ಚಿತ್ರ: ಜೆರಾರ್ಡ ಗೆಲ್ಹಿಂಗರ್‍

ಅಧ್ಯಾಯ ೨೧

ಶಕುಂತಳೆಯ ಚೆಲುವು ಮೈಕಟ್ಟಿಗಾಗಲಿ, ಮೈ ಬಣ್ಣಕ್ಕಾಗಲಿ ಸೇರಿದುದಲ್ಲ. ಒಮ್ಮೆ ನೋಡಿದರೆ ಎರಡನೆ ಬಾರಿ ನೋಡಬೇಕೆನ್ನಿಸುವ ರೂಪು ಅವಳದಲ್ಲ. ತುಸು ಹೆಚ್ಚು ನೀಳವೆನ್ನಬಹುದಾದ ಮೋರೆ, ನಸುಗಪ್ಪಿನ ಮೈ. ಅವಳ ಉಡುಗೆ ತೊಡುಗೆಗಳೂ ಸರಳವೇ. ಆದರೂ ಶಕುಂತಳೆಯಲ್ಲೇನೋ ಪ್ರತ್ಯೇಕತೆಯಿತ್ತು, ಅದು ಅವಳ ಬರೇ ದೈಹಿಕವಲ್ಲದ ಮುಖಕಾಂತಿ, ನೋಡಿದವರ ನೋಟವನ್ನು ಹಿಡಿದು ನಿಲ್ಲಿಸಬಹುದಾದ ಆಳವಾದ ಕಣ್ಣುಗಳು, ದೇಹದಲ್ಲಿ, ಮಾತಿನಲ್ಲಿ ಪುಟಿಯುತ್ತಿದ್ದ ಲವಲವಿಕೆ-ಇವೆಲ್ಲದರ ಸಮ್ಮಿಳನವಿರಬಹುದು. ಯಾವುದೋ ತೀವ್ರ ಸಂವೇದನೆಯ ನೆನಪುಗಳನ್ನು ಮನಸ್ಸಿನಲ್ಲಿ ಎಬ್ಬಿಸುವ ಹೆಣ್ಣು. ಅವಳ ಆನಂದ ಲವಲವಿಕೆಗಳೂ ದುಃಖದ ಇನ್ನೊಂದು ಮಗ್ಗುಲು ಎನಿಸಬಲ್ಲಷ್ಟು ಗಾಢವಾದುವು.

ಸೀನಿಯರ್ ರಿಸರ್ಚ್ ಸ್ಟೂಡೆಂಟುಗಳ ಸಾಲಿಗೆ ಸೇರಿದ ಶಕುಂತಳೆಯ ಪರಿಚಯವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ದಿನಾ ಒಂದಲ್ಲ ಹತ್ತೆಂಟು ಬಾರಿ ಅಧ್ಯಾಪಕರು, ವಿದ್ಯಾರ್ಥಿಗಳು, ಇನ್ನಿತರರು ಪರಸ್ಪರ ಎದುರಾಗುತಿದ್ದ ಇಂಥ ಸ್ಥಳದಲ್ಲಿ ಹೊಸಬರನ್ನು ತಾನಾಗಿಯೇ ನಕ್ಕು ಮಾತಾಡಿಸುವ ಶಕುಂತಳೆಯ ಪರಿಚಯವಾಗದಿರುವುದು ಹೇಗೆ? ಅದು ಅರವಿಂದನ ಆರಂಭದ ಸೆಮಿನಾರು, ಯಾವುದೋ ಪೇಪರು ಓದಬೇಕಿತ್ತು. ಬಹಳ ದಿನಗಳಿಂದ ಅದಕ್ಕೋಸ್ಕರ ಡ್ರಾಫ್ಟಿನ ಮೇಲೆ ಡ್ರಾಫ್ಟು ಬರೆದು ತಿದ್ದಿ ತೀಡಿ ಬರೇ ಕನ್ನಡಿಯೊಂದನ್ನು ಮುಂದಿಟ್ಟುಕೊಂಡು ರಿಹರ್ಸಲ್ ಮಾಡುವುದೊಂದನ್ನುಳಿದು ಬಾಕಿ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರೂ ಸೆಮಿನಾರಿನ ದಿನ ಮಾತ್ರ ಹೇಗಾಗುತ್ತದೋ ಏನೋ ಎಂಬ ಆತಂಕ ಅವನನ್ನು ಬಿಟ್ಟಿರಲಿಲ್ಲ. ಚರ್ಚಾಸ್ಪದವಾದರೂ ಪರವಾಗಿಲ್ಲ, ಆದರೆ ಜನರನ್ನು ತಲೆದೂಗಿಸಬೇಕು ಅಂದುಕೊಂಡೇ ಇದ್ದ ಧೈರ್ಯವೂ ಉಡುಗಿ ಹೋಗುತ್ತಿರುವಂತೆ ಅನಿಸಿತು. ಆದರೂ ಒಮ್ಮೆ ಸೆಮಿನಾರು ಆರಂಭವಾದ ಮೇಲೆ, ಒಮ್ಮೆ ಮೊದಲ ವಾಕ್ಯ ದಾಟಿದ ಮೇಲೆ ಅವನನ್ನು ತಡೆಯುವವರು ಯಾರು ಇರಲಿಲ್ಲ. ಪೇಪರು ಚರ್ಚೆಗೆ ಬೀಳುವ ಹೊತ್ತಿಗೆ ಆತ ಇಡಿಯ ಸಭೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ. ಎಲ್ಲಕ್ಕಿಂತ ಹೆಚ್ಚು ಡಾಕ್ಟರ್ ವೈಶಾಖಿಯ ಮೆಚ್ಚಿಗೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಸೆಮಿನಾರು ಮುಗಿದ ಮೇಲೆ, ಎಲ್ಲರೂ ತಂತಮ್ಮ ಕೆಲಸ ಕಾರ್ಯಗಳಿಗೆ ಹೊರಟು ಹೋದ ಮೇಲೆ, ತೃಪ್ತಿಯ ಬೆನ್ನ ಹಿಂದೆಯೇ ಮನಸನ್ನಾವರಿಸಿದ ಶೂನ್ಯತೆಯಲ್ಲಿ ಏನು ಮಾಡುವುದೆಂದು ತೋಚದೆ ಕ್ಯಾಂಟೀನಿನ ಕಡೆ ಹೆಜ್ಜೆ
ಹಾಕುತ್ತಿದ್ದಾಗ ಸಿಕ್ಕಿದವಳು ಶಕುಂತಳೆ. ಅವಳೊಂದಿಗೆ ಯಾವಾಗಲೂ ಜತೆಯಾಗಿರುತ್ತಿದ್ದ ರಾಜಾರಾಮ. ಇಬ್ಬರೂ ಸೆಮಿನಾರಿಗೆ ಬಂದಿದ್ದರು. ಏನೇನೋ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಅದರಿಂದ ಶಕುಂತಳೆ ತೃಪ್ತಳಾಗಿರಲಿಲ್ಲ. ಅವಳ ಬಳಿ ಇನ್ನೂ ಅನೇಕ ಪ್ರಶ್ನೆಗಳಿದ್ದುವು. “ಬನ್ನಿ, ನಿಮ್ಮ ಪೇಪರು ಚೆನ್ನಾಗಿತ್ತು ಅಂದರೆ ಸಾಕೆ? ಸ್ವಲ್ಪ ಕಾಫಿ ತಿಂಡಿಯಾದರೂ ಕೊಡಿಸಬೇಕು.” ಎಂದು ಕರೆದಳು. ಶಕುಂತಳೆಯ-ಅವಳ ಮೂಲಕ ರಾಜಾರಾಮನ ನಿಕಟವಾದ ಪರಿಚಯ ಅಂದಿನಿಂದ ಮೊದಲಾಗಿತ್ತು.

ಶಕುಂತಳೆಯದು ಪ್ರಶ್ನೆಗಳ ಜಗತ್ತು. ಈಕೆ ಬರೇ ಕೀಟಲೆಗೋಸ್ಕರ ಕೇಳುತ್ತಾಳೆ ಎಂದುಕೊಳ್ಳುವವರು ನಿಜಕ್ಕೂ ಶಕುಂತಳೆಯನ್ನು ತಿಳಿದುಕೊಂಡಿರುವುದಿಲ್ಲ. ಐತಿಹಾಸಿಕ ಸತ್ಯಗಳಿವೆಯೆ? ಇದ್ದರೆ ಅವುಗಳನ್ನು ಗೊತ್ತುಹಿಡಿಯುವುದು ಹೇಗೆ? ಇದರಲ್ಲಿ ಇತಿಹಾಸಕಾರನ ಕಲ್ಪನೆಯೆಷ್ಟು, ಸತ್ಯವೆಷ್ಟು? ಅಶೋಕನಿಗೆ ವೈರಾಗ್ಯ ಬಂದುದು ಕಳಿಂಗ ಯುದ್ಧದ ನಂತರ ಎಂದು ನಿಖರವಾಗಿ ಹೇಳುವುದು ಸಾಧ್ಯವೆ? ಅಥವಾ ಅದನ್ನು ವೈರಾಗ್ಯವೆಂದೇ ಹೇಳುವುದು ಹೇಗೆ? ಹಿಟ್ಲರ್ ಯೆಹೂದಿಗಳನ್ನೂ ಸದೆ ಬಡಿದ ; ಜಿಪ್ಸಿಗಳನ್ನೂ ಸದೆಬಡಿದ, ಆದರೆ ಜಿಪ್ಸಿಗಳ ವಿರುದ್ದವಾದ ಅವನ ಕಾರ್ಯಾಚರಣೆ ಯಾಕೆ ಅಷ್ಟೊಂದು ಗಮನಕ್ಕೆ ಬೀಳುವುದಿಲ್ಲ? ಇತ್ಯಾದಿ.

ಆದರೆ ಅರವಿಂದನಿಗೆ ಅರ್ಥವಾಗದ ಸಂಗತಿಯೆಂದರೆ ಅವಳು ರಾಜಾರಾಮನಂಥ ವ್ಯಕ್ತಿಯೊಂದಿಗೆ ಯಾಕೆ ತಿರುಗುತ್ತಾಳೆ ಎಂಬುದು. ಇಂಥ ಮಾತುಕತೆಯ ಸಂದರ್ಭಗಳಲ್ಲೆಲ್ಲ ಹೆಚ್ಚಾಗಿ ರಾಜಾರಾಮ ಸುಮ್ಮನಿರುತ್ತಿದ್ದ. ಒತ್ತಾಯಿಸಿದರೆ ಮಾತ್ರ, ಏನಾದರೂ ಚುಟುಕಿನ ಉತ್ತರ ಹೇಳುತ್ತಿದ್ದ. ಸಂಶೋಧನೆಯಲ್ಲಾಗಲಿ, ಬೌದ್ಧಿಕ ಚರ್ಚೆಯಲ್ಲಾಗಲಿ ಎಂದೂ ಅವನು ಗಂಭೀರವಾದ ಆಸಕ್ತಿಯನ್ನು ತೋರಿಸಿದವನೇ ಅಲ್ಲ. ಅವನ ಸೆಮಿನಾರು ಪೇಪರುಗಳನ್ನೆಲ್ಲಾ ಶಕುಂತಳೆಯೇ ಬರೆದುಕೊಡುತ್ತಿರಬೇಕು ಎಂಬ ಅನುಮಾನವಿತ್ತು ಅರವಿಂದನಿಗೆ. ಇಬ್ಬರೂ ಬಹಳ ನಿಕಟವಾಗಿರುತ್ತಿದ್ದರು. ಎಲ್ಲಿಗೆ ಹೋಗುವುದಿದ್ದರೂ ಒಬ್ಬರನ್ನು ಇನ್ನೊಬ್ಬರು ಬಿಟ್ಟಿರಲಾರದಂತೆ. ಇಬ್ಬರೂ ಮದುವೆ ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಕ್ಯಾಂಪಸ್‌ನಲ್ಲಿ ದಟ್ಟವಾಗಿ ಹಬ್ಬಿತ್ತು. ಶಕುಂತಳೆಗೂ ರಾಜಾರಾಮನೊಂದಿಗೆ ಎಷ್ಟು ಸಲಿಗೆಯೋ ಅಷ್ಟೇ ಅಭಿಮಾನ.

ರಾಜಾರಾಮ ತೀರ ಭಿನ್ನವಾದ ವ್ಯಕ್ತಿ, ಶ್ರೀಮಂತಿಕೆ ಅವನ ಪ್ರತಿಯೊಂದು ನಡವಳಿಕೆಯಲ್ಲಿ ಹೊರಸೂಸುತ್ತಿತ್ತು. ಪೇಟೆಯಲ್ಲೊಂದು ಫ್ಲಾಟ್ ತೆಗೆದುಕೊಂಡು ರಾಜಾರೋಷವಾಗಿ ಜೀವಿಸುತ್ತಿದ್ದ, ಆಚೀಚೆ ಓಡಾಡುವುದಕ್ಕೆ ಬುಲ್ಲೆಟ್ ಮೋಟಾರ್‌ಬೈಕು, ಅದರ ಧಡ ಧಡ ಸದ್ದು ಕೇಳಿಸಿದರೆ ಅದು ರಾಜಾರಾನೆಂದೇ ಲೆಕ್ಕ. ಅದರ ಪಿಲಿಯನ್‌ನಲ್ಲಿ ಶಕುಂತಳೆ, ದಿನಾ ಅವಳನ್ನು ಆ ನಿವಾಸದ ತನಕ ಒಯ್ದು ಬಿಡುವನು. ಕೆಲವೊಮ್ಮೆ ಶಕುಂತಳೆ ಅವನ ಫ್ಲಾಟ್‍ಗೆ ಬಂದಿರುತ್ತಿದ್ದಳು. ಅಡಿಗೆ ಮಾಡುವುದಕ್ಕೆ ಅವಳಿಗೆ ಆಸಕ್ತಿ. ಎಷ್ಟೋ ಬಾರಿ ಅರವಿಂದ ಅವಳ ಕೈಯಡುಗೆಯನ್ನು ರಾಜಾರಾಮನ ಫ್ಯಾಟಿನಲ್ಲಿ ಸವಿದಿದ್ದಾನೆ.

ರಾಜಾರಾಮನ ಆಸಕ್ತಿಗಳೇ ಬೇರೆ. ಪಾಶ್ಚಾತ್ಯ ಸಂಗೀತದ ಕೆಸೆಟ್ಟುಗಳನ್ನು ಇಟ್ಟುಕೊಂಡಿದ್ದ. ಅವುಗಳ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸುವುದು, ಹಾಡುಗಳನ್ನು ಗುನುಗುವುದು, ಪ್ರತಿಯೊಂದು ಇಂಗ್ಲಿಷ್ ಫಿಲ್ಮುಗಳನ್ನೂ ತಪ್ಪದೇ ನೋಡುವುದು, ಟೆನ್ನಿಸ್ ಆಟ, ಈಜು ಇತ್ಯಾದಿ. ರಾಜಾರಾಮ ತನ್ನ ದೇಹವನ್ನು ಬಹಳ ಮಾಟವಾಗಿ ಇಟ್ಟುಕೊಂಡಿದ್ದ. ವಯಸ್ಸು ಮೂವತ್ತೈದು ದಾಟಿರಬಹುದಾದರೂ ಒಂದು ತಲೆಗೂದಲೂ ನರೆತಿರಲಿಲ್ಲ ಬೆಳಿಗ್ಗೆ ಏಳುವುದೇ ಹತ್ತು ಗಂಟೆಗೆ. ಯಾವುದನ್ನು ಬಹಳವಾಗಿ ತಲೆಗೆ ಹಾಕಿಕೊಳ್ಳುವವನಲ್ಲ.

ಕ್ರಮೇಣ ಅವನ ಬಗ್ಗೆ ಅರವಿಂದನಿಗೆ ಇನ್ನಷ್ಟು ವಿಷಯಗಳು ಗೊತ್ತಗುತ್ತ ಬಂದುವು. ಆಂಧ್ರದ ಕರಾವಳಿಯ ದೊಡ್ಡ ಭೂಮಾಲಿಕರ ಮಗ. ಚಿಕ್ಕಂದಿನಲ್ಲೇ ಮದುವೆಯಾಗಿತ್ತು. ರಾಜಾರಾಮ ಓದಿದ. ಊರ ಸಮೀಪದ ಕಾಲೇಜೊಂದರಲ್ಲಿ ಲೆಕ್ಚರರಾದ, ಆಗುವ ಅಗತ್ಯವೇನೂ ಇರಲಿಲ್ಲ. ಕೂತು ತಿಂದು ಇನ್ನೆರಡು ತಲೆಮಾರಿಗೆ ಬರಬಹುದಾದ ಸಂಪತ್ತು, ಆದರೆ ನಾಗರಿಕವಾದ ಒಂದು ಕೆಲಸ ಬೇಕಿತ್ತು. ಅದರೊಂದಿಗೆ ನಾಗರಿಕವಾದ ಹವ್ಯಾಸಗಳೂ ಬಂದುವು. ವರ್ಷಗಳ ಹಿಂದೆ ಹಿರಿಯರ ಮನಸ್ಸಿನಂತೆ ಮದುವೆಯಾದ ಹೆಣ್ಣು ಈ ಹೊಸ ಜಗತ್ತಿಗೆ ಹೊಂದಿ ಬರಲಿಲ್ಲ. ಅವಳಿಂದ ವಿಚ್ಛೇದನ ತೆಗೆದುಕೊಂಡ. ಊರ ಕಾಲೇಜಿನಲ್ಲಿ ಮನಸ್ಸಾಗಲಿಲ್ಲ. ಹೈದರಾಬಾದಿಗೆ ಬಂದು ರಿಸರ್ಚಿಗೆ ಹೆಸರು ಹಚ್ಚಿಕೊಂಡ. ಈಗ ರಾಜಾರಾಮನನ್ನು ಅವನ ಹಳೆಯ ಗೆಳೆಯರೂ ಗುರುತಿಸಲಾರರು. ಅವನು ಪೂರ್ತಿ ಬದಲಾಗಿಬಿಟ್ಟಿದ್ದ. ತಾನು ಸಿನಿಮಾದಲ್ಲಿ ಕಂಡ, ಪುಸ್ತಕಗಳಲ್ಲಿ ಓದಿದ, ಒಬ್ಬನೇ ಕನಸು ಕಂಡ ಆಸೆಗಳೇನೇನಿವೆಯೋ ಎಲ್ಲವೂ ಅವನ ಕೈಯಳತೆಯೊಳಗಿದ್ದವು.

ತಾನು ಕಂಡಿರದ ಮದ್ಯಗಳ ಹೆಸರುಗಳೂ ಅವನ ನಾಲಗೆಯ ಮೇಲಿದ್ದುವು ಡ್ರಿಂಕ್ಸ್ ಹೇಗೆ ಮಿಕ್ಸ್ ಮಾಡಬೇಕು ಎಂಬುದನ್ನು ಕಲಿತುಕೊಂಡಿದ್ದ. ಯಾವ ಯಾವ ವಿಮಾನಗಳು ಹೇಗೆ ಹೇಗೆ ಇರುತ್ತವೆ, ಯಾವ ಕಾರುಗಳು ಒಳ್ಳೆಯದು
ಯಾವುದು ಸಾಮಾನ್ಯ-ಈ ಮೊದಲಾದ ಅತ್ಯುಚ್ಚ ವರ್ಗದ ಜ್ಞಾನವನ್ನೆಲ್ಲ ಅವನು ಸಂಪಾದಿಸಿಕೊಂಡಿದ್ದ. ಮಾತನಾಡುವಾಗ ಮಿತವಾಗಿ ಅದನ್ನು ಬಳಸಿಕೊಂಡು ಕೇಳುವವರನ್ನು ಚಕಿತಗೊಳಿಸುವುದೂ ಅವನ ಹವ್ಯಾಸವೇ.

ಈತನಿಗೆ ಶಕುಂತಳೆ ಮಾರು ಹೋಗುವುದೆಂದರೆ ಎಂತಹ ವಿಪರ್ಯಾಸ ! ಈತ ಸುಳ್ಳು, ಇವನಲ್ಲಿ ಗಾಢವಾದುದೇನೂ ಇಲ್ಲ ಎಂಬುದು ಆಕೆಗೆ ತಿಳಿದಿಲ್ಲವೇ? ಯೋಚಿಸಿದಷ್ಟು ಅರವಿಂದನಿಗೆ ಶಕುಂತಳೆಯ ಬಗ್ಗೆ ಸಂತಾಪವೆನಿಸುತ್ತಿತ್ತು. ಆದರೂ ಶಕುಂತಳೆಯೇ ತಲೆಕೆಡಿಸಿಕೊಳ್ಳದಿರುವಾಗ ತಾನೇಕೆ ಚಿಂತಿಸಬೇಕು ಎಂದು ಕೊಳ್ಳುತ್ತಿದ್ದ.

ಶಕುಂತಳೆಯನ್ನು ಟೀಕಿಸುವವಳೆಂದರೆ ಕವಿತ. ಏನಾದರೊಂದು ಕಾರಣವನ್ನು ಮುಂದಿಟ್ಟುಕೊಂಡು ಟೀಕಿಸುತ್ತಲೇ ಇದ್ದಳು, ಅವಳ ಧಿಮಾಕು ನೋಡಿದಿರ ! ರಾಜಾರಾಮನಿಗೆ ಸಂಪತ್ತಿದ್ದರೆ ಇವಳಿಗೇಕೆ ಕೋಡು ! ಕೆಲವೊಮ್ಮೆ ಕವಿತಳ ಟೀಕೆ ತೀರ ವೈಯಕ್ತಿಕವಾಗುತ್ತಿತ್ತು. ಮೊದಲೇ ಉದ್ದ ಮೋರೆ ! ಲೋಲಕ ಬೇರೆ ಹಾಕಿಕೊಂಡಿದ್ದಾಳೆ ಎಂದು ಮುಂತಾಗಿ,
ಅಸೂಯೆಯೆ? ತಾನು ಶಕುಂತಳೆಯೊಂದಿಗೆ ಬೆರೆಯುವುದು ಕವಿತಳಿಗೆ ಇಷ್ಟವಿಲ್ಲವೆ ಎಂದುಕೊಳ್ಳುತ್ತಿದ್ದ ಅರವಿಂದ. ಕವಿತಳೊಂದಿಗೆ ಅವನ ಸಂಬಂಧ ಅಷ್ಟೇನೂ ನಿಕಟವಾಗಿರಲಿಲ್ಲ. ಕೆಲವೊಮ್ಮೆ ಇಬ್ಬರೂ ಒಟ್ಟಿಗೆ ತಿರುಗಾಡಲು ಹೋಗುವುದಿತ್ತು. ರೆಸ್ಟೊರಾಂಟುಗಳನ್ನೂ ಸಿನಿಮಾಗಳನ್ನೂ ಸಂದರ್ಶಿಸುವುದಿತ್ತು. ಸಂಶೋಧನೆಗೆ ಸಂಬಂಧಿಸಿದ ಸಂದೇಹಗಳೇನಾದರೂ ಇದ್ದರೆ ಅವಳು ಆತನನ್ನೇ ಆಶ್ರಯಿಸುತ್ತಿದ್ದಳು. ತನ್ನ ಮೂಲಕ ಈತ ಈ ಸಂಸ್ಥೆಯನ್ನು ಪ್ರವೇಶಿಸಿದ ಆದ್ದರಿಂದ ತನಗಿವನ ಮೇಲೆ ಇತರರಿಗಿಂತ ಹೆಚ್ಚು ಹಕ್ಕಿದೆ ಎಂದು ಅವಳು ಭಾವಿಸಿದ್ದಿರಲೂ ಬಹುದು. ಒಂದೆರಡು ಬಾರಿ ಅವನನ್ನು ತನ್ನ ಮನೆಗೂ ಕರೆದುಕೊಂಡು ಹೋಗಿದ್ದಳು. ಆದರೆ ಅದಕ್ಕೂ ಹೆಚ್ಚು ಸಮೀಪ ಅವರಿಬ್ಬರೂ ಬಂದಿರಲಿಲ್ಲ.

