ದೊಡ್ಡ ಕೃಷ್ಣರಾಜ ಒಡೆಯರವರು ಆಳುತ್ತಿದ್ದ ಕಾಲದಲ್ಲಿ ಮರಾಟೆ ಸರದಾರನೊಬ್ಬನು ಸಸೈನ್ಯನಾಗಿ ಶ್ರೀರಂಗಪಟ್ಟಣಕ್ಕೆ ಬಂದು ಮುತ್ತಿದನು. ಆ ಸಮಯದಲ್ಲಿ ಅವರ ದಂಡಿಗೆ ಶ್ರೀರಂಗಪಟ್ಟಣದ ಕೋಟೆಯ ಮೇಲಿನಿಂದ ಕೋವಿ, ಫಿರಂಗಿ, ಗುಂಡು, ಜಂಜಾಲು, ತುಪಾಕಿ, ಮಕರಡಿಬ್ಬಿ, ಜಬರಜಂಗಿ, ಬಾಣ ಮುಂತಾದುವುಗಳಿಂದ ಮೈಸೂರಿನ ಸೈನಿಕರು ಹೊಡೆಯುತ್ತಿರಲು, ಆ ಸರದಾರನು ತನ್ನ ಕಡೆ ಬಹಳ ಜನಗಳು ಹತರಾಗುತ್ತಿದ್ದುದನ್ನು ನೋಡಿ ಭಯದಿಂದ ಎದೆಗೆಟ್ಟು “ನಾವು ಕತ್ತಿಯಲ್ಲಿ ಯುದ್ಧ ಮಾಡುವವರು. ಇವರಾದರೋ ಮದ್ದುಗುಂಡಿನಿಂದ ಯುದ್ಧ ಮಾಡಿ, ನಮ್ಮ ಬಹು ಸೇನೆಯನ್ನು ಸಂಹರಿಸಿದರು. ಇದು ಶ್ರೀರಂಗಪಟ್ಟಣವಲ್ಲ, ಫಿರಂಗಿಪಟ್ಟಣವೆಂದು ತೋರುತ್ತದೆ” ಎಂದು ತನ್ನ ಸೇನಾ ಜನರ ಸಂಗಡ ಹೇಳಿ ಇವರ ಸಂಗಡ ಯುದ್ಧಮಾಡಲಾರೆವೆಂದು ಹೊರಟುಹೋದನು.
*****
[ವಂಶರತ್ನಾಕರ ಪುಟ ೧೫೧; ವಂಶಾವಳಿ ಪುಟ ೧೬೦]
