ನಮ್ಮ ಕರ್ತವ್ಯ ನಾವು ಮಾಡಿದ್ದೇವೆ
ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು
ನಮ್ಮ ಮಕ್ಕಳೊಂದಿಗೆ
ಕಾಡಿಗೆ ಹೋಗಿ ಆಯ್ದಿದ್ದೇವೆ.
ವ್ಯರ್ಥ ಸುರಿದ ರಕ್ತದ ವಾಸನೆಯಂಥ
ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ.
ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈತಿ ಹೊರಿಸಿದ್ದೇವೆ.
ದುರ್ಬೀನು ಹಿಡಿದ ದಿವ್ಯ ಹುಚ್ಚನ ಕಣ್ಣಿಗೆ
ಹಿಗ್ಗಿಮತ್ತೆ ಕುಗ್ಗಿಕಂಡಿದ್ದೇವೆ.
ಬೆಳಕಿನ ಮಕ್ಕಳೊಡನೆ ಕತ್ತಲ ಮಕ್ಕಳು ಯುದ್ಧಮಾಡಿದಾಗ
ನೆಮ್ಮದಿಯ ಲೇಪಿಸುವ ಒಳ್ಳೆಯ ಕತ್ತಲನ್ನು ಪ್ರೀತಿಸಿ
ನೋವು ತರುವ ಬೆಳಕನ್ನು ದ್ವೇಷಿಸಿದ್ದೇವೆ.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಮಕ್ಕಳನ್ನು ನಮ್ಮ ದೇಶಕ್ಕಿಂತ ಹೆಚ್ಚು
ಪ್ರೀತಿಸಿದ್ದೇವೆ. ನೆಲದಲ್ಲಿ ಬಾವಿ ತೋಡಿದ್ದೇವೆ.
ಈಗ ಆಕಾಶದಲ್ಲಿ
ಕೊನೆ ಇಲ್ಲದ ಮೊದಲಿಲ್ಲದ
ಬಾವಿಗಳೆಷ್ಟೊಂದನ್ನೂ ತೋಡುತಿದ್ದೇವೆ.
ನಮ್ಮ ಕರ್‍ತವ್ಯ ನಾವು ಮಾಡಿದ್ದೇವೆ.

‘ನೀವು ನೆನಪಿಟ್ಟುಕೊಳ್ಳತಕ್ಕದ್ದು’
ಅನ್ನುವ ಮಾತು
‘ನೀವು ಮರೆಯುತ್ತೀರಿ’
ಎಂದು ಬದಲಾಗಿದೆ –
ರೂಟು ಬದಲಾದ ಬಸ್ಸಿನ
ಟೈಂಟೇಬಲ್ಲೂ ಬದಲಾಗುವ ಹಾಗೆ,
ಸಿನೊಗಾಗ್ನಲ್ಲಿ, ಋತು ಬದಲಾದಂತೆ
‘ಇಬ್ಬನಿ ಮತ್ತು ಮಳೆ’
ಎಂಬ ಫಲಕ
‘ಮಳೆಯನ್ನು ತರುವವನು’
ಎಂದು ಬದಲಾಗುವ ಹಾಗೆ
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಬದುಕನ್ನು ಅಚ್ಚುಕಟ್ಟು ಮಾಡಿದ್ದೇವೆ…
ಹೂಹಾಸು, ಮೆತ್ತನೆ ಲಾನು, ಹಿತವಾದ ನೆರಳು.
ಹಸಿರು ತುಂಬಿದ ಕಾಲು ಹಾದಿ ಇವೆಲ್ಲ
ಹುಚ್ಚಾಸ್ಪತ್ರೆಯ ಮುಂದೆ ಇರುವ ಹಾಗೆ.
ಹತಾಶೆ ಜೆನ್ನಾಗಿ ಪಳಗಿ ನಮಗೆ ಶಾಂತಿ ತಂದಿದೆ.
ಆಶೆಗಳು ಮಾತ್ರ ಉಳಿದಿವೆ.
ರಾತ್ರಿಗಳನ್ನು ಛಿದ್ರಮಾಡಿ, ಹಗಲನ್ನು ಚಿಂದಿಮಾಡುವ ಅದಮ್ಯ ಆಶೆಗಳು.
ಸಿನಿಮಾ ಥಿಯೇಟರಿನೊಳಗೆ ಹೋಗುತ್ತಿರುವ ಜನ
ಮುಖ ಕೆಂಪಾಗಿ, ಕಣ್ಣು‌ಊದಿ, ಅಥವಾ ಬೇಸತು, ಅಥವಾ
ತುಟಿಯಲ್ಲಿ ಕಣ್ಣಲ್ಲಿ ನಗೆ ತುಂಬಿ ಹೊರಬರುತ್ತಿರುವ ಜನರನ್ನು
ನೋಡಿದರೂ ಗಮನಿಸದೆ, ಹಿಂದೆ ತಿರುಗದೆ,
ಕತಲು ಬೆಳಕು ಕತ್ತಲುಗಳಿಗೆ ಕಾಲಿಡುವ ಹಾಗೆ,
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.
*****
ಮೂಲ: ಯೆಹೂದಾ ಅಮಿಛಾಯ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)