ಹೂವಿನ ಸುಗ್ಗಿ

ಹೂವಿನ ಸುಗ್ಗಿ

ನೃತ್ಯರೂಪಕ

ಪಾತ್ರಗಳು

ಸಂಪಿಗೆ
ಮಲ್ಲಿಗೆ
ಗುಲಾಬಿ
ಸೇವಂತಿಗೆ
ಇರುವಂತಿಗೆ
ತುಂಬೆ
ಶಿವ
ಮೇಳ

ಬೆಳಗಾಗುತ್ತಿರುವ ದೃಶ್ಯ

ಹಾಡು :
ಕೂಗುತಿದೆ ಕೋಳಿ
ಮೂಡಲಲ್ಲಿ ಹೋಳಿ
ಜಗ್ಗಿ ಜಗ ಜಗ್ಗಿ
ಹೂವಿನ ಸುಗ್ಗಿ

ಬಣ್ಣ ಬಣ್ಣದ ಬೆಡಗು
ಹೊಸ ದಿನದ ಸಡಗರವು
ಸುಂದರವು ಈ ದಿನವು
ಸೃಷ್ಟಿಯ ಸೊಬಗಿನ ದಿನವು
ಭೂಸಖಿಗೆ ಬೆರಗಿನಾ ಹೊಸದಿನವೂ
ಜಗ್ಗಿ ಜಗ ಜಗ್ಗಿ
ಹೂವಿನ ಸುಗ್ಗಿ

ಹೂವುಗಳು:
ಒಂದೊಂದಾಗಿ ಕುಣಿಯುತ್ತ ಪ್ರವೇಶಿಸುವುವು
ಜಗ್ಗಿ ಜಗ ಜಗ್ಗಿ
ಹೂವಿನ ಸುಗ್ಗಿ
ಬಣ್ಣದ ಹಬ್ಬಕ್ಕೆ
ಜಗವೆಲ್ಲಾ ಹಿಗ್ಗಿ
ತೋಟದ ತುಂಬೆಲ್ಲ ಗಿಡ ಮರ ಬಳ್ಳಿ
ಅರಳಿದ ಹೂವಿನ ರಂಗಿನ ರಾಶಿ
ಪರಿಮಳ ತುಂಬಿದ ತಂಗಾಳಿ ಬೀಸಿ
ಜಗ್ಗಿ ಜಗ ಜಗ್ಗಿ
ಹೂವಿನ ಸುಗ್ಗಿ
ಜಗವೆಲ್ಲಾ ಹಿಗ್ಗಿ

ಹೂವುಗಳು ಒಂದಡೆ ಸಾಲಾಗಿ ನಿಲ್ಲುವವು
ಒಂದೊಂದಾಗಿ ಮುಂದೆ ಬಂದು ನರ್ತಿಸುತ್ತಾ
ಪರಿಚಯಿಸಿಕೊಳ್ಳುವವು

ಸಂಪಿಗೆ :
ನಾನು ಸಂಪಿಗೆ
ಸಿರಿ ಸಂಪೀಗೆ
ನಲ್ಲೆ ಹೆರಳಿಗೆ
ಒನಪಿನ ಇಂಪಿಗೆ
ಬೇಕು ಸಂಪೀಗೆ

ಮಲ್ಲಿಗೆ :
ನನ್ನ ಮಲ್ಲಿಗೆ
ದಂಡೆ ಹೆರಳಿಗೆ
ಕಂಪು ಕೊರಳಿಗೆ
ಇಂಪು ಮುರಳಿಗೆ
ನಾನು ಮಲ್ಲಿಗೇ

ಗುಲಾಬಿ :
ಗುಲಾಬಿ ನಾನು
ಬಣ್ಣದ ಎಸಳಿನ
ಕಣ್ಣಿಗೆ ಹಬ್ಬ
ಜಂಬದ ಚಿಗುರಿ
ಮಡದಿ ಮುಡಿ ಏರುವ
ಘಮಘಮ ಮಲ್ಲಿಗೆ ನಾನು

ಸೇವಂತಿಗೆ :
ಸೇವಂತಿಗೆ ನಾನು
ಶುಭವಂತಿಗೆ
ಚಿನ್ನದ ಎಸಳಿನ ಸಿರಿವಂತಿಗೆ
ಊರೊಳಗೆಲ್ಲಾ ಮೆರೆವಂತಿಗೆ
ನಾನು ಸೇವಂತಿಗೆ

ಇರುವಂತಿಗೆ:
ಇರುವಂತಿಗೆ
ನಾನು ಇರುವಂತಿಗೆ
ಕಂಪಿನ ಮಾಲೆಯು
ಕೊರಳಿಗೆ ಧೀಮಂತಿಗೆ
ವಿರಳವಾದರು ನಾನು
ಧೀಮಂತ ಇರುವಂತಿಗೆ

ತುಂಬೆ :
ನಿಧಾನವಾಗಿ ಪ್ರವೇಶಿಸಿ ಒಂದೆಡೆ ನಿಂತು
ನಾನು ತುಂಬೇ ಹೂವು
ಚಿಕ್ಕ ಬೊಂಬೇ ಹೂವು
ಜೇನ ಜೆಂಬೆ ಹೂವು
ಪೂಜೆಗೆ ಶ್ರೇಷ್ಠ ಹೂವು
ಭಕ್ತರ ಇಷ್ಟವು ನಾನು
ತುಂಬೇ ಹೂವು

ಹೂವುಗಳು
ಒಟ್ಟಿಗೆ : (ಕಲ ಕಲ ನಗುತ್ತಾ)
ಓ ತುಂಬೆ ನೀನಿಲ್ಲಿ
ಯಾಕಿಲ್ಲಿ ಬಂದೇ?
ಜಗದಲ್ಲಿ ಯಾರಿಲ್ಲಾ
ನಿನ್ನಷ್ಟು ಕುಳ್ಳಿ
ಕುಳ್ಳರಲ್ಲಿ ಕುಳ್ಳಿ
ಕಣ್ಣಿಗೂ ಬೀಳದ ಮಳ್ಳೀ
ಜಗದಲ್ಲೂ ಯಾರಿಲ್ಲಾ
ನಿನ್ನಷ್ಟು ಕುಳ್ಳೀ

ಬೆಳೆವರು ಯಾರಿಲ್ಲಾ
ಮಾರುವರು ಮೊದಲಿಲ್ಲಾ
ಜಗದಲ್ಲೇ ಕುಳ್ಳಿ
ಕೇಳವ್ವ ಕುಳ್ಳಿ
ನಮ್ಮ ಹಿರಿಮೇಯಾ
ಜಗದ ಗರಿಮೇಯಾ

ಮತ್ತೆ ಸಾಲಾಗಿ ಒಂದೆಡೆ ನಿಲ್ಲುವವು: ಒಂದೊಂದಾಗಿ ಮುಂದೆಬಂದು ಹಾಡುತ್ತಾ ನರ್ತಿಸುವುವು:

ಸಂಪಿಗೆ :
ಚಿನ್ನದ ಬಣ್ಣದ ಸಂಪಿಗೆ ನಾನು
ನೀಳ ಎಸಳಿನ ಸಂಪಿಗೆ ನಾನು
ನನ್ನ ಎಸಳಿನಂತಿದ್ದರೆ
ಮಾನಿನಿ ಮೂಗು
ಅಂದವೋ ಅಂದ
ಚಂದವೋ ಚಂದ

ಘಮ ಘಮ ಪರಿಮಳ ನಾನು
ಮಡದಿಯ ಮುಡಿಯಲ್ಲಿ
ದೇವರ ಅಡಿಯಲ್ಲಿ
ಹೊಳೆಯುವ ಹಳದಿಯ ಸಂಪಿಗೆ
ನಾನು ಕೆಂಡದ ಹಳದಿಯ ಸಂಪಿಗೆ
ಚೀನಿ ಹಳದಿಯ
ಚಿಕ್ಕಾ ಎಸಳಿನ
ಸಂಪಿಗೆ ನಾನು ಸಂಪಿಗೆ

ಸಿಹಿ ಸಿಹಿ ಹೆಸರಿನ
ಚಂಪಾಕಲಿ
ತಿನ್ನುವರೆಲ್ಲಾ ನಲಿ ನಲೀ
ಸಂಪಿಗೆ ನಾನು ಚಂಪಾ
ಮೋಹದ ಹೆಸರಿನ ಇಂಪಾ

ಮಲ್ಲಿಗೆ:
ಮಿನುಗುವ ಚಿಕ್ಕೆ
ಚಲುವಿನ ಚಿಕ್ಕೆ
ಕೇರಿ ಕೇರಿಯಲಿ
ಸಂಜೆ ಮುಂಜಾನೆ
ಪರಿಮಳ ಬೀರುವ
ಋತು ವಸಂತನ
ರಾಣಿ ಮಲ್ಲಿಗೆ ನಾನು
ಪಾರ್ವತಿ ಮುಡಿಮಾಲೆ
ಲಕ್ಷ್ಮಿಯ ಜಡೆ ಸಾಲೆ
ಜಗ ಜಗ ಮಲ್ಲಿಗೆ
ಕಂಡ ಕೂಡಲೇ
ಕೊಳ್ಳುವ ಮಲ್ಲಿಗೆ
ಜಗ ಮಲ್ಲಿಗೆ

ಮಡದಿಯ ಹೆರಳಲ್ಲಿ
ಮಾಲೆ ಮಲ್ಲಿಗೆ ಕಂಡು
ಹಿಗ್ಗದ ಗಂಡರು ಯಾರುಂಟು?
ಹೆರಳನು ಜಗ್ಗಿ
ಕಿಲ ಕಿಲ ನಗದವರಾರುಂಟು?

ನನ್ನಂಥ ನಗುವಿರೆ
ನನ್ನಂಥ ಮನಸಿರೆ
ಜಗವನ್ನೇ ಜೈಸುವರೆಲ್ಲಾ

ಮೈಸೂರು ಮಂಗಳೂರು
ಆಂಬೂರು ಮಲ್ಲಿಗೆ
ಬೆಳೆವ ಭೂತಾಯಿಯ
ಪರಿಮಳ ಮಲ್ಲಿಗೆ
ಜಗವೆಲ್ಲಾ ಮಲ್ಲಿಗೆ
ಇರುವೆ ನಾ ಮೆಲ್ಲಗೆ
ಮಘಮಘಿಪ ಮುದ್ದಿನ ಮಲ್ಲಿಗೆ

ಗುಲಾಬಿ :
ಮುಳ್ಳ ಕಂಟಿಗು
ನನಗೂ ನಂಟು
ಬಣ್ಣ ಬೆಡಗು ಬೇರಾರಿಗುಂಟು

ಕೆಂಪು ಗುಲಾಬಿ
ಚಂದ್ರ ಗುಲಾಬಿ
ಹಳದಿ ಗುಲಾಬಿ
ಮಿಶ್ರ ಬಣ್ಣವು ಉಂಟು
ಬಣ್ಣದ ಬೆಡಗಿಗೆ ಎಣೆಯುಂಟೇ?
ಅತ್ತರಿನ ಪರಿಮಳಕೆ ಸಮನುಂಟೇ

ಅರಬ್ಬಿ ನಾಡಿಂದ ಬಂದವಳು
ಅತ್ತರ ಮನೆ ಮನೆಗೂ ತಂದವಳು
ನಾನು ಗು ಲಾ ಬೀ
ಅಕ್ಕ ಕೇಳೆ
ನಿನ್ನ ಹೆರಳಲ್ಲಿ ನಾನು ನಕ್ಕರೆ
ಮೋಹಿಪರೆಲ್ಲಾ ಸರದಾರರು
ಮಧುರ ಸಂಗಕ್ಕೆ ಮಾರುಹೋಗುವರು
ನೀನೊಲ್ಲೆ ಎಂದರೆ ಸೊರಗುವರು
ಅದಕಾಗಿ
ನಾನಿದ್ದರೆ ನಿನಗೆ
ಹಿಗ್ಗಿನ ಸೊಕ್ಕು

ಶಿವನ ಅಡಿ ಮುಡಿಯಲ್ಲಿ ನಾನು
ಅದನೆತ್ತಿ ಮುಡಿವಳು
ಪಾರ್ವತಿ ಅಕ್ಕ

ಅಕ್ಕ ಹೇಳೆ
ನನ್ನ ಮುಡಿವುದರ ಜಂಭ
ಹಿಡಿವುದರ ಜಂಭ
ಅದು ಗುಲಾಬಿ ಜಂಭ ಜಂಭ

ಸೇವಂತಿಗೆ:
ಸೇವಂತಿಗೆ ನಾನು ಸೇವಂತಿಗೆ
ಬಿಳಿ ಹಳದಿ ನಸುಗೆಂಪು
ಸೇವಂತಿಗೆ ನಾನು ಸೇವಂತಿಗೆ
ನೋಡಲು ಅಂದ
ಮುಡಿಯಲು ಚಂದ
ಪೂಜಿಸಲಂತೂ ಬಲು ಆನಂದ

ದಸರೆ ದೀಪಾವಳಿ
ತುಂಬೆಲ್ಲಾ ನಾನೆ
ಅಂಗಡಿ ಮುಂಗಟ್ಟು
ವಾಹನ ಸಿಂಗಾರ ನನ್ನಿಂದಲೇ
ಸಣ್ಣ ಸಣ್ಣ ಎಸಳಿನ
ಸೇವಂತಿಗೆ ನಾನು ಸೇವಂತಿಗೆ

ಇರುವಂತಿಗೆ:
ಕಂಡ ಕಂಡಲ್ಲೆಲ್ಲಾ
ಸಿಕ್ಕುವಳಲ್ಲಾ
ಅರಸಿ ಬಂದವರಿಗೆ
ಸೊಗಸಿನ ಸೂರೆ
ಜಗದಲ್ಲಿ ಇರುವರು
ನನ್ನಂಥವರ್‍ಯಾರೇ?
ಇರುವಂತಿಗೆ
ಎರಡು ಸುತ್ತಿನ ಹೂವು
ಇರುವಂತಿಗೆ

ಸೋದರಿ ಮಲ್ಲಿಗೆಗಿಂತಾ ಮಿಗಿಲು
ಜಗಕೆಲ್ಲಾ ಮಿಗಿಲಾದ ಪರಿಮಳ
ಮುಗಿಲಿಗೆ ಹಬ್ಬಿ
ಜಗವೆಲ್ಲಾ ತಬ್ಬಿ ಇರುವಂತಿಗೆ
ನನ್ನ ಸಮನಾರುಂಟು ಈ ಜಗದಿ
ದೇವರ ಪೂಜೆಗೆ ಮೂಜಗದಿ
ಇರುವಂತಿಗೆ
ನಾನಿರುವುದು ಇಂತು
ಮಿಗಿಲಾದ ಪರಿಮಳ ಇರುವಂತಿಗೆ

ಹೂವುಗಳೆಲ್ಲಾ ಒಟ್ಟಾಗಿ:
ಜಗ ಜಗ ಜಗ್ಗಿ
ಹೂವಿನ ಸುಗ್ಗಿ
ನಮ್ಮಿಂದಲೇ ಈ
ಸುಂದರ ಸುಗ್ಗಿ

ಮುಡಿವರಿಗೆಲ್ಲಾ
ಹಿಗ್ಗಿನ ಬುಗ್ಗೆ
ಪೂಜಿಪ ಜನರ
ಭಕ್ತಿಯ ಲಗ್ಗೆ
ರಸ್ತೆ ರಸ್ತೆಯಲ್ಲೂ
ಅವರಿವರ ಮನೆಯಲ್ಲೂ
ಕದ್ದು ಮುಚ್ಚಿ ಕೊಯ್ದು
ಪೂಜಿಪ ಭಕ್ತರ ಲಗ್ಗೆ

ದೇವರ ಪಾದಕೆ
ಕೊರಳಿಗೆ ಹಾರ
ಮುಡಿವ ಮಾನಿನಿಯರ
ಸೌಂದರ್ಯಧಾರಾ
ಹೂವಿನ ಸುಗ್ಗಿ
ಜಗ ಜಗ ಜಗ್ಗಿ
ರಂಗು ರಂಗಿನ ಸುಗ್ಗಿ
ಘಮ ಘಮ ನುಗ್ಗಿ

ತುಂಬೆಯನ್ನು ನೋಡಿ ಒಂದೊಂದಾಗಿ ಅಣಕಿಸುವವು.

ಸಂಪಿಗೆ :
ಇಲ್ಲೊಂದು ಕೂತಿದೆ
ಕಿಣಿಮಣಿ ತುಂಬೆ

ಮಲ್ಲಿಗೆ :
ಹುಡುಕಿದರೆಲ್ಲೂ
ಕಣ್ಣಿಗೆ ಬೀಳದೂ

ಗುಲಾಬಿ :
ಕಣ್ಣಲ್ಲಿ ಕಣ್ಣಿಟ್ಟು
ಹುಡುಕಲುಬೇಕು

ಸೇವಂತಿಗೆ:
ಹುಡುಕಿದರೆಷ್ಟೂ
ಕಾಣುವುದಿಲ್ಲ

ಇರುವಂತಿಗೆ:
ಗಂಧವೂ ಇಲ್ಲ

ಗುಲಾಬಿ :
ಸೌಂದರ್ಯವು ಇಲ್ಲಾ

ಹೂವುಗಳು:
ತುಂಬೆ ತುಂಬೆ ಯಾಕಿಲ್ಲಿ ಬಂದೆ?

ಸಂಪಿಗೆ :
ನಿನ್ನ ಕೇಳುವರ್‍ಯಾರು

ಮಲ್ಲಿಗೆ:
ಮೂಸುವರ್‍ಯಾರು

ಗುಲಾಬಿ :
ನಿನ್ನ ನೋಡುವರ್‍ಯಾರು

ಸೇವಂತಿಗೆ:
ಮಾಲೆ ಹೆಣೆಯುವರ್‍ಯಾರು

ಮಲ್ಲಿಗೆ :
ಮುಡಿಯುವರಂತು ಜಗದೊಳಗಿಲ್ಲಾ

ಸಂಪಿಗೆ :
ಎಷ್ಟು ಕೊಯ್ದರು ಬೊಗಸೆ ತುಂಬುವುದಿಲ್ಲಾ

ಎಲ್ಲಾ ಹೂಗಳು :
ಹೆಸರಿಗೆ ಮಾತ್ರ ತುಂಬೆ
ಬೊಗಸೆಯೂ ತುಂಬದ ಬೊಂಬೆ
ಯಾಕಿಲ್ಲಿ ಬಂದೆ
ನೀನಿದ್ದರೂ ಇಲ್ಲಾ
ಜಗದೊಳಗೆಲ್ಲಾ

ಕಿಲ ಕಿಲ ನಗುವವು

ತುಂಬೆ :
ನಾನು ಚಿಕ್ಕವಳೆಂದು ಜರಿಯುವಿರೇಕೆ
ಕಾಣುದಿಲ್ಲೆಂದು ಕಣ್ಣ ಬಿಡುವಿರಿ ಏಕೆ
ಪರಿಮಳವಿಲ್ಲೆಂದು ಕಿಲ ಕಿಲ ಏಕೆ

ಪರದೇಸಿ ಅಕ್ಕ
ಮುಳ್ಳಕಂಟಿ
ಜಗಳಗಂಟಿ

ಓ ಜಂಭದ ಗುಲಾಬಿ
ಮಾಡುವರು ನಿನಗಾಗಿ
ದೊಡ್ಡವರು ಲಾಬಿ
ಕೋಟಿಗೆ ಸಿಕ್ಕಿಸಿ
ಜರ್ಭುತೋರುವರೆಂದೇ
ಸಭೆಗಳಲ್ಲಿ ಗೆಷ್ಟ್‌ಗಳ ಕೈಗೆ
ಕೊಡುವರು ಎಂದೇ
ಅಲ್ಲೇ ಒಗೆದು
ಹೋಗುವರಲ್ಲಾ

ಓ ಸೇವಂತಿಗೆ
ನಿನ್ನ ಬಣ್ಣವು ಕಣ್ಣಿಗೆ ರಾಚುವುದಲ್ಲಾ
ಬೆಳಗಾಗುವುದರೊಳಗೆ
ಎಸಳೆಲ್ಲಾ ಉದುರುದುರಿ
ಬಸವಳಿದು ಸೊಪ್ಪಾಗಿ
ನಾರುವ ಸೇವಂತಿಗೆ
ನಿನ್ನ ಜಂಭಕ್ಕೆ
ಸೊಪ್ಪು ಹಾಕುವರು ಯಾರೇ?

ಓ ಸಂಪಿಗೆ
ನಿನ್ನ ಕಡು ಕಂಪಿಗೆ
ತಲೆನೋವು ಗೊತ್ತೇನವ್ವ
ಅಲರ್ಜಿ
ನಿನ್ನ ಗಮಲು
ಗೊತ್ತೇನವ್ವ
ಹಳದಿ ಅಂದರೆ
ಕಾಮಾಲೆ ರೋಗದ
ಸೂಚನೆಯವ್ವ
ಜಂಭ ಸಾಕಿನ್ನು
ರೋಗದ ಹೂವೆ
ಹೋಗವ್ವ.
ಇನ್ನು ಈ ಮಲ್ಲಿಗೇ
ವರ್ಷದಲ್ಲೆಲ್ಲೋ
ಮೂರುತಿಂಗಳ ನಿನ್ನ ಬಡಿವಾರ
ಬೆಳಗಾಗುವುದರೊಳಗೆ
ಬತ್ತಿ ಬಸವಳಿದು
ತಿಪೆ ಕಸದಲ್ಲಿ ಕಸವಾಗಿ
ಹೋಗುವ ಹೂವೇ
ನಿನ್ನ ಜರ್ಭಷ್ಟೇ?

ಇನ್ನು ಈ ಇರುವಂತಿಗೆ
ಹುಡುಕಿದರ್‍ಯಾರು ಗೋಚರವಿಲ್ಲಾ
ಅಲ್ಲೋ ಇಲ್ಲೋ
ಎಲ್ಲೋ ಒಮ್ಮೊಮ್ಮೆ
ಕಾಣದ ಕವಿಗಳು ಹೊಗಳುವ
ಹೂವೇ ಇರುವಂತಿಗೆ
ನನ್ನ ಜರಿಯುವ ನೀನು ಕಿರುವಂತಿಗೆ

ಎಲ್ಲಾ ಹೂವುಗಳು : (ನಗುತ್ತಾ)

ಎಷ್ಟು ಜಂಭವೇ ನಿನಗೆ
ಜುಜುಬೀ ಹೂವೆ
ನಿನ್ನ ಕೇಳುವರ್‍ಯಾರು
ಅಲ್ಲೊಮ್ಮೆ ಇಲ್ಲೊಮ್ಮೆ
ಯಾರೋ ಒಬ್ಬರು ಕೇಳಿ
ಊರೆಲ್ಲಾ ಹುಡುಕುಡುಕಿ
ಕಣ್ಣಲ್ಲಿ ಕಣ್ಣಿಟ್ಟು
ಗಿಡದ ಇರುವೆಯಲ್ಲಿ
ಕೈ ಕಚ್ಚಿಸಿಕೊಂಡು
ನಾಕಾರು ಕಿತ್ತು
ಸಾಕಾಗಿಹೋಗುವರು

ನಿನ್ನ ಕೊಳ್ಳುವರ್‍ಯಾರೇ
ಅಂಗಡಿ ಮುಂಗಟ್ಟಿನಲ್ಲಿಲ್ಲಾ
ಹೊತ್ತು ಮಾರುವರಂತು ಮೊದಲೇ ಇಲ್ಲಾ
ಆಹಾ ತುಂಬೆ
ನನ್ನದು ಒಂದು ಬದುಕೇನೆ
ಕುಳ್ಳಿ ತುಂಬೆ
ಮಳ್ಳಿ ತುಂಬೇ

ತುಂಬೆ :
ಅಕ್ಕಗಳಿರಾ
ನಾನು ಚಿಕ್ಕವಳು ಎಂದು ಜರಿಯುವಿರಾ
ಕುಳ್ಳಿ ಮಳ್ಳಿ ಎಂದು ಕರೆಯುವರು
(ಅಳುತ್ತಾ) ಕೇಳಿ
ಚಿಕ್ಕದು ಜಗದಲ್ಲಿ
ಚೆನ್ನಾದುದೆಂದು
ಸುಂದರವೆಂದು ಸಾರಿಹರು
ಚಲುವನ್ನು ತೋರುವ ಚನ್ನಿಗರು
ಈ ಜಗದ ತುಂಬೆಲ್ಲಾ ನನ್ನಿಗರು
ಹೂವುಗಳು ನಗುವವು

ತುಂಬೆ : ಆರ್ತಳಾಗಿ

ಓ ದೇವರ ದೇವ
ಚಿಕ್ಕದ ಕಂಡರೆ ಏನು ನಿನ್ನ ಭಾವ
ಈ ಅಕ್ಕಗಳೆಲ್ಲಾ
ನಕ್ಕು ಜರಿವರು ನನ್ನ
ನೀನು ಅಕ್ಕರೆ ತೋರದಿದ್ದರೆ ಹೇಗೆ?

ಓ ಶಿವನೆ ಹೇಳು
ಚಿಕ್ಕದಕ್ಕೆ ಈ ಜಗದಲ್ಲಿ
ಜಾಗವಿಲ್ಲದೆ ಹೇಳು?
ಓ ಶಿವನೇ ಬಾರೋ
ಚಿಕ್ಕದ್ದರ ಕೀರ್ತಿ
ಜಗಕೆಲ್ಲಾ ಸಾರೋ
ಓ ಶಿವನೆ ಬಾರೋ
ಸೃಷ್ಟಿಯ ಸೊಬಗನ್ನು
ಜಗಕೆಲ್ಲ ಸಾರೋ
ಪ್ರೀತಿಯ ತೋರೋ
ತೋರೋ….
ಓ ಶಿವನೇ ಬಾರೋ
ಬಾರೋ….

ಶಿವ :

ಪ್ರತ್ಯಕ್ಷನಾಗುವನು
ಕರೆದವರ್‍ಯಾರು
ನನ್ನ
ಪ್ರೀತಿಯ ತೋರೆಂದು
ಕರೆದವರ್‍ಯಾರು?
ಜರಿವರು ಯಾರು
ಚಿಕ್ಕದು ಚನ್ನಲ್ಲಾ
ಎಂದವರ್‍ಯಾರು

ತುಂಬೆ :
ಓ ಶಿವನೆ ಬಂದೆಯಾ
ಪ್ರೀತಿಯ ತೋರ ಬಂದೆಯಾ
ಜಂಭದಿ ಬೀಗುವ
ಈ ಅಕ್ಕಗಳೆಲ್ಲಾ

ನಾನು ಚಿಕ್ಕವಳೆಂದು
ಜರಿಯುತ್ತಿಹರಲ್ಲಾ

ಬಣ್ಣಿಲ್ಲ ಘಮವಿಲ್ಲ
ಕಣ್ಣಿಗೂ ಕಾಣುಲ್ಲಾ
ಎಂದಾಡಿಕೊಳುತಿಹರು

ಪ್ರೀತಿಯ ತೋರು
ಕಿರಿದರ ಕೀರ್ತಿಯ
ಜಗಕೆಲ್ಲಾ ಸಾರು
ಈ ಜಗಕ್ಕೆ
ಚಿಕ್ಕದರ ಚೆಲುವನ್ನು ತೋರು
ಸೃಷ್ಟಿಯಲ್ಲಿ
ಸರ್ವರೂ ಸಮವಲ್ಲವೇನು?

ಶಿವ :

ತುಂಬೆ ಹೂವನ್ನು ಎತ್ತಿಕೊಂಡು

ನನ್ನ ಪ್ರೀತಿಯ ಕೂಸೆ
ತುಂಬೆಯ ಹೂವೆ

ಚಿಕ್ಕದಾದರೂ ನೀನು
ಚೊಕ್ಕ ಇರುವೆಯಲ್ಲಾ
ಮಿಕ್ಕವರಿಗಿಂತ ಕಡಿಮೆ ಏನಿಲ್ಲಾ
ತುಂಬೆಯಹೂವೆ
ನನ್ನ ಪ್ರೀತಿಯ ಹೂವೇ
ಸಿಹಿ ರಸವು ನಿನ್ನಲ್ಲಿ
ಜೇನಿಗಿಂತಲು ಮಿಗಿಲು
ಬಣ್ಣ ಪರಿಶುದ್ಧ

ಮನವೋ ಪ್ರಬುದ್ಧ
ನನ್ನ ಪೂಜೆಗೆ ಶ್ರೇಷ್ಠ
ಜರಿವರು ಯಾರು
ಜಾಗದಲ್ಲಿ ನಿನ್ನ
ಸೃಷ್ಟಿಯ ಸೊಬಗಲ್ಲಿ

ಸಮ ಸಮ ಎಲ್ಲಾ
ಮೇಲಿಲ್ಲ ಕೀಳಿಲ್ಲಾ
ಹಿರಿದಿಲ್ಲಾ ಕಿರಿದಿಲ್ಲಾ
ಸಮ ಸಮ ಎಲ್ಲಾ

ತುಂಬೆಯ ಹೂವೇ
ನನ್ನ ಶಿರವನ್ನೇರು
ಜಗದ ಶಿಖರವನೇರು

ತುಂಬೇ ತುಂಬೇ
ನನ್ನ ಮನಸಿನ ತುಂಬ
ತುಂಬಿರುವೆ ನೀನು
ಪ್ರೀತಿಯ ಕೂಸಮ್ಮ
ನನ್ನ ಪ್ರೀತಿಯ ತುಂಬೆ
ಚಿಕ್ಕದಾದರು ಚೆಲುವಿನ ತುಂಬೆ
ನನ್ನ ಒಲವಿನ ತುಂಬೆ

ಭೂಸಖಿ ಮಡಿಲಲ್ಲಿ
ಎಲ್ಲರೂ ಒಂದೇ

ಎಲ್ಲವೂ ಒಂದೇ
‘ಸಮ ಭಾವ, ಸಮ ಸುಖ
ಸಮರಸದ ಭಾವ’

ಜೀವ ಜೀವದ ಭಾವ
ಹೂವಿನನುಭಾವ

ಮುದ್ದಿಟ್ಟು ನರ್ತಿಸುತ್ತಾ ಅಂತರ್ಧಾನನಾಗುವನು

ಹೂವುಗಳು:
ಏನಿದು ಅಚ್ಚರಿ
ತುಂಬೆಯ ಈ ಪರಿ

ಕೀಳರಿಮೆ ಗೆದ್ದ
ಚಿನ್ನಾರಿ ತುಂಬೆ
ಶಿವನನ್ನು ಗೆದ್ದ
ನಮ್ಮ ಚಿಕ್ಕ ತಂಗಿ
ಅಜ್ಞಾನ ಹರಿಸಿದೆ
ಓ ನಮ್ಮ ತಂಗಿ
ನಾವೆಲ್ಲ ಸಮವೆಂಬ
ಸುಜ್ಞಾನ ಬೆಳಸಿದ
ಚಿಕ್ಕ ತಂಗಿ ತುಂಬೆ
ನಮ್ಮ ತಂಗೀ ತುಂಬೆ

ಚಿಕ್ಕವಳಾದರು ಚೊಕ್ಕವಳೆಂದು
ಶಿವನೊಲುಮೆ ಗೆದ್ದು
ಚಿಕ್ಕದೂ ಚಲುವೆಂಬ ಅರಿವನ್ನು ಸಾರಿದೆ
ಸೃಷ್ಟಿಯಲ್ಲಿ ಎಲ್ಲಾ
ಸಮ ಸಮ ಎಂಬುದ ಸಾರಿದೆ
ಹಿರಿ ಕಿರಿದು ಬೇಧವ
ಜಗದಲ್ಲಿ ನೀಗುವ
ಭೂಸಖೀ ಹಿರಿಮೆಯ ಸಾರಿದೆ

ತುಂಬೆಯನ್ನು ಸುತ್ತುವರಿದು ನರ್ತಿಸುತ್ತಾ

ಶಿವನೊಲುಮೆ ಗೆದ್ದ
ಕೂಸಿಗೆ ಶರಣೆನ್ನಿರೆ
ನೆಲದಾಯಿ ಮಕ್ಕಳು
ಮುಗಿಲಿಗೆ ಜಿಗಿದು

ಶಿವನ ಸನ್ನಿಧಿಗೇ
ಏರುವ ಬನ್ನಿರೇ
ಹೂವು ನಾವೆಲ್ಲಾ
ಒಂದೆನ್ನಿರೆ

ಸಮವೆನ್ನಿರೆ
ಸಮಾನರೆನ್ನಿರೇ
ಸೃಷ್ಟಿ ಸಮಾನರು
ನಾವೆನ್ನಿರೆ

ಭೂಸಖಿ ಮಡಿಲಲ್ಲಿ
ಒಂದೆನ್ನಿರೇ
ಸೊಬಗಿನ ಸುಗ್ಗಿಯ
ಸಿರಿಯೆನ್ನಿರೇ
ಜಗದ ಜಾಣೆಯರೆಲ್ಲಾ
ಒಂದೆನ್ನಿರೇ

ಹೆಸರಿರುವ ಹೆಸರಿರದ
ಗುರುತಿರುವ ಗುರುತಿರದ
ಬಿಡಿ ಬಿಡಿ ಬಣ್ಣಗಳೊಂದಾಗಿ
ನುಗ್ಗಿ
ತಂಗಿ ಬಿಳಿ ತುಂಬೆಯಲ್ಲಿ
ಸೇರುವೆವು ಹಿಗ್ಗಿ

ಬಣ್ಣ ಬಣ್ಣಗಳೆಲ್ಲಾ
ಬಿಳಿ ಬಿಳಿ ಬಣ್ಣದೊಳು
ಒಂದಾದ ಸುಗ್ಗಿ
ಜಗಕೆಲ್ಲಾ ಹಿಗ್ಗು

ಜಗ್ಗಿ ಜಗ ಜಗ್ಗಿ
ಹೂವಿನ ಸುಗ್ಗಿ
ಹಿರಿ ಕಿರಿಯ ಹೂವೆಲ್ಲಾ
ಒಂದಾದ ಸುಗ್ಗಿ

ಭೂಸಖಿಯ ಮಡಿಲಲ್ಲಿ
ಬೇಧವಿಲ್ಲದ ಸುಗ್ಗಿ
ಬದುಕಿನ ಸುಗ್ಗಿ

ಜಗ ಜಗ ಜಗ್ಗಿ
ಹೂವಿನ ಸುಗ್ಗಿ
ಹೂವೆಲ್ಲಾ ಒಂದೆಂಬ
ಹೊಸಬಗೆ ಸುಗ್ಗಿ
ಜಗ ಜಗ ಜಗ್ಗಿ
ಹೂವಿನ ಸುಗ್ಗಿ

ಸಮರಸ ಭಾವದ
ಹೂವಿನ ಸುಗ್ಗಿ

ಬಣ್ಣ ಬಣ್ಣವು ಬೇರೆ
ಗಂಧ ಬಂದವು ಬೇರೆ
ಚೈತನ್ಯ ಒಂದೆಂಬಾ
ಜೀವ ಜಾತದ ಸುಗ್ಗಿ

ಸತ್ಯ ಸಾರುವ ಸುಗ್ಗಿ
ಸುಗ್ಗಿ ಸುಗ್ಗಿ
ಹೂವಿನ ಸುಗ್ಗಿ
ಸುಗ್ಗಿ ಸುಗ್ಗಿ
ಹೂವಿನ ಸುಗ್ಗಿ
ಸುಗ್ಗಿ ಸುಗ್ಗಿ
ಸುಗ್ಗಿ
ಜೀವ ಜೀವದ ಸುಗ್ಗಿ.

* ಮುಗಿಯಿತು *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೯
Next post ದಾರಿಗಳಿಗೂ ನೆನಪು ಅಂಟಿಕೊಂಡಿವೆ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…