ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ

ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ

ಎಲಿಜತನ್ ಕಾಲ ಇಂಗ್ಲೀಷ ನಾಟಕದ ಸುವರ್ಣಯುಗ. ಆದರೆ ಮುಂದೆ ಪ್ಯೂರಿಟನ್‌ರ ಕಾಲದಲ್ಲಿ ನಾಟಕಗಳಿಗಾಗಲಿ, ಕಲೆಗಾಗಲಿ ಮಾನ್ಯತೆ ಹೊರಟುಹೋದ ಕಾರಣ ನಾಟಕಗಳು ತಮ್ಮ ಚರಿಷ್ಮಾ ಕಳೆದುಕೊಂಡವು. ನಾಟಕಗಳು ಜನಸಾಮಾನ್ಯರ ಮನಸ್ಸನ್ನು ನೈತಿಕವಾಗಿ ಭ್ರಷ್ಟಗೊಳಿಸುವುದೆಂಬ ನಿಲುವು ಹೊತ್ತ ಪ್ಯೂರಿಟನ್‌ರ ಧರ್ಮಶುದ್ಧ ಸುಧಾರಕ ಮನಸ್ಥಿತಿಗೆ ಅವು ಅಪಥ್ಯವಾಗಿದ್ದವು. ಆದರೆ ಪುನಃ ರೆಸ್ಟೋರೇಷನ್ ಅವಧಿಯಲ್ಲಿ ಸಮಾಜದಲ್ಲಿ ನಾಟಕಗಳು ಮತ್ತೆ ತಮ್ಮ ಯಥಾಸ್ಥಿತಿ ಸ್ಥಾಪನೆ ಮಾಡಿಕೊಂಡವು.

ಈ ಅವಧಿಯಲ್ಲಿಯೇ ಶೆರಿಡನ್‌ನ School for Scandal ಎಂಬ ಹಾಸ್ಯರಸ ಪ್ರಧಾನ ನಾಟಕ ಮೂಡಿಬಂದಿತು. ಎರಡು ಕಥೆಗಳನ್ನು ಒಂದೇ ಹಂದರದೊಳಗೆ ಕಟ್ಟಿ ನಾಟಕ ಬರೆದಿರುವುದು. ಅಪನಿಂದನೆ ಅಥವಾ ಗುಲ್ಲುಗಾರಿಕೆ ನಾಟಕದ ಶರೀರದಂತೆ ಉದ್ದಕ್ಕೂ ಹಬ್ಬಿಬರುವುದೇ ಇದರ ವಿಶೇಷತೆ. ಹತ್ತು ಹಲವು ಪಾತ್ರಗಳು ನಾಟಕದ ಹೆಣಿಕೆಯಲ್ಲಿ ತೂರಿಕೊಂಡರೂ ಪ್ರಮುಖ ಪಾತ್ರಗಳು Sir Peter Teazle ಮತ್ತವನ ಪತ್ನಿ ಎಳೆಯ ಪ್ರಾಯದ Lady Teazle. ಅವರಿಬ್ಬರ ನಡುವೆ ನಿರಂತರವೆನಿಸುವ ವಾಗ್ವಾದಗಳು, ವೈಷಮ್ಯಗಳ ಜೊತೆಯಲ್ಲೇ ಹೊಂದಿದ ಗಟ್ಟಿ ಅನುಬಂಧ, ಆತನ ಜೊತೆಯಲ್ಲೆ ಅವನ ಸುಪರ್ದಿಯಲ್ಲೆ ಬೆಳೆಯುತ್ತಿರುವ ಆತನ ಸಂಬಂದಿಗಳಾದ ಜೋಸೆಫ್ ಹಾಗೂ ಚಾರ್ಲ್ಸರೊಂದಿಗೆ ಆಕೆಯ ಅತಿರೇಕದ ವ್ಯವಹಾರ ಇದರ ಸುತ್ತಲೇ ಸುತ್ತುತ್ತದೆ.

Maria ಸುಂದರಿಯಾದ ಕುಲೀನ ಕುಟುಂಬದ ಹುಡುಗಿ. ಆಕೆ ಶ್ರೀಮಂತ ಹೆಣ್ಣು. ಆದರೆ ವಿಧವೆ Lady Sneerwellಳ ಸೋದರ ಸಂಬಂಧಿ. ಆಕೆಯನ್ನು ವರಿಸಿ ಆಕೆಯ ಆಸ್ತಿಗೆಲ್ಲಾ ವಾರಸುದಾರನಾಗುವ ಆಕಾಂಕ್ಷೆ ಹೊಂದಿದ ಜೊಸೆಫ್ ತನ್ನಲ್ಲಿಯ ಎಲ್ಲ ದುರ್ಗುಣಗಳ ತೋರ್ಪಡಿಸದೇ ಸಜ್ಜನ ಮುಖವಾಡ ತೊಟ್ಟು ಆಕೆಯ ಹಿಂದೆ ಬೀಳುತ್ತಾನೆ. ಆದರೆ ದುಂದುಗಾರ ಉಡಾಳ ಪ್ರವೃತ್ತಿಯ ಪ್ರದರ್ಶಿಸುವ ಆದರೆ ನಿಜಕ್ಕೂ ಪ್ರಾಮಾಣಿಕನಾದ ಮುಗ್ಧನಾದ ಆತನ ಕಿರಿಯ ಸಹೋದರ ಚಾರ್ಲ್ಸ ಆಕೆಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಾನೆ. ಆಕೆ ಕೂಡಾ ಚಾರ್ಲ್ಸನನ್ನು ವಿವಾಹವಾಗಲು ಬಯಸುತ್ತಾಳೆ. ಆದರೆ ಅವರ ಪೋಷಕನಾದ ಪೀಟರ ಮಾತ್ರ ಆಕೆ ಜೋಸೆಫನನ್ನು ವರಿಸುವಂತೆ ನಿರ್ಧರಿಸುತ್ತಾನೆ. ಆತನ ಹೊರಮುಖದ ಗುಣಗಳನ್ನೆ ನಿಜವೆಂದು ನಂಬುವಂತೆ ಜೋಸೆಫ್ ನಟಿಸುತ್ತಾನೆ. ತಾನೊಬ್ಬ ಪರಿಶುದ್ಧ ಸದ್ಗುಣಿ ಎಂಬಿತ್ಯಾದಿ ಪೋಸು ನೀಡುವ ಆತ ಮಹಾನ್ ಕಿಲಾಡಿಯೆಂಬುದು ಶ್ರೀಮಂತ ವಿಧವೆ ಲೇಡಿ ಸ್ನೀರವೆಲ್‌ಗೂ ಗೊತ್ತು. ಆದರಾಕೆ ಚಾರ್ಲ್ಸನಲ್ಲಿ ಅಂತರ್ಗತ ಮೋಹಿತೆ. ಹಾಗಾಗಿ ಜೋಸೆಫ್ ಮಾರಿಯಾಳನ್ನು ವಿವಾಹವಾಗಲು ಸಹಕರಿಸಲು ಸಿದ್ಧ. ಆಕೆ ಗುಲ್ಲುಗಾರ ಶಾಲೆಯ ಅಧ್ಯಕ್ಷಿಣಿ ಇದ್ದಂತೆ. ಆಕೆ ಕುಲೀನ ಸಮಾಜದಲ್ಲಿ ತನ್ನದೇ ಸ್ಥಾನಮಾನಗಳ ಹೊಂದಿದ್ದರೂ ತನ್ನ ಅನ್ಯನಿಂದನೆಯ ಗುಲ್ಲುಹಬ್ಬಿಸುವ ಚಟದಿಂದ ಹೊರತಾದವಳಲ್ಲ. ಆಕೆಯ ಸಹವರ್ತಿಗಳೆಂದರೆ ಸ್ನೇಕ್ ಮತ್ತು ಜೋಸೆಫ್. ಇವರಿಬ್ಬರೂ ದುಷ್ಟ ಪ್ರವೃತ್ತಿಯ ಸರದಾರರೇ. ಸ್ವಾರ್ಥಪ್ರಿಯರು. ಆಕೆಯಂತೆ ಭ್ರಷ್ಟರು.

ನೀಚ ಬುದ್ಧಿಯ Joseph Surface ತನ್ನ ಪೋಷಕನಾದ ಪೀಟರ್‌ನ ಪತ್ನಿ ಲೇಡಿ ಟೀಜಲ್‌ಳೊಂದಿಗೆ ಪ್ರೇಮದ ನಾಟಕವಾಡುತ್ತಾನೆ. ಶೆರಿಡನ್ ಆಕೆಯ ಪಾತ್ರವನ್ನು ಕಾಳಜಿಯಿಂದ ಚಿತ್ರಿಸುತ್ತಾನೆ. ಸರ್ ಪೀಟರ್ ವಯಸ್ಸಾಗಿದೆ. ಆದರಾಕೆ ತರುಣಿ. ಹೀಗಾಗಿ ಪೀಟರ ಮತ್ತವಳ ನಡುವೆ ಸಂಬಂಧಗಳಲ್ಲಿ ಏರುಪೇರಾಗುತ್ತದೆ. ಎಲ್ಲ ಬಡಕುಟುಂಬ ಹಾಗೂ ಶ್ರೀಮಂತ ಕುಟುಂಬಗಳಲ್ಲಿ ಸರ್ವೆಸಾಮಾನ್ಯವಾಗಿ ಕಂಡುಬರುವಂತೆ ಹಳ್ಳಿಯ ಹುಡುಗಿಯಾದ ಆಕೆಯನ್ನು ನಗರವಾಸಿಯೂ ಶ್ರೀಮಂತ ಮನೆತನದವನೂ ಆದ ಸರ್ ಪೀಟರ್ ಟೀಜಲ್ ವಿವಾಹವಾಗುತ್ತಾನೆ. ಆದರೆ ಸ್ವಭಾವತಃ ಬುದ್ಧಿವಂತೆ ಶೀಘ್ರಗ್ರಹಿಕೆಯ ಆದರೆ ಚಂಚಲಮನಸ್ಥಿತಿಯ ಆಕೆ ಕೆಲವೇ ದಿನಗಳಲ್ಲಿ ಪಟ್ಟಣದ ಎಲ್ಲ ಶೋಕಿ ಒನಪು ವೈಯಾರಗಳ ಮೈಗೂಡಿಸಿಕೊಂಡು ಪಟ್ಟಣವಾಸಿಗಳಿಗಿಂತ ಚಾಲಾಕಿಯಾಗಿ ಶ್ರೀಮಂತ ಹೆಣ್ಣುಮಕ್ಕಳ ವಿಚಿತ್ರಗುಣದಲ್ಲೊಂದಾದ ಅನ್ಯರ ಅಪನಿಂದನೆಯ ಚಟವನ್ನು ಚೆನ್ನಾಗಿ ಬೆಳೆಸಿಕೊಳ್ಳುತ್ತಾಳೆ. ಆಕೆ ಅನನುಭವಿ. ಅಷ್ಟೇ ಅಲ್ಲ. ತಾನೂ ಪತಿಯ ಸಂಬಂಧಿಯಾದ ಜೋಸೆಫ್‌ನಲ್ಲಿ ಆಸಕ್ತಳಾಗುತ್ತಾಳೆ. ಇದಕ್ಕೆ ಸ್ಕೇಂಡಲ್ ಕ್ಲಬ್‌ನ ಲೇಡಿ ಸ್ನೀರ್‌ವೆಲ್, ಸ್ನೇಕ್ ಮುಂತಾದವರು ಮಧ್ಯಸ್ತಿಕೆ ವಹಿಸುತ್ತಾರೆ. ಆಕೆಯ ಪತ್ರಗಳ ಜೋಸೆಫನಿಗೂ, ಜೋಸೆಫನ ಪತ್ರಗಳ ಆಕೆಗೂ ರವಾನಿಸಿ ಅವರಿಬ್ಬರಿಲ್ಲಿ ಅನುರಕ್ತತೆ ಹುಟ್ಟುವಂತೆ ಮಾಡುತ್ತಾರೆ. ಜೋಸೆಫ್ ನಿಜಕ್ಕೂ ಹೆಣ್ಣು ಬಾಕ.

ಆದರೆ ಆತನ ಕಿರಿಯ ಸಹೋದರ Charles surface ತನ್ನ ಪಿತ್ರಾರ್ಜಿತ ಆಸ್ತಿಯನ್ನು ಕುಡಿತ ಮೋಜು ಮಸ್ತಿಗಳಿಗೆ ವೆಚ್ಚ ಮಾಡುತ್ತ ದುಂದುಗಾರನೆಂದು ಕಂಡರೂ ಆತ ಆಂತರ್ಯದಿಂದ ಸದ್ಗುಣಿ. ಸರ್ ಒಲಿವರ್‌ಗೆ ಇದು ಚಿತ್ರಪಟಗಳ ಹರಾಜು ಸಮಯದಲ್ಲಿ ಅರಿವಾಗುತ್ತದೆ. ಹಾಗಾಗೆ ಆತ ಚಾರ್ಲ್ಸನ ಎಲ್ಲ ಸಾಲಗಳನ್ನು ತಾನೇ ಭರಿಸುತ್ತಾನೆ. ಚಾರ್ಲ್ಸನದು ತೆರೆದ ಮನಸ್ಸು, ನಾಟಕೀಯತೆ ಇಲ್ಲದ ಇದ್ದಂತೆ ಬದುಕುವ ವರ್ತನೆ ಹೊಂದಿದ ಆತ ಹೆಣ್ಣುಗಳ ಕಣ್ಣಲ್ಲಿ ಆಕರ್ಷಕನಾಗುತ್ತಾನೆ. ಮಾರಿಯಾ ಆತನ ಅತಿಯಾಗಿ ಪ್ರೀತಿಸಿದರೆ ಲೇಡಿ ಸ್ನೀರ್ ವೆಲ್ ಗುಪ್ತವಾಗಿ ಆತನನ್ನು ಮೋಹಿಸುತ್ತಾಳೆ.

ಮಾರಿಯಾ, ಸರ್ ಒಲಿವರ್, ರೋವ್ಲೆಗೆ ಚಾರ್ಲ್ಸನ ಸಭ್ಯತೆಯ ಅರಿವಿದ್ದರೂ, ಸ್ಕಾಂಡಲ್ ಪ್ರವೃತ್ತಿಯ ಲೇಡಿ ಸ್ನೀರ ವೆಲ್ ಮತ್ತಾಕೆಯ ಸ್ನೇಹಿತರು ಸೇರಿ ಲೇಡಿ ಟೀಜಲ್ ಹಾಗೂ ಚಾರ್ಲ್ಸ ಮದ್ಯೇ ಸಂಬಂಧದ ಗುಲ್ಲು ಹಬ್ಬಿಸಲು ಹೇಸುವುದಿಲ್ಲ. ಇದು ಅಲ್ಲಿಯ ಸಂಸ್ಕೃತಿಯ ಪ್ರತಿಫಲಿಸುತ್ತದೆ. ಪೀಟರ್ ಮನದಲ್ಲಿ ತಪ್ಪಾಗಿ ಗೃಹಿಸುವಂತೆ ಲೇಡಿ ಟೀಜಲ್ ಚಾರ್ಲ್ಸನಲ್ಲಿ ಒಲವು ಹೊಂದಿರುವ ಸಂಶಯ ಬಲಗೊಳ್ಳುವಂತೆ ಮಾಡುತ್ತಾರೆ. ಸಂಪ್ರದಾಯಸ್ಥ ನಿಲುವಿನ ಪೀಟರ್ ವ್ಯಕ್ತಿಗಳ ಸರಿಯಾಗಿ ಅರ್ಥೈಸಿಕೊಳ್ಳಲಾಗದೇ ಸಚ್ಚರಿತ್ರನಾದ ಚಾರ್ಲ್ಸ ಬಗ್ಗೆ ತಪ್ಪು ತಿಳಿಯುತ್ತಾನೆ. ಜೋಸೆಫ್‌ನ ಬೂಟಾಟಿಕೆಯ ಅರಿಯಲಾಗುವುದಿಲ್ಲ ಆತನಿಗೆ. ಆದರೆ ಈವೆಲ್ಲ ತೆರೆಮರೆಯ ಮಸಲತ್ತುಗಳು ನಾಟಕದ ನಾಲ್ಕನೇಯ ದೃಶ್ಯದಲ್ಲಿ ಅರಿವಾಗುತ್ತದೆ.
ಅದು ಸ್ಕ್ರೀನ್ ಸೀನ[ಪರದೆಯ ದೃಶ್ಯ] ಜೊಸೆಫ್ ಆದಿನ ತನ್ನ ಮನೆಗೆ ಲೇಡಿ ಟೀಜಲ್‌ಳ ಕರೆಸಿಕೊಳ್ಳುತ್ತಾನೆ. ಆತನ ಉದ್ದೇಶ ಆಕೆಯನ್ನು ಬಳಸಿಕೊಳ್ಳುವುದು. ಅದಕ್ಕೂ ಮುಂಚೆ ತನ್ನ ಮನೆ ಮುಂದಿನ ತರುಣಿಗೆ ತನ್ನ ಮನೆಯ ಸಂಗತಿಗಳು ತಿಳಿಯದಂತೆ ಪರದೆಯನ್ನು ಹಾಕಿಸುತ್ತಾನೆ. ಅಲ್ಲಿಯೂ ಆತನ ಭ್ರಷ್ಟ ಸಂಗತಿಗಳ ಶೆರಿಡನ್ ಸೂಚ್ಯವಾಗಿ ತಿಳಿಸುತ್ತಾನೆ. ಆದರೆ ಅದೇ ಸಮಯಕ್ಕೆ ಅಲ್ಲಿ ಸರ್ ಪೀಟರ ಬರುತ್ತಲೇ ಎಲ್ಲ ಬಣ್ಣ ಬಯಲಾಗುತ್ತದೆ. ಚಾರ್ಲ್ಸ ನಿರ್ಧೋಷಿಯೆಂದು, ಇದಕ್ಕೆಲ್ಲಾ ಲೇಡಿ ಸ್ನೀರ ವೆಲ್‌ನಡೆಸಿದ ಮಸಲತ್ತೆಂದು ತಿಳಿದುಬರುತ್ತದೆ ಕೊನೆಯಲ್ಲಿ ಪ್ರೇಮಿಗಳಾದ ಚಾರ್ಲ್ಸ ಮತ್ತು ಮಾರಿಯಾ ಜೊತೆಯಾಗುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಲೇಡಿ ಟೀಜಲ್‌ಳ ಅಸಂಬದ್ಧ ವ್ಯವಹಾರ ಅರಿವಾಗಿಯೂ ಪೀಟರ್ ಆಕೆಯಲ್ಲಾದ ಭಾವಭಂಗಿಗಳ ಗಮನಿಸಿದರೂ ಆಕೆಯನ್ನು ಅತಿಯಾಗಿ ಪ್ರೀತಿಸುತ್ತಾನೆ. ಆತನದು ಶುದ್ಧ ಪ್ರಾಮಾಣಿಕ ಪ್ರೀತಿ. ಆಕೆ ಅಷ್ಟೊಂದು ನೀಚ ಪ್ರವೃತ್ತಿಯವಳ್ಳಲ್ಲ. ಗಂಡ ಪೀಟರ ಆಕೆಯ ಬಗ್ಗೆ ಕೇಳಿದಾಗ ತನ್ನ ಪ್ರಾಮಾಣಿಕತೆಯ ತಿಳಿಪಡಿಸುತ್ತಾಳೆ. ಜೋಸೆಫ್‌ನ ದುಷ್ಟತನದ ಅರಿವು ಮೊದಲು ಅವಳಿಗಾಗುವುದಿಲ್ಲ. ಆಕೆಯದು ಏನಿದ್ದರೂ ಶ್ರೀಮಂತಿಕೆಯ ಹುಚ್ಚಿನಲ್ಲಿ ಜೋಸೆಫ್‌ನೊಂದಿಗೆ ಒಂದು ಪ್ರೇಮ ಸಂಬಂಧಹೊಂದುವುದು ಅಷ್ಟೇ.

ಶೆರಿಡನ್ ಸಮಾಜದ ಎರಡುವರ್ಗದ ಜನರ ಮನಸ್ಥಿತಿ ಜೀವನ ರೀತಿಯನ್ನು ಅಮೋಘವಾಗಿ ಬೆಳೆಸುತ್ತಾನೆ ಅಲ್ಲಿ ಎರಡು ಗುಂಪಿನ ಜನರಿದ್ದಾರೆ. ಅದು ಸ್ಕೂಲ್ ಫಾರ್ ಸ್ಕಾಂಡಲ್ ಹಾಗೂ ಸ್ಕೂಲ್ ಅಗೆನಷ್ಟ ಸ್ಕಾಂಡಲ್. ಲೇಡಿ ಸ್ನೀರ್ ವೆಲ್, ಲೇಡಿ ಟೀಜಲ್, ಜೊಸೆಫ್ ಸ್ನೇಕ್ ಮುಂತಾದವರೆಲ್ಲ ಸ್ಕಾಂಡಲ್ಗಳ [ಪರನಿಂದನೆ, ಅನಗತ್ಯ ಗುಲ್ಲುಗಾರಿಕೆ] ಹಬ್ಬಿಸುತ್ತ ಅದು ನೀಡುವ ವಿಚಿತ್ರ ಅನುಭೂತಿಯಿಂದ ತೃಪ್ತರಾಗುವ ಅತೃಪ್ತ ಜನರು. ಅದೇ ಸರ್ ಪೀಟರ್ ಟೀಜಲ್, ಮಾರಿಯಾ ಚಾರ್ಲ್ಸ ಸರಫೇಸ್, ಸರ ಒಲಿವರ ಮುಂತಾದವರೆಲ್ಲ ಸ್ಕಾಂಡಲ್ ವಿರುದ್ದ ನಿಂತವರು. ನಾಟಕದಲ್ಲಿ ಶೆರಿಡನ್ ಮಾರಿಯಾ ಮತ್ತು ಸರ್ ಒಲಿವರ್ ಪಾತ್ರಗಳನ್ನು ನೈತಿಕ ಹಾಗೂ ಮೌಲ್ಯಭರಿತ ಪಾತ್ರಗಳಿಗೆ ನಿದರ್ಶನವಾಗಿ ಕಟ್ಟುತ್ತಾನೆ. ಸುಂದರಿಯೂ, ಸದ್ಗುಣಿಯೂ ಆದ ಮಾರಿಯಾ ಕಥಾನಾಯಕಿಯಲ್ಲ. ಆಕೆಯ ಪಾತ್ರದ ಉತ್ಪ್ರೇಕ್ಷೆಯಿಲ್ಲ. ಹಾಗೆ ಸರ ಒಲಿವರ್ ಕೂಡಾ. ಹೀಗೆ ನಾಟಕ ಪ್ರಮುಖವಾಗಿ ಕುಲೀನ ಕುಟುಂಬದ ಬದುಕಿನ ಚಿತ್ರಣವನ್ನು ಆಸಕ್ತಿಯನ್ನು ವಸ್ತುವಾಗುಳ್ಳ, ಶ್ರೀಮಂತ ಪ್ರೇಕ್ಷಕರನ್ನೆ ಗಮನದಲ್ಲಿಟ್ಟುಕೊಂಡು ರಚಿಸಲ್ಪಟ್ಟಿದ್ದು. ತಂತ್ರಗಾರಿಕೆ, ಮಸಲತ್ತುಗಳ ಜಗತ್ತನ್ನು ಅದರ ಭಿನ್ನ ಭಿನ್ನ ಸ್ತರಗಳನ್ನು ಹಾಸ್ಯದ ಮೂಲಕವೇ ಕಟ್ಟಿಕೊಡುತ್ತದೆ. ೧೮ನೇ ಶತಮಾನದ ಭಾವಪೂರ್ಣ ನಾಟಕಗಳು ವಿಚಿತ್ರ ವ್ಯಕ್ತಿಚಿತ್ರಗಳ ಅವರ ಶೋಷಣೆಯ ಭಿನ್ನ ಮುಖಗಳ ಬಿಂಬಿಸುತ್ತಾ ಕೊನೆಯಲ್ಲಿ ಸುಖಾಂತ ಬದುಕನ್ನು ಘನೀಕರಿಸುತ್ತಿದ್ದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣೆತ್ತಿನ ಹಬ್ಬ
Next post ಅಂತರಂಗ-ಬಹಿರಂಗ

ಸಣ್ಣ ಕತೆ

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…