Home / ಕಥೆ / ಅನುವಾದ / ಕಮಿಷನ್ನರ ಕೊರಗು

ಕಮಿಷನ್ನರ ಕೊರಗು

ದಿವಾನ್ ಬಹದ್ದೂರ್ ಜಿ. ಹಂಸರಾಜ ಅಯ್ಯಂಗಾರ್, ಸಿ. ಐ. ಇ. ಪೆನ್ಷನ್ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್) ಅವರು ಸ್ವರ್ಗಸ್ಥರಾದುದನ್ನು ಇಂದಿನ ವರ್ತಮಾನ ಪತ್ರಿಕೆಯಲ್ಲಿ ಓದಿ ದುಃಖಿಸುತ್ತಿದ್ದೇನೆ. ಅವರ ದೇವಿ (ಪತ್ನಿ) ಉತ್ತಮಳಾದ ಸ್ತ್ರೀ. ಕೆಲವು ದಿನಗಳ ಹಿಂದೆ ಆಕೆ ಸಹ ಸುಮಂಗಲಿಯಾಗಿಯೇ ತೀರಿಕೊಂಡಳು. ಅಯ್ಯಂಗಾರ್ಯರನ್ನು ಸರ್ಕಾರವೂ ಜನಗಳೂ ಬಹಳ ಗೌರವಿಸುತ್ತಿದ್ದರು. ಅವರ ಒಬ್ಬಳೇ ಮಗಳಾದ ಚಂದ್ರಮತಿ ನನ್ನ ಸ್ನೇಹಿತ ಬಲರಾಮನಿಗೆ ವಿವಾಹವಾಗಿ ಯಾವ ಕುಂದೂ ಇಲ್ಲದೆ ಸುಖ ಬಾಳ್ವೆಯನ್ನು ನಡೆಸುತ್ತಿದ್ದಾಳೆ. ಆದರೆ ಅಯ್ಯಂಗಾರ್ಯರಿಗೆ ಮನಸ್ಸಿನಲ್ಲಿ
ಒಂದು ಕೊರಗು ಇದ್ದೇ ಇದ್ದಿತು. ಅವರು ಅದನ್ನು ಒಂದು ಕಳಂಕವಾಗಿ ಭಾವಿಸಿ ಪದೇ ಪದೇ ಅದರ ವಿಷಯ ಪ್ರಸ್ತಾಪಿಸುತ್ತಿದ್ದರೆಂದೂ ವದಂತಿ. “ಊರವರಿಗೆಲ್ಲಾ ಸಹಾಯ ಮಾಡಿ ಎಷ್ಟೋ ಕಳವುಗಳನ್ನು ಪತ್ತೆ ಮಾಡಿ ಕಳ್ಳರನ್ನು ಹಿಡಿದೆ. ಆದರೆ ನನ್ನ ಮನೆಯಲ್ಲಿಯೇ ನಡೆದ ಒಂದು ಸಣ ಕಳವನ್ನು ಮಾತ್ರ ಕಂಡು ಹಿಡಿಯಲು ನನ್ನಿಂದ ಸಾಧ್ಯವಾಗಲಿಲ್ಲವಲ್ಲ” ಎಂದು ಅವರು ದುಃಖಪಡುತ್ತಿದ್ದರಂತೆ. ಆ ಕಳವಿನ ನಿಜಸ್ಥಿತಿಯನ್ನು ಅರಿತ ನಾನು, ಇದುವರೆಗೆ ಅದನ್ನು ಹೊರಗೆಡವದೆ ಇದ್ದು ಈಗ ಹೊರಗೆಡಹುತ್ತೇನೆ. ನನ್ನ ನಡತೆ ಸರಿಯಾದುದೇ ಎಂಬುದನ್ನು ಈ ಸಂಗತಿಯನ್ನು ವಾಚಿಸುವವರೇ ತೀರ್‍ಮಾನಿಸಲಿ. ಅದು ನನಗೆ ಸಮ್ಮತ.
* * *

ಒಂದು ದಿನ ನನ್ನ ಮಿತ್ರ ಬಲರಾಮನು ನನ್ನಲ್ಲಿ ಬಂದು ಹೀಗೆ ಹೇಳಿದನು, “ಇಂದು ನನ್ನ ಚಂದ್ರಮತಿಯ ಬಂಗಲೆಯಲ್ಲಿ ನಮಗೆಲ್ಲಾ ಸ್ವಾಗತ, ಭೋಜನ” ಎಂದು.

ನಾನು “ಚಂದ್ರಮತಿ ಯಾರು”? ಎಂದು ಕೇಳಿದೆ.

“ಹರಟಬೇಡ, ಹತ್ತು ದಿನದಿಂದ ನಾನು ಹೇಳುತ್ತಿಲ್ಲವೆ ? ಚಲನ ಚಿತ್ರ ಮಂದಿರದಲ್ಲಿ ಅವಳನ್ನೂ, ಅವಳ ತಾಯನ್ನೂ ಸಂಧಿಸಿದೆ. ಅದೇ ಮೊದಲಾಗಿ ಈಚೆಗೆ-”

“ಅವಳೇಯೆ, “ಒಬ್ಬ ಹೆಣ್ಣು ಇದ್ದಾಳೆ. ಅವಳನ್ನು ನೋಡಿದ ಕೂಡಲೇ ರಂಭೆಯೂ ಮೇನಕೆಯೂ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳುವರು” ಎಂದು ಹೇಳಿದ್ದೆಯೇ ಹೊರತು, ಅವಳ ಹೆಸರು ಚಂದ್ರಮತಿ ಎಂದಾಗಲಿ, ನೀನು ಹರಿಶ್ಚಂದ್ರನೆಂದಾಗಲಿ ನನಗೆ ಇದುವರೆಗೆ ತಿಳಿಸಲಿಲ್ಲ-”

“ಅವರಿಬ್ಬರೂ ಸಮ್ಮತಿಸಿದ್ದಾರೆ.”

“ಯಾತಕ್ಕೆ?”

“ನನ್ನನ್ನು ಮದುವೆ ಮಾಡಿಕೊಳ್ಳಲು”

“ಇಬ್ಬರೂವೆ? ಎಂದಿಗೂ ಆಗದು. ನಾನು ಇದನ್ನು ನಂಬುವುದೇ ಇ_”

“ಹರಟಬೇಡ : ನನಗೂ ಚಂದ್ರಮತಿಗೂ ವಿವಾಹ. ಇದಕ್ಕೆ ಅವಳ ತಾಯಿಯೂ ಒಪ್ಪಿದ್ದಾರೆ. ಆದರೆ ಆಕೆಯ ತಂದೆ ಮಾತ್ರ….

“ತಂದೆಯನ್ನು ಕಟ್ಟಿಕೊಂಡು ಚಿಂತೆ ಯಾಕೆ? ಇದನ್ನೆಲ್ಲಾ ತಾಯಿ ತೀರ್ಮಾನಿಸಬೇಕು”

“ಅಯ್ಯೋ, ಇವರ ವಿಷಯದಲ್ಲಿ ಹಾಗೆ ಹೇಳಬೇಡ, ಇವರು ಯಾರು ಗೊತ್ತೆ ? ಹಂಸರಾಜಯ್ಯಂಗಾರ್, ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್.”

“ಇರಲಿ, ಯಾವ ಹುದ್ದೆಯಲ್ಲಿದ್ದರೆ ತಾನೇ ಏನು? ಮನೆಗೆ ಬಂದ ಮೇಲೆ ಬುಟ್ಟಿಯ ಹಾವಾಗಿ ಅಡಗಿರಬೇಕಾದುದು ತಾನೆ?”

“ಅವರೆ? ನಿನಗೆ ಏನೂ ತಿಳಿಯದು. ಅವರ ಮಾತು ಸಿಡಿಲಿನಂತೆ ಜೋರಂತೆ. ಅವರ ಆಫೀಸಿನಲ್ಲಿ ವದಂತಿ ಏನೆಂಬುದು ಗೊತ್ತೆ? ಅವರ ಡ್ರೈವರು ಮೋಟಾರು ಕಾರಿಗೆ ಕೊಂಬು (ಹಾರ್‍ನ್) ಅನವಶ್ಯಕವೆಂದು ತೆಗೆದು ಇಟ್ಟಿದ್ದಾನಂತೆ. ಗಾಡಿಯಲ್ಲಿ ಹೋಗುವಾಗಲೆಲ್ಲಾ ಅವರು ಮಾತನಾಡುತ್ತಲೇ ಇರುವುದರಿಂದ, ಆ ಧ್ವನಿ ಕೇಳಿದ ದಾರಿಗರೆಲ್ಲಾ ರಸ್ತೆಯನ್ನು ಬಿಟ್ಟು ಮಗ್ಗಲಾಗುವರಂತೆ.”

“ನೀನೂ ಪ್ರತಿಯಾಗಿ ಸಿಡಿಲಿಗೆ ಸಿಡಿಲಾಗಿ ಜವಾಬ್ ಕೊಡುವುದು ತಾನೆ?”

