ಅಧ್ಯಾಪಕರಿಗೆ ಕಿವಿಮಾತು

ಅಧ್ಯಾಪಕರಿಗೆ ಕಿವಿಮಾತು

೧. ಅಧ್ಯಾಪಕರು ತರಗತಿಯಲ್ಲಿ ಸ್ಪಷ್ಟವಾಗಿ ಹಾಗೂ ಎಲ್ಲರಿಗೂ ಕೇಳಿಸುವಂತೆ ಮಾತು ಉಚ್ಚರಿಸುವುದು ಅಗತ್ಯ. ಮಾತು ಸ್ವಲ್ಪ ನಿಧಾನವಾದರೂ ಪರವಾಯಿಲ್ಲ, ಸ್ಪಷ್ಟತೆ ಮುಖ್ಯ. ಯಾಕೆಂದರೆ, ಯಾವುದೇ ವಿದ್ಯಾರ್ಥಿಗೆ ಅಧ್ಯಾಪಕರ ಮಾತಿನಲ್ಲಿ ಒಂದು ಪದ ಸ್ಪಷ್ಟವಾಗದಿದ್ದರೂ ಆತ ಕಸಿವಿಸಿಗೊಳ್ಳುತ್ತಾನೆ; ತನ್ನ ಹತ್ತಿರದಲ್ಲಿ ಕೂತವನನ್ನು ಕೇಳಿ ಆತನಿಗೆ ತೊಂದರೆಯುಂಟುಮಾಡುತ್ತಾನೆ. ಹೀಗೆ ಇಡೀ ದಿನ ಮಾತಾಡುವುದು ಕಷ್ಟವಲ್ಲವೇ ಎನ್ನಬಹುದು. ಆದರೆ ಇಡೀ ಪೀರಿಯಡ್ ಅಧ್ಯಾಪಕರೊಬ್ಬರೇ ಮಾತಾಡಬೇಕೆಂದಿಲ್ಲ. ವಿದ್ಯಾರ್ಥಿಗಳನ್ನೂ ಇಡೀ ತರಗತಿ ಉದ್ದೇಶಿಸಿ ಮಾತಾಡುವಂತೆ ಪ್ರೋತ್ಸಾಹಿಸಬಹುದು. ಅವರಿಗೆ ಪಾಠಕ್ಕೆ ಸಂಬಂಧಿಸಿದಂಥ ಸಣ್ಣ ಸಣ್ಣ ಕೆಲಸಗಳನ್ನು ಕೊಡಬಹುದು.

೨. ಹಾಜರಿ ಕರೆಯುವಾಗ ಸಂಖ್ಯೆ ಕರೆಯದೆ, ವಿದ್ಯಾರ್ಥಿಗಳನ್ನು ಅವರವರ ಹೆಸರಿನಿಂದ ಕರೆಯಿರಿ; ಹಾಗೂ ಅವರನ್ನು ಹೆಸರಿನಿಂದ ಗುರುತಿಸಿಕೊಳ್ಳಿ.

೩. ಕೋಣೆಯ ಮೇಲ್ಛಾವಣಿ ಅಥವಾ ಕಿಟಿಕಿಯಾಚೆ ನೋಡುತ್ತ ಪಾಠಮಾಡಬೇಡಿ; ವಿದ್ಯಾರ್ಥಿಗಳ ಜತೆ ಚಕ್ಷುಸಂಪರ್ಕ ಅಗತ್ಯ. ಆದರೆ ಯಾವಾಗಲೂ ಕೆಲವೇ ಕೆಲವರನ್ನು ನೋಡುತ್ತಲೂ ಇರಬಾರದು. ತರಗತಿಯ ಎಲ್ಲಾ ಕಡೆ ಗಮನ ಇರಬೇಕು.

