ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ,
ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ.

ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ,
ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂಕಡಿಸುತ್ತಿರುತ್ತಾನೆ.

ಹಳೆ ಸಂಬಂಧಿಕರು ಅವನ ಯೋಗಕ್ಷೇಮ ವಿಚಾರಿಸಿದರೂ,
ಅಷ್ಟುದೂರ ಹೋದ ನಂತರ ಯಾಕೋ ತಿರುಗಿ ನೋಡುತ್ತಾರೆ.

ಸಂಜೆ ರೈಲು ಮರೆಯಾಗುತ್ತಿದ್ದಂತೆ
ಅವನು ಅಲ್ಲೇ ಗೂಟ ಹೊಡೆದುಕೊಂಡು ಬಿದ್ದಿರುವುದಿಲ್ಲ.

ಕರೆದವಳ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸುತ್ತಾನೆ;
ಹಾಲು ಕರೆದು ಆಕಳು ಬಿಡುತ್ತಾನೆ.

ನಡುಮನೆಯ ಸರುವೆಗಳಕ್ಕೆ ಬೆನ್ನು ಮಾಡಿ ಕುಳಿತು ಬಹಳ ಹೊತ್ತು
ಮಾತನಾಡುತ್ತಾರೆ. ಮನೆ ಕಂದಾಯ ಕಟ್ಟಲು ಕೇಳಿಕೊಳ್ಳುತ್ತಾಳೆ;

ನಾಳೆ ಹಂದಿದೊಡ್ಡಿಗೆ ತಡಿಕೆ ಕಟ್ಟಬಹುದೆನ್ನುತ್ತಾಳೆ.
ನಾಯಿಗಳು ಬೊಗಳುವ ಸದ್ದು ಕೇಳಿಸುತ್ತದೆ.

ಸರಿಯೆಂದು ಎದ್ದು, ಓಣಿ ಹಾದಿಗೆ ಬೀಳುತ್ತಿದ್ದಂತೆ-
ಇವನನ್ನು ಕಂಡೊಡನೇ ಉಚ್ಚೆ ಹೊಯ್ಯುವ ಹೆಂಗಸರು ಕಣ್ಣಿಗೆ ಕಟ್ಟಿಕೊಳ್ಳುವರು.

*****

Latest posts by ಮಂಜುನಾಥ ವಿ ಎಂ (see all)