ಮುಕುಂದರಾಜ್: ‘ಮುಳ್ಳಿನ ಕಿರೀಟ’

ಮುಕುಂದರಾಜ್: ‘ಮುಳ್ಳಿನ ಕಿರೀಟ’

ಗೆಳೆಯರಾದ ಆರ್. ನಾಗೇಶ್ , ಶ್ರೀ ಮುಕುಂದರಾಜು ಮತ್ತು ಶ್ರೀ ವೆಂಕಟರಾಜು ಅವರು ಇತ್ತೀಚೆಗೆ ನನ್ನ ಮನೆಗೆ ಬಂದರು. ಮುಕುಂದರಾಜು ‘ಮುಳ್ಳಿನ ಕಿರೀಟ’ವನ್ನು ಮುಂದಿಟ್ಟು ‘ನಾನು ನಿಮ್ಮನ್ನ ಏನೂ ಕೇಳಿಲ್ಲ ಸಾರ್. ದಯವಿಟ್ಟು ಇದಕ್ಕೆ ಮುನ್ನುಡಿ ಬರ್‍ಕೊಡಿ’ ಎಂದರು. ‘ಮುಳ್ಳಿನ ಕಿರೀಟ’ಕ್ಕೆ ಮುನ್ನುಡಿ ? ಮುನ್ನುಡಿ ಬರೆಯೋದೆ ಒಂದು ಮುಳ್ಳಿನ ಕಿರೀಟ ಅಥವಾ ಮುಳ್ಳಿನ ಕಿರೀಟವೇ ಒಂದು ಮುನ್ನುಡಿ! ನಾನು ‘ಬೆನ್ನುಡಿ ಬರೆದುಕೊಡ್ತೀನಿ ಮುಕುಂದರಾಜ್’ ಎಂದೆ. ಅವರು ಅದಕ್ಕೆ ಒಪ್ಪಿದರು. ಆನಂತರ ನಾನು ಮುನ್ನುಡೀನೊ ಬೆನ್ನುಡೀನೂ ಒಟ್ನಲ್ಲಿ ಒಂದ್ ಬರೊಡ್ತೀನಿ, ನೀವು ಅದನ್ನು ಪುಸ್ತಕದಲ್ಲಿ ಹೇಗಾದರೂ ಬಳಸಿಕೊಳ್ಳಿ’ ಅಂದೆ.

ಒಪ್ಪಿಕೊಂಡದ್ದೇನೋ ಆಯಿತು. ಇದು ಎಷ್ಟಾದರೂ ‘ಮುಳ್ಳಿನ ಕಿರೀಟ’. ಸಾಮಾಜಿಕವಾಗಿ ಯಾಗಲಿ, ಧಾರ್ಮಿಕವಾಗಿಯಾಗಲಿ ಮುಳ್ಳಿನಕಿರೀಟವನ್ನು ಮಾತಾಡಿಸುವುದು ಸುಲಭವಲ್ಲ. ಸಾಂಸ್ಕೃತಿಕವಾಗಿಯಂತೂ ಮುಳ್ಳಿನ ಕಿರೀಟ ಹಾಕಲು ಹಾತೊರೆಯುವ ಅಗೋಚರ ಶಕ್ತಿಗಳನ್ನು ಗೋಚರಗೊಳಿಸುವುದೇ ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ. ಹೀಗಿರುವಾಗ ಈ ಗೆಳೆಯ ಮುಕುಂದರಾಜು ಮುಳ್ಳಿನಕಿರೀಟವನ್ನು ನನ್ನ ಮುಂದಿಟ್ಟು ಮುಗುಳ್ನಗುತ್ತ ಹೋದರಲ್ಲ ಅಂತ ಅದನ್ನೇ ದಿಟ್ಟಿಸಿದೆ. ಕಡೆಗೆ ಮುಟ್ಟಿದೆ. ಮುಳ್ಳಿನ ಕಿರೀಟ ನನ್ನನ್ನು ಚುಚ್ಚಲಿಲ್ಲ. ಘಾಸಿಗೊಳಿಸಲಿಲ್ಲ. ಧರ್ಮದ ಹೆಸರಿನಲ್ಲಿ ಘಾಸಿಗೊಳಿಸಿದ ಶಕ್ತಿಕೇಂದ್ರಗಳ ಕತೆ ಹೇಳತೊಡಗಿತು. ಇದು ಕ್ರಿಶ್ಚಿಯನ್ ಕತೆ, ಸ್ವಾತಂತ್ರದ ಕತೆ, ಸಾಂಸ್ಥಿಕ ಧರ್ಮದ ಕತೆ. ಈ ಕತೆ ನಾಟಕವಾಗಿ ರಂಗದ ಮೇಲೆ ಬಂದಾಗ ಎಂಥ ಪರಿಣಾಮ ಬೀರಬಹುದು ? ಕ್ರಿಶ್ಚಿಯನ್ ಪಾದ್ರಿಯ ಧಾರ್ಮಿಕ ಹಿಡಿತ ಮತ್ತು ಪ್ರಭುತ್ವಪರ ಮನೋಧರ್ಮವನ್ನು ಬಯಲಿಗೆಳೆಯಲಾಗಿದೆಯೆಂದು ಹಿಂದೂ ಮೂಲಭೂತವಾದಿಗಳಿಗೆ ಖುಷಿಯಾಗಬಹುದೆ? ಕ್ರಿಶ್ಚಿಯನ್ ಪಾದ್ರಿಯು ಹಿಂದೂ ಧರ್ಮದ ಕೆಡುಕುಗಳನ್ನು ತನ್ನದೇ ರೀತಿಯಲ್ಲಿ ಮುಂದಿಡುವುದನ್ನು ನೋಡಿ ಸಿಟ್ಟಾಗಬಹುದೆ? ಸ್ವಾತಂತ್ರ್ಯ ಹೋರಾಟಗಾರ ಕಾಮತ್, ಕ್ರಿಶ್ಚಿಯನ್ ಪಾದ್ರಿಯ ಪ್ರಶ್ನೆಗಳಿಗೆ ಎದುರುತ್ತರ ಕೊಡದೆ ಅಥವಾ ಕೊಡಲಾಗದೆ ಹಿಂದೂ ಧರ್ಮದ ಕೆಡುಕುಗಳನ್ನು ಒಪ್ಪಿಕೊಳ್ಳುವ ಪರಿಯಿಂದ ಕೆಲವರು ಮೈ ಪರಚಿಕೊಳ್ಳಬಹುದೆ ಪಾದ್ರಿಯ ಕ್ರಿಶ್ಚಿಯನ್ ಬಂಧುಬಾಹುಗಳನ್ನು ಲೆಕ್ಕಿಸದೆ ಕೈತಾನ್ ಎಂಬ ಕ್ರಿಶ್ಚಿಯನ್ ಹುಡುಗ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬಲಿಯಾಗುವುದು ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದಕ್ಕೆ ಒಡ್ಡಿದ ಪ್ರತಿಭಟನಾತ್ಮಕ ಬಲಿದಾನವಾಗಬಹುದೆ? ಈತ ಮತಾಂತರಗೊಂಡಿದ್ದ ಭಾರತೀಯ ಕ್ರಿಶ್ಚಿಯನ್ನಾದ್ದರಿಂದ ಯೂರೋಪಿಯನ್ ಮೂಲದ ಪಾದ್ರಿ ವಿರುದ್ಧ ತಿರುಗಿ ಬಿದ್ದದ್ದರಲ್ಲಿ ಕೆಲವರು ಜನ್ಮಮೂಲ ಸಿದ್ದಾಂತವನ್ನು ಕಂಡು ಒಳಗೊಳಗೆ ಮುದಗೊಳ್ಳಬಹುದೆ? ಹೀಗೆ ಪ್ರಶ್ನೆಗಳು ಹುಟ್ಟುತ್ತ, ಹೊರಳುತ್ತ, ಇದೊಂದು ಮುಳ್ಳಿನ ಕಿರೀಟವೇ ಆಯಿತಲ್ಲ ಎಂದು ಒಂದು ಕ್ಷಣ ಮೌನವಾದೆ. ಈ ಮೌನದಲ್ಲೊಂದು ಕ್ಲೀಷೆಯ ಉತ್ತರ ಹುಟ್ಟಿತು. ನಮ್ಮದು ಸಂಕೀರ್ಣ ಸಮಾಜ. ಆದ್ದರಿಂದ ಇಂತಹ ಪ್ರಶ್ನೆಗಳ ಸಂಕೀರ್ಣತೆ ಸಹಜ. ಇದು ಮೌನದಲ್ಲಿ ಹುಟ್ಟಿದ ಸುಲಭದ ಉತ್ತರ. ಆದರೆ ನನಗೆ ಸಮಾಧಾನವಾಗಲಿಲ್ಲ. ಯಾಕೆಂದರೆ ಮೌನವೂ ಕೆಲವರಿಗೆ ಉಪಾಯದ ಮಾರ್ಗವಾಗಿದೆ. ಉಪಾಯದ ಮಾರ್ಗಗಳಿಗೆ ಪ್ರಬುದ್ಧತೆಯ ಹಣೆಪಟ್ಟಿಯನ್ನೂ ಅಂಟಿಸಲಾಗುತ್ತಿದೆ. ಜೊತೆಗೆ ಗಾಂಭೀರದ ಗುಣಗಾನವೂ ಸೇರಿಕೊಂಡಿದೆ. ನಿಜ, ಮೌನ ಅಮೂಲ್ಯವಾದುದು. ಆದರೆ ಮೌನವು ಮುಂದೆ ಮಾತಿನ ಹದಕ್ಕಾಗಿ ಹಂಬಲಿಸುವ ಅಂತರ್‌ ಕ್ರಿಯೆಯಾಗಬೇಕು, ಯಾವ ಗೊಡವೆಯೂ ಬೇಡವೆಂಬ ಪಲಾಯನವಾಗಲಿ, ಮಾತಾಡಿ ಎದುರು ಹಾಕಿಕೊಳ್ಳುವ ಬದಲು ಮೌನದಲ್ಲಿ ಸಂತನೆನಿಸಿಕೊಳ್ಳೋಣವೆಂಬ ಪ್ರಜ್ಞಾಪೂರ್ವಕ ಉಪಾಯವಾಗಲಿ ಆಗಬಾರದು. ನಿಜವಾದ ಮೌನ ಸಹಜವಾಗಿಯೇ ಬರುತ್ತದೆ. ಮೌನವೆನ್ನುವುದು ಬುದ್ದಿಯಲ್ಲ; ಭಾವ.

ಹೀಗೆ ಚಿಂತನೆಗೀಡುಮಾಡಿದ ‘ಮುಳ್ಳಿನ ಕಿರೀಟ’ದ ಜೊತೆ ಮಾತನಾಡತೊಡಗಿದೆ. ಮಾತಿನ ಮಧ್ಯೆ ಎದ್ದುನಿಲ್ಲುತ್ತಿದ್ದ ಪ್ರಶ್ನೆಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳತೊಡಗಿದೆ. ಪ್ರಶ್ನೆಗಳಿಗೆ ಹೆದರುವ ಅಥವಾ ಗದರುವ ಅಧ್ಯಾಪಕರಂತಾಗುವ ಬದಲು ‘ಬನ್ನಿ ಮಾತಾಡೋಣ’ ಎಂದು ಕೊಠಡಿಗೆ ಕರೆದೊಯ್ದು ‘ಪ್ರಶ್ನೆಗಳು ಪ್ರೀತಿಯಾಗಲಿ’ ಎಂದೆ. ಮಠ, ಮಸೀದಿ, ಚರ್ಚುಗಳ ಭೀತಿ ಬೇಡ ಎಂದು ನಿರ್ಭೀತಿಯಿಂದ ನುಡಿದಾಗ ‘ಮುಳ್ಳಿನ ಕಿರೀಟ’ದ ಪಾದ್ರಿ, ಕಾಮತ್, ಈಶ್ವರ ಪೂಜಾರಿ, ಮನವೇಲಿ, ಕೈತಾನ್, ಅನ್ನಬಾಯಿ ಮುಂತಾದವರು ತಂತಮ್ಮ ಮಾತುಗಳ ಮೂಲಕ ಪ್ರೀತಿಯ ಪ್ರಶ್ನೆಗಳಾದರು; ಪ್ರಶ್ನೆಯಾಗುತ್ತಲೇ ಉತ್ತರವಾಗತೊಡಗಿದರು. ‘ಮುಳ್ಳಿನ ಕಿರೀಟ’ದ ಕೊನೆಯಲ್ಲಿ ಅಯ್ಯೋ ಪಾಪಿಗಳು ನನ್ನ ಮಗನನ್ನು ಬಲಿ ತೆಗೆದುಕೊಂಡರು’ ಎಂದು ಆಕ್ರಂದಿಸುವಲ್ಲಿಗೆ ಕೈತಾನನ ನೆತ್ತರು ಉತ್ತರವನ್ನು ಕೊಟ್ಟಿತ್ತು.

ಅಂದು ೧೭-೪-೨೦೦೭; ಬೆಳಗ್ಗೆ, ಪ್ರಶೋತ್ತರಗಳ ಪ್ರಕ್ರಿಯೆ ಮುಗಿಸಿ ‘ಮುಳ್ಳಿನ ಕಿರೀಟ’ಕ್ಕೆ ಮುನ್ನುಡಿ ಬರೆಯಬೇಕೆಂದುಕೂತೆ. ಕೈಗೆ ಪೆನ್ನು ಎತ್ತಿಕೊಂಡ ಕ್ಷಣದಲ್ಲೇ ಫೋನ್ ಸದ್ದು. ಫೋನ್ ಕೈಗೆತ್ತಿಕೊಂಡೆ. ಆತ್ಮೀಯ ದೇವ್‌ನಾಗೇಶ್ ಮಾತಾಡಿದರು; ‘ಸಾರ್; ಬಾಳ ನೋವಿನ ಸುದ್ದಿ, ಮಲ್ಲಿಕಾರ್ಜುನ ಮಹಾಮನೆ ಅವರ ಮಕ್ಕಳಿಬ್ಬರು ಆಕ್ಸಿಡೆಂಟಲ್ಲಿ ಸತ್ತು ಹೋದರು? – ನಾನು ದಿಗ್ಭ್ರಾಂತನಾದೆ. ಆಮೇಲೆ ಸಾವರಿಸಿಕೊಂಡು ‘ನೋಡೋದಕ್ ನಾನೂ ಬರ್‍ತೇನೆ ನಾಗೇಶ್’ ಎಂದೆ. ಮಲ್ಲಿಕಾರ್ಜುನ ಮಹಾಮನೆ ಮಹಾ ಕನಸುಗಾರ. ಕನಸುಗಳಲ್ಲೇ ಕನವರಿಸುವ ಮಹಾಮನೆಯ ಈ ಗೆಳೆಯ ಮಕ್ಕಳ ಬಗ್ಗೆಯೂ ಕನಸು ಕಟ್ಟಿದ್ದರು. ಈಗ ಆ ಮಕ್ಕಳೇ ಇಲ್ಲ! ಜೀವ ಇಲ್ಲದ ಆ ಹಸುಳೆಗಳನ್ನು ನೋಡಲು ಹೋದೆ. ಮುಗ್ಧವಾಗಿ ಮಲಗಿದ್ದ ಮಕ್ಕಳು! ಮತ್ತೆ ಮೇಲೇಳದಂತೆ ಮಲಗಿದ ಕನಸುಗಳು! ಮಲ್ಲಿಕಾರ್ಜುನ ಮಹಾಮನೆಯ ಆಕ್ರಂದನ! ‘ಮುಳ್ಳಿನ ಕಿರೀಟ’ದ ಮುಕುಂದರಾಜ್ ಒಳಗೊಂಡಂತೆ ಅನೇಕ ಆತ್ಮೀಯರಿಂದ ಸಾಂತ್ವನ! ನನ್ನಿಂದಲೂ ಮಹಾಮನೆಗೆ ಸಮಾಧಾನದ ಮಾತು. ಆದರೆ ಮಾತಿಗಿಂತ ಮೌನವೇ ಹೆಚ್ಚಾಯಿತು; ಮುಳ್ಳಿನ ಕಿರೀಟವಾಯಿತು!

ಅಲ್ಲಿಂದ ಬಂದು ಬರೆಯಲು ಸಾಧ್ಯವೆ? ಎರಡು ದಿನ ನನಗೆ ಬರೆಯಲು ಸಾಧ್ಯವೇ ಆಗಲಿಲ್ಲ. ಪ್ರಶ್ನೆಗಳೇ ಎಲ್ಲಿ ಹೋದಿರಿ? ಸಾವಿನ ಸತ್ಯದಲ್ಲಿ ಹೂತು ಹೋದಿರಾ? ಮುಗ್ಧ ಮನಸುಗಳು ಮಣ್ಣಾದದ್ದು ಕಂಡು ಕಿರೀಟವನ್ನು ಕಿತ್ತೆಸೆದಿರಾ? ಎಲ್ಲಿದ್ದೀರಿ ಬನ್ನಿ….. ಇಲ್ಲಿ … ಬರಲಿಲ್ಲ. ಮಕ್ಕಳ ಸಾವಿನ ಮುಂದೆ ಎಲ್ಲವೂ ನಿರುತ್ತರ, ಪ್ರಶ್ನೆಗಳೆಲ್ಲ ದೂರ.

ನಿಧಾನವಾಗಿ ‘ಮುಳ್ಳಿನ ಕಿರೀಟ’ದ ಕೈತಾನ್ ನೆನಪಿಗೆ ಬಂದು ಧರ್ಮದ ಕಬಂಧಬಾಹುಗಳಿಂದ ತಾನೇ ತಪ್ಪಿಸಿಕೊಂಡು ಹೋರಾಟಕ್ಕೆ ಬಂದ ಕೈತಾನ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದ ಆ ಕಲೆಕ್ಟರ್ ಸಾಹೇಬರೆ, ಅವನನ್ನು ಕೊಲ್ಲುವುದು ಬೇಡ; ಜೀವಂತ ಹಿಡಿಯಿರಿ’ ಎಂದು ಪಾದ್ರಿ ಕೂಗುತ್ತಿದ್ದರೂ ‘ಪ್ರಭುತ್ವ’ ಕೇಳಿಸಿಕೊಳ್ಳಲಿಲ್ಲ. ಕೇಳಿಸಿಕೊಳ್ಳುವುದೂ ಇಲ್ಲ. ಗುಂಡು ಹಾರಿತು; ಕೈತಾನನ ಪ್ರಾಣ ಪಕ್ಷಿಯೂ ಹಾರಿತು. ಹಾರಿ ಮರೆಯಾಯಿತೆ? ಇಲ್ಲ; ನಮ್ಮೆಲ್ಲರ ಮನಸ್ಸಿನೊಳಗೆ ಬಂದು ಕೂತುಕೊಂಡಿತು. ಸ್ವಾತಂತ್ರ್ಯದ ಹಾಡಾಗಿದ್ದ ಹಕ್ಕಿ ಕಾಡತೊಡಗಿತು. ಮಲ್ಲಿಕಾರ್ಜುನ ಮಹಾಮನೆಯ ಮಕ್ಕಳ ಸಾವನ್ನು ಕಂಡುಬಂದ ನನಗೆ ಕೈತಾನನ ಸಾವು ಅಂತ್ಯ ಎನ್ನಿಸಲಿಲ್ಲ. ಪ್ರಶ್ನೆಗಳ ಆದಿ ಎನ್ನಿಸಿತು. ಆ ಮಕ್ಕಳ ಸಾವು ಆಕಸ್ಮಿಕ; ಕೈತಾನನ ಸಾವು ಉದ್ದೇಶಪೂರ್ವಕ; ಆದರೆ ಎರಡೂ ಹದ್ದಿಲ್ಲದ ಅತಿರೇಕಕ್ಕೆ ‘ಬಲಿ’ಯಾದ ‘ದಾನಗಳು!’ ವ್ಯಕ್ತಿಯ ಬದುಕಿಗೆ ಅಂತ್ಯ ಹೇಳುವ ಸಾವು ಸಮಾಜದ ಬದುಕಿನಲ್ಲಿ ಜೀವಂತವಾಗಿ ಕಾಡುತ್ತದೆ. ‘ಮುಳ್ಳಿನ ಕಿರೀಟ’ದ ಕೈತಾನ್ ನನ್ನನ್ನು ಈಗಲೂ ಕಾಡಿಸುತ್ತಿದ್ದಾನೆ.

ಗೆಳೆಯ ಮುಕುಂದರಾಜು ಹಿರಿಯ ಸಾಹಿತಿ ಶ್ರೀ ನಾ.ಡಿಸೋಜ ಅವರ ‘ಕೈತಾನ್ ಗಾಂಧಿ’ ಎಂಬ ಕಾದಂಬರಿಯನ್ನಾಧರಿಸಿ ‘ಮುಳ್ಳಿನ ಕಿರೀಟ’ ನಾಟಕವನ್ನು ಬರೆದಿದ್ದಾರೆ. ಒಂದೆರಡು ಮುಖ್ಯ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಬದಲಾವಣೆಗಳೇ ನಾಟಕದ ಮುಖ್ಯ ಜೀವಾಳವಾಗಿರುವುದು ಒಂದು ವಿಶೇಷ. ಇಲ್ಲಿ ಬರುವ ಪಾದ್ರಿ – ಮುಕುಂದರಾಜು ರೂಪಿಸಿದ ಪಾದ್ರಿ – ಕಾಮತ್ ಮುಂತಾದವರಿಗೆ ಎಸೆಯುವ ಪ್ರಶ್ನೆಗಳು ಮೇಲ್ನೋಟಕ್ಕೆ ಸ್ವಸಮರ್ಥನೆಯ ವಾದದಂತೆ ಕಂಡರೂ ನಾಟಕಕಾರರ ಉದ್ದೇಶ ಅದಲ್ಲ ಎನ್ನಿಸುತ್ತದೆ. ಕ್ರಿಶ್ಚಿಯನ್ ಧರ್ಮವಷ್ಟೇ ಅಲ್ಲ, ಹಿಂದೂ ಧರ್ಮದ ಕೆಡುಕುಗಳನ್ನು ಬಯಲಾಗಿಸುವುದು ಮುಕುಂದರಾಜು ಅವರ ಆಶಯ. ಆದ್ದರಿಂದಲೇ ಪಾದ್ರಿಯ ವಾದಕ್ಕೆ ಪ್ರತಿವಾದ ಹೂಡುವ ಬದಲು ಕಾಮತ್ ಪಾತ್ರವು ಅದೆಲ್ಲವನ್ನೂ ಒಪ್ಪಿಕೊಳ್ಳುತ್ತದೆ. ಆದರೆ ಪ್ರಭುತ್ವ ಮತ್ತು ಧರ್ಮಗಳು ಒಂದಾಗಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದಕ್ಕೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತದೆ. ಕಾಮತರು ‘ಧರ್ಮದ ಜೊತೆ ರಾಜಕೀಯ ಬೆರೆಸುವುದನ್ನು ವಿರೋಧಿಸುತ್ತಾರೆ. ಅನೇಕ ಕ್ರೈಸ್ತರು ಗಾಂಧೀಜಿಯವರ ಜೊತೆ ಕೈ ಜೋಡಿಸಿರುವುದನ್ನು ನೆನಪಿಸುತ್ತಾರೆ. ಇಲ್ಲಿಯವರೆಗಿನ ಅನುಭವದ ಮೂಲಕ ಹೇಳುವುದಾದರೆ, ಈ ದೇವರು ಧರ್ಮಗಳು ಮನುಷ್ಯನೊಳಗಿನ ಅಂತಃಕರಣವನ್ನು ಕೊಲ್ಲುವ ಪಾಶುಪತಾಸ್ತ್ರಗಳು. ಹಿಂದೆಯೂ ಅಷ್ಟೇ, ಇಂದೂ ಅಷ್ಟೇ. ಇನ್ನು ಮುಂದೆಯೂ ಈ ಅಸ್ತ್ರಗಳು ಮನುಕುಲವನ್ನು ಕೊಲ್ಲಲಿವೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ನಾಟಕದಲ್ಲಿರುವ ಹಾಡುಗಳು ಈ ಆಶಯವನ್ನು ಮತ್ತಷ್ಟು ದೃಢೀಕರಿಸುತ್ತವೆ. ಇಂತಹ ವೈಚಾರಿಕ ವಾಗ್ವಾದದ ಮೂಲಕ ಮುಕುಂದರಾಜು ಮೂಲವಸ್ತುವಿಗೆ ಹೊಸ ಆಯಾಮ ನೀಡಿದ್ದಾರೆ. ಮೂಲದಲ್ಲಿಲ್ಲದ ಕೈತಾನನ ಸಾವನ್ನು ನಾಟಕದಲ್ಲಿ ತಂದು ಹೊಸ ತಿರುವು ನೀಡಿದ್ದಾರೆ.

ಸಾವು ಎಂದ ಕೂಡಲೆ ಮತ್ತೆ ಅದೇ ಮಕ್ಕಳು ನೆನಪಿಗೆ ಬರುತ್ತಾರೆ. ಸಾವಿನ ಸತ್ಯ ನಮ್ಮೆಲ್ಲರನ್ನೂ ಅಲುಗಾಡಿಸಿಬಿಡುತ್ತದೆ. ತನ್ನ ಮಕ್ಕಳಾದ ಕವಿತಾ ವರ್ಷ ಮತ್ತು ಸಿಂಧು ಭಾರತಿಯನ್ನು ಕಳೆದುಕೊಂಡ ಮಲ್ಲಿಕಾರ್ಜುನ್ ಅಲ್ಲಿ ಆಕ್ರಂದಿಸುತ್ತಿದ್ದರೆ, ಇಲ್ಲಿ – ‘ಮುಳ್ಳಿನ ಕಿರೀಟ’ದಲ್ಲಿ ಕೈತಾನನನ್ನು ಕಳೆದುಕೊಂಡ ಅನ್ನಾಬಾಯಿ ‘ಬ್ರಿಟಿಷರೆ, ನನ್ನ ಮಗನ ಹೆಣದ ಮೇಲೆ ಕಟ್ಟುವ ನಿಮ್ಮ ಸಾಮ್ರಾಜ್ಯ ನಿಲ್ಲುವುದಿಲ್ಲ. ನನ್ನ ಮಗನ ಸಮಾಧಿಯ ಮೇಲೆ ನಿರ್ಮಿಸುವ ನಿಮ್ಮ ಧರ್ಮವು ಉಳಿಯುವುದಿಲ್ಲ. ನಿಮ್ಮ ಧರ್ಮ ಸಾಮ್ರಾಜ್ಯದ ವಿಸ್ತರಣೆಗೆ ಇನ್ನೆಷ್ಟು ಜೀವಗಳ ಬಲಿ ಬೇಕು? ನಿಮಗೆ ನನ್ನ ಧಿಕ್ಕಾರ, ಧಿಕ್ಕಾರ’ ಎಂದು ಕೂಗುತ್ತಾಳೆ. ಇದು ಮಗನನ್ನು ಕಳೆದುಕೊಂಡ ತಾಯಿ ಕರುಳಿನ ಕೂಗು. ಸ್ವಾತಂತ್ರ್ಯಪೂರ್ವದ ವಸ್ತುವುಳ್ಳ ಈ ನಾಟಕದಲ್ಲಿ ಬ್ರಿಟಿಷರಿಗೆ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಕೇಳುವ ಪ್ರಶ್ನೆ ಮತ್ತು ಹಾಕುವ ಧಿಕ್ಕಾರಗಳು ಸ್ವಾತಂತ್ರೋತ್ತರ ಭಾರತದಲ್ಲಿ ಹಿಂದೂ ಧರ್ಮವನ್ನೂ ಒಳಗೊಂಡಂತೆ ಎಲ್ಲ ಧರ್ಮಾಂಧರಿಗೂ ಅನ್ವಯಿಸುತ್ತವೆ. ಮುಕುಂದರಾಜ್ ಮನಸ್ಸಿನಲ್ಲಿ ಈ ಆಶಯವೇ ಇದೆಯೆಂದು ನನ್ನ ತಿಳುವಳಿಕೆ. ಈ ಆಶಯವು ರಂಗದ ಮೇಲೆ ಸಾರ್ಥಕವಾಗಿ ಮೂಡಿಬರಬೇಕು. ‘ಮುಳ್ಳಿನ ಕಿರೀಟ’ವೆಂಬ ಸಂಕೇತ ಅರ್ಥಪೂರ್ಣವಾಗಬೇಕು.

ಕಡೆಗೆ ಏನು ಹೇಳಲಿ? ಸಾವಿರ ಸಾವಿರ ಕೈತಾನ್‌ಗಳು ಎಲ್ಲ ಧರ್ಮಗಳ ಕೆಲವು ಸೈತಾನರಿಂದ ಈಗಲೂ ಸಾಯುತ್ತಿದ್ದಾರೆ. ಸಾವಿನ ಮೂಲಕ ಸತ್ಯವನ್ನು ಸಾರುತ್ತಿದ್ದಾರೆ. ಈ ದೇಶದಲ್ಲಿ ಸತ್ಯವನ್ನು ಸಾರುವುದಕ್ಕೆ ಸಾವುಗಳೇ ಬೇಕೆ? ಸಾವೇ ನಿನಗೆ ಸಾವಿರ ನಮಸ್ಕಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೪
Next post ಸತ್ತವನ ಮನೆಯಲ್ಲಿ

ಸಣ್ಣ ಕತೆ

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys