ಇಂದು ಏನಾಗಿಹುದೆ, ಗೆಳತಿ
ಏಕೆ ಸಡಗರಗೊಳ್ವೆನೇ?
ಕಡಲಿನಗಲದ ಕೇರಿ ಹರಹನು
ಹಾರಿಬರುವೆಲರಾರ ದೂತನೆ,
ಸುದ್ದಿ ಯಾವುದ ಪೇಳ್ವನೇ?

ಕತ್ತಲಿದು ಮುನ್ನೀರಿನಂದದಿ
ತಿರೆಯ ಮುಳುಗಿಸಿ ಹಬ್ಬಿದೆ;
ಒಡೆದ ಹಡಗುಗಳಂತೆ ಮನೆ ಮಠ
ಅದರ ತಲದೊಳು ಬಿದ್ದಿದೆ-ಮನ
ಬೆದರಿ ಬಯಕೆಯ ತಬ್ಬಿದೆ.

ಎಲ್ಲ ಕರಣವ ಕಿವಿಗೆ ಹೊಂದಿಸಿ
ನಿಲ್ಲುವೆನು ದನಿಯರಸುತ,
ಅನ್ಯಗಿಲ್ಲದ ಧೀರಗಮನದ
ಛಂದವಾಲಿಪ ನೆಲ್ಲದೊಂದನೆ
ತುಡಿಯುವೆದೆಯೊಳು ಹರಸುತ.

ಅಕೊ-

ಬಾನವರಿಗಿಳಿನೆನಪ ತರುವೀ
ಗುಡಿಯ ಗಂಟೆಯ ಬಾಜನೆ
ಬೀದಿಯೊಳು ನೂರ್ ಕೊರಲ ತರುತಿದೆ;
ಹೃದಯದೇಕಾಂತವನು ಸಾರುವ
ದನಿಯ ತಹುದೋ ಕಾಣೆನೇ.

ಅದೊ ಅವನ ನೇಹಿಗನ ನಗೆನುಡಿ-
ಅಗಲಿದರು-ಬಹನಿತ್ತೆಡೆ!
ಒಳಪೊಗುವೆ, ಕನ್ನಡಿಯ ಮುಂಗಡೆ
ತುಸ ನಿಲುವೆ, ಹೊರಬರುವೆ, ಲಾಲಿಪೆ-
ನೆದೆಯ ಹಾಸುವೆ ನಡೆವೆಡೆ.

ಬಹನು ಬರುತಿಹನವ್ವ-ಬಂದನು-
ಕಂಡರೇಗತಿ ಕಾಣೆನೇ!-
ಬಯಕೆಕೊಡೆವಿಡಿದೊಲುಮೆಯುತ್ಸವ
ನನ್ನ ನರಸಿಯೆ ಬಳಿಗೆ ಬಂದಿರೆ
ಕಾಣದೊಲು ಮರೆನಿಂದೆನೇ!
*****