ಅದು ಒಂದು ದೊಡ್ಡ ಊರು. ಅಲ್ಲಿ ಹತ್ತು ಹಲವು ಗುರುಗಳ ಮಠಗಳು ಮತ್ತು ಅವರ ಶಿಷ್ಯರುಗಳು ಸೇರಿ ಇದ್ದರು. ಮಠಗಳ ಗುರುಗಳಲ್ಲಿ ಬಹಳ ಪೈಪೋಟಿ ಇತ್ತು. ಶಿಷ್ಯರು ಬಾಜಾ ಬಜಂತ್ರಿ ಹೊಡೆದು ತಮ್ಮ ಗುರುಗಳ ಮಹಿಮೆ ಪವಾಡಗಳ ಬಗ್ಗೆ ಗುಣಗಾನ ಮಾಡಿ ಇತರ ಮಠಗಳ ಅವಹೇಳನ ಮಾಡುತ್ತಿದ್ದರು.
ಆ ಊರಿಗೆ ಒಬ್ಬ ಸಾಧು ಬಂದರು. ಮಠಗಳ ನಡುವೆ, ಗುರುಗಳ ನಡುವೆ, ಶಿಷ್ಯರ ನಡುವೆ ಇರುವ ಈರ್ಷೆ ವೈಷಮ್ಯ, ಅಹಂಭಾವ, ಹೆಮ್ಮೆ ನೋಡಿ ಮರುಗುತಿದ್ದರು.
ಒಮ್ಮೆ ಅಲ್ಲಿ ಸಾಧು ಸಂತರ, ಗುರುಗಳ ಸಮ್ಮೇಳನ ನಡೆಯಿತು. ಎಲ್ಲಾ ಮಠಾಧೀಶರು ತಮಗಾಗಿ ಅಲಂಕರಿಸಿದ ಪೀಠಗಳಲ್ಲಿ ಆಸೀನರಾದರು. ಅವರವರ ಶಿಷ್ಯರು ವಂದಿಮಾಗದಿಗರಂತ ಅವರ ಬಗ್ಗೆ ಹಿರಿಮೆಯಿಂದ ಹೇಳುತಿದ್ದರು.
“ನಮ್ಮ ಮಠಾಧೀಶರು, ಸಾರ್ವಭೌಮ, ಬೆಟ್ಟವನ್ನು ಭುಜದಲ್ಲಿ ಹೊತ್ತವರು.” ಎಂದ ಓರ್ವ ಮಠದ ಶಿಷ್ಯ.
“ನಮ್ಮ ಮಠಾಧೀಶರು ಆಕಾಶವನ್ನೇ ತಲೆಯಲ್ಲಿ ಹೊತ್ತವರು” ಎಂದ.
ಮತ್ತೊರ್ವ ಶಿಷ್ಯ ಅತಿ ಹೆಮ್ಮೆಯಿಂದ ಇದೆಲ್ಲಾ, ಏನು ಮಹಾ? ”ನಮ್ಮ ಮಠಾಧೀಶರು ನದಿಯ ಒಂದು ದಡದಲ್ಲಿ ಕುಳಿತು ಇನ್ನೊಂದು ದಡದಲ್ಲಿ ಇರುವವರಿಗೆ ಉಪದೇಶಮಾಡುತ್ತಾರೆ” ಎಂದ.
“ನಿಮ್ಮ ಮಠಾಧೀಶರು ಏನು? ನಮ್ಮ ಗುರುಗಳು ನಕ್ಷತ್ರಗಳಿಂದ ದೇವರನ್ನು ಪೂಜಿಸುತ್ತಾರೆ” ಎಂದ ಮತ್ತೋರ್ವ.
ಅಲ್ಲಿ ನೆರದಿದ್ದ ಅತಿ ಸಾಮಾನ್ಯ ಸಾಧುವಿನ ಶಿಷ್ಯನೊಬ್ಬ ಎದ್ದು ನಿಂತು ಹೇಳಿದ- ”ನಮ್ಮ ಸಾಧು ಗುರುಗಳು ಮುಚ್ಚಿದ ಕಣ್ಣನ್ನು ತೆರೆಯಲು ಕಲಿಸಿದ್ದಾರೆ. ಮುಚ್ಚಿದ ಎದೆಯ ಬಾಗಿಲನ್ನು ತೆರೆಯಲು ಕಲಿಸಿದ್ದಾರೆ. ನಿರ್ಭಯ ಸತ್ಯ ಆಡುವದನ್ನು ಕಲಿಸಿದ್ದಾರೆ. ಹೆಚ್ಚೇಕೆ ಶಾಂತಿ ಬಾಳ್ವೆ ಮಾಡಿ ಬದುಕುವುದನ್ನು ಕಲಿಸಿದ್ದಾರೆ. ಈ ಸಾಮಾನ್ಯ ಪವಾಡಗಳು ನಮ್ಮ ಬಾಳಿಗೆ ಅಸಾಮಾನ್ಯ ಹಿರಿಮೆ ತಂದಿದೆ.” ಎಂದರು. – ಬೇರೆ ಮಠಾಧೀಶರು ತಲೆಗೆ ಮುಸುಕನ್ನು ಎಳೆದುಕೊಂಡು ತಮ್ಮ ತಮ್ಮ ಮಠಗಳಿಗೆ ತೆರಳಿದರು.
*****