ಹೊಸದೊಂದು ಧರ್ಮ ಯಾರಿಗೆ ಬೇಕಾಗಿದೆ ?

ಹೊಸದೊಂದು ಧರ್ಮ ಯಾರಿಗೆ ಬೇಕಾಗಿದೆ ?

scan0032
ಚಿತ್ರ: ಅಪೂರ್ವ ಅಪರಿಮಿತ

ದಿನಾಂಕ : ೧೨-೦೮-೨೦೦೩ರ ಪತ್ರಿಕೆಗಳಲ್ಲಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಶರಣಧರ್ಮ ಕಟ್ಟೋಣ ಬನ್ನಿ’ ಎಂದು ಕರೆನೀಡಿ ಬಸವತತ್ವಕ್ಕೆ ಹೊಸಪರಿಭಾಷೆಯನ್ನು ಹುಟ್ಟುಹಾಕುವ ಕಾರ್ಯಕ್ಕೆ ಮುಂದಾದರು. ಇದಕ್ಕಾಗಿ ನಾಡಿನ ಚಿಂತಕರು ಲೇಖಕರು ಅನುಭಾವಿಗಳು ಬಸವನುಯಾಯಿಗಳು ಸಮಸ್ತ ಜನಾಂಗದವರು, ಅಬಲೆಯರು ಖೈದಿಗಳು (?) ಸಹ ಒಟ್ಟಾಗಿ ಸೇರಬೇಕೆಂದು ಕರೆಕೊಟ್ಟರಲ್ಲದೆ ನಿಗದಿತ ದಿನಾಂಕದಂದು ಎಲ್ಲರನ್ನೂ ಆಹ್ವಾನಿಸುವುದಾಗಿಯೂ ಘೋಷಿಸಿದರು.

ಆದರೆ ದಿನಾಂಕ: ೧೬-೦೮-೨೦೦೩ ರಂದು ಶ್ರೀಗಳು ಶರಣಧರ್ಮದ ಹೆರಿಗೆಯ ಸಭೆಗೆಂದು ಕರೆದದ್ದು ಅವರ ಕಸ್ಟಡಿಯಲ್ಲಿರುವ ಬಸವಕೇಂದ್ರಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ತಮ್ಮ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವರನ್ನು ಮಾತ್ರ. ಜೊತೆಗೆ ಸಮಾನಮನಸ್ಕರಾದ ಒಂದಷ್ಟು ಸ್ವಾಮಿಗಳೂ ನೆರೆದರು. ಇಷ್ಟಾದರೂ ಶರಣಧರ್ಮದ ಹೆರಿಗೆಯಾಗಲೇ ಇಲ್ಲ! ಆ ಹೆಸರಿಗೇ ವಿರೋಧ ವ್ಯಕ್ತವಾಯಿತು. ಅಲ್ಲಿ ಜಮಾಯಿಸಿದ್ದ ಕೆಲವರಾದರೂ ಮಿದುಳಿಗೆ ಕೆಲಸ ಕೊಟ್ಟಂತಿದೆ. ಜೊತೆಗೆ ಶರಣಧರ್ಮವನ್ನು ಕಟ್ಟುವುದು ಅಂದರೇನು ಎಂಬ ಜಿಜ್ಞಾಸೆ ದುರ್ಗದ ಶರಣ ಶರಣೆಯರನ್ನು ಈಗಾಗಲೆ ಕಾಡಹತ್ತಿತ್ತು. ಅಲ್ಲಿದ್ದ ಸ್ವಾಮಿಗಳಲ್ಲೂ ಆತಂಕ ಕವಿದಂತಿದ್ದಿತು. ಯಾಕೆಂದರೆ ಶ್ರೀಗಳು ಶರಣಧರ್ಮ ಕಟ್ಟುತ್ತೇನೆಂದು ಹೊರಟಾಗ ಪತ್ರಿಕೆಗಳಿಗೆ ನೀಡಿದ ಪುಟಗಟ್ಟಲೆ ಹೇಳಿಕೆಗಳಲ್ಲಿನ ಅಭಿಪ್ರಾಯಗಳಲ್ಲಿದ್ದ ಭಿನ್ನಾಭಿಪ್ರಾಯಗಳೂ ಶರಣಧರ್ಮಕ್ಕೆ ಬೆಂಬಲ ದೊರಕದಿರಲು ಕಾರಣವಾಗಿದ್ದಿರಬಹುದು.

ಶ್ರೀಗಳು ತಮ್ಮ ಹೇಳಿಕೆಗಳಲ್ಲಿ ಪ್ರಚಾರ ಪಡಿಸಿದಂತೆ ತಾವು ಹೊಸದೇನನ್ನು ಹೇಳುತ್ತಿಲ್ಲ ಹೊಸಧರ್ಮ ಸ್ಥಾಪಿಸುತ್ತಿಲ್ಲ. ಆ ಭ್ರಮೆ ನನಗಿಲ್ಲ ಶರಣ ಸಿದ್ದಾಂತವನ್ನು ಮತ್ತಷ್ಟು ಖಚಿತಪಡಿಸುವ ಸದುದ್ದೇಶವೇ ‘ಶರಣಧರ್ಮ’ ಎನ್ನುವ ಶಿವಮೂರ್ತಿ ಶರಣರು ಬಸವತತ್ವವನ್ನು ಕಾಲಕ್ಕೆ ತಕ್ಕಂತೆ ಆಧುನೀಕರಣ ಗೊಳಿಸುವೆವೆನ್ನುವ ಅವರ ಪ್ರಯೋಗ ಕೂಡ ನಾಳೆ ಅವರನ್ನು ವಚನಾಂಕಿತವನ್ನು ತಿದ್ದಿ ಅಪರಾಧಿಸ್ಥಾನದಲ್ಲಿ ನಿಂತಿರುವ ಮಾತಿನ ಮೂದೇವಿಯ ಸ್ಥಾನದಲ್ಲಿ ನಿಲ್ಲಿಸಬಹುದಾದಷ್ಟು ಅತಿಸೂಕ್ಷ ವಿಚಾರ ವೆಂಬುದನ್ನು ಮರೆಯುತ್ತಾರೆ. ಶ್ರೀಗಳವರು ವೀರಶೈವ ಧರ್ಮದಿಂದಲೇ ಸಿಡಿದುಬಂದು ತಮ್ಮದೇ ಆದ ತತ್ವ ಸಿದ್ದಾಂತಗಳ ಆಧಾರದ ಮೇಲೆ ಶರಣ ಧರ್ಮದ ಹುಟ್ಟಿಗೆ ನಾಂದಿ ಹಾಡಿದ್ದರೆ ಅವರ ಕಾಳಜಿಗೊಂದು ಅರ್ಥಬರುತ್ತಿತ್ತು. ಹಿಂದೆ ಬಸವಣ್ಣನವರು ಮಾಡಿದ್ದು ಇದನ್ನೇ. ಬಸವಣ್ಣ ಮತ್ತು ಅಂಬೇಡ್ಕರ್‌ಗಿಂತಲೂ ಮಿಗಿಲಾದ ಶರಣ ಸಂಹಿತೆಯನ್ನು ರೂಪಿಸೆನೆನ್ನುವ ಶ್ರೀಗಳ ನಿರ್ಧಾರದ ಹಿಂದೆ ಯಾವ ಉದ್ದೇಶವಿತ್ತೊ ಆ ಮುರುಗೇಶನೇ ಬಲ್ಲ.

ಪೀಠ ಮತ್ತು ವಿರಕ್ತ ಪರಂಪರೆಯ ಗುರುಗಳು ಕೂಡಿದ್ದ ಕಾರ್ಯಕ್ರಮಗಳಿಗೆ ಕುತೂಹಲದಿಂದ ಮಾತ್ರ ಭಾಗವಹಿಸಿದ್ದೆ ಎಂದೀಗ ಸಾಬೀತು ಪಡಿಸುತ್ತಾ ತಮಗಾದ ನಿರಾಶೆಗಾಗಿ ತಟ್ಟನೆ ಹೊಸಧರ್ಮ ಕಟ್ಟಲು ಮುಂದಾಗಿದ್ದು ದುಡುಕುತನ ಎನ್ನಿಸದಿರದು. ‘ಕಾಡಿ ಕೂಡಿದ್ದಾಗಿದೆ ಕೂಡಿ ಕಾಡುವುದು ಬೇಡ’ ಎಂಬ ಶ್ರೀಗಳು ಜನತಾದಳದ ರಾಜಕಾರಣಿಗಳಂತೆ ಘೋಷಿಸುತ್ತಾ ಅಸಲಿ ವೀರಶೈವಧರ್ಮದ ತತ್ವ ಸಿದ್ದಾಂತಗಳಿಗೆ ಹೊಸ ಅರ್ಥ ಆಯಾಮ ಸಧೃಡತೆ ತಂದುಕೊಡುವುದರ ಮೂಲಕ ಬಸವಾಭಿಮಾನಿಗಳನ್ನು ಗೊಂದಲದಿಂದ ಪಾರು ಮಾಡಲೋಸುಗವೇ ಶರಣ ಧರ್ಮವನ್ನು ಜಾರಿಗೆ ತರುತ್ತೇವೆನ್ನುವ ನಿರ್ಧಾರ, ‘ಹೊಸ ಬಾಟಲಲ್ಲಿ ಹಳೆ ಮಧ್ಯ’ ಕೊಟ್ಟಂತಾದೀತಷ್ಟೆ. ಶ್ರೀಗಳು ಈವರೆಗೆ ಮಾಡಿರುವ ಅನೇಕ ಪ್ರಗತಿಪರ ಕಾರ್ಯಗಳಿಗೆ ವೈಚಾರಿಕ ನಿಲುವುಗಳಿಗೆ ಅವರ ಜನಾಂಗದಲ್ಲೇ ಬಹಳಷ್ಟು ಒಡಕು ದನಿಗಳು ಕೇಳಬರುತ್ತಿರುವಾಗ ಸ್ವಾಮೀಜಿಯೊಬ್ಬರು ಯಾವುದೇ ಪೂರ್ವಾಪರ ಯೋಚಿಸದೆ ದಿಢೀರನೆ ಕರೆ ಕೊಡುವುದು ಎಷ್ಟು ಸರಿ ? ಶರಣರ ಕರೆಗೆ ಓಗೊಟ್ಟು ಅವರ ಜನಾಂಗದಿಂದಲೇ ಎಷ್ಟು ಮಂದಿ ವೀರಶೈವ ಧರ್ಮದಿಂದ ಶರಣ ಧರ್ಮಕ್ಕೆ ಮತಾಂತರಗೊಂಡಾರು? ಏಕೆಂದರೆ ಇಂದಿನ ಮನುಷ್ಯ ಪ್ರತಿಫಲಾಪೇಕ್ಷೆಯಿಲ್ಲದೆ ಏನನ್ನೂ ಮಾಡಲಾರ, ಮನೆಯಿಂದ ತಾನು ಹೊರಡುವಾಗಲೆ ತಾನಿಂದು ಎಷ್ಟು ಕಮಾಯಿಸಬೇಕು, ಯಾರ ತಲೆ ಬೋಳಿಸಬೇಕೆಂದು ಅಂದಾಜು ಮಾಡಿಯೇ ಮೆಟ್ಟಿಲೇರುತಾನೆ. ಈ ವಿಷಯದಲ್ಲಿ ಸರ್ಕಾರಿ ಅಧಿಕಾರಿ, ನೌಕರ, ರಾಜಕಾರಣಿ, ವ್ಯಾಪಾರಿ, ಕಾರ್ಮಿಕ, ಮಾಲೀಕ, ಮಠಾಧಿಪತಿ ಯಾರೂ ಹೊರತಾಗಿಲ್ಲ. ಹೀಗಿರುವಾಗ ಶ್ರೀಗಳು ಯೋಚಿಸಿ ಮುಂದಡಿ ಇಡಬೇಕಿದೆ. ಇಲ್ಲವಾದರೆ ನಮಾಜು ಮಾಡಲು ಹೋಗಿ ಮಸೀದಿಯನ್ನೇ ಮೈಮೇಲೆ ಕೆಡವಿಕೊಂಡಂತಾದೀತು (ದಿನಾಂಕ : ೧೬-೦೮-೨೦೦೩ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಶರಣಧರ್ಮ ಹುಟ್ಟಿನ ಬಗ್ಗೆ ನಾನು ವಿರೋಧಿಸಿ ನೀಡಿದ ಹೇಳಿಕೆಯೂ ಸಾಕಷ್ಟು ಪರಿಣಾಮ ಬೀರಿತೆಂದೂ ಕೇಳಬಂತು).

ಶ್ರೀಗಳು ಹಿಂದೊಮ್ಮೆ ಮಹಿಳೆಯರು ಕುಂಕುಮ, ಬಳೆ ಇಡಬಾರದೆಂದು ಫರ್ಮಾನ ಹೊರಡಿಸಿದ್ದರು. ಅದನ್ನು ಎಷ್ಟು ಜನ ವೀರಶೈವ ಮಹಿಳೆಯರು ಪಾಲಿಸಿದರು. ಗಣಪತಿ ವಿಗ್ರಹವನ್ನು ಶರಣರು ಕಿತ್ತೊಗೆದರೆಂದು ಎಷ್ಟು ಮಂದಿ ಅವರಲ್ಲೇ ಗಣಪತಿ ಹಬ್ಬದ ಆಚರಣೆ ಕೈಬಿಟ್ಟರು. ಮದುವೆಯಲ್ಲಿ ಅಕ್ಕಿಕಾಳು ಬದಲು ಪುಷ್ಪವೃಷ್ಟಿ ಸಾಕೆಂಬ ಶರಣರ ನಿಲುವನ್ನು ಅರ್ಥಮಾಡಿಕೊಂಡು ಅದರಂತೆ ನಡೆದವರೆಷ್ಟು ಮಂದಿ ಸಿಕ್ಯಾರು? ಅಸಲು ಬೃಹನ್ಮಠದಲ್ಲಿ ಮನೆಮಾಡಿ ಕೊಂಡಿರುವವರಾದರೂ (ಒಬ್ಬ ಮಹಿಳೆಯನ್ನು ಹೊರತುಪಡಿಸಿ) ಇದನ್ನೆಲಾ ಪಾಲಿಸಬಹುದಿತ್ತಲ್ಲವೆ. ವೀರಶೈವ ಮತ್ತು ಲಿಂಗಾಯಿತ ಎಂಬುದರಲ್ಲೇ ಇರುವ ಬಿರುಕನ್ನು ಸಂಶಯಗಳನ್ನು ನಿವಾರಿಸಿ ಬಸವಾನುಯಾಯಿಗಳನ್ನು ಒಂದುಗೂಡಿಸುವ ಮಹತ್ಕಾರ್ಯಕ್ಕೆ ಕೈಹಾಕದೆ ಹೊಸದೊಂದು ಧರ್ಮವನ್ನು ಹೇಳಿಕೇಳಿ ೨೧ನೇ ಶತಮಾನದಲ್ಲಿ ಪ್ರತಿಪಾದಿಸ ಹೊರಟಿರುವುದು ನಿಜಕ್ಕೂ ಸೋಜಿಗ, ಕಾಲವ್ಯಯ ಹಾಗು ವೃಥಾ ಖರ್ಚಿಗೊಂದು ಹೆದ್ದಾರಿ.

ಅಸಲು ಇಂದು ಧರ್ಮ ಯಾರಿಗೆ ಬೇಕಾಗಿದೆ ಹೇಳಿ? ಯಾವ ಧರ್ಮ ರೈತರ ಕಣ್ಣೋರೆಸಿದೆ, ಅವರುಗಳ ಆತ್ಮಹತ್ಯೆಯನ್ನು ತಡೆಯಲು ಯತ್ನಿಸಿದೆ ನೈತಿಕ ಧೈರ್ಯ ತುಂಬಿದೆ? ಹಸಿದವರಿಗೆ ತುತ್ತು ಅನ್ನ ಕಾಣಿಸಿದೆ ? ಯಾವ ಧರ್ಮ ಕೆಳಗೆಬಿದ್ದ, ದೀನದಲಿತರ ಕೈ ಹಿಡಿದೆತ್ತಿದೆ ? ಬಡವರ ಸಂಕಷ್ಟಗಳಿಗೆ ಮರುಗಿದೆ ಉಪಚರಿಸಿ ಬೆಂಬಲವಾಗಿ ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಯಾರನ್ನೋ ನಂಬಿಕೊಂಡು ಮತ್ತೊಂದು ಧರ್ಮವನ್ನು ಬಿತ್ತಿದರೆ ಬೆಳೆದೀತೆ ? ಬೆಳೆದರೆ ಉಳಿದೀತೆ, ಉಳಿದರೆ ಅದೂ ಮತ್ತೊಂದು ಜಾತಿಯಾಗದೇ ಇದ್ದೀತೆ ? ಯಾಕೆಂದರೆ ಧರ್ಮಗಳನ್ನೆಲಾ ಜಾತಿಗಳನ್ನಾಗಿ ಮಾಡಿಕೊಂಡ ಪಾತಕಿಗಳು ನಾವು.

ವೈದಿಕ ಧರ್ಮದಲ್ಲಿನ ಮೌಢ್ಯ ಕಂದಾಚಾರ ಜಾತಿ ತಾರತಮ್ಯಗಳನ್ನು ವಿರೋಧಿಸಿ ಹುಟ್ಟಿಕೊಂಡ ಜೈನಧರ್ಮ ಕೂಡ ಈವತ್ತು ಜಾತಿಯಾಗಿದೆ. ಜೈನಧರ್ಮದಲ್ಲಿನ ಅತಿರೇಕ ಧಾರ್ಮಿಕ ಆಚರಣೆಗಳಿಗೆ ಬೇಸತ್ತು ಹುಟ್ಟಿದ ಬೌದ್ಧಧರ್ಮ ಆಸೆಯೇ ದುಃಖಕ್ಕೆ ಮೂಲ ಕಾರಣವೆಂದಿದ್ದರಿಂದಲೋ ಏನೋ ದುರಾಸೆಯ ಜನ ಅದನ್ನೇ ಮೂಲೆಗೆ ತಳ್ಳಿ ಕೊನೆಗೆ ಭಾರತದಾಚೆಗೆ ಅಟ್ಟಿಬಿಟ್ಟರು. ಇವನ್ನೆಲಾ ಧಿಕ್ಕರಿಸಿ ಮತಾಂತರಿಸಿದ ಚಾವಾರಕ ಧರ್ಮ ನಾಸ್ತಿಕ ವಾದವನ್ನು ಆ ಕಾಲದಲ್ಲೇ ಬಿತ್ತಿದರೂ ಬೆಳೆಯಲೇ ಇಲ್ಲ. ವೈದಿಕ ಧರ್ಮ ತನಗೆ ಇದಿರೇ ಇಲ್ಲವೆಂದು ಕೊಬ್ಬಿದ ಕಾಲಮಾನದಲ್ಲಿ ಅದರಿಂದಲೇ ಸಿಡಿದು ಬಂದ ವೀರಶೈವ ಧರ್ಮ ಜಾತಿಯಾಗಿದ್ದು ಈ ದೇಶದ ಪರಮದುರಂತ, ಬಸವಣ್ಣನವರ ತತ್ವಾದರ್ಶಗಳನ್ನು ಶರಣರೆಲ್ಲಾ ಒಟ್ಟಾಗಿ ಜಾರಿಗೆ ತಂದು ಜಾತಿಯನ್ನು ಮರೆತು ಅಂತರ್ಜಾತೀಯ ವಿವಾಹಗಳಿಗೆ ಮುಂದಾಗಿದ್ದರೆ ಇಂದು ಜಾತಿಯೂ ಇರುತ್ತಿರಲಿಲ್ಲ ಮೀಸಲಾತಿಯೂ ಇರುತ್ತಿರಲಿಲ್ಲ. ಅದೇನು ಭಾರತ ದೇಶದ ಕರ್ಮವೋ, ಶಂಕರ, ಮಧ್ವ, ರಾಮಾನುಜ, ಮಹಾವೀರ, ಬುದ್ಧ, ಬಸವ, ಗುರುನಾನಕ್ ಹೀಗೆ ಒಬ್ಬೊಬ್ಬ ಮಹಾತ್ಮ ಈ ದೇಶದಲ್ಲಿ ಹುಟ್ಟಿಬಂದಾಗಲೂ ಒಂದೊಂದು ಧರ್ಮ ಸ್ಥಾಪನೆಯಾಗಿ ಅಂತಿಮವಾಗಿ ಅವುಗಳೆಲ್ಲಾ ಜಾತಿ ಸ್ವರೂಪ ಪಡೆದು ಸಾವಿರಾರು ಪಂಗಡ ಉಪ ಪಂಗಡಗಳಾಗಿ ದೇಶದ ಐಕ್ಯತೆಗೆ ಭಂಗ ತಂದಿರುವಾಗ ನನಗನ್ನಿಸುತ್ತೆ, ನಮ್ಮ ದೇಶದಲ್ಲಿ ಮತ್ತೊಬ್ಬ ಮಹಾತ್ಮ ಹುಟ್ಟಿ ಬರುವುದೂ ಬೇಡ, ಮಗದೊಂದು ಧರ್ಮ ಸ್ಥಾಪಿಸುವ ಗೊಡವೆಯೂ ಬೇಡ. ಹೀಗಿರುವಾಗ ಲಿಂಗಾಯಿತ ಧರ್ಮಕ್ಕೆ ಬಸವಧರ್ಮದ ಹೊಸ ಪೋಷಕನ್ನು ತೊಡಿಸ ಹೊರಟಿರುವುದು ಯಾವ ಪುರುಷಾರ್ಥಕ್ಕೆ …!?

ಪ್ರಗತಿಪರವಾದವನು ಮಾತ್ರ ಇಂದು ಜಾತಿವಿನಾಶದ ಬಗ್ಗೆ ಯೋಚಿಸಬಲ್ಲ ಎಂದು ಉದ್ದರಿಸುವ ಶ್ರೀಗಳು ಜಾತಿಗೊಬ್ಬ ಪಿಟಾಧಿಪತಿಗಳನ್ನು ನೇಮಿಸುತ್ತಾ ಹೊರಟಿರುವುದು ಯಾವ ಸೀಮೆಯ ಬಸವತತ್ವ?  ಕೆಳ ಜಾತಿಗಳವರನ್ನು ಸ್ವಾಮಿಗಳನ್ನಾಗಿ ಮಾಡಿ ತಮ್ಮದೇ ಶಾಖಾ ಮಠಗಳಿಗೆ ನೇಮಿಸಿಕೊಂಡಿದ್ದರೆ ಅದು ತಾವೇ ಹೇಳುವಂತೆ ಅನುಭವ ಮಂಟಪದ ಪರಿಕಲ್ಪನೆಗೆ ಇಂಬುಕೊಡುತ್ತಿತ್ತಲ್ಲವೆ. ಧರ್ಮದ ಹಿಂದೆ ಶರಣ ಇರುವುದಾದರೆ (ಈಗ ಬದಲಾದಂತೆ ಬಸವ ಅಂದುಕೊಳ್ಳೋಣ) ಅದು ನೀತಿ ಸೂಚಕ ಜಾತಿ ಸೂಚಕವಾಗದು ಎಂದಿದ್ದಾರೆ ಹೇಳಿಕೆಯಲ್ಲಿ. ಹಿಂದೆ ಕೂಡ ಧರ್ಮದ ಹಿಂದೆ ಜೈನ ಬೌದ್ದ ವೀರಶೈವ ಇದಾಗಲೂ ಅವುಗಳೆಲ್ಲಾ ಜಾತಿಗಳಾಗಲಿಲ್ಲವೆ. ಜಾತಿ ಕೇಳಿದರೆ ಶರಣ ಜಾತಿ, ಕುಲ ಶರಣ, ಧರ್ಮ ಶರಣ ಧರ್ಮ ಎಂದು ಈಗಾಗಲೆ ನೌಕರಿ ಫಾರಂಗಳಿಗೆ ಕಾಲಂ ತುಂಬುವ ವಿಧಾನವನ್ನು ಅಪ್ಪಣೆಕೊಡಿಸುವುದರಲ್ಲೇ ಮುಂದೊಂದಿನ ಹೊಸಧರ್ಮ ಕೂಡ ಜಾತಿಯಾಗುತ್ತದೆಂಬ ವಾಸನೆ ಹೊಡೆಯುತ್ತಿದೆಯಲ್ಲವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಹೊಸಧರ್ಮವನ್ನು ಹುಟ್ಟುಹಾಕಲು ಕರೆದ ಸಭೆಯಲ್ಲಿ ‘ಶರಣ ಧರ್ಮ’ದ ಪ್ರಸ್ತಾಪಬಂತು. ಪ್ರಬಲ ಕೋಮು ಎನಿಸಿದ ವೀರಶೈವರಲ್ಲಿ ಜಮಾಯಿಸಿದ್ದು ನಾಲ್ಕು ನೂರು ಚಿಲ್ಲರೆ ಜನ, ಪೂರ್ವ ನಿರ್ಧಾರವೆಂಬಂತೆ ‘ಶರಣ ಧರ್ಮಕ್ಕೆ ಸ್ವಾಗತ’ ಎನ್ನುವ ಬ್ಯಾನರ್ ಗಳು ಕಮಾನುಗಳು ತೂಗಾಡಿದರೂ, ಶರಣ ಧರ್ಮ ಹುಟ್ಟುವ ಅಥವಾ ಕಟ್ಟುವ ದಿನವೆಂದು ಮುಹೂರ್ತವಿಟ್ಟರೂ ನೆರೆದಮಂದಿ ಮತ ಹಾಕಿದ್ದು ಬಸವಧರ್ಮ ಎಂಬ ಹಸರಿಗೆ. ಹೀಗಾಗಿ ‘ಆಪರೇಷನ್‌ ಸಕ್ಸಸ್‌ ಪೇಷಂಟ್‌ ಡೈಡ್’ ಎಂಬಂತೆ ಶಿವಮೂರ್ತಿ ಶರಣರ ಶರಣ ಧರ್ಮದ ಪರಿಕಲ್ಪನೆಗೆ ಆಧುನೀಕರಣ ಹೊಸ ಆಯಾಮಗಳಿಗೆ ಹುಟ್ಟುವ ಮುಂಚೆಯೇ ಸತ್ತಮಗುವಿನ ಪಾಡಾಯಿತು.

ಯಾವುದೇ ಧರ್ಮ ಬೇರೊಂದು ಧರ್ಮವನ್ನು ವಿರೋಧಿಸಿ ಹುಟ್ಟಿದ್ದಾಗಲೂ ಅದರ ಹಿಂದೆ ಬಹು ದೊಡ್ಡ ಚಳುವಳಿ ಕ್ರಾಂತಿ ನಡೆದಿದೆ. ಯಾವುದೇ ಸಂಘರ್ಷವಿಲ್ಲದೆ ಸಂಕಟ, ನೋವು ತಿನ್ನದೆ ದಿಢೀರನೆ ಹುಟ್ಟುವ ಧರ್ಮ ಸಿಜೇರಿಯನ್ ಬೇಬಿಯಂತೆ ಆತಂಕಕಾರಿ. ಸಭೆಯಲ್ಲಿ ಶ್ರೀಗಳು ತಮ್ಮ ಮನದಳಲನ್ನು ಬಿಚ್ಚಿಟ್ಟಿದ್ದು ಹೀಗೆ; ಶ್ರೀ ಶೈಲ ಗುರುಗಳು ಕರೆದರೂ ತಮ್ಮ ಬೃಹನ್ಮಠಕ್ಕೆ ಬರುವ ಉತ್ಸಾಹ ತೋರಲಿಲ್ಲ. ತಮ್ಮ ಒತಾಯಕ್ಕೆ ಬಂದರೂ, ತಾವೇ ವಿನಯದಿಂದ ಖಾಸಗಿ  ಕೋಣೆಯನ್ನು ಬಿಟ್ಟು ಕೊಟ್ಟಾಗಲೂ ಪೂಜಾ ಕಾರ್ಯಗಳಲ್ಲಿ ತಮ್ಮನ್ನೇ ಹೊರಗಿಟ್ಟರು. ಪ್ರಸಾದವನ್ನು ಸಹ ತಮ್ಮೊಂದಿಗೆ ಸ್ವೀಕರಿಸದೆ ಮೇಲರಿಮೆ ತೋರಿದ್ದರಿಂದ ತಮಗೆ ಅಪಾರವಾದ ಯಾತನೆಯುಂಟಾಗಿದೆ, ಇನ್ನೂ ಮುಂತಾಗಿ ನೋವನ್ನು ತೆರೆದಿಟ್ಟರಲ್ಲದೆ ಇಂತಹ ಮೇಲರಿಮೆ ತೋರುತ್ತಾ ತಮ್ಮನ್ನು ಅಸ್ಪುರ್ಶ್ಯರಂತೆ ಕಂಡಿದ್ದರಿಂದಲೇ ಹೊಸಧರ್ಮ ಒಂದನ್ನು ಕಟ್ಟಿ ಬೆಳೆಸಲೇ ಬೇಕಿದೆ ಎಂದರು. ಶರಣಧರ್ಮ ಅಥವಾ ಬಸವಧರ್ಮ ಎಂಬ ಹೆಸರುಗಳಲ್ಲಿ ಯಾವುದು ಸೂಕ್ತವೆನ್ನುವ ಚರ್ಚೆಯೂ ನಡೆಯಿತು. ಗೋವಾದ ಪ್ರತಿನಿಧಿಯೊಬ್ಬರು ದಿಟ್ಟತನದ ಮಾತುಗಳನ್ನಾಡಿ ಬಸವಧರ್ಮವೇ ಸೂಕ್ತವೆಂದರು. ಶರಣ ಧರ್ಮವೇ ಇರಲಿ ಎಂಬ ದನಿಗೆ ಅಲ್ಲಿ ಬಲವಿರಲಿಲ್ಲ. ಸಭೆಯಲ್ಲಿ ಪಾಲ್ಗೊಂಡವರ ಪೈಕಿ ೨೨ ಮಂದಿ ‘ಬಸವಧರ್ಮ’ ಸೂಕ್ತ ಎಂದರೆ ಶರಣಧರ್ಮದ ಬಗ್ಗೆ ಇಬ್ಬರು ಲಿಂಗಾಯಿತ ಧರ್ಮದ ಬಗ್ಗೆ ಒಬ್ಬರು ಮಾತ್ರ ಒಲವು ತೋರಿದ್ದರಿಂದಾಗಿ ‘ಬಸವಧರ್ಮ’ ಜನನವಾಯಿತು. ಬಸವಧರ್ಮವನ್ನು ತಾವು ಅನುಭವ ಮಂಟಪದ ಮಾದರಿಯಲ್ಲೇ ನಡೆಸಿಕೊಂಡು ಬರುವುದಾಗಿ ಶ್ರೀಗಳು ವಚನವಿತ್ತರಲ್ಲದೆ ರಾಷ್ಟ, ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯಕಾರಿ ಸಮಿತಿ ರಚಿಸುವುದಾಗಿಯೂ ಹೇಳಿದರು. ಶರಣಧರ್ಮದ ಬಗ್ಗೆ ಪುಟಗಟ್ಟಲೆ ಹೇಳಿಕೆ ನೀಡಿದ್ದ ಶರಣರು ಈ ಸಲ ಮಾತನಾಡುವಾಗ ಎಚ್ಚರವಹಿಸಿದ್ದದ್ದು ಕಂಡುಬಂತು. ಸಭೆಯಲ್ಲಿ ಆರು ನಿರ್ಣಯಗಳನ್ನು ಮಾತ್ರ ಅಂಗೀಕರಿಸಲಾಯಿತಾದರೂ ನಿರ್ಣಯಗಳಲ್ಲಿ ಹೊಸತೇನಿರಲಿಲ್ಲ. ಬಸವಧರ್ಮ ಯಾವ ಜಾತಿ ಧರ್ಮವನ್ನೂ ವಿರೋಧಿಸುವುದಿಲ್ಲ ಬದಲಾಗಿ ಅಲ್ಲಿರುವ ಶೋಷಣೆಯನ್ನು ಮಾತ್ರ ವಿರೋಧಿಸುತ್ತದೆ ಎಂದು ನಿರ್ಣಯ ಒಂದರಲ್ಲಿ ಹೇಳಲಾಗಿದೆ. ಹಿಂದೆ ಕೂಡ ಬೇರೆ ಧರ್ಮಗಳಲ್ಲಿನ ಮೌಢ್ಯ ಶೋಷಣೆಗಳನ್ನು ವಿರೋಧಿಸಿಯೇ ವೀರಶೈವ ಧರ್ಮ ಹುಟ್ಟಿಕೊಂಡಿತೆಂಬುದನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದೇನೆ. ಅರ್ಥಾತ್ ವೀರಶೈವ ಧರ್ಮದಲ್ಲಿನ ಶೋಷಣೆ, ಮೇಲುಕೀಳು ತಾರತಮ್ಯವನ್ನು ವಿರೋಧಿಸಿಯೇ ಬಸವಧರ್ಮ ಹುಟ್ಟಿದೆ ಎಂದು ಧೈರ್ಯವಾಗಿ ಹೇಳಲು ಶರಣರಿಗೆ ಯಾತದರ ದಾಕ್ಷಿಣ್ಯ? ಯಾರ ಅಡ್ಡಿ? ಬಡ ನಿರುದ್ಯೋಗಿ ಯುವಕ ಯುವತಿಯರನ್ನು ಕ್ರಿಶ್ಚಿಯನ್ ಮಿಷನರಿಗಳಂತೆ ಬಳಸಿಕೊಳ್ಳುವುದೂ ನಿರ್ಣಯಗಳಲ್ಲೊಂದು.. ಅಂದರೆ ಜನರನ್ನು ಬಸವಧರ್ಮಕ್ಕೆ ಮತಾಂತರಗೊಳಿಸುವ ಮೂಲ ಕಾಯಕ ಆ ಬಡಪಾಯಿಗಳದ್ದು. ಬೇರೆ ಧರ್ಮಕ್ಕೆ ನಮ್ಮ ಶೋಷಿತ ಜನರು ಮತಾಂತರಗೊಳ್ಳಬಾರದೆಂದೂ ಬಸವಧರ್ಮ ಸ್ಥಾಪಿಸಲಾಯಿತೆಂಬ ಅರ್ಥ ಬರುವಂತೆ ಮಾತನಾಡುವ ಶ್ರೀಗಳು ತಮ್ಮ ಹೊಸಧರ್ಮದ ವಿಷಯಕ್ಕೆ ಬಂದಾಗ ಮಾತ್ರ ಉದಾರಿಗಳಾಗಿಬಿಡುತ್ತಾರೆ ! ಇನ್ನುಳಿದ ನಿರ್ಣಯಗಳಲ್ಲಿ ಅಂತಹ ಸಾರಸ್ಯವೇನಿಲ್ಲ. ಅಣ್ಣ ಬಸವಣ್ಣನ ಕಟ್ಟಾ ಅಭಿಮಾನಿಗಳಾದ ಶರಣರು ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕನು, ಶ್ರೀ ಶಾಂತವೀರ ಮುರುಘ ರಾಜೇಂದ್ರ ಜಗದ್ಗುರುಗಳಿಗೆಂದೇ ಭಕ್ತಿಪೂರ್ವಕವಾಗಿ ಕಟ್ಟಿಸಿಕೊಟ್ಟ ಶ್ರೀ ಮುರುಘರಾಜೇಂದ್ರ ಬೃಹನ್ಮಠವನ್ನು ಸಹ ‘ಬಸವ ಗುರು ಬೃಹನ್ಮಠ’ ವನ್ನಾಗಿಸಿ ಮೂಲ ಚರಿತ್ರೆಗೆ ಮೂಲ ಗುರುಗಳಿಗೆ ಅಪಚಾರ ಮಾಡದಿದ್ದರೆ ಆದೇ ಲಿಂಗಾಯಿತರ ಪುಣ್ಯ, ಬಸವ ಧರ್ಮ ಹುಟ್ಟಿತೆನ್ನಿ, ಆದರೆ ಮುಂದೆ…? ಗೊತ್ತಿಲ್ಲ!

ಮತ್ತೊಂದು ಮಾತು, ಅನ್ಯ ಜಾತಿಗಳಿಗೆ ನೇಮಿಸಿದ ಸ್ವಾಮಿಗಳಲ್ಲಿ ಹಲವರದು ಅನಾಥ ಸ್ಥಿತಿಯಾಗಿರುವುದನ್ನು ಗಮನಿಸಿ ಕಟ್ಟಾ ಬಸವಾನುಯಾಯಿಗಳಾದ ಶ್ರೀಗಳು ಈಗಲಾದರೂ ತಮ್ಮ ಶಾಖಾ ಮಠಗಳಿಗೆ ನೇಮಿಸಿಕೊಳ್ಳುವಷ್ಟು ದಯಾಪರರಾಗಲಿ. ದಯೆಯೇ ಧರ್ಮದ ಮೂಲವಯ್ಯ ಮಾತಿಗೊಂದು ರೂಪ ಕೊಡಲಿ. ಆತ್ಮಹತ್ಯೆಗೊಳಗಾಗುವ ರೈತರಿಗಾಗಿ ನಿಧಿಯೊಂದನ್ನು ಸ್ಥಾಪಿಸಿದ ಶಿವಮೂರ್ತಿ ಶರಣರು ಒಂದಿಬ್ಬರು ರೈತರ ಕುಟುಂಬಗಳಿಗೆ ನಿಧಿ ಅರ್ಪಿಸಿದ ಫೋಟೋಗಳು ಪತ್ರಿಕೆಗಳಲ್ಲಿ ಕಂಡುಬಂದವು. ರಾಜ್ಯದ ಮಾತಿರಲಿ, ಜಿಲ್ಲೆಯಲ್ಲಿ ಪಕ್ಕದ ಜಿಲ್ಲೆಯಲ್ಲಿಯೇ ರೈತರು ಆತ್ಮಹತ್ಯೆಗೀಡಾಗುತ್ತಿದ್ದಾರೆ. ಅದೇಕೋ ಶರಣರು ಹೊಸಧರ್ಮ ಕಟ್ಟುವ ಭರದಲ್ಲಿ ರೈತ ಕುಟುಂಬ ಬಸವ ಧರ್ಮ ಬೇರೆ ಹುಟ್ಟಿ ಏನೇನು ತರಲೆ ತಂದೊಡ್ಡಲಿದೆಯೋ ಕಾಲವೇ ನಿರ್ಧರಿಸಬೇಕು. ಕೆರೆದು ಹುಣ್ಣುಮಾಡಿಕೊಳ್ಳುವುದೆಂದರೆ ಇದೇನಾ? ಆರಾಮವಾಗಿ ಪ್ರವಚನ ಹೇಳುತ್ತಾ ರೂಪಕಗಳನ್ನು ಆಡಿಸುತ್ತಾ ಕಂಟೆಸಾದಲ್ಲಿ ಪ್ರವಾಸಮಾಡುತ್ತಾ ಫಾರಿನ್ ಗೆ ಹಾರುತ್ತ ದಕ್ಷಿಣೆಯಲ್ಲಿ ದುಂಡಗಾಗುವುದನ್ನು ಬಿಟ್ಟು ಇವೆಲ್ಲಾ ಒಣ ಫಜೀತಿ ಬೇಕಿತ್ತಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು – ಅವಳು
Next post ಹ್ಯಾಂಗ ಹೋಗಲೇ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys