ನನ್ನ ಕನಸಿನ ಮೊಗ್ಗು
ಬಾಡಿ ಹೋಗುವ ಮುನ್ನ
ಕಟ್ಟಬೇಕಿದೆ ಮಾಲೆ
ಪೋಣಿಸಿಟ್ಟು

ಬದುಕ ಹಾಡಿನ ಭ್ರಮರ
ಹಾರಿ ಹೋಗುವ ಮುನ್ನ
ಬರೆಯಬೇಕಿದೆ ಸಾಲು
ಕೂಡಿಸಿಟ್ಟು

ಜೀವ ಜ್ಯೋತಿಯ ಎಣ್ಣೆ
ತೀರಿಹೋಗುವ ಮುನ್ನ
ಹೊಸೆಯಬೇಕಿದೆ ಬತ್ತಿ
ಹುರಿಯಗೊಳಿಸಿ

ಶಕ್ತ ದೇಹದ ಕಸುವು
ಇಂಗಿ ಹೋಗುವ ಮುನ್ನ
ಕ್ರಮಿಸಬೇಕಿದೆ ಹೆಜ್ಜೆ
ಗುರುತು ಬಿಟ್ಟು