ಕೊಳ್‌ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ
ತ್ಯಾಗದಿಂ ಜೀವನವ ನಂದನನ ಗೈದಿರುವೆ
ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ!
ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ
ನಿನ್ನ ಜೀವನವೊಂದು ತಪದ ರೂಪದೊಳಿಹುದು
ನಲುಮೆ ಒಲಮೆಗಳಿಂದ ನವನಾಕವಾಗಿಹುದು
ನರಕದಲಿ ನಿಂತರೂ ಅದನೆ ಸ್ವರ್ಗವಮಾಡಿ
ಹೆಗ್ಗುರಿಯ ಧ್ರುವದೆಡೆಗೆ ಬಾಳನ್ನು ಗುರಿಮಾಡಿ
ಹೆದರದೆಯೆ ಹೇಸಿಕೆಯನೆಲ್ಲದಾಟುತ ನಡೆದು
ಹೂವಯ್ಯ ನೆತ್ತರಕೆ ನೆಗೆದ ಸೀತಾದೇವಿ
ನಿನ್ನ ಹೃದಯವ ಸತತ ಆ ವಿಧಿಯು ಕಡೆಕಡೆದು
ಬೇಸತ್ತಿತಲ! ನಿನ್ನ ತಾಳ್ಮೆಯನು ಕಂಡೋವಿ
ಸಂತೈಸಿತಲ! ವಿಧಿಯ ಗೆದ್ದೆ ಧೀರರ ಧೀರೆ
ನಡೆದೆಯಲ ಮೇಗಡೆಗೆ ಹೆಗ್ಗುರಿಯ ನೀಸಾರೆ
*****