ಮಳೆಗಾಲದ ಆ ಸಂಜೆ
ಧೋ! ಎಂದು ಸುರಿದ ಮಳೆ
ಕೊನೆಯ ಕಂತಿನ ಹನಿ
ಟಪ್ ಟಪ್ ಹನಿ ಹನಕು
ಜಿಟಿಜಿಟಿ ಜಡಿ ಮಳೆ
ಎಲೆಗಳಿಂದ ಒಸರುವ
ಒಂದೊಂದೇ ಹನಿ ಹನಿ
ನಾಭಿಯಾಳದಿಂದ
ಹಸಿರು ಚಿಗುರವಾ ನಡುಕ
ಶೀತ ಲಹರಿಯ ಗಾಳಿ
ಮುಂಗುರುಳಿನಿಂದ ಹನಕುವ
ಒಂದೊಂದೇ ಮುತ್ತುಗಳ ಪೋಣಿಸಲೇ
ಬಿಸಿ ಉಸಿರ ದಾರದಲಿ?
ಕೊರೆವ ಚಳಿಗೆ ಬಿಸಿಬಿಸಿ ಕಾಫೀ
ಗುಟಕರಿಸಿ ಬಿಡಲೇ ಇಡಿಯಾಗಿ?
ಉರಿವ ಒಲೆ ಮುಂದೆ ಬಿಸಿ ಕಾಸುತ್ತ
ಕರಗಿ ಹೋಗಲೇ ಮೇಣದಂತೆ
ಆರಿದ ಮೇಣ ಘನವಾಗಿ
ಮೂಲದ ಆಕಾರ ಕಳೆದುಕೊಂಡು
ಇಲ್ಲವಾಗಲೇ ಜಾತ್ರೆಯಲಿ?
ನಡುಕ ತೊಡೆಯಲು
ಉರಿಸಿ ಬಿಡಲೇ ನಿನ್ನ ನೆನಪಿನ ದೀಪ
ಕತ್ತಲಾವರಿಸುವ ಮುನ್ನ
ಎರಡು ಕ್ಷಣ ಬದುಕಿ ಬಿಡಲೇ?
ಲೋಕದ ಹಂಗು ತೊರೆದು
ಆಚೆ ದಡದಲಿ ನಿಂತು
ನೆಲ ಮುಗಿಲು ಸಂಧಿಸುವಲ್ಲಿ
ಆಗಸದಲ್ಲಿ ಹಾರಿಬಿಡಲೇ?
ಎರಡು ಕ್ಷಣ ಬದುಕಿ ಬಿಡಲೇ?
*****