ಹೆಸರಿಲ್ಲದಿಲ್ಲಿ ಎಸೆಯುವದು ಹೂವಿನ ಪಸರ.
ಮರ ಮರದ ಮೆರೆದಾಟವಿರಲಿ ಸುತ್ತ;
ಪಶುಗಳಾರ್‍ಭಟೆ, ಮೃಗದ ಎಡೆಯಾಟ, ಹುಳಹುಪ್ಪ-
ಡಿಯ ಕಾಟ ನಡೆದಿರಲಿ ನೋಡಿದತ್ತ.
ನೋಡುವರು, ನೋಡಿ ನಲಿದಾಡುವರು ಕೊಂಡು ಕೊನೆ-
ದಾಡುವರು ಇಲ್ಲದಿರೆ ಏನು ಕೊರತೆ?
ಬೆಟ್ಟದೆದೆಯನು ಬಿರಿದು ಬಾಳಹಿಗ್ಗಿನ ಬುಗ್ಗೆ
ಉಗ್ಗಿ ಬಹದದು; ಅಲ್ಲ-ಮಳಲಿನೊರತೆ.
ಮೂರು ದಿನಗಳ ಸಂತೆ ಮುಗಿಸ ಬಂದವನು
ಹುಟ್ಟು ಕಂಪಿನ ಹುಟ್ಟ ಬಲ್ಲನೇನು?
ಗಂಧಬಾಂಧವನ್ನು ಸ್ವಚ್ಛಂದಮಾರುತನು
ಈ ಸೌಸವವ ಮಸಿ ಉಸಿರಾಡಿಸುವನು.
*****