ಆವೀಗ್ ಮುತ್ತ್ ಇಕ್ಕೋದು
ವುಲೀಗ್ ಆಲ್ ತಿಕ್ಕೋದು
ಚಿಂತೇಗ್ ಎದೇಲ್ ತಾವ್ ಕೊಡೋದು
ಎಲ್ಲಾ ಒಂದೇ ತೂಕಿ!
ಕೇಳ್ಲೆ ಬೇಡ ಬಾಕಿ! ೧
ಉಗನಿ ಅಬ್ಕೊಂಡಂಗೆ
ಕುಟ್ಟಿ ಯಿಡಕೊಂಡಂಗೆ
ಗೆದ್ದಿಲ್ನಂಗೆ ಅತ್ಕೊಂಡ್ ಬಂದಿ
ಮನಸನ್ ಮುರದ್ ಮುಕ್ಕೋಂತೆ
ದೊಡ್ದೀ ಮಾರಿ-ಚಿಂತೆ! ೨
ಬೆಂಕಿ ಮೈ ಮೇಲ್ ಬಿದ್ರೆ
ನಾವ್ ಅದನ್ ಆರೀಸ್ದಿದ್ರೆ
ಧಗ್ಗಂತ್ ಅತ್ಕೊಂಡ್ ಉರದಿ ನಮ್ನ
ಮಾಡತೈತ್ ಬೂದೀನಂತೆ!
ಬೆಂಕೀನೆ- ಈ ಚಿಂತೆ! ೩
ಚಿಂತೆ ಬರ್‍ತಿದ್ದಂಗೆ
ತಕ್ಕೊ! ದೊಡ್ದು ದಂಗೆ!
ಚಿಂತೇಗೇನ್ರ ನೀ ಸರಣಾದ್ರೆ
ನಿಂಗೆ ಎಕ್ಕ ಗಟ್ಟಿ!
ಚಿಂತೇಗ್ ಊಟ ಬಿಟ್ಟಿ! ೪
ಚಿಂತೆ ಬರ್‍ತಿದ್ದಂಗೆ
ಗುರತೇ ಗೊತ್ತಾಗ್ದಂಗೆ
ಯಿಡಕೊಂಡ್ ಚೆನ್ನಾಗ್ ತದಕಾಕಿದ್ರೆ
ಕರದ್ರು ತಿರ್‍ಗಿ ಬರದು!
ಜಪ್ಪಯ್ಯಾಂದ್ರು ಬರದು! ೫
ಚಿಂತೇನ್ ಕಂಡೋರ್ ನಾವು!
ಚಿಂತೇಗ್ ಇಕ್ದೋರ್ ನಾವು!
ನಮ್ಮಂಗ್ ಸಲೀಸ್ ಆಗಬೇಕಂದ್ರೆ
ಚಿಂತೇನ್ ಇಡದಿ ಧ್ವಂಸ
ಮಾಡ್ಲೆ ಬೇಕು ಮನ್ಸ! ೬
*****