ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು
ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು
ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು;
ಆದರವು ಒದ್ದುದನು ಈ ಹೃದಯ ಒಲಿಯುವುದು,
ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ,
ನನ್ನ ಕಿವಿಗಳಿಗೆ ಹಿತವೆನ್ನಿಸದು ನಿನ್ನ ದನಿ,
ಕಾಮಚೋದಕ ಸ್ಪರ್ಶ ಎಬ್ಬಿಸುವ ಕಚಗುಳಿ
ರುಚಿ ವಾಸನೆಗಳು ಸಹ ನಿನ್ನೊಡನೆ ವಿಷಯ ತನಿ-
ಭೋಜನವ ಬಯಸವು. ಆದರಿದೆ ಆಶ್ಚರ್ಯ.
ನನ್ನೆಲ್ಲ ಬುದ್ದಿಯೂ ಎಲ್ಲ ಇಂದ್ರಿಯಗಳೂ
ಈ ಹುಚ್ಚು ಹೃದಯ ನಿನ್ನನ್ನು ಓಲೈಸುತ್ತ
ಸ್ವಾಭಿಮಾನಿಯು ದಾಸನಾಗುವುದ ತಡೆಯವು.
ಆದರೀ ಪಿಡುಗು ನನ್ನೊಂದು ಲಾಭವೂ ಕೂಡ,
ತಪ್ಪಿಗೆಳೆವವಳೆ ನೀಡುವಳು ಶಿಕ್ಷೆಯ ಕೂಡ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 141
In faith I do not love thee with mine eyes
















