ಅಳಿಯ ಅಯಿಪಂಣ

ಅಳಿಯ ಅಯಿಪಂಣ

ಚಿತ್ರ: ಪ್ರಾನಿ
ಚಿತ್ರ: ಪ್ರಾನಿ

ಕೊಡಗಿನ ಲಿಂಗರಾಜ ಒಂದು ದಿನ ತನ್ನ ಅಣ್ಣ ದೊಡ್ಡವೀರರಾಜ ನಿರ್ಮಿಸಿದ ವೀರರಾಜಪೇಟೆ ಯಿಂದ ಕೊಡಗಿನ ರಾಜಧಾನಿ ಮಡಿಕೇರಿಗೆ ತನ್ನ ಪರಿವಾರದೊಡನೆ ಬರುತ್ತಿದ್ದ. ರಾಣಿ ದೇವಕಿ ಜತೆಗಿದ್ದಳು. ಅವಳು ಕಾಂತು ಮೂರ್ನಾಡಿನ ಪಳಂಗಡ ಮನೆಯ ಹೆಣ್ಣು. ಕೊಡಗತಿ ಹೆಣ್ಣಿಗೆ ಲಿಂಗಕಟ್ಟಿ ಲಿಂಗರಾಜ ಮದುವೆಯಾಗಿದ್ದ. ಅವಳು ಅಸಾಧಾರಣ ರೂಪವತಿ. ಅವಳ ಹಾಸ್ಯಪ್ರಜ್ಞೆ ಲಿಂಗರಾಜನನ್ನು ಸದಾಕಾಲ ಲವಲವಿಕೆಯಿಂದ ಇರುವಂತೆ ಮಾಡುತ್ತಿತ್ತು.

ಲಿಂಗರಾಜನ ಪರಿವಾರವನ್ನು ಮೂರ್ನಾಡಿನಲ್ಲಿ ಯುವಕರ ತಂಡವೊಂದು ಸ್ವಾಗತಿಸಿತು. ಅದರ ನಾಯಕನಂತಿದ್ದ ಎತ್ತರದ, ದೃಢಕಾಯದ ಲಕ್ಷಣವಂತ ಯುವಕ ರಾಜನಿಗೆ ಹಾರಹಾಕಿ, ಫಲತಾಂಬೂಲ ನೀಡಿ ಗೌರವಿಸಿ ಪಾದಕ್ಕೆ ಮಣಿದ.

ಈ ಗೌರವ ಯಾತಕ್ಕಾಗಿ? ನೀನು ಯಾರು?
ಯುವಕ ತಲೆಬಾಗಿ ವಿನಯದಿಂದ ನುಡಿದ.
ನಾನು ಅರಮನೆಯ ಕರಣಿಕ ಮುದ್ದಯ್ಯನವರ ಖಾಸಾ ತಮ್ಮ ಮುಕ್ಕಾಟಿರ ಅಯಿಪಂಣ. ಈ ಹಿಂದೆ ಕೊಡಗಿನಾದ್ಯಂತ ಕ್ಷೋಭೆಯಿತ್ತಂತೆ. ಆಗಾಗ ಯುದ್ಧ, ಗುಂಪು ಘರ್ಷಣೆ ನಡೆಯುತ್ತಿತ್ತಂತೆ. ಆದರೆ ಮಹಾಪ್ರಭುಗಳು ಸಿಂಹಾಸನವೇರಿದ ಬಳಿಕ ಶಾಂತಿ ನೆಲೆಸಿದೆ. ತಾವು ರಚಿಸಿದ ಹುಕುಂನಾಮೆಗಳಿಂದಾಗಿ ಎಲ್ಲಾ ಕಡೆ ನೆಮ್ಮದಿ, ಸೌಖ್ಯ ಕಾಣಸಿಗುತ್ತದೆ. ಪ್ರಭುಗಳ ಸಾಧನೆಯನ್ನು ಗೌರವಿಸಿ ಮೂರ್ನಾಡಿನ ಯುವಕರು ಒಟ್ಟಾಗಿ ಗೌರವ ಸಲ್ಲಿಸುತ್ತಿದ್ದೇವೆ.

