ಒಬ್ಬ ನಿಷ್ಟಾವಂತ ಸಾಧಕ ಶಾಂತಿಯನ್ನು ಹುಡುಕಿಕೊಂಡು ಹೊರಟ. ಕಾಡುಮೇಡು, ಬೆಟ್ಟಗುಡ್ಡ ಸುತ್ತಿ ನದಿ ನಾವೆಯಲ್ಲಿ ತೇಲಿ ಕೊನೆಗೆ ಒಂದು ದಟ್ಟ ಅರಣ್ಯದ ಬೆಟ್ಟದಡಿಯ ಗುಹೆಯ ಬಳಿ ಬಂದು ನಿಂತ. ಬಹಳ ಶ್ರಮಿಸಿದ್ದ. ಅವನ ಕೈಕಾಲಿನಲ್ಲಿ ತ್ರಾಣವಿರಲಿಲ್ಲ. ಎದೆಯಲ್ಲಿ ಹತ್ತಿಕ್ಕಿ ತಿನ್ನುತಿತ್ತು ಶಾಂತಿಯ ಹಂಬಲ. ಬಳಲಿದ ಶರೀರ, ಕಾಂತಿಹೀನ ಕಣ್ಣುಗಳು ಅವನ ಆಂತರ್ಯದ ಅಳಲನ್ನು ಹರಿಸುತಿತ್ತು.
ಗುರುವೇ! “ಶಿಷ್ಯನ ಧ್ವನಿ ಕೇಳಿಸಲಿಲ್ಲವೇ?” ಎಂದು ಆರ್ತ ಧ್ವನಿಯಲ್ಲಿ ಕೂಗಿಕೊಂಡ.
“ಶಿಷ್ಮಾ! ನಿನಗೇನು ಬೇಕು? ಏಕ ತೊಳಲುತ್ತಿರುವೇ?” ಹೇಳು ಎಂದರು. ಗುರುವೇ! “ನನಗೆ ಶಾಂತಿ ಬೇಕು. ಅದಕ್ಕೆ ನಾ ಏನಾದರು ಕೊಡ ಬಯಸುವೆ. ನನ್ನ ಕೈ ಕಾಲು, ಮೈ, ತಲೆ, ಎದೆ, ಎಲ್ಲದೂ ನಿಮ್ಮದೇ ಗುರುವೇ, ನನಗೆ ಶಾಂತಿ ಮಾತ್ರ ಕೊಡಿರಿ” ಎಂದ.
“ಶಿಷ್ಕಾ! ನನಗೆ ನಿನ್ನ ದೇಹ ಬೇಡ, ನಾನೇನು ಮಾಂಸಾಹಾರಿಯಲ್ಲ. ನನ್ನ ಕೈ ಕಾಲು ಇರುವಾಗ ನಿನ್ನ ಕೈಕಾಲು ನನಗೆ ಬೇಡ. ಇನ್ನು ಇಬ್ಬರ ತಲೆ ಇಂದ ಇನ್ನೊಬ್ಬರಿಗೆ ಖಂಡಿತ ಉಪಯೋಗವಿಲ್ಲ. ಇನ್ನು ನಿನ್ನ ಎದೆ ಬಡಿತದಿಂದ ನಾ ಬದುಕಿರಲಾರೆ. ನಿನ್ನ ಭಾವದಿಂದ ನಾಹಾಡಲಾರೆ, ಕುಣಿಯಲಾರೆ. ನಾನು ಒಂದೇ ಒಂದು ಕೇಳುತ್ತೇನೆ. ನೀನು ಅದನ್ನು ಕೂಡು” -ಎಂದರು.
ಗುರುಗಳೇ! “ನಾನೇನು ಮಾಡಬೇಕು ಹೇಳಿ” ಎಂದ.
“ನೋಡು ಈ ಗುಹೆಯ ದ್ವಾರದಲ್ಲಿ ಒಂದು ಲಕ್ಷ್ಮಣ ರೇಖೆ ಎಳದಿರುವೆ. ನೀನು ನಿನ್ನ ಮನವನ್ನು ಗೆರೆಯ ಹೊರಗೆ ಬಿಟ್ಟು ನೀನು ಮಾತ್ರ ಗೆರೆಯದಾಟಿ ಗುಹೆಯ ಒಳಗೆ
ಬಾ ನಿನಗೆ ಬೇಕಾದಷ್ಟು ಶಾಂತಿ ದೋಚಿಕೊಂಡು ಹೋಗು” ಎಂದರು.
ಮನವನ್ನು ತೊರೆದ ಶಿಷ್ಯ ಗುಹೆಯ ದ್ವಾರದಲ್ಲಿ ಶಿಲೆಯಂತೆ ನಿಂತು ಬಿಟ್ಟ. ಶಿಷ್ಯ ಒಳಗೆ ಬಾರದಿದ್ದನ್ನು ನೋಡಿ ಗುರುಗಳು ಬಂದು “ನೋಡಿದಿಯಾ! ಈಗ ನಿನ್ನ ಎದೆ ತುಂಬಾ ಶಾಂತಿ ತುಂಬಿ ಬಿಟ್ಟಿದೆ” ಎಂದರು.
“ಧನ್ಯೋಸ್ಮಿ!” ಎಂದು ಶಿಷ್ಯ ನಮಸ್ಕರಿಸಿ ಹಿಂತಿರುಗಿದ.
*****