ಪ್ರಿಯ ಸಖಿ,

ಭಾರತೀಯ ಸಂಸ್ಕೃತಿಯಲ್ಲಿ ಧ್ಯಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿತ್ತು. ಆದರೆ ಕಾಲಕ್ರಮೇಣ ಇಡೀ ವಿಶ್ವವೇ ಅರ್ಥ ಸಂಸ್ಕೃತಿಯೆಡೆಗೆ ಮುಖಮಾಡಿ ನಿಂತಾಗ ಇನ್ನಿತರ ತಾತ್ವಿಕ, ನೈತಿಕ ಮಾನವೀಯ ಮೌಲ್ಯಗಳಂತೆಯೇ ಧ್ಯಾನವೂ ಕೂಡ ಮೂಲೆ ಗುಂಪಾಗಿ ಹೋಗಿತ್ತು. ಆಧುನಿಕತೆಯೆನ್ನುವುದು ಬಾಹ್ಯಾಡಂಬರದ ಪ್ರತೀಕವೆನ್ನುವಂತೆ ಸೆಳೆದುಕೊಂಡು ಹೊರಟಿರುವಾಗ ಈ ಪ್ರವಾಹದಲ್ಲಿ ಕೊಂಚ ಹೊತ್ತು ನಿಂತು ಸರಿ ತಪ್ಪುಗಳನ್ನು ವಿವೇಚಿಸುವುದು ಸಾಧ್ಯವಿರುವುದು ಧ್ಯಾನದಿಂದ ಮಾತ್ರ ಎಂಬುದನ್ನು ಇತ್ತೀಚಿನ ಕೆಲ ಪ್ರಜ್ಞಾವಂತರು ಕಂಡುಕೊಳ್ಳುತ್ತಿರುವುದು ಭಾರತೀಯ ಸಂಸ್ಕೃತಿಯ ಪ್ರೇಮಿಗಳಿಗೆ ಕೊಂಚವಾದರೂ ಸಮಾಧಾನವನ್ನುಂಟು ಮಾಡಿದೆ.

ಧ್ಯಾನವೆಂದರೇನೆಂದು ಸಾಮಾನ್ಯವಾಗಿ ಎಲ್ಲರೂ ಕೇಳಿಕೊಳ್ಳುವ ಪ್ರಶ್ನೆ. ಹಾಗೇ ಅವರವರಿಗೆ ತಕ್ಕಂಥಾ ಉತ್ತರವನ್ನೂ ಕಂಡು ಹಿಡಿದುಕೊಂಡಿರುತ್ತಾರೆ. ಧ್ಯಾನವೆಂಬುದು ಅತ್ಯಂತ ವೈಯಕ್ತಿಕ ಕ್ರಿಯೆಯಾಗಿರುವುದರಿಂದ ಅದರ ಅನುಭವವನ್ನು ಯಾರೂ ಇದು ಇಷ್ಟೇ, ಹೀಗೇ ಎಂದು ಬಣ್ಣಿಸಿ ಹೇಳಲೂ ಬರುವುದಿಲ್ಲ. ಧ್ಯಾನ ಮಾಡುವುದೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮನ್ನು ನಾವು ಸಮ್ಮೋಹಿನಿಗೊಳಿಸಿಕೊಳ್ಳುವುದು ಎಂದೂ ನಮ್ಮ ಮನಸ್ಸಿನ ಧಾರ್ಮಿಕ ಪೂರ್ವಗ್ರಹಕ್ಕೆ ತಕ್ಕಂತೆ ದೇವರನ್ನು ಕುರಿತು ಕಲ್ಪಿಸಿಕೊಳ್ಳುತ್ತಾ ಅದನ್ನೇ ಮನಸ್ಸಿನಲ್ಲಿ ಮೆಲುಕು ಹಾಕುತ್ತಿರುವುದು ಎಂದು ಸಾಮಾನ್ಯವಾಗಿ ಹೆಚ್ಚಿನವರು ಅರ್ಥೈಸಿಕೊಂಡಿರುತ್ತಾರೆ.

ಆದರೆ ಖ್ಯಾತ ತತ್ವಜ್ಞಾನಿ ಜೆ. ಕೃಷ್ಣಮೂರ್ತಿಯವರು ಧ್ಯಾನವನ್ನು ಹೀಗೆ ಅರ್ಥೈಸುತ್ತಾರೆ. ಧ್ಯಾನವೆನ್ನುವುದು ಯಾವ ಆಯ್ಕೆಯೂ ಇಲ್ಲದೇ ನನ್ನನ್ನೇ ನೋಡುವುದು, ತಿಳಿದುಕೊಳ್ಳುವುದು, ನಡಿಗೆಯ ರೀತಿಯನ್ನು, ನನ್ನ ಮಾತು, ಸ್ವಭಾವ ಮುಂತಾದ ಸಕಲ ಪ್ರವೃತ್ತಿಗಳನ್ನೂ ಎಚ್ಚರದಲ್ಲಿ ಗಮನಿಸುವುದು. ಸರಳವಾಗಿ ಹೇಳುವುದಾದರೆ ಮನಸ್ಸಿನ ನಿರಂತರ ಜಾಗೃತಾವಸ್ಥೆಯೇ ಧ್ಯಾನ. ನಮ್ಮ ಸಕಲ ದೈಹಿಕ, ಮಾನಸಿಕ ವ್ಯಾಪಾರಗಳ ಬಗೆಗೆ ನಮ್ಮ ಹೊರ ಒಳ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲಾ ಕ್ರಿಯೆಗಳನ್ನೂ ಗಮನಿಸುತ್ತಾ, ಅದರಿಂದ ಹೊರಗೆ ನಿಂತು ತಟಸ್ಥವಾಗಿ ನೋಡುವುದೇ ಧ್ಯಾನದ ಲಕ್ಷಣ. ಇಲ್ಲಿ ಯಾವುದೇ ನಿರೀಕ್ಷೆಗಳೂ ಇರಬಾರದು. ಈ ರೀತಿ ಸುಮ್ಮನೆ, ನೋಡುತ್ತಾ, ತಿಳಿಯುತ್ತಾ ಹೋಗುವುದರಿಂದ ನಾವು ಅಪ್ಪಟವಾಗುತ್ತಾ ಹೋಗುತ್ತೇವೆ. ಈ ಎಚ್ಚರದಲ್ಲಿ ತನಗೆ ತಾನೇ ಮೋಸಮಾಡಿಕೊಳ್ಳುವ, ನಾಟಕವಾಡುವ ಬುದ್ಧಿಯ ಕಸರತ್ತುಗಳು ಕೊನೆಗೊಂಡು ಮನಸ್ಸು ತಿಳಿಯಾಗುತ್ತಾ, ಹೋಗುತ್ತದೆ. ಯಾವ ಯಾರ ಅವಲಂಬನೆಯೂ ಇಲ್ಲದೇ ಸ್ವತಂತ್ರ್ಯವಾಗಿ, ಒಂಟಿಯಾಗಿ ನಿಲ್ಲಲು ಕಲಿಯುತ್ತದೆ. ಮಾನಸಿಕವಾಗಿ ಒಂಟಿಯಾಗಿ ನೆಲೆ ನಿಲ್ಲಲು ಸಮರ್ಥವಾದ ಮನಸ್ಸು ಮಾತ್ರ ನಿಜವಾದ ಅರ್ಥದಲ್ಲಿ, ಪ್ರೀತಿಸಲು, ತಿಳಿಯಲು, ಇನ್ನೊಬ್ಬರಿಗೆ ಸಹಾಯ ಮಾಡಲು, ಸೃಜನಶೀಲ ಕಾರ್ಯಗಳಲ್ಲಿ ತೊಡಗಲು ಸಮರ್ಥವಾಗಿರುತ್ತದೆ ಎನ್ನುತ್ತಾರೆ.

ಸಖಿ, ಗಾಢ ಮೌನದಲ್ಲಿ ನಡೆಯುವ ಇಂತಹ ಧ್ಯಾನಕ್ಕೆ ತನ್ನದೇ ಆದ ವಿಶಿಷ್ಟ ಶಕ್ತಿ ಇದೆ. ಮೌನದ ಕೊನೆಯ ಹಂತವನ್ನು ತಲುಪಬಲ್ಲ ಈ ಧ್ಯಾನದಲ್ಲಿ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿ ಇರುತ್ತದೆ. ಏಕಾಗ್ರತೆ, ತನ್ಮಯತೆಯನ್ನು ಪಡೆದ ಮನಸ್ಸಿನಿಂದ ಎಲ್ಲ ಗೊಂದಲಗಳೂ ದೂರಾಗಿ ತನಗೆ ತಾನೇ ಗಟ್ಟಿಯಾಗಿ ನಿಲ್ಲುವ ಆತ್ಮವಿಶ್ವಾಸ ಮೂಡುತ್ತದೆ. ಧ್ಯಾನಸ್ಥ ಸ್ಥಿತಿಯಲ್ಲಿ ಮನಸ್ಸು ಪಡೆವ ಆನಂದ ಅಲೌಕಿಕವಾದುದೂ, ವರ್ಣನೆಗೆ, ನಿಲುಕದುದೂ ಆಗಿರುತ್ತದೆ. ಈ ಸ್ಥಿತಿಯನ್ನು ತಲುಪುವ ಪ್ರಯತ್ನ ನಮ್ಮದೂ ಆದಾಗ ನಿಜಕ್ಕೂ ಬದುಕಿನ ಬಹುದೊಡ್ಡ ಗುರಿಯನ್ನು ತಲುಪಿದಂತೆಯೇ ಸರಿ.
*****