ಮಾನವ ಸಂಬಂಧಗಳು ತೀರಾ ಸಂಕೀರ್‍ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ Wuthering heights ನಲ್ಲಿವೆ. ಕಾದಂಬರಿಯ ನಾಯಕಿ ಕ್ಯಾಥರಿನ್ ಹಾಗೂ ನಾಯಕ ಹೇತ್‌ಕ್ಲಿಫ್ ಪ್ರೀತಿ ಮೂಲಭೂತವಾದ ಬಯಕೆ. ವಿಶ್ವಸನೀಯವಾದ ಪ್ರೀತಿ ಶ್ರೇಷ್ಠವಾದರೆ, ಪ್ರೀತಿಯಲ್ಲಿ ದ್ರೋಹ ಪಾಪವಾಗುತ್ತದೆ. ಅಲ್ಲಿ ಹುಟ್ಟಿದ ದ್ವೇಷಕ್ಕೆ ಪಾಪದ ಬಣ್ಣ ಕೊಡದೆ ಮಾನವಮೂರ್‍ತ ಪ್ರೀತಿಯೆಂದು ಚಿತ್ರಿಸಿ ಅದರ ಸೂಕ್ಷ್ಮ ತುಡಿತಗಳನ್ನು ಎಳೆಎಳೆಯಾಗಿ ಬಿತ್ತರಿಸಿದ್ದಾಳೆ ಎಮಿಲಿ. ಪರಿಪೂರ್‍ಣತೆ ಪಡೆಯದ ಪ್ರೀತಿ ಒಂದು ತ್ಯಾಗದ ರೂಪ ತಳೆದು ಉದಾತ್ತವಾಗುತ್ತದೆ. ಅದೇ ದ್ವೇಷವಾದರೆ ದೂರ್‍ತತೆಯ ರೂಪ ಪಡೆದು ವಿನಾಶಕಾರಿಯಾಗುತ್ತದೆ. ಎರಡನೇಯದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾನೆ ಹೇತ್ ಕ್ಲೀಫ್.
Wuthering heightsನ ಮಿ. ಅರ್‍ನಶಾಗೆ ಅದೊಂದು ದಿನ ಲಿವರಪೂಲ್ ಬೀದಿಯಲ್ಲಿ ಅನಾಥನಾದ ಕಪ್ಪು ಜಿಪ್ಸಿ ಹುಡುಗ ಹೇತ ಕ್ಲೀಫ್ ಸಿಗುತ್ತಾನೆ. ಅರ್‍ನಶಾ ತನ್ನೆರಡು ಮಕ್ಕಳಾದ ಹಿಂಡ್ಲೆ ಹಾಗೂ ಕ್ಯಾಥರಿನ್‌ಗಿಂತ ಹೀತಕ್ಲಿಪ್‌ನ ಹೆಚ್ಚು ಪ್ರೀತಿಸುತ್ತಾನೆ. ಹೇತ್‌ಕ್ಲಿಪ್ ಕ್ಯಾಥರಿನ್‌ನನ್ನು ಮಾತ್ರ ಹುಚ್ಚನಂತೆ ಪ್ರೀತಿಸುತ್ತಾನೆ ಮೋಹಿಸುತ್ತಾನೆ. ಆಕೆಯೂ ಹೀತಕ್ಲೀಪನನ್ನು ಅತಿಯಾಗಿ ಪ್ರೀತಿಸುತ್ತಲೇ, ನೆರೆಯ ಸಭ್ಯ ಸಜ್ಜನ ಸುಸಂಸ್ಕೃತ ತ್ರುಶಕ್ರೊಸ್ ಗ್ರೆಂಜ್‌ನ ಎಡ್ಗರ್ ಲಿಂಟನ್‌ನತ್ತ ಆಕರ್ಷಿತಳಾಗಿ ಆತನ ವಿವಾಹವಾಗುತ್ತಾಳೆ. ಕ್ಯಾಥರಿನ್‌ಳ ಲಿಂಟನ್ನ ನಡುವಿನ ಪ್ರೇಮವನ್ನು ಅರಗಿಸಿಕೊಳ್ಳಲಾಗದೇ ಚಡಪಡಿಸುವ ಹೇತಕ್ಲಿಫ್ ಮನೆಬಿಟ್ಟು ಹೊರಟುಹೋಗುತ್ತಾನೆ. ಮುಂದೆ ಆಕೆಯ ಬದುಕು ಹರಿದು ಹಂಚಿಹೊಗುತ್ತದೆ. ಕ್ಯಾಥಿ ಎಡಗರನೊಂದಿಗೆ ಮದುವೆಯಾಗಿ ಸುಖವಾಗಿ ಬದುಕುತ್ತಿರುವಾಗಲೇ ಪುನಃ ಆಕೆಯ ಬದುಕಲ್ಲಿ ಟಾಕುಟೀಕಾಗಿ ವೇಷಭೂಷಣದಿಂದ ಬರುವ ಹೀತ್‌ಕ್ಲೀಫ್ ಆಕೆಯ ಬದುಕನ್ನು ಮೋಸದಿಂದ ಸಂಪೂರ್‍ಣ ಛಿಧ್ರಗೊಳಿಸುವ ಹೇತ್ ಕ್ಲೀಫ್ ಇನ್ನೊಂದು ರೀತಿಯಲ್ಲಿ ತಾನೇ ತನ್ನ ಸಂತೋಷವನ್ನು ದ್ವೇಷದ ಅಗ್ನಿಕುಂಡಕ್ಕೆ ಬಲಿಕೊಡುತ್ತ ಹೋಗುತ್ತಾನೆ. ಮುಂದೆ ಎಡ್ಗರ್ ಕೂಡ ವಿಧಿವಶನಾಗಲು ಹೀತ ಕ್ಲೀಫ್ ಎರಡೂ ಮನೆಗಳ ಆಸ್ತಿಗೆ ವಾರಸುದಾರನಾಗುತ್ತಾನೆ. ಆದರೆ ಕ್ರಮೇಣ ಕ್ಯಾಥರಿನ್ ಆತ್ಮ ಆತನನ್ನು ಬಿಡದೆ ಕಾಡುವ ನೆನಪಾಗುತ್ತದೆ. ಆಕೆಯ ಪ್ರೇಮಕ್ಕೋಸ್ಕರ ಸೇಡಿಗೋಸ್ಕರ ಇಷ್ಟೆಲ್ಲಾ ನಡೆಸಿದ ಹೀತ ಅದೊಂದು ದಿನ ಮರಣಿಸುತ್ತಾನೆ. ಆತನದು ವಿಧ್ವಂಷಕ ಪ್ರೀತಿ. ಇಲ್ಲಿಯ ಪಾತ್ರಗಳ ಸಾಂಪ್ರದಾಯಿಕ ನೈತಿಕ ಸ್ತರಗಳು ಭಿನ್ನ.. ಎಡ್ಗರ್ ಬೆಂಬಲಿಸುವ ನೈತಿಕತೆಯಲ್ಲಿ ಕ್ಯಾಥರಿನ್ ಮತ್ತು ಹೇತ್ ಕ್ಲೀಫ್‌ರಿಗೆ ಒಲವಿಲ್ಲ. ಅವರಲ್ಲಿ ಮೋಹ ನೈತಿಕತೆಗಿಂತ ಶ್ರೇಷ್ಠ. ಅವರಿಬ್ಬರ ಮೂಲ ತುಡಿತ ಪ್ರೇಮ. ಭಾವತೀವ್ರತೆಯ ಅಸಮತೋಲನ. ಕ್ಯಾಥರಿನ್ ತನ್ನ ಕೊನೆಕ್ಷಣದಲ್ಲಿ ಹೇತ್ ಕ್ಲೀಫ್‌ನನ್ನು ಆಲಂಗಿಸಿಕೊಳ್ಳುವ ಪರಿ ಭಾವೋದ್ವೇಗದ ಪರಾಕಾಷ್ಠೆ. “It is the last time… Heathcliff: I shall die” ಹೀಗಾಗಿ ಕ್ಯಾಥಿಯನ್ನು ನೈತಿಕತೆ ಇಲ್ಲದವಳು ಎಂದು ಜರಿಯಲು ಮನಸ್ಸಾಗದು, ಅವರಿಬ್ಬರೂ ಓದುಗರ ಕರುಣೆಗೆ ಪಾತ್ರರಾಗುತ್ತಾರೆ. ಹೀಗೆ ಮಾನವಸ್ವಭಾವದ ಸಂಕೀರ್ಣತೆಯನ್ನು ಅತಿ ಪರಿಣಾಮಕಾರಿಯಾಗಿ ಚಿತ್ರಿಸಿದ ವಿಕ್ಟೋರಿಯನ್ ಅವಧಿಯ ಎಮಿಲಿ ಜೆನ ಬ್ರೊಂಟೆ ಆ ಕಾಲದ ಎಲ್ಲ ಸಾಹಿತ್ಯಕ್ಕಿಂತಲೂ ವಿನೂತನ ಪಾತ್ರಗಳ ಸೃಷ್ಟಿಯಿಂದ ಶ್ರೇಷ್ಠಳಾಗಿದ್ದಳು.
ಪ್ರೇಮ ಬದುಕು ಹೌದು ಸಾವು ಹೌದು. ಹೇತಕ್ಲೀಫ್ ಮತ್ತು ಕ್ಯಾಥರಿನ್ ಅದಕ್ಕೆ ಸಂವಾದಿಯಾಗಿ ನಿಲ್ಲುತ್ತಾರೆ.. ಬರಿಯ ದೇಹ ಬಯಸುವ ಪ್ರೀತಿಯ ಉತ್ಕಟತೆಯ ಭಾವ ಸಾವಿಗೆ ಉಪಮೆ, ಆತ್ಮದ ಒಳಗನ್ನು ಪ್ರವೇಶಿಸುವ ಪ್ರೀತಿ ಬದುಕಿಗೆ ಸಾಕ್ಷಿ.
ಇದು ಪ್ರೇಮದ ಜಗತ್ತು. ಗಂಡು ಹೆಣ್ಣಿನ ಪ್ರೇಮ ಅನಾಹತದ ನಾದ. ಸದಾ ಜಿನುಗುವ ತೊರೆ. ಭಾವ ತೀವ್ರತೆಗಳಲ್ಲಿ ಅದ್ಭುತ ಪ್ರೇರಣೆಯ ಜೀವಧಾತು. ಪ್ರೇಮ ಸಂಬಂಧಗಳು ಹುಟ್ಟುವುದು ಕ್ಷಣಿಕ ಸುಖಕ್ಕಲ್ಲ. ಕೊಟ್ಟು ತೆಗೆದುಕೊಳ್ಳುವ ಜಾಯಮಾನವೇ ಪ್ರೀತಿಯ ಹರಿವು. ಆ ಮೂಲಸತ್ವವನ್ನು ಉಳಿಸಿಕೊಂಡ ಪ್ರೀತಿ ಧೀರ್‍ಘಾಯುಷಿ. ಆ ಪ್ರೇಮ ನಿರಂತರತೆಗೆ ದೇಹ ಸಾಧನವಾಗಿ ಸಮರ್‍ಪಣೆಯ ಸಾಕಾರದಲ್ಲಿ ಉತ್ಕೃಷ್ಟವಾಗುತ್ತ ಸ್ತ್ರೀ ಪುರುಷ ಸಾಹಚರ್‍ಯ ಗಾಢವಾಗುತ್ತದೆ. ನಿನ್ನೆ ಇದ್ದಂತೆ ಇಂದು ಇರದು. ಬೇಕಾಗಲಿ ಬೇಡವಾಗಲಿ ಬದಲಾವಣೆ ಜೀವನದ ದಿಕ್ಕು. ಅದನ್ನು ಅರಗಿಸಿಕೊಂಡು ಪ್ರೀತಿಯ ಋಣ ಭಾರವನ್ನು ನಿಭಾಯಿಸುವ ಸಾಮರ್ಥ್ಯವೇ ಬದುಕಿನ ದೊಡ್ಡ ಸವಾಲು.
ಸ್ತ್ರೀ ಪುರುಷ ಪ್ರೇಮದಲ್ಲಿ ಪರಿಶುದ್ಧತೆಯ ಪ್ರಮಾಣವನ್ನು ಸದಾ ಒಂದೇ ಲೆಕ್ಕದಲ್ಲಿ ಗೃಹಿಸುವುದು ಬಹುಶಃ ಅಂದುಕೊಂಡಷ್ಟು ಸುಲಭ ಸಾಧ್ಯವಲ್ಲ. ಪ್ರೇಮ ಒಮ್ಮೆ ಒಂದು ಕಡೆ ಘನಿರ್‍ಭವಿಸಿದರೆ ಅದು ಎಂದಿಗೂ ತನ್ನ ಮೂಲ ಬಣ್ಣ ಬದಲಾಯಿಸದು. ಸ್ವಲ್ಪ ಬಣ್ಣ ಮಸುಕಾಗಬಹುದಷ್ಟೇ.
ಕೃಷ್ಣ ಮತ್ತು ರಾಧೆ ಮೋಹದ ಪರಾಕಾಷ್ಠೆ, ಪ್ರೀತಿಯ ವೈಭೋಗದಲ್ಲಿ ಅನುಭಾವಿಕ ದೈವಿಕ ಪ್ರೇಮದ ಪ್ರತಿಮೆಗಳು. ಅವರು ವಿದ್ವಂಸಕ ಪ್ರೀತಿಗೆ ಉಪಕ್ರಮ ಪ್ರತ್ಯೌಷಧ. ಆಕಾಂಕ್ಷೆಗಳಿಲ್ಲದ ದೈಹಿಕ ಬಯಕೆಯ ವಾಂಛೆಯಿಂದ ಹೊರತಾದ ಸಮರ್ಪಣಾ ಪ್ರೇಮಭಾವ. ಆದರೆ ಇಂದು ಅದನ್ನು ಹುಡುಕುತ್ತ ಭ್ರಮ ನಿರಸನದ ದಾರಿ ಹಿಡಿದವರೇ ಬಹಳ. ಅಪರೂಪದಲ್ಲೊಂದು ಅಂತಹ ಶ್ರೀಮಂತ ಪ್ರೇಮ ದಕ್ಕಿಸಿಕೊಂಡನ ಜೀವನ ಪಾವನ. ಸ್ವಚ್ಛ ಸರಳ ಶುಧ್ಧ ಮನಸ್ಸು ತನ್ನದೆನ್ನುವ ಅಪರಿಮಿತ ಆನಂದವೇ ಸಾಕ್ಷಾತ್ಕಾರದ ನೆಲೆ. ಗಂಡು ಹೆಣ್ಣುಗಳ ಬದುಕಿನ ಸವಾರಿಯಲ್ಲಿ ಕೈಗೆಟುಕಿದ್ದೆಲ್ಲ ಸಿಹಿಯಲ್ಲ. ನಮ್ಮ ಸುತ್ತಲಿನ ಪ್ರೀತಿ ಪಾತ್ರರೊಡನೆ ಅನುಭವಿಸಿದ ಕಳೆದ ಕ್ಷಣಗಳೆಲ್ಲ ಎಲ್ಲವೂ ಸಂತಸವನ್ನು ನೀಡುವುದಿಲ್ಲ. ಕೆಲವೇ ಕೆಲವು ಬದುಕಿನುದ್ದಕ್ಕೂ ಖುಷಿ ನೀಡುತ್ತ ಸಂಬಂಧಗಳ ಇನ್ನಷ್ಟು ಗಾಢವಾಗಿಸುತ್ತ ಹೋಗುತ್ತವೆ.
ಪತಿ ಪತ್ನಿ ಸಂಬಂಧಗಳು ಇಂತಹ ನೆಲೆಯಲ್ಲಿಯೇ ಆಗಾಗ ಬಿರುಸಾಗುತ್ತ, ಸಡಿಲವಾಗುತ್ತ ಮತ್ತೆ ಬೆಸೆದುಕೊಳ್ಳುತ್ತ ಸಾಗಿದಾಗಲೇ ಆ ಪ್ರೇಮ ಬಂಧದಲ್ಲಿ ಅಮೃತ ಹುಟ್ಟಿಸಿಕೊಳ್ಳಬಹುದು. ಯಾಂತ್ರಿಕವಾಗದಂತೆ ಬದುಕನ್ನು ಅನುಭವಿಸಬಹುದು. ಕೌಟಂಬಿಕ ಜೀವನದಲ್ಲಿ ಯಾವುದು ಸರಿ ಯಾವುದು ತಪ್ಪು, ಹಾಗೂ ಸರಿಪಡಿಸಲಾಗದ ಮಾನಸಿಕ ಉದ್ವೇಗಗಳ ನಡುವೆಯೂ ಸಹನೆ, ಕ್ಷಮೆಗಳು ಬದುಕಿನ ಸಾಂಕೇತಿಕ ಸತ್ಯಗಳಾಗಿ ನಿಲ್ಲುತ್ತವೆ. ಹೊಂದಾಣಿಕೆಯ ಭಿನ್ನ ನೆಲೆಯಲ್ಲಿ ಒಬ್ಬರನ್ನೊಬ್ಬರ ಅವಗುಣಗಳ ಒಪ್ಪಿಕೊಂಡು ಬದುಕನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಇದೇ ಪ್ರೇಮದ ತಿರುಳು. “Forgive and forget does not come about quickly, ultimately reconciliation prevails” ಎಂದು ಆಂಗ್ಲ ಕಾದಂಬರಿಕಾರ ಜಾನ್ಫ಼್ ಆಸ್‌ಬರ್‍ನ್ ಹೇಳುತ್ತಾನೆ. ಹೌದು ಕುಟುಂಬ ಬದುಕಿನಲ್ಲಿ ಕ್ಷಮೆ ಮತ್ತು ಮರೆಯುವಿಕೆ ಒಮ್ಮೆಲೆ, ಮೂಡಲಾರದು. ಬದುಕಿನಲ್ಲಿ ರಾಜಿಯಾಗಬೇಕಾಗುತ್ತದೆ.
ಶುದ್ಧ ಪ್ರೇಮವೇ ದಾಂಪತ್ಯದ ತಿರುಳು ಎನ್ನುವುದು ಸತ್ಯವಾದರೂ ಪ್ರೀತಿ ಏಕಮುಖವಾಹಿನಿಯಲ್ಲ. ಅದು ಕೊಡುಕೊಳ್ಳುವಿಕೆಯ ವಿನಿಮಯ ಕ್ರಿಯೆ. ಹಾಗಾಗಿ ಬೌದ್ಧಿಕ ಮಾನಸಿಕ ಸಾಂಗತ್ಯ ಇಬ್ಬರಲ್ಲೂ ಬೆಸೆಯಬೇಕು.
ಕಾಲೇಜು ದಿನಗಳಲ್ಲಿ ಓದಿದ ಎಸ್ ಎಲ್ ಬೈರಪ್ಪನವರ ಕಾದಂಬರಿ “ದೂರ ಸರಿದರು” ಸ್ತ್ರೀ ಪುರುಷ ಪ್ರೇಮದ ಸುತ್ತ, ಪುರುಷನ ಸ್ವ-ಪ್ರತಿಷ್ಠೆ, ಸ್ವಾಭಿಮಾನ, ಅತಿಯಾದ ತಾತ್ವಿಕತೆಯಲ್ಲಿ ಸಂಭಂಧಗಳು ಸೊರಗಿ ಹೋಗುವುದನ್ನು ಅತಿ ಸೂಕ್ಮವಾಗಿ ವಿಶ್ಲೇಷಿಸಿದ ಕಾದಂಬರಿ. ಆ ವಯಸ್ಸಿಗೆ ಅರಗಿಸಿಕೊಳ್ಳಲು ಅರ್ಥೈಸಿಕೊಳ್ಳಲು ಅಸಾಧ್ಯವೆನ್ನುವಂತೆ ಇದ್ದರೂ ಘನವಾದ ಗಟ್ಟಿ ಕಾದಂಬರಿ. ಪ್ರೀತಿ ಎಂದರೆ ಮೋಹಕತೆಯ ಮಗದೊಂದು ರೂಪವೆನ್ನುವಂತೆ ತಿಳಿದ ಕಾಲದಲ್ಲಿ ಕಾದಂಬರಿಯು ಹೊಸ ಮುನ್ನುಡಿಯಂತೆ ಗೋಚರಿಸಿತ್ತು.
ಕಾದಂಬರಿಯ ನಾಯಕ ವಸಂತ ಮನಃಶಾಸ್ತ್ರದಲ್ಲಿ ಎಂ.ಎ. ಪದವೀಧರ. ತತ್ವಶಾಸ್ತ್ರ ಓದಬೇಕೆಂಬ ಆಸೆಯಿಂದ ತತ್ವಶಾಸ್ತ್ರ ಆನರ್ಸ ತೆಗೆದುಕೊಂಡಿದ್ದಾನೆ. ಉಮೆ ಆತಗಿಂತ ಜ್ಯೂನಿಯರ. ಆತನ ಗೆಳತಿ ಸಮಾನ ಮನಸ್ಕಳು. ಹೀಗಾಗಿ ಅವರಿಬ್ಬರಲ್ಲಿ ಸರ್ವೆ ಸಾಧಾರಣವಾದ ಬೌದ್ಧಿಕ ಸಾಹಚರ್ಯೆ. ಅವರಿಬ್ಬರ ಗೆಳೆಯ ಆನಂದ ಸಾಹಿತ್ಯದ ವಿದ್ಯಾರ್ಥಿ.
ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆಗೆ ಮನಸೋತ ವಸಂತ ಪ್ಲೇಟೋನ ಸಿದ್ಧಾಂತ ಆದರ್ಶ ರಾಜ್ಯಕ್ಕೆ ಹೊಸಪ್ರಜೆಗಳ ಅವಶ್ಯಕತೆ ಇರುವಾಗ ಮಾತ್ರ ಸ್ತ್ರೀ ಪುರುಷರು ದಂಪತಿಗಳಂತೆ ಇರಬೇಕು ಉಳಿದಂತೆ ಸಮಾನ ಮಟ್ಟದ ಸಹಚಾರಿಗಳು ಎಂಬ ನಿಲುವಿನಲ್ಲಿ ಆಸಕ್ತ. ಇಂತಹ ಬೌದ್ಧಿಕ ಸಾಹಚರ್ಯ ಪ್ರತಿಪಾದಿಸುವ ವಸಂತ ಅದನ್ನೆ ಉಸಿರಾಡುತ್ತಿದ್ದರೂ ಉಮೆ ಯಾವಾಗ ತನಗೆ ಅನುರೂಪಳೆಂದು ತಿಳಿದನೋ ಅವಳನ್ನು ವಿವಾಹವಾಗಲು ನಿರ್ಧರಿಸುತ್ತಾನೆ. ಸಮಾನತೆಯ ಸಿದ್ಧಾಂತ ಪ್ರತಿಪಾದಿಸುತ್ತಿದ್ದ ತತ್ವಜ್ಞಾನಿಯಂತೆ ಮಾತನಾಡುತ್ತಿದ್ದ ವಸಂತನಲ್ಲಿ ಉಮೆಯ ಬಗ್ಗೆ ಅವನಿಗರಿವಿಲ್ಲದ ಪ್ರೇಮ ಆವರಿಸಿಕೊಳ್ಳುತ್ತದೆ. ಕ್ರಮೇಣ ತನ್ನ ಸಂಗಾತಿಯಾಗುವ ಉಮೆ ತನ್ನ ವಿಚಾರಗಳನ್ನು ವಿರೋಧಿಸುವುದು ಆತನಿಗೆ ನುಂಗಲಾರದ ತುಪ್ಪವಾಗುತ್ತದೆ. ಆತನ ಸಮಾನತೆಯ ವೈಚಾರಿಕತೆಯಲ್ಲಿ ತನ್ನದೆನ್ನುವ ಅಧಿಕಾರ ಪ್ರೇಮ ಆವರಿಸಿಕೊಳ್ಳುತ್ತದೆ. ಪ್ಲೇಟೋನ ತತ್ವಗಳೆಲ್ಲ ತಲೆಕೆಳಗಾಗಿ ಆತನ ವೈಚಾರಿಕ ನಿಲುವು ಜಡ್ಡುಗಟ್ಟುವಂತೆ ವರ್ತಿಸುತ್ತಾನೆ. ಸಹ ಬೌದ್ಧಿಕತೆ ಇದೆಯೆಂದು ಗೃಹಿಸಿ ಆಕೆಯನ್ನು ವಿವಾಹವಾಗುವ ಆತನ ನಿಲುವಿನಲ್ಲೂ ನಮಗೆ ಕಾಣುವುದು ಸಮಾನತೆಯ ಸಾರವಲ್ಲ. ಗೊಂದಲದ ಬೌದ್ಧಿಕತೆ. ಬೌಧ್ಧಿಕ ಸರ್ವಾಧಿಕಾರತ್ವ. ಉಮೆ ತತ್ವಜ್ಞಾನದ ವಿಧ್ಯಾರ್ಥಿನಿಯಾಗಿ ತನ್ನ ವಿಚಾರವನ್ನೂ ವಸಂತ ವಿರೋಧಿಸುವುದು ಆಕೆಗೆ ಇಷ್ಟವಾಗುವುದಿಲ್ಲ. ಇದು ಆತ ನಂಬಿದ ಸಿದ್ಧಾಂತಕ್ಕೆ ವಿರುದ್ಧ ನಿಲುವು ಎಂದು ಆಕೆ ವಾದ.
ಆದರೆ ಆಕೆಗೆ ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸ ತ್ಯಾಗಗಳ ಬೆಂಬಲಿಸುವವಳು. ಗಂಡು ಹೆಣ್ಣುಗಳ ಸಂಬಂಧ ಬರಿಯ ಬೌದ್ಧಿಕ ಸಾಹಚರ್ಯೆಯೇ ಆಗಿದ್ದಲ್ಲಿ ಅದಕ್ಕೆ ದಾಂಪತ್ಯ ಎಂಬ ಬಂಧನದ ಅಗತ್ಯವಿಲ್ಲ. ಯಾವಾಗ ಉಮೆಯಿಂದ ಇಂತಹ ಮಾತು ಬರುತ್ತದೆಯೋ ವಸಂತ ಆಕೆಯನ್ನು ಮೊದಲಿಗಿಂತ ಹೆಚ್ಚು ಪ್ರೀತಿಸುತ್ತಾನೆ. ಆದರೆ ಸ್ವಾಭಿಮಾನದ ಕೊಡಲಿಗೆ ಪ್ರೀತಿಯು ಬಲಿಯಾಗುತ್ತದೆ. ವಿಪರ್‍ಯಾಸವೆಂದರೆ ಬೌದ್ದಿಕ ಸಾಂಗತ್ಯದ ಮೂಲಕ ಒಡಮೂಡುವ ಹೆಣ್ಣು ಗಂಡುಗಳ ನಡುವಿನ ಬಂಧ ಯಾವ ಕಾರಣಕ್ಕೋ ಹೆಚ್ಚಿನ ಸಂದರ್ಭಗಳಲ್ಲಿ ಪ್ರೀತಿ ಪ್ರೇಮದ ರೂಪಕ್ಕೆ ಮಾರ್ಪಟ್ಟು ಗಾಢವೂ ಆಗಬಹುದು, ಕೆಲವೊಮ್ಮೆ ಹಳಸಿಯೂ ಹೋಗಬಹುದು.
ಗಂಡು ಹೆಣ್ಣು ಪರಸ್ಪರ ಒಪ್ಪಿ ಪ್ರೇಮದ ಬಲೆಗೆ ಬಿದ್ದರೆ ಆಗ ಸಂಬಂಧ ಗಾಢವಾಗುವುದು ಎನ್ನುವುದಿದೆ. ಆದರೆ ನಮ್ಮ ಸಂಪ್ರದಾಯದಲ್ಲಿ ಅಪರಿಚಿತರೇ ಬಹುತೇಕ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ. ಹುಟ್ಟಿನಿಂದಲೇ ಹೊಂದಾಣಿಕೆಯ ಗುಣವನ್ನು ಬೆಳೆಸುವ ನಮ್ಮ ಜೀವನ ಕ್ರಮ ದಾಂಪತ್ಯದಲ್ಲಿ ಸಾಮರಸ್ಯದ ಬೆರಗನ್ನು ಕಾಲಕ್ರಮೇಣ ಒಡಮೂಡಿಸುತ್ತದೆ. ಇದೊಂದು ವಿರುದ್ಧ ಲಿಂಗ ತಾನೇ ತಾನಾಗಿ ಬೆಸೆದುಕೊಳ್ಳುವ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿ.
ಆದರೆ ಬರಬರುತ್ತ ಬದುಕು ಆಧುನಿಕ ಚಪ್ಪರದೊಳಗೆ ನಿಷ್ಕ್ರೀಯ ಸಂವೇದನೆಗಳ ಸಂಬಂಧಗಳ ಗಣಿಯಾಗಿದೆ. ಬದುಕಿನಲ್ಲಿ ಎದುರಾಗುವ ಸಂದರ್ಭಗಳು ಮತ್ತು ಆ ಹಂತದ ಸರಿಯಾದ ಸಮಯೋಚಿತವಾದ ನಿರ್ಧಾರಗಳು ಪತಿಪತ್ನಿ ಸಾಂಸಾರಿಕ ಬದುಕಿನ ನಿರ್‍ದಿಷ್ಟ ಕೊನೆಯ ಸತ್ಯ ತಿಳಿಯಲು ಸಹಕರಿಸುತ್ತವೆ. ಪ್ರೇಮ ಪ್ರೀತಿಯ ಹೊಳೆಯಲ್ಲಿದ್ದು ಏನನ್ನೋ ಹುಡುಕುತ್ತಾ ಹೊಳೆಯ ಕಲ್ಲು ಎಣಿಸುವವರು ಇಲ್ಲದಿಲ್ಲ. “The mass of men lead lives of quiet desperation” ಈ ಮಾತಿಗೆ ವಸಂತನಾಗಲಿ ಹೇತ್‌ಕ್ಲೀಪ್ ಆಗಲಿ ಹೊರತಾಗಿ ಕಾಣುವುದಿಲ್ಲ. ಹೀಗಾಗಿ ಎಲ್ಲ ಇದ್ದು ಅಂತರ್ಗತ ಹತಾಶೆ ಮನುಷ್ಯನ ಕಾಡುತ್ತದೆ. ಸದಾ ಹುಡುಕಾಟಕ್ಕೆ ಎಳೆಸುತ್ತದೆ. ನಾವು ಅಸಂತೋಷಿಗಳಾಗಿ ಆಶಾಭಗ್ನರಾಗಿ ಇರಲು ಕಾರಣ ನಾವು ನಿಜದಿ ಪ್ರೇಮಿಸುವದ ಮರೆತಿರುವುದು. ತನ್ನದೆಲ್ಲವನ್ನು ಆಳಬೇಕೆಂಬ ಇಚ್ಛೆಯನ್ನು ಸರ್ವಾಧಿಕಾರಿ ತತ್ವವನ್ನು ಒಳಗೊಳಗೆ ಬೆಳೆಸಿಕೊಂಡಿರುವುದು. ಮತ್ತು ನಮ್ಮನ್ನು ಅರಿಯದೇ ಬದುಕುವುದೇ ಆಗಿದೆ. ಇಂತಹ ಆಶೆಗಳನ್ನು ಮಿತಗೊಳಿಸಿಕೊಳ್ಳಬೇಕು. ಅದು ನಮ್ಮನ್ನು ಆಂತರ್ಯದಿಂದ ಶ್ರೀಮಂತಗೊಳಿಸುತ್ತದೆ.
*****