ಚಿತ್ರ: ನಾದಿನೆ ಹಡ್ಸನ್
ಚಿತ್ರ: ನಾದಿನೆ ಹಡ್ಸನ್

ನಾ ಕೇರಿಯವ!
ನನಗೇನು ಗೊತ್ತು?
ಸತ್ತ ದನವ, ಕಿತ್ತು ಕಿತ್ತು…
ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ…
ತಿನ್ನುವುದು ಗೊತ್ತು!
*

ಕೊಳೆಗೇರೀಲಿ
ಹರಕು ಜೋಪಡೀಲಿ
ಚಿಂದಿ ಬಟ್ಟೇಲಿ
ಹಸಿದ ಹೊಟ್ಟೇಲಿ
ಮುರುಕು ಮುದ್ದೆ ತಿಂದು,
ಮಗಿ ನೀರು ಕುಡಿದು,
ನೆಲಕೆ ತಲೆಕೊಟ್ಟು,
ಗೊರಕೆ ಹೊಡೆವುದು ಗೊತ್ತು!!
*

ನಾ ಕೇರಿಯವ!
ಬಾಲ ಕಾರ್‍ಮಿಕನೆಂಬುದೇನು ಗೊತ್ತು?
ಅಕ್ಷರ ಕಲಿಯದೆ,
ಲೋಕಜ್ಞಾನವಿಲ್ಲದೆ,
ಸಿಕ್ಕ ಸಿಕ್ಕಲ್ಲಿ, ಹೆಬ್ಬೆಟ್ಟು ಒತ್ತುವುದು
ಹಳಸಿದ್ದು, ಸೀಕುಪಾಕು, ಮುಸುರೆ,
ಕಲುಷಿತ ನೀರು, ಕುಡಿಬಾರದೆಂದೇನು ಗೊತ್ತು?

ಭಾಗ: ಒಂದು

ಕಂಡ ಕಂಡ ದೇವ್ರಿಗೆ, ಜೆಡ್ಡು ‘ಜಾಪತ್ರೆ’ಗಳಿಗೆ
ಹರಕೆ ಹೊತ್ತು, ಮುಡಿಕಟ್ಟಿ, ‘ಮಿಸಲಾಕಿ’…
ಕುರಿ, ಕೋಣ, ಬಲಿ ಕೊಡುವುದು, ಮಾತ್ರ ಗೊತ್ತು!
ಸಾಲ ಮಾಡಿ, ಜೀತ ಮಾಡಿ,
ಕತ್ತಲ ಕೂಪದಲಿ, ಬರೀ ನೆಲದಲಿ…
ಕೋಳಿ, ನಾಯಿ, ಹಂದಿ, ನೊಣಗಳೊಂದಿಗೆ,
ಈ ಹೊಲಗೇರಿಲಿ, ಪಾಪಕೂಪದಲಿ,
ಬಿದ್ದಿರಲು ವಿಧಿಬರಹ, ದೇವರ ಶಾಪವೆಂದು,
ನಂಬಿಸಿದ್ದು ಮಾತ್ರ, ನನಗೆ ಗೊತ್ತು!
*

ಬಸವನಿಂದೆ ಬಾಲವೆಂಬಂತೇ…
ನಮ್ಮಪ್ಪ, ಅಮ್ಮ, ಅಕ್ಕ, ಅಣ್ಣರ ಹಿಂದಿಂದೆ,
ಜಂಗ್ಳುದನ ಕಾದು, ಕೈಕಟ್ಟಿ, ನಡುಬಗ್ಗಿ…
ಧಣೀಗಳ ಕಸ, ಮುಸರೆ ಎತ್ತಿ,
ಸಗಣಿ, ಗಂಜು ಹೊತ್ತು, ಕತ್ತು ನೋಯಿಸಿಕೊಂಡು,
ಜೀತ ದುಡಿದು, ತಲೆತಗ್ಗಿ…
ಆಲದ ಮರಕೆ, ಕೊರಳೊಡ್ಡುವುದು ಗೊತ್ತು!
*

ಇನ್ನು ಊರು ಕೇರಿಗರ
ಹಳೇ ಮೂಗರ್ಧ ಕಾಲ್ಮಾರಿಗಳ ಹೊಲಿದು,
ಪುಡಿಗಾಸು ಪಡೆದು,
ಅಂಬ್ಲಿ ನೀರು ಕುಡಿದದ್ದು ಗೊತ್ತು!
ಬಿಸಿಲು, ಗಾಳಿ, ಮಳೆ, ಎನ್ನದೆ,
ಹಗಲಿರುಳು ರಟ್ಟೆ ಮುರಿದು,
ನಾಲ್ಕು ‘ದಮ್ಡಿ’ ಗಳಿಸಿ,
ಈಚ್ಲು ಹೆಂಡಾ, ಭಟ್ಟಿ ಸಾರಾಯಿ ‘ಸೆಂಡಿ’
ಹಾಡುತ್ತಾ… ಪಾಡುತ್ತಾ… ಕುಣಿದು… ಕುಪ್ಪಳಿಸಿ…
ಶತ ಶತಮಾನದ ದುಕ್ಕ, ದುಮ್ಮಾನ ಮರೆವುದು ಗೊತ್ತು!

ಭಾಗ: ಎರಡು

ಹೌದೌದು! ನಾ ಕೇರಿಯವ! ತಿಳಿಗೇಡಿ ಎನಬೇಡಿ ಇನ್ನು!
ಈ ಲೋಕದ ಡೊಂಕು, ಕೊಂಕು, ನನಗೆಲ್ಲ ಗೊತ್ತು ಬಿಡಿ!!
ಅಕ್ಷರ ಕಲಿಸದೆ, ಗುಡಿ ಗೋಪುರ, ಹೊಟೆಲ್‌ಗೆ ಸೇರಿಸದೆ,
ಊರಿಂದ ದೂರಿಟ್ಟು, ಮುಖ್ಯವಾಹಿನಿಗೆ ಸೇರಿಸದೆ,
ಹೊತ್ತು ಹೊತ್ತಿಗೆ ತುತ್ತಿಕ್ಕದೆ, ಬೊಗಸೆಗೆ ನೀರಾಕಿ,
ಬರೀ ಮೈಲಿಟ್ಟು, ಗಡ್ಡ, ಮೀಸೆ, ಕೂದಲು ‘ಮಳೆವರೆ’ ಬಿಡಿಸಿ,
ಹಗಲುರಾತ್ರಿ ಕತ್ತೇ ಸಾಕ್ರೀ, ಬಿಟ್ಟಿ ವಗ್ತಾನ ಮಾಡಿಸುವುದು ನಿಮಗೆ ಗೊತ್ತು!

ಭಾಗ: ಮೂರು

ಈಗೀಗ ಅದೇಗೋ… ಅಕ್ಷರ ಕಲಿತು, ಮನುಶ್ಯರಾಗಿದ್ದೇವೆ!
ಗುಡಿ, ಗೋಪುರಕೆ ಕಾಲಿಟ್ಟಿದ್ದೇವೆ! ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ!!
ನಿಮ ಸಮಕುಂತು, ಊಟ, ತಿಂಡಿ, ಕಾಫಿ ಕುಡಿದು,
ತಲೆಗೂದಲು ಕತ್ತಿರಿಸಿ, ಸೂಟು, ಬೂಟು, ಹಾಕಿಕೊಂಡು,
ನಿಮ್ಮಕತ್ತಿನ ಪಟ್ಟಿ ಹಿಡಿದು, ನ್ಯಾಯ ಕೇಳಿ, ಪ್ರತಿಭಟಿಸಿ,
ದೌರ್ಜನ್ಯಕೆ, ‘ಧಿಕ್ಕಾರ’ ಕೂಗಿ, ಸಂಪು ಹೂಡಿ,
ನಮ್ಮ ಹಕ್ಕು, ಪ್ರತಿಪಾದಿಸುವುದೂ ಗೊತ್ತು!!
ಈ ಊರುಕೇರಿನ ಒಂದೂಗೂಡಿಸಿ,
ದರ್ಜಿಯಾಗಿ, ಹರಿದ ಮನಗಳ, ಹೊಲಿವುದು ಗೊತ್ತು!
ಗಾರೆಯವನಾಗಿ, ಜಾತಿ, ಮತ, ಬಿರುಕಗಳ ಮುಚ್ಚಿ,
ಬಿದ್ದ ಮನೆ, ಮನಗಳ ಕಟ್ಟುವುದೂ ಗೊತ್ತು!
ಕೃಷಿಕನಾಗಿ; ಮಾನವೀಯತೆ, ಅನುಕಂಪ ಬಿತ್ತಿ,
ದಯೆ, ದಾನ, ಧರ್‍ಮಾ, ಕರ್‍ಮಾವೆಂಬಾ ಕಾಳು ಬೆಳೆದು,
ಹಸಿರು, ಉಸಿರು, ಹೆಸರುಗಳಿಸಿ, ನಿಮ್ಮ ಉದ್ಧರಿಸುವುದೂ ಗೊತ್ತು!!
ಮಾಲೀಕನಾಗಿ; ಈ ಹೊಲ, ಮನೆ, ಆಡುವು, ಆಸ್ತಿ, ಸಂಪತ್ತನ್ನು
ಹಂಚಿ, ಸಮಾಜಿಕ ನ್ಯಾಯ, ಒದಗಿಸುವುದೂ ಗೊತ್ತು!
ಗೊತ್ತು… ಗೊತ್ತು…! ನಿಮ್ಮನ್ನು ಮನುಶ್ಯರನ್ನಾಗಿಸುವ ಕಲೆ,
ಶ್ರಮ, ನಮಗೆಲ್ಲ ಗೊತ್ತು! ಗೊತ್ತು!!… ಬೆಚ್ಚಿಬೀಳಿಸುವುದೂ ಗೊತ್ತು!
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)