“ಅವರಿಗೆ ದಿವಾನ್ ಬಹದ್ದೂರ್ ಪಟ್ಟವು ದೊರೆತುದು ಹೇಗೆ ಗೊತ್ತೆ? ಒಂದು ದಿನ ಬಂದೂಕದ ಲೈಸೆನ್ಸಿಗಾಗಿ ಅವರ ಬಳಿಗೆ ಒಬ್ಬಾತ ಬಂದನಂತೆ. ಬಂದವನೇ ಹತ್ತು ರೂಪಾಯಿನ ಒಂದು ನೋಟನ್ನು ಮುಂದಕ್ಕೆ ನೀಡಿದನಂತೆ. ಆಗ ಇವರು ಗರ್‍ಜಿಸಿದುದನ್ನು ಕೇಳಿ ಅವನು ನಡುಗಿ “ನಾನು ಕೊಡುತ್ತಿರುವುದು ಫೋರ್ಜರಿ ನೋಟು” ಎಂದು ಹೇಳಿದುದು ಮಾತ್ರವಲ್ಲದೆ, ಅವರನ್ನು ಕರೆದುಕೊಂಡು ಹೋಗಿ ಹತ್ತು ಲಕ್ಷ ರೂಪಾಯಿ ಫೋರ್ಜರಿ ನೋಟುಗಳನ್ನಿಟ್ಟಿದ್ದ ಗುಪ್ತ ಸ್ಥಾನವನ್ನು ತೋರಿಸಿಬಿಟ್ಟನಂತೆ.”

“ಭೇಷ್, ನಿನ್ನ ಹತ್ತಿರ ಫೋರ್ಜರಿ ನೋಟುಗಳು ಇಲ್ಲವಲ್ಲ. ಈಗ ಹೋಗುತ್ತಿರುವುದೂ ಸಹ ಅವರ ಬಂಗಲಿಗೆ.”

“ಅವರು ಆಫೀಸು ಎಂದೂ, ಮನೆ ಎಂದೂ ವ್ಯತ್ಯಾಸವನ್ನಿಟ್ಟಿರಲಿಲ್ಲ ವಂತೆ, ಮನೆಯಲ್ಲಿಯೂ ನಾಲ್ಕು ಗಂಟೆಗಳಿಗೆ ಒಂದು ಸಲದಂತೆ ಸರ್ಕಾರದ ಜಿ. ಒ. (ಗವರ್‍ನಮೆಂಟ್ ಆರ್‍ಡರ್) ರೀತಿಯಲ್ಲಿ ಅಪ್ಪಣೆಗಳನ್ನು ಬರೆದು ಕಾನ್‌ಸ್ಟೆಬಲ್‌ ಮೂಲಕ ಹೆಂಡತಿಗೋ, ಅಡಿಗೆಯವನಿಗೋ, ತೋಟದ ಮಾಲಿಗೋ ನಕಲುಗಳನ್ನು ಕಳುಹಿಸುತ್ತಲೇ ಇರುತ್ತಾರಂತೆ.”

“ಅದಕ್ಕೆ ನಾನೇನು ಮಾಡಲಿ, ಮಗಳೂ ತಂದೆಯನ್ನೇ ಹೊತ್ತು ಕೊಳ್ಳಲಿ, ಎಂದು ಆಶೀರ್‍ವದಿಸುತ್ತೇನೆ, ಗಣಪತಿಗೆ ತೆಂಗಿನಕಾಯಿ ಒಡೆಯುತ್ತೇನೆ.”

“ನೀನು ಹಾಗೇನೂ ಮಾಡಬೇಡ, ಈ ಸಾಯಂಕಾಲ ನನ್ನೊಂದಿಗೆ ಬಾ”

“ಎಲ್ಲಿಗೆ?”

“ಅವರ ಬಂಗಲೆಗೆ?”

“ಏತಕ್ಕಾಗಿ”

“ಅವರು ನನ್ನನ್ನು ಆಹ್ವಾನಿಸಿದ್ದಾರೆ. ಅವರ ಹೆಂಡತಿಯವರ ಒತ್ತಾಯದಿಂದ ಅವರು ಕರೆದಿದ್ದಾರೆ. ಈ ಸಾಯಂಕಾಲ ಅವರ ಕೂಡ ಟೆನ್ನಿಸ್ ಆಡಿಬಿಟ್ಟು ರಾತ್ರಿ ಭೋಜನ ಮಾಡಿ ನಾಳೆ ಬೆಳಿಗ್ಗೆ ಅವರು ಆಫೀಸಿಗೆ ಹೋಗುವವರೆಗೆ ಅವರ ಜತೆಯಲ್ಲಿಯೇ ಇರಬೇಕೆಂದು ಕೇಳಿಕೊಂಡಿದ್ದಾರೆ.”

“ಓಹೋ, ಸರಿಯಾಯಿತು. ಒಂದು ಹಸುವನ್ನು ಕೊಳ್ಳುವುದಕ್ಕೆ ಮುಂಚೆ, ಅದಕ್ಕೇನಾದರೂ ಕಾಲು ಕುಂಟೆ ಎಂದು ಅದನ್ನು ಓಡಿಸಿ ನೋಡುವಂತೆ; ನೀನು ಹೇಗೆ ನಡೆದುಕೊಳ್ಳುತ್ತೀ, ನಿನ್ನ ಮನಶ್ಯಕ್ತಿ ಎಷ್ಟುಎಲ್ಲ ವನ್ನೂ ಪರೀಕ್ಷಿಸುವಂತಿದೆ ಅವರು. ಮಾಡಲಿ, ಅದಕ್ಕೆ ನಾನು ಯಾಕೆ?

“ನನ್ನನ್ನು ಮಾತ್ರ ಆಹ್ವಾನಿಸಿದರೆ ನಿನ್ನಂತಹ ಮೂರ್ಖನಾದವನಾರಾದರೂ ಹೀಗೆ ಹೇಳಬಹುದೆಂದು ಅರಿತೇ ನನ್ನೊಂದಿಗೆ ಒಬ್ಬ ಗೆಳೆಯನನ್ನೂ ಕರೆದುಕೊಂಡು ಬರಬೇಕೆಂದು ಮರ್‍ಯಾದೆಗಾಗಿ ಬರೆದಿದ್ದಾರೆ. ನೀನು ನಿನ್ನ ಟೆನ್ನಿಸ್ ಬ್ಯಾಟನ್ನು ತೆಗೆದುಕೊಂಡು ಬಾ.”

“ಈ ಮಾತಿಗೆ ಸರಿಯಾದ ಸಂದರ್‍ಭದಲ್ಲಿ ಸೇಡು ತೀರಿಸುತ್ತೇನೆ. ಅವರು ನಿನ್ನನ್ನು ಆಟವಾಡಿಸುವುದನ್ನು ನೋಡುವುದಕ್ಕಾಗಿಯಾದರೂ ನಾನು ಖಂಡಿತ ಬಂದೇ ಬರುತ್ತೇನೆ.”
ನನ್ನ ಸ್ನೇಹಿತ ಹಣವುಳ್ಳವನೇ, ಸುಂದರನೂ ಹೌದು. ಇರುವ ಬುದ್ದಿಯನ್ನು ಹೊರಗೆ ತೋರಿಸಿ ಇತರರಿಗೆ ಹೊಟ್ಟೆ ಕಿಚ್ಚು ಉಂಟಾಗದಂತೆ ಮರೆಸಿಕೊಳ್ಳುವ ಸಾಮರ್‍ಥ್ಯವೂ ಅವನಿಗಿದೆ. ಇವನ ಇಷ್ಟವನ್ನು ವಿರೋಧಿಸುವ ಬಂಧುಗಳು ಯಾರೂ ಇಲ್ಲ. ಆದುದರಿಂದ ನಾವು ಹೋಗುವ ಕಾರ್ಯ ಜಯವಾಗುವುದರಲ್ಲಿ ಸಂದೇಹವಿರಲಿಲ್ಲ. ಆದರೂ ಎಚ್ಚರಿಕೆಯಿಂದಲೇ ಇದ್ದೆವು. ನಾವು ಅಲ್ಲಿಗೆ ನಾಲ್ಕು ಗಂಟೆಗೆ ಹೋಗಬೇಕಾಗಿದ್ದವರು ಮುಕ್ಕಾಲು ಗಂಟೆ ಮುಂಚೆಯೇ ಬಂಗಲೆಗೆ ಕೂಗಿನ ದೂರದಲ್ಲಿ ಹೋಗಿ ನಿಂತವು. ಅಲ್ಲಿ ಬಂಡಿಯನ್ನು ನಿಲ್ಲಿಸಿಕೊಂಡಿದ್ದು ಎರಡು ನಿಮಿಷ ಇರುವಾಗಲೇ ಹೊರಟು, ನಾಲ್ಕು ಗಂಟೆ ಠಣಾರ್ ಎನ್ನುತ್ತಿರುವಾಗಲೇ ಬಂಗಲೆಯ ಬಳಿಗೆ ಹೋದೆವು.

ಅದನ್ನು ಕಂಡು ಹಂಸರಾಜಯ್ಯಂಗಾರರಿಗೆ ಬಹು ಸಂತೋಷ “ಬನ್ನಿ ಬನ್ನಿ” ಎಂದು ದೊಡ್ಡ ಧ್ವನಿಯ ಸ್ವಾಗತ ಮಾಡಿದರು, “ನಾನು ಯಾವಾಗಲೂ ಹೇಳುವುದು ಸಣ್ಣ ವಿಷಯಗಳಲ್ಲಿ ದೊಡ್ಡ ಗುಣವನ್ನು ಕಂಡು ಹಿಡಿಯ ಬಹುದೆಂದು ತಿಳುವಳಿಕಸ್ತರಿಗೆ ಮೊದಲ ಲಕ್ಷಣ, ಕಾಲಕ್ಕೆ ಸರಿಯಾಗಿ ನಡೆಯುವುದು. ಅದು ಕೂಡ ಕೈಲಾಗದ ಸೋಮಾರಿಗಳು ಹೇಗೆ ರಾಜ್ಯವಾಳು ತಾರಂತೆ?”

ಅವರ ದೇವಿ ಮೃದುವಾದ ಮಾತುಗಳಿಂದ ನಮ್ಮನ್ನು ಬರ ಮಾಡಿಕೊಂಡು ಉಪಚರಿಸಿದಳು. ಆಕೆಯ ಮುಖದಲ್ಲಿ ಶಾಂತ ಗುಣವು ಪ್ರಕಾಶಿಸುತಿತ್ತು. ಹಾಗಿದ್ದರೂ ಏನು ಕಾರಣದಿಂದಲೋ ನನಗೆ ಆಕೆಯನ್ನೂ ಆಕೆಯ ಗಂಡನನ್ನೂ ನೋಡಿ, ಸರ್‍ಕಸ್ಸಿನಲ್ಲಿ ಹುಲಿಯ ಕತ್ತಿಗೆ ಹಗ್ಗವನ್ನು ಹಾಕಿ ಕೊಂಡು ಆಡಿಸುತ್ತಾ ಬರುವ ಸ್ತ್ರೀಯರ ಜ್ಞಾಪಕ ಬಂದಿತು.
ಚಂದ್ರಮತಿಯೂ ಸ್ವಲ್ಪ ನಾಚಿಕೆಯಿಂದಲೇ ನಮ್ಮೊಡನೆ ಸೇರಿ ಮಾತನಾಡುವುದರಲ್ಲಿ ತೊಡಗಿದಳು. ಹಿಂದೆ ನನ್ನೊಂದಿಗೆ ಹಸೆಮಣೆಯಲ್ಲಿ ಬಲ ಭಾಗದಲ್ಲಿ ಕುಳಿತು ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡಿರುವ, ನಾನು ಬರೆಯುವ ಪ್ರತಿ ಮಾತನ್ನೂ ಓದುವವಳಾಗಿರುವುವರಿಂದ ಚಂದ್ರಮತಿಯನ್ನು ಕುರಿತು ನಾನು ಏನೂ ಹೆಚ್ಚಾಗಿ ವರ್‍ಣಿಸಲಾರೆ.

ಐದು ಗಂಟೆಗೆ ಟೆನ್ನಿಸ್ ಆಡತೊಡಗಿದೆವು. ನಾವಿಬ್ಬರೂ ಒಂದು ಕಡೆ, ಹಂಸರಾಜಯ್ಯಂಗಾರರೂ ಅವರ ಇಸ್ಪೆಕ್ಟರುಗಳ ಪೈಕಿ ಒಬ್ಬರೂ ಎದುರು ಕಡೆ, ಅಯ್ಯಂಗಾರರು ಎಷ್ಟೇ ಗರಡಿ ಸಾಧನೆ ಮಾಡಿದ್ದರೂ ಐವತ್ತನಾಲ್ಕು ವಯಸ್ಸಿನ ಫಲವನ್ನು ತಪ್ಪಿಸಿಕೊಳ್ಳಲು ಅವರಿಂದ ಸಾಧ್ಯವಾಗಿರಲಿಲ್ಲ. ನಮಗೆ ಸಮನಾಗಿ ಓಡಲು ಅವರಿಗೆ ಸಾಧ್ಯವಾಗಲಿಲ್ಲ. ಆ ಕೋಪದಿಂದಲೋ ಅಥವಾ ಮತ್ತಾವ ಕಾರಣದಿಂದಲೋ ಅವರ ಮುಖವು ಹಣ್ಣಾದ ಟೊಮೆಟೋ ವಿನಂತೆ ಕೆಂಪಾಗುತ್ತ ನಡೆಯಿತು. ಆದರೂ ಬಲರಾಮನೂ ಪದ್ದತಿಯಂತೆ ಆಡಲಿಲ್ಲ. ಸುಲಭವಾಗಿ ಹೊಡೆಯಬಹುದಾಗಿದ್ದ ಚೆಂಡುಗಳನ್ನು ಅವನು ಅನೇಕ ವೇಳೆ ಹೊಡೆಯದೆಯೇ ಬಿಟ್ಟು ಬಿಟ್ಟನು. ಕೊನೆಯಲ್ಲಿ ಎರಡು ಕಡೆಯೂ ಎಣಿಕೆ ಮಾಡುವಾಗ ಸಮನಾಗಿ “ಗೇಮ”, “ವಾಂಟೇಜ್” ಆಗಿ ಇದ್ದಿತು. ಅಯ್ಯಂಗಾರ್ರ ಮುಖದ ಹತ್ತಿರಕ್ಕೆ ಆಗ ಒಂದು ದೀಪದ ಕಡ್ಡಿಯನ್ನು ಹಿಡಿದಿದ್ದರೆ ಅದು ಹತ್ತಿಕೊಂಡು ಉರಿಯುವಂತಿತ್ತು. ಜಯವು ಅವರಿಗೋ ನಮಗೊ ಎಂಬುದನ್ನು ತೀರ್‍ಮಾನಿಸುವ ಆಟವನ್ನು ಅವರು “ಸರ್‍ವ್” ಮಾಡಿದರು. ಪಾಪ ಅವರ ಸುಸ್ತು ಆ ಚೆಂಡು ಬಂದ ನಿಧಾನದಲ್ಲಿಯೇ ಗೊತ್ತಾಗುತ್ತಿದ್ದಿತು. ಆ ಚೆಂಡಿಗೆ ನಾನು ಒಂದ ಬಡಿತ ಬಿಗಿದೆ-ನಾನೇ ಹೇಳಿ ಕೊಳ್ಳ ಬಾರದು. ದ್ರೋಣಾಚಾರ್ಯರು ಬಿಟ್ಟ ಅಂಬು ಸಹ ಆ ವೇಗದಲ್ಲಿ ಹೋಗಿರಲಾರದು. ನಮ್ಮ ಎದುರಾಳಿಗಳಿಬ್ಬರೂ ಕೈ ಬೀಸಿದರೂ ಅವರಿಗೆ ಸಿಕ್ಕದೆ ಅದು ಭರ್ರೆಂದು ಅವರನ್ನು ದಾಟಿಕೊಂಡು ಹೋಗಿ ಕೋರ್ಟಿನ ಮೂಲೆಯ ಸಮೀಪದಲ್ಲಿ ಒಳಗಡೆಯೇ ಬಿದ್ದು ಹಾರಿ ಹೋಯಿತು. ಸೆಟ್ ಎಂದು ನಾನು ಕೂಗಿದೆ. ಅಷ್ಟರೊಳಗೆ ಬಲರಾಮನು “ಒಳ್ಳೆ ಗಟ್ಟಿಗನಯ್ಯ, ಈ ಕಡೆ ಆಟವನ್ನು ಔಟ್ ಆಡಿ ಅನ್ಯಾಯವಾಗಿ ಅವರಿಗೆ ಸೆಟ್ ಕೊಟ್ಟು ಬಿಟ್ಟೆ ಯಲ್ಲ”ಎಂದು ಕೂಗಿದನು.

“ಔಟೇ”ಎಂದು ಅಯ್ಯಂಗಾರೂ ನಾನೂ ಒಂದೇ ಸಲ ಚೀರಿದೆವು.

“ಅನುಮಾನವೇ ಇಲ್ಲ. ಸ್ಪಷ್ಟವಾಗಿ ಒಂದೂವರೆ ಬೆಟ್ಟು ಅಗಲ ಔಟ್, ನಾನು ನೋಡಿಕೊಂಡೇ ಇದ್ದೆ. ಚೆಂಡು ಬಿದ್ದುದು ಇಲ್ಲಿ” ಎಂದು ಹೇಳಿಕೊಂಡು ಬಲರಾಮನು ಒಂದು ಗೆರೆ ಎಳೆದು ತೋರಿಸಿದನು. ಇಷ್ಟಾದ ಮೇಲೆ ಇನ್ನು ಸಂದೇಹವೇನು ಬಂತು! ಅಯ್ಯಂಗಾರ್ಯರ ಮುಖ ಅರಳಿತು.”

“ಆಟ ಬಹಳ ಸ್ವಾರಸ್ಯವಾಗಿತ್ತು. ದಾಹಶಾಂತಿಗಾಗಿ ನಿಮ್ಮ ಕೊಠಡಿಗೆ ಲೆಮನೆಡ್ ಕಳುಹಿಸುತ್ತೇನೆ” ಎಂದು ಹೇಳಿಕೊಂಡು ಅವರು ನಗು ಮುಖದೊಂದಿಗೆ ಮನೆಯೊಳಕ್ಕೆ ಹೋದರು.

ಬಲರಾಮನು ನನ್ನ ಮುಖವನ್ನು ನೋಡದವನಂತೆ ನನ್ನ ಕೊಠಡಿಗೆ ಬಂದನು. ನಾನು ಅವನನ್ನು ಬಿಡಲಿಲ್ಲ. ಅವನ ಅಂಗಿ ಹಿಡಿದು ಎಳೆದು “ಇದು ಬಹು ಸಾಮರ್‍ಥ್ಯವೋ, ನಾನು ಜಯಿಸಿದ ಆಟವನ್ನು ಕಿತ್ತು ನಿಮ್ಮ ಮಾವನವರಿಗೆ ದಾನ ಮಾಡಿಬಿಟ್ಟೆಯೆಲ್ಲ” ಎಂದು ಅವನ ಕಿವಿಯಲ್ಲಿ ಹೇಳಿದೆ.

“ಅವನು “ಉಷ್ ಸುಮ್ಮನಿರು” ಎಂದನು. ಅಷ್ಟರಲ್ಲಿ ಒಳಗೆ ಮಾತನಾಡುತ್ತಿದ್ದ ಅಯ್ಯಂಗಾರ್ಯರ ಧ್ವನಿ ಲೌಡ್‍ಸ್ಪೀಕರ್‌ನಂತೆ ಕೇಳಿಸಿತು. “ಪರ್‍ವಾಯಿಲ್ಲ. ಪದೇ ಪದೇ ನನ್ನೊಂದಿಗೆ ಆಡುತ್ತಿದ್ದರೆ ಬೇಗ ಟೆನ್ನಿಸ್ ಛಾಂಪಿಯನ್ ಆಗಿಬಿಡುತ್ತಾರೆ. ಈಗಲೇ ಸುಮಾರಾಗಿ ಆಡುತ್ತಾರೆ” ಎಂದು. ಅಷ್ಟರಲ್ಲಿಯೇ ಯಾರೋ ಏನೋ ಹೇಳಿರಬೇಕು. ಅಯ್ಯಂಗಾರರ ಘರ್ಜನೆ ಮತ್ತೆ ಕೇಳಿಸಿತು. “ಏನು? ಅವರ ಸ್ನೇಹಿತರು ಈಗಲೇ ಛಾಂಪಿಯನ್ ರಾಗಿ ಆಡುತ್ತಾರೆಯೆ? ಅವರ ಆಟ ಯಾರಿಗೆ ಬೇಕಾಗಿದೆ? ವ್ಯಾಸಂಗ ಮಾಡ ಬೇಕಾದ ಕಾಲದಲ್ಲಿ ವ್ಯಾಸಂಗವನ್ನು ಚೆನ್ನಾಗಿ ಗಮನಿಸಿದ್ದರೆ ಟೆನ್ನಿಸನ್ನು ಇಷ್ಟು ಚೆನ್ನಾಗಿ ಆಡಲು ಸಾಧ್ಯವಾಗುತ್ತಿತ್ತೆ? ಹೇಳು?” ಅಷ್ಟರಲ್ಲಿ ಅವರ ಬಾಯನ್ನು ಯಾರೋ ಮುಚ್ಚಿದುದರಿಂದ ಮಾತು ನಿಂತು ಹೋಯಿತು.

ನಾವು ಲೆಮನೆಡ್ ಕುಡಿಯುತ್ತಾ ಇರುವಾಗ ಒಬ್ಬ ಕಾನಸ್ಟೇಬಲ್ ಬಂದು ಸಲಾಮು ಮಾಡಿ ಒಂದು ಚೀಟಿಯನ್ನು ನಮ್ಮೆಡೆಗೆ ನೀಡಿದನು. ಅದರ ತಲೆಯ ಮೇಲೆ ಹೆಚ್, ಒ. ೪೩೬ ಎ. ಎಂದು ಬರೆದಿತ್ತು. ನಾನು ಹೆಚ್. ಒ. ಎಂದರೆ ಏನೆಂದು ಕೇಳಿದೆ. ಕಾನಸ್ಟೇಬಲ್, ಹೋಂ ಆರ್ಡರ್ ಎಂದನು. ಸರ್ಕಾರದಲ್ಲಿ ಹೊರಡುವುದು ಜಿ. ಒ; (ಗವರ್‍ನಮೆಂಟ್ ಆರ್‍ಡರ್) ಮನೆಯಿಂದ ಹೊರಡುವುದು ಹೆಚ್. ಒ; ಸರಿ, ಅದಕ್ಕಿಂತ ಇದು ಸ್ವಲ್ಪ ಹೆಚ್ಚಾದುದೇ ಎಂದು ಕೊಂಡೆ. ಆ ಕಾಗದವನ್ನು ಓದಿದೆ.

ಹೆಚ್. ಓ. ೪೩೬.ಎ.
“ಆರು ಗಂಟೆಯಿಂದ ಏಳು ಗಂಟೆಯವರೆಗೆ ಅತಿಥಿಗಳ ಸ್ನಾನ.

೭ ರಿಂದ ೭-೫೫ರವರೆಗೆ ಅತಿಥಿಗಳ ಕೊಠಡಿಯಲ್ಲಿ ಗೃಹಿಣಿಯೂ, ಚಂದ್ರಮತಿಯೂ ಅತಿಥಿಗಳೊಡನೆ ಮಾತುಕಥೆಯಾಡುವರು. ಯಜಮಾನರು ಆಫೀಸ್ ಕೆಲಸಗಳನ್ನು ಗಮನಿಸುವರು.

೭-೫೫ಕ್ಕೆ ಗಂಟೆ ಶಬ್ದ ವಾಗುವುದು.

೮ ಗಂಟಿಗೆ ಭೋಜನ.”

ಜಿ. ಹಮ್. ಐ. ಎಂದು ಬರೆದಿತ್ತು. ಕಾನಸ್ಟೆಬಲ್‌ಗೆ ಕೇಳಿಸುವಂತೆ ನಾನು ಏನನ್ನಾದರೂ ಹೇಳಿಬಿಡುತ್ತೇನೋ ಎಂದು ಬಲರಾಮನು ನನ್ನ ಕಾಲನ್ನು ಬಲವಾಗಿ ಅಮುಕಿದನು. ಎಲ್ಲಾ ಸ್ನೇಹವೆಂಬ ದೇವತೆಗೆ ಕೊಡುವ ಬಲಿ ಎಂದುಕೊಂಡು ನಾನು ನೋವನ್ನೂ ಆಶ್ಚರ್‍ಯವನ್ನೂ ತಡೆದುಕೊಂಡು ಮೌನವಾಂತೆ.

ನಾವು ಹೆಚ್ಚು ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದುದರಿಂದ ಹೆಚ್. ಒ. ೪೩೬ ಎ. ನಲ್ಲಿ ಕಂಡಂತೆ ಸ್ನಾನ ಮಾಡಿ, ಟೆನ್ನಿಸ್ ಆಡಿದ ಆಯಾಸವನ್ನು ಕಳೆದುಕೊಂಡು ಉಲ್ಲಾಸವಾಗಿದ್ದೆವು. ಆ ಭವನದಲ್ಲಿ ಎಲ್ಲಾ ವಿಷಯಗಳೂ ಕೀಲು ಕೊಟ್ಟ ಗಡಿಯಾರದಂತೆ ನಡೆಯುವುದಾಗಿದ್ದವು. ಏಳು ಗಂಟೆ ಹೊಡೆಯಲು ಪ್ರಾರಂಭಿಸಿದ ಕೂಡಲೇ ಚಂದ್ರಮತಿಯೂ ಆಕೆಯ ತಾಯಿಯೂ ಬಂದರು. ನಾವು ನಾಲ್ವರೂ, ಕ್ರಿಕೆಟ್ ಮ್ಯಾಚ್, ಈಚಿನ ಚಲನ ಚಿತ್ರ ಇವುಗಳನ್ನು ಕುರಿತು ಸಂಭಾಷಿಸಿದೆವು. ಅನಂತರ “ಮಾಡಬೇಕಾದ ಕೆಲಸವಿದೆ” ಎಂದು ಚಂದ್ರಮತಿಯ ತಾಯಿ ಹೊರಟು ಹೋದರು.

ಅವರಿಬ್ಬರ ಸರಸ ಸಲ್ಲಾಪಕ್ಕೆ ಕಂಟಕನಾಗಿ ಆ ಕೊಠಡಿಯಲ್ಲಿರುವುದು ನನಗೆ ಸಂಕಟವಾಗಿತ್ತು. ಆದರೆ ಎಲ್ಲಿಗೆ ಹೋಗುವುದೆಂಬುದು ನನಗೆ ತಿಳಿಯಲಿಲ್ಲ. ನಾನು ಕೊಠಡಿಯಿಂದ ಏನಾದರೂ ಹೊರಗೆ ತಿರುಗಾಡಲು ಹೊರಟರೆ ಅಯ್ಯಂಗಾರರು ಕಣ್ಣಿಗೆ ಬಿದ್ದು “ಹೆಚ್.ಒ. ೪೩೬ ಎ. ಯಲ್ಲಿ ಬರೆದಿರುವುದಕ್ಕೆ ವಿರೋಧವಾಗಿ ಇಲ್ಲಿ ಯಾಕೆ ಅಲೆದಾಡುತ್ತಿದ್ದಿ?” ಎಂದರೆ ಏನು ಬದಲು ಹೇಳುವುದು? ಅಷ್ಟರಲ್ಲಿ ಅವರ ಮಗಳು ನನ್ನ ಸಂಕಟವನ್ನು ಹೋಗಲಾಡಿಸುವ ಉದ್ದೇಶದಿಂದ “ನಮ್ಮ ತಂದೆ ಹೇಳಿದರು. ನೀವು ಟೆನ್ನಿಸನ್ನು ಛಾಂಪಿಯನರಂತೆ ಆಡುತ್ತೀರಂತೆ” ಎಂದಳು.

“ಅ-ಹೂಂ ಅವರು ಆ ರೀತಿ ಹೇಳಿದುದು ನನ್ನ ಕಿವಿಗೂ ಸ್ವಲ್ಪ ಬಿತ್ತು.” ಎಂದೆ. “ನಮ್ಮ ತಂದೆ ಹೇಳಿದರು. ಇಷ್ಟು ಚೆನ್ನಾಗಿ ಟೆನ್ನಿಸ್ ಅಭ್ಯಾಸ ಮಾಡಿಕೊಂಡಲ್ಲಿ ವ್ಯಾಸಂಗಕ್ಕೆ ಸಹ ಕಾಲ ಸಾಲುವುದಿಲ್ಲ” ಎಂದರು.

“ಆ ಮಾತನ್ನು ಅವರು ಹೇಳಿದುದು ನನಗೆ ಚೆನ್ನಾಗಿ ಕೇಳಿಸಿತು” ಎಂದೆ.

ಚಂದ್ರಮತಿ ಮತ್ತೆ ಜೇನು ಸುರಿಯುವ ಮೃದುವಾದ ಕೊರಳಿನಲ್ಲಿ ಹೇಳಿದಳು “ನಮ್ಮ ತಂದೆ ಹೇಳುತ್ತಾರೆ. ಬೇರೆ ಯಾರಾದರೂ ಆಗಿದ್ದರೆ ವ್ಯಾಸಂಗವನ್ನೇ ಬಿಟ್ಟು ಟೆನ್ನಿಸನ್ನು ಮಾತ್ರವೇ ಆಡುತ್ತಾ ಬರಿಯ ನಿರಕ್ಷರಕುಕ್ಷಿಗಳಾಗುತ್ತಿದ್ದರು’ ಎಂದು.

ನಾನು ಎದ್ದು ನಿಂತೆ. ಆಕೆಗೆ ಸಮನಾಗಿ ತಲೆಬಾಗಿ ಹೀಗೆ ಹೇಳಿದೆ “ನಾನು ನಿರಕ್ಷರ ಕುಕ್ಷಿಯಾಗಿಯೇ ಇರಬಹುದು. ಆದರೂ ಈ ಸ್ಥಳವನ್ನು ಬಿಟ್ಟು ಬೇರೆ ಕಡೆ ಹೋಗು ಎಂದು ಯಾವ ಮಾತಿನಲ್ಲಿ ಹೇಳಿದರೂ ಅರ್ಥ ಮಾಡಿಕೊಳ್ಳುವ ಶಕ್ತಿ ನನಗೆ ಇದೆ. ನಾನು ಕಾಂಪೌಂಡ್ ಬಾಗಿಲ ಬಳಿ ನಿಂತು ನಕ್ಷತ್ರ ಶಾಸ್ತ್ರವನ್ನು ಅಭ್ಯಾಸ ಮಾಡುತ್ತೇನೆ. ೭-೫೫ಕ್ಕೆ ನನ್ನನ್ನು ನಿರೀಕ್ಷಿಸಿ “ಹೀಗೆ ಹೇಳಿ ಮತ್ತೆ ತಲೆಬಾಗಿ ಹೊರಟು ಹೋದೆ.

ಹೆಜ್. ಒ. ಅಪ್ಪಣೆಯಂತೆ ೭-೫೫ಕ್ಕೆ ಸರಿಯಾಗಿ ಮತ್ತೆ ಆ ಕೊಠಡಿಗೆ ಹೋದೆ. ನನ್ನ ಹೆಜ್ಜೆಯ ಧ್ವನಿ ಕೇಳಿದ ಕೂಡಲೇ ಅವರಿಬ್ಬರ ಮಾತುಗಳೂ ನಿಂತವು. ಮುಂದೆ ಮಾತನಾಡಲು ತೋರದೆ ಸುಮ್ಮನೆ ಕುಳಿತರು.

ಅನಂತರ ಚಂದ್ರಮತಿಯು “ತಂದೆ ಬಹಳ ಆಚಾರವಂತರು, ಅಂಗಿ ಇಟ್ಟುಕೊಂಡು ಊಟ ಮಾಡುವುದು ಅವರಿಗೆ ಒಪ್ಪಿಗೆ ಇಲ್ಲ” ಎಂದಳು.

ನಾವಿಬ್ಬರೂ ತತ್ ಕ್ಷಣ ಶರಟನ್ನು ಬಿಚ್ಚಿದೆವು. ಬಲರಾಮನ ಕತ್ತಿನಲ್ಲಿ ಜನಿವಾರ ಕಾಣಿಸಲಿಲ್ಲ. “ಎಲ್ಲಯ್ಯ ನಿನ್ನ ಜನಿವಾರ?” ಎಂದು ಕೇಳಿದೆ.

“ಆಟವಾಡಿದ ನಂತರ ಸ್ನಾನ ಮಾಡುವಾಗ ತೆಗೆದಿಟ್ಟ ಶರಟಿನ ಜತೆ ಹೋಗಿರಬೇಕು” ಎಂದ. ಸ್ನಾನಗೃಹಕ್ಕೆ ಓಡಿದೆವು. ಬರಿಯ ಆಸೆ. ಗಡಿಯಾರದಂತೆ ಎಲ್ಲಾ ಕೆಲಸಗಳೂ ನಡೆಯುವ ಆ ಮನೆಯಲ್ಲಿ ನಾವು ಬಿಚ್ಚಿ ಹಾಕಿದ್ದ ಬಟ್ಟೆಗಳನ್ನು ಕೆಲಸಗಾರ ಕೂಡಲೇ ಒಗೆಯುವುದಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದ. ಆ ವೇಳೆಗೆ ಅಯ್ಯಂಗಾರ್ರು ಬರುವ ಹೆಜ್ಜೆ ಧ್ವನಿ ಕೇಳಿಸಿತು. ಜನಿವಾರವಿಲ್ಲದ ಮೈಯ್ಯನ್ನು ಮುಚ್ಚಿಕೊಳ್ಳುವುದಕ್ಕಾಗಿ ಬಲರಾಮನು ಮತ್ತೆ ಹೊಸ ಶರಟನ್ನು ಹಾಕಿಕೊಂಡನು.

ಅಯ್ಯಂಗಾರ್‍ಯರು “ಯಾಕೆ ಶರಟು ಬಿಚ್ಚಿ; ಊಟ ಮಾಡಬಹುದಲ್ಲ. ನಡೆಯಿರಿ” ಎಂದರು.

ಏನು ಬದಲು ಹೇಳಬೇಕೆಂಬುದು ಬಲರಾಮನಿಗೆ ತಿಳಿಯಲಿಲ್ಲ. ಮನಸ್ಸಿಗೆ ತೋರಿದ ಮೊದಲನೆಯ ಸಬೂಬನ್ನೇ ಹೇಳಿಬಿಟ್ಟನು.

“ನನಗೆ ಸ್ವಲ್ಪ ಹೊಟ್ಟೆ ನೋವು, ರಾತ್ರಿ ಊಟವೇ ಬೇಡ, ಎಂದು ಯೋಚಿಸುತ್ತಿದ್ದೇನೆ” ಎಂದು ಗೊಣಗುಟ್ಟಿದನು.

“ಅಯ್ಯಂಗಾರ್ರು – “ಹೊಟ್ಟೆ ನೋವೇ” ಎಂದು ಗರ್‍ಜಿಸಿದರು. ಈ ವಯಸ್ಸಿನಲ್ಲಿ ಹೊಟ್ಟೆ ನೋವೆ? ಛೇ ಒಬ್ಬ ಹೊಟ್ಟೆ ನೋವಿನ ಹುಡುಗನೇ ನನ್ನ ಮಗಳಿಗೆ-”

ಅಷ್ಟರಲ್ಲಿ ಚಂದ್ರಮತಿ ಸಮಾಧಾನಪಡಿಸಿದಳು. “ಈ ಸಾಯಂಕಾಲ ಆಟವಾಡುವಾಗ ನೀವು ಅವರನ್ನು ಬಹಳ ಓಡಿಯಾಡಿಸಿಬಿಟ್ಟರಂತೆ. ಅದರಿಂದಲೇ ಇರಬೇಕು ಹೊಟ್ಟೆ ನೋವು. ನಿಮ್ಮೊಂದಿಗೆ ಸ್ವಲ್ಪ ಕಾಲ ಆಟ ಅಭ್ಯಾಸವಾದರೆ-”

ಅಯ್ಯಂಗಾರ್ರ ಮುಖ ಮತ್ತೆ ಶಾಂತವಾಯಿತು. ಸ್ವಲ್ಪ ಸಂತೋಷ ಉಂಟಾಯಿತೆಂದು ಸಹ ಹೇಳಬಹುದು..! – ಆ ವೇಳೆಗೆ ಅಲ್ಲಿ ಬಂದ ಅವರ ಹೆಂಡತಿ ಸಮಾಚಾರವನ್ನು ಕೇಳಿ ಖಿನ್ನರಾದರು. “ನೀವು ಆಟವಾಡಿ ಸೋತಿದ್ದೀರಿ ಎಂದು ಜಿಲೇಬಿಯನ್ನೂ ವಡೆಯನ್ನೂ ಮಾಡಿದ್ದೆ. ಸ್ವಲ್ಪ ಗಂಜಿಯನ್ನಾದರೂ ಮಾಡಿ ಕೊಡಲೇ” ಎಂದು ಪರಿತಪಿಸಿದರು.

ಅಯ್ಯಂಗಾರ್‍ಯರು “ಗಂಜಿಯೇ? ಮಾತನಾಡಕೂಡದು, ಹೊಟ್ಟೆ ನೋವಿಗೆ ಒಂದೇ ಔಷಧಿ ಪೂರ್‍ಣ ಉಪವಾಸ, ಒಂದು ಉಪವಾಸ ಮಾಡಿ ಬಿಟ್ಟರೆ ನಾಳೆ ಸಂತೋಷವಾಗಿ ಊಟ ಮಾಡಬಹುದು” ಎಂದುಕೊಂಡು ನನ್ನನ್ನು ಮಾತ್ರ ಕರೆದುಕೊಂಡು ಊಟಕ್ಕೆ ಹೋದರು.
* * *

ಆ ರಾತ್ರಿ ನಾನು ನಿದ್ರೆ ಹೋಗುವವರೆಗೆ ಬಲರಾಮನು ಹಸಿವಿನಲ್ಲಿ ನರಳಿದುದನ್ನು ಹೇಳಲು ಸಾಧ್ಯವಿಲ್ಲ. “ವಡೆ ಜಿಲೇಬಿ” ಎಂದು ಸಾವಿರ ಸಲ ಜಪಿಸುತ್ತಲೇ ಇದ್ದನು. ಹನ್ನೊಂದು ಗಂಟೆಯಾದ ನಂತರ ಆ ಜಪವನ್ನು ಲಕ್ಷ ಮಾಡದೆ ನಾನು ನಿದ್ರೆ ಹೋಗಿಬಿಟ್ಟೆ.

ಅರ್‍ಧ ರಾತ್ರಿ ಮೀರಿತ್ತು. ನನಗೋ ಗಾಢ ನಿದ್ರೆ, ಬಲರಾಮನು ನನ್ನನ್ನು ಒರಟಾಗಿ ಅಲ್ಲಾಡಿಸಿದ. ನಾನು ಬಹಳ ಕಷ್ಟ ಪಟ್ಟು ಎಚ್ಚರ ಮಾಡಿ ಕೊಂಡೆ, ನನ್ನ ಕಿವಿಗೆ ಅವನು “ವಡೆ ಜಿಲೇಬಿ” ಎಂದು ಹೇಳಿದಂತೆ ಕೇಳಿಸಿತು.

“ಇನ್ನೂ ಆ ಜಪವೇಯೋ” ಎಂದು ಬೇಸರಪಟ್ಟುಕೊಂಡೆ.

“ಇಲ್ಲಿ ಕೇಳು. ಮತ್ತೆ ನಿದ್ರೆ ಹೋಗಿಬಿಡಬೇಡ. ಹಸಿವಿನ ಬಾಧೆ ನನಗೆ ಸಹಿಸಲು ಸಾಧ್ಯವಿಲ್ಲ. ಅಡಿಗೆ ಮನೆಗೆ ಹೋಗಿ ತಿನ್ನುವ ಪದಾರ್‍ಥ ಏನಾದರೂ ಇದೆಯೇ ಎಂದು ನೋಡೋಣ” ಎಂದ.

“ಈ ಹೊತ್ತಿನಲ್ಲಿ ಅಡಿಗೆ ಮನೆಯಲ್ಲಿ ಏನಿರುತ್ತೆ? ನಡುಪಟ್ಟಿಯನ್ನು (ಬೆಲ್ಟ್) ಬಿಗಿಯಾಗಿ ಬೀರಿಕೊಂಡರೆ ಹಸಿವು ತೋರುವುದಿಲ್ಲ. ಕಣ್ಣು ಮುಚ್ಚಿ ಕೊಂಡರೆ ಒಂದೇ ಗಳಿಗೆಯಲ್ಲಿ ನಿದ್ರೆ ಬಂದುಬಿಡುವುದು” ಎಂದು ನನ್ನ ಕಣ್ಣು ಮುಚ್ಚಿಕೊಂಡು ತೋರಿಸಿದೆ.

ಬಲರಾಮನು ಕೇಳಲಿಲ್ಲ. “ಆ ವಡೆಯೂ ಜಿಲೇಬಿಯೂ…”
“ಯಾವ ವಡೆ ಜಿಲೇಬಿ”? ಎಂದೆ.

“ನನಗಾಗಿ ಮಾಡಿದ್ದು ಮಿಕ್ಕಿರಬೇಕು ತಾನೇ. ಅಲ್ಲದೆ ಇಂತಹ ದೊಡ್ಡ ಮನೆಯಲ್ಲಿ ಲೆಕ್ಕಾಚಾರವಾಗಿ ಅಡಿಗೆ ಮಾಡುವುದಿಲ್ಲ. ಏನಾದರೂ ಮಿಕ್ಕಿರಬೇಕು. ಅಡಿಗೆ ಮನೆಗೆ ನೀನು ದಾರಿ ತೋರಿಸಿದ ಹೊರತು ನಿನ್ನನ್ನು ಬಿಡುವುದಿಲ್ಲ” ಎಂದು ಬಲರಾಮನು ಮತ್ತೆ ನನ್ನನ್ನು ಕುಲುಕಾಡಿದನು.

ನಾನು ಏನು ಮಾಡಲಿ? ಅವನ ಕಾಟವನ್ನು ತಡೆಯಲಾರದೆ ನಾವು ರಾತ್ರಿ ಊಟ ಮಾಡಿದ ಸ್ಥಳಕ್ಕೆ ಕತ್ತಲೆಯಲ್ಲಿಯೇ ತಡವುತ್ತಾ ಅವನನ್ನು ಕರೆದುಕೊಂಡು ಹೋದೆ. ಅದರ ಮಗ್ಗುಲಲ್ಲಿ ಅಡಿಗೆ ಮನೆ ಇದ್ದಿರಬೇಕು. ಬಲರಾಮನಿಗೆ ಹಸಿವಿನ ದಾವಂತದಿಂದ ವಾಸನಾ ಶಕ್ತಿ ಎರಡರಷ್ಟಾಗಿ ಭಕ್ಷ್ಯಗಳನ್ನಿಟ್ಟಿದ್ದ ಅಲಮಾರುವಿನ ಬಳಿಗೆ ಅಂಬು ಎಸೆದಂತೆ ಆತ ಹೋಗಿ ನಿಂತನು. ಅವನ ಅದೃಷ್ಟ, ಅದಕ್ಕೆ ಬೀಗ ಹಾಕಿರಲಿಲ್ಲ. ಆ ನಿಶ್ಯಬ್ದದಲ್ಲಿ ಅವನ ದವಡೆಗಳು ಕೆಲಸ ಮಾಡುತ್ತಿದ್ದ ಶಬ್ದ ನನಗೆ ಕೇಳಿಸಿತು.

ಅವನು ಹಸಿವು ಅಡಗುವುದಕ್ಕೆ ಮಟ್ಟಿಗೆ ಏನನ್ನಾದರೂ ಸ್ವಲ್ಪ ತಿಂದು ಕೂಡಲೇ ಹಿಂದಿರುಗಿದ್ದರೆ ಎಲ್ಲವೂ ಸರಿಯಾಗಿ ಬಿಡುತ್ತಿತ್ತು.

ಆದರೆ ಅವನೋ? ಅಲಮಾರಿನ ಪಕ್ಕವನ್ನು ಬಿಟ್ಟು ಹಿಂತಿರುಗುವಂತೆಯೇ ತೋರಲಿಲ್ಲ. ನಿದ್ರೆಯ ಭಾರದಿಂದ ನನಗೆ ನಿಂತಿರುವುದು ಕಷ್ಟವಾದುದರಿಂದ ಗೋಡೆಯ ಮಗ್ಗುಲಲ್ಲಿದ್ದ ಒಂದು ಮಣೆ ಹಾಕಿಕೊಂಡು ಅದರ ಮೇಲೆ ಕುಳಿತುಕೊಳ್ಳೋಣವೆಂದು ಅದಕ್ಕೆ ಕೈ ನೀಡಿದೆ. ತತ್ ಕ್ಷಣ ‘ಪಟಾರ್’ ಎಂದು ಶಬ್ದ ಮಾಡುತ್ತಾ ಅದು ಕೆಳಕ್ಕೆ ಬಿತ್ತು.

“ಯಾರಾದರೂ ಬಂದುಬಿಟ್ಟಾರು ಬೇಗ ಬಾ” ಎಂದು ಬಲರಾಮನನ್ನು ಕರೆದೆ. ಆದರೆ ಅವನಿಗೆ ಆ ವೇಳೆಯಲ್ಲಿ ತನ್ನನ್ನು ಕಾಪಾಡಿಕೊಳ್ಳುವ ದೃಷ್ಟಿಯೇ ಇದ್ದಂತೆ ತೋರಲಿಲ್ಲ.

“ಇನ್ನು ನಾಲ್ವೇ ಬಾಕಿ” ಎಂದು ತಿಂಡಿ ತುಂಬಿದ ಬಾಯಿಯಿಂದ ಹೇಳಿದ.

ಇನ್ನು ಕಾದಿದ್ದರೆ ಆಪತ್ತೇ ಎಂದುಕೊಂಡು ನಾನು ಬಂದ ದಾರಿಯಲ್ಲಿ ಹಿಂದಿರುಗಲು ಪ್ರಾರಂಭಿಸಿದೆ. ಎದುರುಗಡೆ ಜನ ಬರುತ್ತಿರುವ ಸದ್ದು ಕೇಳಿಸಿದುದರಿಂದ ಒಂದು ಕದದ ಹಿಂದ ಅವಿತುಕೊಂಡೆ. ನನ್ನ ದುರದೃಷ್ಟ, ವಿದ್ಯುತ್ ದೀಪದ ಸ್ವಿಚ್ ಇದ್ದುದು ಅಲ್ಲಿಯೇ, ಬಂದವನು ಕಾವಲುಗಾರನಂತೆ ತೋರಿತು. ಅವನು ಬಾಗಿಲಿನ ಬಳಿ ನಿಂತುಕೊಂಡೇ ‘ಸ್ವಿಚ್’ ಹಾಕಲು ಕೈ ನೀಡಿದನು. ಒಂದೇ ಕ್ಷಣ ತಡೆದರೂ ಎಲ್ಲಾ ಬೆಳಕಾಗುವುದರಲ್ಲಿ ಸಂದೇಹವಿರಲಿಲ್ಲ. ಚಂದ್ರಮತಿಗೆ ಅವಳ ಮನವೊಪ್ಪಿದ ಗಂಡ ದೊರೆಯಬೇಕಾದರೆ ಅವಳ ಮನೆಯ ಕಾವಲುಗಾರನಿಗೂ ಶ್ರಮವಾಗದಿರಲು ಸಾಧ್ಯವೇ? ಕಾಲೇಜಿನಲ್ಲಿ ಪುಟ್ ಬಾಲ್ ಆಡುವಾಗ ಎದುರಾಳಿಗೆ ತೊಡರು ಕೊಟ್ಟು ಅವನನ್ನು ಕೆಡಹುವುದು ಸಹಜ. ಆ ವಿದ್ಯೆಯನ್ನು ಇಲ್ಲಿ ಉಪಯೋಗಿಸಿದೆ. ಆಳು ನೀಡಿದ ಕೈ ಸ್ವಿಚ್ಚನ್ನು ಮುಟ್ಟುವುದಕ್ಕೆ ಮುಂಚೆ ಅವನು ಸಾಷ್ಟಾಂಗವಾಗಿ ಕೆಳಗೆ ಬಿದ್ದನು.

ಅವನು ಬಿದ್ದ ಸದ್ದು, ಕೂಗಿದ ಕೂಗು ಇವುಗಳಿಂದ ಮನೆಯೆಲ್ಲ ಬೊಬ್ಬೆಯಾಗಿ ಹೋಯಿತು. ನಾನು ಹತ್ತು ಹೆಜ್ಜೆ ಸರಸರನೆ ನಡೆದು ನನ್ನ ಕೊಠಡಿಯನ್ನು ಸೇರಿಕೊಂಡೆ. ಅನಂತರ ಆಗ ತಾನೆ ಕೋಣೆಯಿಂದ ಹೊರಟವನಂತೆ “ಏನು ಏನು” ಎನ್ನುತ್ತಾ ಹೋಗಿ ಬಿದ್ದವನನ್ನು ಏಳಿಸಿ ಕೂರಿಸಿದೆ.

ದೇವರ ದಯದಿಂದ ಆ ವೇಳೆಗೆ ಜಿಲೇಬಿಯೆಲ್ಲಾ ಮುಗಿದಿದ್ದುದರಿಂದ ಬಲರಾಮನು ಮತ್ತೆ ಮನುಷ್ಯ ಜಾತಿಗೆ ಸೇರಿಕೊಂಡು ಬಹಳ ಸಾಮರ್ಥ್ಯದಿಂದ ನಡೆದುಕೊಂಡನು. ಅವನು “ಕಳ್ಳ ಕಳ್ಳ” ಎಂದು ಕೂಗುತ್ತಲೇ ಆ ಕೊಠಡಿ ಯಲ್ಲಿದ್ದ ಸ್ವಿಚ್‌ನ್ನು ಹಾಕಿದನು. ಆ ಮನೆಯನ್ನು ಆಧುನಿಕ ಬಂಗಲೆಯ ಮಾದರಿಯಲ್ಲಿ ಕಟ್ಟಿದ್ದುದರಿಂದಲೂ, ಕಮಿಷನರ ಮನೆಗೆ ಯಾವ ಕಳ್ಳನೂ ನುಗ್ಗುವುದಿಲ್ಲವೆಂದು ಅವರಿಗೆ ನಂಬಿಕೆಯಿದ್ದುದರಿಂದಲೂ ಆ ಬಂಗಲೆಯ ಕಿಟಕಿ ಗಳಿಗೆ ಕಬ್ಬಿಣದ ಸಲಾಕಿಗಳನ್ನು ಹಾಕಿರಲಿಲ್ಲ. ಬಲರಾಮನು ಬಾಗಿಲು ತೆರೆದು ಒಂದು ಕಿಟಕಿಯ ಕಡೆ ಕೈ ತೋರಿಸಿ “ನೋಡಿ ಕಳ್ಳನು ಓಡುತ್ತಾನೆ” ಎಂದು ಕಿಟಕಿಯ ಮೂಲಕ ಹೊರಕ್ಕೆ ಹಾರಿದನು. ಅಷ್ಟರಲ್ಲಿ ಅಲ್ಲಿ ಸೇರಿದ ಕೆಲವು ಕಾನಸ್ಟೇಬಲ್ಗಳು ತಮಗೂ ಮೆಡಲು ದೊರೆಯಬಹುದೆಂದು ತಾವೂ ಹಾಗೆಯೇ ಮಾಡಿದರು.

ಈ ಗದ್ದಲವೆಲ್ಲ ಅಡಗಲು ಸುಮಾರು ಕಾಲು ಗಂಟೆಯಾಯಿತು. ಚಂದ್ರಮತಿಯೂ, ಅವಳ ತಾಯಿಯೂ, ಅಯ್ಯಂಗಾರ್‍ಯರೂ, ನಾನೂ ಬಂಗಲೆಯಲ್ಲಿ ಕಾಯುತ್ತಿದ್ದೆವು. ಕಿಟಕಿಯಿಂದ ಹೊರಕ್ಕೆ ಹಾರಿದವರೆಲ್ಲಾ ತೋಟವನ್ನೆಲ್ಲಾ ಸುತ್ತಿ ಬರಿಯ ಕೈಯ್ಯಲ್ಲಿ ಹಿಂದಿರುಗಿದರು. ಬಲರಾಮನಿಗೆ ಅಂದಿನ ನಡು ರಾತ್ರಿಯಲ್ಲಿ ಯೋಗವು ಬದಲಾಯಿಸಿದ್ದಿರಬೇಕು. ವಡೆಯೂ ಜಿಲೇಬಿಯೂ ದೊರೆತಂತೆ ಅವನು ಹಾರಿದಾಗ ಅವನ ಕೈಯ್ಯಲ್ಲಿ ಒಂದು ಸಣ್ಣ ಗೀರು ಗಾಯ ಸಹ ಆಯಿತು. ಹೆದರದೆ ಕಳ್ಳನನ್ನು ಹಿಡಿದು ಕಟ್ಟಲು ಅವನು ಪ್ರಯತ್ನಿಸಿದನೆಂಬುದಕ್ಕೆ ಇದಕ್ಕಿಂತ ಬೇರೆ ರುಜುವಾತು ಏನು ಬೇಕು? ಭಾವಿ ಅಳಿಯನನ್ನು ಕಂಡು ಅಯ್ಯಂಗಾರ್‍ಯರಿಗೆ ಬಹು ಸಂತೋಷವಾಯಿತು.

ಅದರೆ ಅವರಿಗೆ ಒಂದು ಸಂದೇಹ “ಕಳ್ಳನು ಅಡಿಗೆ ಮನೆಗೆ ಯಾಕೆ ಬಂದ”ಎಂದು ತರ್‍ಕಿಸಿದರು.

ಅಷ್ಟರಲ್ಲಿ ಬಾಗಿಲು ತೆರೆದಿದ್ದ ಅಲಮಾರನ್ನು ಗಮನಿಸಿದ ಅವರ ಹೆಂಡತಿ “ಇದರಲ್ಲಿ ಹನ್ನೆರಡು ವಡೆಗಳನ್ನೂ, ಹದಿನಾರು ಜಿಲೇಬಿಗಳನ್ನೂ ಇಟ್ಟಿದ್ದೆ. ಒಂದೂ ಕಾಣುವುದಿಲ್ಲವಲ್ಲ”? ಎಂದು ಆಶ್ಚರ್ಯದಿಂದ ಕೇಳಿದಳು.

ಕೆಳಗೆ ಬಿದ್ದ ಕಾವಲುಗಾರನು ಏನನ್ನೂ ಹೇಳದೆ ತನ್ನ ಮುಖವನ್ನು ಸವರಿಕೊಳ್ಳುತ್ತಿದ್ದನು.

ಪದ್ಧತಿಯಂತೆ ಚಂದ್ರಮತಿಯೇ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟಳು. “ಬೇರೇನೂ ಇಲ್ಲ ಅಪ್ಪ, ನಿಮ್ಮ ಆಫೀಸ್ ರೂಮಿನಿಂದ ಮುಖ್ಯವಾದ ಕಾಗದಗಳನ್ನು ಕದಿಯಲು ಒಬ್ಬ ಕಳ್ಳ ಬಂದಿದ್ದಿರಬೇಕು. ಒಳಗೆ ನುಗ್ಗಲು ಅನುಕೂಲವಾಗಿರುವ ಈ ಕಿಟಕಿಯಿಂದ ಅಡಿಗೆ ಮನೆ ಹೊಕ್ಕಿದ್ದಾನೆ. ಅಲ್ಲಿ ಅಮ್ಮ ಮಾಡಿಟ್ಟಿದ್ದ ಭಕ್ಷಗಳ ವಾಸನೆ ಕಂಡು ಅವನ್ನು ತಿಂದುಬಿಟ್ಟಿದ್ದಾನೆ” ಎಂದಳು.

“ಆ ಕಳ್ಳನ ಕಾಲಿಗೆ ತಗಲಿ ಕೆಳಗೆ ಬಿದ್ದ ಮಣೆಯ ಸದ್ದು ಕೇಳಿ ನಾನು ಇಲ್ಲಿಗೆ ಓಡಿ ಬಂದೆ” ಎಂದ ಬಲರಾಮ.

“ನಾನು ಮಾತ್ರ ಸ್ವಲ್ಪ ಮುಂಚೆ ಇಲ್ಲಿಗೆ ಬಂದಿದ್ದರೆ ಆ ಭಕ್ಷ್ಯಕಳ್ಳನನ್ನು ಹೀಗೆ ತಪ್ಪಿಸಿಕೊಂಡು ಹೋಗಲು ಬಿಡುತ್ತಿದ್ದೆನೆ?” ಎಂದೆ ನಾನು.

ಹೀಗೆ ನಡೆದುದನ್ನು ನಾವು ಯುಕ್ತಿಯಿಂದ ಪತ್ತೆ ಮಾಡಿದಂತೆ ಆಯಿತು. ಕಳ್ಳನು ಸಿಕ್ಕಲಿಲ್ಲವಲ್ಲ ಎಂದು ಐಯ್ಯಂಗಾರ್‍ಯರು ಬಹಳ ಕೊರಗಿದರು. ಕಳ್ಳ ಸಿಕ್ಕಿದ್ದರೆ ಅವರು ಮತ್ತಷ್ಟು ಕೊರಗಬೇಕಾಗಿದ್ದಿತೆಂಬುದು ನನಗೂ ಬಲರಾಮನಿಗೂ ಮಾತ್ರವೇ ಗೊತ್ತು.

ಕಳ್ಳನನ್ನು ಕಂಡು ಹಿಡಿಯಲು ಅವರು ಇನ್‌ಸ್ಪೆಕ್ಟರ್‌ ಚಂದ್ರಶೇಖರನನ್ನು ತತ್‌ಕ್ಷಣ ಸ್ಪೆಷಲ್ ಡ್ಯೂಟಿಗೆ ನಿಯಮಿಸಿದರು.

ಚಂದ್ರಮತಿ ಏನನ್ನೂ ಹೇಳದೆ ಮುಗುಳು ನಗೆ ಮಾತ್ರ ನಗುತ್ತಿದ್ದಳು. “ಕಳ್ಳ ಈಗಾಗಲೇ ನನ್ನ ಕೈಗೆ ಸಿಕ್ಕಿ ಆಯಿತೆಂದು” ಆಕೆ ಭಾವಿಸಿರಬಹುದು.

ನಾವು ನಮ್ಮ ಕೊಠಡಿಯನ್ನು ಸೇರಿ ಮಲಗಲು ಸಿದ್ಧರಾಗುತ್ತಿರುವಾಗ, ಕಾನಸ್ಟೇಬಲ್ ಬಂದು ಸಲಾಮು ಮಾಡಿ ಒಂದು ಚೀಟಿಯನ್ನು ನೀಡಿದನು. ಅದನ್ನು ತೆಗೆದುಕೊಂಡು ಓದಿದೆ.

ಹೆಚ್. ಒ ೨೦. ೪೩೬ ಬಿ.
“ಬೆಳಿಗ್ಗೆ ೮ ಗಂಟೆಗೆ ಸೌ|| ಚಂದ್ರಮತಿಗೆ ನಿಶ್ಚಿತಾರ್‍ಥ; ೧೦-೩೦ಕ್ಕೆ ಔತಣ.”
ಇದರ ನಕಲು
೧) ಮನೆಯ ಯಜಮಾನಿಗೆ
೨) ಸೌ|| ಚಂದ್ರಮತಿಗೆ
೩) ಅತಿಥಿಗಳಿಗೆ
೪) ಪುರೋಹಿತ ಶಡಗೋಪಾಚಾರ್‍ಯರಿಗೆ
೫) ಇದರ ಜತೆಯ ಪಟ್ಟಿಯಲ್ಲಿರುವ ಸ್ನೇಹಿತರಿಗೆ ಜಿ. ಹಂ. ಐ.

ತನ್ನ ಮನಸ್ಸು ಸಮಾಧಾನವಾದ ನಂತರ ಬಲರಾಮನು “ಪುರೋಹಿತರಿಗೆ ತೆಗೆದುಕೊಂಡು ಹೋಗಿ ಕೊಡುವವರು ಯಾರು? ಎಂದನು.

ಕಾನಸ್ಟೇಬಲ್ “ನಾನೆಯೇ” ಎಂದನು. ಬಲರಾಮನು “ಹಾಗಾದರೆ-” ಎಂದು ಕೇಳಿಕೊಂಡು ಅಂಗಿಯ ಜೇಬಿನಿಂದ ಕಾನಸ್ಟೇಬಲ್ ಕೈಗೆ ಒಂದು ರೂಪಾಯಿಯನ್ನು ತೆಗೆದು ಕೊಟ್ಟು ಏನನ್ನೂ ಹೇಳಿ “ಮರೆಯ ಕೂಡದು. ಇದು ರಹಸ್ಯವಾಗಿರಲಿ” ಎಂದು ಮುಗಿಸಿದನು.

“ಮರೆಯುವುದಿಲ್ಲ. ಒಂದಲ್ಲ ಎರಡು ತರುವಂತೆ ಹೇಳುತ್ತೇನೆ” ಎಂದು ಕಾನಸ್ಟೇಬಲ್ ಪ್ರತ್ಯುತ್ತರವಿತ್ತನು.

“ಎರಡು ಏನು ಎಂದು ಕೇಳಿದೆ. ಎರಡು ಜನಿವಾರಗಳೇ? ಅಯ್ಯ ಕಾನಸ್ಟೇಬಲ್ ಅವಸರಪಡಬೇಡ. ಎರಡು ಜನಿವಾರ ಬೇಕಾಗಿರುವುದು ಮುಹೂರ್‍ತದ ದಿನ. ಆದರೆ ಅದಕ್ಕೆ ಇನ್ನೂ ಹೆಚ್. ಒ ಹುಟ್ಟಲಿಲ್ಲ. ನಿಶ್ಚಿತಾರ್‍ಥಕ್ಕೆ ಒಂದೇ ಜನಿವಾರ ಸಾಕು. ಅದು ನಡೆದರೆ ಮುಹೂರ್ತ, ಸೀಮಂತ ಮುಂತಾದುವೆಲ್ಲ ಒಂದಾದ ಮೇಲೆ ಒಂದು ಬಂದೇ ಬರುತ್ತವೆ” ಎಂದು ಆಶೀರ್‍ವದಿಸಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...