ಗಾಂಧೀಜಿಯವರ ಮೇಲೆ ವಿವೇಕಾನಂದರ ಪ್ರಭಾವ

ವಿವೇಕಾವಂದರನ್ನು ಕುರಿತು “ಅವರು ಬದುಕಿದ್ದರೆ ಆವರ ಪದತಲದಲ್ಲಿ ಆಜ್ಞಾರಾಧಕನಾಗಿರುತ್ತಿದ್ದೆ” ಎಂದು ಸುಭಾಷ್‌ ಚಂದ್ರ ಬೋಸರು ಹೇಳಿದರೆ  ತುಂಬಾ ಗಮನವಿಟ್ಟು ವಿವೇಕಾನಂದರ ಕೃತಿಗಳನ್ನು ಓದಿದ್ದೇನೆ. ಅವುಗಳನ್ನು ಓದಿದ ಮೇಲೆ ನನ್ನ ದೇಶದ ಮೇಲಿನ ನನ್ನ ಪ್ರೀತಿ ಸಾವಿರಪಟ್ಟು ಹೆಚ್ಚಾಯಿತು”ಎಂದು  ಮಹಾತ್ಮಗಾಂಧಿಯವರು  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರೀತಿಯೇ ಜೀವನದ ಆಧಾರ. ಅದು ಪ್ರಕೃತಿ ಇತ್ತ ವರ. ಆದರೆ ಅದು ಮನುಷ್ಯರ ನಡುವೆ ತಾತ್ವಿಕ ಹಾಗೂ ಪ್ರಾದೇಶಿಕ ಭಿನ್ನತೆಗೆ ಅವಕಾಶ ಮಾಡುವುದು ವಿಚಿತ್ರವೆನಿಸುತ್ತದೆ. ಆಯಾಯ ದಾರ್ಶನಿಕರ ಕಾಲಾನಂತರ ಶ್ವೇತಾಂಬರ- ದಿಗಂಬರ; ಹೀನಯಾನ ಮಹಾಯಾನ: ಕ್ಯಾಥೋಲಿಕ್ ಪ್ರೊಟಿಸ್ಟೆಂಟ್‌; ಶಿಯಾ-ಸುನ್ನಿ ಇತ್ಯಾದಿಯಾಗಿ ಒಡೆದುಹೋಗಿ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾದರೆ ಪರ್ಷಿಯನ್ನರು, ಅರಬರು, ಫ್ರೆಂಚರು, ಡಚ್ಚರು, ಪೋರ್ಚುಗಿಸರು ಮುಂತಾದ ಗುರುತಿಸುವಿಕೆಯಿಂದ ಪ್ರಾದೇಶಿಕ ಒಡಕಿಗೆ ಪ್ರೇರಣೆಯಾಗಿ ಕ್ಷೀಣಿಸುವ ಸಾರ್ವತ್ರಿಕ ಪ್ರೀತಿ ಪ್ಯಾಲಸ್ಟೇನ್‌ನ ಸಮಸ್ಯೆಯಾಗಿ, ಭಾರತ ಬಾಂಗ್ಲಾ, ಪಾಕೀಸ್ತಾನಗಳಾಗಿ ಒಡೆದು ಕಡೆಗೆ ಕಾಶ್ಮೀರ, ಮಂದಿರ ಮಸೀದಿಯ ಕ್ಷುಲ್ಲಕ ಸಮಸ್ಯೆಗಳಿಂದ ಪ್ರೇತರಿತವಾಗಿ ಕೋಮುದಳ್ಳುರಿ ಹತ್ತಿ ಉರಿಯಲು ಶುರುವಾಗಿ ಪ್ರೀತಿಸಬೇಕಾದ ಮಾನವರೆ ಪರಸ್ಪರ ರುಂಡಗಳನ್ನು ಚೆಂಡಾಡುವ ಪರಿಸ್ಥಿತಿ ಪ್ರಾಪ್ತವಾಗಿ ಬಿಡುತ್ತದೆ.

ಗಾಂಧೀಜಿಯವರ ರಾಷ್ಪ್ರಪ್ರೀತಿ ಹಾಗೂ ನಾಥುರಾಮ್‌ ಗೋಡ್ಸೆಯ ರಾಷ್ಟ್ರ ಪ್ರೀತಿ ಒಂದೆ. ಆದರೆ ಸ್ಥರಗಳು ಬೇರೆ. ಗಾಂಧೀಜಿಯವರಿಗೆ ಮಾನವಪ್ರೀತಿ ಮಹತ್ತರವಾಗಿ ಕಂಡರೆ ಗೋಡ್ಸೆಗೆ “ಜನಾಂಗೀಯ “ಪ್ರೀತಿ ದೊಡ್ಡದಾಗಿ ಕಾಣುತ್ತದೆ. ಇಂಥ ಸಂದಿಗ್ಧದಲ್ಲಿ ಸುಭಾಷ್‌ ಚಂದ್ರಬೋಸ್ ಅವರ ಮಾತು ಮುಖ್ಯವಾಗುತ್ತದೆ. “ಭಾರತ ಸ್ವತಂತ್ರವಾಗಬೇಕಾದರೆ ಅದು ವಿಶೇಷವಾಗಿ ಹಿಂದುತ್ವ ಅಥವಾ ಇಸ್ಲಾಂ ಎಂದಾದರೆ ಸಾಧ್ಯವಾಗುವುದಿಲ್ಲ. ಅದು ರಾಷ್ಟ್ರೀಯತೆಯ ಉಜ್ವಲ ಭಾವನೆಯ ಮೇಲೆ ನಿಂತ ವಿವಿಧ ಜನಾಂಗಗಳ ಒಕ್ಕೂಟ. ಅದಕ್ಕಾಗಿ ರಾಮಕೃಷ್ಣ ಪರಮಹಂಸ- ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮನ್ವಯ ತತ್ವಗಳನ್ನು ಭಾರತೀಯರು ತೆರೆದ ಹೃದಯದಿಂದ ಒಪ್ಪಿಕೊಳ್ಳಬೇಕು” ಎನ್ನುವ ಅವರ ವಿಶಾಲ ದೃಷ್ಟಿಯನ್ನು ಭಾರತೀಯರು ಎಂದರೆ ಸ್ವಾತಂತ್ರ್ಯಾ ನಂತರ ಭರತ ಭೂಮಿಯಲ್ಲಿರುವ ಪ್ರತಿಯೊಂದು ಜನಾಂಗದ ಪ್ರತಿಯೊಬ್ಬರು ಒಳಗೊಳ್ಳಬೇಕಾಗಿದೆ. ವಿವಿಧ ಧರ್ಮಗಳ ಆಚರಣೆಯನ್ನೊಳಗೊಂಡ ನಾವೆಲ್ಲರೂ ಭಾರತೀಯರು, ಬೇರೆಯಲ್ಲ.

ನೈನಿಟಾಲಿನಿಂದ ಮಹಮದೀಯನಿಗೆ ಬರೆದ ಪತ್ರದಲ್ಲಿ ವಿವೇಕಾನಂದರು “ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ ಇದೊಂದೇ  ನಮ್ಮ ಪುರೋಗಮನಕ್ಕೆ ಹಾದಿ” ಎಂದು ಎರಡು ಧರ್ಮಗಳಲ್ಲಿರುವ ಶ್ರೇಷ್ಟತೆಗಳನ್ನ, ಉತ್ತಮ ಅಂಶಗಳನ್ನ ಗುರುತಿಸಿದ್ದಾರೆ. ವೇದಾಂತದ ಮಿದುಳು ಎಂದರೆ ವಿದ್‌+ಅಂತ-ವೇದಾಂತ, ವಿದ್ ಎಂದರೆ ತಿಳಿ, ಅಂತ ಎಂದರೆ ಕೊನೆ. ಕೊನೆಯನ್ನು ತಿಳಿಯಬೇಕೆನ್ನುವ ಸ್ವತಂತ್ರ ಮಿದುಳು; ಇಸ್ಲಾಮಿನದೇಹ ಎಂದರೆ ಬಡವ ಬಲ್ಲಿದ, ಮೇಲು, ಕೀಳು, ಸ್ಪೃಶ್ಯ-ಅಸ್ಪೃಶ್ಯ, ಕರಿಯ ಬಿಳಿಯ ಎಂಬ ಭೇದಭಾವವಿರದ ಸಮಾನತಾ ದೃಷ್ಟಿ. ಇದರ ಪ್ರಭಾವದಿಂದ ಮಾನವರೆಲ್ಲ ಒಂದೆ ಎಂಬುದನ್ನು ಅರಿತಿದ್ದ ಗಾಂಧೀಜಿಯವರು ಹಿಂದೂ ಮುಸ್ಲಿಂ ಎಂಬ ಭೇದ ಭಾವನೆಯನ್ನು ವಿರೋಧಿಸುತ್ತಿದ್ದರು. ಮಾನವಪ್ರೀತಿ ಮತ್ತು ಅಹಿಂಸೆ ಆವರ ಉಚ್ವಾಸ-ನಿಶ್ವಾಸಗಳಾಗಿದ್ದುವು. ಅದರ ಅಂಕುರ ಆವರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಗಿ ಭಾರತದಲ್ಲಿ ಬೃಹತ್ತಾಗಿ ಮೈಪಡೆಯಿತು.

ಒಬ್ಬ ವ್ಯಕ್ತಿಯನ್ನಾಗಲೀ, ಒಂದು ಜನಾಂಗವನ್ನಾಗಲೀ ಏಳಿಗೆಗೆ ತರಲು ಅತ್ಯಾವಶ್ಯಕವಾದ ಮೂರು ವಿಚಾರಗಳನ್ನು ವಿವೇಕಾನಂದರು ಮುಂದಿಡುತ್ತಾರೆ. ಅವುಗಳೆಂದರೆ ೧. ಸತ್ಯದ ಶಕ್ತಿಯಲ್ಲಿ ದೃಢವಾದ ನಂಬಿಕೆ ೨. ಅಸೂಯೆ ಅನುಮಾನಗಳಿಲ್ಲದಿರುವುದು ೩. ಯಾರು ಒಳ್ಳೆಯವರಾಗುವುದಕ್ಕೆ ಮತ್ತು ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನ ಪಡುವರೋ ಅವರಿಗೆಲ್ಲಾ ಸಹಾಯ ಮಾಡುವುದು.

ಈ ಮೂರು ವಿಚಾರಗಳನ್ನು ಗಾಂಧೀಜಿ ಅರಿತು ಅಳವಡಿಸಿಕೊಂಡಿದ್ದರು. ವೇದ, ಉಪನಿಷತ್ತು, ಗೌತಮ ನಿಂದ ಹಿಡಿದು ಸಾವಿರಾರು ವರ್ಷಗಳಿಂದ ಪ್ರಪಂಚದ ಮಹಾನ್ ದಾರ್ಶನಿಕರು, ತತ್ವಜ್ಞಾನಿಗಳು ಬೆಳಕಿನ ದಾರಿಯನ್ನು ತೋರಿದ್ದರೂ ಮನುಕುಲ ಎಚ್ಚೆತ್ತುಕೊಂಡಿಲ್ಲ. ಈ ಕೊರತೆ ಪ್ರಪಂಚದ ಎಲ್ಲ ಭಾಗಗಳಲ್ಲೂ ಎದ್ದು ಕಾಣುತ್ತದೆ. ಅದನ್ನು ಕಂಡುಕೊಂಡ ವಿವೇಕಾನಂದರು ಭಾರತದ ಜನರ ಸ್ಥಿತಿಯನ್ನು ಕುರಿತು ಹೀಗೆ ಬರೆಯುತ್ತಾರೆ. “ಶ್ಲಾಘನೀಯರಾದ ವಿದ್ವಾಂಸರುಗಳು ಮತ್ತು ಇತರ ಸೌಭಾಗ್ಯಗಳನ್ನು ಪಡೆದ ಹಿಂದೂದೇಶ ಏತಕ್ಕೆ ಹೀಗೆ ಒಡೆದು ಚೂರಾಗಬೇಕಾಗಿತ್ತು? ಇದಕ್ಕೆ ಉತ್ತರವೆ  ಅಸೂಯೆ ಎಂದು ಹೇಳುತ್ತೇನೆ. ಇನ್ನೊಬ್ಬರು ಕೀರ್ತಿ ಗೌರವಗಳಿಸಿದರೆ ಅದನ್ನು ನೋಡಿ ಸಹಿಸಲಾರದೆ ಕರುಬುವ ಹೀನ ಹಿಂದೂ ಜನಾಂಗದಂತೆ ಮತ್ತೊಂದು ಇಲ್ಲ. ಐದು -ನಿಮಿಷಗಳಾದರೂ ಮೂರು ಜನರು ಕಲೆತು ಸೌಹಾರ್ದ- ದಿಂದ ಒಂದು ಕೆಲಸವನ್ನು ಮಾಡಲಾರರು. ಪ್ರತಿಯೊಬ್ಬನೂ ಅಧಿಕಾರಕ್ಕೆ ಹೋರಾಡುವನು. ಕೊನೆಗೆ ಇಡೀ ಸಂಸ್ಥೆಯೆ ಹಾಳಾಗುವುದು. ”

ಭಾರತೀಯರ ಈ ಮನಸ್ಥಿತಿ ಅಂದಿಗೇ ಮುಗಿದಿಲ್ಲ. ಅದು ಇಂದಿಗೂ ಇದ್ದು ಇನ್ನೂ ಉಲ್ಬಣಗೊಳ್ಳುತ್ತಿದೆ. ಈ ಪರಿಸ್ಥಿತಿಯನ್ನು ಎದುರಿಸಿದವರೆಂದರೆ ಗಾಂಧೀಜಿಯವರು. ತಮ್ಮ ಆತ್ಮಕಥೆಯ ಒಂದು ದುರಂತಕಾರಿ ವಿದ್ಯಾಮಾನ ಎಂಬ ಟಿಪ್ಪಣಿಯಲ್ಲಿ (೧೯೪೬) ಹೀಗೆ ಬರೆಯುತ್ತಾರೆ. “ಸಂವಿಧಾನ ಸಭೆಯಲ್ಲಿ ಇರಬಯಸುವ ವ್ಯಕ್ತಿಗಳ ಎಷ್ಟೊಂದು ಪತ್ರಗಳು ನನ್ನ ಟಪಾಲಿನಲ್ಲಿರುತ್ತವೆಂದರೆ ನನಗೆ ಹೆದರಿಕೆಯುಂಟಾಗುತ್ತದೆ. ಬುದ್ಧಿ ಜೀವಿ ವರ್ಗ ಭಾರತದ ಸ್ವಾತಂತ್ರ್ಯಕ್ಕಿಂತ ವೈಯಕ್ತಿಕ ಸುಖಲೋಲುಪತೆಯ ಬಗ್ಗೆ ಹೆಚ್ಚು ಆತುರದಲ್ಲಿದೆ ಎಂಬ ಸಾರ್ವತ್ರಿಕ ಭಾವನೆಯ ಸೂಚಕವೋ ಇದು ಎಂದು ಸಂಶಯ ಬರುತ್ತಿದೆ. ”

ಈ ಸ್ಥಿತಿಯಲ್ಲಿರುವ ಸಮಾಜವನ್ನು ಮೇಲೆತ್ತಬೇಕೆನ್ನುವ ಸಮಾಜ ಸುಧಾರಕರಿಗೆ ಸ್ವಯಂಸೇವಕ ಸಂಘಗಳಿಗೆ ವಿವೇಕಾನಂದರು ಅಳವಡಿಸಿಕೊಳ್ಳಬೇಕಾದ ಮೂರು ಮುಖ್ಯ ತತ್ವಗಳನ್ನು ಮುಂದಿಡುತ್ತಾರೆ. ಆ ಮೂರು ತತ್ವಗಳೆಂದರೆ: ೧. ಸಹಾನುಭೂತಿ, ೨. ಸತ್ಯದ ಶೋಧ, ೩.ಸಮರ್ಪಣ ಭಾವ.

ಇವುಗಳನ್ನು ಗಾಂಧೀಜಿಯವರು ಸತತ ಪರಿಶ್ರಮದಿಂದ ತಮ್ಮ ಉಸಿರಿನೊಂದಿಗೆ ಒಂದಾಗಿಸಿ ಕೊಂಡಿದ್ದರು. ಇವು ಅವರ ಶಕ್ತಿಯ ಸೆಲೆಯಾಗಿ, ನೆಲೆಯಾಗಿ ಇದ್ದುವು. ಅಂತಹ ವಿಚಾರಗಳಿಂದ ಪರಿಪಕ್ವಗೊಂಡಿದ್ದ ಗಾಂಧೀಜಿಯವರನ್ನು ಅಚಲಗೊಳಿಸಲು ಯಾರಿಂದಲೂ, ಯಾವುದರಿಂದಲೂ ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಒಣಕಲು ಅರೆಬೆತ್ತಲ ಶರೀರದಲ್ಲಿ ಇದ್ದ ಆತ್ಮಶಕ್ತಿಯ ಎದುರು ಬ್ರಿಟಿಷ್ ಸಾಮ್ರಾಜ್ಯದ ಪ್ರಬಲ ಸೈನ್ಯಶಕ್ತಿಯೂ ಅಶಕ್ತವಾಗಿ  ಗಾಂಧೀಜಿಯವರನ್ನು ತನ್ನ ಹಿಡಿತಕ್ಕೆ ತಂದುಕೊಳ್ಳಲಾಗದೆ ಕಂಗಾಲಾಯ್ತು. ಅವರನ್ನು ತನ್ನ ಹಿಢಿತಕ್ಕೆ ತಂದುಕೊಳ್ಳಲು ಸಲಹೆಯನ್ನು ಸೂಚಿಸುವಂತೆ ಒಂದು ಸಲಹಾ ಸಮಿತಿಯನ್ನು ರಚಿಸಿತು. ಸಮಿತಿಯ ಅಧ್ಯಕ್ಷರಾಗಿದ್ದ ಆಕ್ಸಫರ್ಡ್‌ ವಿಶ್ವವಿದ್ಯಾಲಯದ ಪ್ರೊ|| ಗಿಲ್‌ಬರ್ಟ್‌ಮುರ್ರೆ ತಮ್ಮ ವರದಿಯಲ್ಲಿ ಹೀಗೆ ಬರೆದರು: “ಯಾವ ವ್ಯಕ್ತಿ ಪ್ರಾಪಂಚಿಕ ಸುಖಗಳಿಗೆ, ವೈಭೋಗಕ್ಕೆ, ಹೊಗಳಿಕೆಗೆ ಅಥವಾ ಸ್ಥಾನ ಮಾನಗಳಿಗೆ ಬೆಲೆಕೊಡುವುದಿಲ್ಲವೋ ಹಾಗೂ ತನಗೆ ಸರಿ ಎಂದು ಕಂಡದ್ದನ್ನು ಮಾಡಲು ದೃಢನಿಶ್ಚಯ ಹೊಂದಿರುವನೋ ಆತನ ಬಗೆ ಎಚ್ಚರವಾಗಿರಿ. ಆತ ಅತ್ಯಂತ ಅಪಾಯಕಾರಿ ಹಾಗೂ ಅಹಿತಕರ ಶತ್ರು. ಏಕೆಂದರೆ ನೀವು ಯಾವಾಗ ಬೇಕಾದರೂ ವಶ ಪಡಿಸಿಕೊಳ್ಳಬಹುದಾದ ಆತನ ಶರೀರ ಆತನ ಆತ್ಮಶಕ್ತಿಯ ಎದುರು ನಗಣ್ಯವಾಗಿ ಬಿಡುತ್ತದೆ. ”

ಇದು ಗಾಂಧೀಜಿಯವರು ರೂಢಿಸಿಕೊಂಡ ವ್ಯಕ್ತಿತ್ವವಾಗಿತ್ತು. ಅವರ ಆ ವ್ಯಕ್ತಿತ್ವ ರೂಪುಗೊಳ್ಳಲು ವಿವೇಕಾನಂದರ ವಾಣಿಗಳ ಸ್ಪೂರ್ತಿಯೇ ಮೂಲ ಎನ್ನುವುದು ಗಮನಾರ್ಹವಾದುದು. ಅಂತಹ ವ್ಯಕ್ತಿತ್ವವನ್ನು ರೂಪಿಸಬಲ್ಲ ವಿಚಾರಗಳನ್ನು ವಿವೇಕಾನಂದರು ೧೮೯೫ರಲ್ಲಿ ಹೀಗೆ ಬರೆದಿದ್ದರು:

