ಭ್ರಮಣ – ೯

ಭ್ರಮಣ – ೯

ತೇಜಾ ಬಂಡೇರಹಳ್ಳಿ ಸೇರಿದಾಗ ಎರಡು ಗಂಟೆ. ಅವನು ಮನೆಯಲ್ಲಿ ಮತ್ತು ಪೋಲಿಸ್ ಸ್ಟೇಷನ್ನಿನಲ್ಲಿ ಅವರೆಗೂ ಇಲ್ಲದಿರುವಿಕೆ ಯಾರನ್ನೂ ಹೆಚ್ಚಿನ ಕಳವಳಕ್ಕೆ ಒಳಪಡಿಸಿರಲಿಲ್ಲ. ಮನೆಕೆಲಸದಾಳೇ ಆ ವಿಷಯವನ್ನು ಗುಂಡು ತಾತನಿಗೆ ತಿಳಿಸಿದ್ದಳು. ಯಾವುದೋ ಕೆಲಸದ ಮೇಲೆ ಹೋಗಿರುತ್ತಾನೆ ನಿನ್ನ ಕೆಲಸ ನೀನು ಮಾಡು ಎಂದು ಹಗುರದನಿಯಲ್ಲಿ ಹೇಳಿದ್ದನಾತ. ರಾತ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವಕರು ಒಂದೆರಡು ಸಲ ಅವನಿಗಾಗಿ ತಿರುಗಾಡಿದ್ದರು. ಅವನು ಬೆಳಗಿನಿಂದ ಅಷ್ಟು ಹೊತ್ತು ಇಲ್ಲದಿರುವಿಕೆ ಬಹುಜನರ ಗಮನವನ್ನು ಸೆಳೆಯದಿರಲು ಇನ್ನೊಂದು ಕಾರಣ ಮಳೆ, ಭೋರ್ಗರೆಯುವ ಮಳೆ. ಅದು ಇನ್ನೂ ನಿಂತೂ ನಿಂತೂ ಬರುತ್ತಲೇ ಇತ್ತು.

ಪೋಲಿಸ್ ಸ್ಟೇಷನ್‌ನಲ್ಲಿ ಮಳೆಯ ಕಾರಣ ಎಸ್.ಐ. ಮತ್ತು ಎಚ್.ಸಿ. ಕೆಲಸಕ್ಕೆ ಬಂದಿರಲಿಲ್ಲ. ಮೂವರು ಪೇದೆಯರು ಮಳೆ ಚಳಿಯ ಕಾರಣ ಪೋಲಿಸ್ ಸ್ಟೇಷನ್‌ನಲ್ಲೇ ಬೆಚ್ಚಗೆ ಹೊದ್ದು ಕುಳಿತಿದ್ದರು. ಗಾಳಿ ಮಳೆಗಳ ಕಾರಣ ಟೆಲಿಫೋನ್ ಕೆಲಸ ಮಾಡುತ್ತಿರಲಿಲ್ಲ.

ಮನೆಯಲ್ಲಿ ಕೆಲಸದಾಳಿನೊಡನೆ ಮಾತಾಡಿ ಪೋಲಿಸ್ ಸ್ಟೇಷನ್‌ಗೆ ಬಂದು ಕುಳಿತಿದ್ದ ತೇಜಾ, ಕಲ್ಯಾಣಿಯನ್ನು ಬಿಳ್ಕೊಟ್ಟು ಕಾಡಿನಿಂದ ಮರಳುವಾಗ ಅವನಿಗೆ ಮೊದಲಿನಷ್ಟು ದಣಿವು ಆಗಿರಲಿಲ್ಲ. ಆದರೆ ಮೆದಳು ಮಾತ್ರ ಯುದ್ಧರಂಗವಾಗಿತ್ತು. ಕೆಲಗಂಟೆಗಳಲ್ಲಿ ತನ್ನ ಜೀವನ ಗತಿ ಇಷ್ಟು ಬದಲಾಗಿ ಬಿಡಬಹುದೆಂದು ಅವನು ಎಣಿಸಿರಲಿಲ್ಲ. ಮುಂದೇನು ಎಂಬ ಪ್ರಶ್ನೆ ಅವನೆದುರು ಬೃಹದಾಕಾರ ತಾಳಿ ನಿಂತಿತ್ತು. ಅವನು ಅದರ ಬಗ್ಗೆಯೇ ಚಿಂತನೆ ನಡೆಸಿದ್ದಾಗ ಕೊಡೆಯನ್ನು ಹಿಡಿದು ಬಂದ ಸಿದ್ಧಾನಾಯಕ್. ಅವನ ಮುಖದಲ್ಲಿ ಒಂದು ಬಗೆಯ ಅಸಹನೆ, ಕೋಪ ಎದ್ದು ಕಾಣುತ್ತಿತ್ತು. ಎರಡೂ ಕೈಗಳಿಂದ ತನ್ನ ಪೇಟಾ ಸರಿಪಡಿಸಿಕೊಳ್ಳುತ್ತಾ ಕುಳಿತು, ತೇಜಾನನ್ನೇ ದುರುಗುಟ್ಟುತ್ತಾ ಹೇಳಿದ ನಾಯಕ್.

“ನೀನಿಲ್ಲಿ ಬಂದು ಒಂದು ಇತಿಹಾಸ ಸೃಷ್ಟಿಸಿರುವಿ. ಬಂಡೇರಹಳ್ಳಿಯಂತಹ ಯಾವ ಹಳ್ಳಿಯಲ್ಲೂ ಸರ್ಕಲ್ ಇನ್ಸ್‌ಪೆಕ್ಟರ್ ಇರುವಂತಹ ಪೋಲಿಸ್ ಸ್ಟೇಷನ್ ಇರುವದಿಲ್ಲ. ನೀನಿಲ್ಲೇನು ಸಾಧಿಸಲು ಬಂದಿದ್ದಿ”

“ನಾಯಕ್‌ರೇ ಮರ್ಯಾದೆಯಾಗಿ ಮಾತಾಡಿ, ನೀನು ಅಲ್ಲ ನೀವೂ, ಇಲ್ಲದಿದ್ದರೆ ನಾನೂ ನನ್ನ ಪೋಲಿಸ್ ಭಾಷೆಯನ್ನು ಉಪಯೋಗಿಸ ಬೇಕಾಗುತ್ತದೆ” ಕಟುವಾದ ದನಿಯಲ್ಲಿ ಹೇಳಿದ ತೇಜಾ. ಒಮ್ಮೆಲೇ ನಾಯಕರ ಮುಖದಲ್ಲೆಲ್ಲಾ ವ್ಯಂಗ್ಯದ ಮುಗುಳ್ನಗೆ ತುಂಬಿ ಬಂತು. ಅಂತಹ ದನಿಯಲ್ಲಿ ಅಂತಹದೇ ನಗೆಯನ್ನು ಮುಖದಲ್ಲೆಲ್ಲಾ ತುಂಬಿಕೊಂಡು ಹೇಳಿದ ನಾಯಕ್.

“ತಪ್ಪಾಯಿತು! ಇನ್ಸ್‌ಪೆಕ್ಟರ್ ಸಾಹೇಬರೆ ತಪ್ಪಾಯಿತು!… ನೀವೇ ಹೇಳಿ ನನ್ನ ಬಂಡೇರಹಳ್ಳಿಯಲ್ಲಿ ಈ ಸರ್ಕಲ್ ಇನ್ಸ್‌ಪೆಕ್ಟರ್‌ ಇರುವಂತ ಪೋಲಿಸ್ ಸ್ಟೇಷನ್ ಯಾಕೆ ಬೇಕಾಯಿತು”

ಎದುರಿಗೆ ಕುಳಿತ ಆ ಪಂಚಾಯತಿ ಪ್ರಸಿಡೆಂಟ್‌ನನ್ನು ಅಳೆಯುವಂತೆ ನೋಡುತ್ತಾ ಮಾತಾಡಿದ ತೇಜಾ.

“ಅದನ್ನು ನೀವು ಕಲೆಕ್ಟರ್ ಸಾಹೇಬರಿಗೆ ಕೇಳಿ ಅವರೇ ಅದಕ್ಕೆ ಸರಿಯಾದ ಉತ್ತರ ಕೊಡುತ್ತಾರೆ. ಹೇಗೂ ಅವರು ನಿಮ್ಮ ಸ್ನೇಹಿತರು. ಅದೂ ಅಲ್ಲದೇ ರಾಮನಗರದಲ್ಲೂ ನಿಮ್ಮ ವ್ಯವಹಾರ ಹರಡಿದೆ”

“ನೀವಿಲ್ಲಿ ಕಲ್ಲಕ್ಕನನ್ನು ಹಿಡಿಯಲು ಬಂದಿದ್ದೀರೆಂದು ತಿಳಿಯಿತು. ಆದರೆ ಆಕೆ ಈಗ ಇಲ್ಲಿಲ್ಲ. ತನ್ನ ಠಿಕಾಣಿ ಬದಲಾಯಿಸಿದ್ದಾಳೆ” ಎಲ್ಲಾ ತನಗೆ ಗೊತ್ತೆಂಬಂತಹ ದನಿಯಲ್ಲಿ ಮಾತಾಡಿದ ನಾಯಕ್. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದ ತೇಜಾ, ಆ ನೋಟ ನಾಯಕನ ಕಣ್ಣಿನಿಂದ ದೇಹವೆಲ್ಲಾ ಹರಿದಾಡುವ ಹಾಗಿತ್ತು. ಕೆಲಕ್ಷಣಗಳ ನಂತರ ಗಲಿಬಿಲಿಗೊಂಡಂತೆ ಕೇಳಿದ ಪಂಚಾಯತಿಯ ಮುಖ್ಯಸ್ಥ

“ಏನು? ಯಾಕೆ ಹಾಗೆ ನೋಡುತ್ತಿದ್ದಿರಿ?”

“ನಿಮಗೆಲ್ಲ ಕಲ್ಲಕ್ಕಳ ಬಗ್ಗೆ ಇನ್ನೂ ಏನೇನು ಗೊತ್ತು ನಾಯಕರೆ?” ಅಪರಾಧಿಯೊಬ್ಬನನ್ನು ಪ್ರಶ್ನಿಸುವಂತಹ ದನಿಯಲ್ಲಿ ಕೇಳಿದ ತೇಜಾ. ನಾಯಕನ ಮುಖ ಇನ್ನೂ ಗೊಂದಲಮಯವಾಯಿತು. ಕುರ್ಚಿಯಿಂದೆದ್ದು ನೋಟವನ್ನು ಅವನ ಮುಖದಿಂದ ಸರಿಸದೇ ಮತ್ತೆ ತಾನೇ ಮಾತಾಡಿದ ತೇಜಾ

“ಮಾತಾಡಿ ಇನ್ನೂ ಏನೇನು ಗೊತ್ತು? ಈಗವಳು ಎಲ್ಲಿದ್ದಾಳೆ?”

ಅವನ ಮಾತಿನ ಧಾಟಿ ಈಗ ನಾಯಕನ ಮುಖದಲ್ಲಿ ಭಯ ಹುಟ್ಟಿಸಿತ್ತು. ಮೊದಲ ದನಿಯಲ್ಲಿ ಹೇಳಿದ

“ನನಗೇನೂ ಗೊತ್ತಿಲ್ಲ! ನಾ ಸುಮ್ಮನೆ ಹೇಳಿದೆ”

“ಏಳು ಬೋಳಿಮಗನೆ! ಕುರ್ಚಿಯಿಂದೇಳು! ನೀವೆಲ್ಲಾ ಪೋಲಿಸಿನವರೆಂದರೆ ಏನೆಂದು ಕೊಂಡಿದ್ದೀರಿ. ಪಂಚಾಯಿತಿ ಪ್ರಸಿಡೆಂಟರ, ಎಂ.ಎಲ್.ಎ.ಯರ, ಮಂತ್ರಿಯರ, ಗುಲಾಮರೆಂದು ಕೊಂಡಿದ್ದೀರಾ! ಇಡೀ ರಾಜ್ಯ ಕ್ರಾಂತಿಕಾರಿಯರ ಚಟುವಟಿಕೆಯಿಂದ ತಲ್ಲಣಗೊಳ್ಳುತ್ತಿರುವಾಗ ನಿಮಗದು ಹುಡುಗಾಟವಾಗಿದೆಯೋ! ನಾನು ಸಾರಾಯಿ ಮಾರುವ ಸಮಯವನ್ನು ಪಾಲಿಸಿ ಎಂದರೆ ಸಿಕ್ಕ ಸಿಕ್ಕಲ್ಲಿ ಸಮಯವಲ್ಲದ ಸಮಯದಲ್ಲಿ ಅದರ ಮಾರಾಟ ಆರಂಭಿಸಿದ್ದೀರಾ ಅದಕ್ಕೆ ಕಾರಣ ನೀನೇ ನಾಯಕ್! ನಿನ್ನ ಸದೆಬಡಿದರೆ ಎಲ್ಲಾ ತಾನೇ ಸರಿಹೋಗುತ್ತದೆ” ಎಂದ ತೇಜಾ, ಒಬ್ಬ ಕಾನ್ಸ್‌ಟೇಬಲ್‌ನನ್ನು ಕೂಗಿ ಕರೆದ. ಏನೋ ಅನಾಹುತವಾಗಿದೆ ಎಂಬಂತೆ ಅವನು ಓಡಿ ಬಂದು ಅಟೆನ್ಷನ್‌ನಲ್ಲಿ ನಿಲ್ಲುತ್ತಿದ್ದಂತೆ ಆಜ್ಞಾಪಿಸಿದ ತೇಜಾ.

“ಇವರನ್ನು ರಾಮನಗರಕ್ಕೆ ಕರೆದುಕೊಂಡು ಹೋಗಬೇಕು. ಆವರೆಗೂ ಇವರನ್ನು ಲಾಕ್‌ಅಪ್ನಲ್ಲಿ ಹಾಕು”

ಭಯದಿಂದ ಬಿಳಿಚಿಕೊಂಡಿತು ನಾಯಕನ ಮುಖ, ಭಯಗಾಬರಿಗಳ ದನಿಯಲ್ಲಿ ಹೇಳಿದ

“ಇದು ಅನ್ಯಾಯ, ನನಗೆ ಕಲ್ಲಕ್ಕೆ ಎಲ್ಲಿದ್ದಾಳೆಂಬುವುದು ಗೊತ್ತಿಲ್ಲ…”

ಆಗಲೇ ಪೋನ್ ಗಂಟೆಯ ನಾದವನ್ನು ಹೊರಹೊಮ್ಮಿಸತೊಡಗಿತು. ಈಗ ಸರಿಹೋಯಿತು ಎಂದುಕೊಳ್ಳುತ್ತಾ ರಿಸಿವರನ್ನು ಎತ್ತಿಕೊಂಡ ತೇಜಾ. ಭಯದ ಮುಖಭಾವ ಹೊತ್ತ ನಾಯಕ್ ಅಲ್ಲೇ ನಿಂತಿದ್ದ. ಅವನ ಬದಿಗೇ ನಿಂತ ಕಾನ್ಸ್‌ಟೇಬಲ್‌ನ ಮುಖದಲ್ಲಿ ಏನು ಮಾಡಬೇಕು ತೋಚದಂತಹ ಭಾವವಿತ್ತು.

ಅತ್ತ ಕಡೆಯಿಂದ ಸ್ಕ್ವಾಡ್‌ನ ಮುಖ್ಯಸ್ಥ ಶ್ರೀವಾಸ್ತವ ಮಾತಾಡುತ್ತಿದ್ದರು.

“ನಾನೀಗ ರಾಮನಗರದಿಂದ ಮಾತಾಡುತ್ತಿದ್ದೇನೆ ಕೂಡಲೇ ಬಾ”

“ಸರಿ ಸಾರ್! ಇಲ್ಲಿನ ಪಂಚಾಯತಿ ಪ್ರೆಸಿಡೆಂಟ್ ಸಿದ್ದಾನಾಯಕರು ಪೊಲೀಸ್ ಸ್ಟೇಷನ್ನಿನಲ್ಲೆ ಇದ್ದಾರೆ. ಅವರಿಗೆ ಕಲ್ಲಕ್ಕ ಎಲ್ಲಿದ್ದಾಳೆಂಬುವುದು ಗೊತ್ತಿದೆ ಎಂದು ನನ್ನ ಅನುಮಾನ. ಅವರನಲ್ಲಿ ಕರೆತರೋಣವೆಂದು ಕೊಳ್ಳುತ್ತಿದ್ದೆ”

“ಕರೆದುಕೊಂಡು ಬಾ! ನಾನೇ ಮಾತಾಡಿಸುತ್ತೇನೆ. ನೀನು ತಕ್ಷಣ ಹೊರಟು ಬಾ” ಎಂದು ಸ್ಕ್ವಾಡಿನ ಮುಖ್ಯಸ್ಥರು ರಿಸೀವರನ್ನು ಕೆಳಗಿಟ್ಟ ಶಬ್ದ ಕೇಳಿಸಿತು. ತೇಜಾ ತಾನೂ ರಿಸೀವರನ್ನು ಕೆಳಗಿಡುತ್ತಾ ಆಜ್ಞಾಪಿಸಿದ.

“ನಡಿ! ಹೋಗುವ ನೀನವರನ್ನು ಹಿಡಿದು ಹಿಂದೆಕೂಡು. ಸ್ಕ್ವಾಡಿನ ಮುಖ್ಯಸ್ಥರೆ ಇವರೊಡನೆ ಮಾತಾಡುತ್ತಾರಂತೆ”

ಭಯಾತಿರೇಕದಿಂದ ಕಿರುಚಿದ ನಾಯಕ್.

“ಇದು ಅನ್ಯಾಯ, ನಾನು ಏನೋ ಹೇಳಲು ಬಂದರೆ ನನ್ನ ಸಿಕ್ಕಿಹಾಕಿಸುತ್ತಿದ್ದೀರಿ. ನಾನು ಫೋನ್ ಮಾಡಬೇಕು”

ಆ ಮಾತನ್ನು ಕೇಳಿಸಿಕೊಳ್ಳದವನಂತೆ ಜೀಪಿನ ಕಡೆ ನಡೆದ ತೇಜಾ, ಕಾನ್ಸ್ ಟೇಬಲ್ ನಾಯಕರ ರಟ್ಟೆ ಹಿಡಿದು ಹೊರಗೆ ಕರೆತಂದು ಜೀಪಿನ ಹಿಂದೆ ಕೂಡಿಸಿದ. ಅದಕ್ಕಾಗೇ ಕಾಯುತ್ತಿದ್ದ ತೇಜಾ ಜೀಪನನ್ನು ಸ್ಟಾರ್‍ಟ್ ಮಾಡಿದ.

ಪೋಲಿಸ್ ಜೀಪು ಬಂಡೇರಹಳ್ಳಿಯನ್ನು ಹಿಂದೆ ಹಾಕಿ ರಾಮನಗರದ ಕಡೆ ಓಡಲಾರಂಭಿಸಿದಾಗ ನಾಯಕರ ಮುಖದಲ್ಲಿ ನಿಧಾನವಾಗಿ ಭಯದ ಭಾವ ಹೋಗಿ ಅದರ ಸ್ಥಾನದಲ್ಲಿ ಸಿಟ್ಟು ತುಂಬಿಬರಲಾರಂಭಿಸಿತು. ಇನ್ನೂ ಸ್ವಲ್ಪ ದಾರಿ ಸವಿಸಿದ ಮೇಲೆ ತಮ್ಮ ರೋಷವನ್ನು ಹೊರಗೆಡಹಿದರು ನಾಯಕರು.

“ಇನ್ಸ್‌ಪೆಕ್ಟರ್‌! ನೀನಿದರ ಫಲ ಅನುಭವಿಸುತ್ತಿ! ನಾನ್ಯಾರೆಂಬುವುದು ನಿನಗಿನ್ನೂ ಗೊತ್ತಾಗಿಲ್ಲ. ನನ್ನ… ನನ್ನ… ಸಿದ್ದಾನಾಯಕ್‌ನ ಬಂಧಿಸಿ ರಾಮನಗರಕ್ಕೆ ಕರೆದೊಯ್ಯುತ್ತಿಯಾ, ತಿಳಿಯುತ್ತದೆ. ರಾಮನಗರದಲ್ಲಿ ನಿನಗೆ! ನಾನ್ಯಾರೆಂಬುವುದು ಗೊತ್ತಾಗುತ್ತದೆ”

ಅದಕ್ಕೆ ತೇಜಾನೇ ಆಗಲಿ, ಕಾನ್ಸ್‌ಟೇಬಲ್‌ನೇ ಆಗಲಿ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ.

ಪಟ್ಟಣದಿಂದ ಸ್ಕ್ವಾಡಿನ ಮುಖ್ಯಸ್ಥರು ರಾಮನಗರಕ್ಕೆ ಯಾಕೆ ಬಂದಿರಬಹುದು. ಅವರೊಡನೆ ತಾನು ಏನೇನು ಹೇಳಬೇಕು ಏನು ಹೇಳಬಾರದು ಎಂಬ ಯೋಚನೆಯಲ್ಲಿ ತೊಡಗಿದ. ತೇಜಾನ ಮನದಿಂದ ಈಗ ಕ್ರಾಂತಿ ಕಾರಿಯರು, ಭ್ರಷ್ಟ ರಾಜಕಾರಣಿಗಳು, ಬಡಬಗ್ಗರ ಮೇಲೆ ನಡೆಯುತ್ತಿರುವ ಅತ್ಯಾಚಾರ ಎಲ್ಲಾ ಬಹುದೂರವಾಗಿತ್ತು. ಅವನನ್ನು ಕಲ್ಯಾಣಿಯೇ ಆಕ್ರಮಿಸಿಬಿಟ್ಟಿದ್ದಳು. ತಾವಿಬ್ಬರೂ ಕಲೆತು ಸುಖಶಾಂತಿಯಿಂದ ಬಾಳುವುದು ಹೇಗೆ ಎಂಬ ಯೋಚನೆಯೇ ಅವನನ್ನು ಕಾಡುತ್ತಿತ್ತು. ಸುಳ್ಳು ಮೋಸಗಳನ್ನು ಅರಿತವನಲ್ಲ ತೇಜಾ, ಆದರೆ ಈಗ ಸುಳ್ಳುಗಳನ್ನು ಹುಟ್ಟಿಸಬೇಕು. ಕಲ್ಯಾಣಿಗಾಗಿ ನಿಜವೆನಿಸುವಂತಹ ಸುಳ್ಳುಗಳು. ಇದು ಸರಿಯೇ ಎಂಬ ಪ್ರಶ್ನೆ ಅವನಲ್ಲಿ ಎದ್ದಿರಲಿಲ್ಲ. ಅವನಿಗೀಗ ಬೇಕಾದದ್ದು ಒಂದೇ ಕಲ್ಯಾಣಿ. ಕಲ್ಯಾಣಿಗಾಗಿ ಅವನು ಏನು ಬೇಕಾದರೂ ಮಾಡುತ್ತೇನೆ ಎಂಬ ಶಪಥವನ್ನು ತೆಗೆದುಕೊಂಡಿದ್ದ. ಅದು ಮಂತ್ರ ಘೋಷಗಳಿಂದ ಉಗುಳು ನುಂಗುವ ಶಪಥವಾಗಿರಲಿಲ್ಲ. ಇಬ್ಬರ ಹೃದಯಾಂತರಾಳದಿಂದ ಬಂದ ಮಾತಾಗಿತ್ತು. ಸ್ಕ್ವಾಡಿನ ಮುಖ್ಯಸ್ಥರೊಡನೆ ಹೇಗೆ ಮಾತಾಡಬೇಕೆಂಬ ಚಿಂತನೆ ಹೆಚ್ಚಾದಾಗ ಮೊದಲು ಅವರ ಮಾತುಗಳನ್ನು ಕೇಳಿ ಅದಕ್ಕೆ ತಕ್ಕಂತೆ ಉತ್ತರಿಸಬೇಕೆಂಬ ನಿರ್ಣಯಕ್ಕೆ ಬಂದ.

ಡಿಸ್ಟ್ರಿಕ್ಟ್ ಹೆಡ್ ಕ್ವಾರ್‌ಟ್ರ್ಸನ ಎಸ್.ಪಿ.ಯವರ ಮುಖ್ಯ ಕಾರ್ಯಾಲಯದೆದುರು ಜೀಪು ನಿಂತಾಗ ಕಾನ್ಸ್ ಟೇಬಲ್ ಹಿಂದೆಯೇ ಇಳಿದ ನಾಯಕ್ ವರಟು ದನಿಯಲ್ಲಿ ಹೇಳಿದ

“ನನ್ನ ಕೈಹಿಡಿಯಬೇಡ. ನಾ ಬರುತ್ತೇನೆ”

“ಅವರನ್ನು ಮುಟ್ಟಬೇಡ ತಾವಾಗೇ ಅವರು ನಮ್ಮ ಜತೆ ಬರುತ್ತಾರೆ” ಹೇಳಿದ ತೇಜಾ.

ಎಸ್.ಪಿ. ಸಾಹೇಬರ ಕೋಣೆಯಲ್ಲಿ ಸ್ಕ್ವಾಡ್‌ನ ಮುಖ್ಯಸ್ಥರು ಕುಳಿತಿದ್ದರು. ತೇಜಾ ಆ ಕೋಣೆ ಪ್ರವೇಶಿಸುತ್ತಲೆ ಇಬ್ಬರಿಗೂ ಆಕರ್ಷಕ ಭಂಗಿಯಲ್ಲಿ ಸೆಲ್ಯೂಟ್ ಹಾಕಿದ

“ಸಿದ್ಧಾನಾಯಕರನ್ನು ಕರೆತಂದಿದ್ದೀರಾ?” ಕೇಳಿದರು ಎಸ್.ಪಿ.

“ತಂದಿದ್ದೇನೆ ಸರ್” ಹೇಳಿದ ತೇಜಾ

“ಅವರ ಮೇಲೆ ನಿಮಗ್ಯಾಕೆ ಅನುಮಾನ ಬಂತು” ಅವನನ್ನೇ ಅನುಮಾನಿಸುತ್ತಿರುವವರಂತೆ ಕೇಳಿದರು ಎಸ್.ಪಿ.

“ಅವರೇ ಹೇಳಿದರು ಸರ್ ಕಲ್ಲಕ್ಕ ಇಲ್ಲಿಲ್ಲವೆಂದು” ಕೂಡಲೇ ಉತ್ತರಿಸಿದ ತೇಜಾ. ಅದಕ್ಕೆ ಸ್ಕ್ವಾಡಿನ ಮುಖ್ಯಸ್ಥರು ಹೇಳಿದರು

“ನೀವು ಹೋಗಿ ಅವರೊಡನೆ ಮಾತಾಡಿ, ನಾನಾಮೇಲೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ. ತೇಜಾನೊಡನೆ ಗಂಭೀರ ವಿಷಯಗಳು ಚರ್ಚಿಸಬೇಕು. ಯಾರನ್ನೂ ಒಳಬಿಡಬಾರದೆಂದು ಹೇಳಿ”

“ಸರಿ” ಎಂದ ಎಸ್.ಪಿ. ಮನಸ್ಸಿಲ್ಲದ ಮನಸ್ಸಿನಿಂದ ತಮ್ಮ ಕುರ್ಚಿ ಖಾಲಿ ಮಾಡಿದರು. ಅವರು ಹೊರಹೋಗಿ ದಪ್ಪನೆಯ ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಸಿಟ್ಟಿನ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.

“ಬಂಡೇರಹಳ್ಳಿಯಲ್ಲಿ ಏನು ಮಾಡುತ್ತಿದ್ದಿ! ನಿನಗೆ ರಾಜಕೀಯ ನಾಯಕನಾಗುವ ಇರಾದೆ ಇದೆಯೇ!”

ಇಷ್ಟು ಬೇಗ ಪಟ್ಟಣಕ್ಕೆ ಈ ಸುದ್ದಿ ಮುಟ್ಟಿ ಸ್ಕ್ವಾಡಿನ ಮುಖ್ಯಸ್ಥರೇ ರಾಮನಗರಕ್ಕೆ ಬಂದಿದ್ದಾರೆಂದರೆ ಇವರ ಹಿಂದೆ ಸಿದ್ದಾನಾಯಕ್‌ನ ಕೈವಾಡವಿದೆ ಎಂಬುವುದು ಸ್ಪಷ್ಟವಾಯಿತು ತೇಜಾನಿಗೆ. ಅವರ ಹಿಂದೆಯೇ ಕಲ್ಯಾಣಿ ಹೇಳಿದ ಮಾತು ಮನದಲ್ಲಿ ಹಾದುಹೋಯಿತು.

“ನಾನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ನೀವು ಹೇಳುತ್ತಿದ್ದೀರೆಂದು ಕೊಳ್ಳುತ್ತೇನೆ” ಹೇಳಿದ ತೇಜಾ.

“ಹೂಂ! ಅದೇ ವಿಷಯ ಏನೋ ದೊಡ್ಡ ಭಾಷಣವನ್ನು ಬಿಗಿದಿಯಂತೆ… ನಿಂತೇ ಯಾಕಿದ್ದಿ ಕೂಡು” ಅವರ ಸಿಟ್ಟಿನಲ್ಲೂ ಅಪ್ಯಾಯತೆ ತುಂಬಿತ್ತು. ಇಂತಹ ಅಧಿಕಾರಿ ಎದುರು ಸುಳ್ಳು ಹೇಳಬೇಕಾಗುತ್ತದಲ್ಲ ಎಂಬ ಹಿಂಸೆ ತೇಜಾನಿಗೆ. ಅವರ ಎದುರಿನ ಕುರ್ಚಿಯಲ್ಲಿ ಕುಳಿತು ಮಾತಾಡಿದ.

“ಪೂರ್ತಿ ಬಂಡೇರಹಳ್ಳಿಯವರೆ ಕಲ್ಯಾಣಿಯ ಭಕ್ತರಾಗಿದ್ದಾರೆ ಸರ್! ಅವಳ ವಿರುದ್ಧ ಯಾರೂ ಒಂದು ಮಾತನಾಡಿದರೂ ಅವರು ಸಹಿಸುವುದಿಲ್ಲ. ಅದಕ್ಕಾಗಿ ನಾನು ಮಾಡಬೇಕಾಗಿದ್ದ ಮೊದಲು ಕೆಲಸ ಅಲ್ಲಿಯವರ ವಿಶ್ವಾಸ ಸಂಪಾದಿಸುವುದು. ಅದಕ್ಕೆ ಅವರಲ್ಲಿ ಒಬ್ಬನಾಗಬೇಕಾಯಿತು. ನಾನೇನೂ ದೊಡ್ಡ ಭಾಷಣವನ್ನು ಮಾಡಲಿಲ್ಲ ಸರ್! ಪೋಲಿಸಿನವರಿಗೆ ಹೆದರಬೇಡಿ ಅವರು ನಿಮ್ಮ ಸ್ನೇಹಿತರೇ ಎಂದಷ್ಟೆ ಹೇಳಿದೆ. ಆ ಹಳ್ಳಿಗರ ವಿಶ್ವಾಸ ಸಂಪಾದಿಸಲು ಅವರಲ್ಲಿ ಒಬ್ಬನಾಗಲು ನಾನು ಏನೆಲ್ಲಾ ಮಾಡಬೇಕಾಯಿತೆಂಬ ರಿಪೋರ್ಟು ನಿಮಗೆ ಬಂದಿರಬಹುದು”

ಅವನು ಹೇಳಿದ್ದನ್ನು ಬಹು ಗಮನವಿಟ್ಟು ಕೇಳಿದ ಸ್ಕ್ವಾಡ್‌ನ ಮುಖ್ಯಸ್ಥರು ತಮ್ಮ ನುಣುಪಾದ ಕಪೋಲವನ್ನು ಕೆರೆದುಕೊಂಡು ಹೇಳಿದರು.

“ಈ ರಾಜಕಾರಣಿಯರ ದಬ್ಬಾಳಿಕೆಯಲ್ಲಿ ಯಾವ ಕೆಲಸವೂ ಆಗುವುದು ಕಷ್ಟವಾಗಿ ಹೋಗಿದೆ. ಈ ಸಿ.ಎಂ. ಸಾಹೇಬರ ಕಾರಣವಾಗಿ ಕ್ರಾಂತಿಕಾರಿ ಚಳುವಳಿಯನ್ನು ಬಹಳಮಟ್ಟಿಗೆ ಹತ್ತಿಕ್ಕಲು ಸಾಧ್ಯವಾಗುತ್ತಿದೆ. ನಿನ್ನೆ ಹತ್ತು ಜನಕ್ರಾ೦ತಿಕಾರಿಯರು ಗುಂಡಿನೇಟಿಗೆ ಬಲಿಯಾದರು. ಇನ್ನೂ ಹದಿನೈದು ಜನ ಶರಣಾಗತರಾಗಿದ್ದಾರೆ. ಅಂತಹದರಲ್ಲಿ ಈ ಕಲ್ಯಾಣಿಯನ್ನು ಮುಗಿಸಲು ನಮಗ್ಯಾಕಿಷ್ಟು ಕಷ್ಟವಾಗುತ್ತಿದೆಯೋ ಅರ್ಥವಾಗುತ್ತಿಲ್ಲ”

“ಅದಕ್ಕೆ ಕಾರಣ ಅವಳು ಎಲ್ಲರಂತಹ ಕ್ರಾಂತಿಕಾರಿ ಅಲ್ಲವೇನೋ ಸರ್” ಅವರ ಮಾತು ಮುಗಿಯುತ್ತಲೇ ತನ್ನ ಅನಿಸಿಕೆಯನ್ನು ಮುಂದಿಡುವಂತೆ ಹೇಳಿದ ತೇಜಾ.

“ದೇವನಹಳ್ಳಿ ಪಟವಾರಿಯೂ ಅದನ್ನೇ ಹೇಳುತ್ತಿದ್ದ. ಅವಳು ಕ್ರಾಂತಿಕಾರಿ ಅಲ್ಲ ಸಮಾಜಸೇವಕಳೆಂದು ಮರೆತದನ್ನು ಜ್ಞಾಪಿಸಿಕೊಳ್ಳುವಂತೆ ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು. ಅವರ ಮಾತು ತೇಜಾನಲ್ಲಿ ಆಶ್ಚರ್ಯ ಹುಟ್ಟಿಸಿತು. ಕೂಡಲೇ ಹೇಳಿದ

“ನೀವೇ ನೋಡಿ ಸರ್! ಒಬ್ಬ ಧನವಂತನ ಅಭಿಪ್ರಾಯ ಅವಳ ಬಗ್ಗೆ ಹಾಗಿದ್ದರೆ ಇನ್ನು ಬಡಬಗ್ಗರದಿನ್ನೆಷ್ಟಿರಬಹುದು… ಇದು ಸುಲಭವಾಗಿ ಪರಿಹಾರವಾಗುವ ಸಮಸ್ಯೆ ಅಲ್ಲ ಸರ್! ಇದನ್ನು ಪರಿಹರಿಸಲು ಅವಳನ್ನು ಶರಣಾಗತಳಾಗುವಂತೆ ಮಾಡಲು ಸಮಯ ಬೇಕು. ಈಗ ನೀವೇ ಹೇಳಿ ನಾನೇನು ಮಾಡಲಿ”

ಸುಳ್ಳು, ಸತ್ಯಗಳನ್ನು ಬೆರೆಸಿ ಅವನಾಡಿದ ಮಾತು ಬಹಳ ಪ್ರಭಾವಕಾರಿಯಾಗಿತ್ತು. ಇನ್ನೊಂದು ಕಪೋಲ ತುರಿಸಿಕೊಳ್ಳುವುದನ್ನು ನಿಲ್ಲಿಸಿ ಗಂಭೀರ ದನಿಯಲ್ಲಿ ಹೇಳಿದರವರು.

“ಇದು ಕಷ್ಟಕರ ಕೆಲಸವೆಂಬುವುದು ನನಗೂ ಗೊತ್ತು. ಆದರದು ಈ ದರಿದ್ರ ರಾಜಕಾರಣಿಯರಿಗೆ ತಿಳಿಯಬೇಕಲ್ಲ! ಸಿ. ಎಂ. ಸಾಹೇಬರೇನೋ ನಾ ಹೇಳಿದ್ದಕೆಲ್ಲಾ ಒಪ್ಪುತ್ತಾರೆ. ಆದರೆ ನಡುವಿರುವ ಚಮಚಾಗಳದೇ ಗೋಳು. ಅವರಿಗೂ ತಮ್ಮ ಕುರ್ಚಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನೋಡು ಈ ಸಾಮಾನ್ಯ ಪಂಚಾಯತಿ ಪ್ರಸಿಡೆಂಟ್‌ನೇ ಅವರ ಮೇಲೆ ಎಲ್ಲಿಂದಲೋ ಒತ್ತಡ ತಂದಿರಬೇಕು. ಅದರಿಂದಾಗಿ ನಾನು ನಿನ್ನೊಡನೆ ಮಾತಾಡಲು ಇಲ್ಲಿಯವರೆಗೆ ಬರಬೇಕಾಯಿತು… ಹೋಗಲಿ ಈ ನಾಯಕನ್ಯಾಕೆ…”

ಅವರ ಮಾತು ಮುಗಿಯುವ ಮುನ್ನ ಸುತ್ತೂ ಒಮ್ಮೆ ನೋಡಿ ಮೆಲ್ಲನೆಯ ದನಿಯಲ್ಲಿ ಹೇಳಿದ ತೇಜಾ

“ಅವನು ನನ್ನ ಮೇಲೆ ರೋಪ್ ಹಾಕಲು ಪೋಲಿಸ್ ಸ್ಟೇಷನ್‌ಗೆ ಬಂದಿದ್ದ. ಬಾಯಿ ಜಾರಿ ಏನೋ ಮಾತಾಡಿದ ಭಯವಿರಲಿ ಎಂದು ಇಲ್ಲಿ ಎಳೆತಂದೆ”

ಸ್ಕ್ವಾಡ್‌ನ ಮುಖ್ಯಸ್ಥರ ಹುಬ್ಬುಗಳು ಮೇಲೇರಿದವು. ಕಲಕ್ಷಣಗಳು ಯೋಚಿಸಿ ಕೇಳಿದರು.

“ಕಲ್ಯಾಣಿಯನ್ನು ಬಂಧಿಸಲು, ಕನಿಷ್ಠ ಅವಳ ಠಿಕಾಣಿಯ ಪತ್ತೆ ಹಚ್ಚಲು ನಿನಗೆಷ್ಟು ಸಮಯ ಬೇಕು”

ತಾನು ಯೋಚಿಸಿದಂತೆ ಮಾಡಿ ಮಾತಾಡಿದ ತೇಜಾ.

“ಏನಿಲ್ಲವೆಂದರೂ ಇನ್ನೂ ಮೂರು ತಿಂಗಳಾದರೂ ಬೇಕು ಸರ್!…. ಮುಖ್ಯವಾಗಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು…”

“ಅಂದರೆ?” ಅವನು ಮಾತು ಮುಗಿಸುವ ಮುನ್ನ ಮತ್ತೆ ಹುಬ್ಬೇರಿಸಿ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಈ ಸಿದ್ಧಾನಾಯಕ್‌ನ ಅಲ್ಲಿ ಎರಡು ಸಾರಾಯಿ ಖಾನೆಗಳಿವೆ. ಅವು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತೆಗೆದಿರುತ್ತಿದ್ದವು. ಮೊದಲು ಅದನ್ನು ನಾನು ನಿಯಂತ್ರಿಸಿದೆ. ಆದರೆ ನಮ್ಮ ಪೇದೆಗಳು ಲಂಚ ತೆಗೆದುಕೊಂಡು ಮತ್ತೆ ಎಲ್ಲಾ ಮೊದಲಿನಂತೆ ಆಯಿತು. ಅಲ್ಲಿ ಇವನ ಲಾಟರಿ ಟಿಕೆಟ್‌ಗಳನ್ನು ಮಾರುವ ಅಂಗಡಿಯಿದೆ. ಅದರಿಂದ ಕೆಲ ಹಳ್ಳಿಗರಲ್ಲಿ ಜನ ಭಿಕಾರಿಗಳಾಗಿದ್ದರೆ. ಅದನ್ನು ಮುಚ್ಚಿಸಬೇಕು. ಆ ಹಳ್ಳಿಯ ಕೆಲ ಯುವಕರನ್ನು ನಾನು ನಿಯಮಿಸಿಕೊಂಡು ಅವರಿಂದ ಕೆಲಸ ತೆಗೆದುಕೊಳ್ಳುವ ಅನುಮತಿ ಬೇಕು. ಈ ಸಿದ್ಧಾನಾಯಕ್ ಕೆಲ ರೌಡಿಯರನ್ನು ಸಾಕಿದ್ದಾನಂತೆ ಅವರನ್ನು ಹದ್ದು ಬಸ್ತಿನಲ್ಲಿ ತರಬೇಕು. ಆಗ ಅಲ್ಲಿ ಕಲ್ಯಾಣಿಗಿಂತ ಪೋಲೀಸಿನವರ ಪ್ರಾಮುಖ್ಯತೆ ಹೆಚ್ಚುತ್ತದೆ. ನನಗೆ ಸ್ವಾತಂತ್ರ್ಯ ಬೇಕು ಎಂಬುದು ಇದೇ ಅರ್ಥದಲ್ಲಿ ಅವರ ಒಂದು ಶಬ್ದದ ಪ್ರಶ್ನೆಗೆ ಉದ್ದನೆಯ ವಿವರಣೆ ಕೊಟ್ಟ ತೇಜಾ. ಈ ಸಲ ಕುರ್ಚಿಯಿಂದೇಳುತ್ತಾ ಯಾವುದೋ ನಿರ್ಣಯ ತೆಗೆದುಕೊಂಡಂತೆ ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು.

“ನಾನೇ ಬಂಡೇರಹಳ್ಳಿಗೆ ಬಂದು ಎಲ್ಲಾ ನೋಡುತ್ತೇನೆ… ಈ ನಾಯಕ ಏನು ಹೇಳಿದ”

“ಈ ಚಿಕ್ಕ ಹಳ್ಳಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ ಇರುವ ಪೋಲಿಸ್ ಸ್ಟೇಷನ್ ಯಾಕೆ? ಕಲ್ಲಕ್ಕ ಬಂಡೇರಹಳ್ಳಿಯ ಕಾಡುಗಳಲ್ಲಿಲ್ಲ ನಿನ್ಯಾಕೆ ಇಲ್ಲಿದ್ದಿ ಎಂದು…”

“ಸಾಕು! ಇವನಿಗೂ ಕಲ್ಲಕ್ಕನಿಗೂ ಯಾವ ನೆಂಟೂ ಇಲ್ಲ ತಾನೆ?” ಅವನ ಮಾತನ್ನು ನಡುವೆ ತಡೆದು ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು.

“ಇಲ್ಲ ಸರ್! ಅದು ನಾ ಹುಟ್ಟಿಸಿದ್ದು” ಮೆಲ್ಲನೆಯ ದನಿಯಲ್ಲಿ ಹೇಳಿದ ತೇಜಾ.

“ಕಾಫಿ ಬರುತ್ತದೆ. ಕುಡಿಯುತ್ತಾ ಕುಳಿತಿರು ನಾನೀಗ ಬಂದೆ” ಎಂದು ಅವರು ಎಸ್.ಪಿ.ಯವರ ಚೇಂಬರಿನಿಂದ ಹೊರಬಿದ್ದರು.

ಪಕ್ಕದ ಕೋಣೆಯ ಸೋಫಾದಲ್ಲಿ ಕುಳಿತಿದ್ದರು ನಾಯಕ್ ಮತ್ತು ಎಸ್.ಪಿ. ಸಾಹೇಬರು. ಸ್ಕ್ವಾಡಿನ ಮುಖ್ಯಸ್ಥರು ಅವರಿಗಿಂತ ಸೀನಿಯರ್ ಆದಕಾರಣ ಅವರು ಒಳಬರುತ್ತಲೇ ಎದ್ದರು ಎಸ್.ಪಿ. ಸಾಹೇಬರು. ನಾಯಕರೂ ದಯನೀಯ ಮುಖ ಮಾಡಿ ಎದ್ದರು.

“ಇವರು ಪಟ್ಟಣದಿಂದ ಬಂದಿರುವ ಹಿರಿಯ ಅಧಿಕಾರಿ, ಇವರು ಸಿದ್ಧಾನಾಯಕರು ಸರ್ ಬಂಡೇರಹಳ್ಳಿಯ ಪಂಚಾಯಿತಿ ಪ್ರಸಿಡೆಂಟರು”

ಪರಿಚಯ ಮಾಡಿಸುವ ಕೆಲಸವನ್ನು ಮುಗಿಸಿದರು ಎಸ್.ಪಿ. ಸಾಹೇಬರು. ಸ್ವಲ್ಪ ಬಾಗಿ ಎರಡೂ ಕೈಗಳನ್ನು ಜೋಡಿಸಿದರು ಸಿದ್ಧಾನಾಯಕ್. ಸ್ಕ್ವಾಡಿನ ಮುಖ್ಯಸ್ಥರ ಸೂಟು, ಮುಖದ ಮೇಲಿನ ಕಳೆ ಅವರ ಮೇಲೆ ಬಹಳ ಪ್ರಭಾವ ಬೀರಿತು.

“ಕೂಡಿ… ಕೂಡಿ… ನಿಮ್ಮ ಹೆಸರನ್ನು ಬಹಳ ಕೇಳಿದ್ದೇನೆ ನಾಯಕರೇ ಆಗಾಗ ಅಸೆಂಬ್ಲಿಯಲ್ಲಿ ಮಂತ್ರಿಯರೂ ನಿಮ್ಮ ಬಗ್ಗೆ ಮಾತಾಡುತ್ತಿರುತ್ತಾರೆ”

ಪ್ರಶಂಸೆ ತುಂಬಿದ ದನಿಯಲ್ಲಿ ಹೇಳುತ್ತಾ ಎಸ್.ಪಿ.ಯವರ ಬದಿಯಲ್ಲಿ ಕುಳಿತರು.

“ಅದೆಲ್ಲಾ ಆ ಪರಮಾತ್ಮನ ದಯೆ ಸ್ವಾಮಿ” ಬಹು ವಿನಮ್ರ ದನಿಯಲ್ಲಿ ಹೇಳಿದ ನಾಯಕ

“ನಾನು ಸಿ.ಎಂ. ಸಾಹೇಬರ ಆಜ್ಞೆಯ ಮೇರೆಗೆ ತನಿಖೆ ಮಾಡಲು ಬಂದಿರುವೆ. ಈ ಇನ್ಸ್‌ಪೆಕ್ಟರ್ ಅಲ್ಲಿನ ಲೀಡರ್ ಆಗುವ ಕೆಲಸ ಆರಂಭಿಸಿದ್ದಾನಂತಲ್ಲ” ಬಹು ಗಂಭೀರ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಹೌದು ಸ್ವಾಮಿ! ನಿನ್ನೆ ಅಲ್ಲೊಂದು ಕಾರ್ಯಕ್ರಮ ಏರ್ಪಡಿಸಿ ಭಾಷಣ ಮಾಡಿದ್ದಾರೆ. ಅದು ಪೋಲಿಸಿನವರ ಕೆಲಸವೇ?”

ದೂರು ಕೊಡುವಂತಹ ದನಿಯಲ್ಲಿ ಮಾತಾಡಿದರು ನಾಯಕ್

“ಅಲ್ಲ… ಅಲ್ಲ… ಅದು ಪೋಲಿಸಿನವರ ಕೆಲಸ ಖಂಡಿತ ಅಲ್ಲ. ಅದೆಲ್ಲಾ ನಿಮ್ಮಂತಹವರು ಮಾಡಬೇಕಾದ ಕೆಲಸ… ರಾಮನಗರದಲ್ಲಿ ನಿಮ್ಮ ಬಾರುಗಳು ಎಷ್ಟಿವೆ?” ಮೊದಲ ಮಾತನ್ನು ವ್ಯಂಗ್ಯದ ದನಿಯಲ್ಲಿ ಪ್ರಶ್ನೆಯನ್ನು ಗಂಭೀರ ದನಿಯಲ್ಲಿ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಎರಡಿದೆ ಸ್ವಾಮಿ!… ಯಾಕೆ ನಾನು ಬಾರುಗಳ ಮಾಲಿಕನಾಗುವುದು ಕಾನೂನಿನ ವಿರುದ್ಧವೇ” ದಿಟ್ಟ ದನಿಯಲ್ಲಿಯೇ ಮಾತಾಡಿದರು ನಾಯಕ.

“ಛೇ, ಛೇ, ಈ ಕಾಲದಲ್ಲಿ ಯಾರೂ ಬೇಕಾದರೂ ಶ್ರೀಮಂತನಾಗ ಬಹುದು. ಅದರ ಮೇಲಿಂದ ನೀವು ಪಂಚಾಯಿತಿ ಪ್ರಸಿಡೆಂಟು, ಶ್ರೀಮಂತ ರಾಗದೇ ಇರಲು ಸಾಧ್ಯವೆ! ಇಲ್ಲಿ ಎರಡು ಬಾರುಗಳಿವೆ. ಬಂಡೇರಹಳ್ಳಿಯಲ್ಲಿ ಎರಡು ಸಾರಾಯಿಖಾನೆಗಳಿವೆ. ಅದು ಅಪರಾಧವಲ್ಲವೇ ಅಲ್ಲ. ಆದರೆ ಕಲ್ಲಕ್ಕನಿಗೆ ಮಾಮೂಲು ಕೊಡುವುದು ಅಪರಾಧ. ಅಂತಹವರನ್ನು ನಾವಿಲ್ಲಿ ಮಾತಾಡಿಸುವುದಿಲ್ಲ ಪಟ್ಟಣದ ಕಂಟ್ರೋಲ್‌ರೂಂನಲ್ಲಿ ಮಾತಾಡಿಸುತ್ತೇವೆ” ಗಂಭೀರ ದನಿಯಲ್ಲಿ ಸಾಮಾನ್ಯ ವಿಷಯ ಹೇಳುತ್ತಿರುವಂತೆ ಮಾತಾಡಿದರು ಶ್ರೀವಾಸ್ತವ.

“ಯಾರು ಹೇಳಿದರು ಸರ್ ನಾನು ಕಲ್ಲಕ್ಕನಿಗೆ ಮಾಮೂಲು ಕೊಡುತ್ತಿದ್ದೇನೆಂದು. ಆ ಇನ್ಸ್‌ಪೆಕ್ಟರನೇ ಅವನೆ…”

“ನಾಯಕ್! ಇದು ನಿಮ್ಮ ಊರಿನ ಪಂಚಾಯಿತಿಯಲ್ಲ. ನಿಧಾನವಾಗಿ ಮರ್ಯಾದೆಯಾಗಿ ಮಾತಾಡಿ” ನಾಯಕನ ಮಾತನ್ನು ಕತ್ತರಿಸಿ ಕಟುವಾದ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. ನಾಯಕನಿಗೆ ಭಯ ತೊಲಗಿ ಆವರೆಗೆ ಬಹಳ ಧೈರ್ಯ ಬಂದುಬಿಟ್ಟಿತ್ತು. ಅದಕ್ಕೆ ಎಸ್.ಪಿ.ಯವರ ಮಾತುಗಳೂ ಸಹಕಾರ ನೀಡಿದ್ದವು. ತನ್ನನು ತಾನು ಸಂಭಾಳಿಸಿಕೊಂಡು ಮಾತಾಡಿದ ನಾಯಕ್.

“ಆ ಇನ್ಸ್‌ಪೆಕ್ಟರ್ ಸುಳ್ಳು ಹೇಳುತ್ತಿದ್ದಾರೆ ಸರ್! ಅವರ ಬಳಿ ಅದಕ್ಕೇನಾದರೂ ಪುರಾವೆಗಳಿವೆಯೇ?”

ಅವನು ಸ್ವಾಮಿಯಿಂದ ಸರ್‌ಗೆ ಬಂದದ್ದು ಸ್ಕ್ವಾಡಿನ ಮುಖ್ಯಸ್ಥರ ಗಮನಕ್ಕೆ ಬಂತು. ಕಟುವಾದ ದನಿಯಲ್ಲಿ ಹೇಳಿದರು.

“ಇದು ಕ್ರಾಂತಿಕಾರಿಯರಿಗೆ ಸಂಬಂಧಿಸಿದ ವಿಷಯ ಇದರಲ್ಲಿ ನಾವು ಪುರಾವೆ, ಸಾಕ್ಷಿಗಳನ್ನು ಹುಡುಕಲು ಹೋಗುವುದಿಲ್ಲ. ಇದಕ್ಕಿಂತ ಮೊದಲು ನೀವೇ ಕೇಳಿದ್ದೀರಿ ಯಾರು ಹೇಳಿದರೆಂದು. ಈ ವಿಷಯಗಳೂ ನಮಗೆ ಯಾರೂ ಹೇಳುವುದಿಲ್ಲ, ಗೊತ್ತಾಗುತ್ತವೆ. ಬಂಡೇರಹಳ್ಳಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಇರುವ ಪೋಲಿಸ್ ಸ್ಟೇಷನ್ ಯಾಕೆಂದು ಕೇಳಿದಿರಂತೆ ಅದು ನಿಮಗೆ ಸಂಬಂಧಿಸಿದ ವಿಷಯವೇ! ಪಂಚಾಯತಿ ಪ್ರಸಿಡೆಂಟರಾಗಿ ಅಲ್ಲಿ ಅದು ಬೇಡವಾಗಿದ್ದರೆ ಬರೆದುಕೊಡಿ ನಾನು ಸಿ.ಎಂ. ಸಾಹೇಬರೊಡನೆ ಮಾತಾಡಿ ಅದು ಯಾಕೆಂಬ ವಿವರ ಬರೆದು ಕಳಿಸುವಂತೆ ಹೇಳುತ್ತೇನೆ… ಇನ್ನೂ ನಿಮ್ಮೊಡನೆ ಬಹಳ ಮಾತಾಡಬೇಕು. ನಾ ನಿಮ್ಮ ಹಳ್ಳಿಗೆ ಬರುತ್ತಿದ್ದೇನೆ ಅಲ್ಲಿ ಬಂದು ನನಗಾಗಿ ಕಾದಿರಿ”

ಎಂದ ಸ್ಕ್ವಾಡಿನ ಮುಖ್ಯಸ್ಥರು ಮಾತು ಮುಗಿದಂತೆ ಅಲ್ಲಿಂದೆದ್ದರು.

ಪೇದೆಯೊಬ್ಬ ತಂದುಕೊಟ್ಟ ಕಾಫಿಯನ್ನು ಕುಡಿದು ಮುಗಿಸಿ ಕಾಯುತ್ತಿದ್ದ ತೇಜಾ. ಆ ಕೋಣೆಯಲ್ಲಿ ಬಂದವರೆ ತಮ್ಮ ಜತೆಗಿದ್ದ ಎಸ್.ಪಿ.ಯವರಿಗೆ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.

“ಇವರ ಜೀಪನ್ನು ನೀವು ಯಾರೊಡನೆ ಆದರೂ ಬಂಡೇರಹಳ್ಳಿಗೆ ಕಳಿಸಿ. ನಾವಿಬ್ಬರೂ ನನ್ನ ಕಾರಿನಲ್ಲಿ ಹೋಗುತ್ತಿದ್ದೇವೆ. ಸಿ.ಎಂ. ಸಾಹೇಬರು ಹೇಳಿದ ಒಂದು ಮಾತನ್ನು ನಾನೀ ಇನ್ಸ್‌ಪೆಕ್ಟರ್ ಮುಂದೆಯೇ ಹೇಳಬಯಸುತ್ತೇನೆ. ಬಂಡೇರಹಳ್ಳಿಗೆ ಅದೇ ಅಲ್ಲ ಈ ಜಿಲ್ಲೆಯ ಎಲ್ಲಾದರೂ ಕ್ರಾಂತಿಗಳ ಉಪಟಳವಾದರೆ ಅದನ್ನು ಇನ್ಸ್‌ಪೆಕ್ಟರ್‌ ಉತ್ತೇಜ್ ನೋಡಿಕೊಳ್ಳುತ್ತಾರೆ. ನೀವು ಅವರಿಗೆ ಸಹಾಯ ಮಾಡಬೇಕಷ್ಟೆ. ಕ್ರಾಂತಿಕಾರಿಯರಿಗೆ ಸಂಬಂಧಿಸಿದ ಯಾವ ವಿಷಯದಲ್ಲೂ ನೀವು ತಲೆ ಹಾಕಬಾರದು. ತಿಳಿಯಿತೆ”

“ಸರಿ ಸರ್” ಎಂದರು ಎಸ್.ಪಿ. ಸಾಹೇಬರು. ಸ್ಕ್ವಾಡಿನ ಮುಖ್ಯಸ್ಥರು ಹೊರಹೋಗುತ್ತಿದ್ದಂತೆ ಎಸ್.ಪಿ. ಸಾಹೇಬರಿಗೆ ಸೆಲ್ಯೂಟ್ ಹಾಕಿ ಅವರನ್ನು ಹಿಂಬಾಲಿಸಿದ ತೇಜಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ವರ್ಷ
Next post ಹೂವಿನ ಸುಗ್ಗಿ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys