ಬಾಳವ್ವ

ಬಾಳವ್ವ

ಬಾಳವ್ವ ನಮ್ಮ ಮನೆಯಲ್ಲಿ ಕಸಮುಸುರೆ ಮಾಡುವ ಮೆನೆಗೆಲಸದಾಳು. ಅವಳ ದೊಡ್ಡಸಂಪತ್ತೆಂದರೆ ತುಟಿಯ ಮೇಲೆ ಸುದಾ ನಲಿಯುತ್ತಿರುವ ಅವಳ ನಗೆ. ಹೊಟ್ಟೆ ತುಂಬಿರಲಿ ಅಥವಾ ಖಾಲಿ ಇರಲಿ, ಅವಳು ಸದಾ ನಗುತ್ರಿರುವವಳೇ. ಅವಳದು ದೊಡ್ಡ ಸಂಸಾರ. ಎಲ್ಲ ವಯಸ್ಸಿನ ಗಂಡು ಹೆಣ್ಣು ಕೂಸುಗಳು ಅವಳಿಗಿವೆ. ಅವರ ದ್ಯನ್ಯಕಳೆ ಕಣ್ಣಿನಿಂದ ನೋಡಲಾಗುವುದಿಲ್ಲ- ಆ ಹುಡುಗರ ಕಡೆ ನೋಡಿದಾಗ ಹಸಿವೆಯ ಹುಳುಗಲೇನೋ ಎಂದು ಅನ್ನಿಸುತ್ತದೆ. ಕೈಕಾಲುಗಳಲ್ಲೆಲ್ಲ ಕಜ್ಜಿ, ಗುಂಯ್ಗುಡುವ ನೊಣಗಳ ಸಾಲು, ಮಾಸಿದ ತಲೆ, ಹರಿದ ಬಟ್ಟೆ, ನೀರು ಕಾಣದ ಮೈ, ಪಿಚ್ಚು ತುಂಬಿದ ಕಣ್ಣು, ಹರಿಗೆಡದ ಸುಂಬಳ, ಒಣಗಿದ ಮುಖ, ಇವರನ್ನು ಕಣ್ಣೆತ್ತಿ ನೋಡುವುದಕ್ಕೂ ನನಗಾಗುವುದಿಲ್ಲ, ಮುಖ ಕಿವುಚಿಕೊಳ್ಳುತ್ತೇನೆ. ದಲಿತರ ಏಳಿಗೆ, ಬಡವರ ಉದ್ಧಾರಗಳ ಕುರಿತು ಗಂಟೆಗಟ್ಲೆ ಮಾತಾಡಬಲ್ಲೆ, ಸಭಿಕರಿಂದ ಚಪ್ಪಾಳೆ ತಟ್ಟಸಿಕೊಳ್ಳಬಲ್ಲೆ; ಆದರೆ ಎದುರಿಗಿರುವ ಒಂದು ಬಡಕುಟುಂಬದ ಕಣ್ಣೀರು ಒರೆಸುವ ವಿಶಾಲ ಮನಸ್ಸು ಮಾತ್ರ ನನಗಿಲ್ಲದೆ ಹೋಯ್ತಲ್ಲ ಎಂದು ವಿಪಾದಪಡುತ್ತೇನೆ. ನನ್ನ ಜೀವನ ಬಾಳಿನ ಕಟುವ್ಯಂಗವನ್ನು ಎದುರಿಸುದ ಕೇವಲ ಪುಸ್ತಕರಾಜ್ಯದಲ್ಲಿ ಮಗ್ನವಾಗಿರಬೇಕೇ? ಆದರ್ಶವಾದಗಳನ್ನು ಗಿಳಿಯಂತೆ ಪಾಠ ಮಾಡುತ್ತ? ಅಮೂರ್ತ ಮನೋಲಹರಿಗಳಲ್ಲಿಯೇ ತೃಪ್ತಿಪಡುತ್ತ, ಪಲಾಯನವಾದೀ ಜೀವನವಾಗಿಯೇ ಉಳಿಯಬೇಕೇ? ಥೂ ನಿನ್ನ ಬಾಳಿಗಿಷ್ಟು ಬೆಂಕಿ ಹಾಕಬೇಕು ಎಂದು-ನನ್ನನ್ನು ನಾನು ಶಪಿಸಿಕೊಳ್ಳುತ್ತೇನೆ.

ಬಾಳವ್ವ ನಮ್ಮಲ್ಲಿ ಮುಸುರೆ ತಿಕ್ಕಲು ದಿನಕ್ಕೆ ಎರಡುಸಾರೆ ಬರುವಳು. ಅವಳ ಮನೆ ಸ್ವಂತದ್ದೂ ಅಲ್ಲ ಬಾಡಿಗೆಯದೂ ಅಲ್ಲ. ಸ್ಟೇಡಿಯಂದ ಸಾಲುಗಳ ಆಸರೆಯೇ ಅವಳ ಕುಟುಂಬವನ್ನು ಬಿಸಿಲು ಮಳೆ ಗಾಳಿಗಳಿಂದ ರಕ್ಷಸುವುದು. ಅಲ್ಲೇ ಅವಳ ಕುಟುಂಬದ ಬೈಗು ಬೆಳಗುಗಳು ಕಳೆದುಹೋಗುತ್ತವೆ. ಅಧಿಕಾರಿಗಳ ಬೈಗಳು, ಶ್ರೀಮಂತರ ತಿರಸ್ಕಾರ, ಮಧ್ಯಮ ವರ್‍ಗದವರ ಉಪೇಕ್ಷೆ, ಸಾರ್ವಜನಿಕರ ಒದೆತ, ವಾಹನಗಳ ಧೂಳನ್ನೆಲ್ಲ ಅವಳು ನುಂಗಿದ್ದಾಳೆ. ಎಷ್ಟೋ ಸಾರೆ ಸ್ಟೇಡಿಯಮ್ದ ಆಸರೆ ಬಿಡಲು ಆಧಿಕಾರಿಗಳು ಅವಳ ಇಡೀ ಸಂಸಾರದ ಸಾಮಗ್ರಗಳನ್ನೆಲ್ಲ ಕಿತ್ತಿ ಬೀದಿಗೆಳೆದಿರುವುದುಂಟು. ಬಾಳವ್ವನ ಇಡೀ ಆಸ್ತಿಯೆಲ್ಲವೂ ಒಂದು ಸಣ್ಣ ಅರಿವೆ ಗಂಟಿನಲ್ಲಿ ಅಡಕವಾಗಿದ್ದನ್ನು ನೋಡಿದಾಗ ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ತೃಪ್ತಿಪಡಿಸಲು ಬೇಕಾಗುವ ಸಲಕರಣೆಗಳು ಬಹಳ ಕಡಿಮೆಯೆಂಬ ವಿಚಾರ ಮನದಟ್ಟಾಗುವುದು. ಹುಟ್ಟಿನಿಂದ ಸಾವಿನವರೆಗೆ ಎಲ್ಲ ತರದ ವಸ್ತುಗಳನ್ನು ಸಂಗ್ರಹಿಸುವುದರಲ್ಲೇ ನಮ್ಮ ಶಕ್ತಿಗಳೆಲ್ಲ ಸೋರಿಹೋಗಿಬಿಡುತ್ತವೆ. ಇದಕ್ಕಿಂತ ಹೆಚ್ಚಿನ ದುರಂತ ಬಾಳಿನಲ್ಲಿ ಮತ್ತೇನಿದೆ?

ಬಾಳವ್ವನ ಸಂಸಾರದ ವಿರಾಟ್ ದರ್‍ಶನವಾಗಿ ಮನಸ್ಸು ನನ್ನ ಸಂಸಾರದ ವಿಶ್ಲೇಷಣೆಗೆ ತೊಡಗಿಬಿಟ್ಟಿತು. ನಾನು ಇರುವ ಮನೆಯಲ್ಲಿ (ಬಾಡಿಗೆ ಮನೆ) ನಾಲ್ಕು ಕೋಣೆಗಳಿವೆ. ವರ್‍ಷದ ಕೆಳಗಿನ ಕೊಸನ್ನೂ ಸೇರಿಸಿಕೊಂಡು ನಮ್ಮಲ್ಲಿ ಇರುವವರು ಆರು ಜನ. ಸರಾಸರಿ ಒಬ್ಬೊಬ್ಬರಿಗೆ ಒಂದೊಂದು ರೂಮಿನ ಸೌಲಭ್ಯ ನಮಗುಂಟು. ಮನೆ ತುಂಬಾ ಪಾತ್ರೆಗಳು, ಪಡಗಗಳು, ಡಬ್ಬಿಗಳು, ಪುಸ್ತಕಗಳು ತುಂಬಿಕೊಂಡಿವೆ. ದಿನವೂ ಹೊಸ ಪತ್ರೆ ಪಡಗಗಳನ್ನಾಗಲಿ, ಡಬ್ಬಿಗಳನ್ನಾಗಲಿ ಖರೀದಿ ಮಾಡಲು ಹೆಂಡತಿಯಾದವಳು ಜೀವ ಹಿಂಡುತ್ತಲೇ ಇರುತ್ತಾಳೆ. ನಾನು ಮನೆಯಲ್ಲಿ ಈಗ ಒಟ್ಟಿದ ಸಾಮಾನುಗಳ ರಾಶಿಯನ್ನು ನೋಡಿಯೇ ದಂಗುಪಟ್ಟಿದ್ದೇನೆ. ನಾವಿರುವುದು ಪಾತ್ರಗಳಿಗಾಗಿಯೋ ಪಾತ್ರಗಳಿಗಾಗಿ ನಾವೋ ಎಂಬುದು ತಿಳಿಯದೆ ಹೋಗುತ್ತದೆ. ಒಮ್ಮೊಮ್ಮೆ ಪಾತ್ರೆಗಳ ಅಂಗಡಿಯನ್ನೇ ನೆರವಿದ್ದೇನೆಂದು ಅನಿಸಿಬಿಡುವುದುಂಟು. ಇಷ್ಟಾದರೂ ಒಂದು ಮಾತು ಸ್ಪಷ್ಟ. ಮಧ್ಯಮವರ್ಗದ ನನಗೆ ಹೆಚ್ಚಿನ ವಸ್ತುಗಳನ್ನು ತೆಗೆದುಕೊಳ್ಳಲು ಮನಸ್ಸೂ ಇಲ್ಲ, ನನ್ನ ಹರಕಲು ಬೇಬಿಗೆ ಆ ಶಕ್ತಿಯೂ ಇಲ್ಲ. ಆದರೆ ಬಾಳವ್ವನಂಥ ಸಹಸ್ರ ಸಹಸ್ರ ಸಂಸಾರಗಳಿಗೆ ಇರದ ನೊರೆಂಟು ಸೌಕರ್‍ಯಗಳನ್ನು ಅನುಭವಿಸುವ ನಾನು ಅಷ್ಟರಮಟ್ಟಿಗೆ ವಂಚಕನೇ. ನನಗೆ ಜೀವಿಸಿರಲು ಬೇಕಾಗುವದಕ್ಕಿಂತಲೂ ಹೆಚ್ಚಿನ ಕೋಣೆಗಳನ್ನು ಬಳಸಿದೆನಾದರೆ, ನನ್ನ ಮೈ ಮುಚ್ಚುವ ಬಟ್ಟೆಗಳ ಬಿಟ್ಟು ಹೆಚ್ಚಿನ ಬಟ್ಟೆಗಳನ್ನೂ ಇಟ್ಟುಕೊಂಡೆನಾದರೆ, ನಾನು ಉಂಡು, ಮಿಗುವಷ್ಟು, ಅನ್ನವನ್ನು ಸಂಗ್ರಹಿಸಿದೆನಾದರೆ ಅಷ್ಟರ ಮಟ್ಟಿಗೆ ನಾನು ಶೋಷಕನೇ.

ಈ ಆರಾಮಖುರ್‍ಚಿಯ ವಿಚಾರಲಹರಿಯಲ್ಲಿ ನಾನಂದು ಮಗ್ನನಾಗಿದ್ದಾಗ ಬಾಳವ್ವನ ಮಕ್ಕಳು ಬೇಳೆ ಕೇಳಲು ಬಂದರು. ಆಗ ನನ್ನ ಮಗಳು ನೆರೆಮನೆಯ ಹುಡುಗರೊಂದಿಗೆ ಆ ಪಾಪದ ಮಕ್ಕಳಿಗೆ ಕಲ್ಲು ಒಗೆದು ಸ್ವಾಗತಿಸುತ್ತಿರುವುದನ್ನು ಕಂಡು ಕೋಪದಿಂದ ಚೀರಾಡಿದೆ. ನನ್ನ ಪೌರುಷಹೀನ ಕೋಪಕ್ಕೆ ಉತ್ತರವೋ ಎನ್ನುವಂತೆ ನನ್ನಾಕೆ ಬೇಳೆಯಿಲ್ಲವೆಂದು ಗದರಿಸಿ ಆ ಮಕ್ಕಳನ್ನು ಬರಿಗೈಯಿಂದ ಕಳಿಸಿದಳು. ನಾನು ಮನೆಯಲ್ಲಿ ಅಂದು ಸಿಟ್ಟಿನಿಂದ ಮೌನವ್ರತವನ್ನಾಚರಿಸಿದೆ. ಆದರೆ ನನ್ನ ವಿಜಾರಲಹರಿಗಳೆಲ್ಲ ಕಾರ್ಯರೂಪಕ್ಕಿಳಿಯದೆ ಅಳಿದುಹೋದವೆಂದು ಪರಿತಪಿಸಿದೆ. ನಾನೊಬ್ಬ ಆರಾಮಖುರ್‍ಚಿಯಲ್ಲಿ ವಿರಾಜಮಾನನಾಗಿರುವ ಸಮಾಜಸುಧಾರಕ; ದಲಿತೋದ್ಧಾರಕ.

ಬಾಳವ್ವ ಮೊನ್ನೆ ಮುಸುರೆ ತಿಕ್ಕಲು ಬರಲಿಲ್ಲ. ಅಡಿಗೆಮನೆಯಲ್ಲಿ ಭಾಂಡೆಗಳೆಲ್ಲ ಅನಾಥವಾಗಿಬಿದ್ದಿವೆ. ಬಟ್ಟೆಗಳು ಬಚ್ಚಲಲ್ಲಿ ಒಟ್ಟಲಾಗಿವೆ. ಅವಳನ್ನು ಕರೆತರಲು ಹುಡುಗರನ್ನು ಕಳಿಸಿದೆ. ಅವಳಿಗೆ ನಡೆಯಲು ಬರುತ್ತಿಲ್ಲವೆಂದೂ ಅವಳ ಕಾಲ್ಬೆರಳುಗಳು ಪೂರ್ತಿಯಾಗಿ ಜಜ್ಜಲ್ಪಟ್ಟಿವೆಯೆಂದು ಕೇಳಿ ತಿಳಿದುಕೊಂಡೆ. ಆವಳ ಗಂಡ ರಿಕ್ಷಾವನ್ನೇನೋ ನಡೆಸುತ್ತಾನೆ. ಆದರೆ ಅವನ ದುಡಿತದ ಹಣ ಕುಡಿತಕ್ಕೆ ಸಾಲದು. ಮನೆಯಲ್ಲಿ ಇಟ್ಟ ರೊಟ್ಟಿಯನ್ನೆಲ್ಲ ತಿನ್ನುತ್ತಾನೆ. ಮಕ್ಕಳನ್ನು ಹೊಡೆಯುತ್ತಾನೆ. ಇದು ದಿನವೂ ನಡೆಯುವ ಮಹಾಭಾರತ. ಅಂದು ಕುಡಿದು ತೂರಾಡುತ್ತ ಬಂದ ಗಂಡನನ್ನು ಬಾಳವ್ವ ಪ್ರತಿಭಟಿಸಿದ್ದಕ್ಕಾಗಿ ಅವಳ ಕಾಲನ್ನು ದೊಡ್ಡ ಕಲ್ಲಿನಿಂದ ಜಜ್ಜಿದನಂತೆ, ಕೇಳಿ ಹಳಹಳಿ ಪಟ್ಟೆ.

ಹೆಜ್ಜೆ ಇಡಲು ಬಾರದಂತೆ ಹೊಡೆದ ಅವಳ ಗಂಡನು ಗಂಡನಲ್ಲ- ಅವಳಿಗಂಟಿದ ಹುಣ್ಣೇ ಎಂದು ಅಂದುಕೊಂಡೆ. ನಾಲ್ಕು ದಿನಗಳ ತರುವಾಯ ನಮ್ಮ ಮನೆಗೆ ಮುಸುರೆ ತಿಕ್ಕಲು ಕುಂಟುತ್ತ ಬಂದ ಬಾಳವ್ವನನ್ನು ಕೇಳಿದೆ. ಕಾಲು ಅದು ಹೇಗೆ ಜಜ್ಜಲ್ಪಟ್ಟಿತು ಎಂದು. ಮನೆಯಲ್ಲಿ ಆ ಕಲ್ಲು ತಾನಾಗಿಯೇ ತನ್ನ ಕಾಲ ಮೇಲೆ ಬಿದ್ದುಬಿಟ್ಟತು ಎಂದು ಸುಳ್ಳುಹೇಳಿ ಗಂಡನ ಮಾನ ಉಳಿಸಲು ಪ್ರಯತ್ನಿಸಿದ ಸಾಧ್ವಿಯ ಸದ್ಗುಣವನ್ನು ಮನದಲ್ಲೇ ಪ್ರಶಂಸಿಸಿದೆ. ಇದು ನಮ್ಮ ಭಾರತೀಯ ಸ್ತ್ರೀಯು ಪುರುಷನಿಗೆ ತೋರುವ ಔದಾರ್ಯದ ಒಂದು ಉದಾಹರಣೆ ಎಂದು ಅಂದುಕೊಂಡೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಟ್ಟು ಬಿಡಿ
Next post ಗಲಿವರನ ಯಾತ್ರೆಗಳು

ಸಣ್ಣ ಕತೆ

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…