ಅದ್ವೈತ ಮತ್ತು ಶಂಕರ

“ಅದ್ವೈತ” ಎಂದರೆ ಬ್ರಹ್ಮ ಮತ್ತು ಜೀವಿಗಳು ಬೇರೆ ಬೇರೆಯಲ್ಲ, ಒಲವೇ ಒಂದು ಪ್ರತಿಪಾದಿಸುವ ತತ್ವ. ಅದನ್ನ ಮೊದಲಿಗೆ ಹೆಸರಿಸಿದವರು ಶಂಕರಾಚಾರ್ಯರು.

ಶಂಕರ, ಮಧ್ವ ಹಾಗೂ ರಾಮಾನುಜರನ್ನು ದೇವತಾ ಶಾಸ್ತ್ರಜ್ಞರು ಎಂದು ಕರೆಯುತ್ತಾರೆ. ಕ್ರಮವಾಗಿ ಅವರು ಅದ್ವೈತ, ದ್ವೈತ ಹಾಗೂ ವಿಶಿಷ್ಟಾದ್ವೈತ ತತ್ವಗಳನ್ನು ಬೋಧಿಸಿದರು. ಮೂವರೂ ವೈದಿಕ ಸಂಪ್ರದಾಯದವರು. ಇವರುಗಳು ಬೋಧಿಸಿದ್ದು ಮೇಲ್ನೋಟಕ್ಕೆ ಉದಾತ್ತವಾಗಿ ಕಂಡರೂ. ಕ್ರಿಯೆಯಲ್ಲಿ ಜಾತಿಪರವಾಗಿರುವಂಥವು. ಆದಕಾರಣವೆ ಆಳವಾಗಿ ಅಧ್ಯಯನ ಮಾಡಿದ್ದ ವಿವೇಕಾನಂದರು “ಶಂಕರಾಚಾರ್ಯ ಮುಂತಾದ ಯುಗಾವತಾರ ವ್ಯಕ್ತಿಗಳು ಹಲವು ಜಾತಿಗಳನ್ನು ಸೃಷ್ಟಿಸಿದರು” (ಸಂ.೫, ಪುಟ ೧೯೪)

ಶಂಕರರ ಅದ್ವೈತವು ಭಾವಾದ್ವೈತವೇ ಹೊರತು ಕ್ರಿಯಾದ್ವೈತವಲ್ಲ. ಜಗತ್ತು ಅವರ ಪ್ರಕಾರ ಮಿಥ್ಯೆ. ಹಾಗೆನ್ನಲು ಅವರಿಗೆ ಅವರ ಪರಂಪರೆಯೇ ಕಾರಣ. ಏಕೆಂದರೆ ಪೂರ್ಣಚಂದ್ರ ತೇಜಸ್ವಿಯವರು ಗುರಿತಿಸಿರುವಂತೆ ‘ವೈದಿಕ ಸಂಸ್ಕೃತಿಗೆ ತನ್ನದೇ ಆದ ಪ್ರಾದೇಶಿಕತೆ ಇಲ್ಲ.’ ಅಲೆಮಾರಿ ಪ್ರವೃತ್ತಿಯ ಬ್ರಾಹ್ಮಣರಿಗೆ ಬೇರುಗಳಿಲ್ಲ. ತೇಜಸ್ವಿ ಹೇಳುವಂತೆ, “ಅಲೆಮಾರಿ ಪ್ರವೃತ್ತಿಯ ಹೊಸ ಅನುಭವಗಳನ್ನೊಳಗೊಳ್ಳುವ ಮಹತ್ವಾಕಾಂಕ್ಷಿ ಸಾಹಸ ಪ್ರವೃತ್ತಿ -ಯಾಗದೆ ಕೇವಲ ವ್ಯವಸಾಯ ಮುಂತಾದ ಶೂದ್ರೋದ್ಯಮಗಳಿಂದ ತಪ್ಪಿಸಿಕೊಳ್ಳುವ ಸೋಮಾರಿತನ ಮಾತ್ರ- ವಾಗಿದೆ. ಬ್ರಾಹ್ಮಣ ಅಥವಾ ವೈದಿಕ ಸಂಸ್ಕೃತಿ ಹೀಗಿರುವುದರಿಂದಲೇ ಅನೇಕ ತತ್ವವೇತ್ತರೂ, ಚಿಂತನ ಶೀಲರೂ ಇದರಲ್ಲಿ ಹುಟ್ಟಿದವರೂ ಯಾವುದೇ ಸಾಮಾಜಿಕ ಬದಲಾವಣೆಯನ್ನು ಮಾಡದೆ, ವೇದೋಪನಿಷತ್ತು- ಗಳಿಗೆ ಹೊಸ ವ್ಯಾಖ್ಯಾನ ಮಾಡಿಹೋದರು.