೪. ‘ಗೊತ್ತಾಗದಿದ್ದರೆ ಕೈಯೆತ್ತಿ’ ಎಂದು ವಿದ್ಯಾರ್ಥಿಗಳು ಸ್ಪಷ್ಟನೆ ಅಥವಾ ವಿವರಣೆ ಕೇಳುವಂತೆ ಪ್ರೋತ್ಸಾಹಿಸಬೇಕು. ಕೆಲವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಹಲವಾರು ಸಂದೇಹಗಳಿರುತ್ತವೆ. ಅವುಗಳನ್ನು ಕೇಳುವ ಧೈರ್ಯ ಮಾತ್ರ ಇರುವುದಿಲ್ಲ. ಕೇಳಿದರೆ ತಾನು ದಡ್ಡನೆಂದು ಅನಿಸಿಕೊಳುತ್ತೇನೆ ಎನ್ನುವುದೇ ಹಲವರ ಭಯ. ಕೆಲವು ಅಧ್ಯಾಪಕರು ಕೂಡಾ ಇಂಥ ಪ್ರಶ್ನೆಗಳಿಗೆ ಸಿಟ್ಟಾಗುವುದಿದೆ. ಆದರೆ ಸಂದೇಹಗಳುಳ್ಳ ವಿದ್ಯಾರ್ಥಿಯೇ ಚಿಂತಿಸುವುದು ಎನ್ನುವುದನ್ನು ತಿಳಿದಿರಬೇಕು. ಹಾಗೂ ಅತ್ಯಂತ ‘ದಡ್ಡ’ ಪ್ರಶ್ನೆಗಳನ್ನು ಕೇಳುವವನೇ ಅಭ್ಯಾಸದ ಪುರೋಗತಿಗೆ ಕಾರಣನಾಗುವವನು.

೫. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುವಾಗ ಮೊದಲೇ ಹೆಸರು ಕರೆಯದೆ, ಪ್ರಶ್ನೆ ಕೇಳಿದ ಸ್ವಲ್ಪ ಸಮಯದ ನಂತರ ಉತ್ತರಿಸಬೇಕಾದ ವಿದ್ಯಾರ್ಥಿಯ ಹೆಸರು ಕರೆಯುವುದು ಒಳಿತು. ಇದರಿಂದ ಪ್ರತಿಯೊಬ್ಬನಿಗೂ ಯೋಚಿಸಲಿಕ್ಕೆ ಅವಕಾಶ ದೊರಕುತ್ತದೆ.

೬. ವಿದ್ಯಾರ್ಥಿಗಳ ಮಾತುಗಳನ್ನು ಸಂಪೂರ್ಣವಾಗಿ ಕೇಳಬೇಕು. ಅರ್ಧದಲ್ಲಿ ಕತ್ತರಿಸಬಾರದು. ಒಂದು ವೇಳೆ ವಿದ್ಯಾರ್ಥಿಗಳು ಎತ್ತಿದ ಸಂದೇಹಕ್ಕೆ ನಿಮ್ಮಲ್ಲಿ ಉತ್ತರವಿಲ್ಲದಿದ್ದರೆ, ನೋಡಿ ಹೇಳುತ್ತೇನೆ ಎನ್ನಬೇಕು. ನಾನು ಕಾಲೇಜಿನಲ್ಲಿದ್ದಾಗ ನನ್ನ ಪ್ರೀತಿಯ ಇಂಗ್ಲಿಷ್ ಪ್ರೊಫೆಸರ್ ಒಬ್ಬರು ಪದಗಳ ಅರ್ಥದ ಕುರಿತಾಗಿ ಸಂದೇಹವಿದ್ದಾಗಲೆಲ್ಲ ನಮ್ಮಲ್ಲಿ ಯಾರಾದರೂ ಒಬ್ಬರನ್ನು ನಿಘಂಟು ತರಲು ತಮ್ಮ ಛೇಂಬರಿಗೆ ಕಳಿಸುತ್ತಿದ್ದರು. ತಮಗೆ ಎಲ್ಲವೂ ಗೊತ್ತಿದೆ ಎಂಬಂತೆ ಅವರು ಎಂದೂ ನಟಿಸುತ್ತಿರಲಿಲ್ಲ. ಇದರಿಂದ ನಮಗೆ ಅವರ ಕುರಿತಾದ ಗೌರವ ಹೆಚ್ಚಾಯಿತೇ ವಿನಾ ಕಡಿಮೆಯಲ್ಲ.

೭. ಕೇವಲ ಪಾಠದಪಟ್ಟಿಗೆ ಅನುಸಾರವೇ ಕಟ್ಟಿಹಾಕಿಕೊಳ್ಳುವ ಅಗತ್ಯವಿಲ್ಲ; ಪಾಠವೆನ್ನುವುದೊಂದು ಸೃಜನಶೀಲ ಕಲೆ. ಆದ್ದರಿಂದ ಅದು ಅನಿರೀಕ್ಷಿತ ತಿರುವಿನಲ್ಲಿ ಹೊರಳಬಹುದು. ನಾನು ಮೇಲೆ ಹೇಳಿದ ನಮ್ಮ ಇಂಗ್ಲಿಷ್ ಪ್ರೊಫೆಸರ್ ಕೆಲವೊಮ್ಮೆ ನಮಗೆ ಪಠ್ಯಕ್ಕಿಂತ ಹೊರತಾದ ಹಲವು ಕುತೂಹಲಕರ ಸಂಗತಿಗಳನ್ನು ಹೇಳುವುದಿತ್ತು. ಇದರಿಂದ ನಮಗೆ ಅವರಲ್ಲಿ ಆತ್ಮೀಯತೆ ಬೆಳೆಯಿತು.

೮. ಒಬ್ಬ ವಿದ್ಯಾರ್ಥಿಯ ಪ್ರಶ್ನೆಗೆ ಇನ್ನೊಬ್ಬ ವಿದ್ಯಾರ್ಥಿಯಿಂದ ಉತ್ತರ ಹೇಳಿಸುವುದರಿಂದ ಕೆಲವು ಸಲ ಮೊದಲ ವಿದ್ಯಾರ್ಥಿಗೆ ಅವಮಾನವಾದ ಹಾಗಾಗುತ್ತದೆ. ಆದರೆ ವಿಚಾರ ವಿನಿಮಯದಂಥ ಸಂಸ್ಕೃತಿಯೊಂದನ್ನು ತರಗತಿಯಲ್ಲಿ ತರುವುದು ಸಾಧ್ಯವಾದರೆ ಇದನ್ನೊಂದು ಪಾಠಕ್ರಮವಾಗಿ ಉಪಯೋಗಿಸಬಹುದು.

೯. ಕೆಲವು ‘ಜಾಣ’ ವಿದ್ಯಾರ್ಥಿಗಳು ಅವಕಾಶಗಳನ್ನು ದೋಚುವುದಿದೆ. ಉದಾಹರಣೆಗೆ, ಎಲ್ಲಾ ಪ್ರಶ್ನೆಗಳಿಗೂ ತಾವೇ ಉತ್ತರಿಸುವುದು. ಇದಕ್ಕೆ ಎಡೆಕೊಡದೆ, ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. ಹಾಗೂ ವಿದ್ಯಾರ್ಥಿಯ ಉತ್ತರ ನೂರಕ್ಕೆ ನೂರರಷ್ಟು ಸಮರ್ಪಕವಲ್ಲದಿದ್ದರೂ, ಆ ಉತ್ತರವನ್ನು ಸರಿಪಡಿಸಿ ಅದು ಆತನದೇ ಉತ್ತರ ಎಂಬ ಭಾವ ಬರಿಸಬೇಕು.

೧೦. ಇದು ಸ್ಪರ್ಧಾತ್ಮಕ ಯುಗ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಯಾವ ಯುಗವೂ ಕೇವಲ ಸ್ಪರ್ಧಾತ್ಮಕವಾಗಿರುವುದು ಸಾಧ್ಯವಿಲ್ಲ; ಜಗತ್ತಿನ ಬೆಳವಣಿಗೆಗೆ ಸಹಕಾರವೂ ಅಗತ್ಯ. ಕಲಿಯುವ ಕ್ರಿಯೆ ಸಹಕಾರಾತ್ಮಕವಾಗಿದ್ದಲ್ಲಿ ಅನಗತ್ಯದ ಆತಂಕಗಳಿಗೆ ಎಡೆಯಿರುವುದಿಲ್ಲ. ವಿದ್ಯಾರ್ಥಿಗಳಲ್ಲಿ ಇಂಥ ಸಹಕಾರ ತತ್ವ ತರಗತಿಯಲ್ಲಿ ಆರಂಭವಾಗಬೇಕು. ಗುಂಪು ಕಲಿಕೆ ಇದಕ್ಕೊಂದು ಉದಾಹರಣೆ. ವಿಷಯಗಳಿಗೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳಿದ್ದರೆ ಅವನ್ನು ಸಂಗ್ರಹಿಸಿ ಇಡೀ ಕ್ಲಾಸಿನ ಜತೆ ಹಂಚಿಕೊಳ್ಳುವ ಆಭ್ಯಾಸ ಮಾಡಿಸಿದರೆ, ಕಲಿಕೆಯೆನ್ನುವುದು ವೈಯಕ್ತಿಕವಲ್ಲ, ಸಾಮೂಹಿಕ ಎಂಬ ಮನೋಭಾವನೆ ಬಂದೀತು.

೧೧. ಆಧುನಿಕ ತಂತ್ರಜ್ಞಾನ ಎಷ್ಪೇ ಮುಂದುವರಿದರೂ, ತರಗತಿಯಲ್ಲಿ ಕರಿಹಲಗೆ ಮತ್ತು ಸುಣ್ಣದ ಕಡ್ಡಿಯಷ್ಟು ಅನುಕೂಲಕರವಾದ ಸಲಕರಣೆ ಬೇರೆ ಇಲ್ಲ. ಕರಿಹಲಗೆಯ ಉಪಯೋಗವನ್ನು ಸಾಕಷ್ಟು ಮಾಡಿಕೊಳ್ಳಬೇಕು. ಕರಿಹಲಗೆಯಲ್ಲಿ ಬರೆಯುವಾಗ ಅಧ್ಯಾಪಕರು ಹಲಗೆಗೆ ಮುಖಮಾಡಿ ಮಾತಾಡುವುದಿದೆ. ಇದು ಸರಿಯಲ್ಲ. ಬರೆಯುವಾಗ ಮಾತಾಡದಿರುವುದು ಒಳ್ಳೆಯದು. ವಿದ್ಯಾರ್ಥಿಗಳು ಅದನ್ನು ನಕಲುಮಾಡಿಕೊಳ್ಳುವುದು ಅಗತ್ಯವಾದರೆ ಅದಕ್ಕೆ ಸಮಯಾವಕಾಶ ಕೊಡದೆ ತಟ್ಟನೆ ಒರೆಸಬಾರದು. ಬರೆಯಬೇಕಾದ್ದನ್ನು ಎಲ್ಲರೂ ಬರೆದರೇ ಎಂದು ಒಮ್ಮೆ ವಿಚಾರಿಸಿಕೊಳ್ಳುವುದು ಒಳ್ಳೆಯದು.

೧೨. ಕರಿಹಲಗೆ ಕೇವಲ ಅಧ್ಯಾಪಕರ ಉಪಯೋಗಕ್ಕೆ ಮಾತ್ರವೇ ಅಲ್ಲ; ವಿದ್ಯಾರ್ಥಿಗಳೂ ಅದನ್ನು ಆಗಾಗ ಬಳಸುವಂತಾಗಬೇಕು. ಉದಾಹರಣೆಗೆ, ವಿದ್ಯಾರ್ಥಿಯೊಬ್ಬನು ಕರಿಹಲಗೆಯನ್ನು ಬಳಸಿ ಪ್ರಶ್ನೆಗೆ ಉತ್ತರಿಸಬಹುದು.

೧೩. ಆಗಾಗ ವಿದ್ಯಾರ್ಥಿಗಳಿಂದಲೇ ಇಡೀ ತರಗತಿಗೆ ಪಾಠದ ತುಣುಕುಗಳನ್ನು ಮಾಡಿಸುವುದು ಅಗತ್ಯ. ಇದಕ್ಕೆ ಹಿಂದಿನ ದಿನವೇ ತಿಳಿಸಿದರೆ ಅವರು ಸಿದ್ಧತೆಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ.

೧೪. ಅಧ್ಯಾಪಕರಿಗೆ ಸ್ವಲ್ಪ ಮಟ್ಟಿಗೆ ಚಿತ್ರಮಾಡುವ ಕಲೆಯೂ ಗೊತ್ತಿರಬೇಕು. ಕರಿಹಗೆಯ ಮೇಲೆ ಕೆಲವು ಚಿತ್ರಗಳನ್ನು ಬಿಡಿಸಿ, ಬಿಡಿಭಾಗಗಳನ್ನು ಹೆಸರಿಸಿ ವಿವರಿಸಿದರೆ ಚೆನ್ನಾಗಿರುತ್ತದೆ. ಬಣ್ಣ ಬಣ್ಣದ ಬಳಪಗಳನ್ನೂ ಉಪಯೋಗಿಸಬಹುದು. ಬೇರೆ ಬೇರೆ ವಿಷಯಗಳನ್ನು ವಿವರಿಸಲು, ನೆನಪಿಟ್ಟುಕೊಳ್ಳಲು ಸಹಾಯಕವಾದ ಬೇರೆ ಬೇರೆ ಚಿತ್ರ ಪದ್ಧತಿಗಳಿವೆ.

೧೫. ನಿಂತಲ್ಲೇ ನಿಂತು ಪಾಠಮಾಡಬೇಡಿ. ವಿದ್ಯಾರ್ಥಿಗಳ ಜತೆ ಬೆರೆಯಿರಿ. ಯಾರಿಗೆ ಏನು ಸಹಾಯ ಬೇಕೋ ಅಲ್ಲಿಗೆ ಹೋಗಿ ಸಹಾಯ ಮಾಡಿ. ತರಗತಿ ಗತಿಶೀಲವಾಗಿರಲಿ. ‘ಸೂಜಿ ಬಿದ್ದ ಮೌನ’ವನ್ನು ಬಯಸಬೇಡಿ.

೧೬. ಪಾಠಕ್ರಮದಿಂದ ವಿದ್ಯಾರ್ಥಿಗಳಿಗೆ ಬೇಸರವೆನಿಸತೊಡಗಿದರೆ, ಕ್ರಮ ಬದಲಿಸಿ. ಇದಕ್ಕೆ ಅಧ್ಯಾಪಕರು ಸಾಕಷ್ಟು ಪ್ರತ್ಯುತ್ಪನ್ನಮತಿಗಳಾಗಿರಬೇಕಾಗುತ್ತದೆ. ಸ್ವಲ್ಪ ತಮಾಷೆ, ನಾಟಕೀಯತೆ, ಅನಿರೀಕ್ಷಿತತೆ ತನ್ನಿ. ಉದಾಹರಣೆಗೆ, ಕಾಗದವೊಂದರಲ್ಲಿ ತನ್ನ ಚಿತ್ರ ಬಿಡಿಸುವಂತೆ ಹೇಳಿ! ತಾನೊಬ್ಬ ಅಧ್ಯಾಪಕ ಎಂಬ ಅಹಂ ಬಿಟ್ಟುಕೊಟ್ಟಾಗಲೇ ಅಧ್ಯಾಪಕ ಖುಷಿಯಿಂದಿರುವುದು.

೧೭. ಪಾಠವೆನ್ನುವುದು ಅಧ್ಯಾಪಕ ಕೇಂದ್ರಿತವಾಗಬಾರದು, ವಿದ್ಯಾರ್ಥಿ ಕೇಂದ್ರಿತವಾಗಬೇಕು ಎಂಬ ಹೊಸ ಚಿಂತನೆ ಸ್ವಾಗತಾರ್ಹ. ಆದರೆ ನನ್ನನ್ನು ಕೇಳಿದರೆ, ಪಾಠ ವಿಷಯ ಕೇಂದ್ರಿತವಾಗಿರಬೇಕು, ಅರ್ಥಾತ್ ವಿಷಯದಲ್ಲಿ ಆಸಕ್ತಿ ಹುಟ್ಟಸುವಂತಿರಬೇಕು. ಇದು ಕೇವಲ ಮಾಹಿತಿ ಸಂಗ್ರಹದ ಸಂಗತಿಯಲ್ಲ, ಬದಲಿಗೆ ಅರ್ಥಗಾಹ್ಯದ ಸಂಗತಿ. ಸೇಬು ಹಣ್ಣು ಮರದಿಂದ ಕೆಳಕ್ಕೆ ಬೀಳುವುದಕ್ಕೆ ಭೂಮಿಯ ಗುರುತ್ವಾಕರ್‍ಷಣೆ ಕಾರಣ ಎಂದು ನ್ಯೂಟನ್ ಕಂಡುಹುಡುಕಿದ. ಇಂಥದೇ ಗುರುತ್ವಾಕರ್ಷಣೆ ಭೂಮಿಯ ಸುತ್ತ ಚಂದ್ರನು ಸುತ್ತುವುದಕ್ಕೂ ಕಾರಣ ಎಂದು ಪ್ರತಿಪಾದಿಸಿದಾಗ ಹೆಚ್ಚಿನ ಅರ್ಥ ಉಂಟಾಗುತ್ತದೆ.

೧೮. ವಿಷಯ ಕೇಂದ್ರಿತವಾದ ಚರ್ಚೆಗಳು, ಸಭೆಗಳು, ಭಿತ್ತಿಪತ್ರಗಳು, ಕೈಬರಹದ ಪತ್ರಿಕೆಗಳು, ಸ್ಲೈಡ್ ಶೋಗಳು ಮುಂತಾದವನ್ನು ನಡೆಸುವುದಕ್ಕೆ ಅಧ್ಯಾಪಕರು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಇವು ಕ್ಲಾಸಿನ ಗಡಿಯನ್ನು ದಾಟಿದರೆ ಒಳ್ಳೆಯದು.

೧೯. ಒಂದು ತರಗತಿಯೆಂದರೆ ಅದರಲ್ಲಿ ಎಲ್ಲಾ ತರದ ವಿದ್ಯಾರ್ಥಿಗಳಿರುತ್ತಾರೆ. ಯಾವ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಂದೇಹವಿದೆಯೋ ಅವರ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ತರಗತಿಯಲ್ಲಿ ಯಾರೇ ಫೇಲಾದರೂ ಅದು ಅಧ್ಯಾಪಕರನ್ನು ಬಾಧಿಸಬೇಕಾದ ಸಂಗತಿ.

೨೦. ಅಧ್ಯಾಪಕರ ಬಾಯಲ್ಲಿ ಯಾವುದೇ ಬಯ್ಗುಳ ಪದಗಳು ಬರಬಾರದು. ಅವರು ಯಾರನ್ನೂ ನಿಂದಿಸಬಾರದು. ಯಾವಾಗಲೂ ಹಸನ್ಮುಖರಾಗಿ ಇದ್ದರೆ ಚೆನ್ನಾಗಿರುತ್ತದೆ. ಎಷ್ಟೇ ಕಠಿಣ ಪ್ರಸಂಗದಲ್ಲೂ ವಿದ್ಯಾರ್ಥಿಗಳ ಜತೆ ಕೋಪ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳ ತೇಜೋವಧೆ ಮಾಡಕೂಡದು. ಅವರ ಮನೆಯವರ ಸಂಗತಿ ನಿಮಗೆ ಗೊತ್ತಿದ್ದರೂ ಅದನ್ನು ಇತರರೆದುರು ಪ್ರಸ್ತಾಪಿಸಬಾರದು. ಯಾವುದೇ ವಿದ್ಯಾರ್ಥಿಯ ಕುರಿತಾಗಿ ಪೂರ್ವಾಗ್ರಹ ಉಂಟಾಗುವಂತೆ ಸ್ಟಾಫ್ ರೂಮಿನಲ್ಲಿ ಸಹೋದ್ಯೋಗಿಗಳ ಜತೆ ಹೇಳಬಾರದು.

೨೧. ಕೆಲವು ಅಧ್ಯಾಪಕರಿಗೆ ತಮ್ಮ ಮಕ್ಕಳನ್ನು ಕ್ಲಾಸಿನಲ್ಲಿ ಹೊಗಳುವ ಕೆಟ್ಟ ಚಟವಿರುತ್ತದೆ. ತಮ್ಮ ಹೆಂಡತಿ ಮಕ್ಕಳ ಕುರಿತಾಗಲಿ, ವೈಯಕ್ತಿಕ ಜೀವನದ ಕುರಿತಾಗಲಿ ತರಗತಿಯಲ್ಲಿ ಮಾತಾಡಬಾರದು.

೨೨. ದೇಹಭಾಷೆ ಸಹಾ ನಮ್ಮ ವ್ಯಕ್ತಿತ್ವದ ಅಂಗ. ನಮ್ಮ ನಿಲುವು, ನಡೆ, ಕೂತುಕೊಳ್ಳುವ, ನೋಡುವ ರೀತಿಗೂ ಅರ್ಥವಿರುತ್ತದೆ. ಆಕ್ರಮಣ, ಆಲಸ್ಯ, ಉದಾಸೀನತೆ, ಅವಜ್ಞೆ, ಅತಿವಿನಯ, ದೌರ್ಬಲ್ಯ ಇತ್ಯಾದಿ ತೋರದಂಥ ದೇಹಭಾಷೆ ಮುಖ್ಯ. ಆಡಂಬರವಿರದೆ, ಶುಭ್ರ ಬಟ್ಟೆ ಬರೆಗಳನ್ನು ತೊಡುವ, ಶುಚಿಯಾಗಿರುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ಮೆಚ್ಚುತ್ತಾರೆ. ವಿದ್ಯಾರ್ಥಿಗಳೂ ಹೀಗಿರುವಂತೆ ಅಧ್ಯಾಪಕರು ಪ್ರೋತ್ಸಾಹಿಸುವುದು ಅಗತ್ಯ.

೨೩. ಅಂಗಚೇಷ್ಟೆಗಳನ್ನೋ ಮಾತಿನ ಚೇಷ್ಟೆಗಳನ್ನೋ ಬೆಳೆಸಿಕೊಳ್ಳದಿರಿ. ಇಂಥ ಚೇಷ್ಟೆಗಳಿಂದ ವಿದ್ಯಾರ್ಥಿಗಳು ಗಮನ ಪಾಠದ ಮೇಲಿರಿಸುವುದು ಕಷ್ಟವಾಗುತ್ತದೆ, ಮತ್ತು ಅಧ್ಯಾಪಕರು ಮಕ್ಕಳ ಲೇವಡಿಗೆ ಗುರಿಯಾಗುತ್ತಾರೆ. ನಾನು ಓದುತ್ತಿದ್ದ ಶಾಲೆಯಲ್ಲಿ ಒಬ್ಬರು ಅಧ್ಯಾಪಕರು ಮಾತಾಡುವಾಗಲೆಲ್ಲ ತಮ್ಮ ತಲೆಯಲ್ಲಿನ ಟೊಪ್ಪಿಯನ್ನು ತೆಗೆಯುವುದು, ಮಡಚಿ ಅದಕ್ಕೆ ಕೈಯಿಂದಲೇ ಇಸ್ತ್ರಿಹಾಕಿದಂತೆ ಒತ್ತುವುದು, ಮತ್ತೆ ತಲೆಗೇರಿಸುವುದು ಹೀಗೆ ಪದೇ ಪದೇ ಮಾಡುತ್ತಿದ್ದರು; ಮಾತು ಮಾತಿಗೆ ‘ಗೊತ್ತಾಯಿತಲ್ವಾ?’ ಎಂದೂ ಹೇಳುತ್ತಿದ್ದರು! ಇದರಿಂದ ವಿದ್ಯಾರ್ಥಿಗಳಿಗೆ ಮನರಂಜನೆಯೇನೋ ಸಿಗುತ್ತಿತ್ತು. ಆದರೆ ಇನ್ನೇನಲ್ಲ. ಅವರವರ ಚೇಷ್ಟೆಗಳು ಅವರವರಿಗೇ ಗೊತ್ತಾಗುವುದು ಸುಲಭವಲ್ಲ. ಆದರೆ ಸ್ವಲ್ಪ ಆತ್ಮಪ್ರಜ್ಞೆ ಇರಿಸಿಕೊಂಡರೆ ಇವನ್ನು ಆರಂಭದಲ್ಲೇ ತೊಡೆಯಬಹುದು.

೨೪. ಕೆಲವು ಅಧ್ಯಾಪಕರಿಗೆ ವಿದ್ಯಾರ್ಥಿಗಳನ್ನು ಅಡ್ಡಹೆಸರಿಟ್ಟು ಕರೆಯುವ ಚಟವಿರುತ್ತದೆ. ವಿದ್ಯಾರ್ಥಿಗಳು ಇದನ್ನು ದ್ವೇಷಿಸುತ್ತಾರೆ. ಮಾತ್ರವಲ್ಲ, ಅವರು ಅಧ್ಯಾಪಕರಿಗೂ ಹೀಗೇ ತಿರುಗೇಟು ಕೊಡುವುದಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ.

೨೫. ತರಗತಿಯ ಹೊರಗೆ ಅಧ್ಯಾಪಕರು ಮಾತಾಡಿಸಿದರೆ ವಿದ್ಯಾರ್ಥಿಗಳಿಗೆ ಸಂತೋಷವಾಗುತ್ತದೆ. ಅವರ ಜತೆ ಆಟವಾಡಿದರಂತೂ ತುಂಬಾ ಮೆಚ್ಚುತ್ತಾರೆ. ಆದರೆ ಕೋಮುವಾದ, ರಾಜಕೀಯ, ಭ್ರಷ್ಪಾಚಾರ ಇತ್ಯಾದಿ ಉದ್ರೇಕಕಾರಿ ಸಂಗತಿಗಳ ಬಗ್ಗೆ ಮಾತುಕತೆ ಮಾಡದಿರುವುದು ಒಳ್ಳೆಯದು.

೨೬. ತರಗತಿಯ, ಪಾಠದ, ಅಥವಾ ಸಹಪಾಠಿಗಳ ಕುರಿತಾಗಲಿ ಅವರಿಗೆ ಏನಾದರೂ ಹೇಳುವುದಿದ್ದರೆ ಕರೆದು ಮಾತಾಡಿಸಿ ಕೇಳುವುದು ಒಳ್ಳೆಯದು. ಆದರೆ ಚಾಡಿ ಹೇಳುವುದನ್ನು ಖಂಡಿತಾ ಪ್ರೋತ್ಸಾಹಿಸಬಾರದು. ಅಧ್ಯಾಪಕರು ನಿಪ್ಚಕ್ತಪಾತಿಗಳಾಗಿದ್ದರೆ ಸಾಲದು, ಹಾಗೆಂದು ವಿದ್ಯಾರ್ಥಿಗಳಿಗೆ ಗೊತ್ತಾಗಲೂ ಬೇಕು. ವಿದ್ಯಾರ್ಥಿಗಳಿಗೆ ತಮ್ಮ ಬಗ್ಗೆ ಏನು ಅಭಿಪ್ರಾಯವಿದೆ ಎನ್ನುವುದನ್ನು ಪರೋಕ್ಷವಾಗಿ ತಿಳಿದುಕೊಂಡು ತಮ್ಮನ್ನು ತಾವೇ ತಿದ್ದಿಕೊಳ್ಳಬೇಕು. ಯಾವುದೇ ಟೀಕೆಯೂ ತಳ್ಳಿಹಾಕುವಂಥದಲ್ಲ.

೨೭. ಸಣ್ಣ ದರ್ಜೆಯಲ್ಲಿ ಮಕ್ಕಳ ನಡುವಿನ ಜಗಳ ಪರಿಹರಿಸಬೇಕಾದ ಸಂದರ್ಭದಲ್ಲಿ ಅವರು ಮುಂದೆ ಗೆಳೆಯರಾಗಿ ಉಳಿಯುವಂಥ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಗತ್ಯ. ಕ್ಷಮೆ ಕೇಳುವುದು, ಉಪಕಾರಸ್ಮರಣೆ ಮಾಡುವುದು, ಸಾಲು ನಿಲ್ಲುವುದು, ವಂದನೆ ಹೇಳುವುದು ಇತ್ಯಾದಿ ಕ್ರಿಯೆಗಳು ಸಹಜವಾಗಿರುವಂತೆ ಬಳಕೆಗೆ ತರಬೇಕು.

೨೮. ಕ್ಲಾಸ್ ರೂಮಿನ ಚಂದ, ಸ್ವಚ್ಛತೆ ಇತ್ಯಾದಿಗಳ ಜವಾಬ್ದಾರಿಯನ್ನು ಎಲ್ಲರೂ ಹಂಚಿಕೊಳ್ಳುವಂತೆ ಇರಬೇಕು. ಚಾರ್ಟುಗಳು, ತೂಗುಚಿತ್ರಗಳು ಸಾಕಷ್ಟು ಇರಲಿ.

೨೯. ಪ್ರತಿ ವರ್ಷದ ಮೊದಲಿಗೆ ‘ಗ್ರೌಂಡ್ ರೂಲ್ಸ್’ (ನೀತಿ ನಿಯಮಗಳ) ಪಟ್ಟಿಯೊಂದನ್ನು ಮಕ್ಕಳಿಂದಲೇ ಕೇಳಿ ಬರೆಸಿ ಎಲ್ಲರಿಗೂ ಗೋಚರಿಸುವಂತೆ ತೂಗಿಹಾಕಬೇಕು. ಇದರಿಂದ ತಾವು ಏನು ಮಾಡಬೇಕು, ಏನು ಮಾಡಬಾರದು ಎಂಬುವುಗಳನ್ನು ಮಕ್ಕಳು ಸ್ವತಃ ಹಾಕಿಕೊಂಡಂತಾಗಿ ಅವರು ಹೆಚ್ಚು ಜವಾಬ್ದಾರರಾಗುತ್ತಾರೆ. ಇಂಥದೇ ನಿಯಮಗಳನ್ನು ಅಧ್ಯಾಪಕರು ತಮಗೂ ಹಾಕಿಕೊಂಡರೆ ಉತ್ತಮ.

೩೦. ನಿಮ್ಮ ದೇಹ ಬೊಜ್ಜಾಗದಂತೆ ನೋಡಿಕೊಳ್ಳಿ. ತೆಳುವಾಗಿದ್ದು, ಚಟುವಟಿಕೆಯಿಂದಿರುವ, ಆಟೋಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾವೇ ಭಾಗವಹಿಸುವ ಮತ್ತು ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡುವ ಅಧ್ಯಾಪಕರು ಎಲ್ಲ ಕಡೆ ಜನಪ್ರಿಯರಾಗುತ್ತಾರೆ.

೩೧. ಅನಿವಾರ್ಯವಲ್ಲದೆ ರಜೆ ತೆಗೆಯಬೇಡಿ; ಕ್ಲಾಸಿಗೆ ಸರಿಯಾದ ವೇಳೆಗೆ ಹೋಗಿ. ಶಾಲೆ ಬಿಟ್ಟೊಡನೆ ಮನೆಗೆ ಧಾವಿಸದೆ ಸ್ವಲ್ಪ ಹೊತ್ತು ಶಾಲೆಯಲ್ಲಿ ವೇಳೆ ಕಳೆಯಿರಿ. ಯಾವಾಗಲೂ ಪಾಠಕ್ಕೆ ಪೂರ್‍ವಸಿದ್ಧತೆ ಮಾಡಿಕೊಳ್ಳಿ. ನಿಮಗೇನಾದರೂ ಸಲಹೆಗಳಿದ್ದರೆ, ಅಧಿಕಾರಿಗಳಿಗೆ ತಿಳಿಸಿ.

೩೨. ನಿಮ್ಮ ನಿಮ್ಮ ವಿಷಯಗಳಲ್ಲಿ ಅಧ್ಯಯನಶೀಲರಾಗಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೂಮಪಾನವೇಕೆ ಗೆಳತಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೪

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys