
ತೋಟಕ್ಕೆ ಗಿಡಗಳ ಮಧ್ಯೆ ಬಾಳೆ ಹಾಕಬೇಕು ಅಂದುಕೊಂಡಿದ್ದ ಇಳಾ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು ಅಂತ ಗೊತ್ತಾದ ಮೇಲೆ ಅದನ್ನು ಮಾಡಿಸಿದಳು. ಮಣ್ಣು ಪರೀಕ್ಷೆ ಮಾಡಿಸಿ ಬಾಳೆ ಹಾಕಬಹುದು ಅಂತ ಗೊತ್ತಾದ ಮೇಲೆ ಅಂಗಾಂಶ ಕಸಿ ಪದ್ಧತಿಯಿಂದ ಬಾಳೆ ಬೆಳೆದರೆ ಒಳ್ಳೆ ಇಳುವರಿ ಸಿಗುತ್ತೆ ಅಂತ ಓದಿಕೊಂಡಿದ್ದ ಇಳಾ, ಅದೇ ವಿಧಾನದಲ್ಲಿ ಬಾಳೆ ಬೆಳೆಯಲು ನಿರ್ಧರಿಸಿದಳು. ಅಂಗಾಂಶ ಕಸಿ ಎಂದರೆ ಯಾವುದೇ ಒಂದು ಸಸ್ಯದ ಕಾಂಡ, ಬೇರು ಅಥವಾ ಜೀವಕೋಶಗಳನ್ನು ಬಳಸಿಕೊಂಡು ಪ್ರಯೋಗ ಶಾಲೆಯಲ್ಲಿ ನಿರ್ಜಂತುಕ ಹಾಗು ನಿಯಂತ್ರಿತ ವಾತಾವರಣದಲ್ಲಿ ಅದನ್ನು ಬೆಳೆಸಿ ಅಧಿಕ ಸಂಖ್ಯೆಯಲ್ಲಿ ಸಸಿಗಳನ್ನು ಉತ್ಪಾದಿಸಬಹುದಾಗಿದೆ. ಇದಕ್ಕೆ ಮೈಕ್ರೋಪೋಗಾನ್ ಎಂದು ಕರೆಯುತ್ತಾರೆ. ಒಂದು ಕೊಠಡಿಯನ್ನು ಪ್ರಯೋಗ ಶಾಲೆಗಾಗಿ ಮೀಸಲಿಟ್ಟುಕೊಂಡ ಇಳಾ, ತಾಯಿ ಬಾಳೆ ಗಿಡದ ಜೀವಕೋಶದಿಂದ ತೆಗೆದ ಬೇರು, ಕಾಂಡವನ್ನು ತೆಗೆದುಕೊಂಡು ಅದನ್ನು ನಿರ್ಜಂತುಕರಣಗೊಳಿಸಿ ಜಂತುರಹಿತವಾಗಿ ತಯಾರಿಸಿದ ಗಾಜಿನ ಸೀಸೆಗಳಲ್ಲಿ ಇಟ್ಟು ೪೦ ದಿನಗಳ ನಂತರ ಸೀಸೆಯಲ್ಲಿಟ್ಟಿದ್ದ ಕಾಂಡವು ಚಿಕ್ಕ ಚಿಕ್ಕ ಚಿಗುರುಗಳಿಂದ ಸಸಿಗಳಾಗಿ ಮಾರ್ಪಟ್ಟು, ಸಸಿಗಳ ಗುಚ್ಛವೇ ಸೃಷ್ಟಿಯಾಗಿತ್ತು. ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇಳಾಗೆ ಈ ಪ್ರಯೋಗ ತುಂಬ ಖುಷಿ ನೀಡತೊಡಗಿತ್ತು. ಹೀಗೆ ಬೆಳೆದ ಸಸ್ಯಯದ ಗುಚ್ಛದಿಂದ ೨೧ ದಿನಗಳಿಗೊಮ್ಮೆ ಸಸಿಗಳನ್ನು ಪ್ರತ್ಯೇಕಗೊಳಿಸಬೇಕು. ಈ ವಿಧಾನವನ್ನು ಎಂಟು ಸ್ಯೆಕಲ್ಗಳ ಅಂದರೆ ೨೧ ದಿನದ ಎಂಟು ಸೈಕಲ್ಗಳ ಕಾಲ ಮಾಡಿ ಬೇರೆ ಗಾಜಿನ ಸೀಸೆಯಲ್ಲಿ ನೆಡಬೇಕಾಗುತ್ತದೆ- ಗಾಜಿನ ಸೀಸೆಯಲ್ಲಿಟ್ಟ ಒಂದು ಸಸಿ ಬೆಳೆದು ಹೊರಗೆ ಬರಬೇಕಾದರೆ ೧೬೮ ದಿನಗಳಿಂದ ೧೯೦ ದಿನಗಳ ಕಾಲಾವಧಿ ಹಿಡಿಯುತ್ತದೆ. ಬಾಟಲಿಯಿಂದ ಹೊರ ತೆಗೆದ ಸಸಿಗಳನ್ನು ಹೊರಗಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಬೇಕೆಂಬ ದೃಷ್ಟಿಯಿಂದ ೨೧ ದಿನಗಳ ಕಾಲ ಟನಲ್ ಹಾಗು ೭೧ ದಿನಗಳ ಕಾಲ ಮಣ್ಣಿನ ಪ್ಲಾಸ್ಟಿಕ್ ಚೀಲಗಳಲ್ಲಿ ಬೆಳೆಸಲಾಗುತ್ತದೆ. ಬಳಿಕ ಇವುಗಳನ್ನು ಅಂಗಾಂಶ ಕೃಷಿ ಪದ್ಧತಿಯ ಗಿಡಗಳೆಂದು ದೃಡೀಕರಿಸಿ ತೋಟಗಳಲ್ಲಿ ಹಾಗೂ ಗದ್ದೆಗಳಲ್ಲಿ ಬೆಳೆಯಬಹುದು.
ಈ ಬಾರಿ ಎರಡು ಎಕರೆ ಗದ್ದೆಗೂ ಬಾಳೆ ನೆಟ್ಟು ತನ್ನ ಹೊಸ ಪ್ರಯೋಗ ಹೇಗೆ ಫಲ ಕೊಡಬಹುದು ಎಂದು ಪರೀಕ್ಷೆ ನಡೆಸಿದಳು. ಗಿಡಗಳು ಹುಲುಸಾಗಿ ಬೆಳೆಯುತ್ತಿವೆ, ಗಿಡಗಳಿಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಕುರಿ ಗೊಬ್ಬರವನ್ನು ತರಿಸಿ ಹಾಕಿಸಿದಳು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ರೋಗಗಳು ಭಾದಿಸದಂತೆ ಜಾಗ್ರತೆವಹಿಸಿದ್ದಾಳೆ. ತಾನು ಕಂಡು ಬಂದಿದ್ದ ಕೇಳಿದ್ದ ಎಲ್ಲಾ ವಿಧಾನಗಳಿಂದಲೂ ತೋಟದ ಆರೈಕೆ ಮಾಡುತ್ತಿದ್ದಾಳೆ. ಬರೀ ತೋಟ, ಮನೆ ಅಂತಾ ಇಳಾ ಕೆಲಸದಲ್ಲಿ ಮುಳುಗಿಹೋಗಿದ್ದಾಳೆ. ಬೆಳಗಾದೊಡನೆ ತೋಟಕ್ಕೆ ಹೊರಟುಬಿಡುತ್ತಾಳೆ. ಈಗ ತೋಟದ ಎಲ್ಲಾ ಕೆಲಸಗಳ ಪರಿಚಯವಾಗಿಬಿಟ್ಟಿದೆ. ಗೊತ್ತಿಲ್ಲದೆ ಇದ್ದುದ್ದನ್ನು ಆಳುಗಳಿಂದಲೇ ಕೇಳಿ ತಿಳಿದುಕೊಂಡಿದ್ದಾಳೆ. ದೊಡ್ಡಪ್ಪನಲ್ಲಿಯೂ ಕೇಳುತ್ತಾಳೆ. ಕೃಷಿ ಬಗ್ಗೆ ಇರುವ ಪುಸ್ತಕ ಓದಿ ಸಾಕಷ್ಟು ವಿಚಾರ ತಿಳಿದುಕೊಂಡಿದ್ದಾಳೆ. ರೇಡಿಯೊದಲ್ಲಿ ಬರುವ ಕೃಷಿರಂಗ ಕಾರ್ಯಕ್ರಮವನ್ನು ತಪ್ಪದೆ ಕೇಳಿಸಿಕೊಳ್ಳುತ್ತಾಳೆ. ಒಟ್ಟಿನಲ್ಲಿ ಈಗ ತೋಟ ಮಾಡಿಸುವುದು, ತೋಟದ ಬಗ್ಗೆ ತಿಳಿದುಕೊಳ್ಳುವುದು ಎಂದರೆ ಎಲ್ಲಿಲ್ಲದ ಆಸಕ್ತಿ.
