ಸ್ವಾತಂತ್ರ್ಯ ಹೋರಾಟದ ಹಿಂಸೆ

ಸ್ವಾತಂತ್ರ್ಯ ಹೋರಾಟದ ಹಿಂಸೆ

ನಮ್ಮ ದೇಶದ ಸ್ವಾತಂತ್ರ್ಯ ಅಹಿಂಸಾತ್ಮಕವಾಗಿ ಲಭ್ಯವಾಯಿತೆಂದು ಹೇಳಲಾಗುತ್ತಿದೆ. ಆದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಭವಿಸಿದ ಕೆಲವು ಘಟನೆಗಳು ತದ್ವಿರುದ್ಧ ನಿಲುವನ್ನು ನಿರೂಪಿಸುತ್ತವೆ. ಹೀಗೆಂದ ಕೂಡಲೇ ನಮ್ಮ ದೇಶದ ಜನರೆಲ್ಲರೂ ಶಸ್ತ್ರ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆದರೆಂದು ಭಾವಿಸಬೇಕಿಲ್ಲ. ಆದರೆ ಬ್ರಿಟಿಷ್ ರಾಜ್ಯಾಧಿಕಾರದ ಹಿಂಸೆ ಅಡೆತಡೆಯಿಲ್ಲದೆ ನಡೆದ ಘಟನೆಗಳಿಂದ ಪ್ರೇರಿತರಾದ ಜನರು ಎದುರು ಹಿಂಸೆಗೆ ಅಣಿಯಾದ ಉದಾಹರಣೆಗಳಿವೆ ಎಂಬ ಅಂಶವನ್ನು ನಾವು ಮರೆಯಬಾರದು. ಈ ದೃಷ್ಟಿಯಿಂದ ನೋಡಿದಾಗ ಸ್ವಾತಂತ್ರ್ಯ ಹೋರಾಟದಲ್ಲಿ ‘ಹಿಂಸೆ’ಯ ಪಾತ್ರವನ್ನು ಗೌಣ ಮಾಡುವಂತಿಲ್ಲ.

‘ಹಿಂಸೆ’ಯನ್ನು ಜನರಿಂದ ಸಂಭವಿಸುವ ದುಷ್ಟ ಕ್ರಿಯೆಯನ್ನಾಗಿ ಮಾತ್ರ ನೋಡುವ ಪರಿಹಾರ ನಮ್ಮಲ್ಲೂ ಇದೆ. ಈ ದೃಷ್ಟಿಯು ಆಳುವ ವರ್ಗದ ನೆಲೆಯಿಂದ ರೂಪುಗೊಂಡಿದೆ. ಆಳುವ ವರ್ಗಕ್ಕೆ ವಿರುದ್ಧವಾಗಿ ಸಂಭವಿಸುವ ಶಸ್ತ್ರಾಸ್ತ್ರ ಪ್ರಯೋಗಗಳು ಹಿಂಸೆಯಾಗಿಯೂ, ಆಳುವ ವರ್ಗದ ಜನರ ಮೇಲೆ ಪ್ರಯೋಗಿಸುವ ಶಸ್ತ್ರಾಸ್ತ್ರಗಳ ಶಕ್ತಿ, ಸಂರಕ್ಷಣೆ ನೆಲೆಯಾಗಿ ಅರ್ಥ ಪಡೆದುಕೊಳ್ಳುತ್ತದೆ. ಇದು ಸ್ಪಷ್ಟವಾಗಿ ಆಳುವ ವರ್ಗದ ದೃಷ್ಟಿಕೋನ. ಜನರು ದೊಂಬಿ ಮಾಡುವುದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಪ್ರಾಣಹಾನಿ ಮಾಡುವುದು – ಇಂಥ ಹತ್ತಾರು ಚಟುವಟಿಕೆಗಳು ಹಿಂಸಾತ್ಮಕ ಎಂಬ ಬಗ್ಗೆ ಅನುಮಾನವೇ ಇಲ್ಲ. ಆಳುವ ವರ್ಗದ ಶಸ್ತ್ರಾಸ್ತ್ರಗಳೂ ಇದೇ ಮಾದರಿಯಲ್ಲಿ ವರ್ತಿಸಿ ಅಮಾಯಕ ಜನರ ಹಲ್ಲೆಗೆ ಕಾರಣವಾದಾಗ ಅದನ್ನು ಹಿಂಸಾತ್ಮಕವೆಂದೇ ಕರೆಯಬೇಕು. ಹೇಗೆ ಹಿಂಸೆಯೆನ್ನುವುದು ಎರಡು ಕಡೆಯಿಂದ ಸಂಭವಿಸಲು ಸಾಧ್ಯ. ಆಳುವ ವರ್ಗದ ಹಿಂಸಾತ್ಮಕ ಕ್ರಿಯೆಗೆ ಉತ್ತಮ ಉದಾಹರಣೆಯೆಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.

ಜಲಿಯನ್ ವಾಲಾಬಾಗ್ ಪ್ರಕರಣ ನಡೆದು ಈಗ ಎಪ್ಪತ್ತೈದು ವರ್ಷಗಳಾಗಿದ್ದು, ಆ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟ ಹಿಂಸೆ-ಅಹಿಂಸೆಗಳ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳುವ ಪ್ರಯತ್ನ ಪ್ರಯೋಜನಕಾರಿ ಯಾದುದೆಂದು ನಾನು ಭಾವಿಸಿದ್ದೇನೆ. ೧೯೧೮ರ ದೆಹಲಿಯ ಕಾಂಗ್ರೆಸ್ ಅಧಿವೇಶನದಲ್ಲಿ ಮುಂದಿನ ಅಧಿವೇಶನವನ್ನು ಪಂಜಾಬ್‌ನಲ್ಲಿ ನಡೆಸಬೇಕೆಂದು ನಿರ್ಧರಿಸಿದ ಮೇಲೆ ಬ್ರಿಟಿಷ್ ಸರ್ಕಾರದ ಕೆಂಗಣ್ಣು ಪಂಜಾಬ್ ಮೇಲೆ ಕೇಂದ್ರೀಕೃತ ವಾದಂತೆ ಕಾಣುತ್ತದೆ. ಇದೇ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತವು ಜಾರಿಗೆ ತರಬಯಸಿದ ರೌಲತ್ ಬಿಲ್‌ಗಳು ವಿವಾದಾತ್ಮಕವಾದವು. ‘ಅರಾಜ ಕತೆಯುಂಟು ಮಾಡುವವರಿಗೆ’ ಮೇಲ್ಮನವಿ ಮಾಡುವ ಅವಕಾಶವನ್ನು ನಿರಾಕರಿಸಿ ಶಿಕ್ಷೆಗೆ ಗುರಿಪಡಿಸುವುದು, ಯಾವುದೇ ಚಳುವಳಿಗಳ ಜೊತೆ ಸಂಬಂಧವಿರುವರ ಬಗ್ಗೆ ಉಗ್ರ ಕ್ರಮ ತೆಗೆದುಕೊಳ್ಳುವುದು, ಇವೇ ಮುಂತಾದ ಅಂಶಗಳಿಂದ ದಮನಶೀಲವಾಗಿದ್ದ ರೌಲತ್‌ಬಿಲ್‌ಗಳನ್ನು ಹಿಂತೆಗೆದು ಕೊಳ್ಳುವಂತೆ ಮಾಡಲು ಗಾಂಧೀಜಿಯವರು ಉಗ್ರ ಅಸಹಕಾರಕ್ಕೆ ಕರೆಯುತ್ತಾರೆ. ಇದರ ಫಲವಾಗಿ ೧೯೧೯ನೇ ಮಾರ್ಚ್ ೩೦ ರಂದು ಹರತಾಳ, ಉಪವಾಸ ಸತ್ಯಾಗ್ರಹ, ಪ್ರತಿಭಟನಾ ಮೆರವಣಿಗೆ ಮುಂತಾದ ಕಾರ್ಯಕ್ರಮಗಳು ನಡೆದು ಆಳುವ ವರ್ಗಕ್ಕೆ ನಡುಕ ಹುಟ್ಟಿಸಿದವರು. ಪ್ರತಿಭಟನೆಯ ಬಿಸಿ ಪಂಜಾಬಿನಲ್ಲಿ ಪ್ರಬಲವಾಗಿದ್ದುದನ್ನು ಗಮನಿಸಿದ ಬ್ರಿಟಿಷ್ ಸರ್ಕಾರ, ಕಾಂಗ್ರೆಸ್ ಅಧಿವೇಶನ ಹೊಣೆ ಹೊತ್ತಿದ ಡಾ|| ಸೈಫುದ್ದೀನ್ ಕಿಚ್ಲೆ ಮತ್ತು ಡಾ|| ಸತ್ಪಾಲ್ ಅವರನ್ನು ಬಂಧಿಸಿ ರಹಸ್ಯ ಸ್ಥಳದಲ್ಲಿ ಸೆರೆಯಲ್ಲಿಟ್ಟಿತು. ಆನಂತರ ಭುಗಿಲೆದ್ದ ವಿರೋಧ ‘ಹಿಂಸೆ’ಯ ರೂಪವನ್ನು ತಾಳಿದ್ದೂ ಉಂಟು. ಅಮೃತಸರದ ನ್ಯಾಷನಲ್ ಬ್ಯಾಂಕ್ ಕಟ್ಟಡಕ್ಕೆ ಬೆಂಕಿಯಿಟ್ಟ ಗುಂಪು ಬ್ಯಾಂಕ್ ಮೇನೇಜರರನ್ನು ಕೊಂದುಹಾಕಿತು. ಇದೇ ರೀತಿಯ ‘ಪ್ರತಿಭಟನೆ’ಗಳು ಗುಜರನ್‌ವಾಲ, ಕಸೂರ್, ಲಾಹೋರ್, ಅಹಮದಾಬಾದ್‌ಗಳಲ್ಲೂ ಸಂಭವಿಸಿದವು. ಅಹಮದಾಬಾದ್‌ನಲ್ಲಿ ಕೆಲವು ಬ್ರಿಟಿಷ್ ಅಧಿಕಾರಿಗಳ ಹತ್ಯೆಯಾಯಿತು. ಕಲ್ಕತ್ತದಲ್ಲಿ ಐದಾರು ಜನ ಪ್ರಾಣ ಕಳೆದುಕೊಂಡರು. ಒಟ್ಟಿನಲ್ಲಿ ಎರಡೂ ಕಡೆ ಪ್ರಾಣ ಹಾನಿಯಾದ ವರದಿಗಳಿವೆ.

೧೯೧೯ನೇ ಏಪ್ರಿಲ್ ೧೩ ರಂದು ಜಲಿಯನ್ ವಾಲಾಬಾಗ್‌ನಲ್ಲಿ ಆಳುವ ಬ್ರಿಟಿಷರ ವಿರುದ್ಧ ಪ್ರತಿಭಟನಾ ಸಭೆ ಸೇರಿತು. ಸುತ್ತ ಗೋಡೆಗಳುಳ್ಳ ಈ ಪ್ರದೇಶಕ್ಕೆ ಚಿಕ್ಕ ಪ್ರವೇಶದ್ವಾರವಿತ್ತು. ಶಾಂತವಾಗಿ ನಡೆಯುತ್ತಿದ್ದ ಸಭೆಯ ಬಳಿಗೆ ಬಂದ ಜನರಲ್ ಡೈಯರ್ ತನ್ನ ಸೈನಿಕರಿಗೆ ಗುಂಡು ಹಾರಿಸಲು ಆಜ್ಞೆಯಿತ್ತ. ಆಳುವ ವರ್ಗದ ಅಹಂಕಾರವೇ ಬಂದೂಕಿನ ಬಲವಾಗಿ, ಪ್ರಾಣ ತೆಗೆಯುವ ಗುಂಡಾಗಿ ಸದ್ದು ಮಾಡಿ ಸಾವುಗಳಲ್ಲಿ ಸಂಭ್ರಮಿಸಿತು. ಆಳುವ ವರ್ಗದ ಅಸಹನೆ ಅಲ್ಲಿ ಹುಟ್ಟಿದ ಸೇಡು ಸಿಡಿದು, ಅಲ್ಲಿದ್ದ ೨೦೦೦ ಜನರಲ್ಲಿ ೪೦೦ ಜನರ ಪ್ರಾಣ ನುಂಗಿತು. ಸುಮಾರು ೨೦೦೦ ಜನರಿಗೆ ತೀವ್ರ ಗಾಯ ಮಾಡಿತು. ಒಟ್ಟು ೧೬೦೦ ಸಾರಿ ಗುಂಡು ಹಾರಿಸಲಾಯಿತು. ಮುಂದೆ ಮಾರ್ಷಲ್ ಲಾ ಪ್ರಕಾರ ೨೯೮ ಜನರ ಮೇಲೆ ಆರೋಪ ಹೊರಿಸಲಾಯಿತು. ಇವರಲ್ಲಿ ೨೧೮ ಜನರಿಗೆ ಶಿಕ್ಷೆ ವಿಧಿಸಲಾಯಿತು. ೫೧ ಜನರಿಗೆ ಮರಣದಂಡನೆ, ೧೦ ಜನರಿಗೆ ಐದು ವರ್ಷ ಹಾಗೂ ೧೩ ಜನರಿಗೆ ಮೂರು ವರ್ಷ, ಇಬ್ಬರಿಗೆ ಹತ್ತು ವರ್ಷ, ಉಳಿದವರಿಗೆ ವಿವಿಧ ಕಾಲಾವಧಿಯ ಶಿಕ್ಷೆ ಕೊಡಲಾಯಿತು. ಹೀಗೆ ಸ್ವಾತಂತ್ರ್ಯ ಹೋರಾಟವನ್ನು ಆಳುವ ವರ್ಗ ಹತ್ತಿಕ್ಕುವ ಒಂದು ಸಂದರ್ಭವನ್ನಾಗಿ ಜಲಿಯನ್ ವಾಲಾಬಾಗ್ ಪ್ರಕರಣವನ್ನು ಹುಟ್ಟುಹಾಕಿತು. ಈ ಅಂಶ ಜನರಲ್ ಡೈಯರ್ ಮಾತುಗಳಲ್ಲೇ ಸ್ಪಷ್ಟವಾಗಿದೆ. ಈ ಪ್ರಕರಣದ ವಿಚಾರಣೆಗೆ ನೇಮಕಗೊಂಡ ಹಂಟರ್ ಸಮಿತಿಯ ಎದುರು ಡೈಯರ್ ಹೀಗೆ ಹೇಳಿದ: “ಗುಂಡು ಹಾರಿಸದೆ ಜನರನ್ನು ಚದುರಿಸಬಹುದಿತ್ತು. ಆದರೆ ಮುಂದೆ ನಾನಾಗಲಿ, ಇತರರಾಗಲಿ ಗುಂಡು ಹಾರಿಸುವ ಸಂದರ್ಭ ಬರಬಾರದೆಂದು ನಿರ್ಧರಿಸಿ ಗುಂಡು ಹಾರಿಸುವ ಆಜ್ಞೆ ನೀಡಿದೆ. ಗುಂಡು ಹಾರಿಸದೆ ಹಾಗೆ ಚದುರಿಸಿದ್ದರೆ, ಇದೇ ಜನರು ಆನಂತರ ನಗೆಯಾಡುತ್ತಿದ್ದರು, ಹೀಯಾಳಿಸುತ್ತಿದ್ದರು. ನಾನು ಮೂರ್ಖನಾಗಲು ಇಚ್ಛಿಸದೆ ಗುಂಡು ಹಾರಿಸಲು ಆಜ್ಞೆಕೊಟ್ಟೆ. ನಾನು ಈ ಬಂಡಾಯಗಾರರ ನೈತಿಕತೆಯನ್ನು ಕುಗ್ಗಿಸಲು ಇಚ್ಛಿಸಿದೆ. ಮಿಲಿಟರಿ ದೃಷ್ಟಿಯಿಂದ ವ್ಯಾಪಕ ಪರಿಣಾಮವುಂಟು ಮಾಡಲು ತೀರ್ಮಾನಿಸಿದೆ.”

ಡೈಯರ್‌ನ ಹೇಳಿಕೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಬಂಡಾಯ ಮನೋಧರ್ಮವನ್ನು ಹತ್ತಿಕ್ಕುವ ಆಳುವ ವರ್ಗದ ಮಿಲಿಟರಿ ಮನೋಧರ್ಮ ವ್ಯಕ್ತವಾಗಿದೆ. ಪಂಜಾಬ್ ಜನತೆ ವೈಶಾಖಿ ಹಬ್ಬವನ್ನು ಸಂಭ್ರಮದಿಂದ ಅನುಭವಿಸುವ ಏಪ್ರಿಲ್ ೧೩ ರಂದೇ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಷ್ಟರ ಮಟ್ಟಿಗೆ ಕಾಡಿಸಿದೆಯೆಂದರೆ, ಈ ಘಟನೆ ನಡೆದ ಇಪ್ಪತ್ತು ವರ್ಷಗಳ ನಂತರ ಉಧಾಮ್ ಸಿಂಗ್ ಎಂಬ ವ್ಯಕ್ತಿ ೧೯೪೦ನೇ ಮಾರ್ಚ್ ೧೩ರಂದು ಲಂಡನ್ನಿನ ಕಾಕ್‌ಸ್ಟನ್ ಹಾಲ್‌ನಲ್ಲಿ ಡೈಯರ್‌ನನ್ನು ಗುಂಡಿಕ್ಕಿ ಕೊಂದು ಹಾಕಿದ. ನಂತರ ಆತ ಹೇಳಿದ: “ನನ್ನ ಜನರ ಮನೋಶಕ್ತಿಯನ್ನು ಕುಗ್ಗಿಸಲು ಕೊಲೆ ಮಾಡಿದ ಈ ಡೈಯರ್‌ನನ್ನು ಬಲಿ ತೆಗೆದುಕೊಳ್ಳಲು ೨೧ ವರ್ಷ ಕಾದಿದ್ದೇನೆ. ನಾನು ಸಾಯುವುದಕ್ಕೆ ಹಿಂಜರಿಯುವುದಿಲ್ಲ. ಬ್ರಿಟಿಷ್ ಆಳ್ವಿಕೆಯಲ್ಲಿ ನನ್ನ ದೇಶದ ಜನ ಸಾಯುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ನನ್ನ ಮಾತೃಭೂಮಿಗೆ ಸಾಯುವುದಕ್ಕಿಂತ ಬೇರೆ ಗೌರವ ಯಾವುದಿದೆ?” – ಹೀಗೆ ನುಡಿದ ಉಧಾಮ್ ಸಿಂಗ್ ನಿಗೆ ಆಶಿಸಿದಂತೆ ಹಾಗೂ ನಿರೀಕ್ಷಿಸಿದಂತೆ ಸಾವನಪ್ಪಿದ. ಉಧಾಮ್ ಸಿಂಗ್‌ನಿಗೆ ೧೯೪೦ನೇ ಜೂನ್ ೧೨ರಂದು ಮರಣದಂಡನೆ ವಿಧಿಸಲಾಯಿತು.

ಜಲಿಯನ್ ವಾಲಾಬಾಗ್ ಪ್ರಕರಣದಿಂದ ಒಂದು ಪ್ರಮುಖ ಅಂಶ ಸ್ಪಷ್ಟವಾಗುತ್ತದೆ. ಜನರಲ್ ಡೈಯರ್ ಮತ್ತು ಉಧಾಮ್ ಸಿಂಗ್ ಇಬ್ಬರೂ ಚಾರಿತ್ರಿಕ ಸನ್ನಿವೇಶವೊಂದರ ಸಂಕೇತಗಳು. ಒಂದರ್ಥದಲ್ಲಿ ಇಬ್ಬರೂ ‘ಹಿಂಸೆ’ಯನ್ನು ಒಪ್ಪಿದವರು. ಆದರೆ ಉಧಾಮ್ ಸಿಂಗ್‌ನ ‘ಹಿಂಸೆ’ಗೂ ಜನರಲ್ ಡೈಯರ್‌ನ ಹಿಂಸೆಗೂ ವ್ಯತ್ಯಾಸವಿದೆ. ಉಧಾಮ್‌ಸಿಂಗ್ ಹಿಂಸೆಯನ್ನು ಒಡಲೊಳಗಿಟ್ಟುಕೊಂಡು ಮೈವೆತ್ತವನೂ ಅಲ್ಲ; ಮನವೆತ್ತವನೂ ಅಲ್ಲ. ತನ್ನ ಜನರ ಮೇಲೆ ಹಿಂಸಾತ್ಮಕ ಕೃತ್ಯ ನಡೆಸಿದ ವ್ಯಕ್ತಿಯ ವಿರುದ್ಧ ಹಿಂಸೆ ನೆಲೆಯಲ್ಲೇ ತಿರುಗಿ ಬಿದ್ದವನು. ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಹೋರಾಟ ಕಟ್ಟುತ್ತಿದ್ದ ಜನರ ಹತ್ಯೆಯ ಕಾರಣದಿಂದ ಕಿಡಿಗೊಂಡ ದೇಶಪ್ರೇಮವನ್ನು ‘ಹಿಂಸೆ’ಯಲ್ಲಿ ಪ್ರಕಟಿಸಿದವನು. ಹೀಗಾಗಿ ಉಧಾಮ್ ಸಿಂಗ್‌ನ ‘ಹಿಂಸಾಕೃತ್ಯ, ಜನ ಮೂಲದಿಂದ ಹುಟ್ಟಿದ್ದು; ಸ್ವಾತಂತ್ರ್ಯ ಮುಖಿಯಾದ ಮನೋಧರ್ಮದಲ್ಲಿ ಮೈತಾಳಿದ್ದು, ಸೇಡಾಗಿ ಸ್ಫೋಟಗೊಂಡದ್ದು. ಉಧಾಮ್ ಸಿಂಗ್‌ನ ’ಹಿಂಸೆ’ಯ ಕಾರಣಗಳು ಜನರಲ್ ಡೈಯರ್‌ನಲ್ಲಿ ಜೀವಂತವಾಗಿರುವುದೆ ಇಲ್ಲಿನ ವಿಶೇಷ. ಜನರಲ್ ಡೈಯರ್‌ನಲ್ಲಿ ಜೀವಂತವಾಗಿದ್ದ ಹಿಂಸೆ, ಉಧಾಮ್ ಸಿಂಗ್ ರೂಪದಲ್ಲಿ ಎದುರಿಗೆ ಬಂದು ಬಲಿತೆಗೆದುಕೊಂಡಿದೆ ಯೆಂಬ ವ್ಯಾಖ್ಯಾನವೇ ಹೆಚ್ಚು ಉಚಿತ ವಾದುದು. ಯಾಕೆಂದರೆ ಹಿಂಸಾತ್ಮಕ ಕ್ರಿಯೆ ಮೊದಲು ನಡೆದದ್ದು ಜನರಲ್ ಡೈಯರ್‌ನಿಂದ. ಉಧಾಮ್ ಸಿಂಗ್ ಹೇಗೆ ಕೇವಲ ವ್ಯಕ್ತಿಯಾಗಿ ತನ್ನ ಭಾವನೆಗಳನ್ನು ‘ಬಲಿ’ಯಲ್ಲಿ ಪ್ರಕಟಿಸಲಿಲ್ಲವೊ ಹಾಗೆಯೇ ಡೈಯರ್ ಸಹ ಕೇವಲ ವ್ಯಕ್ತಿಯಾಗಿ ಹಿಂಸೆಯನ್ನು ಪ್ರಯೋಗಿಸಲಿಲ್ಲ. ಇಬ್ಬರಲ್ಲೂ ವ್ಯಕ್ತಿ ವೈಪರೀತ್ಯದ ಛಾಯೆಗಳು ಇರಬಹುದು. ಆದರೆ ಡೈಯರ್‌ನ ಕ್ರಿಯೆ ಮತ್ತು ಉಧಾಮ್ ಸಿಂಗ್‌ನ ಪ್ರತಿಕ್ರಿಯೆಗಳು ಎರಡು ವಿರುದ್ಧ ನೆಲೆ – ನಿಲುವುಗಳನ್ನು ಪ್ರತಿನಿಧಿಸುತ್ತವೆ. ಉಧಾಮ್ ಸಿಂಗ್ ತನ್ನ ಜನರ ಮೇಲೆ ನಡೆದ ಹಿಂಸೆಯ ಫಲವಾಗಿ ರೂಪುಗೊಂಡ ಸಂಕೇತವಾಗಿದ್ದರೆ, ಡೈಯರ್‌ ಸಾಮ್ರಾಜ್ಯಶಾಹಿ ಆಳುವ ವರ್ಗದ ಸಂಶಯಗೊಂಡ ಸಂಕೇತವಾಗಿದ್ದಾನೆ. ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧ ವಾದ ‘ಮಿಲಿಟರಿ ಮನೋಧರ್ಮ’ದ ಫಲವಾಗಿದ್ದಾನೆ. ಹಿಂಸೆಯ ಮೊದಲ ಕ್ರಿಯೆ ಆಳಿದ ಸಾಮ್ರಾಜ್ಯಶಾಹಿ ಸೇಡಿನಲ್ಲಿ ಪ್ರಾರಂಭವಾಗಿದ್ದು, ಜನರು ಇದಕ್ಕೆ ಪ್ರತಿಕ್ರಿಯೆ ಮಾತ್ರ ತೋರಿಸಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ ‘ಉಧಾಮ್‌ಸಿಂಗ್ ಹಿಂಸೆ’ ಹುಟ್ಟುವುದು ‘ಡೈಯರ್ ಹಿಂಸೆಯ’ಯ ಒಡಲಲ್ಲೇ ಎಂಬುದು ಸ್ಪಷ್ಟವಾಗುತ್ತದೆ. ಡೈಯರ್‌ನಲ್ಲಿ ಉಧಾಮ್ ಸಿಂಗ್ ಹುಟ್ಟುವುದು ಹಿಂಸೆಯ ಒಂದು ವೈಚಿತ್ರ್ಯ.

ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ನಾವು ನಂಬಿರುವ ೧೮೫೭ರ ಸಿಪಾಯಿ ದಂಗೆಯ ನಂತರ ನಡೆದ ಅತ್ಯಂತ ಪ್ರಮುಖ ಘಟನೆಯೆಂದರೆ ೧೯೧೯ನೇ ಏಪ್ರಿಲ್ ೧೩ ರಂದು ಸಂಭವಿಸಿದ ಜಲಿಯನ್ ವಾಲಾಬಾಗ್ ಪ್ರತಿಭಟನೆ. ಇದು ಇಡೀ ದೇಶದಲ್ಲಿ ಹೊಸ ವಾತಾವರಣಕ್ಕೆ ಕಾರಣವಾಯಿತು. ಬ್ರಿಟಿಷ್ ಆಡಳಿತದಲ್ಲಿ ಡೈಯರುಗಳು ಬಲಗೊಳ್ಳುತ್ತ ಬಂದಂತೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಉಧಾಮ್ ಸಿಂಗ್‌ಗಳೂ ಕಾಣಿಸಿಕೊಂಡರು. ಆದರೆ ಈ ಉಧಾಮ್ ಸಿಂಗ್ ಸಂಕೇತ ಸೈದ್ಧಾಂತಿಕವಾಗಿ ಬೆಳೆಯತೊಡಗಿದ್ದು ಒಂದು ವಿಶೇಷವಾಗಿತ್ತು. ಇದಕ್ಕೆ ಭಗತ್ ಸಿಂಗ್ ಬಳಗವೇ ಸಾಕ್ಷಿ.

ಸ್ವಾತಂತ್ರ್ಯ ಚಳುವಳಿಯನ್ನು ಅಹಿಂಸಾತ್ಮಕವಾಗಿ ನಡೆಯಬೇಕೆಂಬುದು ಗಾಂಧೀಜಿಯವರಾದಿಯಾಗಿ ಅನೇಕರ ಅಪೇಕ್ಷೆಯಾಗಿತ್ತು; ಅದೊಂದು ಸಿದ್ಧಾಂತವಾಗಿತ್ತು; ಸಂವೇದನೆಯಾಗಿತ್ತು. ಆದರೆ ವಸ್ತುಸ್ಥಿತಿ ಎಷ್ಟು ತೀವ್ರವಾಗಿತ್ತೆಂದರೆ ಸ್ವಾತಂತ್ರ್ಯ ಚಳುವಳಿ ಒಳಗೆ ವಿವಿಧ ವಿಧಾನಗಳು ಹುಟ್ಟುತ್ತ ಹಿಂಸೆಗೆ ಹಿಂಸೆಯೇ, ಉತ್ತರವೆಂಬ ಭಾವನೆಯೂ ಬಲವಾಗಿತ್ತು. ಶಸ್ತ್ರ ಹೋರಾಟ ಸಿದ್ಧಾಂತವು ಅಸ್ತಿತ್ವದಲ್ಲಿತ್ತು. ಸೈದ್ಧಾಂತಿಕವಾಗಿ ಅಲ್ಲದೆ ಭಾವನಾತ್ಮಕ ನೆಲೆಯಲ್ಲಿ ‘ಹಿಂಸಾತ್ಮಕ’ ಪ್ರತಿಕ್ರಿಯೆ ಪ್ರತಿಭಟನೆಗಳು ನಡೆದ ಉದಾಹರಣೆಗಳು ಹೇರಳವಾಗಿವೆ. ಅಂಚೆ ಕಛೇರಿ, ಖಜಾನೆ ಮತ್ತು ರೈಲ್ವೆ ಮುತ್ತಿಗೆಗಳು ನಡೆದಿವೆ. ಸಾವುನೋವುಗಳು ಸಾಕಷ್ಟು ಸಂಭವಿಸಿವೆ. ಹೀಗೆ ಸಾಮ್ರಾಜ್ಯಶಾಹಿ ಆಳುವ ವರ್ಗದ ಉಗ್ರಗಾಮಿ ಹಿಂಸೆಗೆ ವಿರುದ್ಧವಾಗಿ ಜನಾಂದೋಲನ ಹಿಂಸೆ ಪ್ರಖರಗೊಳ್ಳುತ್ತಿದುದರಿಂದಲೇ ಗಾಂಧೀಜಿಯವರ ಅಹಿಂಸಾ ಹೋರಾಟದ ಕಲ್ಪನೆಯೂ ತೀವ್ರ ಸಂವೇದನಾಶೀಲವಾಗಿ ಪ್ರತಿಪಾದಿತಗೊಂಡಿದೆ. ಗಾಂಧೀಜಿಯವರ ಅಹಿಂಸಾ ಹೋರಾಟದ ಪರಿಕಲ್ಪನೆ ಮತ್ತು ಪ್ರತಿಪಾದನೆಗಳು ಏನಿಲ್ಲವೆಂದರೂ ಹಿಂಸೆ-ಅಹಿಂಸೆಗಳ ನಡುವೆ ಸಮತೋಲನ ತಂದಿವೆ. ಒಟ್ಟಿನಲ್ಲಿ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವು ಹಿಂಸೆ-ಅಹಿಂಸೆಗಳ ಮಿಶ್ರ ರೂಪದಲ್ಲಿತ್ತು ಎನಿಸುತ್ತದೆ.
*****
೦೧-೦೫-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೧೧
Next post ಇನ್ನೇನು ಬೇಕು?

ಸಣ್ಣ ಕತೆ

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys