ಹಾಗಾದರೆ ಯಾರೂ ಮಾತಾಡಬಾರದೇ?

ಹಾಗಾದರೆ ಯಾರೂ ಮಾತಾಡಬಾರದೇ?

ಚಿತ್ರ: ಜೋರ್ಗ್ ಗಿಲೆನ್

‘ಬಹುಸಂಖ್ಯೆ ಎಂದರೆ ಸಂಖ್ಯೆಯಲ್ಲ, ಭೀತಿ’-ಹೀಗಂದವನು ಆಧುನಿಕ ಫ್ರೆಂಚ್ ದಾರ್ಶನಿಕ ಜಾನ್-ಫ್ರಾನ್ಸ್ವಾ ಲ್ಯೋತಾರ್ (Jean-Francois Lyotard). ಈ ಮಾತು ಕಾಕತಾಳೀಯವಾಗಿಯೋ ಏನೋ ಆಧುನಿಕೋತ್ತರತ್ವದ ಕುರಿತು ಆತ ಬರೆದ ಪುಸ್ತಕವೊಂದರಲ್ಲಿ ಬರುತ್ತದೆ (The Postmodern Condition). ಇದರ ಅರ್ಥ ದೂರ ಹುಡುಕಬೇಕಾಗಿಲ್ಲ: ನಿಮ್ಮ ಕೈಯಲ್ಲೊಂದು ಬಾಂಬಿದ್ದರೆ ನೀವೇ ಬಹುಸಂಖ್ಯಾತ! ಆಧುನಿಕ ರಾಜಕೀಯ ವ್ಯವಸ್ಥೆಯಾದ ಪ್ರಜಾಪ್ರಭುತ್ವವೂ ಜನಗಣತಿಯ ‘ಬಹುಸಂಖ್ಯೆ’ಯ ಆಧಾರದ ಮೇಲೆ ನಿಂತಿರುವುದರಿಂದ ಅದೂ ಸಹಾ ‘ಅಲ್ಪಸಂಖ್ಯಾತ’ರಲ್ಲಿ ಭೀತಿಯನ್ನು ಉಂಟುಮಾಡುವಂಥದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾರ ನಂಬಿಕೆಯಿದ್ದ ಪುರಾತನ ಏಥೆನ್ಸ್‌ನ ನಾಗರಿಕನಾಗಿದ್ದ ಸಾಕ್ರೆಟಿಸ್ ಬಹುಶಃ ಈ ಗಣಕಾಧಾರಿತ ವ್ಯವಸ್ಥೆಯ ದೌರ್ಬಲ್ಯವನ್ನು ಮೊದಲೇ ಊಹಿಸಿಕೊಂಡವನಂತೆ ಈ ರೀತಿ ತಲೆ ಲೆಕ್ಕ ಹಾಕಿ ಆಡಳಿತ ನಡೆಸುವುದನ್ನು ವಿರೋಧಿಸುತ್ತಲೇ ಸಾವನ್ನಪ್ಪಿದ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಎಲ್ಲಾ ಆಧುನಿಕ ರಾಷ್ಟ್ರಗಳೂ ಸಾಕ್ರೆಟಿಸ್ ಹೇಳಬಯಸಿದ್ದನ್ನು ಆರಂಭದಿಂದಲೇ ಅರ್ಥಮಾಡಿಕೊಂಡುವು. ಆದ್ದರಿಂದಲೇ ‘ಅಲ್ಪಸಂಖ್ಯಾತ’ರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅವು ವಿವಿಧ ಕಾನೂನುಗಳನ್ನು ಮಾಡಬೇಕಾಯಿತು.

ಬಹುಸಂಖ್ಯೆಯ ಮುಕ್ತಾಡಳಿತ ಎಲ್ಲಿ ಸುಗಮವಾಗುತ್ತದೆ ಎಂದರೆ, ರಾಷ್ಟ್ರದ ಪ್ರಜೆಗಳೆಲ್ಲರೂ ಓಂದೇ ಮತ, ಒಂದೇ ಭಾಷೆ, ಒಂದೇ ಪ್ರದೇಶಕ್ಕೆ ಸೇರಿದಾಗ; ಎಂದರೆ, ರಾಷ್ಟ್ರದೊಳಗೆ ಯಾವುದೇ ಆಂತರಿಕ ಭಿನ್ನತೆಗಳು ಇಲ್ಲದಿರುವಾಗ. ಯಾಕೆಂದರೆ, ಲೋಕದಲ್ಲಿ ಎಲ್ಲಿಯೂ ಈ ತರದ ‘ಆದರ್ಶ ಏಕರೂಪತೆ’ ಅಸ್ತಿತ್ವದಲ್ಲಿಲ್ಲ. ಬಹುಶಃ ಕೆಲವೇ ಕೆಲವು ಹಳೆಯ ಚಿಂತನೆಯ ಶಕ್ತಿಗಳಲ್ಲದೆ ಇಂಥ ಏಕರೂಪತೆಯನ್ನು ಯಾರೂ ಬಯಸುವುದೂ ಇಲ್ಲ. ಕೆಲವು ದಶಕಗಳ ಹಿಂದೆ, ಅಮೇರಿಕದಲ್ಲಿ ‘ಕರಗಿಸುವ ಕಡಾಯಿ’ (melting pot) ಎಂಬ ರೂಪಕವೊಂದು ಚಾಲ್ತಿಯಲ್ಲಿತ್ತು: ಅಮೇರಿಕ ವಲಸೆಹೋದವರ ರಾಷ್ಟ್ರ ತಾನೇ? ಅಲ್ಲಿಗೆ ಬಂದವರೆಲ್ಲರೂ ಅಲ್ಲಿ ಈಗಾಗಲೇ ಇರುವವರ ಜತೆ ಸಂಪೂರ್ಣವಾಗಿ ಲಯಗೊಳ್ಳಬೇಕು ಎನ್ನುವ ಆದರ್ಶ ಈ ರೂಪಕದ ಹಿಂದೆ ಇರುವುದು. ಆದರೆ ಈಗ ಇದು ಬದಲಾಗಿದೆ; ‘ಕರಗಿಸುವ ಕಡಾಯಿ’ಯ ಬದಲಿಗೆ ‘ಹಸಿ ತರಕಾರಿ ಚೂರುಗಳ ತಟ್ಟೆ’ (salad bowl) ಎಂಬ ರೂಪಕವೊಂದು ಬಂದಿದೆ. ಅಮೇರಿಕಾಕ್ಕೆ ವಲಸೆ ಬಂದವರು ತಮ್ಮ ಮೂಲಭಿನ್ನತೆಗಳನ್ನು ಇಟ್ಟುಕೊಳ್ಳಬಹುದು ಎಂಬ ಸಿದ್ಧಾಂತ ಇಲ್ಲಿ ಕಾಣಿಸುವುದು. ಪ್ರಜಾಪಭುತ್ವದಲ್ಲಿ ಇದೊಂದು ದೊಡ್ಡ ಬದಲಾದ ಮನೋಧರ್ಮವೆಂದೇ ಹೇಳಬೇಕು. ಆದರೆ ಕೇವಲ ತಲೆಗಣನೆಯ ಬಹುಮತದ ಮೇಲಿಂದ ಆಡಳಿತ ನಡೆಸುವ ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರು ತಮ್ಮ ಹಿತರಕ್ಷಣೆಯನ್ನು ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಇಂದು ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಪ್ರಜ್ಞೆ ಮೂಡಿರುವುದು ಸ್ವಾಗತಾರ್ಹ. ಉದಾಹರಣೆಗೆ, ಅಂತರರಾಷ್ಟ್ರೀಯ ಮಾನವ ಹಕ್ಕು ಸಮಿತಿ ವಿವಿಧ ರಾಜ್ಯಗಳ ಮೇಲೆ ಮಾನವ ಹಕ್ಕುಗಳನ್ನು ಉಲ್ಲಂಗಿಸದಿರುವಂತೆ ಒತ್ತಡ ಹೇರುತ್ತದೆ. ಅದೇ ರೀತಿ ಮಕ್ಕಳು, ಮಹಿಳೆಯರು, ಮತೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಮುಂತಾದವರ ನೈಜ ಹಕ್ಕುಗಳನ್ನು ಕಾಪಾಡುವ ಬಗ್ಗೆ ಅಂತರರಾಷ್ಟ್ರೀಯ ನೆಲೆಯಲ್ಲಿ ಸಂಸ್ಥೆಗಳು ಹುಟ್ಟಿಬರುತ್ತಿವೆ. ಇವುಗಳಲ್ಲಿ ಹಲವು ವಿಶ್ವಸಂಸ್ಥೆಯಿಂದ ಪ್ರೇರಿತವಾದುವು; ಇನ್ನು ಕೆಲವು ಜಿ-ಓಕ್ಕೂಟಗಳ ಮಾತುಕತೆಗಳ ಪರಿಣಾಮವಿರಬಹುದು. ಕೆಲವು ವರ್ಷಗಳ ಹಿಂದೆ ಅಮೇರಿಕ ಬಾಲಕಾರ್ಮಿಕ ದುಡಿತದಿಂದ ತಯಾರಾಗುವ ಸಾಧನಗಳ ಆಮದಿನ ಮೇಲೆ ನಿಷೇಧ ಹೇರಿದುದರ ಸಕಾರಾತ್ಮಕ ಪರಿಣಾಮ ನಮ್ಮ ದೇಶದ ಮೇಲೆ ಕೂಡಾ ಆದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಚಿನ ದಿನಗಳಲ್ಲಿ ವಿಶ್ವಸಂಸ್ಥೆ ಸೈನಿಕವಾಗಿಯೂ ಕೊಸೋವೋ ಪ್ರವೇಶ ಮಾಡಿ ಅಲ್ಲಿನ ಜನಾಂಗ ಹತ್ಯೆಯನ್ನು ತಡೆದಿದೆ ಹಾಗೂ ಇತಿಯೋಪಿಯಾ, ಸೋಮಾಲಿಯಾ ಮುಂತಾದ ಕಡೆಯೂ ಹಸ್ತಕ್ಷೇಪ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಈ ಮಿಲಿಟರಿ ಹಸ್ತಕ್ಷೇಪಕ್ಕಿಂತಲೂ ಮನಃಪರಿವರ್ತನೆಯ ಐಡಿಯಲಾಜಿಕಲ್ (ಸೈದ್ಧಾಂತಿಕ) ಕಾರ್ಯಕ್ರಮಗಳೇ ದೀರ್ಘಕಾಲಿಕವಾಗಿ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಸಂಶಯವಿಲ್ಲ. ಜಗತ್ತು ಈ ರೀತಿಯಲ್ಲಿ ಅಂತರರಾಷ್ಟೀಯ ‘ರೆಜೀಮ್’ನ (ಆಡಳಿತದ) ಕಡೆಗೆ ಹೆಜ್ಜೆಯಿಡುತ್ತಿದೆ. ಇದು ಫಲ ಕೊಡುವುದಕ್ಕೆ ಸಾಕಷ್ಟು ಸಮಯ ಹಿಡಿಯಬಹುದು. ಮಾತ್ರವಲ್ಲ; ವಿಶ್ವಸಂಸ್ಕೆಯಲ್ಲೂ ಎಲ್ಲವೂ ಸರಿಯಾಗಿದೆಯೆಂದೂ ಹೇಳುವಂತಿಲ್ಲ; ಅದೂ ಕೂಡಾ ಆಂತರಿಕ ಪರಿವರ್ತನೆಗೆ ಒಳಗಾಗಬೇಕಾಗಿದೆ. ಮುಖ್ಯವಾಗಿ, ಪ್ರಬಲ ರಾಷ್ಟ್ರಗಳ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಬೇಕಾಗಿದೆ.

ಅಂತರರಾಷ್ಟೀಯ ರೆಜೀಮ್ ಬಂದರೂ, ಅದು ಪ್ರಚ್ಛನ್ನವಾಗಿಯೇ ಇರುತ್ತದೆಯಲ್ಲದೆ, ರಾಷ್ಟದ ಕಲ್ಪನೆಯನ್ನು ತೊಡೆದುಹಾಕುತ್ತದೆ ಎನಿಸುವುದಿಲ್ಲ. ಹಾಗೆ ತೊಡೆದುಹಾಕುವುದು ಅದರ ಉದ್ದೇಶವೂ ಅಲ್ಲ. ಒಂದಲ್ಲ ಒಂದು ರೀತಿಯ ರಾಜಕೀಯ ಸ್ವಾಯತ್ತತೆ ಪ್ರಾದೇಶಿಕ ಬೆಳವಣಿಗೆಗೆ ಅಗತ್ಯ. ಆದ್ದರಿಂದ ರಾಷ್ಟ್ರಗಳು ತಾವಾಗಿಯೇ ಅಲ್ಪಸಂಖ್ಯಾತ ಹಿತರಕ್ಷಣೆಯ ಕಾರ್ಯಕ್ರಮಗಳನ್ನು ಯೋಜಿಸಿಕೊಳ್ಳಬೇಕಾಗುತ್ತದೆ. ಅಲ್ಪಸಂಖ್ಯಾತ ಎಂದ ತಕ್ಷಣ ಇವತ್ತು ನಮ್ಮ ಮನಸ್ಸಿಗೆ ಬರುವುದು ಮತೀಯ, ಧಾರ್ಮಿಕ ಅಲ್ಪಸಂಖ್ಯಾತತೆ. ಆದರೆ ಇದು ಹಾಗೇ ಆಗಬೇಕೆಂದಿಲ್ಲ; ಅಲ್ಪಸಂಖ್ಯಾತತೆ ವಿಜ್ಞಾನದಲ್ಲಿ, ಸಾಹಿತ್ಯದಲ್ಲಿ, ಶಿಕ್ಷಣದಲ್ಲಿ ಇರಬಹುದು. ಪ್ರಜಾಪ್ರಭುತ್ವದಲ್ಲಿ ಯಾವುದೇ ‘ಮೈನಾರಿಟಿ ವ್ಯೂ’ (ಅಲ್ಪಸಂಖ್ಯಾತ ದೃಷ್ಪಿ) ಕೂಡಾ, ಅದು ಪಜಾಪಜಭುತ್ವಕ್ಕೇ ವಿರುದ್ಧ ಎನಿಸುವತನಕ, ಹತ್ತಿಕ್ಕುವಂಥದಲ್ಲ. ಆದ್ದರಿಂದಲೇ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಪ್ರಜಾಪ್ರಭುತ್ವದಲ್ಲಿ ದೊಡ್ಡ ಸ್ಥಾನ; ಇನ್ನು ಯಾವುದೇ ವ್ಯವಸ್ಥೆಯಲ್ಲಿ ಅದಕ್ಕೆ ಅಂಥಾ ಸ್ಥಾನವಿಲ್ಲ.

ಯಾವುದೇ ಅಲ್ಪಸಂಖ್ಯಾತರು ಅಥವಾ ಪ್ರಾದೇಶಿಕರು ತಮಗೊದಗಿದ ಅನ್ಯಾಯವನ್ನು ಯಾವ ರೀತಿ ಪರಿಹರಿಸಿಕೊಳ್ಳಬಹುದು? ಮಾತುಕತೆ, ಶಾಂತಿಯುತವಾದ ಪ್ರತಿಭಟನೆ, ಅಸಹಕಾರ, ಅನ್ನಸತ್ಯಾಗ್ರಹ ಮುಂತಾದ ಸಾತ್ವಿಕ ಮಾರ್ಗಗಳನ್ನು ಮಹಾತ್ಮಾ ಗಾಂಧಿ ತೋರಿಸಿಕೊಟ್ಟರು. ಆದರೆ ಇವು ಕಷ್ಟದ ಹಾದಿಗಳು, ತೀವ್ರ ಫಲನೀಡುವಂಥವೂ ಅಲ್ಲ. ಇವುಗಳನ್ನು ಸ್ವೀಕರಿಸುವ ತಾಳ್ಮೆ ಇಲ್ಲದ ಉಗ್ರಗಾಮಿಗಳು. ಹಲವಾರು ವರ್ಷಗಳಷ್ಟು ಹಿಂದಕ್ಕೆ ಹೋಗಿ ಆಯುಧಗಳನ್ನು, ಬಾಂಬುಗಳನ್ನು ಎತ್ತಿಕೊಂಡಿದ್ದಾರೆ. ಯಾಕೋ ಈ ತೀವ್ರಗಾಮಿತ್ವ, ಅದರ ರೋಚಕತೆ, ಹುತಾತ್ಮಭಾವ ಅವರನ್ನು ಆಕರ್ಷಿಸಿವೆ. ‘ಪ್ರಿಮಿಟಿವ್’ (ಅನಾಗರಿಕ) ಸಮಾಜಗಳಲ್ಲಿ ಮನುಷ್ಯರು ಹೀಗೆ ಹೊಡೆದಾಡಿಕೊಳ್ಳುತ್ತಿದ್ದರು. ಹೊಡೆದಾಡಿಕೊಳ್ಳದವ ನಾಲಾಯಖ್ಖು ಎಂಬುದೇ ಆಗಿನ ನಂಬಿಕೆಯಾಗಿತ್ತು. ಅಂಥವನಿಗೆ ಸಮಾಜದಲ್ಲಿ ಯಾವ ಮರ್ಯಾದೆಯೂ ಇರುತ್ತಿರಲಿಲ್ಲ. ನಾಗರಿಕತೆ ಆರಂಭವಾದ ನಂತರವೂ ಹಲವು ಶತಮಾನಗಳ ಕಾಲ ಈ ಹೊಡೆದಾಟದ ಪ್ರತಿಷ್ಠೆ ಮುಂದುವರಿಯುತ್ತ ಬಂತು, ಈಗಲೂ ಹಲವೆಡೆ, ಮುಖ್ಯವಾಗಿ ಬುಡಕಟ್ಟು ಜನಾಂಗಗಳ ನಡುವೆ, ಈ “ಮಾಚೋ’ ಮತ್ತು ಮರ್ಯಾದೆಯ ಪ್ರವೃತ್ತಿ ಕೆಲಸ ಮಾಡುತ್ತಿವೆ.

ಪ್ರಿಮಿಟಿವ್ ಶಕ್ತಿಗಳನ್ನು ಪ್ರಿಮಿಟಿವ್ ಆಗಿಯೇ ಎದುರಿಸಬೇಕಲ್ಲವೇ ಎಂದು ಕೇಳುವವರಿದ್ದಾರೆ. ಇದರಿಂದಲೇ ಸ್ವಾತಂತ್ರ್ಯವಿರುವುದು ಬಂದೂಕಿನ ತುದಿಯಲ್ಲಿ ಎಂಬ ಮಾವೋ ವಾದಕ್ಕೆ ಬಹುಶಃ ಮನ್ನಣೆ ಬಂತು. ಆದರೆ ಬಂದೂಕಿನಿಂದ ಗುಂಡು ಹಾರಿಸಿದಾಗ ಮೊದಲು ನಾಶವಾಗುವುದೇ ಸ್ವಾತಂತ್ರ್ಯ! ನಮ್ಮೆ ಧ್ಯೇಯ ಮಾತ್ರ ಶುದ್ಧವಾಗಿದ್ದರೆ ಸಾಲದು, ಅದನ್ನು ಸಾಧಿಸುವ ಮಾರ್ಗವೂ ಶುದ್ದವಾಗಿರಬೇಕು ಎಂದರು ಮಹಾತ್ಮಾ ಗಾಂಧಿ. ಇದನ್ನು ನಾವೀಗ ಮರೆತುಬಿಟ್ಟು ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು (A tooth for a tooth, an eye for an eye) ಎಂಬ ಬೈಬಲಿನ ಹಳೆಯ ಒಡಂಬಡಿಕೆಯ ಆದಿಮ ಯುಗಕ್ಕೆ ಬಂದುನಿಂತಿದ್ದೇವೆ! ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಬಂದೂಕು ಎತ್ತಿಕೊಳ್ಳುವುದೆಂದರೆ ಪ್ರಜಾಪ್ರಭುತ್ವವನ್ನು ಕೊಂದಹಾಗೆಯೇ ಸರಿ. ನಿಮ್ಮ ಪ್ರಜಾಪ್ರಭುತ್ವವನ್ನು ನಾವು ಒಪ್ಪುವುದಿಲ್ಲ ಎಂದು ಈ ಬಂದೂಕುಧಾರಿಗಳು ಹೇಳುತ್ತಿದ್ದಾರೆ. ಇದೆಂಥ ಮೊಂಡುವಾದವೆಂದು ಬೇರೆ ಹೇಳಬೇಕಾಗಿಲ್ಲ. ಪ್ರಜಾಪ್ರಭುತ್ವ ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸಬಹುದು. ಆದರೆ ಭೀತಿಜನ್ಯವಾದ ಯಾವ ವೃವಸ್ಥೆಯನ್ನೂ ಬದಲಾಯಿಸುವುದು ಅಸಾಧ್ಯ. ಯಾಕೆಂದರೆ, ಅಂಥ ವ್ಯವಸ್ಥೆಯಲ್ಲಿ ಆರೋಪಿಸುವವರೂ ಶಿಕ್ಷಿಸುವವರೂ ಈ ಬಂದೂಕುಧಾರಿಗಳೇ ಆಗಿರುತ್ತಾರೆ. ಅವರನ್ನು ವಿಚಾರಿಸುವವರೇ ಇರುವುದಿಲ್ಲ.

ಲ್ಯೋತಾರ್‌ನ ‘ಬಹುಸಂಖ್ಯೆ ಎಂದರೆ ಸಂಖ್ಯೆಯಲ್ಲ, ಭೀತಿ’ ಎಂಬ ಮಾತು ನಮ್ಮನ್ನು ಬೆಚ್ಚಿಬೀಳಿಸುವುದು ಯಾಕೆಂದರೆ ಅದು ನಮ್ಮ ಕಣ್ಣ ಮುಂದೇ ಇದ್ದೂ ನಾವು ಕಾಣದ ಸತ್ಯವಾಗಿರುವುದರಿಂದ, ಒಂದಲ್ಲ ಒಂದು ರೀತಿಯಲ್ಲಿ ನಾವೀ ಭೀತಿಗೆ ಒಳಗಾಗಿಯೇ ಬದುಕುತ್ತಿರುವವರು ಆಗಿದ್ದೂ ಕೂಡಾ. ಈ ಭೀತಿ ಉಗ್ರಗಾಮಿಗಳದ್ದಾಗಿರಬಹುದು, ಮತಾಂಧ ಮೂಲಭೂತವಾದಿಗಳದ್ಧಾಗಿರಬಹುದು, ಅಧಿಕಾರೀ ವರ್ಗದವರದ್ದಾಗಿರಬಹುದು, ದರೋಡೆಕೋರರು, ಗೂಂಡಾಗಳು, ಪಾಳೇಗಾರೀ ಪ್ರಭುಗಳು, ಪುಂಡರು, ಭ್ರಷ್ಟ ಅಧಿಕಾರಿಗಳು, ಕೆಟ್ಟ ಪೊಲೀಸರು ಮುಂತಾದ ಯಾವುದೇ ಪೀಡಕರದ್ದಾಗಿರಬಹುದು; ಮೂಲದಲ್ಲಿ ಇವರೆಲ್ಲರೂ ಭೀತಿಯ ಮೂಲಕ ಆಳುವವರೇ. ಆದರೆ ಸಮಾಜದಿಂದ ಮನ್ನಣೆಯನ್ನು ಬಯಸುವ ನಕ್ಸಲೀಯರು ಹಾಗೂ ಮತೀಯ ಉಗ್ರವಾದಿಗಳು ಜನಗಣನಾತ್ಮಕ ಬಹುಸಂಖ್ಯಾತರ ದಮನರೀತಿಯನ್ನು ಎದುರಿಸುವುದಕ್ಕೆ ತಮಗೆ ಪ್ರತಿಹಿಂಸೆಯೊಂದೇ ದಾರಿ ಎಂದು ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಲ್ಯೋತಾನ್‌ನ ಪರಿಭಾಷೆಯಲ್ಲಿ ಹೇಳುವುದಾದರೆ, ಇದು ಸಂಖ್ಯಾತ್ಮಕ ಬಹುಮತದ ವಿರುದ್ದ ಭಯಾತ್ಮಕ ಬಹುಮತವನ್ನು ಇರಿಸಿದ ಹಾಗೆ. ಆದರೆ ಇಲ್ಲಿ ಏಳುವ ಸಮಸ್ಯೆಯೆಂದರೆ, ಸಂಖ್ಯಾತ್ಮಕ ಬಹುಮತದೊಂದಿಗೆ ಭಯಾತ್ಮಕ ಬಹುಮತವೂ ಸೇರಿದರೆ ಏನಾಗುತ್ತದೆ ಎನ್ನುವುದು. ಆಗ ಏಕಪಕ್ಷೀಯ ರಾಷ್ಪ್ರಗಳಂತೆಯೇ ಏಕಧರ್ಮೀಯ ರಾಷ್ಟ್ರಗಳೂ ಹುಟ್ಟಿಕೊಳ್ಳುತ್ತವೆ. ಈ ಹೋರಾಟಗಾರರಿಗೆ ಬೇಕಾದ್ದೂ ಇದೆಯೇ? ಹಾಗಿದ್ದರೆ ನಮ್ಮ ಬಹುತ್ವದ ಮೌಲ್ಯ ಏನಾಯಿತು? ಒಂದು ಅತಿರೇಕವನ್ನು ತೊಡೆಯುವುದಕ್ಕೆ ಇನ್ನೊಂದು ಅತಿರೇಕ ಔಷಧಿಯಾಗದು. ಬಾಗಿರುವ ಸಲಾಕೆಯನ್ನು ಸರಿಪಡಿಸುವುದಕಷ್ಟೆ ಅದನ್ನು ವಿರುದ್ಧ ದಿಕ್ಕಿನಲ್ಲಿ ಸ್ವಲ್ಪ ಜಾಸ್ತಿಯೇ ಬಗ್ಗಿಸಬೇಕು ಎಂದು ಲೆನಿನ್ ಹೇಳಿದ್ದು ನಿಜ; ಆದರೆ ಸ್ಟಾಲಿನ್ ಅದರ ಬೆನ್ನನ್ನೇ ಮುರಿದುಬಿಟ್ಟ! ಹಾಗೆ ಮಾಡಬಾರದು ಎಂದು ಅವನಿಗೆ ಹೇಳುವುದಕ್ಕೆ ಯಾರೂ ಇರಲಿಲ್ಲ; ಯಾಕೆಂದರೆ ಹೇಳುವಂಥ ಯಾರನ್ನೂ ಅವನು ಉಳಿಸಿಯೂ ಇರಲಿಲ್ಲ. ಭೀತಿ ಹುಟ್ಟಿಸಿದರೆ ಆಮೇಲೆ ಆಗುವುದು ಇದೇ; ಅದು ತಾನು ನಿಂತ ಮರವನ್ನೇ ಕಡಿದ ಹಾಗೆ. ಭೀತಿ ಇಡೀ ಪಾಲಿಟಿಯನ್ನೇ ನಾಶಮಾಡುತ್ತದೆ. ಸರ್ವಾಧಿಕಾರಿ ಪ್ರವೃತ್ತಿಯನ್ನು ತೋರಿಸಿದ ಇಂದಿರಾಗಾಂಧಿಯ ಅವಸ್ಡೆಯೂ ಇದೇ ಆಯಿತು. ಅವಳು ಸದಾ ತನ್ನ ವಂದಿಮಾಗಧರಿಂದ ಸುತ್ತುವರಿಯಲ್ಪಟ್ಟಿದ್ದಳು. ಕೊನೆಗೂ ತುರ್ತುಪರಿಸ್ಥಿತಿಯನ್ನು ಕಿತ್ತು ಹಾಕಿ ಚುನಾವಣೆ ಘೋಷಿಸಿ, ಅದರಲ್ಲಿ ಒದಗಿಬಂದ ತನ್ನ ಸೋಲನ್ನು ಒಪ್ಪಿಕೊಂಡಾಗಲೇ ಅವಳನ್ನು ಜನ ಕ್ಷಮಿಸಿದ್ದು.

ವರ್ಷಗಳ ಹಿಂದೆ ನಾನು ಭಾಷಾವಿಜ್ಞಾನ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಓದಿದ ಒಂದು ಪುಸ್ತಕದ ಹೆಸರು (Criticism and Growth of Knowledge) ಇದು ಮಸ್ಗ್ರೇವ್ ಮತ್ತು ಲಾಕತೋಶ್ ಎಂಬ ಪ್ರಸಿದ್ಧ ವಿದ್ವಾಂಸರು ಸಂಪಾದಿಸಿದ ವಿಜ್ಞಾನದ ಬೆಳವಣಿಗೆಯ ಕುರಿತಾದ ಲೇಖನಗಳ ಸಂಕಲನ. ನನ್ನನ್ನು, ವಿಶೇಷವಾಗಿ ಆಕರ್ಷಿಸಿದ ವಿಷಯಗಳಲ್ಲಿ ಈ ಪುಸ್ತಕದ ಶೀರ್ಷಿಕೆಯೂ ಒಂದು! ಯಾಕೆಂದರೆ, ವಿಮರ್ಶೆಯಿಲ್ಲದ ವೈಜ್ಞಾನಿಕ ಬೆಳವಣಿಗೆ ಇಲ್ಲ; ಹಾಗೂ ವೈಜ್ಞಾನಿಕ ಪ್ರಗತಿ ವಿಮರ್ಶಾಪ್ರಜ್ಞೆಯನ್ನೂ ಹೆಚ್ಚಿಸುತ್ತದೆ. ವಿಮರ್ಶೆಯೆಂದರೆ ಟೀಕೆಯಲ್ಲ, ಕೂಲಂಕಷವಾದ ವಿಶ್ಲೇಷಣೆ. ಇಂಥ ವಿಮರ್ಶೆ ಮುಕ್ತ ಸಮಾಜದಲ್ಲಿ ಮಾತ್ರವೇ ಸಾಧ್ಯ; ಆದ್ದರಿಂದಲೇ ಮುಕ್ತ ಸಮಾಜಕ್ಕೂ ವಿಜ್ಞಾನದ ಬೆಳವಣಿಗೆಗೂ ಸಂಬಂಧ ಕಲ್ಪಿಸುವುದು. ವಿರುದ್ಧವಾಗಿ, ಭೀತಿ ತಾಂಡವವಾಡುತ್ತಿರುವ ಸಮಾಜದಲ್ಲಿ ವಿಜ್ಞಾನದ ಬೆಳವಣಿಗೆ ಕುಂಠಿತವಾಗುತ್ತದೆ, ಯಾಕೆಂದರೆ ಇಲ್ಲಿ ವಿಮರ್ಶೆಯಿರುವುದಿಲ್ಲ. ವಿಜ್ಞಾನಕ್ಕೆ ಸಂಬಂಧಿಸಿದ ಈ ಮಾತು ಒಟ್ಟಾರೆ ನಾಗರಿಕ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.

ಭೀತಿ ಹೇಗೆ ಬಹುಮತವನ್ನು ತಯಾರಿಸುತ್ತದೆ ಎಂದರೆ, ಅದರೆದುರು ಮಾತಾಡಲು ಜನ ಹೆದರುತ್ತಾರೆ. ಆದ್ದರಿಂದ ಜನಸಾಮಾನ್ಯರು ಒಂದೋ ಭಯೋತ್ಪಾದಕ ಪಂಗಡದ ಪರವಾಗಿ ಇರುತ್ತಾರೆ, ಇಲ್ಲವೇ ಸುಮ್ಮನಿರುತ್ತಾರೆ. “ನಮಗೆ ಯಾಕೆ ಬೇಕು, ನಾಳೆ ಏನಾಗುತ್ತದೋ ಯಾರಿಗೆಗೊತ್ತು?” ಎನ್ನುವವರೇ ಹೆಚ್ಚಿನ ಮಂದಿ. ಇದು ಅವಕಾಶವಾದವೂ ಹೌದು, ಬೇರೆ ರಕ್ಷಣೋಪಾಯವಿಲ್ಲದ ನಿಸ್ಸಹಾಯಕತೆಯೂ ಹೌದು. ಕಮ್ಯುನಿಸ್ಪ್ ಆಡಳಿತವೂ ಸೇರಿದಂತೆ ಎಲ್ಲಾ ಬಗೆಯ ಏಕಪಕ್ಷೀಯ ಸರ್ವಾಧಿಕಾರದಲ್ಲೂ ಇಂಥ ಕೃತಕ “ಬಹುಮತ’ ಸ್ಥಾಪಿತವಾಗುತ್ತದೆ. ಆದರೆ ಇದು ಕೇವಲ ರಾಜಕೀಯಕ್ಕೆ ಸೀಮಿತವಾದ ವಿದ್ಯಮಾನವೂ ಅಲ್ಲ, ಇಡೀ ವೈಚಾರಿಕ ರಂಗವನ್ನೂ ವ್ಯಾಪಿಸಿರುವುದು ಎನ್ನುವುದು ಆತಂಕಕಾರಿ ಸಂಗತಿ. ಯಾಕೆಂದರೆ ಮೂಲಭೂತವಾದ ಎನ್ನುವುದು ವ್ಯಚಾರಿಕತೆಯಲ್ಲಿ ಕೂಡಾ ಇರಬಹುದು. ಸ್ವಾನುಮಾನವೇ ಇಲ್ಲದ ಚಿಂತನಾಕ್ರಮ ಮೂಲಭೂತವಾದ. ವೈಜ್ಞಾನಿಕ ಕ್ಷೇತ್ರದಲ್ಲಿ ವಿಜ್ಞಾನಿಗಳು ಯಾವತ್ತೂ ಇದೇ ನಿಜ ಎನ್ನುವುದಿಲ್ಲ; ಇಂಥಿಂಥ ಕಾರಣಗಳಿಗೆ ಇಂಥಿಂಥ ಪರಿಣಾಮಗಳಾಗುತ್ತವೆ ಎನ್ನುತ್ತಾರೆ. ಅಲ್ಲಿ ಹೊಸ ಹೊಸ ಮಾಹಿತಿಗಳಿಗೆ ಅನುಗುಣವಾಗಿ ಬದಲಾವಣೆಗೆ ಸಾಧ್ಯತೆಯಿದೆ. ಸಮಾಜ ವಿಜ್ಞಾನದಲ್ಲಾದರೆ ಅನುಮಾನಗಳು ಇನ್ನಷ್ಟು ಹೆಚ್ಚಿರಬೇಕು; ಯಾಕೆಂದರೆ ಅಲ್ಲಿ ನಿಖರತೆ ಕಡಿಮೆ. ಆದರೆ ಇಂಥ ಕಡೆಯಲಿ ಹೆಚ್ಚೆಚ್ಚು ಮೂಲಭೂತತನ ಕಾಣಿಸುವುದು. ಇದರ ಕುರಿತಾದ ಸ್ವಯಮೆಚ್ಚರವೇ ಇದನ್ನು ಮೀರುವ ಏಕೈಕ ಸಾಧ್ಯತೆ. ಶೇಕ್ಸ್‌ಪಿಯರನ ‘ರೋಮಿಯೋ ಅಂಡ್ ಜೂಲಿಯೆಟ್’ ನಾಟಕದಲ್ಲಿ ಜೂಲಿಯೆಟಳ ತಂದೆ ಮಗಳ ಕುರಿತು ರೇಗಾಡುವ ಸಂದರ್ಭದಲ್ಲಿ ಅವಳ ದಾದಿ ಏನೋ ಹೇಳಲು ಪ್ರಯತ್ನಿಸುವ ಒಂದು ಪ್ರಸಂಗವಿದೆ. ಜೂಲಿಯೆಟಳ ತಂದೆ ಆಕೆಯನ್ನೂ ಗದರಿಸುತ್ತಾನೆ. ಆಗ ಅವಳು ಕೇಳುವ ಪ್ರಶ್ನೆಯೊಂದಿದೆ: “ಹಾಗಾದರೆ ಯಾರೂ ಮಾತಾಡಬಾರದೇ”? ಎಂಥ ಮುಗ್ಧ ಮಾತು!

ಟಿಪ್ಪಣಿ: ಪ್ರಜಾಪ್ರಭುತ್ವದಲ್ಲಿ ಅತಿ ಮುಖ್ಯವಾದ ಪಾರ್ಲಿಮೆಂಟ್ parliament ಎನ್ನುವ ಸಂಸ್ಥೆಯೇ ಮುಕ್ತವಾಗಿ ಮಾತಾಡುವುದಕ್ಕೆ ಸಂಬಂಧಿಸಿದುದು. ಇಂಗ್ಲಿಷ್‌ನ ಈ ಪದದ ಮೂಲ ಹಳೆಯ ಫ್ರೆಂಚ್‌ನ parlement ‘ಮಾತಾಡುವುದು’, parler ‘ಮಾತಾಡು’ ಎಂಬ ಕ್ರಿಯಾಪದದಿಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದ ವಸಂತ ಬಂದ ಇದೋ
Next post ಉಬ್ಬರವಿಳಿತ

ಸಣ್ಣ ಕತೆ

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys