ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ

“ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ” ಎಂದು ನಿರ್ಲಿಪ್ತರಾಗಿದ್ದುಕೊಂಡೇ ತಮ್ಮ ಕಾವ್ಯ ಕೃತಿಯ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಜಿ.ಎಸ್.ಶಿವರುದ್ರಪ್ಪ ಎಂಬ ಹಾಡಹಕ್ಕಿಯನ್ನು ಸನ್ಮಾನಗಳು, ಪ್ರಶಸ್ತಿಗಳು ಹುಡುಕಿಕೊಂಡೇ ಬರುತ್ತಿವೆ. ಈ ಹಾಡು ಹಕ್ಕಿ ಧರಿಸಿಕೊಂಡ ಇತ್ತೀಚಿನ ಬಣ್ಣದ ಗರಿ ಎಂದರೆ “ರಾಷ್ಟ್ರಕವಿ” ಪ್ರಶಸ್ತಿ. ಅವರ ಸಾಧನೆ ಎಂಬ ಬೆಟ್ಟದ ತುತ್ತ ತುದಿಯ ಈ ತಿರುವಿನಲ್ಲಿ ನಿಂತು ಹಿಂದಿರುಗಿ ನೋಡಿದರೆ ಕಾಣುವುದೇ ಅವರ ಕಾವ್ಯ, ವಿಮರ್ಶೆ, ಸಂಘಟನೆಗಳ ಐದು ದಶಕದ ಸುದೀರ್ಘ ಹಾದಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಶಿವರುದ್ರಪ್ಪ ಪದವಿ ಮುಗಿಸಿ ಕೆಲಕಾಲ ಗುಮಾಸ್ತರಾಗಿಯೂ ದುಡಿದಿದ್ದರು. ಭಾರತೀಯ ಸೈನ್ಯಕ್ಕೆ ಸೇರಲು ಅರ್‍ಜಿಯನ್ನೂ ಹಾಕಿದ್ದರಂತೆ. ದೈಹಿಕ ದಾರ್ಢ್ಯವಿಲ್ಲವೆಂಬ ಕಾರಣದಿಂದ ಇವರ ಅರ್ಜಿ ತಿರಸ್ಕೃತವಾದದ್ದು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೇಳುವಂತೆ ಕನ್ನಡ ಕಾವ್ಯಲೋಕದ ಪುಣ್ಯ. ಅನಂತರ ಕನ್ನಡ ಆನರ್‍ಸ್, ಕನ್ನಡ ಎಂಎ ಮುಗಿಸಿ ದಾವಣಗೆರೆಯ ಸರ್ಕಾರಿ ಕಾಲೇಜು, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯ, ಮೈಸೂರುಗಳಲ್ಲಿ, ಕನ್ನಡ ಉಪನ್ಯಾಸಕರಾಗಿದ್ದು ಅನಂತರ ಬೆಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕರಾದರು. ಇಲ್ಲಿ ಅವರಿದ್ದ ಎರಡು ದಶಕಗಳು ವಿಶ್ವವಿದ್ಯಾಲಯದ ಪಾಲಿಗೂ ಕನ್ನಡ ಕಾವ್ಯ ಲೋಕದ ಪಾಲಿಗೂ ವರವಾಗಿ ಪರಿಣಮಿಸಿದವು.

ಕುವೆಂಪು ಅವರನ್ನು ತಮ್ಮ ಕಾವ್ಯ ಗುರು ಎಂದು ಕರೆಯುವ ಜಿ‌ಎಸ್‌ಎಸ್‌ ಅವರ ಪ್ರಭಾವಕ್ಕೆ ಅಗಾಧವಾಗಿ ಒಳಗಾಗಿದ್ದಾರೆ ಮತ್ತು ಆ ಪ್ರಭಾವವನ್ನು ಮೀರಿ ಬೆಳೆದಿದ್ದಾರೆ.

ನಿಶ್ಯಬ್ದದಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ
ನೀವು ಕಲಿಸಿದಿರಿ ನನಗೆ ತಲೆಯೆತ್ತಿ ನಿಲ್ಲುವುದನ್ನು
ಕಿರುಕುಳಗಳಿಗೆ ಜಗ್ಗದೇ
ನಿರ್‍ಭಯವಾಗಿ ನಡೆಯುವುದನ್ನು
ಸದ್ದಿರದೇ ಬದುಕುವುದನ್ನು.
ಎಷ್ಟೊಂದು ಕೀಲಿಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ.
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ.
ಸದ್ದುಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಯಬ್ದದಲ್ಲಿ ನೆನೆಯುತ್ತೇನೆ ಗೌರವದಿಂದ
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ

ಎಂದು “ಶ್ರೀ ಕುವೆಂಪು ಅವರನ್ನು” ನೆನೆಯುತ್ತಾರೆ.

ಒಂದು ಕಾಲದಲ್ಲಿ ಪದ್ಯ ಬರೆಯದೇ ಇದ್ದರೆ ನಿದ್ರೆಯೇ ಬರುತ್ತಿರಲಿಲ್ಲ ಎಂದು ಹೇಳುವ ಜಿ‌ಎಸ್‌ಎಸ್‌ ಇದುವರೆಗೆ ಹದಿಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅವರ ಕವಿತೆಗಳು “ಸಾಮಗಾನ”, “ಚೆಲುವು ಒಲುವು”, “ದೇವಶಿಲ್ಪ”, “ಕಾರ್ತಿಕ”, “ದೀಪದ ಹೆಜ್ಜೆ”, “ಗೋಡೆ”, “ಪ್ರೀತಿ ಇಲ್ಲದ ಮೇಲೆ”, “ವ್ಯಕ್ತಮಧ್ಯ”, “ಚಕ್ರಗತಿ” ಮೊದಲಾದ ಹದಿಮೂರು ಸಂಕಲನಗಳಲ್ಲೂ ‘ಸಮಗ್ರ ಕಾವ್ಯ’ದಲ್ಲೂ ಸೇರ್ಪಡೆಯಾಗಿವೆ. ಕಾವ್ಯದಂತೆಯೇ ವಿಮರ್ಶಾ ರಚನೆಯಲ್ಲಿಯೂ ಅವರು ಸಮ ಸಮವಾಗಿ ತೊಡಗಿಸಿಕೊಂಡಿದ್ದರೂ ಅವರ ಮೊದಲ ಒಲವು ಕಾವ್ಯವೇ. ‘ಸ್ವಾಮೀ ನಾನೂ ಒಬ್ಬ ಕವಿ. ನನಗೆ ಬೇಕು ಐದೋ ಆರೋ ಹೃದಯ ಇರುವಂಥ ಕಿವಿ” ಎನ್ನುವ ಅವರಿಗೆ ಸಹೃದಯನ ಮತ್ತು ವಿಮರ್ಶಕನ ಜವಾಬುದಾರಿಯ ಅರಿವಿತ್ತು. ಇದರೊಂದಿಗೆ ಎಂ.ಎ. ವಿದ್ಯಾರ್ಥಿಗಳಿಗೆ ಬೋಧಿಸಿದ ಭಾರತೀಯ ಕಾವ್ಯಮೀಮಾಂಸೆ ಮತ್ತು ತೌಲನಿಕ ಕಾವ್ಯ ಮೀಮಾಂಸೆ, ಕುವೆಂಪು ಅವರ ಪದತಲದಲ್ಲಿ ಕುಳಿತು ಕೇಳಿದ್ದ ಕಾವ್ಯ ಜಿಜ್ಞಾಸೆಯ ಪಾಠ ಕ್ರಮ ಈ ಮೂರರ ರಸಪಾಕವೇ ಅವರ ವಿಮರ್ಶಾ ಸಂಕಲನಗಳಾದ “ವಿಮರ್ಶೆಯ ಪೂರ್ವ ಪಶ್ಚಿಮ”, “ಗತಿಬಿಂಬ”, “ಪರಿಶೀಲನ”, “ಪ್ರತಿಕ್ರಿಯೆ”, “ನವೋದಯ”, “ಅನುರಣನ”ಗಳಲ್ಲಿ ಸಿದ್ಧಿಸಿ ಕೊನೆಗೆ “ಕಾವ್ಯಾರ್ಥ ಚಿಂತನ”ದಲ್ಲಿ ಮಡುಗಟ್ಟಿದೆ. ಇವಲ್ಲದೇ ಅವರು ತಮ್ಮ ಪಿಹೆಚ್.ಡಿ. ಪ್ರಬಂಧವಾದ “ಸೌಂದರ್‍ಯ ಸಮೀಕ್ಷೆ”, ಸಿದ್ಧರಾಮನನ್ನು ಕುರಿತ ಕಾದಂಬರಿ “ಕರ್ಮಯೋಗಿ”, “ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು”, “ಅಮೆರಿಕನ್ನಡಿಗ”, “ಗಂಗೆಯ ಶಿಖರಗಳಲ್ಲಿ” ಎಂಬ ಪ್ರವಾಸ ಪ್ರಬಂಧಗಳು, ‘ಚತುರಂಗ’ ಎಂಬ ಆತ್ಮಚರಿತ್ರೆ ‘ಕುವೆಂಪು ಪುನರಾಲೋಕನ’ ಎಂಬ ಮರು ಮೌಲ್ಯಮಾಪನಗಳನ್ನೂ ರಚಿಸಿದ್ದಾರೆ. ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭೂಸನೂರು ಮಠ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕವಿ ಸಮ್ಮೇಳನದ ಅಧ್ಯಕ್ಷತೆ, ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯ ಅಧ್ಯಕ್ಷತೆ, ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ, ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

ಇದೀಗ “ರಾಷ್ಟ್ರಕವಿ” ಪ್ರಶಸ್ತಿ ಅವರಿಗೆ ಲಭಿಸುವ ಮೂಲಕ ಆ ಪ್ರಶಸ್ತಿಯ ಗೌರವವೇ ಹೆಚ್ಚಾಗಿದೆ. ಇದು ಕನ್ನಡಕ್ಕೆ ದೊರತ ಮೂರನೇ ರಾಷ್ಟ್ರಕವಿ ಪ್ರಶಸ್ತಿ, “ಕರ್ನಾಟಕ” ಎಂಬ ಪದದ ಅಸ್ತಿತ್ವವೇ ಇರದಿದ್ದ ಕಾಲದಲ್ಲಿ ತಮಿಳ್ನಾಡು ಸರ್ಕಾರವು ಸಂಶೋಧಕರೆಂದೇ ಖ್ಯಾತರಾದ, ಹದಿನಾಲ್ಕು ಭಾಷೆಗಳಲ್ಲಿ ರಚಿತವಾದ ಕವಿತೆಗಳನ್ನು ಒಮ್ಮೆಗೇ ಕನ್ನಡಕ್ಕೆ ಭಾಷಾಂತರಿಸಿ ಓದಿದ ಗೋವಿಂದ ಪೈ ಅವರಿಗೆ “ಅವರು ನಮ್ಮವರಲ್ಲದಿದ್ದರೇನಂತೆ ಒಳ್ಳೆಯ ಕವಿ” ಎಂಬ ಭಾವನೆಯಿಂದ ೧೯೪೯ರಲ್ಲಿ “ರಾಷ್ಟ್ರಕವಿ” ಪ್ರಶಸ್ತಿ ನೀಡಿತ್ತು. ಅನಂತರ ೧೯೬೪ರಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭಕ್ಕೆ ಕರ್ನಾಟಕ ಸರ್ಕಾರವೇ ಕುವೆಂಪು ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಿತ್ತು. ಇದೀಗ ಮೂರನೇ ಬಾರಿಗೆ ಕನ್ನಡಕ್ಕೆ ರಾಷ್ಟ್ರಕವಿ ಪ್ರಶಸ್ತಿ.
***

ಸಹೃದಯರೆಲ್ಲರೂ ಪ್ರೀತಿಯಿಂದ ಜಿ‌ಎಸ್‌ಎಸ್‌ ಎಂದೇ ಕರೆಯುವ ಅವರಿಗೆ ಇದುವರೆಗೆ “ಸ್ನೇಹ ಕಾರ್ತಿಕ”, “ಗೌರವ”, “ಹಣತೆ” ಎಂಬ ಅಭಿನಂದನಾ ಗ್ರಂಥಗಳು ಅರ್ಪಣೆಯಾಗಿವೆ. ಹಣತೆ ಅವರ ಕಾವ್ಯದ ಒಂದು ಸ್ಥಾಯೀ ಪ್ರತಿಮೆ.

ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ

ಎಂಬ ಆಶಯದೊಂದಿಗೆ ಪ್ರಾರಂಭವಾದ ಹಣತೆ ಎಂಬ ಪ್ರತೀಕವು ಆ ಪದ ಪ್ರಯೋಗ ವಿಲ್ಲದ ಅವರ ಇತರ ಕವನಗಳಲ್ಲೂ ರಾರಾಜಿಸಿದೆ. ಪ್ರೀತಿ ಸ್ನೇಹಗಳ ಮೂಲಕವೇ ಆಧುನಿಕ ಯಾಂತ್ರಿಕ ಜಗತ್ತಿನ ತಲ್ಲಣಗಳನ್ನು ಗೆಲ್ಲಬಹುದು ಎಂಬ ನಂಬಿಕೆಯಿಂದಲೇ ತಮ್ಮ ಕಾವ್ಯದ ಹಡಗನ್ನು ನಡೆಸುವ ಕವಿಗೆ ಕತ್ತಲೆಯನ್ನು ಹೋಗಲಾಡಿಸುವ ಆಶಯ, ಕತ್ತಲೆ ಎಲ್ಲ ಕಾಲದಲ್ಲೂ ಅಜ್ಞಾನಕ್ಕೆ ಸಂಕೇತವಾಗಿ ಬಳಕೆಯಾಗಿರುವ ಒಂದು ಪ್ರತಿಮೆ. ಇವರ ಕವಿತೆಗಳಲ್ಲಿ ಅದು ಅಜ್ಞಾನದೊಂದಿಗೆ ಪರಸ್ಪರ ಅಪನಂಬಿಕೆ, ದ್ವೇಷ, ಪ್ರೀತಿ ಹೀನತೆ, ಸಂಸ್ಕಾರ ಹೀನತೆ ಮೊದಲಾದ ಆಧುನಿಕ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಅನಿಷ್ಟಗಳಿಗೂ ಸಂಕೇತವಾಗಿದೆ. ಕಾವ್ಯವು ಸಾಧಿಸಬಹುದಾದ ಅನೇಕ ಉಪಯೋಗಗಳಲ್ಲಿ ಈ ಕತ್ತಲೆಯನ್ನು ಹೋಗಲಾಡಿಸುವುದು ಬಹುಮುಖ್ಯವೆಂದು ಅವರು ಭಾವಿಸುತ್ತಾರೆ. ಹಾಗೆಂದೇ ಅವರು ಹೇಳುತ್ತಾರೆ.

ಹಣತೆ ಹಚ್ಚುತ್ತೇನೆ ನಾನು
ಎಷ್ಟೋ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಹೋಗಿರುವಾಗ ಈ
ಕತ್ತಲನ್ನು ಶಾಶ್ವತವಾಗಿ ಕಳೆಯುತ್ತೇನೆಂಬ
ಭ್ರಮೆ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ
ಅದು ಇರುವವರೆಗೆ ನನ್ನ ಮುಖ ನೀನು
ನಿನ್ನ ಮುಖ ನಾನು ನೋಡಬಹುದೆಂಬ
ಒಂದೇ ಆಸೆಯಿಂದ ಹಣತೆ ಹಚ್ಚುತ್ತೇನೆ ನಾನು
ಅದು ಆರಿದ ಮೇಲೆ ನಾನು ಯಾರೋ ನೀನು ಯಾರೋ.

ಈ ಅರ್ಥದಲ್ಲಿ ಅವರ ಅಭಿನಂದನಾ ಗ್ರಂಥಕ್ಕೆ ‘ಹಣತೆ’ ಎಂಬ ಹೆಸರಿಟ್ಟಿರುವುದು ಸರ್ವಥಾ ಸಾರ್ಥಕವಾಗಿದೆ. ಅವರೇ ಒಂದು ಉರಿಯುತ್ತಿರುವ ಹಣತೆ, ಅದರ ಬೆಳಕಿನಲ್ಲಿ ಸ್ಫೂರ್ತಿ ಪಡೆದು ಕವಿತೆ ರಚಿಸಿದವರಿದ್ದಾರೆ, ದಾರಿ ಕಂಡುಕೊಂಡವರಿದ್ದಾರೆ, ಹೃದಯ ತಿಳಿಗೊಳಿಸಿಕೊಂಡವರಿದ್ದಾರೆ. ಈ ಅರ್ಥದಲ್ಲಿ ಇವರು ಡಾ. ಸಿದ್ಧಲಿಂಗಯ್ಯ ಹೇಳುವಂತೆ ಜನಕವಿ. ಜನರಲ್ಲೇ ದೇವರನ್ನು ಕಂಡವರಿಗೆ ಬೇರೆ ದೇವರು ಬೇಕಿಲ್ಲ.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೇ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಿನ್ನೊಳಗೆ

ಎಂದು ಪರಿತಪಿಸುವ ಕವಿಗೆ ನಂದನ, ಬಂಧನ ಎರಡೂ ನಮ್ಮೊಳಗೇ ಇದೆ ಎನ್ನಿಸುತ್ತದೆ. ನಾಲ್ಕು ದಿನದ ಈ ಬದುಕಿನಲ್ಲಿ ಹೊಂದಿಕೊಳ್ಳಲಾಗದೇ ಕಷ್ಟಪಡುವ ನಾವು ಹತ್ತಿರವಿದ್ದರೂ ದೂರ ನಿಲ್ಲುವ ವಿಚಿತ್ರ ಸ್ವಭಾವದವರಾಗಿ ತೋರುತ್ತೇವೆ.

ಕಾಣದಾ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲೆನೆ ಒಂದು ದಿನ ಕಡಲನು ಕೂಡ
ಬಲ್ಲೆನೆ ಒಂದು ದಿನ

ಕವಿತೆ ಒಂದು ಅದ್ಭುತ ರೂಪಕ.

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಯನ್ನು ತುಂಬುತಿದೆ
ನನ್ನ ಕಲ್ಪನೆಯು ನನ್ನ ಕಡಲನೇ ಚಿತ್ರಿಸಿ
ಚಿಂತಿಸಿ ಸುಯ್ಯುತಿದ
ಎಲ್ಲಿರುವುದೋ ಅದು ಎಂತಿರುವುದೋ ಅದು.

ಇಲ್ಲಿ ಕಡಲು ಬದುಕಿನ ಗುರಿಗೆ, ಕಾವ್ಯದ ಗಂತವ್ಯಕ್ಕೆ, ಆಸೆಗಳ ತೀರುವಳಿಗೆ ಸಂಕೇತವಾಗಿದೆ.

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ.
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ,

ಎಂಬ ಸಾಲುಗಳ ‘ಅಂತೆ’ ಎಂಬ ಪ್ರತ್ಯಯವು ಪಾರಂಪರಿಕವಾಗಿ ಕಡಲಿನ ಗುಣಗಳನ್ನು ಗುರುತಿಸುತ್ತಾ ಕವಿಯೇ ನದಿಯಾಗಿ ಕಡಲಿಗಾಗಿ ಹಂಬಲಿಸುವ ರೂಪಕದಿಂದ ಅನೇಕ ಅರ್ಥವಲಯಗಳನ್ನು ದುಡಿಸಿಕೊಳ್ಳುತ್ತಿದೆ. ಹೀಗೆಯೇ ಪೌರಾಣಿಕ ಪ್ರತಿಮೆಗಳ ಮೂಲಕ ಸಮಕಾಲೀನ ಸಂವೇದನೆಗಳಿಗೆ ಪ್ರತಿಕ್ರಿಯಿಸುತ್ತಾ ಸಾರ್‍ವಕಾಲಿಕವಾಗುವ ಅವರ ಎರಡು ಕವಿತೆಗಳೆಂದರೆ ‘ಕೃಷ್ಣಶಕ್ತಿ’ ಮತ್ತು ‘ಭೀಮಾಲಾಪ’, ಒಂದು ಕೃಷ್ಣನನ್ನು ಕುರಿತದ್ದು, ಇನ್ನೊಂದು ಪಾಂಡವರು ಅಜ್ಞಾತವಾಸದಲ್ಲಿದ್ದ ವಿರಾಟ ಪರ್ವದ ಕತೆ ಕುರಿತದ್ದು. ಕೃಷ್ಣ ಮತ್ತು ಭೀಮ ಈ ಕವಿತೆಗಳಲ್ಲಿ ದ್ವಾಪರ ಯುಗದವರಾಗಿ ಮಾತ್ರ ಉಳಿಯದೇ ಸಾರ್ವಕಾಲಿಕವಾಗುವುದು ಈ ಕವಿತೆಗಳ ವಿಶೇಷ.

ನಗರ ಜೀವನದ ತಲ್ಲಣಗಳನ್ನು ಜಿ‌ಎಸ್‌ಎಸ್ ಹಿಡಿದಿಟ್ಟಂತೆ ಇನ್ನು ಯಾರೂ ಹಿಡಿದಿಟ್ಟಿಲ್ಲ ಎಂಬುದು ವಿಮರ್ಶಕರ ಅಭಿಮತ. ಅವರ ‘ಮುಂಬೈ ಜಾತಕ’ ಮತ್ತು “ಏನಿದೀ ಪ್ರವಾಹವು” ಎಂಬ ಎರಡು ಕವಿತೆಗಳ ಮೂಲಕ ಅದನ್ನು ನೋಡಬಹುದು.

ಹುಟ್ಟಿದ್ದು ಆಸ್ಪತ್ರೆ, ಕುಡಿದದ್ದು ಬಾಟ್ಲಿ ಹಾಲು
ಕಂಡದ್ದು ಕಲಿತದ್ದು ಕ್ಯೂ ನಿಲ್ಲು, ಫುಟ್‌ಪಾತಿನಲ್ಲೇ
ಚಲಿಸು, ಎಲ್ಲಿಯೂ ನಿಲ್ಲದಿರು ಮುನ್ನುಗು.

ಸಾವಿರ ಗಾಲಿಯುರುಳುಗಳ ಚಕ್ರದ ಕೆಳಗೆ ಅಲ್ಲಿ ಬದುಕು ಹೇಗೋ ಕಳೆದು ಹೋಗುತ್ತದೆ. ‘ಏನಿದೀ ಪ್ರವಾಹವು’ ಎಂಬ ಕವಿತೆಯು ಮನೆ ಮಠಗಳ ಕೊಚ್ಚೆ ಕಳೆದು ಭುಸುಗುಡುತ್ತಾ ಧಾವಿಸುವ ಪ್ರವಾಹಕ್ಕೆ ಸಿಕ್ಕಿ

ಗುಡಿಗೋಪುರ ಉರುಳುತಿದೆ
ಹಳೆಯ ಪ್ರತಿಮೆ ತೇಲುತಿವೆ
ದೀಪವಾರಿ ತಂತಿ ಹರಿದು ವಾದ್ಯವೃಂದ ನರಳುತಿದೆ
ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ.
ಭಯ ಸಂಶಯ ತಲ್ಲಣಗಳ ಕಂದರಗಳು ತೆರೆದಿವೆ.
ಮುಖ ಮುಖವೂ ಮುಖವಾಡ ತೊಟ್ಟು ನಿಂತ ಹಾಗಿದೆ.
ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ.

ಎಂದು ಕೆಲವಾರು ಪ್ರತಿಮೆಗಳ ಮೂಲಕವೇ ಬದುಕು ಹದಗೆಟ್ಟಿರುವುದನ್ನು ಸೂಚಿಸುತ್ತಿದೆ. ಆದರೂ ಕವಿ ಆಶಾವಾದಿ. ಇಂತಹ ಪರಿಸ್ಥಿತಿಯಲ್ಲೂ ತಾನು ಮಾಡಬಹುದಾದುದೇನು ಎಂದು ಚಿಂತಿಸಬಲ್ಲ ಪ್ರಜ್ಞಾವಂತ.

ಹೇಗೋ ನನ್ನ ಪಾಡಿಗೆ ನಾನು ಬದುಕುತ್ತೇನೆ
ಇದ್ದಷ್ಟು ನೆಲವ ಉತ್ತಿ ಬಿತ್ತಿ ನೀರೆರೆದು
ಮಲಗಿರುವ ಬೀಜಗಳ ಕಣ್ಣು ತೆರೆಸುತ್ತೇನೆ
ನಾಳೆ ಈ ಸಸಿಗಳೆಲ್ಲಾ ವಟ ವೃಕ್ಷಗಳಾಗಿ
ಸಾವಿರ ಜನಕ್ಕೆ ನೆರಳಾಗಲೆಂಬ
ಮಹದಾಸೆ ಇರದಿದ್ದರೂ
ಒಂದರಡಾದರೂ ಬೀಜವಾಗುವ
ಹಣ್ಣು ಬಿಟ್ಟಾವೆಂದು ಕಾಯುತ್ತೇನೆ.
***

ಜಿ‌ಎಸ್‌ಎಸ್‌ ಅವರ ಕವಿತೆಗಳ ಇನ್ನೊಂದು ಆಯಾಮವನ್ನು ನಾವು ಸುಗಮ ಸಂಗೀತದಲ್ಲಿ ಕಾಣಬಹುದು. ಕಳೆದ ಎರಡು ದಶಕಗಳಿಂದ ಕವಿತೆಗಳು ಭಾವಗೀತೆಗಳಾಗಿ ಸಂಗೀತಕ್ಕೆ ಹಾಡಿಗೆ ಒದಗಿದ್ದು ಒಂದು ದೊಡ್ಡ ಪುಣ್ಯ. ಇಲ್ಲದಿದ್ದರೆ ಅವು ಇಷ್ಟೊಂದು ಜನರನ್ನು ಹೀಗೆ ತಲುಪುತ್ತಿದ್ದವೋ ಇಲ್ಲವೋ, ಎಲ್ಲೋ ಆಕಾಶವಾಣಿಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಮೂಡಿ ಮರೆಯಾಗುತ್ತಿದ್ದ ಈ ಹಾಡುಗಳು ‘ಇತ್ಯೋತ್ಸವ’ ಕ್ಯಾಸೆಟಿನ ಜನಪ್ರಿಯತೆಯ ನಂತರ ಕ್ಯಾಸೆಟ್ ಮೂಲಕ ಮನೆ ಮನೆಯ ಮನಮನದ ಬಾಗಿಲು ಬಡಿದವು. ಹೀಗೆ ಜಿ‌ಎಸ್‌ಎಸ್‌, ಎನ್‌ಎಸ್‌ಎಲ್‌, ಹೆಚ್‌ಎಸ್‌ಪಿ, ಬಿ‌ಆರ್‌ಎಲ್‌ ಮೊಲಾದವರ ಕವಿತೆಗಳು ಜನಪ್ರಿಯವಾದವು. ಜಿ‌ಎಸ್‌ಎಸ್‌ ಅವರ ಕೆಲವು ಕವಿತೆಗಳನ್ನು ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ, ಎಸ್. ಸೋಮಸುಂದರಂ, ಎಚ್. ಫಲ್ಗುಣ ಸಂಗೀತ ನೀಡಿ ಜನಪ್ರಿಯಗೊಳಿಸಿದ್ದಾರೆ. ರತ್ನಮಾಲಾ ಪ್ರಕಾಶ್, ಬಿ.ಆರ್. ಛಾಯಾ, ಹೇಮಂತ್, ಮಾಲತಿ ಶರ್‍ಮಾ ಮೊದಲಾದವರು ಹಾಡಿ ಜನಪ್ರಿಯಗೊಳಿಸಿದ್ದಾರೆ. ತಮ್ಮ ಗುರುಗಳಾದ ತ.ಸು. ಶಾಮರಾಯರ ಎದುರಿಗೆ ಜಿ‌ಎಸ್‌ಎಸ್‌ ಹೇಳಿದಂತಿರುವ “ಎದೆ ತುಂಬಿ ಹಾಡಿದೆನು ಇಂದು ನಾನು” ಎಂಬ ಕವಿತೆಯಂತೂ ಈಗಾಗಲೇ ಸಾರ್ವತ್ರೀಕರಣಗೊಂಡಿದೆ. ಎದೆ ತುಂಬಿ ಹಾಡಿದ ಕವಿಗೆ ನಾಡು ಹೃದಯ ತುಂಬಿ ಸನ್ಮಾನಿಸಿದೆ.
***

ತಾವೇ ಉದ್ದಾಮ ವಿಮರ್ಶಕರಾಗಿದ್ದರೂ ಅವರ ಗಮನ ಮತ್ತು ಒಲವು ಕವಿತೆಯ ಕಡೆಗೇ. ಅವರು ಆಧುನಿಕ ಕನ್ನಡ ಕಾವ್ಯಮೀಮಾಂಸೆಗೆ ಕೊಟ್ಟ ಕೊಡುಗೆಯನ್ನು ಇನ್ನು ಮುಂದೆ ಅಳೆಯಬೇಕಿದೆ. ಆದರೆ ಇಂತಹ ಕೆಲವು ಪ್ರಯತ್ನಗಳಂತೂ ಪ್ರಾರಂಭವಾಗಿವೆ. ಯಾವುದೋ ಒಂದು ಭಾಷಣದಲ್ಲಿ ತೀನಂಶ್ರೀ ಅವರ “ಭಾರತೀಯ ಕಾವ್ಯ ಮೀಮಾಂಸೆ” ಏನಿದ್ದರೂ ಸಂಸ್ಕೃತ ಕಾವ್ಯ ಮೀಮಾಂಸೆ. ಭಾರತದ ಅನೇಕ ಪ್ರಾದೇಶಿಕ ಭಾಷೆಗಳ ಮೀಮಾಂಸೆ ಅದಲ್ಲ. ಅದಕ್ಕೆ ತಮ್ಮ ತಮ್ಮದೇ ಆದ ಮೀಮಾಂಸೆಗಳು ಬೇರೆ ಬೇರೆ ಇರಬಹುದು. ಹಾಗೇ ಕನ್ನಡಕ್ಕೂ ಇರಬಹುದು. ಒಂದು ಸಾವಿರ ವರ್ಷಗಳ ಕನ್ನಡ ಕಾವ್ಯಪರಂಪರೆಯನ್ನು ಅವಲೋಕಿಸುವ ಮೂಲಕ ಕನ್ನಡದ್ದೇ ಆದ ಕಾವ್ಯಮೀಮಾಂಸೆಯೊಂದನ್ನು ನಾವು ಕಟ್ಟಬಹುದು” ಎಂದು ಅವರು ಹೇಳಿದ್ದೇ ನೆಪವಾಗಿ ಈಗಾಗಲೇ ಅಂತಹ ಹಲವಾರು ಪುಸ್ತಕಗಳು ಕೇವಲ ಮೂರು-ನಾಲ್ಕು ವರ್ಷಗಳಲ್ಲಿ ರೂಪ ತಾಳಿವೆ.
***

ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಹಾಲ್‌ನಲ್ಲಿ ಪ್ರತಿ ವರ್ಷವೂ ಒಬ್ಬ ಕವಿಯನ್ನು ಕುರಿತು ನಡೆಯುತ್ತಿದ್ದ ಎರಡುಮೂರು ದಿನಗಳ ಸೆಮಿನಾರುಗಳಿಗೆ ವಿದ್ಯಾರ್ಥಿ, ಅಧ್ಯಾಪಕ, ಸಾಹಿತಿಗಳಲ್ಲದೇ ಸಾರ್ವಜನಿಕರೂ ಬಂದು ಹಾಲ್ ತುಂಬಿ ತುಳುಕಿ ಹೊರಗೂ ನಿಂತಿರುತ್ತಿದ್ದ ದಿನಗಳು ಸ್ಮರಣೀಯ. ಭಿನ್ನ ಮನೋಭಾವದ ವಿಮರ್ಶಕರನ್ನೂ ಸಾಹಿತಿಗಳನ್ನೂ ಒಂದು ವೇದಿಕೆಯ ಮೇಲೆ ತಂದು ಪರಸ್ಪರ ಹಂಚಿಕೊಳ್ಳುವುದು ಸಾಧ್ಯ ಎಂದು ಅವರು ತೋರಿಸಿ ಕೊಟ್ಟರು. ಈ ಕೆಲಸ ಅವರು ಅಕಾಡಮಿ ಅಧ್ಯಕ್ಷರಾದ ನಂತರ ಬೇರೆ ರೂಪದಲ್ಲಿ ಮುಂದುವರೆಯಿತು. ಈ ಅಂಶವನ್ನು ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಇದಕ್ಕೆ ಅವರ ವಿನಯಪೂರ್ವಕವಾದ ಪ್ರತಿಕ್ರಿಯೆ ಏನೆಂದರೆ “ಅದೊಂದು ಐತಿಹಾಸಿಕ ಆಕಸ್ಮಿಕ. ನಾನು ಅದಕ್ಕೆ ನಿಮಿತ್ತ ಮಾತ್ರ”. ವಿದ್ಯೆಯು ವಿನಯವನ್ನು ಕೊಡುತ್ತದೆ ಎಂಬ ಮಾತು ಸಾರ್ಥಕ ವಾಯಿತು.
***

ಜಿ‌ಎಸ್‌ಎಸ್‌ ಅವರನ್ನು ನಾನು ಹಲವಾರು ವರ್ಷಗಳಿಂದ ಆತ್ಮೀಯವಾಗಿ ಬಲ್ಲೆ. ಅವರಿಗೆ ಪಂಪ ಪ್ರಶಸ್ತಿ ಬಂದ ಸಂದರ್ಭದಲ್ಲಿ ನಾನು ಬರೆದ, ಮೊದಲು “ಶೂದ್ರ” ಪತ್ರಿಕೆಯಲ್ಲಿ ಪ್ರಕಟವಾಗಿ, ನಂತರ ಅಕಾಡಮಿಯ “ವಾರ್ಷಿಕ ಕವಿತೆ”ಯಲ್ಲೂ, ನಂತರ ಅಭಿನಂದನಾ ಗ್ರಂಥವಾದ “ಹಣತೆ”ಯಲ್ಲೂ ಪ್ರಕಟವಾದ ಈ ಕವಿತೆಯನ್ನು ಇಲ್ಲಿ, ಅವರ ಬಗ್ಗೆ ಬರೆದು ನನ್ನ ಗುರುಕಾಣಿಕೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಈ ಪತ್ರಿಕೆಯಲ್ಲೂ ನನ್ನ ನುಡಿ ನಮನವಾಗಿ ಗುರುತಿಸಲು ಇಷ್ಟಪಡುತ್ತೇನೆ :

ಪ್ರೀತಿ ಇಲ್ಲದ ಮೇಲೆ
ಹೂವು ಅರಳುವುದಿರಲಿ ಸಾ‌ರ್
ಗಿಡ ಹುಟ್ಟಿತು ಹೇಗೆ ಮೊಳಕೆಯೊಡೆದೀತು ಹೇಗೆ.
ಶಿವ, ಆಗಾಗ್ಗೆ, ತಾನು ಬರಲಾಗದಿದ್ದುದಕ್ಕೆಂದೇ
ನಿಮ್ಮನ್ನು ನಿಮ್ಮಂಥವರನ್ನು ಕಳುಹಿಸಬೇಕೆಂದು
ಅವನಿಗೆ ಹೊಳೆದೀತು ಹೇಗೆ
ನಿಮ್ಮ ವಾತ್ಸಲ್ಯ ಧಾರೆಯಲಿ ನಾವೆಲ್ಲ ಮಿಂದೇವು ಹೇಗೆ
(ಪ್ರಶಸ್ತಿ ಗರಿಗೆದರಿದರೂ ಮುಖ ಮಗುವಿನ ಹಾಗೆ)
ಸಧ್ಯ ಹೇಗೆ ಎಂದು ಪ್ರಶ್ನಿಸುವುದನ್ನು ಬಿಟ್ಟು
ನಿಮ್ಮ ಮಂದಹಾಸದ ಮುಖ ನೋಡುತ್ತಾ
ಸಾವಿರ ಕಾಲ ಬದುಕೋಣ ಹೀಗೆ.
ನಿಮ್ಮ ಅಸ್ಖಲಿತ ವಾಣಿಯ ಕಿವಿಯ ಗುಹಾಂತರ
ದಲ್ಲಿ ಕೇಳುತ್ತ ಒರತೆ ಬತ್ತದ ಹಾಗೆ.
ಬದುಕೇ ನಿನಗೆ ಅನಂತ ವಂದನೆ
ನಮ್ಮ ಗುರುಗಳಿರಲಿ ಹೀಗೇ ಹೀಗೇ ಹೀಗೇ.
*****
“ಸುಕೃತಿ” ಮಾಸ ಪತ್ರಿಕೆಗಾಗಿ ಬರೆದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ವೇತಳ ಹುಟ್ಟು ಹಬ್ಬ
Next post ಮಗುವಿನ ಹಾಡು

ಸಣ್ಣ ಕತೆ

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys