ನಡುಹಗಲಿನಲಿ ಗಮ್ಮನೆಣಿಕೆ ಇಣಕುವದೊಂದು,
“ಇಂದು ಬಂದದ್ದು ಹೋದದ್ದು ಏನು?”
ಬರಿಗೈಲಿ ಮೊಳಹಾಕಿ ಬಯಲ ಸುತ್ತಿದೆನಷ್ಟೆ!
“ಹಾರುತ್ತ ಹೊರಟಿರುವೆನೆತ್ತ ನಾನು?”
ನಿದ್ದೆಯಿಂದೆಚ್ಚತ್ತು, ನಡು ಇರುಳಿನಲ್ಲೆದ್ದು,
ಬಿಡಿಸುತಿದೆ ‘ಮುಂದೆ ಏನೆಂಬ ಗಂಟು?
ಹಿಂದಿನಂತೆಯೆ ಮುಂದೆ, ಎಂದಿನಂತೆಯೇ ಇಂದೆ’
ಬಯಲನುಡಿಯೊಂದು ಪಡಿನುಡಿವುದುಂಟು!
ಎಚ್ಚತ್ತು ಬೇಸತ್ತು ನಿದ್ರೆಯಲ್ಲಿ ಹೊಕ್ಕೆ;
ನಿದ್ರೆಯಲಿ ತೊಳಲಾಡಿ ಎಚ್ಚರಕೆ ಸಿಕ್ಕೆ;
ನಿದ್ರೆಯಚ್ಚರ ಬಿಟ್ಟ ಬೇರೆ ಬಾಳಿಹುದೆ?
ಇಹುದಾದರದರಲ್ಲಿ ನಾ ಬದುಕ ಬಹುದೇ?
*****