ಹೇಗೋ ಇರಬೇಕಾದ ಮಗಳು ಹೇಗೋ ಇರುವುದು ನೀಲಾಳ ಹೊಟ್ಟೆಯಲ್ಲಿ ಸಂಕಟದ ಕಿಚ್ಚು ಏಳುವಂತೆ ಮಾಡುತ್ತದೆ. ಅದಕ್ಕೆ ಕಾರಣನಾದ ಮೋಹನನ ಬಗ್ಗೆ ಅತೀವ ಕೋಪ ಬರುವುದುಂಟು. ಆಗೆಲ್ಲ ಮನಸ್ಸಿನ ಶಾಂತಿ ಕಳೆದುಕೊಂಡು ಇಡೀ ರಾತ್ರಿ ನಿದ್ರೆ ಇಲ್ಲದೆ ತೊಳಲಾಡುತ್ತಾಳೆ. ಮಗಳು ಈ ರೀತಿ ತೋಟ ಸುತ್ತುತ್ತಿದ್ದರೆ ಅದನ್ನು ನೋಡಲಾರದೆ ತನ್ನ ಶಾಲಾ ಕೆಲಸದಲ್ಲಿ ಮುಳುಗಿ ಹೋಗಿಬಿಡುತ್ತಾಳೆ. ತನ್ನೆಲ್ಲ ಚಿಂತೆ, ಯೋಚನೆಗಳು, ನೋವು, ಸಂಕಟಗಳನ್ನೆಲ್ಲ ಶಾಲೆಯಲ್ಲಿನ ಕೆಲಸದಲ್ಲಿ ಮರೆಯಲು ಪ್ರಯತ್ನಿಸುತ್ತಿದ್ದಾಳೆ. ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ಯಲು ಶಾಲೆಯ ಶಿಕ್ಷಕರೆಲ್ಲ ಕುಳಿತು ಚರ್ಚಿಸಿದರು. ಸಣ್ಣ ಮಕ್ಕಳಾದ್ದರಿಂದ ಜಿಲ್ಲೆಯೊಳಗೆ ಕರೆದೊಯ್ಯಲು ತೀರ್ಮಾನಿಸಿದರು.
ಬರೀ ಕೆಲಸದಲ್ಲಿ ಮುಳುಗಿಹೋಗಿರುವ ಇಳಾಳನ್ನು ಶಾಲಾ ಪ್ರವಾಸದ ಜೊತೆ ಬರಲು ಬಲವಂತಿಸಿದಳು. ಮೋಹನ ಸತ್ತಾಗಿನಿಂದಲೂ ಯಾವ ಉಲ್ಲಾಸವೂ ಇಲ್ಲದೆ ಕಳೆಯುತ್ತಿದ್ದ ಇಳಾಳನ್ನು ಪ್ರವಾಸಕ್ಕೆ ಕರೆದೊಯ್ದು ಮಕ್ಕಳ ಜೊತೆ ಎರಡು ದಿನ ನಲಿದಾಡಿಕೊಂಡಿರಲಿ. ಗಂಗಾ ಕೂಡ ಜೊತೆಯಲ್ಲಿ ಇರುವುದರಿಂದ ಒಳ್ಳೆ ಕಂಪನಿ ಸಿಗುತ್ತದೆ ಎಂದು ಇಳಾಳನ್ನು ಹೊರಡಿಸಿದಳು. ಸಾಕಷ್ಟು ಕೆಲಸವಿದ್ದು ಪ್ರವಾಸ ಎಂದು ಕಾಲ ತಳ್ಳಲು ಮನಸ್ಸಿರದ ಇಳಾ, ನೀಲಾಳನ್ನು ನೋಯಿಸಲಾರದೆ ಬರಲು ಒಪ್ಪಿದಳು. ಇಳಾಗೆ ಸದಾ ತೋಟದ್ದೇ ಧ್ಯಾನ. ಎರೆಹುಳು ತಂದು ತೋಟದಲ್ಲಿ ಬಿಟ್ಟಿದ್ದಳು. ಬಾಳೆ ಸಸಿಯ ಪ್ರಯೋಗ ಬೇರೆ ಮಾಡುತ್ತಿದ್ದಳು. ಇನ್ನು ದನಗಳ ಮೇಲ್ವಿಚಾರಣೆ ಹಾಲು ಮಾರಾಟ… ಹೀಗೆ ಒಂದು ಗಳಿಗೆಯೂ ಅವಳಿಗೆ ಬಿಡುವಿಲ್ಲ. ಇನ್ನು ರೈತರ ಸಮಸ್ಯೆ- ಪರಿಹಾರದ ಸಂಘಟನೆಗೆ ಬೇರೆ ಸೇರಿಕೊಂಡಿದ್ದಳು. ಅವಳ ತಂಡ ಗ್ರಾಮವೊಂದರಲ್ಲಿ ಕಾರ್ಯಕ್ರಮ ನೀಡಬೇಕಿತ್ತು. ಈ ಬಾರಿ ತಾನೂ ಮಾತನಾಡುವ ಉತ್ಸಾಹ ತೋರಿದ್ದಳು. ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಊರಿನಲ್ಲಿಯೇ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದಕ್ಕೆ ತಯಾರಿ ಮಾಡಿಕೊಳ್ಳಬೇಕಿತ್ತು. ಆದರೆ ನೀಲಾಳಿಗೆ ಅದ್ಯಾವುದೂ ಅರ್ಥವಾಗುವಂತಿರಲಿಲ್ಲ. ತಾನು ಶಾಲೆಯ ಕೆಲಸಕ್ಕೆ ಸೇರಿಕೊಂಡು ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಿರುವಂತೆ ಇಳಾ ಕೂಡ ತೋಟದ ಕೆಲಸ ಮಾಡುತ್ತ ತನಗಾದ ಸಂಕಟವನ್ನು ಮರೆಯುತ್ತಿದ್ದಾಳೆ ಎಂದೇ ಭಾವಿಸಿ ಪ್ರವಾಸಕ್ಕೆ ಕರೆದೊಯ್ಯಲು ತೀರ್ಮಾನಿಸಿದ್ದಳು. ಅವಳ ವಯಸ್ಸಿನ ಹೆಣ್ಣುಮಕ್ಕಳು ನಲಿದಾಡಿಕೊಂಡು ಸ್ನೇಹಿತರ ಮಧ್ಯೆ ಇರುತ್ತಾರೆ. ಒಂದೆರಡು ದಿನಗಳಾದರೂ ಹಾಗಿರಲಿ ಎಂದೇ ಅವಳ ತಾಯಿ ಹೃದಯ ಹಾರೈಸಿತ್ತು.
ಶಾಲೆಯಲ್ಲಿ ಒಟ್ಟು ನಲವತ್ತೊಂಬತ್ತು ಮಕ್ಕಳಿದ್ದರು. ಎಲ್ಲಾ ಮಕ್ಕಳನ್ನು ಕರೆದೊಯ್ಯುವುದೆಂದು ತೀರ್ಮಾನಿಸಿದರು- ಪ್ರವಾಸದ ದುಡ್ಡನ್ನು ಪೋಷಕರು ಸಂತೋಷದಿಂದಲೇ ಪಾವತಿಸಿದರು. ಸಾಲದೆ ಇದ್ದರೆ ತಾನು ಉಳಿದಿದ್ದನ್ನು ಕೊಡುವುದಾಗಿ ವಿಸ್ಮಯ್ ತಿಳಿಸಿದನು. ವಿನ್ಮಯನನ್ನು ಪ್ರವಾಸಕ್ಕೆ ಬರಲು ಒತ್ತಾಯಿಸಿದರು. ಸಕಲೇಶಪುರಕ್ಕೆ ಬಂದು ವರ್ಷವಾಗುತ್ತ ಬಂದಿದ್ದರೂ ವಿಸ್ಮಯ್ ಹಾಸನದ ಯಾವ ಸ್ಥಳಗಳನ್ನೂ ನೋಡಿರಲಿಲ್ಲ. ವಿಶ್ವಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮುಂತಾದ ನೋಡಲೇಬೇಕಾದ ಪ್ರವಾಸಿ ತಾಣಗಳಿಗೆ ಹೋಗುತ್ತಿರುವುದರಿಂದ ವಿಸ್ಮಯ್ ಬರಲೇಬೇಕೆಂದು ಜೋಸೆಫ್ ಕೇಳಿಕೊಂಡರು. ಅವರ ಬಲವಂತಕ್ಕೆ ವಿಸ್ಮಯ ಒಪ್ಪಿಕೊಂಡನು. ರೆಸಾರ್ಟ್ ಕೆಲಸಗಳನ್ನು ವಿನಾಯಕ ತಾನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ.
ಬಸ್ಸಿನ ಒಳಗೆ ಬಂದ ಇಳಾ ವಿಸ್ಮಯಯನನ್ನು ನೋಡಿ ಅಚ್ಚರಿಗೊಂಡಳು. ’ಅರೇ ವಿಸ್ಮಯ್… ಟೂರ್‌ಗೆ ಬರ್ತಾ ಇದ್ದೀರಾ!…’ ಅವರಂತಹ ಶ್ರೀಮಂತ, ತನ್ನ ಕೆಲಸಗಳಲ್ಲಿಯೇ ಸದಾ ಮುಳುಗಿಹೋಗಿ ಪ್ರಪಂಚವನ್ನೇ ಮರೆಯುತ್ತಿದ್ದ ವಿಸ್ಮಯ್ ಎರಡು ದಿನ ಬಿಡುವು ಮಾಡಿಕೊಂಡು ಮಕ್ಕಳ ಜೊತೆ, ತಾನು ಸಂಬಳ ನೀಡುತ್ತಿರುವ ತನ್ನ ಕೈಕೆಳಗಿನ ಕೆಲಸದವರೊಂದಿಗೆ ಪ್ರವಾಸಕ್ಕೆ ಬರುವುದೆಂದರೆ, ಆಶ್ಚರ್ಯದ ಜೊತೆ ಕೊಂಚ ಮುಜುಗರ ಎನಿಸಿತು. ವಿಸ್ಮಯ್ ಬರ್ತಾರೆ ಅಂದರೆ ತಾನು ಬರುವುದನ್ನು ಕ್ಯಾನ್ಸಲ್ ಮಾಡಬಹುದಿತ್ತು. ಈ ಅಮ್ಮ ಏನೂ ಹೇಳಲೇ ಇಲ್ಲವಲ್ಲ. ಏನೇ ಆಗಲಿ ಅವರೆಲ್ಲರ ಬಾಸ್ ವಿಸ್ಮಯ್, ತಗ್ಗಿ ಬಗ್ಗೆ ನಡೆಯುತ್ತಾರೆ. ಆದರೆ ತಾನು ಹೇಗೆ ಅವನೊಂದಿಗೆ ವರ್ತಿಸಬೇಕು. ತನಗೇನು ಆತ ಯಜಮಾನ ಅಲ್ಲ. ತಾನವನ ಕೈಕೆಳಗಿನ ಕೆಲಸದವಳೂ ಅಲ್ಲ, ಚೆನ್ನಾಗಿಯೇ ಪರಿಚಿತನಾಗಿದ್ದರೂ, ಹೀಗೆ ಒಟ್ಟಿಗೆ ಇರುವ ಅವಕಾಶ ಬಂದಿರಲಿಲ್ಲ. ಹಾಗಾಗಿ ಇಳಾಳಿಗೆ ಇರುಸು ಮುರುಸು ಆಗಿದ್ದಂತೂ ಖಂಡಿತಾ.
ಇಳಾಳನ್ನು ನೋಡಿ ವಿಸ್ಮಯ್‌ಗೆ ಕೂಡ ಆಶ್ಚರ್ಯವಾಗಿತ್ತು. ‘ಅರೆ ಇಳಾ ನೀವೂ ಇದ್ದೀರಾ, ವೆರಿಗುಡ್, ನಿಮ್ಮಂತಹವರು ಬಸ್ಸಿನಲ್ಲಿದ್ರೆ ಬಸ್ಸಿಗೆ ಒಂದು ರೀತಿ ಕಳೆ ಬಂದುಬಿಡುತ್ತೆ. ನಿಮ್ಮನ್ನು ನೋಡಿ ತುಂಬಾ ಖುಷಿಯಾಗ್ತಾ ಇದೆ’ ನೇರವಾಗಿಯೇ ತನಗಾದ ಸಂತೋಷವನ್ನು ಹೇಳಿಬಿಟ್ಟ.
ಅಯ್ಯೋ, ನಾನು ನೋಡಿದ್ರೆ ಇವನು ಯಾಕಪ್ಪ ಬಂದಿದಾನೆ ಅಂತ ಅಂದುಕೊಂಡ್ರೆ, ಇವನೇನು ನನ್ನ ನೋಡಿ ಖುಷಿಪಡ್ತ ಇದ್ದಾನಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡು ಅವನತ್ತ ಒಂದು ನಗೆ ಬೀರಿ ಹಿಂದೆ ಹೋಗಿ ಕುಳಿತಳು.
ಮಕ್ಕಳೆಲ್ಲ ಬಸ್ಸಿಗೆ ಹತ್ತಿಕೊಂಡರು. ಕಳಿಸಿಕೊಡಲು ಮಕ್ಕಳ ಹೆತ್ತವರು ಬಂದಿದ್ದು, ಸಂಭ್ರಮದಿಂದ ತಮ್ಮ ಮಕ್ಕಳಿಗೆ- ‘ಟೀಚರ್ ಕೇಳಿದ ಹಾಗೆ ಕೇಳಬೇಕು. ಅವರನ್ನು ಬಿಟ್ಟು ಎಲ್ಲೂ ಹೋಗಬಾರದು’ ಅಂತ ಎಚ್ಚರಿಕೆ ನೀಡುತ್ತಿದ್ದರು. ಕೊಂಚ ಆತಂಕ ಹೊಂದಿದ್ದ ಪೋಷಕರು ‘ನಮ್ಮ ಮಗು ಸ್ವಲ್ಪ ತುಂಟ, ಅವನ ಮೇಲೆ ಸದಾ ಒಂದು ಕಣ್ಣು ಇಟ್ಟಿರಿ. ಜೋಪಾನ’ ಅಂತ ಶಿಕ್ಷಕರನ್ನು ಕೇಳಿಕೊಳ್ಳುತ್ತಿದ್ದರು. ‘ನೀವೇನು ಹೆದರಿಕೊಳ್ಳಬೇಡಿ, ಎಲ್ಲರನ್ನು ಜೋಪಾನವಾಗಿ ಕರ್ಕೊಂಡು ಬರ್ತೀವಿ’ ಅಂತ ಭರವಸೆ ನೀಡಿದರು. ಬಸ್ಸು ಹೊರಟಿತು. ಅವರವರ ಮಕ್ಕಳಿಗೆ ಕೈ ಬೀಸಿ ಶುಭ ಕೋರಿದರು.
ಮೊದಲು ಸಕಲೇಶಪುರದ ಮಂಜರಾಬಾದ್ ಕೋಟೆಗೆ ಭೇಟಿ ನೀಡಿದರು. ಇಳಾ ಇಷ್ಟು ವರ್ಷ ಸಕಲೇಶಪುರದಲ್ಲಿದ್ದರೂ ಕೋಟೆ ನೋಡಿರಲಿಲ್ಲ. ಒಂದೆರಡು ಸಾರಿ ಅಲ್ಲಿಗೆ ಹೋಗೋಣ ಎಂದುಕೊಂಡಿದ್ದರೂ, ಕಡಿಮೆ ಜನ ಅಲ್ಲಿ ಹೋಗೋದು ಅಪಾಯ ಎಂಬ ಕಾರಣಕ್ಕೆ ಹೋಗಲಾಗಿರಲೇ ಇಲ್ಲ. ಭೂಮಟ್ಟದಿಂದ ೩೩೯೩ ಅಡಿ ಎತ್ತರದಲ್ಲಿರುವ ಆಡಾಣಿ ಗುಡ್ಡದ ಮೇಲೆ ಟಿಪ್ಪು ಕೋಟೆಯನ್ನು ನಿರ್ಮಿಸಿದ್ದ. ಸುಮಾರು ೨೫೨ ಮೆಟ್ಟಿಲುಗಳಿದ್ದವು.
ಮಕ್ಕಳೆಲ್ಲ ಖುಷಿಯಾಗಿ ಹಾರಾಡುತ್ತ ಪುಟ ಪುಟವೇ ಮೆಟ್ಟಿಲು ಹತ್ತುತ್ತಿದ್ದವು. ದೊಡ್ಡವರಿಗೆ ಹತ್ತಲು ಶ್ರಮ ಎನಿಸಿತ್ತು. ನೀಲಾ, ಇಳಾ ಕಷ್ಟದಿಂದ ಒಂದೊಂದೇ ಮೆಟ್ಟಿಲು ಹತ್ತುತ್ತಿದ್ದರೆ, ವಿಸ್ಮಯ್ ಅವರನ್ನು ನೋಡಿ ‘ಅರೆ… ಅಮ್ಮ, ಮಗಳಿಬ್ಬರಿಗೂ ಡೋಲಿ ತರಿಸಬೇಕಾಗಿತ್ತು. ಏನಪ್ಪ ಮಾಡೋಣ, ಪೂರ್ತಿ ಹತ್ತುತಾರೋ ಇಲ್ಲವೊ’ ಅಂತ ಛೇಡಿಸಿದ.
ಅವನ ಮಾತು ಅಪಮಾನ ಅನಿಸಿ ‘ನಾವು ಮಲೆನಾಡಿನವರು ದಿನಾ ಇಂತಹ ಗುಡ್ಡ ಹತ್ತಿ ಇಳಿಯೋರು, ನಮಗೇನು ಕಷ್ಟ ಇಲ್ಲ ಹತ್ತೋಕೆ’ ಅಂತ ಉತ್ತರಿಸಿ ಸರಸರನೇ ಹತ್ತೋಕೆ ಶುರು ಮಾಡಿದಳು. ಅವಳ ಸಿಡುಕು ಕಂಡು ನಗುತ್ತ- ’ನಿಧಾನ, ನಿಧಾನ, ಬಿದ್ರೆ ನಾನಂತೂ ಹಿಡ್ಕೊಳ್ಳೋದಿಲ್ಲ. ಇದೇ ಮೊದಲ ಸ್ಥಳ. ಇನ್ನು ಇದೆ ನೋಡೋ ಪ್ಲೇಸ್‌ಗಳು’ ರೇಗಿಸುತ್ತಲೇ ಅವಳ ಹಿಂದೆ ತಾನು ಮೆಟ್ಟಿಲೇರತೊಡಗಿದ.
ಅವನ ಮೇಲಿನ ಹಠಕ್ಕೆ ಕೋಟೆ ಮೇಲೆ ಹತ್ತಿ ಬಂದವಳಿಗೆ ಸುಸ್ತಾದಂತಾಗಿ ಹುಲ್ಲಿನ ಮೇಲೆ ಕುಳಿತುಬಿಟ್ಟಳು. ಗಂಟಲೊಣಗಿ ನೀರು ಬೇಕೆನಿಸಿತು. ನೀರಿನ ಬಾಟಲು ನೀಲಾಳ ಬಳಿ ಇತ್ತು. ಇಳಾ ಕುಳಿತಿದ್ದನ್ನು ನೋಡಿ ವಿಸ್ಮಯ್ ಕೂಡ ಅವಳ ಪಕ್ಕ ಕೂರುತ್ತ – ‘ಎಷ್ಟು ಚೆನ್ನಾಗಿದೆ ಈ ಕೋಟೆ. ನಕ್ಷತ್ರದ ಆಕಾರದಲ್ಲಿದೆ- ಆ ಬಾಗಿಲುಗಳು ನೋಡಿ ಅದೆಷ್ಟು ಸುಂದರವಾಗಿದೆ. ಈ ತಣ್ಣನೆ ಗಾಳಿ, ಹುಲ್ಲುಹಾಸು ನೋಡ್ತಾ ಇದ್ರೆ ಇಲ್ಲೇ ಇದ್ದು ಬಿಡೋಣ ಅನಿಸ್ತಾ ಇದೆ’ ಎಂದು ಹೇಳಿದ.
ಅಷ್ಟರಲ್ಲಾಗಲೇ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಇಳಾ ಕೂಡ ಮನಸೋತಿದ್ದಳು.
‘ಬನ್ನಿ ಮಕ್ಕಳೆಲ್ಲ ಮೇಲೆ ಹತ್ತಿದ್ದಾರೆ. ನಾವು ಹತ್ತೋಣ’ ಎಂದು ಎದ್ದಳು.
ಕೋಟೆಯ ಹಿಂಬದಿಯಲ್ಲಿ ದೊಡ್ಡ ಕಂದಕ ಕಾಣಿಸಿತು. ಕೋಟೆಯ ರಕ್ಷಣೆಗಾಗಿ ಸುತ್ತ ಇರುವ ಕಂದಕದಲ್ಲಿ ನೀರು ಬಿಟ್ಟು ಮೊಸಳೆ ಸಾಕುತ್ತಿದ್ದರು. ಯಾವ ವೈರಿಯೂ ಅಲ್ಲಿ ಹತ್ತಿ ಬರದಂತೆ ಮೊಸಳೆಗಳು ಕಾಯುತ್ತಿದ್ದವು ಎಂದು ಅಲ್ಲಿ ಬಂದಿದ್ದ ಯಾರೋ ಮಾತಾಡಿಕೊಳ್ಳುತ್ತಿದ್ದರು. ನಾಲ್ಕು ಕಡೆಯಲ್ಲೂ ಗೋಪುರದಂತೆ ಪುಟ್ಟ ಕೋಣೆಗಳಿದ್ದವು. ಅಲ್ಲಿ ಹೋಗಿ ನೋಡಿದರೆ ಸುತ್ತಲ ಪ್ರದೇಶ ಮನಮೋಹಕವಾಗಿ ಕಾಣಿಸುತ್ತಿತ್ತು. ಚೌಕಾಕಾರವಾಗಿ ಕಾಣುವ ರಹಸ್ಯ ಕೋಣೆ, ಮದ್ದಿನ ಕೋಣೆ, ಅಸ್ತ್ರಗಳನ್ನು ಸಂಗ್ರಹಿಸುತ್ತಿದ್ದ ಕೋಣೆ ಕಾಣಿಸಿತು.
ಕೋಟೆಯ ಮಧ್ಯ ಬಿಂದುವಿನಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಮೆಟ್ಟಿಲಿರುವ ಕೊಳ ಇತ್ತು. ಕುದುರೆಗಳನ್ನು ಕಟ್ಟುವ ಲಾಯ ಇತ್ತು.
‘ರೀ ಇಳಾ. ಈ ಕೋಟೆ ಕೊಡ್ತಾರಾ ಕೇಳಿ, ಇಲ್ಲಿ ಒಂದು ಫೈವ್‌ಸ್ಟಾರ್ ಹೋಟೆಲ್ ಕಟ್ಟಿಸಿಬಿಡ್ತೀನಿ. ನಾನೂ ಇಲ್ಲೇ ಒಂದು ಅರಮನೆ ಕಟ್ಟಿಕೊಂಡು ಇದ್ದುಬಿಡೋಣ ಅನಿಸ್ತಾ ಇದೆ. ರಾಜನಂತೆ ಇರಬಹುದು ಇಲ್ಲಿ’ ಎಂದ.
‘ಆದ್ರೆ ಯಾವ ರಾಣೀನೂ ಇಲ್ಲಿ ಇರೋಕೆ ಒಪ್ಪೊಲ್ಲ ಬಿಡಿ. ಪಾಪ ರಾಜ ಮಾತ್ರ ಇರಬೇಕಾಗುತ್ತೆ’ ಇಳಾ ಪ್ರತಿಯಾಗಿ ನುಡಿದಳು.
‘ಹೌದಾ, ಹಾಗಾದ್ರೆ ಬೇಡಾ ಬಿಡಿ, ರಾಣಿ ಇಲ್ಲದ ಮೇಲೆ ರಾಜ ಒಬ್ಬನೇ ಇರೋಕೆ ಆಗುತ್ತಾ’ ಅವಳಿಗೆ ಸರಿಸಮನಾಗಿ ಉತ್ತರಿಸಿ ಗಂಭೀರವಾದ ವಿಷಯವನ್ನೇನೋ ತೀರ್ಮಾನ ಮಾಡಿದಂತೆ ನುಡಿದಾಗ ಇಳಾಗೆ ನಗು ತಡೆಯಲಾಗಲಿಲ್ಲ.
ಸ್ವಚ್ಛಂದವಾಗಿ ನಗುತ್ತಿದ್ದವಳನ್ನ ಬೆರಗಿನಿಂದ ನೋಡಿದ ವಿಸ್ಮಯ್. ಅದೆಷ್ಟು ಸುಂದರವಾಗಿ ನಗುತ್ತಾಳೆ ಎಂದು ಮೊಟ್ಟ ಮೊದಲನೆಯ ಬಾರಿಗೆ ಅನ್ನಿಸಿತು. ಇಳಾ ನಗುತ್ತಲೇ ಅವನೆಡೆ ನೋಡಿದಳು. ಅಂತೂ ರಾಣಿ ಇಲ್ಲದೆ ಇಲ್ಲಿ ಅರಮನೆ ಕಟ್ಟಿಸೊಲ್ಲ ಬಿಡಿ, ಗ್ರೇಟ್ ಲಾಸ್ ನಮ್ಮ ಜನರಿಗೆ. ಮ್ಮೆಸೂರಿನ ಅರಮನೆಯಂತೆ ಇಲ್ಲೊಂದು ಆರಮನೆ ಆಗಿದ್ದಿದ್ರೆ ಕೋಟೆ ಜೊತೆ ಅರಮನೆಯನ್ನೂ ನೋಡಿ ಜನ ಸಂತೋಷಪಡ್ತಾ ಇದ್ರು. ಹೋಗ್ಲಿ ಬಿಡಿ ಆ ಅದೃಷ್ಟ ಇಲ್ಲ ನಮಗೆ. ಎಲ್ಲಾ ಕೆಳಗೆ ಇಳಿಯುತ್ತಿದ್ದಾರೆ ಹೋಗೋಣ’ ಮೆಟ್ಟಿಲು ಇಳಿಯಲು ಪ್ರಾರಂಭಿಸಿದಳು. ಇಳಿಯುವಾಗ ಮುಗ್ಗರಿಸಿದಂತಾಗಿ ಪಕ್ಕದಲ್ಲಿ ಇಳಿಯುತ್ತಿದ್ದ ವಿಸ್ಮಯನನ್ನು ಗಟ್ಟಿಯಾಗಿ ಹಿಡಿದುಕೊಂಡಳು.
‘ಜೋಪಾನ, ಮೆಲ್ಲಗೆ ಇಳಿಯಿರಿ’ ಕಿವಿಯ ಬಳಿ ವಿಸ್ಮಯ್ ಉಸುರಿದ. ಅವನ ಧ್ವನಿಯಿಂದ ಕಿವಿ ಬೆಚ್ಚಗಾದಂತಾಗಿ ತಟ್ಟನೆ ಅವನ ಕೈ ಬಿಟ್ಟು ಸರಸರನೇ ಇಳಿದು ಮಕ್ಕಳನ್ನು ಸೇರಿಕೊಂಡಳು. ಅವಳು ಇಳಿಯುತ್ತಿರುವುದನ್ನೇ ಸೋಡುತ್ತ ವಿಸ್ಮಯ್ ಒಂದೊಂದೇ ಮೆಟ್ಟಿಲು ಇಳಿಯುತ್ತ ಯಾವುದೋ ಹೊಸ ಲೋಕದಲ್ಲಿ ತೇಲಿ ಹೋಗುತ್ತಿರುವಂತೆ ಭಾಸವಾಗಿ ಏನಿದು ಹೊಸತನ ಎಂದು ತಲೆ ಕೊಡವಿಕೊಂಡ. ಇಳಾ ಬಗ್ಗೆ ಅದೇನೋ ಭಾವ ಅವನಲ್ಲಿ ಮೊಳಕೆಯೊಡೆಯಿತು.
ಕೋಟೆ ನೋಡಿಕೊಂಡು ಕೊಣನೂರು ತೂಗು ಸೇತುವೆ ತಲುಪಿದರು. ಕರ್ನಾಟಕದ ಅತಿ ಉದ್ದದ ಎರಡನೇ ತೂಗುಸೇತುವೆ ಇದು. ಸುಮಾರು ೧ ಕಿಲೋಮೀಟರ್ ಉದ್ದವಿದೆ. ಕಾವೇರಿ ನದಿಗೆ ಅಡ್ಡಲಾಗಿ ಈ ಸೇತುವೆ ಕಟ್ಟಲಾಗಿದೆ. ಅಲ್ಲಿಯೇ ಸಮೀಪ ದೇವಸ್ಥಾನದ ಬಳಿ ಮಕ್ಕಳೆಲ್ಲರಿಗೂ ಕಟ್ಟಿಕೊಂಡು ಹೋಗಿದ್ದ ಪಲಾವ್, ಮೊಸರನ್ನವನ್ನು ಹಂಚಿದರು. ಮಕ್ಕಳು ಊಟ ಮಾಡಿ ನದಿಯ ನೀರಿನೊಂದಿಗೆ ಆಟವಾಡಿದರು. ಇಳಾ ವಿನ್ಮಯನಿಂದ ದೂರವೇ ಕುಳಿತಿದ್ದಳು. ಸಹಜವಾಗಿ ಅವನೊಂದಿಗಿರಲು ಏಕೋ ಸಂಕೋಚವೆನಿಸಿತ್ತು. ತಾನು ಅವನ ಕೈಹಿಡಿದುಕೊಂಡಾಗ ತನ್ನ ಬಗ್ಗೆ ಏನೆಂದುಕೊಂಡಾನೋ, ಥೂ ತಾನಾದರೂ ಗಂಗಾ ಜೊತೆಗೆ ಇರುವ ಬದಲು ಅವನೊಂದಿಗೆ ಏಕೆ ಕೋಟೆ ಹತ್ತಬೇಕಾಯಿತು. ತನ್ನದೇ ತಪ್ಪು ಎಂದುಕೊಂಡು ಆದಷ್ಟು ಗಂಗಾ ಜೊತೆಯೇ ಇರತೊಡಗಿದಳು.
ಈಗ ಅವರು ರುದ್ರಪಟ್ಟಣದ ಸಪ್ತಸ್ವರ ದೇವತಾ ಧ್ಯಾನ ಮಂದಿರದಲ್ಲಿದ್ದರು. ಕರ್ನಾಟಕದಲ್ಲಿಯೇ ಸಂಗೀತ ಗ್ರಾಮವೆಂದು ಹೆಸರಾದ ಊರು ಅದು. ತಂಬೂರಿ ಆಕಾರದ ೫೨ ಅಡಿ ಎತ್ತರ ವುಳ್ಳ, ಸಂಗೀತ ಸ್ವರಗಳನ್ನು ಪ್ರತಿನಿಧಿಸುವ ಸಂಗೀತ ಸ್ವರಗಳನ್ನು ಪ್ರತಿನಿಧಿಸುವ ಸಂಗೀತಾಚಾರ್ಯರುಗಳಾದ ಪುರಂದರ, ಕನಕ, ವಾದಿರಾಜ, ತ್ಯಾಗರಾಜ, ಮುತ್ತುಸ್ವಾಮಿ, ಶ್ಯಾಮಾಶಾಸ್ತ್ರಿ ಹಾಗೂ ವಿದ್ಯಾ ಅಧಿದೇವತೆಯಾದ ಸರಸ್ವತಿ ವಿಗ್ರಹಗಳನ್ನು ಇರಿಸಿದ್ದಾರೆ. ವಿಶ್ವದಲ್ಲಿಯೇ ಈ ನಾದ ಮಂಟಪ ಮೊದಲನೆಯದಾಗಿದೆ. ಪ್ರತಿವರ್ಷ ಮೂರುದಿನ ಸಂಗೀತ ಮಹೋತ್ಸವ ನಡೆದು ನಾಡಿನ ಪ್ರಸಿದ್ಧ ಸಂಗೀತಗಾರರು, ಸಂಗೀತಾಸಕ್ತರು ಇಲ್ಲಿ ಸೇರುತ್ತಾರೆ.
ದೇವಾಲಯದ ಒಳಗೆ ಕಾಲಿಟ್ಟ ಕೂಡಲೇ ತಂಬೂರಿಯ ಝೇಂಕಾರ ಕೇಳಿಸತೊಡಗುತ್ತದೆ. ಒಂದೊಂದು ವಿಗ್ರಹವನ್ನು ಪಾದ ಮುಟ್ಟಿ ನಮಸ್ಕರಿಸಿದೊಡನೇ ಆ ವಿಗ್ರಹದ ವ್ಯಕ್ತಿಯ ಬಗ್ಗೆ ಎಲ್ಲಾ ಮಾಹಿತಿಗಳು ಧ್ವನಿವರ್ಧಕದ ಮೂಲಕ ಕೇಳಿಸತೊಡಗುತ್ತದೆ. ಈ ವಿಶಿಷ್ಟ ರೀತಿಯ ವ್ಯವಸ್ಥೆಯಿಂದಾಗಿಯೇ ಅಲ್ಲಿ ಬಂದವರ ಮನಸ್ಸು ಸೆಳೆಯುತ್ತದೆ. ಪೂಜೆ ಕೂಡ ಓಂಕಾರದಿಂದಲೇ ನಡೆಯುತ್ತದೆ. ಇಲ್ಲಿ ಕೆಲ ನಿಮಿಷ ಧ್ಯಾನಾಸಕ್ತರಾದರೆ ಮನಸ್ಸಿನ ವಿಕಾರಗಳೆಲ್ಲ ಮರೆಯಾಗಿ ನೆಮ್ಮದಿ ನೆಲೆಸುತ್ತದೆ. ಈ ವಿಶಿಷ್ಟ ದೇವಾಲಯವನ್ನು ನೋಡಿ ಎಲ್ಲರೂ ಮುದಗೊಂಡರು. ಇಂಥ ಅಪರೂಪದ ದೇವಾಲಯವಿರುವುದೇ ತಮಗೆ ತಿಳಿದಿಲ್ಲವಲ್ಲ ಎಂದು ಮಾತಾಡಿಕೊಂಡರು.
ಅಲ್ಲಿಂದ ಮುಂದಕ್ಕೆ ಗೊರೂರು ನೋಡಿಕೊಂಡು ಅಲ್ಲಿನ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡರು. ಗೊರೂರಿನ ಅಣೆಕಟ್ಟೆ ಭವ್ಯವಾಗಿತ್ತು. ಒಂದು ಬಾಗಿಲಿನಲ್ಲಿ ನೀರು ಬಿಟ್ಟಿದ್ದರು. ಅದು ರ್ಭೂರ್ಗರೆಯುತ್ತ ಧುಮುಕುತ್ತಿತ್ತು. ಎಲ್ಲಾ ಬಾಗಿಲಲ್ಲೂ ನೀರು ಬಿಟ್ಟಾಗ ತುಂಬ ರಮ್ಮವಾಗಿರುತ್ತದೆ. ನೀರು ಕೆಳಗೆ ಬಿದ್ದು ಅಷ್ಟೆ ಎತ್ತರಕ್ಕೆ ಧುಮ್ಮಿಕ್ಕುವ ರಮಣೀಯತೆ ನೋಡುವುದೇ ಕಣ್ಣಿಗೆ ಆನಂದ. ಸುತ್ತಲೂ ಮಂಜಿನ ಹನಿಯಂತೆ ತುಂತುರ ಹನಿಗಳು ಆಮಿಸಿಕೊಂಡಿರುತ್ತದೆ. ಅದನ್ನು ಬಣ್ಣಿಸುವುದಕ್ಕಿಂತ ನೋಡುವುದೇ ಚೆನ್ನ ಎಂದು ಡ್ರೈವರ್ ವಿವರಣೆ ನೀಡಿದ. ಅಣೆಕಟ್ಟೆಯ ಮೇಲೆ ಹತ್ತಿದರೆ ಕಣ್ಣಳತೆಗೂ ಮೀರಿ ನಿಂತಿರುವ ಜಲಸಾಗರ, ಇದೊಂದು ಅವೂರ್ವವಾದ ದೃಶ್ಯಕಾವ್ಯ.
ಅಲ್ಲಿಂದ ಮುಂದೆ ಬೇಲೂರು, ಹಳೆಬೀಡು ನೋಡಿದರು. ಶಿಲ್ಪಕಲೆಯ ಆ ತವರೂರು ಕಣ್ಮನ ತಣಿಸಿದವು. ಅಲ್ಲಿನ ಶಿಲ್ಪಕಲಾ ವೈಭವ ಕಂಡು ಬೆರಗಾದರು. ಮೂಕರಾದರು. ವಿಸ್ಮಯ್ ಇಡೀ ದೇವಾಲಯವನ್ನು ಎರಡೆರಡು ಬಾರಿ ಸುತ್ತಿದನು. ಒಂದೊಂದು ಶಿಲಾಬಾಲಕಿಯ ಮುಂದೂ ನಿಂತು ಇಂಚಿಂಚೂ ಕಣ್ತುಂಬಿಕೊಂಡನು. ಅವನ ಆಸಕ್ತಿಯನ್ನು ಕುತೂಹಲದಿಂದ ಇಳಾ ಗಮನಿಸಿದಳು. ಭಾವುಕನಾಗಿ, ತನ್ಮಯನಾಗಿ ಶಿಲಾ ಸೌಂದರ್ಯವನ್ನು ನೋಡುತ್ತ ಮೈಮರೆತಿದ್ದುದನ್ನು ಕಂಡು ಒಳ್ಳೆ ಭಾವನಜೀವಿ ಎಂದು ಮನದಲ್ಲಿಯೇ ಅಂದುಕೊಂಡಳು. ಹಾಗೆ ನೋಡುವಾಗ ಅಕಸ್ಮಿಕವಾಗಿ ಕಣ್ಣುಗಳು ಮೇಳೈಸಿದರೆ ತಟಕ್ಕನೇ ದೃಪ್ಪಿ ಬದಲಿಸಿಕೊಂಡುಬಿಡುತ್ತಿದ್ದಳು. ಏನೇ ಆಗಲಿ ತಾನು ವಿಸ್ಮಯಯನಿಂದ ದೂರವನ್ನು ಕಾಯ್ದುಕೊಳ್ಳಬೇಕೆಂದು ನಿರ್ಧರಿಸಿಬಿಟ್ಟಿದ್ದಳು. ಅವಳೇನೋ ನಿರ್ಧರಿಸಿಕೊಂಡು ಬಿಟ್ಟಿದ್ದಳು. ಆದರೆ ವಿಸ್ಮಯನಿಗೇನು ಈ ನಿರ್ಧಾರದ ಅರಿವಿರಲಿಲ್ಲವಲ್ಲ. ಹಾಗಾಗಿ ಅವನು ಹೆಚ್ಚು ಹೆಚ್ಚಾಗಿ ಅವಳ ಸಮೀಪವೇ ಬರುತ್ತಿದ್ದ. ಮಿಕ್ಕವರೆಲ್ಲ ಅವನು ಶಾಲೆಯ ಸ್ಥಾಪಕ, ಸಂಬಳ ಕೊಡುವ ದಣಿ ಎಂದು ವಿಪರೀತ ಗೌರವ ಕೊಡುತ್ತ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ, ಅವನು ಯಾರೊಂದಿಗೆ ಬೆರೆಯಲು ಸಾಧ್ಯವಿತ್ತು. ಹಾಗಾಗಿಯೇ ಪ್ರವಾಸದುದ್ದಕ್ಕೂ ಇಳಾ ದೂರ ದೂರ ಹೋಗುತ್ತಿದ್ದರೂ ತಾನಾಗಿಯೆ ಅವಳ ಸಮೀಪ ಸುಳಿಯುತ್ತಿದ್ದ. ಅಲ್ಲಿದ್ದವರಿಗೂ ಇದು ಅಸಹಜ ಎನಿಸಿರಲಿಲ್ಲ. ಆದರೇಕೋ ಇಳಾಳಿಗೆ ಮಾತ್ರ ಇದು ಸರಿಹೋಗುತ್ತಿರಲಿಲ್ಲ. ಅವನು ಅದಕ್ಕಾಗಿ ತಲೆಕೆಡಿಸಿಕೂಂಡಂತೆ ಕಾಣುತ್ತಿರಲಿಲ್ಲ. ಬೇಲೂರು, ಹಳೇಬೀಡು ನೋಡಿಕೊಂಡು ಶ್ರವಣಬೆಳಗೊಳಕ್ಕೆ ಹೊರಟರು.
ಈ ಬಾರಿ ವಿಸ್ಮಯನಿಂದ ಛೇಡಿಸಿಕೊಳ್ಳಬಾರದೆಂದು ಮೊದಲೆ ಬೆಟ್ಟಹತ್ತುವ ಉತ್ಸಾಹ ತೋರಿದಳು. ಅರ್ಧ ಮೆಟ್ಟಿಲು ಏರುವಷ್ಟರಲ್ಲಿ ಅವಳ ಉತ್ಸಾಹ ಕಳೆದುಹೋಗಿತ್ತು. ನೀಲಾ ತಾನು ಬೆಟ್ಟ ನೋಡಿದ್ದೇನೆ ತಾನು ಕೆಳಗೆ ಇರುವುದಾಗಿ ಹೇಳಿ ಉಳಿದುಬಿಟ್ಟಿದ್ದಳು. ಮಕ್ಕಳೊಂದಿಗೆ ಗಂಗಾ, ಜೋಸೆಫ್ ಮತ್ತಿತರ ಶಿಕ್ಷಕರು ಮುಂದೆ ಮುಂದೆ ಹೋಗಿಯೇ ಬಿಟ್ಟಾಗ ವಿಸ್ಮಯ್ ಅವಳಿಗಾಗಿ ಹಿಂದೆ ಉಳಿದ. ಬಾಟಲಿಯಲ್ಲಿದ್ದ ನೀರು ನೀಡಿ ‘ನೀರು ಕುಡಿದು ಸುಧಾರಿಸಿಕೊಳ್ಳಿ.. ನಿಧಾನವಾಗಿ ಬೆಟ್ಟ ಹತ್ತೋಣ’ ಎಂದನು. ಅವನ ಮೊಗದಲ್ಲೇನಾದರೂ ಛೇಡಿಸುವ ಭಾವವಿದೆಯೇ ಎಂದು ಹುಡುಕಿದಳು. ಅಲ್ಲಿ ಅಂತಹ ಭಾವವೇನೂ ಕಾಣದೆ, ಬದಲಾಗಿ ಅವಳ ಬಗ್ಗೆ ವಿಪರೀತ ಕಾಳಜಿ ಕಾಣಿಸಿತು. ನೀರು ಕುಡಿಯುವ ತನಕ ಕಾದಿದ್ದು ‘ಹೋಗೋಣ್ವ’ ಎಂದ.
‘ಇಳಾ ಕೆಳಗೆ ನೋಡಿ, ಕೆಳಗಿರುವವರೆಲ್ಲ ಎಷ್ಟು ಚಿಕ್ಕದಾಗಿ ಕಾಣಿಸುತ್ತ ಇದ್ದಾರೆ, ಹಿಂದೆ ಒಂದು ಸಲ ಶಾಲಾ ಟ್ರಿಪ್‌ಗೆಂದು ಈ ಬೆಟ್ಟಕ್ಕೆ ಬಂದಿದ್ದೆ. ಆಗ ನಾನು ತುಂಬಾ ತರಲೆ, ಗೋಮಟೇಶ್ವರ ಯಾಕೆ ಚಡ್ಡಿ ಹಾಕಿಕೂಂಡಿಲ್ಲ ಅಂತ ಮೇಷ್ಟ್ರನ್ನ ಕೇಳಿ ಬೈಸಿಕೊಂಡಿದ್ದೆ. ಇಳಿವಾಗ ಮೆಟ್ಟಿಲಿನಿಂದ ಇಳಿಯದೆ ಆ ಕಡೆ ಜಾರ್ಕೊಂಡು ಹೋದ್ರೆ ಚೆನ್ನಾಗಿರುತ್ತೆ ಅಂತ ಜಾರೋಕೆ ಹೋಗಿ ಒದೆ ತಿಂದಿದ್ದ. ಅದೆಲ್ಲ ಈಗ ನೆನಪಾಗುತ್ತೆ ನೋಡಿ, ಆ ಜೀವನವೇ ಒಂದು ರೀತಿ ಚೆನ್ನಾಗಿತ್ತು’ ಅಂತ ಹೇಳಿ ಅವಳನ್ನು ನಗಿಸಿದ್ದ. ಅವನ ಜೊತೆ ಮಾತಾಡಿಕೊಂಡು ಬೆಟ್ಟ ಹತ್ತಿದ್ದ ಇಳಾಗೆ ಗೊತ್ತಾಗಲಿಲ್ಲ. ತುಂಬಾ ಸಾಕಾಯ್ತು ಅನ್ನಿಸಿದಾಗ ಅವಳ ಭುಜ ಹಿಡಿದುಕೊಂಡು ಮೇಲೆ ಹತ್ತಿಸಿದ.
‘ಇಳಾ, ನಿಮ್ಮ ಜೊತೆ ಹೀಗೆ ಹತ್ತುತ್ತಾ ಇದ್ರೆ ಇಂತ ನಾಲ್ಕು ಬೆಟ್ಟನಾದ್ರು ಏರ್ತೀನಿ ಅಂತ ಅನ್ನಿಸುತ್ತ ಇದೆ, ನಾನು ಈ ಟೂರ್‌ಗೆ ಬರದೆ ಇದ್ದಿದ್ರೆ ನಿಮ್ಮ ಕಂಪನಿಯನ್ನ ಮಿಸ್ ಮಾಡಿಕೊಳ್ತ ಇದ್ದೆ. ನಂಗೆ ನೀವು ತುಂಬಾ ಇಷ್ಟವಾಗಿಬಿಟ್ರಿ’ ಅವಳನ್ನ ನೋಡುತ್ತ ಹೇಳ್ತಾ ಇದ್ರೆ ಇಳಾಗೆ ಕಳವಳ ಎನಿಸಿತು. ಬೆಟ್ಟದ ಮೇಲಿನ ಮೋಡ, ಹಸಿರು ದಿಗಂತ ಮೊದಲಾದ ಕಲ್ಪನೆಗಳನ್ನು ವಿಸ್ತರಿಸುವ ಮಾತುಗಳು, ಮಾತುಗಳಲ್ಲಿನ ಸ್ನೇಹ ಸಲುಗೆ, ಅವು ಸಲುಗೆ ಸ್ನೇಹವನ್ನೂ ಮೀರಿದ ಭಾವ ಎಂದು ಅರಿವಾದೊಡನೆ ಇಬ್ಬರೇ ಇರುವ ಸಂದರ್ಭ ಮತ್ತೆ ಸೃಷ್ಟಿಯಾಗಬಾರದೆಂದು, ಬೆಟ್ಟವನ್ನು ವೇಗವಾಗಿ ಹತ್ತಲು ಶುರು ಮಾಡಿದಳು.
ವಿಸ್ಮಯನ ಮನಸ್ಸು ಪೂರ್ತಿಯಾಗಿ ಅವಳಲ್ಲಿ ಸಿಕ್ಕಿ ಹಾಕಿಕೊಂಡಿತು. ಅವಳ ಭಾವವೇನು ಎಂದು ಅರ್ಥವಾಗದೆ ಚಡಪಡಿಸಿದ. ತನ್ನ ಮನಸ್ಸನ್ನು ಹದ್ದುಬಸ್ತಿನಲ್ಲಿಡಬೇಕು. ಅವಳ ಮನಸ್ಸಿನಲ್ಲಿರುವುದೇನು ಎಂದು ತಿಳಿದುಕೊಳ್ಳುವ ತನಕ ತಾನು ತನ್ನ ಮನಸ್ಸಿನ ಭಾವವನ್ನು ಹೊರ ತೋರದಂತಿಡಬೇಕು ಎಂದು ನಿಶ್ಚಯಿಸಿಕೊಂಡ. ಮುಂದೆ ಹೆಜ್ಜೆ ಇಡಲಾರೆ ಎಂಬಂತೆ ಅವನ ಪಾದಗಳು ಮುಷ್ಕರ ಹೂಡಿದವು. ಹಾಗೆ ತಿರುಗಿ ಮೆಟ್ಟಿಲಿನ ಮೇಲೆ ಕುಳಿತುಕೊಂಡ. ಮಧ್ಯಾಹ್ನದ ಬಿಸಿಲಿಗೆ ಪ್ರಪಂಚವೆಲ್ಲ ಕರಗಿ ಅಂಚೂಡೆದು ತನ್ನ ಆಕಾರವನ್ನು ಕಳೆದುಕೊಳ್ಳುತ್ತಿದೆ ಎಂದು ಅನಿಸಿತು. ತನ್ನನ್ನು ಬಿಟ್ಟು ಇಳಾ ಮೆಟ್ಟಿಲೇರಿ ಹೋಗಿದ್ದು, ಅವಳ ಹಿಂದೆ ತಾನು ಹೋಗುವುದು ಬಿಟ್ಟು ಇಲ್ಲೇಕೆ ಕುಳಿತುಕೊಂಡಿದ್ದೇನೆ? ಅವಳ ಜೊತೆ ಇಲ್ಲದೆ ನಡೆಯಲಾರೆ ಎಂಬ ಭಾವ ಕಾಡುತ್ತಿದೆಯೇ? ಇದು ಅಸಂಗತವಲ್ಲವೇ?-ತಾನು ಎದ್ದು ಮೇಲೆ ಹೋಗಬೇಕು ಅಂದುಕೊಂಡರೂ ಎದ್ದು ಹೋಗುವ ಮನೋಭಾವವೇ ಇಲ್ಲದಂತಾಯಿತು. ಬೆನ್ನು ನೋವು ಕಾಣಿಸಿಕೊಂಡರೂ ಭಂಗಿ ಬದಲಿಸದೆ ಕುಳಿತೆಯೇ ಇದ್ದ. ಆ ಸಮಯದಲ್ಲಿ ಬೆಟ್ಟ ಹತ್ತುವವರು ಯಾರೂ ಇಲ್ಲದ ಕಾರಣ ನೀರವತೆ ಆವರಿಸಿತ್ತು, ಒಬ್ಬನೇ ಬೆಟ್ಟದ ಸುತ್ತಲೂ ನೋಡುತ್ತ ಕುಳಿತೇಬಿಟ್ಟ.
ಮಕ್ಕಳ ಕಲರವ ಕೇಳಿಸಿಕೊಂಡ ನಂತರ ಅವರೆಲ್ಲ ಬೆಟ್ಟ ನೋಡಿ ಇಳಿಯುತ್ತಿದ್ದಾರೆ ಎಂದುಕೊಂಡು ಎದ್ದು ನಿಂತ.
‘ಯಾಕೆ ಸಾರ್ ಮೇಲಕ್ಕೆ ಬರಲಿಲ್ಲ, ಸಾಕಾಯ್ತ’ ಜೋಸೆಫ್ ಕೇಳಿದ. ‘ಇಲ್ಲಾ, ಮೇಲೆ ಎಲ್ಲಾ ನೋಡಿದ್ದೀನಿ. ಇಲ್ಲಿಂದ ಕೆಳಗೆ ನೋಡೋದು ನಂಗೆ ಇಷ್ಟ ಆಯ್ತು. ಅದಕ್ಕೆ ಆ ನೋಟನಾ ಆಸ್ವಾದಿಸುತ್ತಾ ಕುಳಿತುಬಿಟ್ಟೆ.’ ಎನ್ನುತ್ತ ಅವರು ಹೋಗುವುದಕ್ಕೆ ಜಾಗಬಿಟ್ಟ.
ಇಳಾ ಗಂಗಾನ ಜೊತೆ ಏನೋ ಮಾತಾಡ್ತ ನಗ್ತ ಬರ್ತಾ ಇದ್ದಳು. ಆ ನಗುವನ್ನು ಮನದೂಳಗೆ ತುಂಬಿಕೊಳ್ಳುತ್ತ ನಿಧಾನವಾಗಿ ಕೆಳಗಿಳಿಯತೊಡಗಿದ.
ಅವನ ಜೊತೆ ಸೇರಿದ ಗಂಗಾನೂ ಮೇಲೇಕೆ ಬರಲಿಲ್ಲವೆಂದು ಪ್ರಶ್ನಿಸಿದಳು- ಇಳಾ ಅದರತ್ತ ಗಮನ ನೀಡದಂತೆ ನಟಿಸಿದರೂ ಕಸಿವಿಸಿ ಅವಳ ಮುಖದಲ್ಲಿ ಕಾಣುತ್ತಿತ್ತು.
‘ನೀವು ಬಿಟ್ಟು ಹೋಗಿಬಿಟ್ರಿ, ನಾನೊಬ್ಬನೇ ಹೇಗೆ ಬರಲಿ, ಬೇಜಾರು ಆಯ್ತು. ಒಬ್ಬನೇ ಬೆಟ್ಟ ಹತ್ತೋಕೆ’ ಅದು ಇಳಾಳನ್ನು ಉದ್ದೇಶಿಯೇ ಹೇಳಿದ್ದೆಂದು ಇಳಾಗೆ ಅರ್ಥವಾಯಿತು.
ಅದರ ಅರಿವಿರದ ಗಂಗಾ, ‘ಅಯ್ಯೋ ಎಂತ ಕೆಲ್ಸ ಮಾಡಿದ್ವಿ. ಮಕ್ಕಳ ಜೊತೆ ನಾವು ಹೋಗಿಬಿಟ್ವಿ, ಸಾರಿ ಸಾರ್… ನಿಮ್ಮನ್ನ ಒಬ್ರೆ ಬಿಟ್ಟಿದ್ದಕ್ಕೆ, ನಮಗೆ ಗೊತ್ತಾಗಲೇ ಇಲ್ಲ’ ಪಶ್ಚಾತ್ತಾಪದಿಂದ ಹೇಳಿದಳು.
‘ಹೋಗ್ಲಿ ಬಿಡಿ, ನೀವು ಪಾಪ ಮಕ್ಕಳನ್ನು ನೋಡಿಕೊಳ್ಳಬೇಕು, ಒಬ್ಬನೇ ಬರೋ ಅಭ್ಯಾಸ ಮಾಡಿಕೊಳ್ತೀನಿ’ ಎಂದ. ಇಳಾ ಒಂದೂ ಮಾತಾಡಲಿಲ್ಲ.
‘ಹೌದು ಸರ್, ಮಕ್ಕಳ ಜವಾಬ್ಧಾರಿ ನಮ್ಮ ಮೇಲಿರುತ್ತೆ. ಆದ್ರೆ ಇಳಾ… ನೀನು ಅವರ ಜೊತೆ ಕಂಪನಿ ಕೊಡು. ಹೇಗೂ ನೀನೂ ಒಬ್ಳೆ ಆಗಿಬಿಡ್ತೀಯಾ. ನೀನು ನಿಧಾನಕ್ಕೆ ಸರ್ ಜೊತೆ ಬಾ’ ಎಂದು ಹೇಳಿ ಬೇಗ ಬೇಗ ಗಂಗಾ ಕೆಳಗಿಳಿಲಾರಂಭಿಸಿದಳು.
ಗಂಗಾ ಇಳಿದು ಹೋದ ಮೇಲೆ ಇಳಾ, ವಿಸ್ಮಯ್ ಇಬ್ಬರೇ ಉಳಿದರು.
‘ನೀವು ನನ್ನ ಬಿಟ್ಟು ಹೋದರೂ, ವಿಧಿ ಮತ್ತೆ ನನ್ನ ಜೊತೆ ನೀವು ಬರುವಂತೆ ಮಾಡಿದೆ ಏನು ಹೇಳ್ತೀರಿ ಇದಕ್ಕೆ’ ಕೆಣಕಿದನು.
‘ನಾನೇನು ಬಿಟ್ಟು ಹೋಗಲಿಲ್ಲ, ನೀವು ಬರ್ತೀರಾ ಅಂತ ಹೋದೆ ಅಷ್ಟೆ’ ಮಾತು ತೇಲಿಸಿದಳು.
‘ಎಲ್ಲಿ ನನ್ನ ಮುಖ ನೋಡಿಕೊಂಡು ಹೇಳಿ, ಸತ್ಯ ಹೇಳ್ತಾ ಇದ್ದೀನಿ ಅಂತಾ’ ಇದನ್ನು ಹೇಳುವಾಗ ಅವನು ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.
ಮುಖದಲ್ಲಿ ಕಸಿವಿಸಿ ಕಾಣಿಸಿತು. ಉತ್ತರಿಸಬಾರದೆಂಬ ಪಟ್ಟು ಅಲ್ಲಿತ್ತು. ಮೌನವಾಗಿಯೇ ಕೆಳಗೆ ಇಳಿಯತೊಡಗಿದಳು. ಸಂಪೂರ್ಣ ಅಂತರ ಮುಖಿಯಾಗಿದ್ದಳು. ಅವಳ ಅಂತರಮುಖತೆ ಅವನನ್ನು ಕಳವಳಕ್ಕೀಡು ಮಾಡಿತು. ತಾನೂ ಮೌನವಾಗಿಯೇ ಕೆಳಗಿಳಿಯತೊಡಗಿದ.
ಬೆಟ್ಟದಿಂದ ಇಳಿದು ಎಲ್ಲರೂ ಕೊಂಚ ಸುಧಾರಿಸಿಕೊಂಡು ಮಕ್ಕಳಿಗೆ ಕೊಳ್ಳಲು ಅಂಗಡಿಯ ಬಳಿ ಬಿಟ್ಟರು. ನಂತರ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು. ಪ್ರವಾಸ ತುಂಬಾ ಚೆನ್ನಾಗಿತ್ತು. ಆದರೆ ಇಳಾ ಮತ್ತು ವಿಸ್ಮಯ್ ತುಂಬಾ ದುಗುಡದಲ್ಲಿದ್ದರು. ಇಳಾಳ ಮನಸ್ಸನ್ನು ಅರಿತವನಂತೆ ವಿಸ್ಮಯ್ ಇಳಾಳೊಂದಿಗೆ ಮತ್ತೆ ಮಾತನಾಡಲು ಹೋಗಲಿಲ್ಲ. ಅಂತಹ ಸಂದರ್ಭ ಬಂದರೂ ಉಪಾಯವಾಗಿ ತಪ್ಪಿಸಿಕೊಂಡು ಅವಳಿಂದ ದೂರವೇ ಉಳಿದು ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸಿದ. ಇದೂ ಕೂಡ ಇಳಾಳ ಮನಸ್ಸಿಗೆ ಸಮಾಧಾನ ತರಲಿಲ್ಲ. ಮನೆ ತಲುವುವ ತನಕ ಪೆಚ್ಚಾಗಿಯೇ ಇದ್ದಳು.
*****