ಲಿಂಗರಾಜ ಸಂತುಷ್ಟನಾದ.
ಅಯಿಪಂಣನಲ್ಲಿ ವಿನಯವಿದೆ.
ಸಾಧನೆಯನ್ನು ಗೌರವಿಸುವ ಸದ್ಗುಣವಿದೆ.
ಯುವಕರನ್ನು ಒಟ್ಟಾಗಿಸುವ ನಾಯಕತ್ವದ ಲಕ್ಷಣವೂ ಇದೆ.
ಅಯಿಪಂಣ, ನಿನ್ನ ರಾಜನಿಷ್ಠೆಯಿಂದ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಅಣ್ಣ ದೊಡ್ಡವೀರರಾಜರು ಕಟ್ಟಿದ ವಿಶಾಲವಾದ ಕೊಡಗು ನಾಡನ್ನು ಉಳಿಸಿಕೊಳ್ಳಲು ನನಗೆ ವಿನಯವಂತರ, ನಿಷ್ಠರ ಅಗತ್ಯವಿದೆ. ನಿನಗೆ ಯಾವುದರಲ್ಲಿ ಹೆಚ್ಚು ಆಸಕ್ತಿ?
ಕುದುರೆ ಸವಾರಿ ಮತ್ತು ಮೃಗಬೇಟೆಯಲ್ಲಿ ಪ್ರಭೂ.
ಸಂತೋಷ. ಎರಡೂ ಉಪಯೋಗಕ್ಕೆ ಬರುತ್ತವೆ. ದೊಡ್ಡವೀರ ರಾಜರ ಕಾಲದಲ್ಲಿ ಎಷ್ಟೊಂದು ಯುದ್ಧಗಳು? ಈಗ ಶಾಂತಿ ನೆಲೆಸಿದೆ. ಶಾಂತಿಯ ಬಳಿಕ ಮತ್ತೆ ಯುದ್ಧ ಕಾಣಿಸಿ ಕೊಳ್ಳಬಹುದು. ಸುಂದರ, ಸಮೃದ್ಧ ಕೊಡಗಿನ ಮೇಲೆ ಕಾಕದೃಷ್ಟಿ ಬಿದ್ದರೆ ನೀನು ಏನು ಮಾಡಬಲ್ಲೆ ಅಯಿಪಂಣ
ಅಯಿಪಂಣ ಎದೆ ಸೆಟೆಸಿ ನಿಂತ.
ನನ್ನ ಪ್ರಾಣವನ್ನೇ ಕೊಡಬಲ್ಲೆ ಪ್ರಭೂ.
ಲಿಂಗರಾಜ ಗಟ್ಟಿಯಾಗಿ ನಕ್ಕ.
ನಮಗೆ ಬೇಕಿರುವುದು ಯುದ್ಧವನ್ನು ಗೆದ್ದು ಕೊಡುವವರು. ನೀನು ಮೃಗಬೇಟೆಯಲ್ಲಿ ಆಸಕ್ತಿ ಎಂದೆ. ಸರಿ. ನಿನ್ನ ಗುರಿ ಪರೀಕ್ಷೆಯಾಗಬೇಕಲ್ಲಾ? ಒಂದಷ್ಟು ದೂರ ನಮ್ಮೊಡನೆ ಬರುತ್ತೀಯಾ?
ಅದು ನನ್ನ ಭಾಗ್ಯ ಮಹಾಪ್ರಭೂ.
ಲಿಂಗರಾಜ ಎಡಬಲಗಳನ್ನು ವೀಕ್ಷಿಸುತ್ತಾ ಕುದುರೆಯನ್ನು ನಿಧಾನವಾಗಿ ನಡೆಸಿದ. ಅವನ ಎಡಭಾಗದಲ್ಲಿ ಕುದುರೆಯ ಪಕ್ಕದಲ್ಲೇ ಅಯಿಪಂಣ ನಡೆಯತೊಡಗಿದ. ಜೋಡು ನಳಿಗೆ ಬಂದೂಕವನ್ನು ತನ್ನ ಎಡಭುಜದಲ್ಲಿ ಅವನು ತೂಗ ಹಾಕಿಕೊಂಡಿದ್ದ.
ಎಡಭಾಗದಲ್ಲಿ ಗದ್ದೆಗಳಿದ್ದವು. ಗದ್ದೆಯೊಂದರ ಅಂಚಿನಲ್ಲಿ ಎರಡು ಎಮ್ಮೆಗಳು ಮೇಯುತ್ತಿದ್ದವು. ರಾಜನ ಕುದುರೆ ನಿಂತಿತು. ಹಿಂಬಾಲಿಸುತ್ತಿದ್ದ ಪರಿವಾರವೂ ನಿಂತುಬಿಟ್ಟಿತು.
ಅಯಿಪಂಣಾ, ಅಲ್ಲೆರಡು ಎಮ್ಮೆಗಳೋ, ಕೋಣಗಳೋ ಗೋಚರಿಸುತ್ತಿವೆಯೆ?
ಹೌದು ಮಹಾಪ್ರಭೂ.
ನಮ್ಮ ಗುರಿ ಅವುಗಳ ಮೇಲೆ ಕುಳಿತು ಉಣ್ಣಿ ಹೆಕ್ಕುತ್ತಿರುವ ಕಾಗೆಗಳು. ಹೇಳು, ನೀನು ಯಾವುದಕ್ಕೆ ಗುರಿ ಇಡುತ್ತೀಯೆ?
ಎಡಭಾಗದ್ದಕ್ಕೆ ಪ್ರಭೂ.
ಸರಿ ಅಯಿಪಂಣಾ, ಐದರವರೆಗೆ ಗಟ್ಟಿಯಾಗಿ ಹೇಳು. ನೀನು ಐದು ಅಂದಾಗ ಏಕಕಾಲದಲ್ಲಿ ಗುಂಡು ಹಾರಬೇಕು.
ರಾಜ ಪರಿವಾರ ಉಸಿರು ಬಿಗಿ ಹಿಡಿದು ನಿಂತಿತು.
ಒಂದು, ಎರಡು, ಮೂರು, ನಾಲ್ಕು, ಐದು.
ಏಕಕಾಲದಲ್ಲಿ ಎರಡು ಕೋವಿಗಳು ಗರ್ಜಿಸಿದವು.
ಕಾಗೆಗಳೆರಡು ಧೊಪ್ಪನೆ ಕೆಳಗೆ ಉರುಳಿದವು.
ರಾಜ ಪರಿವಾರ ಹರ್ಷೋದ್ಗಾರ ಮಾಡಿತು.