ಶಂಕರರು ಮಾಡಿದ ಪ್ರಸ್ಥಾನತ್ರಯ-ಬ್ರಹ್ಮಸೂತ್ರ, ಉಪನಿಷತ್ತುಗಳು, ಗೀತೆಗಳ ಭಾಷ್ಯಗಳನ್ನು ಗಮನಿಸಿ ವಿವೇಕಾ- ನಂದರು ಹೇಳಿದ್ದಿದು: “ಭಾಷ್ಯವನ್ನು ಬರೆದ ದೊಡ್ಡ ಆಚಾರ್ಯರೆಲ್ಲ ಕೆಲವು ವೇಳೆ ತಮ್ಮ ಸಿದ್ಧಾಂತಕ್ಕೆ ಸರಿಯಾದ ಅರ್ಥವನ್ನು ಸೂತ್ರದಲ್ಲಿ ಬರುವಂತೆ ಮಾಡುವಾಗ ತಿಳಿದೇ ಸುಳ್ಳನ್ನು ಹೇಳುತ್ತಿದ್ದರು. ” (ಸಂ, ೮, ಪುಟ ೫೦).

ಶಂಕರರಿಗೆ ಶ್ವಪಚನ ಮೂಲಕ ಬ್ರಹ್ಮಜ್ಞಾನವಾಯಿತು ಒಂದು ಹೇಳುವುದು, ಈಶ್ವರ ಶ್ವಪಚನ ರೂಪದಲ್ಲಿ ಬಂದು ಜ್ಞಾನವನ್ನು ಬೋಧಿಸಿದ ಎನ್ನುವುರು ಕಟ್ಟುಕಥೆ. ಒಂದು ಪಕ್ಷ ಶ್ವಪಚನ ಮೂಲಕ ಬ್ರಹ್ಮಜ್ಞಾನವಾದುದೇ ನಿಜವಾದರೆ ಅನಂತರ ಶಂಕರರು ಬ್ರಹ್ಮ ಸೂತ್ರಕ್ಕೆ ಭಾಷ್ಯ ಬರೆದು “ವೇದ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು, ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಬೇಕು” (ಬ್ರಹ್ಮಸೂತ್ರ ಭಾಷ್ಯ: ಅಧ್ಯಾಯ ೧, ಸೂತ್ರ ೩೮) ಮುಂತಾದ ಮಾನವ
ವಿರೋಧಿಯಾದ ಮಾತುಗಳಿಂದ ಜಾತಿಪ್ರೇಮವನ್ನು ಏಕೆ ಮೆರೆದರು?

ಇನ್ನು ಉಪನಿಷತ್ತುಗಳಿಗೆ ಶಂಕರರು ಮಾಡಿರುವ ಭಾಷ್ಯವೂ ಕೂಡ ಕೆಲವೆಡೆ ಆಭಾಸ
ಉಂಟುಮಾಡುತ್ತದೆ. ಉದಾಹರಣೆಗೆ: ‘ಈಶಾವಾಸ್ಯೋಪನಿಷತ್‌’ನ ಎರಡನೆ ಮಂತ್ರ:
ಕುರ್ವನ್ನೇವೇಹ ಕರ್ಮಾಣಿ
ಜಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋsಸ್ತಿ
ನ ಕರ್ಮ ಲಿಪ್ಯತೇ ನರೇ ||
[ಈ ಲೋಕದಲ್ಲಿ (ಶಾಸ್ತ್ರವಿಹಿತವಾದ) ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಜೀವಿಸಲು ಇಚ್ಛೆ ಪಡಬೇಕು. ಹೀಗಿರುವ ಮನುಷ್ಯನಾದ ನಿನಗೆ ಅಶುಭಕರ್ಮವು ಅಂಟಿಕೊಳ್ಳದ (ಉಪಾಯವು) ಬೇರೆ ಯಾವುದೂ ಇಲ್ಲ]

