ಸತ್ತವನ ಮನೆಯಲ್ಲಿ ಸಂಜೆ
ಅವರಿವರು ತಂದಿಟ್ಟ
ಬಗೆ ಬಗೆಯ ಊಟ
ಅವರಿವರು ತಂದಿಟ್ಟ
ಹಲವು ಹತ್ತು ಸಮಸ್ಯೆ.
ಸಂತಾಪಕೆ ಬಂದವರ
ಮಾತು ನಗೆ ಕೇಕೆ
ಸರಸ ಸಂಭಾಷಣೆ!
ನವ ವಿಧವೆ ಸೊಂಟದಲ್ಲಿ
ಬೀಗದ ಕೈಗೊಂಚಲು ಭದ್ರ.
ಮಗ ಮಗಳು ಸೊಸೆ ಅಳಿಯ
ಎಲ್ಲರದೂ ಒಂದೇ ಚಿಂತೆ
ಚಿತೆ ಏರಿದವನ ಅಸ್ತಿ
ಲಪಟಾಯಿಸುವ ಸಂಚು.
ಗೃಹ ಕಲಹ, ಶೀತಲ ಯುದ್ಧ
ಎಲ್ಲ ಈಗಲೇ ಆಗಬೇಕು
ಬಿಸಿ ಆರುವ ಮುನ್ನ
ತಟ್ಟಿದರೆ ತಾನೆ ಕಬ್ಬಿಣ ಮೆದು.
ಸಾಲ ಕೊಡದವರೂ ಬಂದರು ವಸೂಲಿಗೆ.
ಆಫೀಸಿನಿಂದ ಬಂತು ವಂತಿಗೆ
ಮರಣೋತ್ತರ ನಿಧಿ
ಗ್ರಾಚ್ಯುಟಿ ಜತೆಗೆ ಭವಿಷ್ಯ ನಿಧಿ.
ನಿಧಿ ಕಂಡು ಎಲ್ಲರ ಮುಖ
ಅರಳಿತು – ಮರೆಯಿತು ದುಃಖ
ಅಳುವರಾರಿಲ್ಲ ಇಲ್ಲಿ
ಆಸಯೊಂದೇ ತುಂಬಿತ್ತು,
ಎಲ್ಲರ ಕಣ್ಣುಗಳಲ್ಲಿ.
ಸತ್ತವನ ಫೋಟೋ ಬಂತು
ಹೂವಿನ ಹಾರ, ಊದುಬತ್ತಿ
ಪುರೋಹಿತರ ಮಂತ್ರ-ತಂತ್ರ
ಎಲ್ಲ ಸಾಂಗೋಪಾಂಗ
ಸತ್ತವ ಮೇಲಿಂದ ನೋಡಿ ನೊಂದ
ಯಾರಿಗೂ ಬೇಡವಾದ ನಾನು
ಈ ಸುಖಕ್ಕೆ ಸಾಯಬೇಕಿತ್ತೇನು?
*****
೩೧-೦೫-೧೯೯೩