ಈ ಮಂದಿಯಾಗೆ ಹೋಗಲಾರೆನೇ ತಾಯೀ
ಕಣ್ಣ ಬಾಣ ಬಿಟ್ಟು ಬಿಟ್ಟು | ನೋವ ಮಾಡತಾರೆ ತಾಯಿ

ಹುಟ್ಟಿದಾಗ ತೊಟ್ಟಿಲಾಗೆ | ಕೆಟ್ಟ ಕಣ್ಣು ಮುಟ್ಟದ್ಹಾಂಗೆ
ದಿಟ್ಟಿಯಿಟ್ಟು ಕಾಯುತಿದ್ದ | ನೆಟ್ಟಗಿದ್ದೆನೇ ತಾಯಿ

ಹತ್ತು ವರುಷ ಬೆಳೆದೆ ನಾನು | ಮುತ್ತಿನಂಗಿ ಲಂಗ ಹಾಕಿ
ಕತ್ತು ತಿರುಗಿ ನೋಡಿದರವ್ವ | ಮತ್ತ ಮನುಜರು

ಹನ್ನೆಳ್ಡ ವರುಷದ್ದಾಕೀ ನಾನು | ಚಿನ್ನದಿಂದ ಮುಚ್ಚಿಕೊಂಡೆ
ಬಿನ್ನಾಣಿಂದ ನೋಡಿದರವ್ವಾ | ತಿನ್ನೊ ಗಂಡಸ್ರು

ಹದಿನೈದು ವರುಷಾದವು | ಹದವಾಯ್ತು ಮೈಯಕಾಂತಿ
ಎದೆಯ ಮೊಗ್ಗ ನೋಡಿ ನೋಡಿ | ಜೊಲ್ಲು ಸುರಿಸಿದ್ರು

ಹದಿನಾರು ವರುಷ ನನಗೆ | ಬೆದರುತೈತೆ ಹೆಣ್ಣ ಜೀವಾ
ಚದರು ಕಣ್ಣು ಇರಿಯುತಾವೇ | ತಾಳೆಲಾರೆನೇ ತಾಯಿ

ತಿನ್ನೋ ಹಂಗೆ ನೋಡುತಾರೆ | ಕಣ್ಣು ಹೊಡೆದು ಕರೆಯುತಾರೆ
ಓಣಿಯಾಗೆ ಹೋಗಲಾರೆ | ಹ್ಯಾಂಗೆ ಮಾಡಲೇ ಅವ್ವಾ

ಬಳ್ಳಿಯಾಗೆ ಮೊಗ್ಗು ಮೂಡಿ | ನಡುಗುವಂಗೆ ನಡುವು ನಿಲುವು
ಕಳ್ಳನೋಟ ತೂರುತಾರೆ | ಮಳ್ಳ ಹುಡುಗರು

ತಲೀಭಾರಾ ಕುತ್ತಿಗ್ಯಾಗೆ | ಎದೀ ಭಾರ ನಡುವಿನ್ಯಾಗೆ
ಕಾಲ ಮ್ಯಾಲೆ ಮೈಯಿ ಭಾರ | ಹ್ಯಾಂಗ ನಡೆಯಲೇ
*****