ಕರ್ಮ ಎಂದರೆ ಕರ್ತವ್ಯ, ಕೆಲಸ. ವಚನಕಾರರು ಇದನ್ನು “ಕಾಯಕ” ಎಂದು ಕರೆದರು. ಇಲ್ಲಿ ಶಂಕರರು ಮೂಲ ಶ್ಲೋಕದಲ್ಲಿ ಇಲ್ಲದ ‘ಶಾಸ್ತ್ರವಿಹಿತವಾದ’ ಎಂಬ ಪದವನ್ನು ಸೇರಿಸಿ ವ್ಯಾಖ್ಯಾನಿಸುತ್ತಾರೆ, ಶಾಸ್ತ್ರ ವಿಹಿತವಾದದ್ದು ಎಂದರೆ ವರ್ಣ ವ್ಯವಸ್ಥೆಗೆ ಒಳಪಟ್ಟಿದ್ದು “ಬ್ರಾಹ್ಮಣ,  ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಅವರವರು ಅವರವರಿಗೆ ವಿಧಿಸಿರುವ ಕರ್ಮಗಳನ್ನು ಮಾಡುತ್ತಾ” ಎನ್ನುವ ಅರ್ಥ ಬರುವಂತೆ ಮಾಡಿರುವ ಅವರ ವ್ಯಾಖ್ಯೆಯ ಅಂತರಂಗದ ವ್ಯೂಹವನ್ನು
ಕಾಣಬಹುದು.

ವಿವೇಕಾನಂದರ ಇನ್ನೊಂದು ಮಾತನ್ನು ಮನನ ಮಾಡಿಕೊಳ್ಳಬೇಕು: “ನೋಡಿ, ಬಲಾತ್ಕಾರದಿಂದ ಹೇಗೆ ಕೋಟ್ಯಾಂತರ ಜನರು ತಮಗೆ ವಿರೋಧವಾದ ಅಭಿಪ್ರಾಯವನ್ನು ಸ್ವೀಕರಿಸುವಂತೆ ಮಾಡಿರುವರು. ಇದು ಋಷಿಗಳ ಅನ್ಯಾಯ, ಬುದ್ದಿವಂತರ ಅನ್ಯಾಯ, ಜ್ಞಾಪಕದಲ್ಲಿಡಿ! ತಿಳಿದವರ ಅನ್ಯಾಯ, ತಿಳಿಯದವರ ಅನ್ಯಾಯಕ್ಕಿಂತ ಘೋರವಾದದ್ದು. ಪಂಡಿತರು, ಬುದ್ಧಿವಂತರು, ಮತ್ತೊಬ್ಬರಮೇಲೆ ತಮ್ಮ ಅಭಿಪ್ರಾಯವನ್ನು ಬಲಾತ್ಕರಿಸುವುದಕ್ಕೆ ಪಾಮರರು ಪಾರಾಗಲು ಅಸಾಧ್ಯವಾದ ಸಾವಿರಾರು ಬಂಧನಗಳನ್ನು ಅವರ ಮಾರ್ಗದಲ್ಲಿ ತಂದೊಡ್ಡಬಲ್ಲರು.” (ಸಂ ೮, ಪುಟ ೧೫೪)

ಇದೇ ಕಾರಣ ಕುವೆಂಪು ಅವರು ಶಾಸ್ತ್ರಗಳ ಬಂಧನಗಳನ್ನು ಬದಿಗೊತ್ತಿ,

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದೆಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!
(ಕೋಗಿಲೆ ಮತ್ತು ಸೋವಿಯಟ್ ರಷ್ಯ: ಪುಟ ೨೪)
-ಎಂದು ಬುದ್ಧನಂತೆ ಎದೆಯ ದನಿಗೆ ಓಗೊಡುವ ಕರೆಯಿತ್ತರು.

ಹನ್ನೆರಡನೇ ಶತಮಾನದ ವಚನಕಾರರು ಎದೆಯ ದನಿಯಂತೆ ಅರಿತು ನಡೆದವರು. ಪ್ರಮುಖ ವಚನಕಾರರೆಲ್ಲಾ ಮಾನವ ವಿರೋಧಿಯಾದುದನ್ನೆಲ್ಲ ಖಂಡತುಂಡವಾಗಿ ಖಂಡಿಸಿದರು. ಅದರೆ ಅವರಾರೂ ಉಪನಿಷತ್ತುಗಳನ್ನು ಖಂಡಿಸದಿರುವುದು ಗಮನೀಯ. ಏಕೆಂದರೆ ಬದುಕಿಗೆ ಒಳಬೆಳಕನ್ನು ಬೀರಬಲ್ಲ, ಸರ್ವರಿಗೂ ಸಮಾನತೆಯನ್ನು ಸಾರಬಲ್ಲ ಶಕ್ತಿ ಉಪನಿಷತ್ತುಗಳಿಗೆ ಇವೆ ಎಂದು ಅವರು ಭಾವಿಸಿದ್ದರು. ಹೀಗೆ ಭಾವಾದ್ವೈತದ ಜೊತೆ ಜೊತೆಯಲ್ಲೇ ಕ್ರಿಯಾದ್ವೈತದ (ಕಾಯಕದ) ಮಹತ್ವವನ್ನು ಅರಿತಿದ್ದ ಎಲ್ಲ ವಚನಕಾರರೂ ನಿಜಜೀವನದಲ್ಲಿ ಅದ್ವೈತವನ್ನು ವ್ಯಕ್ತಪಡಿಸಿದರು.

ಈಗ ನಾವು, ಎಂದರೆ ಬಿಡುಗಡೆಗೊಳ್ಳಲಿಚ್ಛಿಸುವವರು, ಪರಲೋಕದಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ, ಇಹಲೋಕವನ್ನು, ಪ್ರಕೃತಿಯನ್ನು, ಪ್ರೀತಿಸುವವರು ಬಹು ಎಚ್ಚರಿಕೆಯಿಂದ ಅಡಿ ಇಡಬೇಕಾಗಿದೆ. ಏಕೆಂದರೆ ಕೇವಲ ಭಾವಮಟ್ಟದಲ್ಲಿದ್ದು ಕ್ರಿಯಾಮಟ್ಟದಲ್ಲಿ ಜಾತಿಪರವಾಗಿರುವ ಅದ್ವೈತ ಅಪಾಯಕಾರಿ. ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ಭಾವ ಮತ್ತು ಕ್ರಿಯೆಗಳೆರಡರಲ್ಲೂ ಜೀವಪರವಾದ ಅದ್ವೈತವನ್ನು ಆಚರಿಸುವ ಮಾರ್ಗದಲ್ಲಿ ನಡೆಯಬೇಕಾಗಿದೆ. ಮಹಮದ್ ಪೈಗಂಬರರು, “ಪರಲೋಕವನ್ನು ಪ್ರೀತಿಸುವಾತನು ತನ್ನ ಇಹಲೋಕಕ್ಕೆ ಹಾನಿ ಮಾಡಿಕೊಳ್ಳುತ್ತಾನೆ” ಎಂದಿದ್ದಾರೆ.

ವಿಚಾರಮಂಥನದಿಂದ ಮೂಡುವ ಸತ್ಯವೆಂದರೆ ಸೃಷ್ಟಿಯ ಸೂತ್ರವಾದ ಮಾರ್ಗದಲ್ಲಿ ನಡೆದಾಗ ಮಾತ್ರ ಬುದ್ಧಿಗೆ ಪುಷ್ಟಿ, ಹೃದಯಕ್ಕೆ ತುಷ್ಟಿ.
=೨೦೦೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿತವೇನು ಅಂತರಾಳವ?
Next post ರೋಗಣ್ಣ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys