ರಾವಣಾಂತರಂಗ – ೧೮

ರಾವಣಾಂತರಂಗ – ೧೮

ಮಾಯಾಯುದ್ಧ

ಮರುದಿವಸ, ಸೂರ್ಯೋದಯಕ್ಕೆ ಮೊದಲೇ ಎಚ್ಚೆತ್ತ ಇಂದ್ರಜಿತುವು ಸ್ನಾನ, ಪೂಜೆ, ಮುಗಿಸಿ, ಸುಖಕರವಾದ ಸುಗ್ರಾಸ ಭೋಜನವನ್ನು ಮಾಡಿ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಇಂದ್ರಜಿತುವಿನ ಪತ್ನಿ ಆರತಿಯನ್ನು ಮಾಡಿ ಹಣೆಗೆ ರಕ್ಷೆಯನ್ನಿಟ್ಟು ಜಯವಾಗಲೆಂದು ಶುಭಹಾರೈಕೆ ನೀಡಿ ಕಳುಹಿಸಿಕೊಟ್ಟಳು. ಜಯಭೇರಿಯೊಂದಿಗೆ ರಣರಂಗಕ್ಕೆ ಬಂದ ಇಂದ್ರಜಿತುವಿನ ವೀರಾವೇಶವನ್ನು ಶಸ್ತ್ರಾಸ್ತ್ರ ನೈಪುಣ್ಯತೆಯನ್ನು ಕಂಡು ಸುಗ್ರೀವಾದಿ ಸೇನಾ ನಾಯಕರು ದಂಗುಬಡಿದರು. ಇಂದ್ರಜಿತುವಿನ ರಥದಗಾಲಿಗಳ ಶಬ್ಧವು ಕುದುರೆಗಳ ಹೇಷಾರವೂ ಪದತಿಗಳ ಸಿಂಹನಾದವೂ ಕಪಿ ಸಮೂಹವನ್ನು ಮೂರ್ಚೆಗೊಳಿಸಿತು. ಒಂದು ದಿಕ್ಕಿನಿಂದ ಅವನ ಬಿಲ್ಲಿನ ಝಂಕಾರವೂ ಮತ್ತೊಂದು ದಿಕ್ಕಿನಿಂದ ಹರಿದು ಬಂದ ಬಾಣಗಳ ಸುರಿಮಳೆಯಿಂದ ಕಪಿಸೇನೆ ತತ್ತರಿಸಿತು. ಇಂತಹ ಸಮಯದಲ್ಲಿ ದಿವ್ಯಾಸ್ತ್ರದಿಂದ ಕಗ್ಗತ್ತಲೆಯನ್ನು ಉಂಟುಮಾಡಲು ಸಕಲ ಕಪಿಗಳೂ ಕಪಿನಾಯಕರೂ ಕಂಗೆಟ್ಟರು. ಆಗ ವಿಭೀಷಣನು ಗದಾಧಾರಿಯಾಗಿ ಇಂದ್ರಜಿತುವಿನ ಸಂಗಡ ಯುದ್ಧಕ್ಕೆ ನಿಂತನು. ಮೊದಲಿಗೆ ತಮ್ಮ ಮಾತಿನ ಬಾಣಗಳಿಂದ ಒಬ್ಬರೊನ್ನೊಬ್ಬರು ಖಂಡಿಸಿದರು. ಇಂದ್ರಜಿತುವಿನ ಮೋಸದ ಮಾಯದ ಯುದ್ಧ ನೈಪುಣ್ಯತೆಯನ್ನು ಬಲ್ಲವನಾಗಿದ್ದರಿಂದ ತನ್ನ ಗದೆಯಿಂದ ಅವನ ರಥವನ್ನಪ್ಪಳಿಸಿ ರಥಹೀನನ್ನಾಗಿ ಮಾಡಿದನು. ಆಗ ಇಂದ್ರಜಿತುವು ಮರೆಯಾಗಿ ಲಂಕೆಗೆ ಓಡಿಹೋಗಿ ತಾನೂ ಯಜ್ಞಪುರುಷನಿಂದ ವರವಾಗಿ ಪಡೆದಿದ್ದ ದಿವ್ಯ ರಥದಲ್ಲಿ ಕುಳಿತು ದೇವತೆಗಳಿಂದ ಪಡೆದ ಶಸ್ತ್ರಾಸ್ತ್ರಗಳನ್ನು ಧರಿಸಿ ರಣರಂಗಕ್ಕೆ ಬಂದನು. ಅವನು ಮರಳಿ ಬಂದು ಯುದ್ಧದ ಸಿದ್ಧತೆಯನ್ನು ಕಂಡು ವಿಭೀಷಣನು ರಾಮಲಕ್ಷ್ಮಣರಿಗೆ ಅಪಾಯ ತಪ್ಪಿದ್ದಲ್ಲ ಎಂದು ಮನಗಂಡು ಹನುಮಂತ, ಸುಗ್ರೀವರನ್ನು ರಾಮಲಕ್ಷ್ಮಣರ ಪಹರೆಗೆ ನಿಲ್ಲಿಸಿ, ಉಳಿದ ಕಪಿಸೇನಾ ನಾಯಕರೊಡನೆ ತಾನೇ ಯುದ್ಧಕ್ಕೆ ನಿಂತನು. ಇಂತ್ರಜಿತುವಿನ ಮರ್ಮಗಳನ್ನು ತಿಳಿದವನಾದ್ದರಿಂದ ಅಸ್ತ್ರಕ್ಕೆ ಅಸ್ತ್ರ, ಹೊಡೆತಕ್ಕೆ ಪ್ರತಿ ಹೊಡೆತಗಳನ್ನು ನೀಡುತ್ತಾ ಎದುರಿಸಿ, ನಿಂತದ್ದರಿಂದ ಇಂದ್ರಜಿತುವಿನ ಆಟವೇನು ಸಾಗಲಿಲ್ಲ. ಸಾಯಂಕಾಲದವರೆಗೂ ವ್ಯರ್ಥವಾಗಿ ಹೊಡೆದಾಡಿ ಎನೂ ಪ್ರಯೋಜನವಾಗಲಿಲ್ಲ. ಇಂದ್ರಜಿತುವು ಮರೆಯಾಗಿ ಲಂಕೆಗೆ ಹಿಂದಿರುಗಿದನು. ಬಂದು ಯುದ್ಧದ ಬಗೆಯನ್ನು ವಿವರಿಸಿದನು.

ಮಗನ ವ್ಯರ್ಥಹೋರಾಟವನ್ನು ಕಂಡು ಬೇಸರವಾದರೂ ಧೃತಿ ಗೆಡಲಿಲ್ಲ. ಅವನಿಗೆ ನಿರಾಶೆಮಾಡಬಾರದೆಂದು “ಮಗನೇ ನೀನು ವಿಭೀಷಣನ ಸಂಗಡ ಯುದ್ಧಕ್ಕೆ ನಿಲ್ಲಬೇಡ. ನಿನ್ನ ಚಿಕ್ಕಪ್ಪನೊಡನೆ ವ್ಯರ್ಥವಾಗಿ ಕಾದಾಡುವುದರಿಂದ ಪ್ರಯೋಜನವಿಲ್ಲ. ನೀನು ನೇರವಾಗಿ ರಾಮಲಕ್ಷ್ಮಣರೊಡನೆ ಯುದ್ಧಮಾಡಿ ಅವರನ್ನು ಸಂಹರಿಸು. ರಾಮಲಕ್ಷ್ಮಣರು ಮೋಸದ ಮಾಯಾ ಯುದ್ಧ ಅರಿತವರಲ್ಲ” ನನ್ನ ಮಾತಿಗೆ ಒಪ್ಪಿದ ಇಂದ್ರಜಿತುವು ಮರುದಿನ ಯುದ್ಧ ಸನ್ನದ್ಧನಾಗಿ ನೇರವಾಗಿ ರಾಮಲಕ್ಷ್ಮಣರ ಠಾವಿಗೆ ಬಂದು ಕತ್ತಲೆಯನ್ನು ಉಂಟುಮಾಡಿ ಸರ್ಪಾಸ್ತ್ರವನ್ನು ಹೊಡೆದನು. ಆಗ ಅದರಿಂದ ಸಾವಿರಾರು ನಾಗಗಳು ರಾಮಲಕ್ಷ್ಮಣರನ್ನು ಮುಳುಗಿಸಿದವು. ಅವುಗಳಿಂದ ಅಲ್ಲೋಲಕಲ್ಲೋಲವಾಯಿತು. ಇಂದ್ರಜಿತುವು ಮನೆಗೆ ಬಂದು ತನ್ನ ವಿಜಯದ ವಾರ್ತೆಯನ್ನು ಎಲ್ಲರಿಗೂ ತಿಳಿಸಿದನು.

ಸಂಜೆಯಾಯಿತು. ಶತ್ರುಪಾಳಯದಲ್ಲಿ ಮೂರ್ಚಿತರಾದ ರಾಮಲಕ್ಷ್ಮಣರ ಗತಿಯೇನಾಯಿತೆಂದು ತಿಳಿಯುವ ಕಾತುರದಲ್ಲಿದ್ದನು. ಸಮಯಕ್ಕೆ ಸರಿಯಾಗಿ ಆಗಮಿಸಿದ ಗುಪ್ತಾಚಾರರು “ಪ್ರಭು, ಶತ್ರು ಪಾಳಯದಲ್ಲಿ ಸ್ಮಶಾನ ಮೌನ ಕವಿದಿತ್ತು. ಎಲ್ಲರೂ ತಲೆಮೇಲೆ ಕೈಹೊತ್ತು ಮುಂದೇನು ಗತಿ ಎಂದು ಚಿಂತಿಸುತ್ತಿರುವಾಗ ತ್ರಿಲೋಕಸಂಚಾರಿ ನಾರದರು ಬಂದು ಶ್ರೀರಾಮನನ್ನು ಸಮಾಧಾನಿಸಿ “ಶ್ರೀಮನ್ನಾರಾಯಣನೇ ಇದೇನು ನೀನು ಹೀಗೆ ಸ್ಮೃತಿ ತಪ್ಪಿ ಮಲಗಿದರೆ ಲೋಕಗಳ ಗತಿಯೇನು? ಎಲ್ಲರನ್ನು ಸಂರಕ್ಷಿಸಬೇಕಾದ ನೀನೇ ಕಂಗೆಟ್ಟರೆ ಮುಂದೆ ಜಗತ್ತಿನ ಗತಿಯೇನು? ಭೂಭಾರಹರಣಕ್ಕೆ ಮಾರ್ಗವಾವುದು? ದುಷ್ಟರ ನಿಗ್ರಹಕ್ಕೆ ದಾರಿ ಯಾವುದು? ನೀನು ನಿನ್ನ ವಾಹನನಾದ ಗರುಡನನ್ನು ನೆನೆದರೆ ನಿಮಿಷಾರ್ಧದಲ್ಲಿ ಕಾರ್ಯವಾಗುವುದು” ಎಂದು ಹೇಳಿ ಹೊರಟು ಹೋದರು. ಆಗ ಶ್ರೀರಾಮನು ಗರುಡವನ್ನು ನೆನೆಯಲು ನಾಲ್ಕು ವೇದಗಳ ಗರಿಗಳೊನ್ನಳಗೊಂಡ ಗರುಡನು ಆಕಾಶದಲ್ಲಿ ಬರುತ್ತಿರುವಾಗ ತಕ್ಷ, ವಾಸುಕಿ ಮೊದಲಾದ ನಾಗಗಳು ಪಾತಾಳವನ್ನು ಹೊಕ್ಕವು, ಆದಿಶೇಷನು ತನಗೇನೋ ವಿಪತ್ತು ಕಾದಿದೆಯೆಂದು ತಲೆ ಮರೆಸಿಕೊಂಡನು. ಉಳಿದ ಸಾಮಾನ್ಯ ನಾಗಗಳಂತೂ ಎಲ್ಲಿಯೋ ಓಡಿಹೋದವು, ವಾಯುವು ವೇಗವಾಗಿ ಚಲಿಸಲು ಗರುಡನು ಬಂದು ನಮಸ್ಕರಿಸಿ “ಸ್ವಾಮಿ, ನಾರಾಯಣ ಏನಪ್ಪಣೆ? ಯಾವ ಕಾರ್ಯ ನನ್ನಿಂದೇನಾಗಬೇಕು? ಅನುಗ್ರಹ ತೋರಿಸಿ ಅಪ್ಪಣೆ ಮಾಡಿರಿ” ಎಂದು ಬೇಡಿಕೊಳ್ಳಲು “ಖಗರಾಜನೇ ಈಗ ಬಂದಿರುವ ಸರ್ಪಾಸ್ತ್ರಬಾದೆಯನ್ನು ಪರಿಹರಿಸಿ ಈ ಯುದ್ಧವು ಮುಗಿಯುವವರೆಗೆ ನೀನು ಇಲ್ಲಿಯೇ ಗುಪ್ತವಾಗಿದ್ದು ನನಗೆ ಸಹಾಯ ಮಾಡಬೇಕೆಂದೇನು.” “ಗರುಡನು ಶ್ರೀರಾಮನ ಅಪ್ಪಣೆಯನ್ನು ಶಿರಸಾ ಹೊತ್ತು ಅಲ್ಲೇ ನಿಂತನು. ಸರ್ಪಾಸ್ತ್ರ ಬಾದೆಯಿಂದ ಎಲ್ಲರೂ ಮುಕ್ತರಾಗಿ ನಾಳಿನ ಯುದ್ಧಕ್ಕೆ ಹೆಚ್ಚಿನ ಉತ್ಸಾಹದಿಂದ ಸಜ್ಜಾಗಿದ್ದಾರೆ” ಎಂದು ಹೇಳಲು ಶತ್ರುಗಳ ಬಲವು ಹೆಚ್ಚಾಗುತ್ತಿದೆ. ಅವರು ಚೇತರಿಸಿಕೊಳ್ಳುವ ಮುನ್ನವೇ ಬಲಿಹಾಕಬೇಕು. ನಾಳಿನ ಯುದ್ಧಕ್ಕೆ ವೀರ ಧೂಮ್ರಾಕ್ಷನೆಂಬ ನಂಬಿಕೆಯ ದಳಪತಿಯನ್ನು ಒಂದು ಲಕ್ಷ ರಾಕ್ಷಸ ಸೇನೆಯೊಂದಿಗೆ ಕಳುಹಿಸಿಕೊಟ್ಟೆನು.

ನನ್ನ ಮಾತನ್ನು ಶಿರಸಾವಹಿಸಿ ಧೂಮ್ರಾಕ್ಷನು ಸಮರದ ಭೂಮಿಗೆ ಹೋಗಿ ಶರವರ್ಷವನ್ನು ಕರೆಯುತ್ತಾ ಕಪಿ ಸೈನ್ಯವನ್ನು ಮುತ್ತಿದನು. ಅವನ ಬಾಣಗಳ ಸುರಿಮಳೆಗೆ ಕಪಿಸೈನ್ಯವು ನಡುಗಿತು. ಇದನ್ನು ಕಂಡ ಅಂಗದನು ದೊಡ್ಡದೊಂದು ಬೆಟ್ಟವನ್ನು ಕಿತ್ತು ಅವನ ಮೇಲೆ ಎಸೆಯಲು ಅವನ ರಥವು ಚೂರುಚೂರಾಯಿತು. ಕುದರೆಗಳು ಸಾರಥಿಯೂ ಯಮಲೋಕ ಸೇರಿದರು. ಅನಂತರ ಅಂಗದನಿಗೂ ಧೂಮ್ರಾಕ್ಷನಿಗೂ ಭಯಂಕರವಾದ ಕಾಳಗ. ಧೂಮ್ರಾಕ್ಷನ ಬಾಣಗಳ ಹೊಡೆತಕ್ಕೆ ಅಂಗದನ ಮೈ ತುಂಬಾ ನೆತ್ತರು ಆದರೂ ಅಂಗದನು ಬೆದರದೆ ಬೇರೊಂದು ಪರ್ವತವನ್ನು ಕಿತ್ತು ತಂದು ಎಸೆಯಲು ಧೂಮ್ರಾಕ್ಷನು ಬಜ್ಜಿಯಾಗಿ ಮರಣ ಹೊಂದಿದನು. ಉಳಿದ ರಕ್ಕಸರು ಓಡಿ ಬಂದು ಸುದ್ದಿ ಮುಟ್ಟಿಸಿದರು. ಧೂಮ್ರಾಕ್ಷನ ಮರಣದ ಸುದ್ದಿಯನ್ನು ಕೇಳಿ ಎದೆ ನಡುಗಿದರೂ ಸಾವರಿಸಿಕೊಂಡು ರುಧಿರನೆಂಬ ಸೇನಾನಿಯನ್ನು ಕರೆದು ಸಾಕಷ್ಟು ಚತುರಂಗಬಲವನ್ನು ಕೊಟ್ಟು ಯುದ್ಧಕ್ಕೆ ಕಳುಹಿಸಿದೆ. ಅವನು ದಕ್ಷಿಣ ದ್ವಾರದಿಂದ ಹೊರಟು ರಕ್ತದ ಮಳೆ ಸುರಿಸುತ್ತಾ ಬರುತ್ತಿರಲು ಅಲ್ಲಿಯೇ ನಿಂತಿದ್ದ ಸುಷೇಣನಿಗೂ ನೀಲನು ಸಹಾಯಕನಾಗಿ ಇವರಿಬ್ಬರೂ ಸೇರಿ ರುಧಿರಾಸುರನನ್ನು ರಥದಿಂದ ಕೆಳಗೆ ಬೀಳಿಸಿ ಅವನ ಕಾಲುಗಳನ್ನು ಹಿಡಿದು ಗರಗರನೇ ತಿರುಗಿಸಿ ನೆಲಕ್ಕೆ ಅಪ್ಪಳಿಸಲು ರಾಕ್ಷಸನು ರಕ್ತಕಾರಿ ಪರಲೋಕಕ್ಕೆ ಪ್ರಯಾಣ ಬೆಳೆಸಿದನು.

ಹತಶೇಷ ರಕ್ಕಸರು ಲಂಕೆಗೆ ಬಂದು ರುಧಿರಾಸುರನ ಸಾವಿನ ವಾರ್ತೆ ತಿಳಿಸಿದಾಗ ಮುಂದೆ ಯಾರನ್ನು ಕಳಿಸಬೇಕೆಂದು ಯೋಚಿಸುತ್ತಿದ್ದೆ. ಮಹಾಬುದ್ಧಿಶಾಲಿಯು ಮಂತ್ರಿವರ್ಯನು ರಾಜಕೀಯ ಮುತ್ಸದ್ಧಿಯಾದ ಪ್ರಹಸ್ತನ ನೆನಪಾಗಿ ಹೇಳಿ ಕಳಿಸಿದೆ. “ಪ್ರಹಸ್ತನೇ ನಿನ್ನನ್ನು ಸೇನಾಧಿಪತಿಯನ್ನಾಗಿ ಮಾಡಿ ಇಂದಿನ ಯುದ್ಧಕ್ಕೆ ಕಳಿಸುತ್ತಿದ್ದೇನೆ. ನೀನು ಚಾಣಾಕ್ಷ ಇಂದಿನವರೆಗು ನನ್ನ ಜೊತೆಯಲ್ಲೇ ಇದ್ದು ನೆರಳಿನಂತೆ ಹಿಂಬಾಲಿಸುತ್ತಾ ನನ್ನ ಶ್ರೇಯಸ್ಸನ್ನೇ ಕೋರಿದ ದೇಶಭಕ್ತ, ನೀನು ಇಂದಿನ ಯುದ್ಧದಲ್ಲಿ ರಾಮಲಕ್ಷ್ಮಣರನ್ನು ಕೊಂದು ಜಯಶಾಲಿಯಾಗಿ ಬಾ” “ಮಹಾರಾಜ ಇಲ್ಲಿನವರೆಗಿನ ಘಟನೆಗಳು ನೋಡಿದರೆ ಯುದ್ಧಕ್ಕೆ ಹೋದವರೆಲ್ಲ ಬದುಕಿ ಬಂದಿಲ್ಲ. ಎಲ್ಲರೂ ನಿಮಗಾಗಿ ಪ್ರಾಣವನ್ನೇ ತ್ಯಾಗಮಾಡಿದ್ದಾರೆ. ಈ ದಿನ ನನ್ನ ಸರದಿ ನನಗೇನು ಪ್ರಾಣದ ಮೇಲೆ ಆಸೆಯಿಲ್ಲ. ಜೀವದ ಹಂಗು ತೊರೆದು ಹೋರಾಡುತ್ತೇನೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ ನೀಚ ನಾನಲ್ಲ. ನೀವು ಸಂಧಿ ಮಾಡಿಕೊಳ್ಳಿ ಎಂದು ಹೇಳುವುದಿಲ್ಲ. ಪ್ರಭು ನನಗೂ ಗೊತ್ತು ನಿಮಗೂ ಗೊತ್ತು ಯುದ್ಧದಲ್ಲಿ ನಾನು ಬದುಕಿ ಬರುವುದಿಲ್ಲವೆಂದು ; ಯಾವುದೋ ಜನ್ಮದ ಋಣ, ನಿಮ್ಮ ಮಂತ್ರಿಯಾಗಿ ನಿಮ್ಮ ಸೇವೆ ಮಾಡಿದೆ ಯಾವ ಜನ್ಮದ ಪಾಪಶೇಷವೋ ವಿಷ್ಣುವಿನ ವೈರಿಯಾಗಿ ದ್ವೇಷ ಕಟ್ಟಿಕೊಂಡು ಅವನ ಕೈಯಿಂದಲೇ ಸಾಯುತ್ತಿದ್ದೇನೆ ಹೆಚ್ಚು ಮಾತನಾಡಿ ನಿಮ್ಮ ಮನ ನೋಯಿಸಲಾರೆ ಬರುತ್ತೇನೆ. ಪ್ರಭು ನಿನಗೆ ಒಳ್ಳೆಯದಾಗಲಿ” ಎಂದು ಹೇಳಿ ಹೋದ ಪ್ರಹಸ್ತ ಮರಳಿ ಬರಲಿಲ್ಲ. ವಜ್ರದೇಹಿಯಾದ ಅಂಗದನು ಪ್ರಹಸ್ತನ ಸಾರಥಿಯನ್ನು ಕುದುರೆಗಳನ್ನು ಕೊಂದು ಅವನ ಕೈಯೊಳಗಿನ ಗದೆಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಕೊಂದು ಹಾಕಿದನು. ಪ್ರಹಸ್ತನ ಮರಣವಾರ್ತೆ ಅನಿರೀಕ್ಷಿತವೇನೂ ಅಲ್ಲ. ಹೋಗುವಾಗಲೇ “ನಾನಿನ್ನು ಬರುವುದಿಲ್ಲ” ಎಂದು ಹೇಳಿ ಹೋದವನು ಪ್ರಹಸ್ತ. ನೀನು ಹೋಗಿದ್ದು ನನ್ನ ಬಲಗೈ ಮುರಿದಂತಾಯಿತು. ಎಷ್ಟೋ ವರ್ಷಗಳ ಸಂಬಂಧ ನಮ್ಮದು ನೀನು ಬರಿ ಮಂತ್ರಿಯಾಗಿರಲಿಲ್ಲ, ಸ್ನೇಹಿತನಾಗಿದ್ದೆ ಸಲಹೆಗಾರನಾಗಿದ್ದೆ ಮಗನಿಗಿಂತಲೂ ಹೆಚ್ಚಾಗಿದೆ. ಹೆಜ್ಜೆ ಹೆಜ್ಜೆಗೂ ನನ್ನ ಅನುಸರಿಸುತ್ತಿದ್ದೆ, ಆದರೆ ನೀನು ನನ್ನ ತಪ್ಪುಗಳನ್ನು ಖಂಡಿಸಲಿಲ್ಲ. ಒಡೆಯನಿಗೆ ಎದುರುನಿಂತು ಪ್ರತಿಭಟಿಸಲಿಲ್ಲ. ಮಂತ್ರಿಯಾದವನು ಮಾಡಬೇಕಾದ ಕರ್ತವ್ಯ ನೀನು ಮಾಡಲಿಲ್ಲ. ನನ್ನ ಸರಿದಾರಿ ನಡೆಯುವಂತೆ ಪ್ರೇರೇಪಿಸಲಿಲ್ಲ. ಅದಕ್ಕೆ ನಿನಗೀ ಶಿಕ್ಷೆ. “ಪ್ರಹಸ್ತ ಮುಂದಿನ ಜನ್ಮವೊಂದಿದ್ದರೆ ಮತ್ತೆ ಬೇಟಿಯಾಗೋಣ, ಹೋಗಿ ಬಾ ಗೆಳೆಯಾ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ”.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀತೆ
Next post ನನ್ನಿಂದ ದೂರವಾಗಲು ಮಾಡು ಏನೆಲ್ಲ

ಸಣ್ಣ ಕತೆ

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys