ನನ್ನಿಂದ ದೂರವಾಗಲು ಮಾಡು ಏನೆಲ್ಲ,
ಈ ಉಸಿರಿರುವ ತನಕ ನೀನು ನನ್ನವನೇ;
ನಿನ್ನೊಲವು ತೀರಿತೋ ನನಗೆ ಬಾಳೇ ಇಲ್ಲ,
ಬಾಳಿಗವಲಂಬನೆ ನಿನ್ನೊಂದು ಸ್ನೇಹವೇ.
ನನಗಿಲ್ಲ ಬಹು ದೊಡ್ಡ ಕೇಡು ಘಟಿಸುವ ಭಯವೆ,
ಅತಿ ಸಣ್ಣ ಹಾನಿಗೇ ಈ ಬಾಳು ಕಳಚಲಿದೆ;
ನೆಚ್ಚಬೇಕಿಲ್ಲ ನಾ ನಿನ್ನೊಂದು ಲಹರಿಯ,
ಭಿನ್ನವಾದೊಂದು ನೆಲೆ ನನಗೆ ಇದ್ದೇ ಇದೆ.
ನಿನ್ನ ಪ್ರೀತಿಗೆ ಗಂಟುಬಿದ್ದ ಈ ಜೀವವನು
ಬೇಕು ಬೇಡಗಳ ಉಯ್ಯಾಲೆಯಲಿ ಹಾಕದಿರು,
ಎಂಥ ಸೌಖ್ಯದ ಸೂತ್ರ ಕಂಡುಕೊಂಡೆನೊ ನಾನು
ನೆಮ್ಮದಿಯ ನಿನ್ನೊಲವ ಪಡೆಯಲೂ, ಸಾಯಲೂ!
ನಿನ್ನೊಲವು ನಿಜ ಎಂಬ ನೆಮ್ಮದಿಯ ಮೂಲ ಇದು:
ನೀನು ಸುಳ್ಳಾದರೂ ಅದು ನನಗೆ ತಿಳಿಯದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 92
But do thy worst to steal thyself away