ನಿನ್ನುಸಿರ ಕಂಪಿನಲಿ ಇರುವಾಗ ನಾನು….
ಧೂಮಪಾನವೇಕೆ ನನಗೆ ಗೆಳತಿ ನೀನು ಇರುವಾಗ
ಮಧುಪಾನ ಕೂಡ ಏಕೆ ನಿನ್ನಧರ ಕಾದಿರುವಾಗ ||ಆಲಾಪ್||

ಧೂಮಪಾನವೇಕೆ ಗೆಳತಿ ಧೂಮಪಾನವೇಕೆ?
ನಿನ್ನುಸಿರ ಕಂಪಿನಲಿ ಇರುವಾಗ ನಾನು
ಧೂಮಪಾನವೇಕೆ ಗೆಳತಿ ಧೂಮಪಾನವೇಕೆ? ||ಪಲ್ಲವಿ||

ಮಧುಪಾನ ಬೇಡ ಗೆಳತಿ ಮಧುಪಾನ ಬೇಡ
ಮಧು ತುಂಬಿದ ನಿನ್ನ ತುಟಿ ಕಾದಿರಲು ನನಗಾಗಿ
ಮಧುಪಾನ ಬೇಡ ಗೆಳತಿ ಮಧುಪಾನ ಬೇಡ

ಹಾಡು ಸಂಗೀತ ಬೇಡ ನವಿಲ ನರ್ತನ ಕೂಡ
ನಿನ್ನ ನುಡಿ ಇನಿದಾಗಿ ಹೆಜ್ಜೆ ಗೆಜ್ಜೆ ಜೊತೆಯಿರಲು
ಹಾಡು ಸಂಗೀತ ಯಾಕೆ ನೀನೆ ಹೇಳೆ ಗೆಳತಿ?

ನೋಡಲಾರೆ ಮಳೆಬಿಲ್ಲು ಹಕ್ಕಿ ಹಾರಾಟ ಸಹ
ಅವಕೆ ಮಿಗಿಲು ನಿನ್ನ ಕಣ್ಣ ಹುಬ್ಬುಗಳೆ ಇರಲು
ವ್ಯರ್ಥ ಆಲಾಪವೇಕೆ ಹೇಳೆ ನನ್ನ ಗೆಳತಿ?

ಬರೆವುದಿಲ್ಲ ಕವಿತೆ ಗೆಳತಿ ಬರೆವುದಿಲ್ಲ ಕವಿತೆ
ನಿನ್ನ ಕುರಿತ ಸಹಜ ಮಾತು ಆಗುತಿರಲು ಕವಿತೆ
ಮತ್ತೆ ಬೇರೆ ಕವಿತೆ ಯಾಕೆ ಸಹಜತೆ ಬೇಕಲ್ಲ ಗೆಳತಿ!
*****