ಮಲವಯ್ಯ ಶೆಟ್ಟಿ

ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆಂದು ತೋರುತ್ತದೆ.

ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ ತಂಬುಲದ ಚೀಲು. ಅದೆಲ್ಲ ಘಟ್ಟದ ಸಾರಿಗೆಯ ಸಿಂಗಾರ. ಕರಿಯೆತ್ತಿಗೆ ಕಮಲದ ಹೂ. ಬಿಳಿಯೆತ್ತಿಗೆ ಗೆಜ್ಜಿಸರ. ಸಾರಂಗದೆತ್ತಿಗೆ ಸರಗಂಟಿ ಕಟ್ಟಿದ್ದಾನೆ.

ಬಟ್ಟಲಲ್ಲಿ ಉಂಡು, ತೊಟ್ಟಲಲ್ಲಿ ಆಡುವ ತಂಗಿಯನ್ನು ಬಿಟ್ಟು ಶೆಟ್ಟಿ ಮಲ್ಲಾಡ ದೇಶಕ್ಕೆ ಹೊರಟಿದ್ದಾನೆ. ಅಂಗಳದಲ್ಲಿ ಆಡಿ, ಗಂಗಾಳದಲ್ಲಿ ಉಣ್ಣುವ ತಂಗಿಯನ್ನು ಬಿಟ್ಟು ಶೆಟ್ಟಿ ಘಟ್ಟದ ಸಾರಿಗೆಗೆ ಹೊರಟಿದ್ದಾನೆ.

ಶುಂಠಿ, ಮೆಣಸು, ಯಾಲಕ್ಕಿ, ಲವಂಗ ಇವುಗಳನ್ನಲ್ಲ ಹೇರು ಹೇರು ಖರೀದಿ ಮಾಡಿದ್ದಾನೆ. ಅಡಿಕೆ ಎರಡೆರಡು ಹೇರು ಖರೀದಿ ಮಾಡಿದ್ದಾನೆ. ತನ್ನ ಕರಿ ಎತ್ತು, ಬಿಳಿ ಎತ್ತು, ಸಾರಂಗದ ಎತ್ತುಗಳ ಮೇಲೆ ಆ ಹೇರುಗಳನ್ನೆಲ್ಲ ಹೇರಿಕೊಂಡು ಘಟ್ಟ ಇಳಿದು ಬಯಲುನಾಡಿಗೆ ಬಂದನು. ಬರುವಾಗ ದಾರಿಯಲ್ಲಿ ವಿಜಯನಗರವನ್ನು ದಾಟಿ ಬಾದಾಮಿಗೆ ಬಂದು ಸಂಗನಬಸವನ ಗುಡಿಯ ಮುಂದೆ ತನ್ನ ಹೇರು ಇಳಿಸಿ, ವಿಶ್ರಾಂತಿಗಾಗಿ ತಂಗಿದನು. ಅಲ್ಲಿಯ ಪೇಟೆಯಲ್ಲೆಲ್ಲ ಅಡ್ಡಾಡಿ, ಕೊಂಡುಕೊಳ್ಳಬೇಕಾದುದನ್ನು ಕೊಂಡುಕೊಂಡು ಬರುವಾಗ ಅಲ್ಲೊಬ್ಬ ಥಾಟಗಿತ್ತಿಯನ್ನು ಕಂಡನು. ಆಕೆ ಬಾದಾಮಿಪೇಟೆಯ ಬಸವಿ.

ಶೆಟ್ಟಿ ಊರು ಬಿಟ್ಟು ಹನ್ನೆರಡು ವರ್ಷವಾಗಿತ್ತು. ಮನಸ್ಸು ಚಂಚಲವಾಯಿತು, ಶೆಟ್ಟಿ ಆ ಥಾಟಗಿತ್ತಿಗೆ ಹೇಳಿಕಳಿಸಿದನು.

ತು೦ಬಿಸೂಸುವ ಬೆಳದಿಂಗಳಿನಲ್ಲಿ ಇಂಬಾದ ಸೆಳೆಮಂಚ ; ದಿಂಬಿಗೊರಗಿ ಮಲಗಿದ್ದಾಳೆ ಆ ಬಸವಿ. ಶೆಟ್ಟಿಯಾದರೋ ಸಿಂಗಾರವನ್ನೇ ಉಟ್ಟು, ಸಿಂಗಾರವನ್ನೇ ತೊಟ್ಟು ಆ ಬಸವಿಯ ಮನೆಗೆ ಹೋದನು.

ಆದರೆ ವಿಧಿಯು ಅಲ್ಲೊಂದು ಬೇರೆ ಆಟ ಹೂಡಿದೆ.

ಶೆಟ್ಟಿ ಬಸವಿಗೆ ಎಲೆಕೊಡಹೋದನು. ಅಡಿಕೆ ಕೊಡಹೋದನು. ಕೊಡ ಮಾಡಿದ ಎಲೆ ಅಡಿಕೆ ಉಡಿಯಲ್ಲಿ ಬೀಳದೆ ಕಡೆಗೆ ಬಿದ್ದವು.

“ಅತ್ತ ಇತ್ತ ನೋಡುತ್ತೀಯಲ್ಲ ! ಚಿತ್ತ ಎರಡು ಮಾಡುತ್ತಿಯಲ್ಲ !! ಮನಸ್ಸಿಲ್ಲದಿದ್ದರೆ ಮಾತನ್ನೇಕೆ ಕೊಟ್ಟೆ?” ಎಂದು ಕೇಳಿದನು ಶೆಟ್ಟಿ.

“ಅತ್ತ ಇತ್ತ ನೋಡಿಯೇ ಇಲ್ಲ. ಚಿತ್ತ ಎರಡು ಮಾಡಿಯೇ ಇಲ್ಲ. ಮಲವೈನ ಆಣೆಮಾಡಿ ಹೇಳುತ್ತೇನೆ. ನನ್ನ ಮನಸ್ಸು ಎರಡಿಲ್ಲ” ಎಂದಳಾಕೆ.

“ಮಲವೈನ ಹೆಸರುಗೊಂಡಿ. ಆತನ ಆಣೆ ಮಾಡಿದಿ. ಮಲವೈಶೆಟ್ಟಿ ನಿನಗೇನಾಗಬೇಕು? ನಿನ್ನ ಹುಟ್ಟಿದೂರು ಯಾವುದು ? ಯಾವ ಊರಿಗೆ ನಿನ್ನನ್ನು ಕೊಟ್ಟಿದ್ದು ? ಎಲ್ಲವನ್ನೂ ಸರಿಯಾಗಿ ಹೇಳು- ತಂದೆಯ ಹೆಸರೇನು- ತಾಯಿಯ ಹೆಸರೇನು ? ಒಡಹುಟ್ಟಿದ ಅಣ್ಣನ ಹೆಸರೇನು ?” ಎಂದು ಕೇಳಿದ ಶೆಟ್ಟಿಗೆ ಬಸವಿ ಈ ರೀತಿಯಾಗಿ ಮರುನುಡಿಯುತ್ತಾಳೆ –

“ತಂದೆ ಸುಂಕುಬಾಳ, ತಾಯಿ ಗಂಗಾಬಾಳ. ಒಡಹುಟ್ಟಿದ ತಂಗಿಯ ಹೆಸರು ಮಾಸುಂದರಿ. ಅಣ್ಣ ಮಲವೈಶೆಟ್ಟಿ” ಬಸವಿ ಮರುನುಡಿಯುವಾಗ ಶೆಟ್ಟಿಯು ಆಕೆಯ ಮುಖನೋಡಿ, ಹಣೆಯ ಮೇಲಿರುವ ಕಲೆ ಕಂಡು ದಿಗ್ಭ್ರಮೆಗೊಂಡನು. ತೊಟ್ಟಿಲಲ್ಲಿ ಆಡುವಾಗ ಬಟ್ಟಲಲ್ಲಿ ಕುಡಿಯುವಾಗ ಕಟ್ಟೆಯ ಕೆಳಗೆ ಬಿದ್ದ ಕಚ್ಚು ಕಂಡನು ಆ ಶೆಟ್ಟಿ. “ಹುಟ್ಟುದಟ್ಟಿ ಯುಟ್ಟು ಬಟ್ಟಲದನ್ನ ಉಣ್ಣುವಾಗ ನನ್ನ ಮಲವಯ್ಯ ಶೆಟ್ಟಿ ಬಿಟ್ಟು ಹೋಗಿದ್ದಾನೆ – ದುರ್ದೈವದಿಂದ ದಿಕ್ಕುಗೇಡಿಯಾದೆ. ಬಾಳಾಸಾನಿ ಎತ್ತಿಕೊಂಡಳು. ಬಾದಾಮಿ ಪೇಟೆಗೆ ನನ್ನನ್ನು ಬಸವಿ ಬಿಟ್ಟಳು.”

“ನನ್ನನ್ನು ನಾನು ಕಡಿದುಕೊಳ್ಳಲಾ, ತಂಗೀ, ಇರಿದು ಕೊಳ್ಳಲಾ ? ಅಲಗು ಕಟ್ಟಿ ಅದಕ್ಕೆ ಹಾಯಲೇನೇ ತಂಗೀ” ಎಂದು ಹಲುಬಿದನು ಶೆಟ್ಟಿ.

“ಕಡಿದುಕೊಳ್ಳುವುದೂ ಬೇಡ ; ಅಣ್ಣಯ್ಯ, ಇರಿದು ಕೊಳ್ಳುವುದೂ ಬೇಡ. ಅಲಗು ಕಟ್ಟಿ ಅದನ್ನು ಹಾಯುವುದೂ ಬೇಡ- ಅಣ್ಣಯ್ಯ. ಅಣ್ಣಯ್ಯ. ಊರ ಕೋಟೆಯನ್ನು ದಾಟಿದರೆ ಮೂಡಣದ ಕೊಳ್ಳದಲ್ಲಿ ಕೋಟಿಲಿಂಗಗಳು ನೆನೆದಿವೆ. ಅಂಗವನ್ನೇ ವಸ್ತ್ರಮಾಡಿ ಲಿಂಗವನ್ನು ಪೂಜಿಸಿ ನಿನಗೆ ತಟ್ಟಿದ ಇಂದಿನ ಪಾಪವನ್ನು ಹಿಂಗಿಸಣ್ಣ. ಗೋಕಾವಿ ನಾಡಿಗೆ ಹೋಗಿ ಒಂದು ಹಿಂಡು ಆಕಳು ತೆಗೆದುಕೊಂಡು ಬಂದು, ಕೊಳಗೆ ಮೆಟ್ಟಿ ಕೊಂಬ ನೀ ದಾನ ಮಾಡಣ್ಣ. ಆವಾಗ ನಿನ್ನ ಪಾಪ ಪರಿಹಾರ ಅಣ್ಣಯ್ಯ”, ಎಂದು ಉಸುರಿದಳು ಆ ತಂಗಿ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀಲಮೇಘಗಳಾಚೆ
Next post ನಾವು ಬಾಲಕರಹುದೋ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…