ಘೋರಿಯ ಮಹಮದನಿದ್ದ
ಘಜನಿಯ ಮಹಮದನಿದ್ದ
ಬಾಬರನೂ ಇದ್ದ
ಬಾಬರ ಮಾತ್ರ ಬೇರೆಯಾಗಿದ್ದ
ಅವನು ಕವಿಯಾಗಿದ್ದ

ಕಾಬೂಲಿನ ಎತ್ತರದಲ್ಲಿ ನಿಂತು
ಅವನು ದಕ್ಷಿಣದತ್ತ ನೋಡಿದನು
ಪರ್ವತಗಳ ಆಚೆ ನದಿಗಳ ಕೆಳಗೆ
ಹರಡಿತ್ತು ಉಪಖಂಡ
ಕೊನೆಯಿಲ್ಲದಂತೆ-ಆ ಘಳಿಗೆ
ಕವಿ-ಯೋಧ-ಅಶ್ವಾರೋಹಿ
ಅವನ ಚಿತ್ತದಲಿ ಮೂಡಿದುದೇನು
ಆ ಹುಚ್ಚಿಗೆ ಅರ್ಥವೇನು-
ಯಾರಿಗೂ ತಿಳಿದಿರಲಿಲ್ಲ!

ಬಾಬರ! ನಾನೂ ಬರೆಯುವೆನು ಕವಿತೆಗಳ
ಖೈಬರಿನ ಕಣಿವೆ ಕಾಬೂಲಿನ ಹೆಣ್ಣುಗಳ
ಕಲ್ಪನೆಯ ಕೆರಳಿಸುವ ನೆಲ ಮುಗಿಲುಗಳ
ಬಯಸುವೆನು ಕೈಗೆಟುಕದ ಖರ್ಜೂರ ಹಣ್ಣುಗಳ

ಅಶ್ವಾರೋಹಿಗಳಿಲ್ಲ ಅಶ್ವಗಳಿಲ್ಲ
ಹಿಂಬಾಲಿಸುವ ಪದಾತಿಯಿಲ್ಲ-ನನ್ನ ಬಳಿ
ಅದಮ್ಯ ಬಯಕೆಯೊಂದಲ್ಲದೆ ಇನ್ನೇನೂ ಇಲ್ಲ
ಬಾಬರ! ಏನು ಹೇಳಲಿ

ಹುಡುಕುತ್ತ ಕಣ್ಣಿಗೆ ಕಾಣಿಸದ ಸ್ವರ್ಗ
ಮನಸ್ಸು ಹತ್ತುವುದು ಖೈಬರಿನ ಮಾರ್ಗ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)