ಗುರಿ ಪರೀಕ್ಷೆಯಲ್ಲಿ ನೀನು ತೇರ್ಗಡೆಯಾದೆ ಅಯಿಪಂಣ್ಣ. ನಾಳೆ ನೀನು ಬೆಳಿಗ್ಗೆ ಮಡಿಕೇರಿ ಅರಮನೆಯಲ್ಲಿರಬೇಕು. ಅಲ್ಲಿ ನಿನಗೆ ಇನ್ನೊಂದು ಪರೀಕ್ಷೆ ಇದೆ.
ತಮ್ಮ ಅನುಗ್ರಹ ಮಹಾಪ್ರಭೂ.
ಅಯಿಪಂಣ ಮನೆಗೆ ಬಂದವನು ಲಿಂಗರಾಜನೊಡನೆ ನಡೆದ ಸಂಭಾಷಣೆಯನ್ನು, ತನ್ನ ಗುರಿ ಪರೀಕ್ಷೆಯಾದುದನ್ನು ವರದಿ ಮಾಡಿದ.
ಅಯಿಪಂಣನ ಅಮ್ಮ ಚೋಂದಮ್ಮಳಿಗೆ ಗಾಬರಿಯಾಯಿತು.
ನೀನು ಅಧಿಕ ಪ್ರಸಂಗಿತನ ಮಾಡಹೋಗಿ ಮೈಮೇಲೆ ಎಳೆದುಕೊಂಡಂತಾಯಿತು. ರಾಜನ ಕಣ್ಣಿಗೆ ನೀನೇಕೆ ಬೀಳಬೇಕಿತ್ತು? ಅರಸನ ಮುಂದಿರಬೇಡ ಕುದುರೆಯ ಹಿಂದಿರಬೇಡ ಎಂಬ ಗಾದೆ ಮಾತು ನಿನಗೆ ಯಾಕೆ ನೆನಪಾಗಲಿಲ್ಲ? ಇವನ ಅಣ್ಣ ದೊಡ್ಡವೀರ ರಾಜ ಮಡಿಕೇರಿ ಅರಮನೆಯಲ್ಲಿ ಎಷ್ಟು ಜನರನ್ನು ಕೊಲ್ಲಿಸಿಲ್ಲ? ಪನ್ನೆಂಗಾಲತಮ್ಮೇ, ನಿನಗೆ ಇನ್ನೇನು ಕಾದಿದೆಯೊ?
ಅಮ್ಮಾ, ನೀನು ಏನೇನೋ ಊಹಿಸಿಕೊಳ್ಳಬೇಡ. ಯಾವನೇ ರಾಜ ಕಾರಣವಿಲ್ಲದೆ ಯಾರ ಪ್ರಾಣವನ್ನೂ ತೆಗೆಯುವುದಿಲ್ಲ. ಲಿಂಗರಾಜ ನನ್ನ ಗುರಿಯನ್ನು ಮೆಚ್ಚಿಕೊಂಡಿದ್ದಾನೆ. ನನ್ನನ್ನು ಕಾರ್ಯಕಾರನನ್ನಾಗಿ ಮಾಡುತ್ತಾನೆ ನೋಡುತ್ತಿರು.
ಆದರೂ ಚೋಂದಮ್ಮಳ ಕಳವಳ ದೂರವಾಗಿರಲಿಲ್ಲ.
ಅರಮನೆಗೆ ಹಿಂದಿರುಗಿದ ರಾಜ ಲಾಯದ ಅಧಿಕಾರಿಯನ್ನು ಕರೆದ. ಅತ್ಯಂತ ತಂಟೆಕೋರ ಕುದುರೆಯೊಂದನ್ನು ಮರುದಿನ ಬೆಳಿಗ್ಗೆ ಅರಮನೆಯೆದುರು ತಂದು ನಿಲ್ಲಿಸ ಬೇಕೆಂದು ಆಜ್ಞಾಪಿಸಿದ.
ಬೆಳಿಗ್ಗೆ ಅಯಿಪಂಣ ನಿರೀಕ್ಷಗಿಂತಲೂ ಮೊದಲೇ ಅರಮನೆ ತಲುಪಿದ. ಅವನಿಗಾಗಿ ಅಸಾಧ್ಯ ತಂಟೆಕೋರ ಕುದುರೆಯೊಂದು ಕಾಯುತ್ತಿತ್ತು. ಅದು ಈವರೆಗೆ ಯಾರನ್ನೂ ಸವಾರಿಗೆ ಬಿಟ್ಟಿರಲಿಲ್ಲ. ಅದರ ಪೆರ್ಚಿ ತೆಗೆಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
ಅಯಿಪಂಣನ ಅಣ್ಣ ಕರಣಿಕ ಮುದ್ದಯ್ಯ ತಮ್ಮನ ಹಾದಿ ನೋಡುತ್ತಿದ್ದ. ತಮ್ಮನಿಗೇನು ಕಾದಿದೆಯೋ ಎಂಬ ಕಳವಳ ಮುದ್ದಯ್ಯನ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಅಯಿಪಂಣ ಬಂದವನು ರಾಜನ ಪಾದಮುಟ್ಟಿ ನಮಸ್ಕರಿಸಿದ.
ನಿನಗಾಗಿ ಕಾಯುತ್ತಿದ್ದೆ ಅಯಿಪಂಣ. ಈಗ ನಿನ್ನ ವೇಗದ ಪರೀಕ್ಷೆಯಾಗಲಿದೆ. ಇಲ್ಲೊಂದು ಕುದುರೆ ನಿನ್ನನ್ನು ಎದುರು ನೋಡುತ್ತಿದೆ. ನೀನು ಭಾಗಮಂಡಲಕ್ಕೆ ಹೋಗಿ ಭಗಂಡೇಶ್ವರ ದೇವಾಲಯದ ಅರ್ಚಕರಿಂದ ಪುಷ್ಪ ಪ್ರಸಾದ ತರಬೇಕು. ನಿನ್ನ ಅವಧಿ ಎರಡು ಗಂಟೆಗಳು. ತಡವಾದರೆ ನಿನ್ನ ಶಿರಚ್ಛೇದನವಾಗುತ್ತದೆ. ನೀನು ಬೇರೆ ಕುದುರೆಯನ್ನು ಬಳಸುವಂತಿಲ್ಲ.

ಮಡಿಕೇರಿಯ ಆ ಚಳಿಯಲ್ಲೂ ಅಣ್ಣ ಮುದ್ದಯ್ಯ ಬೆವತು ಹೋದ.

ಅಯಿಪಂಣ ಕುದುರೆಯನ್ನು ಪರೀಕ್ಷಕ ದೃಷ್ಟಿಯಿಂದ ನೋಡಿದ. ಅದು ಸವಾರಿಯಲ್ಲಿ ಪಳಗದ ಕುದುರೆ ಎನ್ನುವುದನ್ನು ಅರಿತುಕೊಂಡ. ಅವನು ಕುದುರೆಗೊಂದು ಪ್ರದಕ್ಷಿಣೆ ಬಂದ. ಅದರ ಕತ್ತಿನ ಭಾಗವನ್ನು ಮೊದಲು ಮಾಲೀಸು ಮಾಡಿದ. ಆಮೇಲೆ ತಲೆಯನ್ನು ಉಜ್ಜಿದ. ಅದಾಗಿ ಹೊಟ್ಟೆಯ ಕೆಳಗಿನಿಂದ ವೃಷಣಗಳತ್ತ ಕೈ ತಂದು ಆಪ್ಯಾಯಮಾನವಾಗಿ ತುರಿಸತೊಡಗಿದ. ರಕ್ತ ಹೀರುತ್ತಿದ್ದ ಉಣ್ಣಿಗಳನ್ನು ಕುದುರೆಗೆ ನೋವಾಗದಂತೆ ಕಿತ್ತೆಸೆದ. ಮತ್ತೊಮ್ಮೆ ಕುದುರೆಯ ಕತ್ತನ್ನು ಸವರಿ ಅದರ ಕೆನ್ನೆಗೆ ತನ್ನ ಹಣೆಯನ್ನು ತಾಗಿಸಿದ. ಕುದುರೆ ತನ್ನ ದೊರಗು ನಾಲಿಗೆಯಿಂದ ಅಯಿಪಂಣನ ಕೈಯನ್ನು ನೆಕ್ಕಿತು. ಅಶ್ವ ಹೃದಯ ನಿನಗೆ ಅರ್ಥವಾಯಿತು ಮಗನೇ ಎಂದು ಅಯಿಪಂಣ ತನಗೆ ತಾನೇ ಹೇಳಿಕೊಂಡ. ಮತ್ತೆ ತಡಮಾಡಲಿಲ್ಲ. ರಾಜನಿಗೆ ವಂದಿಸಿ ಕುದುರೆ ಏರಿ ಮುಂದಕ್ಕೆ ಬಾಗಿ ಅದರ ಎರಡೂ ಕೆನ್ನೆಗಳನ್ನು ಮಾಲೀಸು ಮಾಡಿ ಛಲೋ ಮೇರೆ ಬುಲ್‌ ಬುಲ್ ‌ಅಂದ.
ಕುದುರೆ ಭಾಗಮಂಡಲದತ್ತ ದೌಡಾಯಿಸಿತು.

ಇದೆಲ್ಲವನ್ನೂ ರಾಣೀವಾಸದ ಕೋಣೆಯೊಂದರಿಂದ ಲಿಂಗರಾಜನ ಹಿರಿಮಗಳು ಮುದ್ದಮ್ಮ ನೋಡುತ್ತಿದ್ದಳು. ಅಯಿಪಂಣನ ಸುಪುಷ್ಟ, ನೀಳ, ಆರೋಗ್ಯವಂತ ಶರೀರ ಅವಳ ಅನಾಘ್ರಾತ ಸುಕೋಮಲ ಕಾಯವನ್ನು ನವಿರಾಗಿ ಪುಳಕಗೊಳಿಸಿ ಹಗಲುಗನಸು ಕಾಣುವಂತೆ ಮಾಡಿತ್ತು. ಮೂರ್ನಾಡಿನಲ್ಲಿ ಅಯಿಪಂಣ ಮಹಾರಾಜರನ್ನು ಗೌರವಿಸಿದ್ದು, ಮಹಾರಾಜರು ಅಯಿಪಂಣನ ಗುರಿ ಪರೀಕ್ಷೆ ಮಾಡಿದ್ದು, ಎಲ್ಲವನ್ನೂ ತಾಯಿ ಬೆಳಿಗ್ಗೆ ಅವಳಲ್ಲಿ ಹೇಳಿದ್ದಳು. ಅಸಾಧ್ಯ ತುಂಟ ಕುದುರೆಯನ್ನು ಅಯಿಪಂಣ ಪಳಗಿಸಿದ ರೀತಿಯನ್ನು ನೋಡಿ ಅವಳಿಗೆ ಅವನಲ್ಲಿ ಅನುರಾಗ ಮೂಡಿತು. ಎರಡು ಗಂಟೆಯಲ್ಲಿ ಮಡಿಕೇರಿಗೆ ತಿರುಗಿ ಬರಲಾಗದಿದ್ದರೆ ಅಪ್ಪ ಅಯಿಪಂಣನ ತಲೆ ತೆಗೆದು ಬಿಡುತ್ತಾನೆಯೆ? ತಲೆ ಹೋಗುವ ಪಂಥವನ್ನು ಅವನು ಯಾಕೆ ಒಪ್ಪಿಕೊಳ್ಳಬೇಕಿತ್ತು? ಉಸಿರು ಬಿಗಿದುಕೊಂಡು ಅವಳು ಎರಡು ಗಂಟೆಗಳ ಕಾಲ ಅದೇ ಕಿಟಕಿಯ ಬಳಿ ಕಳೆದಳು.

ಎರಡು ಗಂಟೆಗಳಿಗೆ ಇನ್ನೂ ಸ್ವಲ್ಪ ಸಮಯ ಇದೆ ಎನ್ನುವಾಗ ಅಯಿಪಂಣ ವಾಯುವೇಗದಿಂದ ಅರಮನೆಯತ್ತ ಕುದುರೆಯನ್ನು ದೌಡಾಯಿಸುತ್ತಾ ಬಂದ. ಅವನ ತಲೆ ದೂರದಿಂದ ಗೋಚರವಾಗುವಾಗ ಪರಿಜನರು, ಪುರ ಜನರು ಹರ್ಷೋದ್ಗಾರ ಮಾಡಿದರು. ಅಯಿಪಂಣ ಕುದುರೆಯಿಂದ ಇಳಿದವನು ರಾಜನ ಬಳಿಗೆ ಹೋಗಿ ಪುಷ್ಪ ಪ್ರಸಾದವನ್ನಿತ್ತು ಪಾದ ನಮಸ್ಕಾರ ಮಾಡಿದ.

ಮಹಾರಾಜರೇ, ನನ್ನ ತಲೆ ಉಳಿಯುತ್ತದಲ್ಲವೆ?

ಲಿಂಗರಾಜ ಅವನನ್ನು ಮೆಚ್ಚುಗೆಯಿಂದ ನೋಡಿದ.

ನಮ್ಮಿಂದ ಪಳಗಿಸಲಾಗದ ಆ ಕುದುರೆಯ ಮೇಲೇರಿ ಅಷ್ಟು ಸಲೀಸಾಗಿ ಭಾಗಮಂಡಲಕ್ಕೆ ಹೋಗಿ ಬಂದೆಯಲ್ಲ ಅಯಿಪಂಣ್ಣ ಏನು ಮೋಡಿ ಮಾಡಿದೆ ನೀನು?
ಸ್ವಲ್ಪ ಪ್ರೀತಿ ತೋರಿಸಿದೆ ಅಷ್ಟೇ. ಪ್ರೀತಿಗೆ ಸೋಲದ ಜೀವಿ ಜಗತ್ತಿನಲ್ಲಿ ಯಾವುದಿದೆ ಮಹಾಪ್ರಭೂ?

ಭೇಷ್‌ ಅಯಿಪಂಣ. ಗುರಿ ಮತ್ತು ವೇಗ ಎರಡರಲ್ಲೂ ನೀನು ನನ್ನ ನಿರೀಕ್ಷೆಯನ್ನು ಮೀರಿಸಿದ್ದೀಯಾ. ನಿನಗೆ ದೊಡ್ಡದೊಂದು ಜವಾಬ್ದಾರಿಯನ್ನು ವಹಿಸಿ ಕೊಡಲಿದ್ದೇನೆ. ನಾಳೆ ಮಧ್ಯಾಹ್ನದೊಳಗೆ ನಿನ್ನ ಹಿರಿಯರೊಂದಿಗೆ ಇಲ್ಲಿಗೆ ಬಂದು ಬಿಡು.

ಅಯಿಪಂಣ ತಲೆ ಕೆರೆದುಕೊಂಡ.

ಒಂದು ಕೋರಿಕೆ ಪ್ರಭೂ. ಈ ತಂಟೆಕೋರ ಕುದುರೇನ ಪ್ರೀತಿಸುತ್ತಿದ್ದೇನೆ. ನನಗಿದನ್ನು ಮಹಾರಾಜರು ಆಶೀರ್ವಾದ ರೂಪದಲ್ಲಿ ದಯಪಾಲಿಸಬಹುದೆ?
ಇಟ್ಟುಕೋ ಅಯಿಪಂಣ. ಅದು ಕೂಡಾ ನಿನ್ನನ್ನು ಇಷ್ಟಪಡುತ್ತಿದೆ. ಇಲ್ಲದಿದ್ದರೆ ಈ ಪರೀಕ್ಷೆಯಲ್ಲಿ ನೀನು ತೇರ್ಗಡೆಯಾಗುತ್ತಿರಲಿಲ್ಲ.
ಅಯಿಪಂಣನನ್ನು ಬೀಳ್ಕೂಟ್ಟು ಲಿಂಗರಾಜ ರಾಣೀವಾಸಕ್ಕೆ ಬಂದ.
ಪಟ್ಟದ ರಾಣಿ ದೇವಕಿಯಲ್ಲಿ ಕೇಳಿದ.
ದೇವಿಯವರಿಗೆ ಅಯಿಪಂಣ ಹಿಡಿಸಿದನೆ?
ನನಗೆ ಯಾಕೆ ಹಿಡಿಸಬೇಕು? ಮಗಳು ಮುದ್ದಮ್ಮಳಿಗೆ ಹಿಡಿಸಿದರಾಯ್ತಪ್ಪ.
ರಾಣಿಯ ಹಾಸ್ಯಕ್ಕೆ ಲಿಂಗರಾಜನಿಗೆ ನಗು ಬಂತು. ರಾಣಿ ಹೇಳಿದಳು.
ಅಯಿಪಂಣ ನಮ್ಮ ಮುದ್ದಮ್ಮಳಿಗೆ ಹೇಳಿ ಮಾಡಿಸಿದಂತಿದ್ದಾನೆ. ಇವನು ರಾಜಕುಮಾರ ಚಿಕ್ಕವೀರನ ಬಲಗೈಯಾದರೆ ಕೊಡಗಿನ ಸಾರ್ವಭೌಮತೆಯನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಾಗದು.

ಒಂದು ಶುಭ ಮುಹೂರ್ತದಲ್ಲಿ ಮುಕ್ಕಾಟೀರ ಅಯಿಪಂಣ ಲಿಂಗಧಾರಣೆ ಮಾಡಿ ಶರಣ ಚೆನ್ನಬಸಪ್ಪನಾಗಿ ಲಿಂಗರಾಜನ ಹಿರಿಮಗಳು ಮುದ್ದಮ್ಮಳ ಕೈ ಹಿಡಿದ. ಅವನಿಗೆ ಹೊರ ಮಲೆನಾಡಿನ ಕಳಕೇರಿ ನಿಡುಗಣೆ ಗ್ರಾಮವನ್ನು ರಾಜ ಉಂಬಳಿಯಾಗಿ ನೀಡಿದ. ಅಳಿಯ ಅಯಿಪಂಣ ಅಲ್ಲೇ ನೆಲೆಗೊಂಡ.
ಲಿಂಗರಾಜನ ದಿವಾನ ಅಪ್ಪಾರಂಡ ಬೋಪು ಒಮ್ಮೊಮ್ಮೆ ಕಳಕೇರಿಗೆ ಭೇಟಿ ನೀಡುತ್ತಿದ್ದ. ಲಿಂಗರಾಜನ ಮಡದಿ ದೇವಕಿ ಮತ್ತು ಅಳಿಯ ಅಯಿಪಂಣ ಕೊಡವರಾಗಿದ್ದುದು ಅವನ ಜಾತಿ ವಾಸನೆಯನ್ನು ಕೆರಳಿಸಿತ್ತು. ಆದರೆ ಅವರಿಬ್ಬರೂ ಲಿಂಗ ಕಟ್ಟಿಸಿಕೊಂಡು ಲಿಂಗಾಯತರಾದದ್ದು ಸ್ವಲ್ಪ ಅಸಮಾಧಾನವನ್ನೂ ಉಂಟುಮಾಡಿತ್ತು.

ಏನೇ ಆದರೂ ಅಯಿಪಂಣಾ, ನೀನು ಕೊಡವನಾಗಿದ್ದವನು ಲಿಂಗಾಯಿತನಾಗಿ ಮತಾಂತರ ಹೊದಂಬಾರದಿತ್ತು.
ಒಂದು ಬಾರಿ ಬೋಪು ಹೇಳಿದ.
ರಾಜನ ಅಳಿಯನಾಗುವುದಕ್ಕೆ ಬೇರೆ ಯಾವ ಹಾದಿಯಿತ್ತು ಬೋಪು ಮಾವಾ.
ಅದು ನಿಜಾ ಅನ್ನು. ಈ ಹಾಲೇರಿ ರಾಜರುಗಳು ಕೊಡವ ಹೆಣ್ಣುಗಳಿಗೆ ಲಿಂಗಕಟ್ಟಿ ಮದುವೆಯಾಗುತ್ತಾರೆ. ಕೊಡವ ಗಂಡುಗಳನ್ನು ಮತಾಂತರಿಸಿ ಅಳಿಯಂದಿರನ್ನಾಗಿ ಮಾಡಿ ಕೊಳ್ಳುತ್ತಾರೆ. ಅಳಿಯಂದಿರು ರಾಜರುಗಳಾಗುವುದಿಲ್ಲ. ಇವರು ದೂರದ ಇಕ್ಕೇರಿಯಿಂದ ಇಲ್ಲಿಗೆ ಬಂದವರು. ಕೊಡಗು ನಮ್ಮದು. ಕೊಡವರು ಕೊಡಗಿನ ರಾಜರಾಗುವುದು ಯಾವಾಗ?

ಅಯಿಪಂಣನ ಹಣೆಯಲ್ಲಿ ಬೆವರ ಹನಿಗಳು ಕಾಣಿಸಿಕೊಂಡವು.
ನಾನು ಏನು ಮಾಡಬೇಕೂಂತೀರಿ ಬೋಪು ಮಾವಾ?

ನೀನು ಚಿಕ್ಕವೀರನ ಅಕ್ಕನ ಗಂಡ. ನಿಧಾನವಾಗಿ ಅರಮನೆಯ ರಾಜಕಾರಣವನ್ನು ಅರ್ಥಮಾಡಿಕೋ. ಲಿಂಗರಾಜನ ರಾಣಿ ನಮ್ಮವಳೇ, ಕೊಡವಳು. ಅವಳ ಮನಸ್ಸನ್ನು ಗೆಲ್ಲು. ಚಿಕ್ಕವೀರ ದುರ್ಬಲನಂತೆ ಕಾಣುತ್ತಿದ್ದಾನೆ. ಅತ್ತೆಯೇ ಸ್ವತಾಃ ಅಳಿಯನೇ ರಾಜನಾಗಲಿ ಎನ್ನುವಂತಹಾ ವಾತಾವರಣವನ್ನು ಸೃಷ್ಟಿಸು.
ಅಯಿಪಂಣನ ಮನಸ್ಸು ಹಿಂದೇಟು ಹಾಕಿತು. ಬೋಪುಮಾಮನಿಗೆ ಬೇಸರ ಬೇಡವೆಂದು ಅವನ ಪ್ರಸ್ತಾಪವನ್ನು ಒಪ್ಪಿಕೊಂಡ.

ಮದುವೆಯಾಗಿ ಮೂರನೆಯ ವರ್ಷ ವಿಷಮಶೀತಜ್ವರದಿಂದ ಹಾಸಿಗೆ ಹಿಡಿದ ಮುದ್ದಮ್ಮ ಕೊನೆಯುಸಿರೆಳೆದಳು.
ಅನೂಹ್ಯವಾಗಿ ಒದಗಿಬಂದಿದ್ದ ಅರಮನೆಯ ಸಂಬಂಧವೇ ಕಡಿದು ಹೋಯಿತೆಂದು ಅಯಿಪಂಣ ಚಿಂತೆಯಿಂದ ಕೊರಗಿ ಕೃಶನಾಗತೊಡಗಿದ.
ಅದನ್ನು ರಾಣಿ ದೇವಕಿ ಗಮನಿಸಿದಳು.
ಮಗಳು ಮುದ್ದಮ್ಮ ಅಕಾಲಿಕವಾಗಿ ಶಿವನ ಪಾದ ಸೇರಿಕೊಂಡಳು. ಇನ್ನು ಅಯಿಪಂಣ ನಮ್ಮ ಅಳಿಯನಾಗಿರುತ್ತಾನಾ ಮಹಾರಾಜಾ?
ಸಂಬಂಧ ಹಾಗೆ ಸುಲಭವಾಗಿ ಕಡಿದು ಹೋಗುತ್ತದಾ ರಾಣಿ?
ಅವನು ಶಿವದಾರವನ್ನು ಬಿಚ್ಚಿಬಿಟ್ಟರೆ ಸಂಬಂಧ ಹರಿದು ಹೋಗುತ್ತದಲ್ಲಾ?
ಅವನಿಗೆ ಅಷ್ಟು ಧೈರ್ಯವಿದೆಯೆ?
ಅನಿವಾರ್ಯತೆ ಅವನಿಗೆ ಆ ಧೈರ್ಯವನ್ನು ತಂದುಕೊಡಬಲ್ಲುದು ಮಹಾರಾಜಾ. ಕಲ್ಲಿನಂಥಾ ಯುವಕ ಅವನು. ಕಲ್ಲಿನಿಂದ ನೀರು ತೆಗೆಯಬಲ್ಲವನು. ನಾಳೆ ಒಬ್ಬ ಕೊಡವರ ಹೆಣ್ಣನ್ನು ಅವರ ಕುಲಾಚಾರ ಪದ್ಧತಿಯಂತೆ ಮದುವೆಯಾಗುತ್ತಾನೆ. ಆಗ ಅವನಿಗೆ ಶಿವದಾರದ ಅಗತ್ಯವೇನಿರುತ್ತದೆ?
ಅವನು ಯಾರನ್ನು ಬೇಕಾದರೂ ಕಟ್ಟಿಕೊಳ್ಳಲಿ. ಅದರಿಂದ ಅರಮನೆಗೆ ಆಗುವ ನಷ್ಟವೇನು?
ಅರಮನೆಯ ಎಷ್ಟು ರಹಸ್ಯಗಳು ಅವನಿಗೆ ತಿಳಿದಿಲ್ಲ? ಅಂಥವನು ಅರಮನೆಯ ವರ್ತುಲದಿಂದ ಹೊರ ಹೋದರೆ ಅರಮನೆಗೆ ಕೇಡು ಬಗೆಯದಿರುತ್ತಾನೆಯೆ? ನಮ್ಮ ಚಿಕ್ಕವೀರನಿಗೆ ಅವನು ಶತ್ರುವಾಗಿ ಬಿಡಬಹುದು. ಅಥವಾ ನಮ್ಮ ವಿರುದ್ಧ ಇಂಗ್ಲೀಷರಲ್ಲಿ ಚಾಡಿ ಹೇಳಿ ಪಿತೂರಿ ಹೂಡಬಹುದು.
ಲಿಂಗರಾಜನಿಗೆ ಮಡದಿಯ ದೂರಾಲೋಚನೆ ನಿಜವೆನ್ನಿಸಿತು.
ಮಹಾರಾಣಿ ಹೇಳುವುದರಲ್ಲಿ ಅರ್ಥವಿದೆ. ಆದರೆ ಅಯಿಪಂಣನನ್ನು ನಾವು ಅರಮನೆಯಲ್ಲೇ ಉಳಿಸಿಕೊಳ್ಳುವುದಕ್ಕಾಗುತ್ತದೆಯೆ? ಯಾಕಾಗುವುದಿಲ್ಲ? ನಮ್ಮ ಎರಡನೆಯ ಮಗಳು ದೇವಮ್ಮಳನ್ನು ಅವನಿಗೆ ವಿವಾಹ ಮಾಡಿಕೊಟ್ಟರಾಯಿತು.
ಲಿಂಗರಾಜನಿಗೆ ಅದು ಸರಿಯಾದ ರಾಜಕೀಯ ನಿರ್ಧಾರವಾಗಿ ಕಂಡಿತು. ಒಂದು ಶುಭದಿನ ಅಯಿಪಂಣನೊಡನೆ ದೇವಮ್ಮಳ ವಿವಾಹ ವೈಭವದಿಂದ ನಡೆಯಿತು.
ಅಳಿಯ ಅಯಿಪಂಣನಿಗೆ ಅರಮನೆಯ ಒಂದು ಭಾಗದಲ್ಲಿ ಪತ್ನಿಯೊಡನೆ ವಾಸಿಸುವ ಭಾಗ್ಯ ದೊರೆಯಿತು.
ದಿವಾನ ಬೋಪು ಒಂದು ದಿನ ಅಯಿಪಂಣನನ್ನು ಭೇಟಿಯಾದ.
ಮುದ್ದಮ್ಮ ಹೋದದ್ದು ಒಳ್ಳೆಯದೇ ಆಯ್ತು ಅಯಿಪಂಣಾ. ಅವಳು ಬದುಕಿರುತ್ತಿದ್ದರೆ ದೇವಮ್ಮಳನ್ನು ಬೇರೊಬ್ಬ ವಿವಾಹವಾಗಿ ನಿನಗೊಬ್ಬ ಸ್ಪರ್ಧಿ ಹುಟ್ಟಿಕೊಳ್ಳುತ್ತಿದ್ದ.
ಅಯಿಪಂಣ ನಸುನಕ್ಕ.
ಇನ್ನು ಮಹಾರಾಜನಿಗೆ ಹತ್ತಿರವಾಗು. ಎಲ್ಲದಕ್ಕೂ ಅವನು ನಿನ್ನನ್ನು ಅವಲಂಬಿಸುವಂತಾಗಲಿ. ಚಿಕ್ಕವೀರ ಆಗ ತಾನೇ ತಾನಾಗಿ ಮೂಲೆ ಪಾಲಾಗುತ್ತಾನೆ. ಸಿಂಹಾಸನದಲ್ಲಿ ಒಬ್ಬ ಕೊಡವ ಕೂತು ರಾಜ್ಯವಾಳುವುದನ್ನು ಕಾಣಬೇಕೆಂಬ ನನ್ನ ಮಹತ್ವಾಕಾಂಕ್ಷೆ ಆಗ ಈಡೇರುತ್ತದೆ.
ಈ ಪ್ರಯತ್ನದಲ್ಲಿ ನಾನು ಸೋತರೇನು ಮಾಡುವುದು ಬೋಪು ಮಾವಾ.
ರಾಜನ ಮತ್ತು ಚಿಕ್ಕವೀರನ ವಿರುದ್ಧ ಇಂಗ್ಲೀಷರ ಮನಸ್ಸು ಕೆಡುವಂತೆ ಮಾಡಿಬಿಡು. ಚಿಕ್ಕವೀರನಿಗೆ ಸಿಂಹಾಸನ ತಪ್ಪಿದರೆ ಅದು ನ್ಯಾಯ ಬದ್ಧವಾಗಿ ದೊರಕಬೇಕಾದದ್ದು ನಿನಗೇ.
ಅಳಿಯ ಅಯಿಪಂಣ ಕಣ್ಣು ಮುಚ್ಚಿಕೊಂಡು ಕನಸು ಕಾಣತೊಡಗಿದ.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪ ನಿವೇದನೆ
Next post ನಗೆ ಡಂಗುರ – ೬೪

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys