ನಿನ್ನುಸಿರು ಬೆರೆತಿದೆ
ಈ ಮನೆಯಲ್ಲಿ
ಹಾಗಾಗಿ
ಎದೆಯಲ್ಲಿ ಸಂತಸವಿದೆ

ನೀನುಲಿದ ಶಬ್ದಗಳು
ಪ್ರೀತಿಯ ಅಕ್ಷರಗಳ ಬರೆದಿವೆ
ಹಾಗಾಗಿ
ಹೂಗಳು ನಗುತ್ತಿವೆ

ನಿಂಜೊತೆ ಹಾಕಿದ
ಹೆಜ್ಜೆಗಳು
ಮನೆಯಿಂದ ಕಡಲದಂಡೆತನಕ ಹರಡಿಕೊಂಡಿವೆ
ಹಾಗಾಗಿ
ದಾರಿಗಳಿಗೂ ನೆನಪು ಅಂಟಿಕೊಂಡಿವೆ

ಬಟಬಯಲು ಆಕಾಶ
ನೆರಳು ಚೆಲ್ಲುವ ಮರ
ಆಗಾಗ ಪ್ರತ್ಯಕ್ಷವಾಗುವ ಚಂದ್ರ
ಹೀಗೆ ಎಲ್ಲರಲ್ಲೂ ಪ್ರೇಮ ವಿರಹ
ತುಂಬಿ ಮರೆಯಾಗಿರುವೆ
ಹಾಗಾಗಿ
ಎದೆತುಂಬಾ ಪ್ರೀತಿ ತುಂಬಿಕೊಂಡಿದೆ
*****