನಗೆ ದೇವರನ್ನು ತೋರುತ್ತೇನೆ ಎಂದನಂತೆ ಗುರು.
ನಾನು ಯಾವುದನ್ನು ಪ್ರಶ್ನೆ ಎಂದುಕೊಂಡಿರುತ್ತೇನೆಯೋ ಅದು ಅರ್ಥವಾಗುವುದು ಉಸಿರಾಟದಷ್ಟೆ ಮುಖ್ಯ ಅನಿಸಿದೆಯೇ ನನಗೆ? ಇಲ್ಲ ಅನ್ನುವುದೇ ನಿಜ. ಬಹುಶಃ ಉತ್ತರಗಳ ಸಂಗ್ರಹದಲ್ಲಿ ತೃಪ್ತಿಯನ್ನು ಕಾಣುತ್ತಾ, ಉತ್ತರಗಳ ಸಂಗ್ರಹವನ್ನೇ ಜ್ಞಾನರಾಶಿ ಎಂದು ಭ್ರಮಿಸಿ ಪ್ರಶ್ನೆಯೇ ಇಲ್ಲದವನಾಗಿರಬಹುದು ನಾನು. ಇಲ್ಲದಿದ್ದರೆ ‘ನೀನು ಹಾಗೆ ಮಾಡಿದ್ದರಿಂದ ನನಗೆ ಮಃಖವಾಯಿತು. ನೀನು ಹೀಗೆ ಮಾಡಿದ್ದರಿಂದ ನನಗೆ ಕೋಪ ಬಂದಿತು. ನೀನು ನನ್ನ ಮನಸ್ಸು ಕೆಡಿಸಿದೆ. ನೀನು ನನಗೆ ಸಿಟ್ಟು ತರಿಸಿದೆ’ ಎಂದೆಲ್ಲ ತಪ್ಪಿಯೂ ಹೇಳುತ್ತಿರಲಿಲ್ಲವೋ ಏನೋ. ನನಗೆ ಆಗುವುದಕ್ಕೆಲ್ಲ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆಲ್ಲ ಬೇರೆಯವರೇ ಜವಾಬ್ದಾರರು ಎಂಬಂತೆಯೇ ಮನಸ್ಸು ಯಾವಾಗಲೂ ಕೆಲಸಮಾಡುತ್ತದೆ. ನಾನು ಓದಿದ ಇಂಥ ಕತೆಗಳು ನನ್ನ ಅನುಭವವೇ ಆಗಿದ್ದಿದ್ದರೆ ‘ನಾನು ಕೋಪ ಮಾಡಿಕೊಂಡೆ, ‘ನಾನು ಬೇಜಾರು ಮಾಡಿಕೊಂಡೆ, ನಾನು ದುಃಖ ಮಾಡಿಕೊಂಡೆ’ ಇತ್ಯಾದಿಯಾಗಿ ತಿಳಿಯುತ್ತಿದ್ದೆನೇ ಹೊರತು, ನನ್ನ ಭಾವನೆಗಳಿಗೆಲ್ಲ ನಾನೇ ಜವಾಬ್ದಾರ ಎಂದು ಅರಿಯುತ್ತಿದ್ದೆನೇ ಹೊರತು ಬೇರೆಯವರನ್ನು ಹೊಣೆ ಮಾಡುತ್ತಿರಲಿಲ್ಲ, ಅಲ್ಲವೇ. ಆಗ ನನ್ನ ಮನಸ್ಸಿನೊಳಗೆ ಓಡಾಡುವ ಜೇಡರ ಹುಳುಗಳೆಲ್ಲ ನನ್ನ ಮನಸ್ಸಿನವೇ ಸೃಷ್ಟಿ ಎಂದು ತಿಳದುಬಿಡುತ್ತಿತ್ತೋ ಏನೋ.
ಅದರೆ ಈಗ ಏನಾಗಿದೆ ಎಂದರೆ ಇಂಥ ಕತೆಗಳು, ಎಲ್ಲ ಕೇವಲ ಜಾಣತನದ ಪ್ರದರ್ಶನದ ಸರಕುಗಳಾಗಿಬಿಟ್ಟವೆ. ಮನಸ್ಸೆಂಬುದು ನನ್ನ ಮನಸ್ಸಿನ ಭಾವನೆಗಳಿಗೆ ನಾನೇ ಜವಾಬ್ದಾರ ಎಂದು ಅರಿತ ಸ್ಥಿತಿ ಹೇಗಿರಬಹುದೆಂದು ಕಲ್ಪಿಸಿಕೊಂಡು, ಅಂಥ ಸ್ಥಿತಿ ದೊರೆತೀತು ಎಂದು ಹಾರೈಸಿಕೊಂಡು, ಆ ಕಲ್ಪನೆಯಲ್ಲೇ ಸುಖ ಕಾಣತೊಡಗುತ್ತದೆ. ಪಲಾಯನಕ್ಕೆ ಎಷ್ಟೊಂದು ದಾರಿಗಳು! ಪಲಾಯನ ಬೇಡವೆಂದರೆ ನೀರಿನಲ್ಲಿ ಉಸಿರು ಕಟ್ಟಿ ಒದ್ದಾಡಿದ ಕತೆಯ ಆ ಮನುಷ್ಯನಂತೆ ಪ್ರಶ್ನೆಯಲ್ಲೆ ಗಹನವಾಗಿ, ತೀವ್ರವಾಗಿ ಮುಳುಗಬೇಕು. ಅಯ್ಯೋ, ಭಯ! ಹಾಗಿದ್ದರೆ ಸುಮ್ಮನೆ ಹಂಬಲಿಸುತ್ತಾ, ಆದರೆ ಹೆದರುತ್ತಾ, ಮಿಂಚಾಗಲು ಬಯಸುತ್ತಾ ಆದರೆ ಮನಸ್ಸಿನ ತುಂಬ ಜೇಡಗಳು ಓಡಾಡುತ್ತಾ ಹೀಗೆಯೇ ಕಾಲ ಕಳೆದುಹೋಗುತದೆಯೋ? ಎಲ್ಲರೂ ಹೀಗೆಯೇ ಇರುತ್ತಾರೋ ಮನಸ್ಸಿನ ತುಂಬ ಜೇಡಗಳನ್ನಿಟ್ಗುಕೊಂಡು ಹೊರಗೆ ಇಲ್ಲದ ಜೇಡವನ್ನು ಬೇಟೆಯಾಡಲು ಬಯಸುತ್ತಾ ಅಥವಾ ನಾನು ಒಬ್ಬನೇ ಹೀಗಿದ್ದೇನೋ? ಕೇಳುವುದು ಯಾರನ್ನು?
*****