ಮಕ್ಕಳನ್ನು ಆಡಲು ಬಿಡಿ

ಮಕ್ಕಳನ್ನು ಆಡಲು ಬಿಡಿ

ಜೀವನದ ಹಲವಾರು ಘಟ್ಟಗಳಲ್ಲಿ ಬಾಲ್ಯ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಕುವ ಕಾಲ. ಆಗ ಮೈಗೂಡಿಸಿಕೊಳ್ಳುವ ಉತ್ತಮ ಗುಣಗಳು ಅವನ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಸುಂದರ ಒಡವೆಗಳಾಗುತ್ತವೆ. ಜೀವನವಿಡೀ ಅವನ ಜೊತೆಗಿರುತ್ತವೆ.

ಬೆಳೆಯುವ ಮಕ್ಕಳಿಗೆ ನಿದ್ದೆಯಷ್ಟೇ ಅಗತ್ಯ ಆಟ; ದೈಹಿಕ ಶಕ್ತಿಯನ್ನು ವರ್ಧಿಸುವ ವ್ಯಾಯಾಮ. ಶಾಲಾ ಕಾಲೇಜುಗಳಲ್ಲಿ ಕಲಿಯುವ ವಿದ್ಯೆಯಿಂದ ಜ್ಞಾನಾಭಿವೃದ್ಧಿಯಾಗಬಹುದು. ಹಣ ಸಂಪಾದಿಸುವ ಶಕ್ತಿ ಹೆಚ್ಚಾಗಬಹುದು. ಆದರೆ ಸಫಲ ಜೀವನ ನಡೆಸಬೇಕಾದರೆ, ಪುಸ್ತಕ ವಿದ್ಯೆಗಿಂತಲೂ ಮುಖ್ಯವಾಗಿ ಕೆಲವು ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಈ ಗುಣಗಳನ್ನು ಕಲಿಯಬೇಕಾದರೆ ಜೀವನವೆನ್ನುವ ಪಾಠಶಾಲೆಯಲ್ಲಿ ಪಳಗಬೇಕು.

ಬಾಲ್ಯದಲ್ಲಿ ಮನೆ, ಶಾಲೆ ಬಿಟ್ಟರೆ ಆಟದ ಮೈದಾನಗಳೇ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬಲ್ಲ ಪ್ರಯೋಗ ಶಾಲೆಗಳು. ಅಲ್ಲಿ ಇತರ ಮಕ್ಕಳೊಡನೆ ಕಲೆತು ಆಡುವಾಗ ತಮ್ಮದಾಗಿಸಿಕೊಳ್ಳುವ ಲವಲವಿಕೆ. ಉತ್ಸಾಹ, ಸ್ನೇಹ, ಕ್ರೀಡಾಪಟುಗಳಲ್ಲಿರ ಬೇಕಾದ ತೀಕ್ಷ್ಣದೃಷ್ಟಿ, ಆತ್ಮವಿಶ್ವಾಸ, ಸೋಲುಗೆಲುವುಗಳನ್ನು ಸಮಾನವಾಗಿ ನೋಡುವ ವಿಶಾಲ ಮನೋಭಾವ, ಸ್ಥಿತಪ್ರಜ್ಞತೆ, ಸೋತ ಎದುರಾಳಿಯನ್ನು ಗೌರವದಿಂದ ನೋಡುವ ಹೃದಯ ವಂತಿಕೆ, ಚೈತನ್ಯಶೀಲ ಮನಸ್ಸು ಅವರ ವ್ಯಕ್ತಿತ್ವಕ್ಕೆ ಹೊಸ ಮೆರುಗನ್ನು ಕೊಡುವುದಲ್ಲದೆ ಜೀವನದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಸಹಾಯಕ ಗುಣಗಳಾಗುತ್ತವೆ. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವಾಗ ಮಕ್ಕಳು ಈ ಗುಣಗಳನ್ನು ತನ್ನಿಂದ ತಾನೇ ಕಲಿತುಕೊಳ್ಳುತ್ತಾರೆ.

ಇಂದಿನ ಸ್ಪರ್ಧಾಯುಗದಲ್ಲಿ ನೂರಕ್ಕೆ ತೊಂಭತ್ತು ಅಂಕಗಳನ್ನು ತೆಗೆದರೂ ಬೇಕಾದ ಕಾಲೇಜಿನಲ್ಲಿ, ಬೇಕಾದ ವಿಷಯದಲ್ಲಿ ವೃತ್ತಿಶಿಕ್ಷಣಕ್ಕೆ ಸೀಟು ಸಿಗುವುದು ಕಷ್ಟ ಎನ್ನುವ ಹೆದರಿಕೆಯಿಂದ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯುವುದೇ ಮುಖ್ಯವಲ್ಲದೆ ಆಟವಾಡಿ ಪ್ರಯೋಜನವಿಲ್ಲ ವೆನ್ನುವ ಸಂಕುಚಿತ ದೃಷ್ಟಿಯಲ್ಲಿ ಮಕ್ಕಳನ್ನು ಬೆಳೆಸಿ ಅವರನ್ನು ಪುಸ್ತಕದ ಹುಳುಗಳನ್ನಾಗಿ ಮಾಡಿ ಹೆಚ್ಚಿನ ಅಂಕಗಳನ್ನು ತೆಗೆಯಬಲ್ಲಂತಹ ಯಂತ್ರಗಳನ್ನಾಗಿ ತಯಾರು ಮಾಡುತ್ತಿದ್ದೇವೆ ಎಂದರೂ ಉತ್ಪ್ರೇಕ್ಷೆಯಲ್ಲ. ನರ್ಸರಿ ಯಿಂದಲೇ ತರಗತಿಯಲ್ಲಿ ಪ್ರಥಮನಾಗಿಯೇ ಇರಬೇಕೆನ್ನುವ ಒತ್ತಡ ಹೇರಿ, ಕೈಗೆ ಪುಸ್ತಕ ಕೊಟ್ಟು, ಆಡುವ ಸಮಯದಲ್ಲಿ ಟ್ಯೂಶನ್‌ಗೆ ಹಾಕಿ ಅವರ ಸರ್ವತೋಮುಖ ಬೆಳವಣಿಗೆಯ ಅವಕಾಶಗಳನ್ನೇ ಕಿತ್ತುಕೊಳ್ಳುತ್ತಿದ್ದೇವೆ. ಜೀವನವಿಡೀ ಒಂದಲ್ಲ ಒಂದು ಪೈಪೋಟಿಯನ್ನು ಎದುರಿಸಲೇಬೇಕಾಗಿರುವಾಗ ಬಾಲ್ಯದಲ್ಲಿಯೇ ಮಕ್ಕಳ ಮೇಲೆ ಈ ರೀತಿಯ ಸ್ಪರ್ಧಾ ಒತ್ತಡ ಹೇರಿ ಅವರ ಬಾಲ್ಯದ ಆನಂದವನ್ನು ಯಾಕೆ ಹಾಳು ಮಾಡಬೇಕೆಂಬುದೇ ತಿಳಿಯದಾಗಿದೆ.

ಬಾಲ್ಯ ಒಂದು ಸುಂದರ ಅನುಭವ, ಪುನಃ ಬೇಕೆಂದರೆ ಸಿಗಲಾರದು. ಬಾಲ್ಯದ ಆಹ್ಲಾದಕರ ನೆನಪುಗಳು ನಮ್ಮ ನೆನಪಿನ ಖಜಾನೆಯಲ್ಲಿ ಸೇರಿ ಮುಂದೆ ಮೆಲುಕು ಹಾಕುವಾಗ ಉಲ್ಲಾಸ ಉಕ್ಕಿಸಬಲ್ಲ, ಸ್ಫೂರ್ತಿ ನೀಡಬಲ್ಲ ಒಸಗೆಗಳಾಗಬೇಕಲ್ಲದೆ ಭಾರವಾದ ನೆನಪುಗಳಾಗಬಾರದು. ಇಂದಿನ ಮಕ್ಕಳಿಗೆ ಶಾಲೆ, ಪಾಠ, ಟ್ಯೂಶನ್, ಕಂಪ್ಯೂಟರ್ ಕ್ಲಾಸ್, ಅಬಾಸ್ಕಸ್ ಕ್ಲಾಸ್, ಅದು ಇದೆನ್ನುವ ಗೊಂದಲದಲ್ಲಿ ಬಾಲ್ಯಾವಸ್ಥೆಯ ಸಹಜ ಸುಖಾನುಭವಗಳಿಗೆ ಸಮಯಾಕಾಶವೇ ಇಲ್ಲದಂತಾಗಿದೆ. ಮಕ್ಕಳನ್ನು ಬರೇ ಮಾರ್ಕುಗಳನ್ನು ತೆಗೆಯುವ ಯಂತ್ರಗಳನ್ನಾಗಿ ರೂಪಿಸುವ ನಮ್ಮ ಈ ಮನೋಭಾವ ಸರಿಯೇ? ಇದರಿಂದ ಮಕ್ಕಳು ಏನನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಾವು ಯೋಚಿಸಿದ್ದೇವೆಯೇ? ಇಂದಿನ ಮಕ್ಕಳು ಬುದ್ಧಿವಂತರು, ಮೇಧಾವಿಗಳು. ಆದರೆ ಎಷ್ಟು ಮಕ್ಕಳು ಆರೋಗ್ಯವಂತರಾಗಿ ಸದೃಢರಾಗಿದ್ದಾರೆ? ‘ಓದಿ ಓದಿ ಮರುಳಾದ ಕೂಚುಭಟ್ಟ’ ಎನ್ನುವಂತೆ ಬರೇ ಪುಸ್ತಕದ ಹುಳುಗಳಾದರೆ ಮರುಳಾದ ಅವರು ಅರ್ಧ ಆಯಸ್ಸು ತಲಪುವಾಗಲೇ ಮುಪ್ಪನ್ನಪ್ಪುತ್ತಾರೆ. ಆಟವಾಡದೇ ಬರೇ ಓದಿಕೊಂಡೇ ಬೆಳೆದ ಮಕ್ಕಳ ಮೆದುಳು ಚುರುಕಾದರೂ ದೇಹ ಜಡವಾಗಿರುತ್ತದೆ. ಅವರಿಂದ ಸ್ವಲ್ಪವೂ ದೈಹಿಕ ಶ್ರಮವನ್ನು ಭರಿಸಲಾಗುವುದಿಲ್ಲ. ಮಾನವ ದೇಹವೂ ಒಂದು ಯಂತ್ರದಂತೆ, ಸರಿಯಾಗಿ ಉಪಯೋಗಿಸಿದರೆ ದೀರ್ಘಕಾಲ ಶಕ್ತಿಶಾಲಿಯಾಗಿ ಕೆಲಸ ಮಾಡಬಲ್ಲುದು. ಅಂಗಾಂಗಗಳನ್ನು ಸರಿಯಾಗಿ ಉಪಯೋಗಿಸದೆ ಬಿಟ್ಟರೆ ಕ್ರಮೇಣ ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತದೆ. ದೇಹದ ಎಲ್ಲಾ ಅಂಗಾಂಗಗಳಿಗೂ ನಿಯಮಿತ ವ್ಯಾಯಮದ ಅಗತ್ಯವಿದೆ. ವ್ಯಾಯಾಮದಿಂದ ದೇಹ ಆರೋಗ್ಯವಂತವಾಗಿರುತ್ತದೆ ಮಾತ್ರವಲ್ಲದೆ ಮನಸ್ಸು ಚೈತನ್ಯಶೀಲವಾಗಿ ಕೆಲಸ ಮಾಡಲು ಶಕ್ತವಾಗುತ್ತದೆ. ಮೇಧಾವಿತನದ ಪ್ರದರ್ಶನದ ಜೊತೆಗೆ ಪರಿಸರ ಪರಿಸ್ಥಿತಿಗಳಿಗೆ ಸಮರ್ಪಕವಾಗಿ ಸ್ಪಂದಿಸುವುದು ಸಾಧ್ಯವಾಗುತ್ತದೆ. ಆರೋಗ್ಯ ಭಾಗ್ಯವಿದ್ದರೆ ಮಾತ್ರ ವಿದ್ಯಾಸಂಪತ್ತನ್ನು ಸಮಂಜಸವಾಗಿ ಉಪಯೋಗಿಸುವುದು ಸಾಧ್ಯ.

ಓದುವುದನ್ನು ಬಿಡಬೇಕೆನ್ನುವ ವಾದ ಇದಲ್ಲ. ಓದಬೇಕು, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೂ ಬೇಕು. ಜೊತೆಗೆ ಮಕ್ಕಳಿಗೆ ಆಟವೂ ಬೇಕು. ಹೊರೆಹೊರೆ ಪುಸ್ತಕಗಳ ಭಾರ ಹೊತ್ತು ಶಾಲೆಗೆ ಸಾಗುವ ಮಕ್ಕಳ ಬಾಗಿಹೋದ ಬೆನ್ನೆಲುಬನ್ನು, ಸೆಟೆದುಕೊಂಡ ಸ್ನಾಯುಗಳನ್ನು ಸಡಿಲಗೊಳಿಸುವ, ಇಡೀ ದಿನ ಪಾಠ ಕೇಳಿ ಸುಸ್ತಾದ ಮನಸನ್ನು ಹಗುರಗೊಳಿಸುವ ಶಕ್ತಿ ಆಟಕ್ಕಿದೆ. ಮಕ್ಕಳು ತಮ್ಮ ಜೊತೆಯವರೊಡನೆ ಸೇರಿ ಕೇಕೆ ಹಾಕಿ, ಹಾರಿ ಕುಣಿದು ಕುಪ್ಪಳಿಸಿ ಆಡುವಾಗ ಅವರ ದೇಹದ ಪ್ರತೀ ಭಾಗಗಳಿಗೂ ಅಗತ್ಯವಾದ ವ್ಯಾಯಾಮ ದೊರೆತು ಮನಸ್ಸು ಉಲ್ಲಾಸಭರಿತವಾಗುತ್ತದೆ ಎನ್ನುವುದನ್ನು ಮರೆಯಲಾಗದು.

ಹಿಂದೆ ಮನೆಯಲ್ಲಿ ಎಂಟು-ಹತ್ತು ಮಕ್ಕಳಿದ್ದ ಕಾಲದಲ್ಲಿ ಆಟವಾಡಲು ಮಕ್ಕಳು ಹೊರಗೆ ಹೋಗಬೇಕಾಗಿರಲಿಲ್ಲ. ಇಂದಿನದು ಮಿತ ಸಂಸಾರ ಸೀಮಿತ ಜಾಗ, ಆಟವಾಡಬೇಕಾದರೆ ಮಕ್ಕಳು ಮನೆಯಿಂದ ಹೊರಗೆ ಹೋಗಿ ಬೇರೆ ಮಕ್ಕಳೊಡನೆ ಕಲೆತು ಆಡಬೇಕು. ಅದು ಇಷ್ಟವಿಲ್ಲವಾದರೆ ಯಾವುದಾದರೂ ಒಂದು ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಆರಿಸಿಕೊಂಡು ಅದರಲ್ಲಿ ಸತತ ತರಬೇತಿ ಪಡೆಯುವ ಅವಕಾಶ ಕಲ್ಪಿಸಿಕೊಡಬೇಕು. ಈ ರೀತಿ ತರಬೇತಿ ಪಡೆಯುವಾಗ ಮಕ್ಕಳ ಜೀವನದಲ್ಲಿ ಸಹಜವಾಗಿಯೇ ಶಿಸ್ತು, ಸಂಯಮ, ಏಕಾಗ್ರಚಿತ್ತ, ಸ್ಥಿರತೆ, ಆತ್ಮವಿಶ್ವಾಸ ಬೆಳೆಯುತ್ತದೆ. ಯಾವುದಾದರೂ ಒಂದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಮಕ್ಕಳು ಬೆಳಗ್ಗೆ, ಸಂಜೆ ಅದಕ್ಕಾಗಿ ತರಬೇತಿ ಪಡೆಯುವ ಅಗತ್ಯ ಇರುವುದರಿಂದ ಅಡ್ಡ ದಾರಿ ಹಿಡಿಯುವ ಪ್ರಮೇಯ ಕಡಿಮೆ. ಅಲ್ಲದೇ ಸಿಗುವ ಅಲ್ಪಸ್ವಲ್ಪ ಸಮಯದಲ್ಲಿ ಓದುವ ಅಭ್ಯಾಸ ಬೆಳೆಸಿ ಕೊಳ್ಳುವುದರಿಂದ ಅವರು ಸಮಯ ಹಾಳು ಮಾಡುವುದಿಲ್ಲ. ಅವರ ಗ್ರಹಣಶಕ್ತಿಯೂ ತೀವ್ರವಾಗಿರುತ್ತದೆ. ಉತ್ತಮ ಕ್ರೀಡಾಪಟುಗಳು ಉತ್ತಮ ವಿದ್ಯಾರ್ಥಿಗಳೂ ಆಗಿರುತ್ತಾರೆ. ಇದನ್ನು ಸಾಧಿಸಿ ತೋರಿಸಿರುವ ಹಲವಾರು ಮಕ್ಕಳು ನಮ್ಮ ಸುತ್ತಲೂ ಇದ್ದಾರೆ.

ಆಗಾಗ ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ತಮ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲಾಗದಿರಬಹುದು, ಆದರೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಸವಲತ್ತುಗಳನ್ನು ಒದಗಿಸಿಕೊಟ್ಟು ಪ್ರೋತ್ಸಾಹ ನೀಡುತ್ತಿವೆ. ರಾಜ್ಯ ಮಟ್ಟದ, ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಗಳಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಿಂದ ಸ್ಕಾಲರ್‌ಶಿಪ್ ಕೊಡಲಾಗುವುದಲ್ಲದೇ, ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ಕ್ರೀಡಾಪಟುಗಳಿಗೆಂದೇ ಪ್ರತ್ಯೇಕವಾಗಿರಿಸಿದ ಸೀಟುಗಳಿವೆ. ಹಾಗೇ ಕೆಲವು ದೊಡ್ಡ ಕಂಪೆನಿಗಳು, ಸರಕಾರಿ ಉದ್ದಿಮೆಗಳು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಕೆಲಸಗಳನ್ನಿತ್ತು ಅವರು ತಮ್ಮ ಕ್ರೀಡಾ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶಗಳನ್ನು ಕಲ್ಪಿಸಿಕೊಟ್ಟು ಪ್ರೋತ್ಸಾಹಿಸುತ್ತಿವೆ.

ಉತ್ತಮ ಕ್ರೀಡಾಪಟುಗಳಾಗುವ ಯೋಗ್ಯತೆ ಹಾಗೂ ಯೋಗ ಎಲ್ಲರಿಗೂ ಇರುವುದಿಲ್ಲ. ಚಿಕ್ಕಂದಿನಲ್ಲೇ ಅವರಲ್ಲಿರುವ ಯೋಗ್ಯತೆಯನ್ನು ಗುರುತಿಸಿ ಅವರನ್ನು ತರಬೇತಿ ಮಾಡಿದರೆ ಹೆತ್ತವರಿಗೆ ಭವಿಷ್ಯದಲ್ಲಿ ಲಾಭವೇ. ಯೋಗ್ಯತೆ ಇರುವವರನ್ನು ಗುರುತಿಸಿ ಆರಿಸುವ ಹುಡುಕಾಟ ಸದಾ ನಡೆದಿರುತ್ತದೆ. ಹಾಗೆ ಗುರುತಿಸಿದ ಮಕ್ಕಳನ್ನು ಆಡಲು ಬಿಡಬೇಕು. ಅವಕಾಶಗಳಿಂದ ಯೋಗ್ಯರು ವಂಚಿತರಾಗಬಾರದು.

ಬಾಲ್ಯದಿಂದಲೂ ಆಟವಾಡಿ, ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಂಡು ಬೆಳೆಯುವ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದಲೇ ಇಂದು ವ್ಯಾಯಾಮ, ಯೋಗಾಭ್ಯಾಸ ಕಲಿಸಲು ಪ್ರತ್ಯೇಕವಾದ ಕೇಂದ್ರಗಳು ಅಲ್ಲಲ್ಲಿ ಹುಟ್ಟಿಕೊಂಡಿರುವುದು. ಅದೊಂದು ದೊಡ್ಡ ಬಿಸಿನೆಸ್‌ನಂತೆ ಬೆಳೆದಿರುವುದು. ಚಿಕ್ಕಂದಿನಲ್ಲಿ ದೈಹಿಕ ವ್ಯಾಯಾಮದ ಅಗತ್ಯ ಕಂಡುಕೊಳ್ಳದ ಮಕ್ಕಳು ಬೆಳೆಯುತ್ತ ತಮ್ಮ ಆರೋಗ್ಯದ ಸಂರಕ್ಷಣೆಗೆ ವ್ಯಾಯಾಮದ ಅಗತ್ಯ ಕಂಡುಕೊಳ್ಳುವಾಗ ಆರೋಗ್ಯವನ್ನು ಕಳೆದು ಕೊಂಡಾಗಿರುತ್ತದೆ. ವಿದ್ಯೆ ಕಲಿಯುವಂತೆಯೇ ವ್ಯಾಯಾಮವನ್ನೂ ಒಂದು ದಿನಚರಿಯಂತೆ ಮಾಡಿಕೊಂಡು ಬೆಳೆಯುವ ಮಕ್ಕಳು ಮಾನಸಿಕವಾಗಿಯೂ ದೈಹಿಕವಾಗಿಯೂ ಸುದೃಢರಾಗಿ ಸಮಾಧಾನಚಿತ್ತರಾಗಿ ಬೆಳೆದು ನಿಲ್ಲುತ್ತಾರಲ್ಲದೇ ಯಾವುದೇ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸದಿಂದ ಜೀವನವನ್ನೆದುರಿಸಲು ಸನ್ನದ್ಧರಾಗಿರುತ್ತಾರೆ.

ಬಾಳ ಕೊನೆಯ ಅಂಚಿನಲ್ಲಿ ನಿಂತು ಹಿನ್ನೋಟ ಬೀರುವಾಗ ಬಾಳ ಹೊಸ್ತಿಲಲ್ಲಿ ಅಂಬೆಗಾಲಿಕ್ಕಿ ಪದಾರ್ಪಣೆ ಮಾಡಿದಾಗಿನಿಂದ ಕಂಡು ಕೊಂಡ ಸತ್ಯಗಳ, ಅರಿತುಕೊಂಡ ಮೌಲ್ಯಗಳ, ಅರಗಿಸಿಕೊಂಡ ಗುಣಗಳ, ಅನುಭವಿಸಿದ ಸುಖಾನುಭವಗಳ ನೆನಪುಗಳು ಕೊನೆಯ ದಿನಗಳಿಗೆ ಒತ್ತುಕೊಟ್ಟು ತೃಪ್ತ ವೃದ್ಧಾಪ್ಯ ಜೀವನವನ್ನು ನಡೆಸಲು ಸಹಕಾರಿಯಾಗುವುದಲ್ಲದೆ ಪುಸ್ತಕಗಳಲ್ಲಿ ಮುಳುಗಿ ಪಡೆದುಕೊಂಡ ಸಾಲುಸಾಲು ಡಿಗ್ರಿಗಳಲ್ಲ. ಸಂಪಾದಿಸಿಟ್ಟ ಐಶ್ವರ್ಯವಲ್ಲ, ಹೊತ್ತುಕೊಂಡು ಬಂದ ಪ್ರಶಸ್ತಿ ಬಹುಮಾನಗಳಲ್ಲ. ಅರ್ಥಪೂರ್ಣ ಜೀವನವನ್ನು ಜೀವಿಸಲು ಶಕ್ತವಾಗುವಂತಹ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುವಂತಹ ಗುಣಗಳನ್ನು ಮೈಗೂಡಿಸಿ ಕೊಳ್ಳಲು ಶಕ್ತವಾಗುವಂತಹ ಆಟಪಾಠ ಎರಡನ್ನೂ ಒಳಗೊಂಡ ಸುಂದರ ಬಾಲ್ಯವನ್ನು ನಮ್ಮ ಮಕ್ಕಳಿಗೆ ಕೊಡಬೇಕಲ್ಲದೆ ಭಾವನಾರಹಿತ ಮಾನವ ರೋಬೋಟ್‌ಗಳನ್ನು ರೂಪಿಸಲು ಪುಸ್ತಕ ಹುಳುಗಳನ್ನಾಗಿ ಮಾಡುವ ಶಾಲಾ ಜೀವನವನ್ನಲ್ಲ. ಈ ದಿಸೆಯಲ್ಲಿ ಚಿಂತನೆ ತೀವ್ರವಾಗಬೇಕಾಗಿದೆ.

ಇದಕ್ಕಾಗಿಯೇ ಮಕ್ಕಳನ್ನು ಮುಕ್ತವಾಗಿ ಆಡಲು ಬಿಡಿ. ಅವರೇ ಆಟ-ಪಾಠ ಎರಡನ್ನೂ ಸರಿದೂಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಪಕ್ವವಾಗಿಸಿ ಕೊಂಡು ಇಂದಿನ ಹೆದರಿಕೆ ಹುಟ್ಟಿಸುವಂತಹ ಸಾಮಾಜಿಕ, ರಾಜಕೀಯ ಪರಿಸರದಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆಯಿಡಲು ಸಮರ್ಥರಾಗುತ್ತಾರೆ.
*****
(ಚಿಂತನ -ಆಕಾಶವಾಣಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿ ಮರಿ ಸೊಟ್ಟ
Next post ಗುಡಿಸಲ ಗೋರಿಯಿಂದ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys