ಜಗದ ಕವಿ, ಯುಗದಕವಿ, ಮೇರುಕವಿ, ವಿಶ್ವಕವಿ, ರಾಷ್ಟಕವಿ, ರಸ ಋಷಿ, ಕವಿಗುರು, ಕವಿವಿಭೂತಿ, ವರಕವಿ ಇತ್ಯಾದಿ ವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಕುವೆಂಪು ವಾಸ್ತವವಾಗಿ ಮಾನವೀಯ ಕವಿ. ಅವರ ಸಾಹಿತ್ಯ ಜೀವಪರವಾದದ್ದು, ಬಿಡುಗಡೆಯ ಬೆಳಕು ನೀಡುವಂಥದ್ದು. ಅವರ ವಿಶ್ವಮಾನವ ಸಂದೇಶವಾದ ಪಂಚಮಂತ್ರ ಹಾಗೂ ಸಪ್ತ ಸೂತ್ರಗಳು ಜಾತಿ, ಮತ, ಮೌಢ್ಯ, ಜನಾಂಗೀಯ ವೈಷಮ್ಯ ಹಾಗೂ ಮತೀಯತೆಯಿಂಧೆ ಮಲಿನಗೊಳ್ಳುತ್ತಿರುವ ಮನುಕುಲಕ್ಕೆ ಸಂಜೀವಿನಿಯಾಗಿದೆ; ಮತೀಯ ಭೀತಿಯಿಂದ ತಲ್ಲಣಗೊಂಡಿರುವ ವಿಶ್ವಕ್ಕೆ, ಆತಂಕಗೊಂಡಿರುವ ಹೃದಯ ಮನಸ್ಸುಗಳಿಗೆ ಸಾಂತ್ವನ ನೀಡುವ ಸತ್ವವನ್ನು ತುಂಬಿಕೊಂಡಿದೆ. ಶ್ರೀರಾಮಕೃಷ್ಣ ಪರಮಹಂಸರ ಜೀವ ಶಿವ ಎನ್ನುವ ತತ್ವವನ್ನ, ಸರ್ವಧರ್ಮ ಸಮನ್ವಯವನ್ನ ಆಮೂಲಗ್ರವಾಗಿ ಅಧ್ಯಯನ ಮಾಡಿ ಸ್ವೀಕರಿಸಿದ ಕುವೆಂಪು ಅವರು ” “No man is born to any religion; every man has a religion in his Soul. Let there be as many religions as there are human beings in the wold ” (ಯಾರೂ ಯಾವ ಧರ್ಮಕ್ಕೂ ಹುಟ್ಟಿದವರಲ್ಲ, ಎಲ್ಲರ ಹೃದಯ ಮೂಲದಲ್ಲೂ ಧರ್ಮ ಇದೆ. ಜಗತ್ತಿನಲ್ಲಿ ಎಷ್ಟು ಜೀವಿಗಳಿದ್ಧಾರೋ ಅಷ್ಟು ಧರ್ಮಗಳಿರಲಿ) ಎನ್ನುವ ಸ್ವಾಮಿ ವಿವೇಕಾನಂದರ ಧರ್ಮದ ವ್ಯಾಪಕ ದೃಷ್ಟಿಯಿಂದ ಪ್ರಭಾವಿತರಾದವರು.

ಜಾತಿ ಎಂದರೆ ವ್ಶೆವಿಧ್ಯತೆ. ಜಗತ್ತಿನಲ್ಲಿ ಎಷ್ಟು ಜೀವಿಗಳಿವೆಯೋ ಅಷ್ಟು ಜಾತಿಗಳಿವೆ ಎಂದು ವ್ಶೆಜ್ಞಾನಿಕ ದೃಷ್ಟಿಯಿಂದ ಅರಿತು ಆ ಸತ್ಯದಿಂದ ಪರಿಪುಷ್ಟಗೊಂಡವರು. “ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಿ ಆಚರಣೆಗೆ ತಂದುಕೊಂಡವರು. “Existence a divine experiment and cosmos the Souls opportunity” (ಇರುವಿಕೆ ಒಂದು ದೈವ ಪ್ರಯೋಗ: ಜಗತ್ತು ಆತ್ಮಕ್ಕೆ ಒದಗಿದ ಒಸಗೆ) ಎಂದ ಅರವಿಂದರ ದಿವ್ಯ ದರ್ಶನದಿಂದ ದೀಪ್ತಗೊಂಡು ಮತಧರ್ಮಗಳಿಂದ ಕಳಚಿಕೊಂಡು ಆಧ್ಯಾತ್ಮದ ದಿವ್ಯ ಆಲಿಂಗನಕ್ಕೆ ಒಳಗಾದವರು.  ಗ್ರಂಥಗಳು ಇರುವುದು ಆರಾಧನೆಗಲ್ಲ ಅರಿವನ್ನು ತಂದು ಕೊಡಲು. ಅವುಗಳನ್ನು ಓದಿ ತಮ್ಮ ದರ್ಶನವನ್ನು ತಾವೇ. ನಿರ್ಣಯಿಸಿಕೊಳ್ಳಬೇಕೆಂದು ಕರೆಕೊಟ್ಟರು.

ಮತ ಗುಂಪು ಕಟ್ಟುವ ವಿಷಯವಾಗಬಾರದು; ಮಂದಿರ ಮಸೀದಿಗಳಿಗಿಂತ ಜಗತ್ತನ್ನೆ ದೇವಮಂದಿರವೆಂದು ಬಗೆದು ಆರಾಧಿಸಿದವರು.

“ಮಲೆಯ ನಾಡೆನಗೆ ತಾಯಿ ಮನೆ
ಕಾಡು ದೇವರಬೀಡು; ಗಿರಿಯ
ಮುಡಿ ಶಿವನಗುಡಿ”

ಎಂದು ನಿಸರ್ಗವನ್ನೇ ದೇವರ ಆವಾಸ ಸ್ಥಾನವೆಂದು ಬಗೆದವರು.

ಜಗದ ದೇಗುಲದಲ್ಲಿ ಜಗದುದಯ ಕಾರಣನ
ಕಾಣದವನೆಂತು ಕಾಣ್ಬನು ಶಿವನ ಗುಡಿಯಲ್ಲಿ?

ಎಂದು ಪ್ರಶ್ನಿಸಿ ಅಣುರೇಣುತೃಣಕಾಷ್ಟದೊಳಗೆಲ್ಲ ದಿವ್ಯ ಚೈತನ್ಯವನ್ನು ದರ್ಶಿಸಿದವರು. ಭವ್ಯ ಭಾರತ, ಆಫ್ಘಾನಿಸ್ತಾನದಿಂದ ಬರ್ಮಾದವರೆ ಹಬ್ಬಿದ್ದ ವಿಶಾಲ ಭಾರತ ಒಡೆದು ಚೂರಾಗಲು, ಪರಕೀಯರ ದಬ್ಬಾಳಿಕೆಗೆ ತುತ್ತಾಗುವಂತೆ ನಿವೀರ್ಯವಾಗಲು ಕಾರಣವಾದ ವರ್ಣ ವ್ಯವಸ್ಥೆಯನ್ನು ಕಿತ್ತೂಗೆದು ಮನುಜಮತಕ್ಕೆ, ವಿಶ್ವಪಥಕ್ಕೆ ಬರುವಂತೆ ಕರೆಕೊಟ್ಟರು. ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿಯನ್ನು ಒಳಗೊಳ್ಳುವಂತೆ ಪ್ರೇರೇಪಿಸಿದರು. ಚೇತನ ಅನಿಕೇತನವಾಗಿ ವಿಶ್ವವ್ಯಾಪಕವಾಗಬೇಕೆಂದು ವಿಶ್ವಮಾನವಗೀತೆಯ ಮೂಲಕ ಸಾರಿದರು. ಸ್ವಾತಂತ್ರ್ಯದ ಮೂಲ ಉದ್ದೇಶವನ್ನೇ ಮರೆತು ಮಂದಿರ-ಮಸೀದಿ ಎಂದು ತಮ್ಮ ತಮ್ಮೊಳಗೆ ಕಚ್ಚಾಡುತ್ತಾ ಹಾದಿ ತಪ್ಪುತ್ತಿರುವ ಮತೀಯ ಮನಸ್ಸುಗಳಿಗೆ ಕುವೆಂಪು ಅವರ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಸಾವಿರಾರು ವರ್ಷಗಳಿಂಧ ಗುಲಾಮೀಯತೆಯ ಕರಾಳ ಕೂಪದಲ್ಲಿ ಬಿದ್ದು ನರಳುತ್ತಿರುವ: ಮೂಢನಂಬಿಕೆ, ಅನಕ್ಷರತೆ-ಅಜ್ಞಾನ; ಬಡತನಗಳಿಂದ ಕುಗ್ಗಿ ಕುಸಿದು ಹೋಗಿರುವ ಭಾರತೀಯರನ್ನು ಎಚ್ಚರಿಸಿ ಬಿಡುಗಡೆಯ ಕಡೆಗೆ ನಡಸಬೇಕಾಗಿರುವ ಅಗತ್ಯತೆಯನ್ನು ಅರಿತುಕೊಂಡರು. ನೆಲೆ ನಿಂತಿರುವ ಬಡತನವನ್ನು ಬುಡಮಟ್ಟ ಕೀಳಬೇಕಾಗಿದೆ, :ಮೌಢ್ಯತೆಯ ಮಾರಿಯಮ್ನ ಹೊಡೆದೋಡಿಸ ಬೇಕಾಗಿದೆ, ವಿಜ್ಞಾನ ಪಥದಲ್ಲಿ ಮುನ್ನಡೆಯಬೇಕಾಗಿದೆ; ಈ ಎಲ್ಲಕ್ಕಿಂತ ಹೆಚ್ಚಾಗಿ ಆ ಮತ ಈ ಮತ ಎಂದು ನಮ್ಮ ನಮ್ಮೊಳಗೆ ಕಚ್ಚಾಡುವ ಬದಲು ನಾವು ಮನುಜ ಮತವನ್ನು ಹಿಡಿದು ವಿಶ್ವಪಥದ ಕಡೆಗೆ ನಡೆಯಬೇಕಾಗಿದೆ, ಆದ್ದರಿಂದ ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು ಹೊರಬನ್ನಿ, ವಿಶಾಲ ವಿಶ್ವವನ್ನು ಎದೆಗಣ್ಣು ತೆರೆದು ನೋಡಲು ಓ ಸೋದರರೆ ಬೇಗ ಬನ್ನಿ ಎಂದು ಹಂಬಲದುಂಬಿ ಕರೆದರು.

ಮನುಷ್ಯರನ್ನು ಸಾಮಾನ್ಯವಾಗಿ ಎಲ್ಲ ಧರ್ಮಗಳೂ ಪಾಪಿ ಎಂದುಕರೆಯುತ್ತವೆ. ಪಾಪಿಗಳಪರ ಸಾಂತ್ವನ ಹೇಳುವ ಧರ್ಮಗಳು ವಿರಳ. ಅಂತಹ ಪಾಪಿಗಳಿಗೂ ಭರವಸೆ ತುಂಬುವ ದೃಷ್ಟಿಯಿಂದ “ಪಾಪಿಗುದ್ದಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್‌’ ಎಂದು ವಿಶ್ವ ಹೃದಯದ ತಾಯಿಕರುಳಿನ ಅಮೃತವಾಣಿಯನ್ನು ಸಾರಿದರು.

“ಭೂಮಿಯಲಿ ಹುಟ್ಟು ಕುರುಡರಿಗಿಂತ ಕಣ್ಣುಳ್ಳ ಕುರುಡುರು ಎನಿತೊಳರು’ ಎಂದು ಕಣ್ಣಿದ್ದು ಕುರುಡಾಗಿರುವವರ ಕುರಿತು “ಹಿಂದೂ ಮತದಲ್ಲಿ ಬೆಳಕು ಎಷ್ಟಿದೆಯೋ ಅದಕ್ಕೆ ಇಮ್ಮಡಿಯಾಗಿ ಆಚಾರದಲ್ಲಿ ಕೊಳಕು ಇದೆ. ಅಯ್ಯೋ, ನಾವೆಲ್ಲರೂ ಹೇಗೆ ಪದ್ಧತಿಗೆ ಗುಲಾಮರಾಗಿಬಿಟ್ಟಿದ್ದೇವೆ!” ಎಂದು ಗುಲಾಮಗಿರಿಯ ಸ್ಥಿತಿಗತಿಯನ್ನರಿತು ಆ ಗುಲಾಮಗಿರಿಯಿಂದ ಹೊರಬಂದು “”ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿ ಇವನ್ನಾಶ್ರಯಿಸಿ, ವರ್ಣಾಶ್ರಮ ಧರ್ಮ ಮತ್ತು ಜಾತಿಪದ್ಧತಿಯಂತಹ ಸಮಾಜ ವಿಚ್ಛಿದ್ರಕಾರಕವಾದ ನೀಚ ಭಾವನೆಗಳನ್ನು ತಿರಸ್ಕರಿಸಿ ವೇದಾಂತ ದರ್ಶನದ ವಿಶಾಲ ತತ್ವಗಳ ತಳಹದಿಯ ಮೇಲೆ ನಿಲ್ಲದಿದ್ದರೆ ಹಿಂದೂ ಧರ್ಮವು ಕ್ರಮೇಣವಾಗಿಯಾದರೂ ಸಂಪೂರ್ಣವಾಗಿ ವಿನಾಶ ಹೊಂದುತ್ತದೆ” ಎನ್ನುವ ಸತ್ಯದ ಎಚ್ಚರವನ್ನು ನೀಡಿದರು.

“ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರು ಮತ್ತೊಬ್ಬರನ್ನು ಮುಟ್ಟದಿರುವುದು, ನೋಡಿದಿರುವುದು, ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ  ಹೊಡೆದುಕೊಳ್ಳುವುಮ, ಶಿಲುಭೆ ಧರಿಸಿಕೊಳ್ಳುವುಮ, ಕೆಲವರಮ್ನ ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು, ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು ಇತ್ಯಾದಿ ಕೆಲಸಕ್ಕೆ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ  ನಮ್ಮ ಮತದ ಹುರುಳಾಗಿ ಕುಳಿತಿದೆ ……. ..ಮಹಾವಿಭೂತಿಗಳು ಸಾರಿದ ಮತ್ತು ಸಾರುತ್ತಿರುವ ಅಮೃತ ಸಂದೇಶ ಅರಣ್ಯರೋದನವಾಗಿದೆ.” ಎಂದು ನಮ್ಮ  ನಮ್ಮೊಳಗೆ ಭೇದ ಭಾವನೆಗೆ ಎಡೆಮಾಡಿ ನಮ್ಮನ್ನು ನಿರ್ವೀರ್ಯ ಗೊಳಿಸುತ್ತಿರುವ ನಮ್ಮ ಬದುಕಿನ ರೀತಿ ನೀತಿಗಳನ್ನು ಕಂಡು ಅರಿವಿನ ಮಾತುಗಳನ್ನಾಡಿದ್ದಾರೆ.

“ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!”

ಎಂದು ಸರ್ವಧರ್ಮ ಸಮನ್ವಯದ ಆಶ್ರಯದಾತೆ ಭರತಮಾತೆಯನ್ನು ಆರಾಧಿಸಲು ಆಹ್ವಾನವಿತ್ತರು. ಸಂವಿಧಾನದ ಆಶಯವೂ ಕೂಡ ಇದೇ.

ಮಾನವನ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ಧಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಆನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲ ಕಾರಣವೆಂಬಂತೆ! ವಿಜ್ಞಾನ ಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೆ೬ನಿದ್ವರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ” ಎಂದು ಆಧ್ಯಾತ್ಮದ ಬಲದ ಮೇಲೆ ನಿಂತ ವಿಜ್ಞಾನ, ವಿಜ್ಞಾನದ ಸಹಾಯದಿಂದ ಆಧ್ಯಾತ್ಮದ  ಕಡೆಗೆ ಮನುಕುಲ ಎಚ್ಚೆತ್ತು ನಡೆಯಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು-. ಎಂದರೆ ದೇಶ ದೇಶಗಳು, ಧರ್ಮ ಧರ್ಮಗಳು, ಜನಾಂಗ ಜನಾಂಗಗಳು ಪರಸ್ಪರ ಸಂಘರ್ಷಕ್ಕೆ ಇಳಿದು ನಾಶದ ದವಡೆಗೆ ಸಾಗುತ್ತಿರುವ ಈ
ಸಂದರ್ಭದಲ್ಲಿ ಅತ್ಯಂತ ತುರ್ತಿನದಾಗಿದೆ.

ಇಡೀ ಮನುಕುಲಕ್ಕೆ ಅನ್ವಯಿಸುವ ಸಂದೇಶವೊಂದನ್ನು ಕುವೆಂಪು ತಮ್ಮ ತಪೋಮಯ ಜೀವನದಿಂದ ಕಂಡು ಕೊಟ್ಟಿದ್ದಾರೆ. ಆ ಸಂದೇಶವೆಂದರೆ

“ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ: ಮನುಜಮತ. ಆ ಪಥ ಈ ಪಥ ಅಲ್ಲ: ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ: ಸರ್ವರ ಸರ್ವಸ್ತರದ ಉದಯ, ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ: ಸಮನ್ವಯಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ  ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ” ಇದನ್ನು ಒಳಗೊಳ್ಳುವ ದೃಷ್ಟಿ ಮತ್ತು ಶಕ್ತಿ ಮನುಷ್ಯನಿಗೆ ಪ್ರಾಪ್ತವಾಗಲಿ.
ಸರ್ವೋದಯವಾಗಲಿ.
-೨೦೦೩