ಸೆರಗು ಸರಿಸುವ ಸರ್ಕಾರಿ ನೀತಿ

ಸೆರಗು ಸರಿಸುವ ಸರ್ಕಾರಿ ನೀತಿ

ಇಂದು ದೇಶದ ತುಂಬಾ ಆರ್ಥಿಕ ಉದಾರೀಕರಣದ ಮಾತು ತುಂಬಿದೆ. ಉದಾರೀಕರಣ ಮತ್ತು ಖಾಸಗೀಕರಣಗಳು ಪರಸ್ಪರ ಒಂದಾಗಿ ಹುಟ್ಟಿದ ಎರಡು ಮುಖಗಳು ಅಥವಾ ಒಂದೇ ಮುಖದ ಎರಡು ಕಣ್ಣುಗಳು. ಖಾಸಗಿ ಬಂಡವಾಳಗಾರರ ಕೈಗೆ ದೇಶದ ಅರ್ಥವ್ಯವಸ್ಥೆಯನ್ನು ಒಪ್ಪಿಸಿ ಆಡಳಿತಾತ್ಮಕ ಕಾರಕೂನಗಿರಿ ಮಾಡುವುದೇ ಲೇಸೆಂಬ ನೀತಿ ಪಾಠವನ್ನು ನಮ್ಮ ಸರ್ಕಾರ ಪರಿಪಾಲಿಸಲು ಪ್ರಯತ್ನಿಸುತ್ತಿದೆ. ಶ್ರೀರಾಮ ಪಿತೃವಾಕ್ಯ ಪರಿಪಾಲನೆಯ ಪರಂಪರೆಯುಳ್ಳ ಈ ಪುಣ್ಯಭೂಮಿಯಲ್ಲಿ ದೊಡ್ಡ ದೇಶದ ಹಾದಿಗಡ್ಡವಾಗುವುದು ಪಾಪವೆಂದು ಪರಿಗಣಿಸಬೇಕೆಂದು ಕಾಣುತ್ತದೆ. ಆದ್ದರಿಂದಲೇ ಅಮೇರಿಕ ಮೂಲವಾದ ಆರ್ಥಿಕ ನೀತಿ ಪಾಠವನ್ನು ಉರು ಹೊಡೆದು ಇಂಡಿಯಾ ಜನರಿಗೆ ಉಣಬಡಿಸುವುದರಲ್ಲಿ ಕೇಂದ್ರ ಮತ್ತು ಕೆಲ ರಾಜ್ಯ ಸರ್ಕಾರಗಳು ಮೋಕ್ಷಾನಂದ ಪಡುತ್ತಿವೆ.

ನಮ್ಮ ದೇಶ ಆಯ್ಕೆ ಮಾಡಿಕೊಂಡಿದ್ದು-ಮಿಶ್ರ ಆರ್ಥಿಕ ಪದ್ದತಿ. ಇಲ್ಲಿ ಖಾಸಗಿಯವರಿಗೆ ಅವಕಾಶವಿದೆ. ಆದರೆ ಸಾರ್ವಜನಿಕ ಕ್ಷೇತ್ರದ ಸೀಮೋಲ್ಲಂಘನೆಯ ಉದಾರೀಕರಣ ಇಲ್ಲ. ಈ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯೆಂದು ಹೇಳಲಾಗುವುದಿಲ್ಲ. ಅನಗತ್ಯ ಷರತ್ತು, ಪ್ರಜ್ಞಾಪೂರ್ವಕ ವಿಳಂಬ, ಸರ್ಕಾರಿ ಸೋಮಾರಿತನ-ಇವುಗಳಿಂದ ಬೇಸತ್ತ ಜನರಿಗೆ ಖಾಸಗಿಯವರ ‘ಸೇವೆ’ಯೇ ಲೇಸೆಂದು ಅನಿಸುವುದು ಸ್ವಾಭಾವಿಕ. ಹೀಗೆ ಖಾಸಗಿ ಪರ ಒಲವು ತೋರಿಸುವುದಕ್ಕೆ ಬೇಕಾದ ಬೌದ್ಧಿಕ ಪರಿಸರವನ್ನು ಖಾಸಗಿ ಬಂಡವಾಳ ಶಕ್ತಿಯೂ ನಿರ್ಮಾಣ ಮಾಡಿ ತನ್ನ ಬೇಳೆ ಬೇಯಿಸಿ ಕೊಳ್ಳಬಲ್ಲದು. ಸಮಾಜವಾದೀ ಆಶಯಕ್ಕೆ ವಿರುದ್ಧವಾಗಿ ಅಂತರರಾಷ್ಟ್ರೀಯ ಶಕ್ತಿಗಳು ಖಾಸಗೀಕರಣದ ಪರವಾಗಿ ಪ್ರಚಾರ ಮಾಡುತ್ತಲೇ ಬಂದಿದೆ. ಎಲ್ಲರೂ ಮನೆ ಬಾಗಿಲಿಗೆ ಬಂದು ಬೀಳಬೇಕೆಂದು ಬಯಸುವ, ಬೀದಿಗೆ ಬಂದ ಕೂಡಲೇ ಬಸ್ಸಿನ ಬಾಗಿಲು ತೆರೆಯಬೇಕೆಂದು ನಿರೀಕ್ಷಿಸುವ ಜನರಿಗೆ ಸಾರ್ವಜನಿಕ ಕ್ಷೇತ್ರದ ಸಣ್ಣ ತಪ್ಪುಗಳು ದೊಡ್ಡದಾಗಿ ಕಾಣುವಂತೆ ಭೂತಕನ್ನಡಿಯನ್ನು ಕೊಡುವ ಕೆಲಸವೂ ನಡೆಯುತ್ತ ಬಂದಿದೆ. ಸಾರ್ವಜನಿಕ ಕ್ಷೇತ್ರದ ಅದಕ್ಷತೆ ಖಾಸಗೀಕರಣದ ಪರವಾಗಿ ಒಂದು ವರವಾಗಿ ಪರಿಣಮಿಸಿದ್ದು ದೊಡ್ಡ ದುರಂತವೇ ಸರಿ. ಆದರೆ ಇದೆಲ್ಲಕ್ಕೂ ಖಾಸಗೀಕರಣವಾಗಲೀ, ಇದನ್ನೇ ಕೇಂದ್ರವಾಗಿಟ್ಟುಕೊಂಡು ಉದಾರೀಕರಣವಾಗಲಿ ಅಂತಿಮ ಉತ್ತರವಲ್ಲ.

ಉದಾಹರಣೆಗೆ ಬ್ಯಾಂಕ್ ರಾಷ್ಟ್ರೀಕರಣ ಕ್ರಮವನ್ನು ಪ್ರಸ್ತಾಪಿಸಬಹುದು. ರಾಷ್ಟ್ರೀಕರಣಕ್ಕೆ ಮುಂಚೆ ಬ್ಯಾಂಕುಗಳ ‘ಸೇವೆ’ ಚೆನ್ನಾಗಿತ್ತು ಎಂದು ಗೊಣಗುವ ಬಿಳಿ ಬಟ್ಟೆಯ ಬಂಧುಗಳು ತುಂಬಾ ಇದ್ದಾರೆ. ಅವರು ಹೋದ ಕೂಡಲೇ ಬಿಸಿ ನಗೆ ಬೀರಿ ಬೆಚ್ಚನೆಯ ಅನುಭವ ತರುವ ಕಂಠ ಮಾಧುರ್ಯವನ್ನೂ ಕೂತಲ್ಲಿಗೆ ಕಟ್ಟು ಕಟ್ಟು ಹಣ ತಂದುಕೊಡುವ ವಿಧೇಯತೆಯನ್ನು ಇಂಥವರು ಸೇವೆಯೆಂದು ಪರಿಗಣಿಸಬಹುದು. ಆದರೆ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮುಂಚೆ ಬ್ಯಾಂಕುಗಳ ಮಟ್ಟಿಲ ಧೂಳು ಕುಡಿಯಲು ಬಿಟ್ಟುಕೊಳ್ಳದೆ ಇದ್ದ ಜನವರ್ಗಗಳು ಇಂದು ಒಳಗೆ ಪ್ರವೇಶಿಸಿವೆ. ಖಾತೆ ತೆರೆದಿವೆ; ಸಾಲ ಮಾಡಿದೆ. ಸದಾ ಬಂಡವಾಳಗಾರರ ಭದ್ರನೆಲೆಗಳಾಗಿದ್ದ ಬ್ಯಾಂಕುಗಳು ಸಾಂಪ್ರದಾಯಿಕ ನೆಲೆ ಕುಸಿದ ಕೂಡಲೇ ಬ್ಯಾಂಕ್ ವ್ಯವಸ್ಥೆ ಕುಸಿಯುತ್ತಿದೆ ಎಂಬಂತೆ ಪ್ರಚಾರ ಮಾಡುವ, ಸಣ್ಣ ತಪ್ಪುಗಳನ್ನು ಬೃಹದಾಕಾರಕ್ಕೆ ತಿರುಗಿಸುವ ತರಲೆ ಬುದ್ದಿಗಳು ಮೊದಲು ತಿಳಿದುಕೊಳ್ಳಬೇಕು- ಪ್ರತಿಗಾಮಿ ಶಕ್ತಿಗಳ ಜನಪರವಾದ ಬದಲಾವಣೆಗಳನ್ನು ನಕಾರಾತ್ಮಕವಾಗಿ ನೋಡುತ್ತ ಅವನತಿಯ ಚಿತ್ರ ಕೊಡುವುದರಲ್ಲಿ ಪ್ರಸಿದ್ದರು. ಅಂದಹಾಗೆ ಈ ಖಾಸಗಿ ಬಂಡವಾಳಗಾರರಾದರೂ ಯಾರು? ಈ ಸಂಪತ್ತು ಅವರಿಗೆ ಎಲ್ಲಿಂದ ಬಂತು? ಮೇರೆ ಮೀರಿದ ಬಂಡವಾಳ ಮತ್ತು ಮೇರೆ ಮೀರಿದ ಬಡತನಗಳನ್ನು ಒಟ್ಟಿಗೆ ಇಟ್ಟು ನೋಡಿದರೆ ಪರಸ್ಪರ ಪೂರಕವಾದ ಅಂಶ ಗೊತ್ತಾಗುತ್ತದೆ. ಕೋಟಿಗಟ್ಟಲೆ ಕೊಚ್ಚುವುದಕ್ಕೆ ಅವಕಾಶ ಕೊಡುವ ವ್ಯವಸ್ಥೆಯನ್ನು ರೂಪಿಸಿ, ಮತ್ತು ನಿಯಂತ್ರಿಸುವ ನಾಟಕವಾಡುವ ನಮ್ಮ ಸರ್ಕಾರಗಳು ಸೈದ್ಧಾಂತಿಕ ಅರಾಜಕತೆ, ಅಪ್ರಬುದ್ಧ ಆಲೋಚನೆ, ಸ್ವಾರ್ಥ ಹಾಗೂ ಸೋಗಲಾಡಿತನದ ಕೇಂದ್ರಗಳಾಗಿ ಕಂಡ ಕಂಡ ಬಂಡವಾಳಿಗರ ಎದುರು ಮಂಡಿಯೂರಿ ಹೀನಾಯ ಸ್ಥಿತಿ ತಲುಪಿವೆ. ಇದು ಕೇವಲ ಇವತ್ತಿನ ಸಂಭವವೆಂದೂ ನಾವು ಭಾವಿಸಬೇಕಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದ ಯೋಜನೆಗಳಲ್ಲಿ ಮಾಯವಾಗುತ್ತ ಬಂದ ಸೈದ್ಧಾಂತಿಕ ಸಂಕಲ್ಪ ಶಕ್ತಿ ಮತ್ತು ಅಗಾಧವಾಗಿ ಬೆಳೆಯುತ್ತಾ ಬಂದ ಅಧಿಕಾರ ಭದ್ರತೆಯ ಆಸೆಗಳು ನಮ್ಮ ದೇಶದ ಬಡಜನತೆಯನ್ನು ಬಲಿಕೊಟ್ಟ ಒಂದೆರಡು ಕಾರಣಗಳಾಗಿವೆ.

ಈಗಂತೂ ಯಾರ ಬಾಯಲ್ಲಿ ನೋಡಿದರೂ ಅನಿವಾಸಿ ಭಾರತೀಯರು ಮತ್ತು ವಿದೇಶಿ ಬಂಡವಾಳಿಗರ ಮಾತು ಮುತ್ತಾಗಿ ಉದುರುತ್ತಿದೆ. ಅವರಿಗೆ ಯಾವುದೇ ಅವಕಾಶವಿರಕೂಡದು ಎಂದು ಕಟ್ಟಪ್ಪಣೆ ಮಾಡುವುದು ಸುಲಭವಾದರೂ ಪರಿಪಾಲಿಸುವುದು ಕಷ್ಟವೆಂದು ನನಗೆ ಗೊತ್ತು. ಆದರೆ ಯಾವುದನ್ನು ಎಷ್ಟು ಬಳಸಿಕೊಳ್ಳಬೇಕೆಂಬ ಪರಿಜ್ಞಾನವೇ ಇಲ್ಲದೆ ಇಂಥವರ ನಾಲಗೆ ಮಾತ್ರವಾಗಿ ಮಾತನಾಡಲು ನಮ್ಮವರು ಅಧಿಕಾರ ನಡೆಸಬೇಕಾಗಿಲ್ಲ. ಬಂಡವಾಳ ತೊಡಗಿಸುವಿಕೆ ನಮ್ಮ ಸಂದರ್ಭದ ಅನಿವಾರ್ಯ ಆರ್ಥಿಕ ಕ್ರಿಯೆಯಾದುದರಿಂದ ಅದನ್ನು ಕುರುಡಾಗಿ ವಿರೋಧಿಸಬೇಕಿಲ್ಲವೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ಅವರ ಆಣತಿಗಳನ್ನು ಕುರುಡಾಗಿ ಪರಿಪಾಲಿಸಬೇಕಾಗಿಯೂ ಇಲ್ಲ. ಯಾವುದೇ ಬಂಡವಾಳವು ನಾವು ಒಪ್ಪಿಕೊಂಡು ಅರ್ಥ ವ್ಯವಸ್ಥೆಗೆ ಪೂರಕವಾಗಿ ಸಾಧನವಾಗಿ ಬರಬೇಕೇ ಹೊರತು – ಹೊಸ ಅರ್ಥ ವ್ಯವಸ್ಥೆಯನ್ನೇ ನೆಲೆಗೊಳಿಸಿ ಬಡಬಗ್ಗರ ಬಾಯಿಗೆ ಮಣ್ಣು ಹಾಕಬೇಕಾಗಿಲ್ಲ. ನಮ್ಮ ದೇಶದ ಸಾರ್ವಭೌಮತ್ವವನ್ನು ಯಾವ ಕಾರಣಕ್ಕೂ ಬಲಿ ಕೊಡಬೇಕಾಗಿಲ್ಲ.

ಈಗ ಚೀನಾ ವಿಷಯಕ್ಕೆ ಬರೋಣ. ಚೀನಾ ಸಾಕಷ್ಟು ಬದಲಾಗುತ್ತಿದೆಯೆಂದು ವಿವಿಧ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಆರ್ಥಿಕ ಉದಾರೀಕರಣಕ್ಕೆ ಚೀನಾ ಬಾಗಿಲು ತೆಗೆದಿದೆಯೆಂಬ ಭಾವನೆ ಬೆಳೆಯಲು ಸಹಾಯ ಮಾಡುತ್ತಿವೆ. ವಾಸ್ತವವಾಗಿ ಚೀನಾ ದೇಶವು ತನ್ನ ಅರ್ಥಚಿಂತನೆಯ ಮೂಲ ಸಿದ್ಧಾಂತ ಮತ್ತು ಸಂವೇದನೆಯನ್ನು ಬಿಟ್ಟುಕೊಡದೆ, ತನ್ನ ಆರ್ಥಿಕಾಭಿವೃದ್ಧಿಗೆ ಬೇಕಾದಷ್ಟು ಹೊರ ಬಂಡವಾಳಕ್ಕೆ ಬಾಗಿಲು ತೆಗೆದಿದೆ. ಆದ್ದರಿಂದ ಅದು ತನ್ನ ಸಮತಾವಾದಿ ಆಶಯಗಳನ್ನು ಮುಂದುವರೆಸಿಕೊಂಡು ಬರುತ್ತಿದೆ.

ಆದರೆ ಇಂಡಿಯಾದಲ್ಲಿ ಆದದ್ದು ಏನು? ಇಂದಿರಾ ಗಾಂಧಿ ಕಾಲದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಮಾಜವಾದಿ ಆರ್ಥಿಕ ಚಿಂತನೆಯ ಮಂತ್ರ ಮೋಹಕತೆಯಿಂದ ಹೆಸರಾಗಿದ್ದ ಮನಮೋಹನಸಿಂಗ್ ಅವರು ಈಗ ಅರ್ಥ ಸಚಿವರಾಗಿ ಆರ್ಥಿಕ ಉದಾರೀಕರಣ ಮತ್ತು ಖಾಸಗೀಕರಣಗಳ ಬಾಯಿಪಾಠ ಒಪ್ಪಿಸುತ್ತಿದ್ದರು. ಇಂದಿರಾಗಾಂಧಿಯವರ ಆಪ್ತರಾಗಿ ಅವರು ಹೇಳಿದ್ದನ್ನು ಮತ್ತಷ್ಟು ಬೌದ್ಧಿಕ ವಿದ್ವತ್ತಿನಿಂದ ವಿವರಿಸುತ್ತಿದ್ದ ನರಸಿಂಹ ರಾವ್ ಇಂದು ಪ್ರಧಾನಿಯಾಗಿ ಉದಾರೀಕರಣದ ಪಾಠ ಮಾಡುತ್ತಿದ್ದಾರೆ. ನಮ್ಮ ಅರ್ಥ ವ್ಯವಸ್ಥೆಯ ಮೂಲ ಆಶಯಗಳನ್ನು ಬಲಿಕೊಟ್ಟು ವಿದೇಶಿ ಬಂಡವಾಳಕ್ಕೆ ಸೆರಗು ಹಾಸಿದ ನೀತಿ ಅನುಸರಿಸುತ್ತಿರುವ ಎಲ್ಲರೂ ಮುಂದೊಂದು ದಿನ ನಮ್ಮ ಚರಿತ್ರೆಯ ಕರಾಳ ವ್ಯಕ್ತಿತ್ವಗಳಾಗುತ್ತಾರೆ.

ಇನ್ನೊಂದು ಅಂಶವನ್ನು ಇಲ್ಲಿ ಹೇಳಬೇಕು. ಆರ್ಥಿಕ ನೀತಿ ಎನ್ನುವುದು ಕೇವಲ ಬಂಡವಾಳದ, ಲಾಭ ನಷ್ಟದ ಲೆಕ್ಕಾಚಾರವಲ್ಲ. ಯಾವುದೇ ಒಂದು ದೇಶದ ಆರ್ಥಿಕ ನೀತಿಯು ಆಯಾ ದೇಶದ ಸಾಮಾಜಿಕ ಮತ್ತು ರಾಜಕೀಯ ನೀತಿಯನ್ನು ಪ್ರತಿನಿಧಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಈಗ ನಮ್ಮ ದೇಶ ಅನುಸರಿಸುತ್ತಿರುವ ಆರ್ಥಿಕ ನೀತಿಯು ಸಾಮಾಜಿಕ ಅಸಮಾನತೆಯಿಂದ ಉಂಟಾದ ಏರುಪೇರುಗಳನ್ನು ಕುರಿತು ಚಿಂತಿಸುವುದಿಲ್ಲ. ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸಾಮಾಜಿಕ-ಆರ್ಥಿಕ ನೀತಿಯ ಪಾತ್ರ ಕುರಿತು ಯೋಚಿಸುವುದಿಲ್ಲ. ರಾಜಕೀಯವಾಗಿ ಸಮಾಜವಾದಿ ಆಶಯಗಳನ್ನು ವಿಶಾಲಾರ್ಥದಲ್ಲಿ ಸಮಾನತೆಯ ಆಶಯಗಳನ್ನು -ನೆಲೆಯೂರಿಸುವ ಸಣ್ಣ ಸಂಕಲ್ಪವೂ ಇಲ್ಲ. ಇವೆಲ್ಲದರಿಂದ ದೂರ ಸರಿದು ಸಾಮಾಜಿಕ-ಆರ್ಥಿಕ ನೆಲೆಯಲ್ಲಿ ಬೆಳೆದುಬಂದ ಸಾಂಪ್ರದಾಯಿಕ ಸವಲತ್ತುದಾರರಿಗೆ ಹಾಸಿಗೆ ಹಾಸುವುದು ಉದಾರ ನೀತಿಯಾಗಿ ಕಾಣಿಸುತ್ತಿದೆ.

ಅಮೆರಿಕಾದ ಕೈವಾಡ ಬದಲಾದಂತೆಲ್ಲ ಬಲಿಯಾಗುತ್ತ, ಬಯಲಾಗುತ್ತ, ವಿಘಟನೆಗೊಂಡು ಸೋವಿಯತ್ ಯೂನಿಯನ್ನಿನ ಉದಾಹರಣೆಯನ್ನು ಮುಂದೊಡ್ಡಿ ಸಮಾಜವಾದೀ ಆಶಯಗಳು ಅಪ್ರಸ್ತುತವೆಂದು ಸಾರುವ ಒಂದು ಸಂಪ್ರದಾಯವೇ ನಮ್ಮಲ್ಲಿ ಬೆಳೆಯುತ್ತಿದೆ. ನಿಜ, ಸಮಾಜವಾದಿ ಚಳುವಳಿ ಹಿನ್ನಡೆಗೆ ಗುರಿಯಾಗಿದೆ. ಹಾಗೆಂದ ಕೂಡಲೇ ಅದನ್ನು ಸಂಪೂರ್ಣ ಕೈಬಿಟ್ಟು ಅದಕ್ಕೆ ವಿರುದ್ಧ ಆರ್ಥಿಕ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಬೇಕೆ? ಹಣವಿದ್ದವನಿಗೆ ಮಾತ್ರ ಸೆರಗು ಹಾಸಿದ ಸೂಳೆಗಾರಿಕೆ ತೋರಬೇಕೆ?

ಸಮಾಜವಾದಿ ಚಳುವಳಿ ಕುಸಿತದಿಂದ ಏನೂ ಆಗಿಲ್ಲವೆಂಬಂತೆ ವರ್ತಿಸುವುದು ಆತ್ಮವಂಚನೆಯಾದರೆ, ಬಂಡವಾಳಶಾಹಿ ಅರ್ಥವ್ಯವಸ್ಥೆ ಥಟ್ಟನೆ ಹಾರಿ ಸವಾರಿ ಮಾಡುತ್ತಾ ವೈಭವೀಕರಿಸುವುದು ಆತ್ಮವಂಚನೆಯಷ್ಟೇ ಅಲ್ಲ, ಜನ ವಂಚನೆಯೂ ಹೌದು.

ವಿಶ್ವ ಅರ್ಥವ್ಯವಸ್ಥೆಯಲ್ಲಾಗುತ್ತಿರುವ ಬೆಳವಣಿಗೆಗಳ ನೆಪ ಹೇಳಿ ನಮ್ಮ ದೇಶದ ಸಾಮಾಜಿಕ-ಸಾಂಸ್ಕೃತಿಕ ಆಶಯಗಳನ್ನು ಹರಾಜು ಹಾಕುವುದು ಅಕ್ಷಮ್ಯ. ಸ್ಥಳೀಯ ಅರ್ಥ ವ್ಯವಸ್ಥೆಯೊಂದನ್ನು ರೂಪಿಸಿ ಸಮಾನತೆಯ ಆಶಯಗಳ ವಿಸ್ತರಣೆಗಾಗಿ ನಮ್ಮ ದೇಶವು ಸಂಕಲ್ಪ ಮಾಡದಿದ್ದರೆ ಸೆರಗು ಸರಿಸುವ ಸರ್ಕಾರದ ವಯ್ಯಾರವೇ ಸಾಧನೆಯಾಗುವ ದುರಂತ ಕಾದಿದೆ. ನಾವು ಯಾರಿಗಾಗಿ ಬೆಳೆ ಬೆಳೆಯಬೇಕು? ಕಾರ್ಖಾನೆಗಳಲ್ಲಿ ಯಾರಿಗಾಗಿ ಉತ್ಪಾದಿಸ ಬೇಕು? ನಮ್ಮ ವ್ಯವಸಾಯ, ನಮ್ಮ ಕೈಗಾರಿಕೆ, ನಮ್ಮ ಕೈ ಕಸುಬು, ನಮ್ಮ ಶಿಕ್ಷಣ-ಎಲ್ಲವೂ ಯಾರಿಗಾಗಿ? ವಿದೇಶಿ ವಿನಿಮಯಕ್ಕಾಗಿಯೊ? ನಮ್ಮ ನೆಲದ ಸಂತೋಷ ಸಂಭ್ರಮಗಳನ್ನು ಕಾಪಾಡುವ ಜನರ ಮಾನತೆಗಾಗಿಯೊ? ನಮ್ಮ ಉತ್ಪಾದನೆಗಳು ಮೊದಲು ನಮ್ಮ ದೇಶವನ್ನು ಗಮನದಲ್ಲಿಟ್ಟುಕೊಳ್ಳ ಬೇಕೊ? ವಿದೇಶಕ್ಕೆ ಉತ್ಪಾದಿಸಿ, ರಫ್ತು ಮಾಡಿ, ಉಳಿದ ಎಂಜಲಲ್ಲಿ ನಾವು ಹಂಚಿಕೊಂಡು ಬದುಕಬೇಕೊ? ಸ್ಥಳೀಯ ಆದ್ಯತೆಗಳ ಆರ್ಥಿಕ ನೀತಿಯನ್ನು ಆಮೂಲಾಗ್ರವಾಗಿ ರೂಪಿಸುವುದು ನಮ್ಮ ಸವಾಲಾಗದಿದ್ದರೆ, ಸಮಾನತೆ-ಸ್ವಾಭಿಮಾನಗಳ ಜಾಗದಲ್ಲಿ ಸ್ವಾರ್ಥ ಮತ್ತು ಶೋಷಣೆಗಳು ಮೌಲ್ಯಗಳಾಗಿ ಸಾಮಾಜಿಕ-ಸಾಂಸ್ಕೃತಿಕ ಕೀಳರಿಮೆಗೆ ಕಾರಣವಾಗುತ್ತವೆ.

ಇಂದು ಏನಾಗುತ್ತಿದೆ ಗೊತ್ತೆ? ಅನಿವಾಸಿ ಭಾರತೀಯ ಬಂಡವಾಳಗಾರನೊ, ವಿದೇಶಿ ಕೋಟ್ಯಾಧಿಪತಿಗಳೊ ಬಂದರೆ, ಅವರ ಅಮಲಿನೂಟದ ಸಂದರ್ಭದಲ್ಲಿ, ನೃತ್ಯ, ಸಂಗೀತ ಇತ್ಯಾದಿಗಳನ್ನು ಸರ್ಕಾರವೇ ಏರ್ಪಡಿಸಿ ಸಂತೋಷಪಡಿಸಲು ಪ್ರಯತ್ನಿಸಿದ ಉದಾಹರಣೆಗಳಿವೆ. ವಿದೇಶಿ ಬಂಡವಾಳದ ಮಿತಿಮೀರಿದ ಹಿಡಿತದಿಂದ ಉಂಟಾಗುವ ಸಾಂಸ್ಕೃತಿಕ ದುಷ್ಪರಿಣಾಮಗಳ ಒಟ್ಟು ಸ್ವರೂಪದ ಮಾತು ಒತ್ತಟ್ಟಿಗಿರಲಿ, ಬಂಡವಾಳ ತೊಡಗಿಸುವ ಬಯಕೆಯಿಂದ ಬಂದವರೆದುರು, ಅವರು ಅನ್ನ ಪಾನೀಯ ಪ್ರಸಂಗದ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮಟ್ಟಕ್ಕೆ ಸರ್ಕಾರಗಳು ಇಳಿಯುವುದೆಂದರೆ ಖಾಸಗಿಯವರು ಕ್ಲಬ್ಬುಗಳಲ್ಲಿ ವ್ಯಾಪಾರ ಕುದುರಿಸುವುದಕ್ಕೆ ಸಮವಲ್ಲವೆ ?

ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಸೆರಗು ಸರಿಸು ಸರ್ಕಾರಿ ನೀತಿ ಉದಾರೀಕರಣವಾಗಿ, ಖಾಸಗೀಕರಣವಾಗಿ ನಮ್ಮ ಬದುಕನ್ನು ವ್ಯಾಪಿಸುವ ಭಯಾನಕ ಸನ್ನಿವೇಶವು ಸಮಕಾಲೀನ ಸಂದರ್ಭದ ದೊಡ್ಡ ದುರಂತ. ಈ ದುರಂತವು ಅರ್ಥವ್ಯವಸ್ಥೆಯಲ್ಲಿ ಅಂತರ್ಗತವಾದ ನಿಧಾನ ವಿಷವಾಗಿ ವ್ಯಾಪಿಸುತ್ತದೆ. ಜನಪರ ಆಶಯ ಮತ್ತು ಆತ್ಮಸ್ಥೈರ್ಯವನ್ನು ಸಾಯಿಸುತ್ತಾ ಸಾಗುತ್ತದೆ. ವಿಷದ ವಿರುದ್ಧ ಒಂದಾಗುವುದು ಜನ ಸಂಘಟನೆಗಳ ಜವಾಬ್ದಾರಿ; ನಮ್ಮೆಲ್ಲರ ಜವಾಬ್ದಾರಿ.
*****
೩೦-೦೪-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೧

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

 • ಸಿಹಿಸುದ್ದಿ

  ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys