ನಮ್ಮ ನಾಯಿ ಹೆಸರು ನಿಮಗೆ ಗೊತ್ತುಂಟ?
ವಾಲಿಕೊಂಡು ನಡೆಯುತಿದೆ ಅದಕೇ ಇಟ್ಟೆ ಸೊಟ್ಟ
ಹಾಲು ಬ್ರೆಡ್ಡು ನಿತ್ಯ ಕೊಡುವೆ ಅದಕೆ ಹೊಟ್ಟೆ ತುಂಬ
ಚಂದ್ರನ ಹಾಗೆ ಬೆಳೆಯುತ್ತಿದೆ ಅದಕೇ ಭಾರಿ ಜಂಭ
ನಾನು ಮನೆಗೆ ಬಂದೆನೆಂದರೆ ಕುಣಿ ಕುಣಿದಾಡುತ್ತೆ
ಅಮ್ಮ ಕೊಡುವ ತಿಂಡಿ ಸವಿಯಲು ಜೊಲ್ಲು ಸುರಿಸುತ್ತೆ
ಸರಪಳಿ ಬಿಚ್ಚಲು ಹತ್ತಿರ ಬರುವುದು ರಾಗ ಹಾಡುತ್ತ
ಹಿಡಿ ಹಿಡಿದೆತ್ತಲು ಪ್ರೀತಿಯಿಂದಲಿ ಮೈ-ಮುಖ ನೆಕ್ಕುತ್ತೆ
ಪ್ರತಿ ದಿನ ಬಿಸಿ ಬಿಸಿ ನೀರಲಿ ನಾನು ಮಾಡಿಸುವೆದರ ಸ್ನಾನ
ಶುಭ್ರವಾಗಿ ಮೈ ಹಗುರಾಗಿ ನಿದ್ದೆ ಹೊಡೆವುದು ಪೂರ್ಣದಿನ
ಆಹಾ! ಮುದ್ದಿನ ಮರಿಯಿದು ಎನುವರು ನೋಡಿದಾ ಜನರೆಲ್ಲ
ಫೀಲ್ಡಲಿ ಜಾಗಿಂಗ್ ಮಾಡುತ ಉಲ್ಲಾಸ ಕೊಡುವದು ನಮಗೆಲ್ಲ
ನನ್ನನು ಇತರರು ಮುಟ್ಟಲು ಬಂದರೆ ಬರುವುದು ಸಿಟ್ಟು ಉಕ್ಕಿ
ಕೆಂಪು ಕಂಗಳಲಿ ಗಂಟಿನ ಮುಖದಲಿ ಎರಗಿ ತೋರುವುದು ಭಕ್ತಿ
ತಿನ್ನುವ ಅನ್ನಕೆ ಉಪಕಾರ ತೋರುವ ಮೂಕ ಜೀವಿಯೇ ಶ್ರೇಷ್ಠ
ಅಪಕಾರ ಬಯಸುವ ನಾವೇ ಅಲ್ಲವೇ ಅವುಗಳಿಗಿಂತ ನಿಕೃಷ್ಟ.
*****