ವಿಧವೆಯರ ಸಾಮಾಜಿಕ ಸ್ಥಾನಮಾನ- ದುರಂತ ಬದುಕಿನ ವ್ಯಾಖ್ಯಾನ

ವಿಧವೆಯರ ಸಾಮಾಜಿಕ ಸ್ಥಾನಮಾನ- ದುರಂತ ಬದುಕಿನ ವ್ಯಾಖ್ಯಾನ

ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಗಮನಿಸಿದ ವಿಚಾರವೆಂದರೆ ಆಂದ್ರಗಡಿಗೆ ತಾಕಿಕೊಂಡಿರುವ ಕರ್‍ನಾಟಕದ ಪಾವಗಡ ಎಂಬ ಹೆಬ್ಬಂಡೆಗಳ ಊರಿನ ಹಲವು ಹಳ್ಳಿಗಳಲ್ಲಿ ವಿಧವೆಯರ ಹರಾಜು ನಡೆಯುತ್ತದೆ ಎಂಬ ವಿಚಿತ್ರ ಆದರೆ ಸತ್ಯ ಸಂಗತಿ. ಕುಂಚಲಕೊರಚ ಎಂಬ ಸಮುದಾಯದಲ್ಲಿ ಈ ಆಚರಣೆ ಇದ್ದು ಗಂಡ ಸತ್ತು ಸೂತಕ ಕಳೆದುಕೊಳ್ಳುವ ಮೊದಲೇ ಕೆಲವೊಮ್ಮೆ ಹರಾಜು ನಡೆದುಹೋಗಿರುತ್ತದೆ. ಹರಾಜು ಮಾಡುವವರು ವಿಧವೆಯ ಪತಿಯ ಕುಟುಂಬಸ್ಥರು. ಆ ವಿಚಾರ ಎಷ್ಟೋ ಸಂದರ್‍ಭಗಳಲ್ಲಿ ಆ ವಿಧವೆಗೆ ಗೊತ್ತಿರದೇ ನಡೆಯುತ್ತದೆ. ಹರಾಜಿಗೆ ಮಾರಲ್ಪಟ್ಟವಳು ಜೀತದಾಳಿನಂತೆ ಬದುಕಬೇಕು. ಆಕೆಗೆ ಆ ಹರಾಜಿನ ಹಣವೂ ಸಿಗುವುದಿಲ್ಲ. ಅಲ್ಲದೇ ಆಕೆಗೆ ಮಕ್ಕಳೇನಾದರೂ ಇದ್ದರೆ ಅವರೂ ಕೂಡಾ ಜೀತಕ್ಕಿರಬೇಕು. ಹರಾಜು ಕೂಗುವವರು ಪಕ್ಕದ ಆಂಧ್ರದವರೇ ಬಹಳ. ಈ ಸಂಗತಿ ಬೆಳಕಿಗೆ ಬಂದಿದ್ದು ಹೆಬ್ಬಂಡೆ ನಾಗಮ್ಮ ಎಂಬಾಕೆಯ ಹರಾಜು ಆಕೆಗೆ ಗೊತ್ತಿಲ್ಲದೇ ನಡೆದು, ಆನಂತರ ಆಕೆಯನ್ನು ಹರಾಜಿನಲ್ಲಿ ಕೊಂಡವರು ಆಕೆಯನ್ನು ಕರೆದೊಯ್ಯಲು ಬಂದಾಗ. ಗಂಡ ಸತ್ತು ಜೀವನದ ಹಾದಿಯ ಚಿಂತೆಯಲ್ಲಿ ಪೊರಕೆ ಹೆಣೆಯುತ್ತಿದ್ದ ಆಕೆಗೆ ಈ ಸಂಗತಿ ಅರಿವಾಗುತ್ತಲೇ ಚಂಡಿಯಂತೆ ಕೈಯಲ್ಲಿ ಮಚ್ಚು ಹಿಡಿದು ಬಂದವರ ಅಟ್ಟಾಡಿಸಿಕೊಂಡು ಹೋದಳು. ಆಕೆಯ ಈ ಧೈರ್‍ಯವೇ ಈ ನಿರ್‍ಲಜ್ಜ ಸಂಗತಿಯನ್ನು ಹೊರಜಗತ್ತಿಗೆ ತಿಳಿಸಿದ್ದು. ಹೆಣ್ಣನ್ನು ವಸ್ತುವಿನಂತೆ ಪರಿಗಣಿಸಿ ಆಕೆಯನ್ನು ಹರಾಜಿಗಿಡುವ ಅಕ್ಷಮ್ಯ ಪರಂಪರೆ ಮಹಾಭಾರತದ ಕಾಲದಿಂದಲೂ ನಡೆದುಬಂದಿದೆ. ಆದರೆ ಇಂದಿನ ಸುಶಿಕ್ಷಿತ ಸಮಾಜದಲ್ಲೂ ಗುಪ್ತವಾಗಿ ನಡೆದುಕೊಂಡು ಬರುತ್ತಿರುವ ಇಂತಹ ಅಸಹ್ಯ, ಅಮಾನವೀಯ, ದೌರ್‍ಜನ್ಯ ನಿಂತಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ.

“ಯತ್ರ ನಾರ್‍ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂಬ ಸುವಿಚಾರ ಪಠಣಗೈಯುವ ಈ ನಾಡಿನಲ್ಲಿ ಸ್ತ್ರೀಯರ ಒಂದೊಂದೇ ದುರ್‍ದೆಸೆಗಳ ಬಿಚ್ಚಿಡುತ್ತಾ ಹೋದರೆ ಮುಗಿಯದ ಕಥೆಯಾಗುತ್ತದೆ. ಮೇಲಿನ ಘಟನೆ ಮಾತ್ರವಲ್ಲ ವಿಧವೆಯ ಬದುಕಿನ ಎಳೆ‌ಎಳೆಯೂ ಘನಘೋರ ಕಥೆಗಳ ಕಟ್ಟು ಎಂದೇ ಹೇಳಬಹುದು. ಹಾಗಾಗಿ ವಿಧವೆ ಎಂಬ ಪದ ಕೇಳಿದಾಗಲೆಲ್ಲಾ ಯಾಕೋ ಮೈ ಬೆವರಿದಂತಾಗುತ್ತದೆ. ಜೀವನದುದ್ದಕ್ಕೂ ಪತಿಯೇ ಪರದೈವವೆಂದು ಸ್ತ್ರೀಯರು ಅಂದುಕೊಳ್ಳದಿದ್ದರೂ, ಆಧುನಿಕತೆಯನ್ನು ಎಲ್ಲ ರೀತಿಯಿಂದಲೂ ಬಯಸುವ ನಮ್ಮ ಮನಸ್ಸು ಕೆಲವು ಪರಂಪರಾಗತ ಗೊಡ್ಡು ಸಂಪ್ರದಾಯಗಳ ಕಪಿಮುಷ್ಟಿಯಲ್ಲಿ ಅದೆಷ್ಟು ಬಂಧಿಯಾಗಿದೆಯೆಂದರೆ ವಿದ್ಯಾವಂತ ಜಗತ್ತು ಕೂಡಾ ಇಂತಹ ಕೆಲವು ಸಂಗತಿಗಳ ಕಣ್ಣುಮುಚ್ಚಿ ಪಾಲಿಸಿಕೊಂಡು ಬರುತ್ತಿರುವುದು. ನಮ್ಮ ಸಮಾಜದಲ್ಲಿ ವಿಧವೆಗೆ ಅಂತಹ ಗೌರವ ಸ್ಥಾನವಿಲ್ಲ. ಮುತೈದೆ ಎಂದು ಕರೆಯಿಸಿಕೊಂಡ ಹೆಣ್ಣು ಪೂಜೆ ಪುರಸ್ಕಾರಗಳಲ್ಲಿ ಪಾಲ್ಗೊಂಡಂತೆ ವಿಧವೆಗೆ ಅವಕಾಶವಿಲ್ಲ. ದೇಗುಲಗಳಲ್ಲಿ ಕೂಡಾ ತಾರತಮ್ಯವಿದೆ. ದೇವಿಗೆ ಕುಂಕುಮ ಉಡಿ ನೀಡುವ ಭಾಗ್ಯ ಸೌಭಾಗ್ಯವತಿಯಾದ ಹೆಣ್ಣಿಗೆ ಮಾತ್ರ ಇರುವುದ ಕಂಡರೆ ನಮ್ಮ ದೇವರಲ್ಲೂ ಕೂಡಾ ಇರುವ ತರತಮ್ಯಭಾವಕ್ಕೆ ಸಾಕ್ಷಿಯಾಗುತ್ತದೆ? ಅನೇಕ ಸಂದರ್‍ಭಗಳಲ್ಲಿ ಅನಿಷ್ಟವೆಂದು ಪರಿಗಣಿಸಲ್ಪಡುವ ವಿಧವೆಯಾದ ಹೆಣ್ಣು ಬದುಕಿನ ಯಾವ ಸುಖಕ್ಕೂ ಅರ್‍ಹಳಲ್ಲ ಎಂಬ ಪಕ್ಷಪಾತ ಯಾಕೆಂಬ ಪ್ರಶ್ನೆಗೆ ಸಿಗುವ ಉತ್ತರ ಪುರುಷ ಪ್ರಧಾನತೆ. ಹಾಗಾಗಿಯೇ ಎಲ್ಲರಿಂದಲೂ ಅವಗಣನೆಗೆ ಗುರಿಯಾಗುವ ಶುಭಸಮಾರಂಭಗಳಲ್ಲಿ ನಿರ್‍ಲಕ್ಷಿಸಲ್ಪಡುವ ವಿಧವೆಗೆ ಬದುಕು ಬರಡು ಮಾತ್ರವಲ್ಲ ನರಕಸದೃಶವೇ ಸರಿ.

ಈ ಸಂಗತಿಯನ್ನೆ ಮೂಲವಾಗಿಟ್ಟು ಬರೆದ ಪುಟ್ಟವಿಧವೆ ಬೇಂದ್ರೆಯವರ ಸಖೀಗೀತ ಸಂಗ್ರಹದ ಒಂದು ಕವನ. ವಿಧವೆಯ ಬದುಕಿನ ಕರಾಳತೆಯನ್ನು ತೆರೆದುತೋರುತ್ತದೆ. ಅದು ಕೂಡಾ ಬಾಲ್ಯವಿವಾಹದಂತಹ ದುರಂತ ತಂದುಕೊಡುವ ಅನಿಷ್ಟ ಎಷ್ಟೆಂಬುದು ಗಣಿಸಲಾಗದ್ದು. ಧರ್‍ಮದ ಹೆಸರಿನಲ್ಲಿ ಪುಟ್ಟ ಕೂಸಿನ ಮದುವೆ, ಪುಟ್ಟ ಕೂಸು ಮುತೈದೆಯಾಗಿ ನಲಿಯುವುದು, ತಂದೆತಾಯಿಯ ಕಣ್ಣಿಗೆ ಹಬ್ಬವನ್ನುಂಟುಮಾಡುವುದು, ಸಂತಸದ ಜಗತ್ತು ಎಂದುಕೊಳ್ಳುತ್ತಿರುವಾಗಲೇ ಬಂದೆರಗುವ ವಿಧವೆಯ ಪಟ್ಟ, ಧರ್‍ಮದ ಸಮಾಜದ ಗೊಡ್ಡು ಸಂಪ್ರದಾಯಗಳಿಗೆ ನರಳುವ ಆಕೆಯ ಬದುಕಿನ ನಿಸ್ಸಾರತೆಯನ್ನು ಪಡಿಮೂಡಿಸಿದೆ. ಬಾಲ್ಯವಿವಾಹದಂತಹ ಅನಿಷ್ಟ ಪರಂಪರೆಯ ದುರಂತ ಹಾಗೂ ವಿಧವೆಯ ಬದುಕಿನ ಕಷ್ಟಕಾರ್‍ಪಣ್ಯಗಳು ಒಂದೇ ಕವನದಲ್ಲಿ ಧ್ವನಿತವಾಗಿದೆ.

ತಲೆಭಾರ ಇಳಿದಿತ್ತು, ಅಂಗಾರ ಬೆಳೆದಿತ್ತು
ಮೈಯನ್ನು ಮುಚ್ಚಿತ್ತು ಕೆಂಪುಸೀರೆ
ಆದರದೋ ಪಾಪ! ಆಕೆಯಿನ್ನೂ ಮಗುವು
ಸಿಂಗಾರವಿರದೆ! ಆ ಮಾತೇ ಬೇರೆ.

ವಿಧವೆಯಾದವಳ ಬಾಳು ಅತಿ ದುರ್‍ಭರ ಅದೂ ಕೂಡಾ ಭಾರತದಲ್ಲಿ ಅಪಶಕುನದ ಮೂದೇವಿ ಎಂದು ಕರೆಸಿಕೊಳ್ಳುವ ಬಿರುದು ಬೇರೆ. ಕೂಸಿಗೆ ಆಸೆಯಿದೆ, ತಾರುಣ್ಯವಿದೆ. ಆದರೆ ಆಕೆಯನ್ನು ಧರ್‍ಮದ ಸ್ಮಾರಕ ಮಾಡಲು ಹವಣಿಸುವುದು. ಆಕೆಯ ಕೇಶಮುಂಡನ ಮಾಡಿಸಿ ಸೌಂದರ್‍ಯವನ್ನು ವಿರೂಪಗೊಳಿಸುವುದು, ಕೆಂಪು ಸೇರೆ ಉಡಿಸಿ ನಿಕೃಷ್ಟ ಸ್ಥಾನಕ್ಕೆ ಆಕೆಯ ದೂಡುವುದು ಸಮಾಜದ ವಿಲಕ್ಷಣ ಕುರುಡುತನ. ಅರ್‍ಥವಿಲ್ಲದ ಆಚರಣೆಗಳಿಗೆ ಹೆಣ್ಣೆ ದಾಳವಾಗುವುದು ಯಾರ ಕೈವಾಡ. ಸಮಾಜದ ಮತ್ತೊಂದು ಅನಿಷ್ಟತೆ ಎಂದರೆ ವಿಧವೆಯನ್ನು ಸಮಾಜ ನೋಡುವ ರೀತಿ. ‘ಪುಟ್ಟ ವಿಧವೆ’ ಕವನ ವಿಧವೆಯಾದ ಆಕೆ ಆಚಾರ್‍ಯನ ಕಾಮಕ್ಕೆ ಬಲಿಯಾಗುವ ದುರಂತ ಹೇಗೆ ವಿಧವೆಯಾದವಳ ಇಡೀ ಬಾಳು ಗೋಳಿನ ಕಥೆಯಾಗುವ ಅದೇ ಅವಳ ನಿತ್ಯದೂಟವಾಗುವ ದಾರುಣ ಚಿತ್ರಣವನ್ನು ಮುಂದಿಡುತ್ತದೆ.

ಹಿಂದೆಲ್ಲಾ ವಿಧವೆಯರ ದರ್‍ಶನವೇ ಅಮಂಗಳಕರ. ಆಕೆ ಜೀವಂತವಿದ್ದರೆ ಗತಿಸಿದ ಪತಿಯ ನೆನಪಲ್ಲೇ ಕೊರಗಬೇಕಿತ್ತು. ಎಲ್ಲ ಸಂಭ್ರಮಗಳಿಂದ ಆಕೆ ವಿಮುಖಳಾಗಿರುತ್ತಿದ್ದಳು. ಮಾನವ ಸಹಜ ಸಂತೋಷಗಳಿಂದ ಹೊರತಾಗಿ ಸನ್ಯಾಸಿನಿಯಂತೆ ಇರಬೇಕಿತ್ತು. ಮನೆಯ ಇತರರಿಗೆ ಸಿಗುವ ಒಳ್ಳೆಯ ಸೌಲಭ್ಯಗಳಿಂದ ವಂಚಿತಳಾಗಿರುತ್ತಿದ್ದಳು. ಆಕೆಯ ಬದುಕು ಕ್ಲೇಶಭರಿತವಾಗಿತ್ತು. ಹಾಗಾಗೇ ಆಕೆ ಸ್ವ ಇಚ್ಛೆಯಿಂದಲೇ ಸಹಗಮನಕ್ಕೂ ಸಿದ್ದಳಾಗುತ್ತಿದ್ದಳು. ಇವೆಲ್ಲವೂ ಬರಿಯ ಹೆಣ್ಣಿಗೆ ಮಾತ್ರ ಹೊರಿಸಿದ ಕಟ್ಟುಪಾಡುಗಳಾಗಿದ್ದುದು ಕೂಡಾ ಪುರುಷ ಸಮಾಜದ ತಾರತಮ್ಯ ಸಂಸ್ಕೃತಿಯ ದ್ಯೋತಕವೇ ಆಗಿದೆ.

ಆದರೆ ಅದೇ ಪುರುಷ ಪತ್ನಿ ಕಳೆದುಕೊಂಡು ವಿದುರನಾಗಿದ್ದರೂ ಆತ ಯಾವ ರೀತಿಯಿಂದಲೂ ಅನಿಷ್ಟನಲ್ಲ. ಆತ ಎಲ್ಲರಂತೆ ಎಲ್ಲ ಹಕ್ಕುಳ್ಳವ. ಮರು ಮದುವೆಗೆ ಅರ್‍ಹನಾದವ.ಪತ್ನಿ ಸತ್ತ ತಿಂಗಳೊಪ್ಪತ್ತಿಗೆ ಮತ್ತೊಬ್ಬ ಹೆಣ್ಣಿನ ಗಂಡನಾಗಬಲ್ಲ ಅವಕಾಶವಿರುವ ಭಾಗ್ಯವಂತ. ಆಹಾ! ಎಂತಹ ವಿಪರ್‍ಯಾಸ. ಸುಸಂಸ್ಕೃತ ಭಾರತದ ಜಾಯಮಾನ ನೀತಿ ನಿಯಮಗಳು ಯಾವ ಸಮಾನತೆಗೆ ಬೆಲೆ ಕೊಟ್ಟಿವೆ?

ಆದರೆ ಇಂದು ವ್ಯವಸ್ಥೆ ಸ್ತ್ರೀ ಶಿಕ್ಷಣ ಹೀಗೆಲ್ಲ ಸ್ವಲ್ಪ ಮಟ್ಟಿಗೆ ಕಾಲ ಬದಲಾಗಿದೆ. ಪಟ್ಟಣಗಳಲ್ಲಿ ಸ್ತ್ರೀಯರು ಅದರಲ್ಲೂ ಆರ್‍ಥಿಕ ಸ್ವಾವಲಂಬನೆ ಇರುವ ಹೆಣ್ಣುಗಳು ಅದು ಕೆಲವೊಮ್ಮೆ ಮರುವಿವಾಹವಾಗುತ್ತಿದ್ದರೂ ಆಕೆಯ ಬಗ್ಗೆ ಆಕೆ ಎರಡನೇ ಮದುವೆಯಾದವಳು ಎಂಬ ಅಪಖ್ಯಾತಿಯ ಹೇಳಿಕೆಗಳಿಗೇನೂ ಬರವಿಲ್ಲ. ಹಳ್ಳಿಗಳ ಮಟ್ಟಿಗಂತೂ ಆಕೆಯ ಬದುಕಿನ ರೀತಿಗಳಲ್ಲಿ ಅಂತಹ ಬದಲಾವಣೆಗಳಿನ್ನೂ ಬಂದಿಲ್ಲ. ಮರುವಿವಾಹದ ಅವಕಾಶಗಳು ಕೂಡ ಅಪರೂಪವೇ. ಇಂದಿಗೆ ಕೇಶಮುಂಡನದಂತಹ ದುಷ್ಟ ಆಚರಣೆಗಳು ಇಲ್ಲವಾದರೂ ವಿಧವೆ ಎಲ್ಲರಂತೆ ಬದುಕುವ ಸಾಮರ್‍ಥ್ಯವನ್ನು ಇನ್ನೂ ಪಡೆದಿಲ್ಲವೆಂದೇ ಹೇಳಬಹುದು. ಪಾವಗಡದ ಮೇಲಿನ ಘಟನೆ ಇದಕ್ಕೆ ಜ್ವಲಂತ ಉದಾಹರಣೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನ್ ಏಳ್ಙೌ ಈ ವುಚ್ಗೆ!
Next post ಮುದ್ದು ಕಂದನ ವಚನಗಳು : ಮೂರು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys