ಸಾಕುಚಿಗರೆಯು ಹೋಗಿ ಗಿರಿಶೃಂಗದೆಡೆ ತೆರಳೆ
ಮೆಲುಮೆಲನೆ ಮನವಾರೆ ಹೊಳೆಯುವದು ಅದಕಿರುವ
ದಾಸ್ಯವದು. ನಗರದಲಿ ಮನೆಗೆ ಹೋಗುವ ಬರುವ
ಜನರ ಬೆರಳೊಳು ಮಗನಿಟ್ಟು ನಿಂತಿರುವೆರಳೆ
ಈಗ ನೆಗೆವುದು ಮುಕ್ತ ಜೀವನದ ಸ್ಮೃತಿ ಮರಳೆ
ಕಂಡು ಗಿರಿಕಂದರವ, ತಂಗೊಳದಡಿಯ ನಿಲುವ.
ನೆಗೆವನಾತುಮನಿಂತು ಕಂಡನಂತದ ಚೆಲುವ.
‘ನಾನೆಂ’ಬ ನಾಗರವು ಮಾತ್ರ ಆತುಮಗುರಲೆ ?
ಆಡಿಕೊಳ್ಳಲು ಬೇಡ, ಕೊಲಲೆಂದು ದುಡುಕದಿರು
‘ನಾನೆಂ’ಬ ನಾಗನನು, ಜ್ಞಾನರವಿಯುದಯದಲಿ
ಹೊರಗೆ ಬರಬಹುದದುವೆ ತನ್ನ ಬಿಲವನು ಬಿಟ್ಟು.
ಆಗ ಮಾಂತ್ರಿಕ ಪುಂಗಿಯೂದಿ, ಹೆಡೆಯೆತ್ತುತಿರು-
ವಾಗದರ ವಿಷ ಹೀರುವನು. ಮುಂದೆ ಧರಣಿಯಲಿ
ಮನ್ನಿಸುವನದ ಚಂದ್ರಮೌಳಿ ಕೊರಳೊಳಗಿಟ್ಟು!
*****