ಹೊರತಾಗಿ ದಿನಗಳೆದಂತೆ ಕವಿತಳ ವರ್ತನೆಯೇ ಬದಲಾಗತೊಡಗಿತ್ತು. ಏನಾದರೂ ನೆಪ ಹುಡುಕಿ ಮನಸ್ತಾಪಕ್ಕೆ ಕಾರಣಳಾಗತೊಡಗಿದಳು. ಹತ್ತು ನಿಮಿಷ ತಡವಾದರೂ ಎಂಥ ಮ್ಯಾನರ್ಸ್ ಎಂದು ರೇಗುತ್ತಿದ್ದಳು. ತನ್ನಿಂದ ಅಂತಿಮವಾಗಿ ದೂರ ಸರಿಯಲು ಸರಿಯಾದೊಂದು ನೆಪವನ್ನು ಹುಡುಕುವಂತಿತ್ತು ಆಕೆ.

ಅದೂ ಒದಗಿ ಬಂತು.

ಪ್ರೊಫೆಸರ್ ಖಾಡಿಲ್ಕರ್‌ ನೀರೀಕ್ಷಿಸಿದ್ದ ಎಕ್ಸ್ಟೆನ್ಯನ್ ಸಿಗಲಿಲ್ಲ. ಒಂದು ಮೂರು ತಿಂಗಳಷ್ಟೇನೋ ಸಿಕ್ಕಿತು. ಮೂರು ವರ್ಷ ಸಿಗಬಹುದೆಂದು ಕೊಂಡಿದ್ದ ಖಾಡಿಲ್ಕರರಿಗೆ ನಿರಾಶೆಯಾಯಿತು. ಕೊನೆಗೂ ಅವರು ಸಂಸ್ಥೆಯಿಂದ ಅಂತಿಮವಾಗಿ ನಿರ್ಗಮಿಸಬೇಕಾಯಿತು. ಎಲ್ಲರೂ ಸೇರಿ ಅವರ ಸೇವೆಯನ್ನು ಸ್ಮರಿಸಿ ದೊಡ್ಡದೊಂದು ಉಡುಗೊರೆಯನ್ನು ಕೊಟ್ಟರು.
ಇದಾದ ಕೆಲವು ದಿನಗಳ ಮೇಲೆ ಅರವಿಂದನಿಗೆ ಫೋನಿನ ಕರೆ ಬಂತು. “ಅರವಿಂದ್?”
“ಸ್ಪೀಕಿಂಗ್.”
“ಎರಡು ವಾರಗಳಿಂದ ನಿಮ್ಮ ಸುದ್ದಿಯಿಲ್ಲ !”
“ಯಾರು ನೀವು?”
ಬೇಕೆಂತಲೇ ಕೇಳಿದ, ಬಿಸಿ ಲೈನ್‌ನಲ್ಲಿ ತೇಲಿ ಬರುತ್ತಿರುವ ಕಾತರದ ಧ್ವನಿ ಖಾಡಿಲ್ಕರರದು ಎಂಬುದರಲ್ಲಿ ಅವನಿಗೆ ಸಂದೇಹವೇ ಇರಲಿಲ್ಲ.

“ನಾನು ಪ್ರೊಫೆಸರ್ ಖಾಡಿಲ್ಕರ್!”

ಯಾಚನೆ? ಕ್ರೋಧ? ಅವಮಾನ? ತನಗೆ ಎಕ್ಸ್ಟೆಶನ್ ಕೊಡಿಸದಿದ್ದುದಕ್ಕೆ ಖಾಡಿಲ್ಕರ್‌ ಡೈರೆಕ್ಟರರ ಸಮೇತ ಎಲ್ಲರನ್ನೂ ದೂರಿದ್ದರು. ತನಗೆ ಅನ್ಯಾಯವಾಗಿದೆಯೆಂದು ಬೋರ್ಡಿಗೆ ದೂರು ತೆಗೆದುಕೊಂಡು ಹೋಗಿದ್ದರು, ಬೋರ್ಡು ಈ ದೂರಿನ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳುವ ಅಗತ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದಿತ್ತು.

“ನಮಸ್ಕಾರ ಸರ್ ! ಹೇಗಿದ್ದೀರ?”

ಈ ಹಿಂದೆ ಎರಡೆರಡು ಬಾರಿ ನಿಮಗೆ ಫೋನ್ ಮಾಡಲು ಪ್ರಯತ್ನಿಸಿದೆ?”

ಆಕ್ಷೇಪಣೆಯ ಧ್ವನಿ.
“ನಿಮಗೇ ಗೊತ್ತಿದೆಯಲ್ಲ ಇಲ್ಲಿ ಫೋನು ಯಾವಾಗಲೂ ಎಂಗೇಜ್ ಆಗಿರು ರುತ್ತದೆ.”
ಪ್ರೊಫೆಸರರು ಅದನ್ನು ನುಂಗಿಕೊಂಡರು. “ಯಾಕೆ ಪಾಠಕ್ಕೆ ಬರುತ್ತಿಲ್ಲ?” “ಕೆಲಸ,” ಎಂದ.
ಖಾಡಿಲ್ಕರರ ಮುಖವನ್ನು ಊಹಿಸಿಕೊಂಡ, ದಪ್ಪವಾದ ಹುಬ್ಬುಗಳ ಕೆಳಗೆ ಅಚ್ಚರಿಯೊಂದು ಕಂಡೂ ಕಾಣದ ಹಾಗೆ ಹಾದುಹೋಗಿದ್ದಿತು.
“ಹುಡುಗರು ಇಲ್ಲಿ ಕಾಯ್ತ ಇದ್ದಾರೆ.”
“ನನಗಿಲ್ಲಿ ಕೈತುಂಬಾ ಕೆಲಸ. ನಾನು ಬರೋದು ಸಾಧ್ಯವಾಗಲ್ಲ.” “ಹಾಗಂದರೆ ಹೇಗೆ? ನಿಮ್ಮ ಪಾಠ ಯಾರು ಮಾಡುತ್ತಾರೆ?….”
ಮಾತು ವಿದ್ಯುತ್ತಿನ ಅಲೆಯಲ್ಲಿ ಕ್ಷೀಣವಾಯಿತು.
“ಇನ್ನು ಯಾರನ್ನಾದರೂ ತೆಗೆದುಕೊಳ್ಳಿ.”
“ಹಲೋ !”
“ಇನ್ನು ಯಾರನ್ನಾದರೂ ತೆಗೆದುಕೊಳ್ಳಿ ಎಂದೆ.”
“ಮನೆಗೆ ಬನ್ನಿ. ಏನಿದ್ದರೂ ಮಾತಾಡೋಣ….”
“ಸಾರಿ, ಸಮಯವಿಲ್ಲ.”
“ಹಣದ ವಿಚಾರವೆ.. ಏನಾದರೂ ಮಾಡೋಣ….ಎಷ್ಟು ಕೊಡಬೇಕು”
“ಹೇಳಿ.”
ಖಾಡಿಲ್ಕರ್ ಆತುರದಿಂದ ಕೇಳಿದರು. ರಿಟಯರ್‍ಮೆಂಟು, ಎಕ್ಸ್ಟೆನ್ಶನ್ ಸಿಗದ ಅವಮಾನ, ಸಾಲಾಗಿ ಹುಟ್ಟಿದ ಮೂವರು ಹೆಣ್ಣು ಮಕ್ಕಳು.
“ಹಣದ ವಿಚಾರವಲ್ಲ…”
“ಹಣ ಬೇಕಾಗುವುದಿಲ್ಲವೆ? ಯೋಚನೆ ಮಾಡಿ….”
“ಇಷ್ಟು ದಿನ ಮಾಡದ ಯೋಚನೆ ಈಗೇಕೆ?”
“ನಾನೇ ಕೊಡಬೇಕೆಂದಿದ್ದೆ… ಹಲೋ !”

ಕಾತರ, ನಿಸ್ಸಹಾಯಕತೆ ತುಂಬಿದ ಧ್ವನಿ ಬಹಳ ದೂರದಿಂದೆಂಬಂತೆ ತಲುಪಲು ಪ್ರಯತ್ನಿಸಿತು. ಅರವಿಂದ ಫೋನನ್ನು ಅದರ ತೊಟ್ಟಿಲಲ್ಲಿ ಕುಕ್ಕಿದ. ಅದು ಖಾಡಿಲ್ಕರರೊಂದಿಗಿದ್ದ ಸಂಬಂಧಕ್ಕೆ ಇತಿಶ್ರೀ. ಕೌಂಟರಿನಲ್ಲಿ ಕುಳಿತು ಯಾವುದೋ ಉರ್ದು ಪತ್ರಿಕೆಯ ನೋದುತ್ತಿದ್ದ ರೆಸೆಷನಿಸ್ಟ್ ಹುಡುಗಿ ಒಂದು ಕ್ಷಣ ಮುಖವೆತ್ತಿ ಮರ್ಯಾದೆಯ ಮುಗುಳಗೆಯೊಂದನ್ನೆಸೆದು ಮತ್ತೆ ತನ್ನ ಓದಿನಲ್ಲಿ ತಲ್ಲೀನಳಾದಳು. ಮೂಗಿನಲ್ಲಿ ಹೊಳೆಯುವ ಕಲ್ಲಿನ ನತ್ತು, ತುಟಿಗೆ ಕೆಂಪಿನ ಲಿಪ್‌ಸ್ಟಿಕ್, ಕೆನ್ನಗೆ ಲೇಪಿಸಿದ ರೂಜ್‌, ತಲೆಗೂದಲಿಗೆ ಬಣ್ಣದ ಕ್ಲಿಪ್ಪು. ಅವಳು ಬಳಿದುಕೊಂಡ ಅತ್ತರು ಅಷ್ಟು ದೂರದಲ್ಲೆಲ್ಲಾ ಪಸರಿಸಿತ್ತು. ಟೆಲಿಫೋನು ಮತ್ತೆ ಟ್ರಣ್ಣನೆ ಸದ್ದಾಯಿತು. ಗೊಣಗುತ್ತ ಎತ್ತಿಕೊಂಡಳು. ಅರವಿಂದ ತನ್ನನ್ನು ನೋಡುತ್ತ ಅಲ್ಲೇ ನಿಂತಿರುವುದನ್ನು ಕಂಡು ನಾಚಿಕೆ ತೋರಿದಳು.

“ನಿಮಗೇ !” ಎಂದಳು, ತುಸು ಆಶ್ಚರ್ಯದಿಂದ.
“ನಾನಿಲ್ಲ.”
ಅರ್ಥವಾದವಳಂತೆ ರಹಸ್ಯದ ನಸುನಗೆ ಬೀರಿದಳು.
“ಎಲ್ಲೋ ಹೊರಟುಹೋಗಿದ್ದಾರೆ….ಗೊತ್ತಿಲ್ಲ.” ಎಂದಳು ಪೋನಿನಲ್ಲಿ. “ಥ್ಯಾಂಕ್ಸ್.”
ತುಂಟತನದಿಂದ ಏನೋ ಹೇಳಿದಳು. ಆದರೆ ಅರವಿಂದನ ಮನಸ್ಸು ದುಗುಡದಿಂದ ತುಂಬಿತ್ತು. ಆರೆಹೊಟ್ಟೆಯಲ್ಲಿ ಇತಿಹಾಸದ ಕ್ಲೀಕ್ಷಿಗಳನ್ನು ಆಲಿಸಿ ಹುಡುಗರ ಮುಂದೆ ಕಕ್ಕಿದ, ಮಳೆ ಬಿಸಿಲೆನ್ನದೆ ರಜೆಯೆನ್ನದೆ ಖಾಡಿಲ್ಕರರ ಮನೆಗೆ ಮಣ್ಣು ಹೊತ್ತ ನೆನಪುಗಳು-ಇನ್ನೆಂದಿಗೂ ಅದರ ಅಗತ್ಯವಿಲ್ಲವೆನ್ನುವ ಸಮಾಧಾನ ನಾಲ್ಕಾರು ದಿನಗಳು ಕಳೆದಿದ್ದುವು. ಕವಿತ ದೇಶಪಾಂಡೆ ಬಸುಗುಟುತ್ತಲೆ ಬಂದಳು. ಬಂದವಳೇ ಆಕ್ಷೇಪಣೆ ಸುರುಮಾಡಿದಳು.

“ಖಾಡಿಲ್ಕರರನ್ನ ಇನ್ಸಲ್ಟ್ ಮಾಡಿದಿರಿ !”
“ಇಲ್ಲ.”
“ನಿಮಗೆ ಪೇಮೆಂಟ್ ಮಾಡೋದಕ್ಕೆ ಕೂಡ ತಯಾರಿದ್ದರು ಅವರು!”
“ಅದು ನಿಜ. ನಾನೇ ಬೇಡಾಂದೆ.”
“ಯಾಕೆ?”
“ನನಗೆ ಸಮಯ ಇಲ್ಲ.”
“ಇಷ್ಟರ ತನಕ ಇತ್ತು !”
“ನನಗೊಂದು ವಿಷಯ ಮಾತ್ರ ಅರ್ಥವಾಗುತ್ತಿಲ್ಲ.”
“ಏನು?”
“ಅವರ ಬಗ್ಗೆ ಅಷ್ಟು ಕಳಕಳಿಯಿದ್ದರೆ ನೀವು ಯಾಕೆ ಸಹಾಯ ಮಾಡಬಾರದು???”
ಕವಿತ ಕೋಪದಿಂದ ಕಿಡಿಕಿಡಿಯಾದಳು.
“ಯಾಕೆಂದರೆ ಸೀಟು ಯಾಚಿಸುತ್ತ ಯಾರ ಹಿಂದೆಯೂ ಅಲೆದಿಲ್ಲ ನಾನು!” “ಅದೃಷ್ಟವಂತೆ ! ನನಗಂಥ ಅದೃಷ್ಟವಿರಲಿಲ್ಲ….”
“ಅತ್ಯಂತ ನಿಕೃಷ್ಟ ಕೆರೀಯರಿಸ್ಟ್‌ನಂತೆ ವರ್ತಿಸುತ್ತಿದ್ದೀರಿ. ಸುಳ್ಳು. ವಂಚನೆ ಕೃತಘ್ನತೆ-ನನಗೇನಂದರಿ- ಯಾವುದೋ ಕಾಲೇಜಿನಲ್ಲಿ ಲೆಕ್ಚರರಾಗಿದ್ದೆ, ತಾತ್ವಿಕ ಕಾರಣಗಳಿಗೋಸ್ಕರ ರಾಜಿನಾಮೆ ಕೊಟ್ಟೆ ಅಂದಿರಲ್ಲವೆ? ಹಾಗಾದರೆ ಯಾವುದೋ ಕಾಡುಕೊಂಪೆಯಲ್ಲಿ ಸ್ಕೂಲ್ ಅಸಿಸ್ಟೆಂಟಾಗಿ ಕೊಳೆಯುತ್ತಿದ್ದವರು ಯಾರು?”

ಖಾಡಿಲ್ಕರ್ ! ನಿಜ ಅವರೇ ಇದನ್ನು ಬಹಿರಂಗಗೊಳಿಸಿರಬೇಕು. ಸಂಸ್ಥೆಗೆ ಸಲ್ಲಿಸಿದ ಅರ್ಜಿಯಲ್ಲಿ ಬಯೋ ಡಾಟಾ ಕೊಡುವಾಗ ಶಾಲಾಮಾಸ್ತರಿಕೆಯನ್ನೂ ನಮೂದಿಸಿದ್ದ. ಅರವಿಂದ ಕೆಳತುಟಿಯಲ್ಲಿ ನಕ್ಕ. ಖಾಡಿಲ್ಕರ್‌ ಆಗಲಿ, ಕವಿತ ದೇಶಪಾಂಡೆಯಾಗಲಿ ತನಗೆ ಅಪಾಯವೊದಗಿಸುವ ಸ್ಥಿತಿಯಲ್ಲಿಲ್ಲ. ಅವರನ್ನೆಲ್ಲ ಹಿಂದೆ ಹಾಕಿ ಬಹಳ ದೂರ ಬಂದಿದ್ದೇನೆ. ಆದರೂ ಕವಿತ-ಅವಳೇಕೆ ಇಷ್ಟೊಂದು ಆಕ್ರೋಶ ತೋರಿಸಬೇಕು? ತಾನೇನು ಮಾಡಿದ್ದೇನೆ ಅವಳಿಗೆ?

ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ದೊರೆಯಿತು.
*****

ಅಧ್ಯಾಯ ೨೨

ನಾಗಾರ್ಜುನ ಸಾಗರಕ್ಕೆ ಪಿಕ್‌ನಿಕ್ ಹಾಕಿಕೊಂಡಿದ್ದರು. ಅಧ್ಯಾಪಕರು, ಸಂಶೋಧಕ ವಿದ್ಯಾರ್ಥಿಗಳು ಮೊದಲಾಗಿ ಸುಮಾರು ಮೂವತ್ತು ಮಂದಿಯನ್ನು ತುಂಬಿಕೊಂಡ ಬಸ್ಸು ಹೈದರಾಬಾದನ್ನು ನಸುಕಿನಲ್ಲೇ ಬಿಟ್ಟಿತು. ಅರವಿಂದ ಪಿಕ್ ನಿಕ್‌ನ ಮೂಡಿನಲ್ಲಿರಲಿಲ್ಲ. ಒಂದು ಮೂಲೆಯಲ್ಲಿ ಕುಳಿತು ಸಿಗರೇಟು ಸೇದುವುದು ಬೇಕಾಗಿತ್ತು, ಹಿಂದಿನ ಸೀಟಿನಲ್ಲಿ ಕಿಟಿಕಿಯ ಬದಿಯಲ್ಲಿ ಕುಳಿತುಕೊಂಡ. ಬೂದು ಬಣ್ಣದ ಆಕಾಶ, ಬಸ್ಸು ವಿಶಾಲವಾದ ದಖ್ಖಣದ ಪೀಠಭೂಮಿಯಲ್ಲಿ ಪೂರ್ವಕ್ಕೆ ಧಾವಿಸುತ್ತಿತ್ತು. ಬೆಳಗಿನ ಚಳಿಗಾಳಿ ಮುಖಕ್ಕೆ ಬಂದು ಬಡಿಯತೊಡಗಿತು.

ಪಿಕ್ನಿಕ್‌ನ ಮಂದಿ ಅತ್ಯಂತ ಉತ್ಸಾಹದಲ್ಲಿದ್ದರು, ಚಗರೆಗಳಂತೆ ಆಚೀಚೆ ನಲಿದಾಡುವ ಹುಡುಗಿಯರು. ಅವರನ್ನು ನಗಿಸಲೆಂದೇ ಮಾತಾಡುವ ಹುಡುಗರು, ವರ್ತಮಾನದಲ್ಲಿ ತಲ್ಲೀನನಾಗಿ ಎಲ್ಲವನ್ನೂ ಮರೆಯುವ ಸಾರ್ಮಥ್ಯ
ಬೇಕು…

“ಕ್ಷಮಿಸಿ !”

ಅರವಿಂದ ತಲೆಯೆತ್ತಿ ನೋಡಿದ. ನೀಲಿ ಬಣ್ಣದ ಜೀನ್ಸ್, ಬೂದು ಬಣ್ಣದ ಟಾಪ್ ಧರಿಸಿದ ಹೆಂಗಸು. ರಾಣಿ ! ಅವಳು ಸಂಸ್ಥೆಯಲ್ಲಿ ರಿಸರ್ಚ್ ಅಸೋಶಿಯೇಟ್ ಆಗಿ ಕೆಲಸಮಾಡುತ್ತಿದ್ದಳು.

“ಆ ಸೀಟು ನನಗೆ ಕೊಡುತ್ತೀರ? ವಾಂತಿ ಬರೋ ಹೆದರಿಕೆ ನನಗೆ !” ಅರವಿಂದ ಈಚೆಗೆ ಸರಿದ, ರಾಣಿ ಅವನ ಪಕ್ಕದಲ್ಲಿ ಕುಳಿತು ಕೊಂಡಳು. “ಥ್ಯಾಂಕೂ,”
ಅವಳು ಧರಿಸಿದ ಸೆಂಟಿನ ವಾಸನೆ ಮೂಗಿಗೆ ಬಡಿಯಿತು.
“ನಿಮ್ಮ ಏಕಾಂತಕ್ಕೆ ಭಂಗವಾಯಿತೇನೋ.”
“ಖಂಡಿತಾ ಇಲ್ಲ.”
“ಕವಿತ ಬಂದಿಲ್ಲವೇ?”
“ಬಂದಿದ್ದಾಳಲ್ಲ ಮುಂದೆಲ್ಲೋ ಕೂತಿದ್ದಾಳೆ.”
“ನೀವು ನಾಗಾರ್ಜುನ ಸಾಗರಕ್ಕೆ ಹೋಗುತ್ತಿರೋದು ಇದು ಮೊದಲನೇ
ಸಲವೆ?”
“ಹೌದು… ನೀವು?”
“ಮೊದಲೊಮ್ಮೆ ಹೋಗಿದ್ದೇನೆ. ನನಗಾಸ್ಥಳ ತುಂಬಾ ಇಷ್ಟ…. ಚಳಿ ಆಲ್ಲವೆ?”
“ಕಿಟಕಿಯ ಗ್ಲಾಸು ಹಾಕಿಕೊಳ್ಳಿ.”
ಹಾಕಲು ಯತ್ನಿಸಿದಳು, ಅರವಿಂದನೇ ಎದ್ದು ಸಹಾಯ ಮಾಡಿದ. ರಾಣಿ ಅವನ ಕಡೆ ಒತ್ತಿ ಕುಳಿತಳು.
“ಇಟ್ ಈಸ್ ಬೆಟರ್‌ ನೌ” ಎಂದು ಮುಗುಳಕ್ಕಳು.
ಎಲ್ಲೋ ಒಂದೆಡೆ ಕಾಫಿಗೆಂದು ಬಸ್ಸು ನಿಂತಿತು. ಎಲ್ಲರೂ ಇಳಿದರು. ಮಾರ್ಗದ ಬದಿಯಲ್ಲಿ ಎತ್ತರಕ್ಕೆ ಬೆಳೆದ ಹುಳಿ, ಕಹಿಬೇವಿನ ಮರಗಳು, ಅವುಗಳ ಕೆಳಗೆ ಹಾಕಿದ ಜೋಪಡಿಗಳೇ ಹೋಟೆಲುಗಳು, ಒಲೆಗಳಲ್ಲಿ ಕೆಂಪಗೆ ಉರಿಯುತ್ತಿದ್ದ ಕೆಂಡಗಳು, ಒಲೆಯ ಮೇಲಿಟ್ಟ ಅಲ್ಯೂಮಿನಿಯಮ್ ಪಾತ್ರೆಗಳಲ್ಲಿದ್ದ ಹಾಲು ಯಾವಾಗಿನಿಂದಲೋ ಕುದಿಯುತ್ತಿದ್ದಿರಬೇಕು. ಪ್ರವಾಸಿಗಳನ್ನು ಕಂಡ ವ್ಯಾಪಾರಿಗಳು ತಕ್ಷಣ ಚುರುಕಾದರು.
“ಕಾಫಿ?”
ಅರವಿಂದ ರಾಣಿಯನ್ನು ಕೇಳಿದ.
“ಓಕೇ.”
ಬಿಸಿ ಕಾಫಿ ಹಿತವಾಗಿತ್ತು.
ರಾಜಾರಾಮನ ಗುಂಪು-ಅದರಲ್ಲಿ ಕವಿತಳೂ ಸೇರಿಕೊಂಡಿದ್ದಳು ಒಂದೆಡೆ ನಿಂತು ಕಾಫಿಗೆ ಕಾಯುತ್ತಿತ್ತು. ರಾಜಾರಾಮ ಹಲೋ ಎಂದ. ಶಕುಂತಳೆ ಕೈ ಬೀಸಿದಳು. ಕವಿತ ಮಾತ್ರ ಕಣ್ಣೆತ್ತಿಯೂ ನೋಡಲಿಲ್ಲ. ಬಸ್ಸು ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸಿತು.
“ಹೌಸಿಗೇಮ್ ! ಹೌಸಿಗೇಮ್ !” ಯಾರೋ ಎತ್ತರದ ದನಿಯಲ್ಲಿ ಕೂಗಿದರು. ಒಬ್ಬ ಚೇಟಿಗಳನ್ನು ಮಾರುತ್ತ ಬಂದ. ರಾಣಿ ಎರಡನ್ನು ಕೊಂಡಳು. ಅರವಿಂದ ಒಂದನ್ನು ಕೊಂಡ
“ವನ್ ಶ್ರೀ ! ಬೇಕರ್ ಡಜನ್ !”
“ಪ್ಲೀಸ್ ರಿಪೀಟ್ !”
“ವನ್ ತ್ರೀ ! ಥರ್ಟೀನ್!”
“ಓಕೇ.”
“ತ್ರೀ ಸ್ಕೋರ್ ಎಂಡ್ ಟೆನ್ ! ಸೆವೆಂಟಿ !”
“ಹೀಯರ್ !”
“ನಂಬರ್ ಟೆನ್… ಡೌನಿಂಗ್ ಸ್ಟ್ರೀಟ್!”
“ಸಿಕ್ತು !”
“ಟೂ ಫ್ಯಾಟ್ ವಿಮೆನ್! ಯೈಟಿ ಮೈಟ್ !?”
“ಫೀಸ್ ರಿಪೀಟ್!”
“ಹೈಟಿ ಮೈಟ್!”
ತಾರಕ ಸ್ವರದಲ್ಲಿ ಕಿರುಚಿದ. ಡ್ರೈವರ್ ಗಕ್ಕನೆ ಬ್ರೆಕು ಹಾಕಿದ. ಯಾರೋ ಯಾರ ಮೇಲೆಯೋ ಬಿದ್ದು ನಕ್ಕರು. ಮಾರ್ಗಕ್ಕೆ ಅಡ್ಡವಾಗಿ ಒಂದು ಎಮ್ಮೆ ಹಿಂಡು ಹಾದುಹೋಯಿತು. ಡ್ರೈವರ್ ಉರ್ದುವಿನಲ್ಲಿ ಬಯ್ದ,
“ನಾಟಿ ಲವರ್ಸ್ ! ಸಿಕ್ಸ್ಟೀನೈನ್ !”
“ಸೇ ಇಟ್ ಎಗೇನ್ !”
“ಸಿಕ್ಟೀ ನೈನ್ !”
“ಐ ಗಾಟ್ ಇಟ್ !”
ರಾಣಿ ತನ್ನ ನಂಬರನ್ನು ಹೊಡೆದು ಹಾಕಿದಳು.
“ದಿ ಲೋನ್ಲಿ ಮ್ಯಾನ್ ! ನಂಬರ್‌ವನ್ !”
ಸ್ವಲ್ಪ ಸಮಯದ ನಂತರ ಯಾರೋ ಅಂದರು.
“ಐ ಹ್ಯಾವ್ ಎ ಪಿರಮಿಡ್ !”
ಪ್ರೈಜು ಅವನಿಗೆ ಹೋಯಿತು.
“ನೋಡಿದಿರ? ನನಗೆ ಬೇಕಾಗಿದ್ದುದು ಒಂದೇ ಒಂದು ನಂಬರು.” ಎಂದು ಕರುಬಿದಳು ರಾಣಿ ಮತ್ತೆ ಎಷ್ಟೋ ಹೊತ್ತಿನ ಮೇಲೆ ರಾಣಿ ಅವನ ಕಿವಿಯಲ್ಲಿ ಏಳಿ ಎಂದು ಪಿಸುಗುಟ್ಟುತ್ತಿದ್ದಳು. ಅರವಿಂದನಿಗೆ ತಾನು ಅವಳ ಹೆಗಲ ಮೇಲೆ ತಲೆಯಿರಿಸಿ ನಿದ್ದೆ ಮಾಡಿದುದು ಅರಿವಿಗೆ ಬಂದು ನಾಚಿಕೆಯಾಯಿತು. ಕ್ಷಮಿಸಿ ಎಂದ. ರಾಣಿ ಯಾಕೆ ಎಂಬಂತೆ ಅವನ ಕಡೆ ನೋಡಿ ನಕ್ಕಳು. ಬಸ್ಸು ನಾಗಾರ್ಜುನ ಸಾಗರ ತಲುಪಿತ್ತು.

ಅಣೆಕಟ್ಟು ನೋಡಿಕೊಂಡು ಎಲ್ಲರೂ ಲಾಂಜಿನಲ್ಲಿ ಕುಳಿತರು, ಕೃಷ್ಣಾ ನದಿಯ ನಡುಗಡ್ಡೆಯಲ್ಲಿರಿಸಿದ ನಾಗಾರ್ಜುನಕೊಂಡದ ಅವಶೇಷಗಳನ್ನು ನೋಡುವುದಕ್ಕೆ ಎಲ್ಲರಿಗೂ ಉತ್ಸಾಹ, ಕೊಂಡ ಈಗ ನದಿಯ ನೀರಿನಲ್ಲಿ ಸಂಪೂರ್ಣವಾಗಿ ಮುಚ್ಚಿತ್ತು. ಅದನ್ನು ಆವರಿಸಿದ್ದ ಗಿರಿಶಿಖರಗಳು ಮಾತ್ರ ದೂರದಲ್ಲಿ ತಲೆಯೆತ್ತಿ ನಿಂತಿದ್ದುವು. ಡೀಸೆಲ್ ಯಂತ್ರದ ಲಾಂಚು ನೀರನ್ನು ಸೀಳುತ್ತ ಕೆಲವೇ ನಿಮಿಷಗಳಲ್ಲಿ ಅವರನ್ನು ನಡುಗಡ್ಡೆಗೆ ತಂದು ಬಿಟ್ಟಿತು.

ಮ್ಯೂಸಿಯಮ್, ಪುನರ್ನಿಮಿರತ ಸ್ತೂಪಗಳು, ಬಸದಿಗಳು -ಎಲ್ಲವನ್ನೂ ನೋಡಿಕೊಂಡು ಅಲ್ಲೇ ಬುತ್ತಿಯನ್ನು ಬಿಡಿಸಿ ಊಟಮಾಡಿದ್ದೂ ಆಯಿತು. ಕ್ಯಾಂಟೀನಿನಲ್ಲಿ ಚಹಾ ಕಾಫಿ ಕೋಕಕೋಲ ದೊರಕಿತು. ನಂತರ ಉದ್ಯಾನದ ನೆರಳಿನಲ್ಲಿ ವಿಶ್ರಾಂತಿ.

ಅಂಟಿಕೊಂಡೇ ಇದ್ದ ರಾಣಿ ತನ್ನ ಹಿಂದಿನ ಯಾತ್ರೆಯ ನೆನಪು ಮಾಡಿ ಕೊಳ್ಳುತ್ತಿದ್ದಳು. “ಅರವಿಂದ್‌, ಇಂಥ ಸ್ಥಳಗಳಿಗೆ ಯಾವಾಗಲೂ ಗುಂಪಿನಲ್ಲಿ ಬರಲೇಬಾರದು ಅನಿಸುತ್ತದೆ. ಇಬ್ಬರೋ ಮೂವರೂ ಬರಬೇಕು. ಕಳೆದ ಬಾರಿ ಮೂವರು ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆವು-ನಾನು, ನನ್ನ ಕಲೀಗ್ ಒಬ್ಬರು, ಈಗ ಸ್ಟೇಟ್ಸ್‌ನಲ್ಲಿದ್ದಾರೆ ; ಇನ್ನೊಬ್ಬ ಡಚ್ ಪ್ರವಾಸಿ. ಆತ ಇಂಡಿಯನ್ ಹಿಸ್ಟರಿ ಓದಲೆಂದು ಭಾರತಕ್ಕೆ ಬಂದವ. ಈ ಪ್ರದೇಶವನ್ನು ಕಂಡು ಆನಂದದಿಂದ ತಾನೊಬ್ಬ ಬೌದ್ಧ ಭಿಕ್ಷುವಾಗುತ್ತೇನೆ ಎಂದು ಹೇಳುತ್ತಲೇ ಇದ್ದ, ಹಾಗಿದ್ದರೆ ನಿನ್ನ ಹೆಂಡತಿ ಮಕ್ಕಳನ್ನು ಏನು ಮಾಡುತ್ತಿ ಎಂದು ನಾವು ಕೇಳಿದೆವು, ಅವರನ್ನೂ ಕರೆದು ಕೊಂಡು ಬರುತ್ತೇನೆ ಎಂದು ಹೇಳಿದ. ನಾವು ನಕ್ಕುದು ಯಾಕೆಂದು ಅವನಿಗೆ ಅರ್ಥವಾಗಲಿಲ್ಲ !”

ಅರವಿಂದ ಯೋಚಿಸುತ್ತಿದ್ದ :ಹಲವು ನೂರು ವರ್ಷಗಳ ಹಿಂದೆ ಇಲ್ಲೊಂದು ಜನಾಂಗ, ಒಂದು ಸಂಸ್ಕೃತಿ ಇದ್ದುವು. ಇಂದು ಅವುಗಳ ಅವಶೇಷಗಳು ಮಾತ್ರ ಉಳಿದಿವೆ. ಈ ಅವಶೇಷಗಳ ಆಧಾರದ ಮೇಲೆ ಇತಿಹಾಸವನ್ನು ಬರೆಯುತಿದ್ದೇವೆ-ನಮನಮಗೆ ಕಂಡ ಹಾಗೆ, ಶಕುಂತಳೆಯ ಪ್ರಶ್ನೆಗಳು ನೆನಪಾದುವು.

ಕೋಕಾ ಕೋಲಾ ಮಾರುತ್ತಿದ್ದ ಹುಡುಗ ಹೇಳಿದ :
“ನಿಮ್ಮ ಪಾರ್ಟಿಯವರೆಲ್ಲ ಮರಳುತ್ತಿದ್ದಾರೆ.”
“ಲೆಟ್ಟಸ್ ಗೋ,” ಎಂದಳು ರಾಣಿ.
ಎಲ್ಲರೊಂದಿಗೆ ಲಾಂಚಿನಲ್ಲಿ ಕುಳಿತು ಮರಳುತ್ತಿರುವಾಗ ಯಾರೋ ಕೇಳಿದರು : “ಎಲ್ಲರೂ ಬಂದರೇ?” ಕೆಲವರು ಲಾಂಚಿನೊಳಗೆ ಕುಳಿತಿದ್ದರೆ ಇನ್ನು ಕೆಲವರು ಅದರ ಪುಟ್ಟ ಡಿಕ್ಕಿನ ಸರಳುಗಳನ್ನು ಹಿಡಿದು ನದೀ ನೀರನ್ನು ಹಿಂದಕ್ಕೆ ಸರಿಯುತ್ತಿದ್ದ ನಡುಗಡ್ಡೆಯನ್ನು ಸುತ್ತಲಿನ ಪರ್ವತಶ್ರೇಣಿಯನ್ನು ನೋಡುತ್ತ ನಿಂತಿದ್ದರು. ಯಾರೋ ಪೋಟೋ ತೆಗೆಯುತ್ತಿದ್ದರು. ಇನ್ನು ಕೆಲವರು ಕೆಳಗೆ ಮೇಲೆ ಓಡಾಡುತ್ತಿದ್ದರು, ಈಚೆ ದಡ ಬಂದು ಸೇರಿದ ಮೇಲೆಯೇ ಗೊತ್ತಾ ದುದು ಎಲ್ಲರೂ ಬಂದಿಲ್ಲ ಎಂಬುದು. ಯಾರು? ಯಾರೇ ಆಗಿದ್ದರೂ ಇನ್ನರ್ಧ ಗಂಟೆಯಲ್ಲದೆ ನಡುಗಡ್ಡೆಯಿಂದ ಮರಳುವುದು ಸಾಧ್ಯವಿಲ್ಲ.

ಬೋಟ್‌ಜೆಟ್ಟಿಯ ಪಕ್ಕದ ಗುಡ್ಡದ ಮೇಲೆ ಎಲ್ಲರೂ ಕುಳಿತು ಕಾದರು. ಅರ್ಧಗಂಟೆಯ ನಂತರ ಬಂದ ಇನ್ನೊಂದು ಲಾಂಚಿನಿಂದ ರಾಜಾರಾಮ, ಕವಿತ ದೇಶಪಾಂಡೆ ಕೆಳಗಿಳಿದರು.

“ಯಾವ ಮಾಯಕದಲ್ಲಿ ಬಂದಿರಿ ನೀವೆಲ್ಲ? ಸ್ತೂಪಗಳನ್ನ ಇನ್ನೊಮ್ಮೆ ನೋಡಲೆಂದು ರಾಜಾರಾಮ ಮತ್ತು ನಾನು ಹೋಗಿದ್ದೆವು. ದೇವರೆ ! ಈ ಬೋಟು ಸಿಗದಿರುತ್ತಿದ್ದರೆ ನಾವೀ ರಾತ್ರೆ ನಡುಗಡ್ಡೆಯಲ್ಲೇ ಉಳಿಯಬೇಕಾಗುತಿತ್ತು!” ಎಂದಳು ಕವಿತ.

ಯಾರೋ ಪಿಸುಗುಟ್ಟಿದರು. “ಭಾರೀ ಮಜಾ ಇರುತ್ತಿತ್ತು !” ಎಂದು ಮುಂತಾಗಿ. ಇಷ್ಟು ಹೊತ್ತೂ ಲವಲವಿಕೆಯನ್ನು ನಟಿಸುತ್ತ ಕುಳಿತಿದ್ದ ಶಕುಂತಲೆಯ ಮುಖ ಪೆಚ್ಚಾಯಿತು.

ಎಲ್ಲರೂ ಸುಸ್ತಾಗಿದ್ದರು. ಹೊರಟ ಉತ್ಸಾಹ ಬರುವಾಗ ಇರಲಿಲ್ಲ. ಅರವಿಂದ ಅಂದುಕೊಂಡ : ಈ ಮೂವತ್ತು ಮಂದಿ ಈಗ ಮೂವತ್ತು ರೀತಿಗಳಲ್ಲಿ ಚಿಂತಿಸುತ್ತಿರಬೇಕಲ್ಲವೇ ! ಎಂದು.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)