ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ
ದೀನ ದುರ್ಬಲರೊಡಲ ಬಿಸಿಯುಸಿರಿದೆ
ಆ ಬಿಸಿಯು ಮೈಸೋಕಿ ತೆರೆದ ಈ ಕಣ್ಮುಂದೆ
ಕಪ್ಪು ಇತಿಹಾಸ ಸಂ-ಪುಟ ತೆರೆದಿದೆ
ಭವ್ಯತೆಯ ಹಂಪೆಯಲಿ ಬೆವರು ಕಂಬನಿ ರಕ್ತ
ಹೊಳೆ ತುಂಗೆಭದ್ರೆಯಾಗಿ ಹರಿದಾಡಿದೆ
ಇದರಲ್ಲಿ ಮಿಂದೆದ್ದಾ ಪ್ರಜ್ಞಾಂತರಂಗದಲಿ
ಜಿಗಣೆಗಳ ನೂರು ನಿಜ ಕಥೆ ಜರುಗಿದೆ
ಜಂಬೂ ಸವಾರಿಯಲ್ಲಿ ಮೈಸೂರ ಬೀದಿಗಳಲಿ
ಹೊಟ್ಟೆ ಬಟ್ಟೆ ಕಟ್ಟಿದ ಹಣ ಚೆಲ್ಲಿದೆ
ಬಡತನ ಬಿಸಿ ಗಾಳಿಯಲೂ ಆನೆ ಅಂಬಾರಿಗಳು
ಜೀವಂತ ಶವಗಳ ಜೊತೆ ಸಾಗಿದೆ
ಸುವರ್ಣಾಕ್ಷರದಲಿ ಮೂಡಿದ ಕರ್ಣಾಟ ಕಥೆ
ಕತ್ತಲಲಿ ಕರಗಿದವರ ಮರೆಮಾಡಿದೆ
ಇದನರಿತು ತೆರೆದ ಒಳ ಕಂಗಳಿಗೆ ನಿಜವುಣಿಸೆ
ಕಪ್ಪು ಇತಿಹಾಸ ಸಂಪುಟ ತೆರೆದಿದೆ
*****



















