ನಿನ್ನ
ಒಳಗೊಂದು ನದಿಯಿದೆ
ನನ್ನ ಕಿವಿ ಹೇಳಿದೆ-
ಅದಕ್ಕದರ ಕಲಕಲ ಕೇಳಿಸುತ್ತಿದೆ.

ನಿನ್ನ
ಒಳಗೊಂದು ನದಿಯಿದೆ
ನನ್ನ ನಾಲಗೆ ಹೇಳಿದೆ-
ನದಿಯ ನೀರು ಸಿಹಿಯಾಗಿದೆ.

ನಿನ್ನ
ಒಳಗೊಂದು ನದಿಯಿದೆ
ನನ್ನ ಮೂಗು ಹೇಳಿದೆ-
ನದಿಯೊಳಗೆ ಸುಗಂಧವಿದೆ.

ನಿನ್ನ
ಒಳಗೊಂದು ನದಿಯಿದೆ
ನನ್ನ ಕಣ್ಣು ಹೇಳಿದೆ-
ನದಿಯೊಳಗೆ ಬಣ್ಣವಿದೆ.

ಕಣ್ಣು ಮೂಗು ತುಟಿ ನಾಲಗೆ
ಹೊತ್ತಿಕೊಂಡು ಉರಿಯುತ್ತಿದೆ.
ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ.

ಹಾಗಾದರೆ ಒಳಗೊಂದು
ಬೆಂಕಿಯೂ ಇದೆ.

ನಾನು ತಿಳಿದಿದ್ದೆ ಬೆಂಕಿ
ನಾನು ನದಿಯೊಳಗೆ ಮಿಂದು
ನಂದಿ ಹೋಗಿದೆ.