“ಪವಿತ್ರತೆ ಜೀವನದಲ್ಲಿ ಅದರಂತೆ ನಡೆಯುವುದು, ಒಂದೇ ಮಾತಿನಲ್ಲಿ ಹೇಳುವುದಾದರೆ ಅನುಭೂತಿ, ಸಾಕ್ಷತ್ಕಾರವೊಂದೇ ಜಯಶೀಲವಾಗುವುದು. ಯಾರು ಆ ಅನಂತವನ್ನು ಸ್ಪರ್ಶಿಸಿರುವರೋ, ಯಾರ ಇಡೀ ಆತ್ಮ ಬ್ರಹ್ಮನಲ್ಲಿ ಐಕ್ಯವಾಗಿದೆಯೋ, ಯಾರು ಹಣಕ್ಕಾಗಲೀ, ಅಧಿಕಾರಕ್ಕಾಗಲೀ, ಕೀರ್ತಿಗಾಗಲೀ ಗಮನ ಕೂಡುವುದಿಲ್ಲವೋ ಅಂಥವರು ಇಡೀ ಜಗತ್ತನ್ನೇ ಅಲ್ಲಾಡಿಸಬಲ್ಲರು.”

ಗಾಂಧೀಜಿಯವರ ೫೪ ನೇ. ಪುಣ್ಯತಿಥಿಯಂದು ಈ ವಿಚಾರಗಳನ್ನು ಕುರಿತು ನಾವು ಆಳವಾಗಿ ಚಿಂತಿಸಬೇಕಾಗಿದೆ. ಅಂದು ಬ್ರಿಟಿಷರ ವಿರುದ್ಧ ಜಯಗಳಿಸಲು ಗಾಂಧೀಜಿ ಅಹಿಂಸಾಮಾರ್ಗದಲ್ಲಿ ಅಣಿಯಾದರು. ಸ್ವತಂತ್ರ್ಯ ಬಂದ 53 ವರ್ಷಗಳಲ್ಲಿ ರಾಷ್ಟ್ರ ಭೌತಿಕವಾಗಿ ಮಹತ್ತರವಾದುದನ್ನು ಸಾಧಿಸಿದ್ದರೂ ನೈತಿಕವಾಗಿ ಕುಗ್ಗಿ ಕುಸಿಯುತ್ತಿದೆ. ಜಾಗತೀಕರಣವೆಂಬ ಹುಚ್ಚು ಹೊಳೆಯಲ್ಲಿ ತನ್ನ ತನವನ್ನು ಮಾರಿಕೊಂಡು ಪರೋಕ್ಷವಾಗಿ ಮತ್ತೆ ಬಹುರಾಷ್ಟ್ರೀಯ ಕಂಪೆನಿಗಳ ಕೈಕೆಳಗೆ ಅತಂತ್ರವಾಗುವ ಅಪಾಯದ ಅಂಚಿನಲ್ಲಿದೆ. ಈ ದುರಂತ ಸಂದರ್ಭದಲ್ಲಿ ವಿವೇಕಾನಂದರ .ವಿಚಾರಗಳಿಂದ ಗಾಂಧೀಜಿ ಪ್ರಭಾವಿತರಾದಂತೆ ಅವರೀರ್ವರ ವಿಚಾರಗಳಿಂದ ಪ್ರಭಾವಿತರಾಗಿ ನಾವಿಂದು ರಾಷ್ಟ್ರವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಈಗ ನಮ್ಮ ಮುಂದಿರುವ ಪ್ರಶ್ನೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆ ಅಥವಾ ಸ್ವಾರ್ಥ ಹಾಗೂ ವ್ಯಾಪಾರಿ ಮನೋಭಾವದ ಜಾಗತೀಕರಣದ ಜಾಲದಲ್ಲಿ  ಕಂಪೆನಿಗಳ ಕೈಕೆಳಗೆ ಪರೋಕ್ಷ ಗುಲಾಮೀಯತೆಗೆ ಒಳಗಾಗಬೇಕೆ ಎಂಬುದು. ಆಯ್ಕೆ ನಿಮ್ಮ ಅಂತಃಸಾಕ್ಷಿಗೆ (ಅದನ್ನು ಗೌರವಿಸುವುದಾದರೆ) ಬಿಟ್ಟಿದ್ದು. .
-೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಕಂಪನಕ್ಕೆ ಮುನ್ನೆಚ್ಚರಿಕೆ
Next post ಮತೀಯ ತಲ್ಲಣಗಳಿಗೆ ಕುವೆಂಪು ಸಂದೇಶ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys