Home / ಲೇಖನ / ಪುಸ್ತಕ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ ಆನ್‌ಫ್ರಾಂಕ್ – ಮೊದಲ ಮಾತು

ದಿ ಡೈರಿ ಆಫ್ ಎ ಎಂಗ್ ಗರ್‍ಲ್ ಆನ್‌ಫ್ರಾಂಕ್ – ಮೊದಲ ಮಾತು

“ದಿ ಡೈರಿ ಆಫ್ ಎ ಯಂಗ್ ಗರ್‍ಲ್” non fictional classic ಕೃತಿ. ಈ ಡೈರಿಯು ೧೯೪೭ ಜೂನ ೨೫ ರಂದು ಡಚ್ ಭಾಷೆಯಲ್ಲಿ Het Achterhuis ಎಂಬ ಶೀರ್‍ಷಿಕೆಯ ಅಡಿಯಲ್ಲಿ ಪ್ರಕಟವಾಯಿತು. ಇಡೀ ಡೈರಿಯನ್ನು ಗುಪ್ತವಾಸದಲ್ಲಿದ್ದ ಎಳೆಯ ಹುಡುಗಿ ‘ಆನ್’ ತನ್ನ ಸ್ನೇಹಿತೆ ಎಂದು ಕರೆದುಕೊಂಡಿರುವ ‘ಕಿಟಿ’ಯನ್ನು ಸಂಬೋಧಿಸಿ ಬರೆದಿದ್ದಾಳೆ. ೧೯೫೦ರಲ್ಲಿ ಈ ಪುಸ್ತಕವು ಜರ್‍ಮನ್ ಭಾಷೆಗೂ, ೧೯೫೨ರಲ್ಲಿ ಮೊದಲ ಬಾರಿ ಇಂಗ್ಲಿಷ ಭಾಷೆಗೂ ಅನುವಾದಗೊಂಡಿತು. ಹಾಗೂ ಈಗಾಗಲೇ ಜಗತ್ತಿನ ೭೦ ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವ ಬಹು ದೊಡ್ಡ ಆಸೆ ನನ್ನದಾಗಿತ್ತು.

ಹತ್ತನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳ ಇಂಗ್ಲಿಷ ಪಠ್ಯವಾಗಿದ್ದ ಈ ಡೈರಿಯ ಕೆಲವೇ ಕೆಲವು ಆಯ್ದ ಭಾಗಗಳನ್ನು ಓದುತ್ತಾ, ನಂತರ ಆ ಪುಸ್ತಕವನ್ನು ಇಡಿಯಾಗಿ ಓದಿದೆ. ಪುಸ್ತಕ ಓದಿದ ಮೇಲೆ ಅದನ್ನು ಕನ್ನಡಕ್ಕೆ ತರುವ ನಿಟ್ಟಿನಲ್ಲಿ ಅನುವಾದ ಕಾರ್‍ಯದಲ್ಲಿ ತೊಡಗಿಸಿಕೊಂಡೆ. ಅನುವಾದದ ಬಗ್ಗೆ ಅಂತಹ ಹೆಚ್ಚಿನ ಅಧ್ಯಯನ ಮಾಡದ ನಾನು ಕೇವಲ ಆಸಕ್ತಿಯಿಂದ ಅನುವಾದಕ್ಕೆ ತೊಡಗಿಸಿಕೊಂಡ ಮೊದಲ ಪುಸ್ತಕವಿದು. ಮೂಲ ಪಠ್ಯಕ್ಕೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಮೀಪವಾಗಿ ಅನುವಾದಿಸಲು ಮತ್ತು ಆದಷ್ಟು ಕನ್ನಡದ ಸೊಗಡನ್ನು ಕೊಡಲು ನನ್ನಿಂದಾದ ಪ್ರಯತ್ನ ಮಾಡಿರುವೆ.

ಹಾಗಿದ್ದೂ ಇದೊಂದು ಎಳೆಯ ಹುಡುಗಿಯ ಆತ್ಮಚರಿತ್ರೆ. ಮಕ್ಕಳ ಬದುಕಿನ ಚಿತ್ರಣ ಒಂದು ಸುಂದರವಾದ ಕಲಾಕೃತಿ. ಹಾಗಾಗಿ ಅಲ್ಲಿ ಭಾವನಾಲೋಕಕ್ಕೆ ಹೆಚ್ಚು ಪ್ರಾಶಸ್ತ್ಯ. ಮಧ್ಯವಯಸ್ಸಿನ ವ್ಯಕ್ತಿಯೊರ್ವಳು ಕಿಶೋರಿಯೊಬ್ಬಳ ಅಂತರಂಗದ ಭಾವನೆಗಳನ್ನು ಅರ್ಥೈಸಿಕೊಂಡು ಮುಂದುವರೆಯಬೇಕಾಗಿತ್ತು. ಇದು ಬಹುಮುಖ್ಯವಾದ ಸವಾಲಾಗಿತ್ತು. ಆಕೆಯ ಮಾನಸಿಕ ತುಮುಲಗಳನ್ನು, ವೇದನೆಯನ್ನು, ಹಕ್ಕಿಯಂತೆ ರೆಕ್ಕೆಬಿಚ್ಚಿ ವ್ಯಕ್ತಗೊಳ್ಳುವ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವ ಮತ್ತು ಕನ್ನಡದೊಂದಿಗೆ ಆ ಭಾವಗಳನ್ನು ಅನುಸಂಧಾನಿಸುವ ಪ್ರಯತ್ನವನ್ನು ಒಂದು ಮಿತಿಯಲ್ಲಿಯೇ ಮಾಡಬೇಕಿತ್ತು. ಅದಲ್ಲದೇ ಅತ್ಯದ್ಭುತವಾದ ಭಾಷಾ ಪಾಂಡಿತ್ಯವುಳ್ಳ ಆನ್ಯ್‌ಳು ಕೆಲವು ಸಂದರ್ಭಗಳಲ್ಲಿ ಬಳಸಿದ್ದು ಅಮೂರ್ತ ಬರಹದ ಶೈಲಿ ಅಂದರೆ ಸುತ್ತಿ ಬಳಸಿ ಹೇಳುವ ಶೈಲಿ. ‘ಪೆರಿಪ್ರೆಸಿಸ್’ ಎಂದು ಇಂಗ್ಲೀಷನಲ್ಲಿ ಕರೆಯುವ ಈ ಶೈಲಿ ಇಂಗ್ಲಿಷನ ಜಾಯಮಾನಕ್ಕೆ ಒಗ್ಗುವುದು. ಆದರೆ ಕನ್ನಡದಲ್ಲಿ ಅನುವಾದಿಸುವಾಗ ಅರ್ಥ ವ್ಯತ್ಯಾಸ ಮೂಡಿಸಬಲ್ಲ ಅಂಶಗಳಿದ್ದವು. ಆಗೆಲ್ಲ ವಾಕ್ಯಗಳ ಅರ್ಥಕ್ಕೆ ಜೋತುಬೀಳದೆ ಸಮಗ್ರವಾಗಿ ವಾಕ್ಯ ಸಮುಚ್ಚಯದ ಅರ್ಥವನ್ನು ಗ್ರಹಿಸಬೇಕಿತ್ತು.

ಇಂಗ್ಲೀಷನ ಭಾಷೆ ತನ್ನದೇ ಆದ Structure and stylistics [ಸಂರಚನೆ ಮತ್ತು ಶೈಲಿ] ಗಳಿಂದ ಪ್ರಸಿದ್ಧ. ನುಡಿಗಟ್ಟುಗಳು, ಪಡೆನುಡಿಗಳು, ಜೋಡಿಪದಗಳು ಕನ್ನಡದಲ್ಲೂ ಇರುವುದಾದರೂ ಇಂಗ್ಲಿಷನಿಂದ ಕನ್ನಡಕ್ಕೆ ತರುವಾಗಿನ ಸಂದರ್ಭದಲ್ಲಿ ಅದೊಂದು ಚಾಲೆಂಜಿಂಗ್ ಆದ ಕೆಲಸ. ಇಂಗ್ಲ್ಲಿಷ ಭಾಷೆ ಕರ್ಮಪದ ಪ್ರಧಾನ ವಾಕ್ಯಗಳಲ್ಲಿ ಸತ್ವಭರಿತವಾಗಿ ಮೂಡಿಬಂದರೆ, ಕನ್ನಡ ಕರ್ತೃಪದ ಪ್ರಧಾನ ವಾಕ್ಯಗಳಲ್ಲಿ ತನ್ನ ಔಚಿತ್ಯ ತೋರುವುದು. ಕನ್ನಡ ಜಾಯಮಾನಕ್ಕೆ ಕರ್ಮಪದ ಪ್ರಧಾನ ವಾಕ್ಯಗಳು ಆಪ್ತವೆನಿಸಲಾರವು. ಅದರೊಂದಿಗೆ ಆಂಗ್ಲಭಾಷೆ ಸಂಕೀರ್ಣ ಮತ್ತು ಸಂಯೋಜಿತ ವಾಕ್ಯ ಪ್ರಯೋಗವನ್ನು ತನ್ನ ಸಂರಚನೆಗೆ ತಕ್ಕಂತೆ ಬಳಸುವುದರಿಂದ ಎರಡು ಮೂರು ವಾಕ್ಯಗಳು ಒಂದೇ ಪ್ರಧಾನ ವಾಕ್ಯದ ಅಡಿಯಲ್ಲಿ ಅಚ್ಚುಕಟ್ಟಾಗಿ ಪೇರಿಸಲ್ಪಡಬಹುದು. ಆದರೆ ಕನ್ನಡದಲ್ಲಿ ಈ ಪ್ರಯೋಗಗಳು ಇವೆಯಾದರೂ ಅವು ಜನಪ್ರಿಯವಿಲ್ಲ. ಸಂಕೀರ್ಣ ವಾಕ್ಯಗಳು ಕನ್ನಡದಲ್ಲಿ ಮಿತವಾಗಿರುತ್ತವೆ. ಇಂತಹ ಕಡೆಗಳಲ್ಲಿ ವಾಕ್ಯಗಳನ್ನು ಒಡೆದು ಬರೆಯಬೇಕಾಗುವ ಅನಿವಾರ್ಯತೆ ಕನ್ನಡಕ್ಕೆ ತೋರುವುದು.

ಈ ಎಲ್ಲ ಇತಿಮಿತಿಗಳ ನಡುವೆಯೂ ನಡೆಸಿದ ಪ್ರಯತ್ನವಿದು. “Borrowing is always selective” ಅನ್ನೋ ಮಾತಿದೆ. ಪರದೇಶದ, ಭಿನ್ನ ಸಂಸ್ಕೃತಿಯಲ್ಲಿ ಹುಟ್ಟಿದ ಕೃತಿಗಳನ್ನು ಆಯ್ದು ಅದನ್ನು ಕನ್ನಡಕ್ಕೆ ತರುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಅನುವಾದಕರ ಆದ್ಯತೆಯಾಗುತ್ತಿದೆ. ಪಾಶ್ಚಾತ್ಯ ಸಾಹಿತ್ಯ ಹಾಗೂ ಅನ್ಯಭಾಷಾ ಸಾಹಿತ್ಯದೆಡೆಗೆ ಅನುವಾದಕರು ಆಕರ್ಷಿತರಾಗುತ್ತಿದ್ದಾರೆ. ಇನ್ನು ಇತರ ಭಾರತೀಯ ಭಾಷೆಗಳ ಕೃತಿಗಳನ್ನು ಸಹೃದಯಿ ಕನ್ನಡಿಗ ಓದುಗರು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ. ಆ ಮೂಲಕ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಶೇಷವಾದ ಅನುವಾದ ಸಂಸ್ಕೃತಿ ಬೆಳೆಯುತ್ತಿದೆ. ಆಧುನಿಕತೆ ಬೆಳೆಯುತ್ತಾ, ವರ್ಚುವಲ್ ಜಗತ್ತಿನ ವ್ಯಾಪ್ತಿ ಚಿಕ್ಕದಾಗುತ್ತಾ, ಭಿನ್ನ ಸಮಾಜ, ಸಂಸ್ಕೃತಿಗಳ, ಭಾಷೆಗಳ , ಸಂವೇದನೆಗಳ ಕುರಿತಾದ ಕುತೂಹಲ ಅನ್ಯ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನಕ್ಕೆ ಇಂಬು ಕೊಡುತ್ತಿದೆ.

ಅನುವಾದವನ್ನು ಮುಗಿಸಿ ಅದನ್ನು ಸಿಂದಗಿಯ ಚನ್ನಪ್ಪ ಕಟ್ಟಿ ಸರ್ ಅವರಿಗೆ ಕಳುಹಿಸಿಕೊಟ್ಟಿದ್ದೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಕೆಲವೇ ದಿನಗಳಲ್ಲಿ ಓದಿ, ಅನುವಾದದಲ್ಲಿಯ ಕೆಲವು ಲೋಪಗಳನ್ನು ಗುರುತಿಸಿ, ಆ ಕುರಿತು ಚರ್ಚಿಸಿ ಸಲಹೆ ಸೂಚನೆ ನೀಡಿದ್ದಾರೆ. ಮುನ್ನುಡಿಯನ್ನು ಬರೆದುಕೊಟ್ಟು ಸಹಕರಿಸಿದ್ದಾರೆ. ಅಷ್ಟೇ ಅಲ್ಲದೇ ನೆಲೆ ಪ್ರಕಾಶನದ ಡಾ. ಎಂ.ಎಂ. ಪಡಶೆಟ್ಟಿ ಸರ್ ಮೊದಲ ಮುದ್ರಣವಾಗಿ ನೆಲೆ ಪ್ರಕಾಶನ, ಸಿಂದಗಿ ಮೂಲಕ ಪುಸ್ತಕವನ್ನು ಪ್ರಕಟಿಸಿಕೊಟ್ಟಿದ್ದರು.. ಅವರನ್ನು ನಾನು ಹೃತ್ಪೂರ್ವಕವಾಗಿ ನೆನೆಯುತ್ತೇನೆ. ಹಾಗೇ ಅನುವಾದದ ಪ್ರಯತ್ನದ ನನ್ನ ಹಾದಿಯಲ್ಲಿ ಸಹಕರಿಸಿದ ಕಿರಿಯ ಸ್ನೇಹಿತ ದೇವು ಮಾಕೊಂಡ ಇವರನ್ನೂ ಸ್ಮರಿಸುವೆ. ಪ್ರಥಮ ಮುದ್ರಣದ ಪುಸ್ತಕದ ಮುಖಪುಟವನ್ನು ಕಲಾವಿದರಾದ ಟಿ ಎಫ್ ಹಾದಿಮನಿಯವರು ಬಹು ಮುತುವರ್ಜಿಯಿಂದ ಚಿತ್ರಿಸಿಕೊಟ್ಟಿದ್ದರು. ಅವರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವೆ.

ಈಗಾಗಲೇ ಈ ಪುಸ್ತಕದ ಬಗ್ಗೆ ಎಸ್ ದಿವಾಕರ್ [ಪ್ರಜಾವಾಣಿ] ಡಾ. ಜನಾರ್ಧನ್ ಭಟ್ [ವಿಶ್ವವಾಣಿ] ವಿನಯಾ ಒಕ್ಕುಂದ [ಹೊಸತು] ಡಾ.ಸಬಿತಾ ಬನ್ನಾಡಿ [ಹೊಸಮನುಷ್ಯ] ಕೆ. ಶಾರದಾ ಭಟ್ [ವಾರ್ತಾಭಾರತಿ] ಜನಮಿಡಿತ ಮತ್ತು ಕಡಲವಾಣಿ [ನಾಗರಾಜ ಹರಪನಹಳ್ಳಿ] ವಿಜಯಕರ್ನಾಟಕ [ವಿದ್ಯಾರಶ್ಮಿ] ಕನ್ನಡ ಪ್ರಭ, ಅವಧಿ ವೆಬ್ ಮ್ಯಾಗಜೀನ್[ತೇಜಾವತಿ ಎಚ್. ಡಿ] ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಬರೆದಿದ್ದಾರೆ. ಅವರೆಲ್ಲರಿಗೂ ಮತ್ತು ಪತ್ರಿಕೆಗಳಿಗೂ ನಾನು ಋಣಿಯಾಗಿರುವೆ. ಅನುವಾದ ಕ್ಷೇತ್ರದಲ್ಲಿ ನಮಗೆಲ್ಲಾ ಗುರುವಂತಿರುವ ಓ.ಎಲ್.ನಾಗಭೂಷಣಸ್ವಾಮಿ ಕೃತಿಯ ಬಗ್ಗೆ ಚಂದದ ಮಾತುಗಳನ್ನಾಡಿದ್ದಾರೆ. ಹಿರಿಯ ಅನುವಾದಕರೂ, ನನ್ನ ಹಿತೈಷಿಗಳು ಆದ ವಿಜಯರಾಘವನ್ ಸರ್ ಹಾಗೂ ಡಾ.ಎನ್.ಎಸ್.ಶ್ರೀಧರಮೂರ್ತಿ ಸರ್ ಅವರುಗಳನ್ನು ಈ ಸಂದರ್ಭದಲ್ಲಿ ನೆನೆಯುವೆ.

ಈಗ ಮೊದಲ ಮುದ್ರಣ ಕಂಡು ಒಂದು ವರ್ಷದ ನಂತರ ಪುಸ್ತಕ ಎರಡನೇ ಮುದ್ರಣ ಕಾಣುತ್ತಿದೆ. ಇದು ಖುಷಿಯ ವಿಚಾರ. ಅನುವಾದ ಪುಸ್ತಕಗಳ ಲೋಕದಲ್ಲಿ ಈಗಾಗಲೇ ತಮ್ಮ ಪ್ರಕಾಶನದ ಮೂಲಕ ಛಾಪು ಮೂಡಿಸಿರುವ ಬೆಂಗಳೂರಿನ ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ ಇವರು ಈ ಪುಸ್ತಕದ ದ್ವಿತೀಯ ಮುದ್ರಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅವರಿಗೆ ನನ್ನ ಕೃತಜ್ಞತೆಗಳು. ಹಾಗೂ ಎಲ್ಲ ಓದುಗ ಬಳಗಕ್ಕೂ ನಾನು ಋಣಿಯಾಗಿದ್ದೇನೆ.

ಇನ್ನು ಈ ಪುಸ್ತಕದ ಬಗ್ಗೆ ಹೇಳಬೇಕೆಂದರೆ ಆನ್‌ಫ್ರಾಂಕ್ ಎಂಬ ಹದಿಮೂರು ವರ್ಷದ ಹುಡುಗಿಯ ಎರಡು ವರ್ಷಗಳ ಕಾಲದ ಅಡಗುತಾಣದಲ್ಲಿಯ ಆಕೆ ಅಸ್ತಿತ್ವವನ್ನು ಸಹ್ಯವಾಗಿಸಲು ನೆರವಾದದ್ದು ಈ ದಿನಚರಿ. ನಾಝಿಗಳು ನೆದರಲ್ಯಾಂಡನ್ನು ತಮ್ಮ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ತನ್ನ ಕುಟುಂಬದೊಂದಿಗೆ ಬದುಕುತ್ತಿರುವಾಗ ಡಚ್ ಭಾಷೆಯಲ್ಲಿ ಅಕೆ ತನ್ನ ಅನುಭವಗಳನ್ನು ದಾಖಲಿಸುತ್ತಾ ಹೋಗುತ್ತಾಳೆ. ೧೯೪೪ರಲ್ಲಿ ಈ ಕುಟುಂಬವನ್ನು ನಾಝಿಗಳು ಬಂಧಿಸಿದರು. ಆದರೆ ಸಾಂಸರ್ಗಿಕ ವಿಷಮಜ್ವರದಿಂದ ಬೆರ್ಜನ್-ಬೆಸ್ಲನ್‌ನ ಬಂಧಿಯಾಳುಗಳ ಯಾತನಾ ಶಿಬಿರದಲ್ಲಿ ಆನ್ ಫ್ರಾಂಕ್ ಕೊನೆಯುಸಿರೆಳೆದಳು. ಆಕೆಯ ಈ ಡೈರಿಯನ್ನು ಮೇಪ್ ಗೇಸ್ ತಿದ್ದಿ ಸರಿಮಾಡಿ, ಆನ್ ಕುಟುಂಬದಲ್ಲಿ ಬದುಕುಳಿದ ಆನ್‌ಳ ತಂದೆ ಓಟ್ಟೋ ಫ್ರಾಂಕ್‌ನಿಗೆ ನೀಡಿದಳು. ಈ ದಿನಚರಿ ಗುಪ್ತವಾಸದ ಬದುಕಿನಲ್ಲೂ ಆಶಾವಾದದ ನಿಲುವುಳ್ಳ ಎಳೆಮನಸ್ಸೊಂದರ ತುಮುಲಗಳಿಂದ, ದಿನದಿಂದ ದಿನಕ್ಕೆ ಆ ವ್ಯಕ್ತಿತ್ವ ಗಳಿಸಿಕೊಂಡ ಪ್ರೌಢ ನಿಲುವುಗಳಿಂದ, ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ತನ್ನ ಎಳೆಯ ವಿಚಾರಗಳಲ್ಲಿ ವ್ಯಕ್ತಪಡಿಸಿದ ರೀತಿಯಿಂದ ಅಪೂರ್ವವೆನಿಸುತ್ತದೆ.

ಆಮ್ಸ್ಟರ್‌ಡ್ಯಾಮ್‌ನಲ್ಲಿ ಓಟ್ಟೋ ಫ್ರಾಂಕ್ ಜ್ಯಾಮ್ ತಯಾರಿಕೆಯಲ್ಲಿ ಬಳಸುತ್ತಿದ್ದ ’ಪೆಕ್ಟಿನ್’ ಅನ್ನು ತಯಾರಿಸುವ ಮತ್ತು ಮಾರುವ ’ಓಪೆಕ್ಟಾ’ ಎಂಬ ವ್ಯವಹಾರ ಸಂಸ್ಥೆಯೊಂದನ್ನು ಹರ್ಮನ್ ವ್ಯಾನ್ ಪೆಲ್ಸ್ ಎಂಬ ಇನ್ನೊಬ್ಬ ಯಹೂದಿಯ ಜೊತೆಗೂಡಿ ನಡೆಸುತ್ತಿದ್ದರು. ಗುಪ್ತವಾಸದ ದಿನಗಳಲ್ಲಿ ಫ್ರಾಂಕ್‌ನ ಈ ಫುಡ್ ಫ್ರಾಸೆಸಿಂಗ್ ಬಿಸಿನೆಸ್‌ನ ಉಗ್ರಾಣ ಮತ್ತು ಆಫೀಸು ಕಟ್ಟಡಗಳು ಫ್ರಾಂಕ್ ಕುಟುಂಬ ಮತ್ತು ವ್ಯಾನ್ಡ್ಯಾನ್ಸ್ ಕುಟುಂಬಕ್ಕೆ ಅಡಗುತಾಣವಾಗಿ ರೂಪಿಸಲ್ಪಟ್ಟಿತು. ಫ್ರಾಂಕ್ ಕುಟುಂಬದಲ್ಲಿ ತಂದೆ ಓಟ್ಟೋ ಫ್ರಾಂಕ್, ತಾಯಿ ಎಡಿಥ್ ಹಾಗೂ ಸಹೋದರಿ ಮಾರ್‍ಗೊಟ್ ಮತ್ತು ಆನ್ ಫ್ರಾಂಕ್ ಇದ್ದರೆ, ವ್ಯಾನ್ಡ್ಯಾನ್ಸ ಕುಟುಂಬದಲ್ಲಿ ಹರ್ಮನ್ ವ್ಯಾನ್ ಪೆಲ್ಸ್, ಆತನ ಪತ್ನಿ ಆಗಸ್ಟ್ ಹಾಗೂ ಪುತ್ರ ಪೀಟರ್ ಹೀಗೆ ಏಳು ಜನ ಸದಸ್ಯರು ಇದ್ದರು. ನಾಲ್ಕು ತಿಂಗಳ ನಂತರ ದಂತವೈದ್ಯನಾದ ಯಹೂದಿ ಅಲ್ಬರ್ಟ್ ಡಸೆಲ್ ಕೂಡಾ ಇವರೊಂದಿಗೆ ಬಂದು ಸೇರಿಕೊಂಡರು. ಹೀಗೆ ಒಟ್ಟು ಎಂಟು ಜನರು ಗುಪ್ತವಾಸದ ದಿನಗಳಲ್ಲಿ ಅನುಭವಿಸಿದ ಸಂಕಟಗಳು, ದುಃಖ ದುಮ್ಮಾನದ ನಡುವೆಯೇ ಪಟ್ಟ ಸಂತಸದ ಕ್ಷಣಗಳು, ಮೋಜು ಮಸ್ತಿಗಳು, ತಾಕಲಾಟಗಳು, ವೈಯಕ್ತಿಕ ನೆಲೆಯಲ್ಲಿ ವ್ಯಕ್ತವಾಗುತ್ತಿದ್ದ ಭಿನ್ನ ಅಭಿಪ್ರಾಯಗಳು, ಪರಸ್ಪರ ದೋಷಾರೋಪಣೆಗಳ ನಡುವೆಯೂ ಬೆಸೆದ ಬಾಂಧವ್ಯ, ಎಲ್ಲವೂ ಮನುಷ್ಯನ ಸಂದರ್ಭೋಚಿತ ಮನಸ್ಥಿತಿಯನ್ನು ತೆರೆದಿಡುವಲ್ಲಿ ಡೈರಿ ಯಶಸ್ವಿಯಾಗಿದೆ.

ಆನ್ ಫ್ರಾಂಕ್‌ಳ ಮೂಲ ಡೈರಿ ಮೂರು ವಾಲ್ಯೂಮುಗಳಲ್ಲಿ ಬರೆದಿದ್ದು ,ಮೊದಲ ಸಂಪುಟ ಕೆಂಪು ಮತ್ತು ಬಿಳಿ ಬಣ್ಣದ ಆಟೋಗ್ರಾಫ್ ಪುಸ್ತಕ. ಇದು ೧೯೪೨ ಜೂನ್ ೧೨ ರಂದು ಆನ್ ಫ್ರಾಂಕ್‌ಳ ೧೩ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ತಂದೆ ಓಟ್ಟೋ ಫ್ರಾಂಕ್ ಕಾಣಿಕೆಯಾಗಿ ನೀಡಿದ ಡೈರಿ. ಎರಡು ದಿನಗಳ ತರುವಾಯ ಅಂದರೆ ಜೂನ್ ೧೪ರಿಂದ ಈ ಆನ್ ಡೈರಿಯನ್ನು ಬರೆಯತೊಡಗಿದಳು. ಎರಡನೆಯ ಸಂಪುಟ ಶಾಲಾ ಅಭ್ಯಾಸ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೇ ಮೂರನೆಯ ಸಂಪುಟ ಕೂಡ ಶಾಲಾ ಅಭ್ಯಾಸ ಪತ್ರಿಕೆಯಲ್ಲಿಯೇ ಬರೆಯಲಾಗಿದೆ. ಮೊದಲ ಸಂಪುಟವು ೧೪ ಜೂನ ರಿಂದ ೫ ಡಿಸೆಂಬರ್ ೧೯೪೨ರ ನಡುವಿನ ಅವಧಿಯನ್ನು ಒಳಗೊಂಡಿದೆ. ಎರಡನೆಯ ಸಂಪುಟದಲ್ಲಿ ೨೨ ಡಿಸೆಂಬರ ರಿಂದ ೧೭ ಎಪ್ರಿಲ್ ೧೯೪೪ ವರೆಗೆ ನಮೂದಾಗಿದೆ. ಮೂರನೇ ಸಂಪುಟ ೧೭ ಎಪ್ರಿಲ್, ೧೯೪೪ರಿಂದ ೧ ಅಗಸ್ಟ, ೧೯೪೪ವರೆಗೆ ಬರೆಯಲಾಗಿದೆ. ೧, ಅಗಸ್ಟ, ೧೯೪೪ರಂದು ಆಕೆ ಬರೆದದ್ದೆ ಕೊನೆಯ ಬರಹ. ಅದಾದ ಮೂರು ದಿನಗಳ ತರುವಾಯ ಅಂದರೆ ೪ ಅಗಸ್ಟ, ೧೯೪೪ ರಂದು ಕಪಟಿ ಸ್ಥಳಿಯ ಬಾತ್ಮಿದಾರನೊಬ್ಬ ಗೆಸ್ಟಪೋಗಳಗೆ [ಗುಪ್ತ ಪೋಲಿಸರಿಗೆ] ಫ್ರಾಂಕ್ ಕುಟುಂಬದ ರಹಸ್ಯ ಅಡಗುತಾಣದ ಮಾಹಿತಿ ನೀಡಿ ಗೆಸ್ಟಪೋಗಳನ್ನು ಅಲ್ಲಿಗೆ ಕರೆತಂದ. ಸುಮಾರು ಎರಡು ವರ್ಷ ಮತ್ತು ಒಂದು ತಿಂಗಳುಗಳ ಕಾಲ ಗೌಪ್ಯವಾಗಿ ವಾಸಿಸುತ್ತಿದ್ದ ಎಂಟೂ ಯಹೂದಿಗಳು ತಾವಾಗಿಯೇ ಹೊರಬಂದು ಶರಣಾದರು. ಅವರನ್ನೆಲ್ಲಾ ನಾಝಿ ಯಾತನಾಶಿಬಿರಗಳಿಗೆ ಸಾಗಿಸಲಾಯಿತು. ತಾಯಿ ಶ್ರೀಮತಿ ಫ್ರಾಂಕ್ ಮತ್ತು ಸಹೋದರಿ ಮಾರ್‍ಗೊಟ್ ಆನ್‌ಗಿಂತಲೂ ಮೊದಲೆ ಸಾವನ್ನಪ್ಪಿದರೆ, ಆನ್ ಮರಣಿಸಿದ್ದು ೧೯೪೫ರ ಫೆಬ್ರುವರಿ ಕೊನೆ ಅಥವಾ ಮಾರ್ಚ ಮೊದಲ ವಾರವಾಗಿರಬಹುದೆಂದು ನಂಬಲಾಗಿದೆ. ಯಾಕೆಂದರೆ ಮರಣಹೊಂದಿದ ಸರಿಯಾದ ದಿನಾಂಕ ತಿಳಿದುಬಂದಿಲ್ಲ. ಅದೂ ಕೂಡಾ ೧೯೪೫ರ ಅಗಸ್ಟ್ ೧೫ರಂದು ಬ್ರಿಟಿಷ್ ಪಡೆಗಳು ಈ ಎಲ್ಲ ಸೆರೆಯಾಳುಗಳನ್ನು ಸೆರೆಮುಕ್ತಗೊಳಿಸುವ ಕೆಲವೇ ಕೆಲವು ವಾರಗಳ ಮುಂಚೆ ಎಂಬುದು ಮಾತ್ರ ವಿಪರ್ಯಾಸ.

– ನಾಗರೇಖಾ ಗಾಂವಕರ
*****

Tagged:

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...